ಬಿಜೆಪಿಯನ್ನು ಸೋಲಿಸಲಿರುವ ಹಿಜಾಬ್: ಆಶ್ಚರ್ಯವಾದರೂ ಸತ್ಯ

ಬಿಜೆಪಿಯ ಏಕೈಕ ಜನನಾಯಕ ಯಡಿಯೂರಪ್ಪನವರನ್ನು ಕಣ್ಣೀರು ಹಾಕುವ ಪ್ರಮಾಣಕ್ಕೆ ಬಲವಂತ ಮಾಡಿ ಕೆಳಗಿಳಿಸಿದ್ದು ಏಕೆಂಬುದಕ್ಕೆ ಇದುವರೆಗೂ ಜನರಿಗೆ ಹೇಳಲು ಬಿಜೆಪಿಗೆ ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ… By : ಡಾ. ಎಚ್. ವಿ ವಾಸು

ಈ ಲೇಖನದ ಶೀರ್ಷಿಕೆಯನ್ನು ನೋಡಿದರೆ ಬಿಜೆಪಿಗಿಂತ ಆಶ್ಚರ್ಯಪಡುವವರು ಮತ್ತು ಸಿಟ್ಟಾಗುವವರು ಬಿಜೆಪಿ ವಿರೋಧಿಗಳು. ಏನೇ ಸಿಟ್ಟಿರಲಿ, ಈ ವಿಚಾರವನ್ನು ತಾಳ್ಮೆಯಿಂದ ಪುರಾವೆ ಸಮೇತ ಪರಿಶೀಲಿಸಬೇಕೆಂದು ಮನವಿ ಮಾಡಬಹುದಷ್ಟೇ. ನೀವು ಈ ರೀತಿಯಲ್ಲೇ ಯೋಚಿಸಬೇಕೆಂದು ಯಾರಿಗಾದರೂ ಒತ್ತಾಯ ಮಾಡುವುದು ಸಾಧ್ಯವಿಲ್ಲ.

ಹಾಗೆ ನೋಡಿದರೆ ಬಿಜೆಪಿ ಇಂದು ಕೆಟ್ಟ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ಮತ್ತು ಜನತಾದಳಗಳು ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿವೆಯೆಂದೂ, ಎಡಪಕ್ಷಗಳು ಅಥವಾ ಇತರ ಆದರ್ಶವಾದಿ ಪಕ್ಷಗಳು ಅತ್ಯಂತ ದುಸ್ಥಿತಿಯಲ್ಲಿವೆಯೆಂದೂ ಯಾರಾದರೂ ವಾದಿಸಬಹುದು. ಅವೆಲ್ಲವೂ ನಿಜವೇ; ಈಗಾಗಲೇ ತಳಗಡೆ ಇರುವವರು ಇನ್ನೂ ಕೆಳಗೆ ಹೋಗಲು ಹೆಚ್ಚೇನಿರುವುದಿಲ್ಲ. ಆದರೆ ಬಿಜೆಪಿಯ ಸ್ಥಿತಿ ಹಾಗಲ್ಲ. ಎರಡನೆಯ ಬಾರಿಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಪಡೆಯಲಾಗದೇ ಅರೆಬರೆ ಸರ್ಕಾರ ನಡೆಸಿದ್ದಲ್ಲದೇ, ಎರಡೂ ಬಾರಿ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯನ್ನು ಹೊಂದಲಾಗದ ಪರಿಸ್ಥಿತಿ ಅವರದ್ದು. 2008ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಜೆಡಿಎಸ್‌ನ ‘ವಚನಭ್ರಷ್ಟತೆ’, ಯಡಿಯೂರಪ್ಪನವರಿಗಾದ ಅನ್ಯಾಯವು ಜನಸಾಮಾನ್ಯರ ನ್ಯಾಯಪ್ರಜ್ಞೆಯನ್ನು ಬಡಿದೆಬ್ಬಿಸಿತ್ತು. 2018ರಲ್ಲಿ ಐದು ವರ್ಷಗಳ ಕಾಂಗ್ರೆಸ್ ಸರ್ಕಾರವನ್ನು ಜನರು ಮತ್ತೆ ಅಧಿಕಾರಕ್ಕೆ ತರಲು ಬಯಸಿರಲಿಲ್ಲ. ಈಗ ಅಂತಹ ಅನುಕೂಲಗಳ್ಯಾವುವೂ ಇಲ್ಲ; ಬದಲಿಗೆ, ಈ ಸಾರಿ ನಾಲ್ಕು ವರ್ಷಗಳ ಬಿಜೆಪಿಯ ಆಡಳಿತದ (ಅದು ಯಾವ ರೀತಿಯಲ್ಲೂ ಜನ ಮೆಚ್ಚುವ ಹಾಗೆ ಇಲ್ಲ ಎಂಬುದನ್ನು ಎಲ್ಲರಿಗಿಂತ ಹೆಚ್ಚು ಬಿಜೆಪಿಯವರೇ ಬಲ್ಲರು) ಅನಾನುಕೂಲದ ಹೊರೆ ಅವರ ಮೇಲಿದೆ.
ಇದರಲ್ಲಿ ಅಂತಹ ಹೊರೆಯೇನಿದೆ ಎಂಬ ಪ್ರಶ್ನೆಯನ್ನು ಯಾರಾದರೂ ಬಿಜೆಪಿಯವರನ್ನು ಖಾಸಗಿಯಾಗಿ ಕೇಳಿದರೆ ವಿವರಗಳನ್ನು ಬಿಚ್ಚಿಡುತ್ತಾರೆ. ಕರ್ನಾಟಕದ ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿರುವ ವ್ಯಕ್ತಿ, ಬಸವರಾಜ ಬೊಮ್ಮಾಯಿ ಜನನಾಯಕರಲ್ಲ. ಅದು ಹಾನಗಲ್ ಉಪಚುನಾವಣೆಯೂ ಸೇರಿದಂತೆ ಹಲವು ಸಾರಿ ಸಾಬೀತಾಗುತ್ತಿರುವ ಸಂಗತಿ. ಅಲ್ಲಿರುವ ಏಕೈಕ ಜನನಾಯಕ ಯಡಿಯೂರಪ್ಪನವರನ್ನು ಕಣ್ಣೀರು ಹಾಕುವ ಪ್ರಮಾಣಕ್ಕೆ ಬಲವಂತ ಮಾಡಿ ಕೆಳಗಿಳಿಸಿದ್ದು ಏಕೆಂಬುದಕ್ಕೆ ಇದುವರೆಗೂ ಜನರಿಗೆ ಹೇಳಲು ಬಿಜೆಪಿಗೆ ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಯಡಿಯೂರಪ್ಪನವರ ಎರಡು ವರ್ಷಗಳ ಆಡಳಿತವಾಗಲೀ, ಬಸವರಾಜ ಬೊಮ್ಮಾಯಿಯವರ ಆರು ತಿಂಗಳ ಆಡಳಿತವಾಗಲೀ, ಕರ್ನಾಟಕದ ಜನರಿಗಿರಲಿ, ಬಿಜೆಪಿಯ ಶಾಸಕರಿಗೇ ತೃಪ್ತಿ ತಂದಿಲ್ಲ. ಸರ್ಕಾರದ ವಿರುದ್ಧ ಬಿಜೆಪಿ ಶಾಸಕರೇ ಅತೃಪ್ತಿ ವ್ಯಕ್ತಪಡಿಸದ ಒಂದು ವಾರವೂ ಇಲ್ಲ ಎಂಬುದನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಬೆಳಗಾವಿಯ ಅಧಿಕೃತ ಅಭ್ಯರ್ಥಿಯನ್ನು ಬಿಜೆಪಿಯ ಅಧಿಕೃತ ಶಾಸಕರೇ ಸೋಲಿಸಿದರು ಎಂಬುದು ಆ ಪಕ್ಷದ ಸಂಘಟನಾ ಶಿಸ್ತಿನ ಪರಿಚಯವನ್ನು ಮಾಡಿಸುತ್ತದೆ. 40% ಕಮಿಷನ್ ಸರ್ಕಾರ ಎಂಬ ಆಪಾದನೆ ಮತ್ತೆಮತ್ತೆ ಕೇಳಿ ಬರಲು ವಿರೋಧ ಪಕ್ಷದವರಷ್ಟೇ ಸರ್ಕಾರದೊಳಗಿನ ಮಂತ್ರಿಗಳೂ ಕಾರಣ. ಬೊಮ್ಮಾಯಿಯವರ ಹೆಸರು ಬಿಟ್ ಕಾಯಿನ್ ಹಗರಣದಲ್ಲಿ ಕೇಳಿ ಬಂದಿದ್ದು ವಿರೋಧಪಕ್ಷದವರ ಚಿತಾವಣೆಯಿಂದಲ್ಲ; ಬಿಜೆಪಿಯವರೇ ಖುದ್ದಾಗಿ ವಿವಿಧ ಪತ್ರಕರ್ತರಿಗೆ ಅಧಿಕೃತವಾಗಿ ನೀಡಿದ ಮಾಹಿತಿಯಿಂದ. ಇವೆಲ್ಲವೂ ಸೇರಿದರೆ ಸಾರ್ವಜನಿಕರ ದೃಷ್ಟಿಯಲ್ಲಿ ಸರ್ಕಾರದ ಮರ್ಯಾದೆ ಏನಾಗಬಹುದು? ಬೆಂಗಳೂರಿನ ರಸ್ತೆಗಳಲ್ಲಿನ ಅಸಹನೀಯ ಗುಂಡಿಗಳ ರೀತಿಯಲ್ಲಿಯೇ ಬಿಜೆಪಿ ಸರ್ಕಾರದ ಪರಿಸ್ಥಿತಿಯೂ ಇದೆ.

ಈ ವೈಫಲ್ಯವನ್ನು ಹಿಜಾಬ್ ಸುತ್ತ ಹೆಣೆಯಲಾದ ವಿವಾದದ ಮೂಲಕ ಎದುರಿಸಬಹುದು ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದರೆ ಅವರು ಮೂರ್ಖರಷ್ಟೇ. ವಾಸ್ತವದಲ್ಲಿ ಇದು ಅವರಿಗೆ ರಾಜಕೀಯವಾಗಿ ದೊಡ್ಡ ಪೆಟ್ಟು ಕೊಡಲಿದೆ. ಇದನ್ನು ಇಲ್ಲ ಎನ್ನುವವರು ಕರ್ನಾಟಕದ ಮತದಾರರು 1972ರ ಚುನಾವಣೆಯಿಂದ ತೋರುತ್ತಾ ಬಂದ ಒಂದು ಗುಣವನ್ನು ಮರೆಯುತ್ತಾರೆ. ಆ ಚುನಾವಣೆಯ ನಂತರ 1978ರಲ್ಲಿ ದೇವರಾಜ ಅರಸರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತ್ತು ಎಂಬುದನ್ನು ಬಿಟ್ಟರೆ, ಇಲ್ಲಿಯರೆಗೆ ಕರ್ನಾಟಕದ ಮತದಾರರು ಒಮ್ಮೆಯೂ ಆಡಳಿತ ಪಕ್ಷವನ್ನು ಮರುಚುನಾಯಿಸಿಲ್ಲ. 1968ರ ನಂತರ ಅಂದರೆ ಕಾಂಗ್ರೆಸ್ ಹೊರತಾಗಿ ಬೇರೆ ಬೇರೆ ಪಕ್ಷಗಳು ಹೊರಹೊಮ್ಮಿದ ನಂತರ (ಒಮ್ಮೆ ಬಿಟ್ಟರೆ) ಆಡಳಿತ ಪಕ್ಷವನ್ನು ಕರ್ನಾಟಕದ ಮತದಾರರು ಮತ್ತೆ ಚುನಾಯಿಸಿಲ್ಲ. 1972ರಲ್ಲಿ ಅಧಿಕಾರಕ್ಕೆ ಬಂದದ್ದು ಹಿಂದಿನ ಕಾಂಗ್ರೆಸ್ಸಾಗಿರಲಿಲ್ಲ. ಐದು ವರ್ಷ ಪೂರ್ಣ ಆಳ್ವಿಕೆ ನಡೆಸಿದ, ಅಂತಹ ದೊಡ್ಡ ಹಗರಣಗಳಿರದಿದ್ದ ಸಿದ್ದರಾಮಯ್ಯನವರ ಸರ್ಕಾರವನ್ನೂ ಜನರು ಪುನರಾಯ್ಕೆ ಮಾಡಲಿಲ್ಲ. ಅಂದರೆ ಇದು ತೀರಾ ಹಳೆಯ ಮಾತಲ್ಲ. ಬಿಜೆಪಿ ಪ್ರವರ್ಧಮಾನಕ್ಕೆ ಬಂದ ಮೇಲೂ ಇದು ನಿಜವಾಗಿದೆ ಎಂಬುದನ್ನು ಗಮನಿಸಬೇಕು. ಹೀಗಿರುವಾಗ ಈ ಸಾರಿಯ ಬಿಜೆಪಿ ಸರ್ಕಾರವನ್ನು ಪುನರಾಯ್ಕೆ ಮಾಡಬೇಕೆಂದರೆ ಇದೊಂದು ಅದ್ಭುತ ಸರ್ಕಾರವಾಗಿರಬೇಕಿತ್ತು.

ಇರಲಿ, ಅದನ್ನು ಪಕ್ಕಕ್ಕೆ ಇಡೋಣ. ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಮತಗಳಿಕೆಯನ್ನು ನೋಡಿದರೆ ಇನ್ನೂ ಒಂದು ಸತ್ಯ ಅರಿವಾಗುತ್ತದೆ. ಕೆಳಗಿನ ಕೋಷ್ಟಕ ನೋಡಿ.
ವರ್ಷ                   ಕಾಂಗ್ರೆಸ್          ಬಿಜೆಪಿ                        ಜೆಡಿಎಸ್
2008                     34.36%         33.86%                     18.96%
2013                     36.6%           32.4% *                    20.2%
2018                     38.14%         36.35%                     18.3%
* (+ಕೆಜೆಪಿ+ಬಿಎಸ್‌ಆರ್)

ಅಂದರೆ ಕಾಂಗ್ರೆಸ್‌ನ ಮತಗಳಿಕೆ 2008ರಿಂದ ಹೆಚ್ಚುತ್ತಲೇ ಇದೆ. ಬಿಜೆಪಿಯದ್ದು 2008ಕ್ಕೆ ಹೋಲಿಸಿದರೆ 2018ರಲ್ಲಿ ಹೆಚ್ಚಾಗಿರುವುದು ನಿಜವಾದರೂ, ಕಾಂಗ್ರೆಸ್‌ದು ಅದಕ್ಕಿಂತ ಹೆಚ್ಚಾಗಿದೆ. 2004ರಲ್ಲೇ ಬಿಜೆಪಿಯು 28.33% ಮತಗಳನ್ನು ಪಡೆದು 79 ಸೀಟುಗಳನ್ನು ಗೆದ್ದಿತ್ತು. 2018ರಲ್ಲಿ 38.14% ಮತ ಪಡೆದರೂ 80 ಸೀಟುಗಳನ್ನಷ್ಟೇ ಪಡೆದ ಕಾಂಗ್ರೆಸ್‌ನ ಜೊತೆಗೆ ಹೋಲಿಸಿ ನೋಡಿದರೆ ಒಂದಂಶ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ರಾಜ್ಯದೆಲ್ಲೆಡೆ ಸಾಮರ್ಥ್ಯ ಹೊಂದಿದ್ದು ಕ್ಷೇತ್ರವಾರು ಲೆಕ್ಕಾಚಾರದಲ್ಲಿ ಗೆಲ್ಲುತ್ತಿಲ್ಲ; ಬಿಜೆಪಿಯು ಕೆಲವೇ ಕಡೆ ಭದ್ರಕೋಟೆ ಕಟ್ಟಿಕೊಂಡಿದ್ದರೂ ಅದನ್ನು ದಾಟಲಾಗದೇ ಪೂರ್ಣ ಅಧಿಕಾರ ಪಡೆಯುತ್ತಿಲ್ಲ.
ಹಾಗಾಗಿಯೇ ಆಮಿಷ, ಬೆದರಿಕೆ ಇತ್ಯಾದಿಗಳ ಮೂಲಕ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆಯೇ ಹೊರತು, ಅವರದ್ದೇ ರಾಜಕಾರಣಕ್ಕೆ ಕರ್ನಾಟಕದ ಜನರು ಪೂರ್ಣ ರೀತಿಯಲ್ಲಿ ಸೈ ಅಂದೇ ಇಲ್ಲ. ಆ ರೀತಿ ಪಕ್ಷಾಂತರ ಮಾಡಿ ಬಂದವರು ಬಿಜೆಪಿಯಲ್ಲಿ ಒಂದಷ್ಟು ಭಾಗ ಉಳಿದುಕೊಂಡರೂ, ಬಿಜೆಪಿಯ ಬಲ ಏಕೆ ಹೆಚ್ಚಾಗುತ್ತಿಲ್ಲ; ಬಂದವರಲ್ಲಿ ಕೆಲವರು ಮತ್ತೆ ವಾಪಸ್ ಸಹಾ ಹೋಗುತ್ತಿದ್ದಾರೆ ಎನ್ನುವುದನ್ನಿಲ್ಲಿ ಗಮನಿಸಬೇಕು. ಈ ಸರ್ಕಾರ ಬರಲು ಕಾರಣವಾದ ಪಕ್ಷಾಂತರಿಗಳಲ್ಲೂ ಹಲವರು ಕಾಂಗ್ರೆಸ್‌ಗೆ ವಾಪಸ್ ಹೋಗಲು, ಡಿಕೆಶಿ ಮತ್ತು ಸಿದ್ದರಾಮಯ್ಯನವರ ಮನೆ ಬಾಗಿಲು ತಟ್ಟುತ್ತಿರುವುದು ಗೊತ್ತಿರದ ವಿಷಯವೇನಲ್ಲ. ಅಂದರೆ, ಕೋಮುಧ್ರುವೀಕರಣದಿಂದ ಬಹುಮತ ಪಡೆಯದ ಕಾರಣಕ್ಕೆ, ಪಕ್ಷಾಂತರಿಗಳನ್ನು ಸೇರಿಸಿಕೊಳ್ಳುವುದರ ಮುಖಾಂತರ ಅಧಿಕಾರಕ್ಕೆ ಬರಬೇಕಾದ ಪರಿಸ್ಥಿತಿ  ಬಿಜೆಪಿಗೆ ಇದ್ದೇ ಇದೆ. ಇಲ್ಲಿ ಬಹಿರಂಗವಾಗಿ ಕೋಮುಧ್ರುವೀಕರಣಕ್ಕೆ ಕೈ ಹಾಕದ ಯಡಿಯೂರಪ್ಪ ಒಬ್ಬ ಜನನಾಯಕರಂತೆ ಕಾಣುವುದು ಮತ್ತು ಕರ್ನಾಟಕದ ಬಿಜೆಪಿಯ ಮಟ್ಟಿಗೆ ಇನ್ನೊಬ್ಬ ಜನನಾಯಕ ರೂಪುಗೊಳ್ಳದಿರುವುದನ್ನು ಗಮನಿಸಬೇಕು.

ಅಂದರೆ ಕರ್ನಾಟಕದಲ್ಲಿ ಅವರ ಕೋಮುಧ್ರುವೀಕರಣ ಅಷ್ಟು ಕೆಲಸ ಮಾಡುತ್ತಿಲ್ಲ. ಹಿಜಾಬ್ ಪ್ರಕರಣದಲ್ಲಿ ಇಷ್ಟೊಂದು ಅಬ್ಬರ ಕಾಣುತ್ತಿರಬಹುದಾದರೂ, ಅದು ಬಿಜೆಪಿಯ ಪರವಾಗಿರುವ ಮಾಧ್ಯಮ ಮತ್ತು ಇಂತಹ ಸೆನ್ಸೇಷನಲ್ ಇಶ್ಯೂಗೆ ಒದಗಿ ಬರುವ ಫೋಕಸ್‌ನ ಕಾರಣದಿಂದ ಅಷ್ಟೇ ಎಂಬುದರಲ್ಲಿ ಸಂಶಯವೇ ಇಲ್ಲ. ಇವೆಲ್ಲಾ ಅಬ್ಬರವು ಬಿಜೆಪಿಗೆ ದೊಡ್ಡ ಪೆಟ್ಟು ಕೊಡಲಿದೆ. ಈ ಮಾತನ್ನು ಒಪ್ಪದವರಿಗೆ ಒಂದು ಅತ್ಯಗತ್ಯವಾಗಿರುವ ಮಾಹಿತಿಯನ್ನು ಕೊಡಬೇಕಾಗುತ್ತದೆ: 2011-12ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಸಂಘಪರಿವಾರವು ಇದೇ ರೀತಿ ಅಬ್ಬರವನ್ನು ತೋರಿತ್ತು. ಆಗಲೂ ಜಾನುವಾರು ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದಲ್ಲದೇ, ಇಂದಿಗಿಂತ ಹೆಚ್ಚೇ ಗೋ ಸಾಗಾಟಗಾರರ ಮೇಲೆ ದಾಳಿ ನಡೆಸಿತ್ತು. ಕ್ರೈಸ್ತರ ಮೇಲೆ ಹಾಗೂ ಚರ್ಚ್‌ಗಳ ಮೇಲೆ ಸರಣಿ ದಾಳಿಗಳು ನಡೆದಿದ್ದವು. (ಈ ದಾಳಿ ಎಂಬ ವಿದ್ಯಮಾನದ ಸ್ವರೂಪವನ್ನು ಒಮ್ಮೆ ಗಮನಿಸಬೇಕು. ಇದ್ದಕ್ಕಿದ್ದ ಹಾಗೆ ನೀವು ಸರಣಿ ರೂಪದಲ್ಲಿ ಇಂತಹ ದಾಳಿಗಳನ್ನು ನೋಡುತ್ತೀರಿ. ನಂತರ ನಿಂತು ಹೋಗಿಬಿಡುತ್ತವೆ; ಮತ್ತೆ ಕೆಲ ಕಾಲದ ನಂತರ ಸರಣಿ ದಾಳಿ. ಯಾರೋ ಆದೇಶ ಕೊಟ್ಟು ಶುರು ಮಾಡಿಸಿ, ನಂತರ ‘ಸಾಕಿನ್ನು ನಿಲ್ಲಿಸಿ’ ಎಂದು ಹೇಳಿದರೆ ಹೇಗೋ ಹಾಗೆ ನಿಂತು ಬಿಡುತ್ತವೆ. ಅಂದರೆ ಸರ್ಕಾರವೂ ಅಧಿಕಾರದಲ್ಲಿದ್ದು ಸಂಘಪರಿವಾರದ ಆದೇಶದ ಮೇರೆಗೆ ನಡೆಯುವ ದಾಳಿಗಳವು). ಹಾಗೆಯೇ ಮಂಗಳೂರು ಸುತ್ತಮುತ್ತಲಂತೂ ಹುಡುಗ ಹುಡುಗಿಯರ ಮೇಲೆ ಪದೇಪದೇ ದಾಳಿ ನಡೆಯಿತು.

ಇಂತಹ ಎಲ್ಲಾ ಸಂದರ್ಭಗಳಲ್ಲಿ ಹೊಡೆಸಿಕೊಂಡವರನ್ನೇ, ಹೊಡೆದವರು ಪೊಲೀಸ್ ಠಾಣೆಗೆ ಒಯ್ದು ಪೊಲೀಸರು ಪೆಟ್ಟು ತಿಂದವರ ಮೇಲೆ ಕೇಸು ಮಾಡಿ ಅಥವಾ ಬುದ್ಧಿವಾದ ಹೇಳಿ ಬಿಟ್ಟುಕಳಿಸುತ್ತಿದ್ದರು. ಇವೆಲ್ಲವೂ ಮುಂದುವರೆದು ಮಂಗಳೂರಿನ ಪಬ್ ದಾಳಿ ನಡೆಯಿತು. ದಾಳಿ ಮಾಡಿದವರು ಶ್ರೀರಾಮಸೇನೆಯವರು – ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಕೆಲವರು ಹೇಳಬಹುದು; ಅದನ್ನು ಸುಳ್ಳು ಮಾಡಲೆಂದೇ ಹಿಂದೂ ಜಾಗರಣ ವೇದಿಕೆಯವರು ಹೋಂಸ್ಟೇ ಮೇಲೆ ದಾಳಿ ಮಾಡಿ ಅಲ್ಲಿದ್ದವರನ್ನು ಬಡಿದರು. ಈ ದಾಳಿಯನ್ನು ವರದಿ ಮಾಡಿದ್ದ ಕಸ್ತೂರಿ ಟಿವಿ ವರದಿಗಾರ ನವೀನ್ ಸೂರಿಂಜೆಯವರನ್ನೇ ಜೈಲಿಗೆ ತಳ್ಳುವಷ್ಟು ಸರ್ಕಾರ ಏಕಪಕ್ಷೀಯವಾಗಿತ್ತು

ಇವೆಲ್ಲಾ ಆದ ಕೆಲವು ತಿಂಗಳಲ್ಲಿ ನಡೆದ 2013ರ ವಿಧಾನಸಭಾ ಚುನಾವಣೆಗಳಲ್ಲಿ ಇದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನಾಯಿತು? ಸುಳ್ಯ ವಿಧಾನಸಭಾ ಕ್ಷೇತ್ರವೊಂದನ್ನು ಬಿಟ್ಟು ಮಿಕ್ಕೆಲ್ಲಾ ಕಡೆ ಬಿಜೆಪಿ ಸೋತಿತು. ಸುಳ್ಯದಲ್ಲೂ ಬಿಜೆಪಿಯ ಅಂಗಾರ ಅವರು ಗೆದ್ದಿದ್ದು ಕೇವಲ 1,373 ಮತಗಳಿಂದ. ಅವರ ಮತಗಳನ್ನು ಕೆಜೆಪಿ ಕತ್ತರಿಸಿರಬಹುದು ಎಂದು ಭಾವಿಸಬೇಡಿ. ಹಾಗೆ ನೋಡಿದರೆ ಕಾಂಗ್ರೆಸ್‌ಗೆ ಬರಬಹುದಾಗಿದ್ದ ಮತಗಳನ್ನು ಕತ್ತರಿಸಿದ ಎಸ್‌ಡಿಪಿಐ ಅಭ್ಯರ್ಥಿಗೆ 2,569 ಮತಗಳು ಬಂದಿದ್ದವು.

‘ರಾಜ್ಯವು ನಿಯಂತ್ರಣದಲ್ಲಿದೆ’: ‘ಹಿಜಾಬ್‌‌’ ವಿಚಾರಣೆಯ ಸಮಯ ನ್ಯಾಯಾಲಯಕ್ಕೆ ತಿಳಿಸಿದ ರಾಜ್ಯ ಸರ್ಕಾರ! | Naanu Gauri

ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? 2013ಕ್ಕೆ ಮುಂಚೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಧ್ರುವೀಕರಣದ ಪ್ರಯತ್ನಗಳು ನಡೆಯಲಿಲ್ಲವೇ? ಬಹುಶಃ ಕಳೆದೆರಡು ದಶಕಗಳಲ್ಲಿ ಅತಿ ಹೆಚ್ಚು ಅಂತಹ ಪ್ರಕರಣಗಳು ನಡೆದಿದ್ದು ಆಗಲೇ ಆಗಿತ್ತು. ಕರ್ನಾಟಕದಲ್ಲೇ ಅತಿ ಹೆಚ್ಚು ಕೋಮು ಧ್ರುವೀಕರಣ ನಡೆದಿದೆಯೆನ್ನಲಾದ ದಕ್ಷಿಣ ಕನ್ನಡದಲ್ಲಿ 2013ರಲ್ಲಿ ಹೀಗೇಕಾಯಿತು ಎಂದು ಕೇಳಿದಾಗ ಒಬ್ಬ ಗೆಳೆಯರು, ಗಣನೀಯ ಪ್ರಮಾಣದಲ್ಲಿ ಅಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಿರುವುದರಿಂದ ಹಾಗಾಗಿರಬಹುದು ಎಂದರು. ಹಾಗಾಗಿ ಅದಕ್ಕೆ ಹೋಲಿಸಿದರೆ, ಅತಿ ಕಡಿಮೆ ಪ್ರಮಾಣದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಿರುವ ಉಡುಪಿ ಜಿಲ್ಲೆಯಲ್ಲಿ (ಅಲ್ಲಿಯೂ ಇದಕ್ಕೆ ಹೋಲಿಸಬಹುದಾದ ಪ್ರಮಾಣದ ಕೋಮುಧ್ರುವೀಕರಣದ ಪ್ರಯತ್ನಗಳು ನಡೆದಿತ್ತು) ಆ ವರ್ಷ ಏನಾಗಿತ್ತು? ಕುಂದಾಪುರ ಬಿಟ್ಟರೆ ಮಿಕ್ಕೆಲ್ಲಾ ಕಡೆ ಬಿಜೆಪಿ ಸೋತಿತ್ತು!!

ಕರ್ನಾಟಕದ ಜನರ ತಿಳುವಳಿಕೆಯನ್ನು ತೀರಾ ಕೆಳಮಟ್ಟಕ್ಕೆ ಅಂದಾಜು ಮಾಡಬೇಡಿ ಎಂಬುದಷ್ಟೇ ಇಲ್ಲಿನ ಸಂದೇಶ. ಕರ್ನಾಟಕದ ಲಕ್ಷಾಂತರ ಮನೆಗಳಲ್ಲಿ ಶಾಲೆ, ಕಾಲೇಜು ಓದುತ್ತಿರುವ ಹೆಣ್ಣು ಮಕ್ಕಳಿದ್ದಾರೆ. ಶೇ.99ರಷ್ಟು ಅಂತಹ ಮನೆಗಳಲ್ಲಿ ಆ ಹೆಣ್ಣುಮಕ್ಕಳನ್ನು ಓದಿಸಬೇಕೆಂದು ತಂದೆ-ತಾಯಂದಿರಿಬ್ಬರೂ ಬಯಸುತ್ತಾರೆ; ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಆ ಹೆಣ್ಣುಮಕ್ಕಳೂ ವಿಮೋಚನೆಗಾಗಿ ತಹತಹಿಸುತ್ತಿದ್ದಾರೇನೋ ಎಂಬಂತೆ ಓದುತ್ತಾರೆ. ಪ್ರತಿಬಾರಿಯಂತೆ ಈ ಸಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಎಂದು ಎಲ್ಲಾ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದ ದಿನ ನಾವು ಪತ್ರಿಕಾ ವರದಿಗಳನ್ನು ನೋಡುತ್ತೇವೆ. ಆ ಮಕ್ಕಳು ಮತ್ತು ಅವರ ತಂದೆ ತಾಯಂದಿರು ಕೇಸರಿ ಶಾಲು ಹಾಕಿಕೊಂಡು ಸ್ಕಾರ್ಫ್ ಹಾಕಿಕೊಂಡ ಹೆಣ್ಣು ಮಕ್ಕಳನ್ನು ಬೆದರಿಸ ಹೊರಡುವುದನ್ನು ಯಾವ ರೀತಿ ಪರಿಭಾವಿಸುತ್ತಾರೆ ಎಂದುಕೊಳ್ಳುತ್ತೀರಿ? ಬಿಜೆಪಿಯವರೂ ತಮ್ಮದೇ ಎಕೋ ಚೇಂಬರ್‌ನಲ್ಲಿ ಕೂತು ತಮ್ಮ ಸುತ್ತಲಿನವರು ಮತ್ತು ಅವರ ಗಿಳಿಗಳಾಗಿರುವ ಮಾಧ್ಯಮದವರು ಹೇಳಿದ್ದನ್ನೇ ಕೇಳಿಕೊಂಡು ಇಡೀ ರಾಜ್ಯ ಹಿಜಾಬ್ ವಿರುದ್ಧ ಎದ್ದು ನಿಂತಿದೆ ಎಂದು ಭಾವಿಸುತ್ತಿರುತ್ತಾರೆ. ಇಲ್ಲ, ಈ ರಾಜ್ಯ ಹೀಗೆ ಯೋಚಿಸುತ್ತಿಲ್ಲ.

ಹಾಗಾದರೆ ಆ ಪ್ರಾಂಶುಪಾಲರು ಮತ್ತು ಕಾಲೇಜಿನ ಶಿಕ್ಷಕಿಯರೇಕೆ ತಮ್ಮದೇ ಕಾಲೇಜಿನ ಹೆಣ್ಣುಮಕ್ಕಳ ವಿರುದ್ಧ ಗೇಟು ಮುಚ್ಚಿ ನಿಂತರು? ಯಾವ ರೀತಿಯಲ್ಲೂ ಕೋಮು ಭಾವನೆ ಹೊಂದಿರದ ಪೊಲೀಸ್ ಅಧಿಕಾರಿಗಳೂ ಸಹಾ ಮುತ್ತಿಗೆ ಹಾಕುವ ಭಜರಂಗದಳಕ್ಕೆ ಅಂಜಿ ಕೇಸು ಮಾಡಬೇಕಾದವರನ್ನು ಬಿಟ್ಟು ಕಳಿಸುತ್ತಾರೆಂದ ಮೇಲೆ, ಪುಕ್ಕಲು ಕಾಲೇಜು ಮೇಷ್ಟರುಗಳ ಪಾಡೇನಿರಬೇಡ? ಇದರ ಅರ್ಥ ಕರಾವಳಿಯಲ್ಲಿ ಕೋಮು ಧ್ರುವೀಕರಣವಿಲ್ಲವೆಂತಲೋ, ಆ ಪ್ರಾಂಶುಪಾಲರು ಮತ್ತು ಕಾಲೇಜು ಶಿಕ್ಷಕರಲ್ಲೂ ಅಮಾನವೀಯ ಹೊಣೆಗೇಡಿತನ ಇರಲಿಲ್ಲವೆಂತಲೋ, ರಾಜ್ಯದ ಎಷ್ಟೋ ಜಿಲ್ಲೆಗಳಲ್ಲಿ ಹತ್ತಾರು – ಕೆಲವೆಡೆ ನೂರಾರು – ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಅಬ್ಬರಿಸಲಿಲ್ಲವೆಂತಲೋ ಅಲ್ಲ. ಆದರೆ, ಅದು ಮಿಕ್ಕವರಲ್ಲಿ ಮೂಡಿಸಿರುವ ಭಾವನೆ ಎಂಥದ್ದಾಗಿದೆ ಎಂಬುದನ್ನು ಒಮ್ಮೆ ಸಮೀಕ್ಷೆ ಮಾಡಿ ನೋಡಿ. ನೂರಾರು ವಿದ್ಯಾರ್ಥಿಗಳು ‘ಆ ಕಾಲೇಜಿನಲ್ಲಿ’ ಕೇಸರಿ ಶಾಲು ಹಾಕಿಕೊಂಡು ಬಂದರು ಎಂದು ಹೇಳಿದ ಹಿರಿಯರೊಬ್ಬರಿಗೆ ಆ ಕಾಲೇಜಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ನೆನಪಿಸಬೇಕಾಯಿತು. ಅದು 3,500. ಬಲವಿದ್ದವರು ವಿಪರೀತ ಬಾಯಿ ಮಾಡಿದರೆ ಆಗುವ ಧ್ರುವೀಕರಣವನ್ನು ಬಿಜೆಪಿಯು ಅರ್ಥ ಮಾಡಿಕೊಂಡಿಲ್ಲ. ಮಾಡಿಕೊಂಡಿರದಿದ್ದರೆ 2013ರ ಚುನಾವಣೆಯ ಪಾಠಗಳನ್ನು ಇಷ್ಟು ಬೇಗ ಮರೆಯುತ್ತಿರಲಿಲ್ಲ. ಹಾಗಿದ್ದ ಮೇಲೆ ಬಿಜೆಪಿಯ ಹಾಗೂ ಸಂಘಪರಿವಾರದ ರಾಜಕಾರಣದ ವಿರುದ್ಧ ಜನರೇಕೆ ಬೀದಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸುತ್ತಿಲ್ಲ ಎಂದು ಯಾರಾದರೂ ಕೇಳಬಹುದು.ಅದಕ್ಕೆ ಎರಡು ಕಾರಣಗಳಿವೆ. ಒಂದು, ಅಂತಹ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಯಾವ ವಿಚಾರಕ್ಕೂ ನಡೆಯುತ್ತಿಲ್ಲ. ಅದರಲ್ಲೂ ಅಸಂಘಟಿತ ಜನರು ತಮ್ಮಂತೆ ತಾವೇ ಸಂಘಟಿತ ಶಕ್ತಿಯೊಂದರ ವಿರುದ್ಧ ಬೀದಿಗಿಳಿಯುವುದಿಲ್ಲ. ಎರಡು, ಆ ರೀತಿ ಸಂಘಟಿಸಬಹುದಾದ ಸಂಘಟನೆಗಳು ಈ ಸದ್ಯ ಕರ್ನಾಟಕದಲ್ಲಿಲ್ಲ.

ಮುಸ್ಲಿಂ ವಿರೋಧವು ಒಂದಷ್ಟು ಜನರ ಮನಸ್ಸಿಗೆ ಒಪ್ಪಿಗೆಯಾಗಿದ್ದರೂ, ಅದು ಗಲಭೆಯ ರೂಪ ತಾಳಿ ಅವರ ಬದುಕನ್ನು ಅಲುಗಾಡಿಸುವುದು ಬಹುತೇಕರಿಗೆ ಒಪ್ಪಿತವಾಗಿರುವುದಿಲ್ಲ. ಆದರೆ ರಾಜಕೀಯ ಗೆಲುವು ಅಗತ್ಯವಿರುವ ಪಕ್ಷವೊಂದು ಹತಾಶೆಯಿಂದ ಅತಿರೇಕಕ್ಕೆ ಹೋದಾಗ ಅದಕ್ಕೇ ಪೆಟ್ಟು ಬೀಳುತ್ತದೆ. ಹಿಂದೂ ಮೇಲ್ಜಾತಿಗಳಿಗೆ ಸೇರಿದ ಎಷ್ಟೋ ಕುಟುಂಬಗಳು ಈ ಘಟನೆಯಿಂದ ನೊಂದಿವೆ. ಅವರ ಮನೆಗಳ ಹೆಣ್ಣುಮಕ್ಕಳನ್ನು ಆ ಸ್ಥಾನದಲ್ಲಿಟ್ಟು ನೋಡುವಂತಾಗಿದೆ. ತಮ್ಮದೇ ರೀತಿಯಲ್ಲಿ ಅಂಥವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಎಲೈಟ್ ಕುಟುಂಬವೊಂದು ‘ತಮ್ಮ ಹಿಂದೂ’ಗಳು ನಡೆಸಿದ ಈ ಕೃತ್ಯಕ್ಕೆ ಪ್ರಾಯಶ್ಚಿತ್ತವಾಗಿ ಒಂದೂವರೆ ಲಕ್ಷ ರೂ.ಗಳನ್ನು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆಂದು ನೀಡಿತು. ಬೇರೆಬೇರೆ ಊರುಗಳ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಕೇಸರಿಶಾಲುಗಳು ಕಾಣಿಸಿಕೊಳ್ಳತೊಡಗಿದಂತೆ ಇದೊಂದು ಅನಗತ್ಯವಾದ ಮತ್ತು ಭೀತಿ ಹುಟ್ಟಿಸುವ ವಿದ್ಯಮಾನವಾಗಿ ಮಕ್ಕಳಿರುವ ಮನೆಗಳವರು ಆತಂಕಗೊಳ್ಳುತ್ತಿದ್ದಾರೆ.
ಬೀದಿ ಗಲಾಟೆಗಳಲ್ಲಿ ಯಾಕೆ ಶೋಷಿತ ಸಮುದಾಯಗಳಿಗೆ ಸೇರಿದವರನ್ನೇ ಸಂಘಪರಿವಾರವು ಮುಂದೆ ಬಿಡುತ್ತದೆ ಮತ್ತು ಅವರ ಮೇಲ್ಜಾತಿ ನಾಯಕರ ಮಕ್ಕಳು ಮಾತ್ರ ಯಾವಾಗಲೂ ಏಕೆ ಸುರಕ್ಷಿತವಾಗಿರುತ್ತಾರೆ ಎಂಬ ಸಹಜ ಪ್ರಶ್ನೆಯೂ ಮತ್ತೆ ಮೇಲೆದ್ದು ಬಂದಿದೆ. ಇವುಗಳ ಪರಿಣಾಮವು ಸ್ಪಷ್ಟ. ಇಂಥವರ ಅಸುರಕ್ಷಿತತೆಯು ವ್ಯಕ್ತವಾಗುವುದು ಚುನಾವಣೆಗಳಲ್ಲಿ. ಬಿಜೆಪಿಯು ಅದರ ಪರಿಣಾಮವನ್ನು ಎದುರಿಸಲಿದೆ. ಇಷ್ಟಕ್ಕೂ ಮೀರಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾದರೆ ಅದು ಕಾಂಗ್ರೆಸ್‌ನ ವೈಫಲ್ಯವೇ ಹೊರತು, ಕರ್ನಾಟಕದ ಬಹುಸಂಖ್ಯಾತ ಜನರಿಗೆ ಹಿಜಾಬ್ ದೊಡ್ಡ ವಿಚಾರವಾಗಿತ್ತು ಎಂದಾಗುವುದಿಲ್ಲ.

  • ಡಾ.ಎಚ್ ವಿ ವಾಸು (nAnU gouri.com)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *