ಬದುಕು ನಮ್ಮಿಷ್ಟ ದಂತೆ ನಡೆಯ ದಿರುವುದೇ ಚೆಂದ!.
ಈತ ನಾಟಕಕ್ಷೇತ್ರ ಅಥವಾ ರಂಗಭೂಮಿ ಬಗ್ಗೆ ಇಟ್ಟುಕೊಂಡ ಪ್ರೀತಿ ಅಪಾರ. ಹೀಗೆಲ್ಲಾ ರಂಗಭೂಮಿ ಬಗ್ಗೆ ವಿನಾಕಾರಣ ಪ್ರೀತಿ ಬರುವ ಮೊದಲೇ ಈತನೊಮ್ಮೆ ಶಾಲೆಯಲ್ಲಿ ನಾಟಕದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಮೈಯೆಲ್ಲಾ ದಡಾರವೆದ್ದು ನಾಟಕದಲ್ಲಿ ಪಾತ್ರವಹಿಸದಂಥ ಸ್ಥಿತಿ ಎದುರಾಗುತ್ತದೆ. ಬೆಚ್ಚಗಿನ ಜ್ವರದ ಮಧ್ಯೆ ತನ್ನ ಸಂಭಾಷಣೆ ಹೇಳುವ ಸಹಪಾಠಿಯ ಅಭಿನಯದ, ಮಾತುಕೇಳುವ ಅನಿವಾರ್ಯ ಪ್ರಸಂಗ ಎದುರಾಗುತ್ತದೆ. ಆ ಸಂದರ್ಭದಲ್ಲಿ ಈ ಹುಡುಗನಿಗೆ ಆತನ ಅಪ್ಪ ಹೇಳುತ್ತಾನೆ.
‘ಜೀವನದಲ್ಲಿ ಎಲ್ಲಾ ನಮ್ಮ ಇಚ್ಛೆ ಪ್ರಕಾರ ನಡೆದರೆ ಚೆಂದ ಹಾಗೊಮ್ಮೆ ನಡೆಯದಿದ್ದರೆ ಇನ್ನೂ ಚೆಂದ’.ಇದೇ ಇದೇ ಅಪ್ಪ ತನ್ನ ಮಗನಿಗೆ ಮೂರು ಟಿಪ್ಸ್ ಗಳನ್ನು ಕೊಟ್ಟರು. ಅವು ನಂ1-ಆಡಿದ ಮಾತಿಗೆ ಬದ್ಧನಾಗಿರು.
ನಂ-2. ಒಬ್ಬ ಸಂಭಾವಿತ ಯಾರನ್ನೇ ಆಗಲಿ ಉದ್ದೇಶಪೂರ್ವಕವಾಗಿ ಅವಮಾನಕ್ಕೆ ಗುರಿಪಡಿಸುವುದಿಲ್ಲ.
ನಂ-3-ನಾವಾಗಿ ನಾವೇ ಸಮಸ್ಯೆಗಳ ಬೆನ್ನು ಹತ್ತಿ ಹೋಗಬಾರದು. ಆದರೆ, ಒಮ್ಮೆ ಸಮಸ್ಯೆಗಳ ಜೊತೆ ಬಡಿದಾಡಲಿಕ್ಕೆ ನಿಂತಿಯೋ ಗೆಲುವನ್ನು ಖಾತ್ರಿಪಡಿಸಿಕೊ. ……
.ಹೀಗೆ ಅಪ್ಪನಿಂದ ಜೀವನ ಪಾಠ ಹೇಳಿಸಿಕೊಂಡ ಮಗ ತನ್ನ ಮಗನ ಬಗ್ಗೆ ಹೇಳುತ್ತಾರೆ.
‘ಅಭಿಷೇಕ್‍ನ ಅಜ್ಜ ಒಬ್ಬ ಸಾಹಿತಿಯಾಗಿದ್ದರು. ಡಾ.ಹರಿವಂಶರಾಯ್ ಬಚ್ಚನ್ ಅಮಿತಾಬ್ ಬಚ್ಚನ್‍ನ ವೃತ್ತಿ ಆಯ್ಕೆಯ ಸಂಬಂಧದಲ್ಲಿ ಯಾವತ್ತೂ ವಿರೋಧಿಸಲಿಲ್ಲ. ತಾನು ಸಾಹಿತಿ ತನ್ನ ಮಗಕೂಡಾ ಸಾಹಿತ್ಯ ಜಗತ್ತನ್ನೇ ಪ್ರವೇಶಿಸಬೇಕು, ಅಂತೇನೂ ಅವರು ಪಟ್ಟು ಹಿಡಿಯಲಿಲ್ಲ. ಹಾಗೆಯೇ ತನ್ನ ಮೊಮ್ಮಗನ ಬಗ್ಗೆಯೂ ಅವರು ಖಂಡಿತವಾಗಿಯೂ ಇದೇ ನಿಲುವನ್ನು ತಾಳುತಿದ್ದರು. ಇದು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್‍ರ ಕಥೆ.
ಮಗನ ಮದುವೆಗೆ ಉಡುಗೋರೆಯಾಗಿ ಏನುಕೊಟ್ಟಿರಿ ಎಂದು ಅಮಿತಾಬ್‍ರನ್ನು ಪತ್ರಕರ್ತರು ಕೇಳಿದರು. ‘ನನ್ನ ಹೃದಯ ಮತ್ತು ಆತ್ಮ’ ಹೀಗೆಂದು ಉತ್ತರಿಸಿದರು. ಅಭಿಷೇಕ ಮತ್ತು ಐಶ್ವರ್ಯ ಮದುವೆಯ ಬಗ್ಗೆ ಬಚನ್ ಹೀಗೆ ಹೇಳುತ್ತಾರೆ.
ನನ್ನ ತಮ್ಮ ಅಜಿತಾಬ್ ಐಶ್ವರ್ಯಾಳ ಜಾತಕ ಹಿಡಿದುಕೊಂಡು ಬೆಂಗಳೂರಿಗೆ ಹೋಗಲಿಲ್ಲ. ಸುಮ್ಮನೆ ಹೀಗೆ ಆಕೆಯನ್ನು ಭೇಟಿಯಾಗಲಿಕ್ಕೆ ಹೋದ. ಆದರೆ ಮಾಧ್ಯಮಗಳು ವರದಿ ಮಾಡಿದ್ದೇ ಬೇರೆ. ನನ್ನ ತಮ್ಮ ಜಾತಕ ಹಿಡಿದುಕೊಂಡು ಬೆಂಗಳೂರಿಗೆ ಹೋಗಿ ಒಬ್ಬಜೋತಿಷಿಯನ್ನುಭೇಟಿಯಾದನಂತೆ! ಅವರು ಈ ಮದುವೆಯ ಬಗ್ಗೆ ಅಂತಿಮ ತೀರ್ಮಾನ ಕೊಟ್ಟರಂತೆ! ನನ್ನನ್ನು ಆತಂಕಕ್ಕೀಡುಮಾಡುವ ಸಂಗತಿ ಅಂದರೆ ನಾವು ನಮ್ಮ ಮೌಲ್ಯಗಳಿಗೆ ಬದ್ಧರಾಗುವುದನ್ನು ಬಿಟ್ಟು ಯಾರು ಅಂತಲೇ ಗೊತ್ತಿಲ್ಲದ ನಾನು ಈವರೆಗೂ ಕಂಡಿರದ ಜೋತಿಷಿಯ ಮಾತುಗಳನ್ನು ಕೇಳುತ್ತಾ ಕೂರುವುದು !
ನಾನಾಗಲಿ, ನನ್ನ ಕುಟುಂಬದವರಾಗಲಿ ಐಶ್ವರ್ಯಗಳ ಜಾತಕವನ್ನು ನೋಡಿಲ್ಲ. ಆಕೆಗೆ ಕುಜದೋಷ ಇದೆಯಂತೆ. ಇದು ತುಂಬಾ ಹಾಸ್ಯಾಸ್ಪದ ಸಂಗತಿ. ನನಗೆ ಇದರಲ್ಲಿ ನಂಬಿಕೆ ಇರಲಿಲ್ಲ, ಇಬ್ಬರೂ ಪರಸ್ಪರ ಪ್ರೀತಿಸಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಬಯಸಿದರೆ ಮುಗಿಯಿತು ನಮಗೆ ಅಷ್ಟೇ ಸಂತೋಷದ ವಿಷಯ ಜಾತಕ ಯಾಕೆ ನೋಡಬೇಕು.
ಇನ್ನು ನಮ್ಮ ಮದುವೆ ವಿಚಾರ….ಯಾರಿಗಾದರು ಕೂಡಾ ಈಕೆಯನ್ನು ನಾನು ಬಾಳ ಸಂಗಾತಿಯಾಗಿ ಸ್ವೀಕರಿಸುತಿದ್ದೇನೆ ಹಾಗೂ ಈಕೆ ಕಡೆಯವರೆಗೂ ನನ್ನ ಬಾಳಿನ ಸಂಗಾತಿಯಾಗಿಯೇ ಇರುತ್ತಾಳೆ ಇಂಥ ಸಂಕಲ್ಪವಿದ್ದರೆ ಸಾಕು. ಇಷ್ಟು ಸಾಕು ಜೋತಿಷ್ಯದಲ್ಲಿ ನನಗೆ ನಂಬಿಕೆ ಇಲ್ಲ. ಜಂಜೀರ್ ಚಿತ್ರ ಬಿಡುಗಡೆಯಾಗುವುದಕ್ಕೆ ಮೊದಲು ನಾನು ಮತ್ತು ಜಯ ಒಂದು ಸ್ಪಷ್ಟ ನಿರ್ಣಯಕ್ಕೆ ಬಂದಿದ್ದೆವು. ಜಂಜೀರ್ ಚಿತ್ರ ಹಿಟ್ ಆಗಿದ್ದೇ ಆದರೆ ರಜದಲ್ಲಿ ಲಂಡನ್‍ಗೆ ಹೋಗುವುದು ಎಂದು ತೀರ್ಮಾನಿಸಿಕೊಂಡಿದ್ದೆವು. ಯಾಕೆಂದರೆ, ಹೊರದೇಶವನ್ನು ಆಗ ನೋಡಿರಲಿಲ್ಲ. ಚಿತ್ರ ಹಿಟ್ ಆದಾಗ ನಾವು ನಮ್ಮ ಮನೆಗಳಲ್ಲಿ ಲಂಡನ್‍ಗೆ ಹೋಗುವ ವಿಚಾರ ಮುಂದಿಟ್ಟೆವು. ಆಕೆ ಜೊತೆ ನೀನು ಹೋಗಬೇಕಾದರೆ ಮದುವೆಯಾಗಿಯೇ ಹೋಗಬೇಕು ಅಂದರು, ಅಪ್ಪ. ನಾನೂ ಸರಿ, ಆಗಬಹುದು ಅಂದೆ, ಮದುವೆಯಾಗಿ ನಾವಿಬ್ಬರೂ ವಿದೇಶಕ್ಕೆ ಹೊರಟೆವು. ಅಭಿಷೇಕ್ ಹಾಗೂ ಐಶ್ವರ್ಯ ಇದೇ ರೀತಿ ಪರಸ್ಪರ ಇಷ್ಟಪಟ್ಟರು. ಹೀಗೆ ಮುಲಾಜೇ ಇಲ್ಲದಂತೆ ತನ್ನ ಜೀವನ, ಜೀವನಾನುಭವಗಳ ಬಗ್ಗೆ ಹೇಳುತ್ತಾ ಹೋಗುವ ಅಮಿತಾಬ್ ಹೀಗೆಲ್ಲಾ ಎಂದು ಅನೇಕರಿಗೆ ಹಲವು ತೆರನಾಗಿ ಗೊತ್ತು. ಆದರೆ ನಿಜಕ್ಕೂ ಅಮಿತಾಬ್ ಹೀಗೇ ಎಂದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಎನ್.ಸಿ.ಮಹೇಶ್ ಬರೆದಿರುವ ಅಮಿತಾಬ್ ಒಂದು ಕಲಾಗಾಥೆ ಓದುತಿದ್ದರೆ ಅಮಿತಾಬ್ ನಮಗೆ ಹೆಚ್ಚು ಅರ್ಥವಾಗುತ್ತಾರೆ. ತಮ್ಮ, ತಂದೆ, ಕುಟುಂಬ ಮಗ, ಸೊಸೆ, ವಿಶೇಷವಾಗಿ ತಮ್ಮ ಅಜಿತಾಬ್ ಬಗ್ಗೆ ಹೇಳುವಾಗಲೆಲ್ಲಾ ಅಮಿತಾಬ್ ನಮ್ಮ ನಡುವಿನ ಒಬ್ಬನಾಗಿ ಕಾಣುತ್ತಾರೆ.
‘ಪೈಸೆ ಬಡಿ ಮುಷ್ಕಲ್ ಸೆ ಮಿಲ್ತಾ ಹೈ’…..ಹಾಗೂ ಅವರಪ್ಪ ದಾಖಲಿಸಿದ ಪ್ರೆಂಚ್ ಅತ್ಮಕಥನಕಾರನ ಮಾತು. ‘ಯಾರು ಪ್ರಾಮಾಣಿಕರಲ್ಲವೋ ಅಂಥವರು ತಮ್ಮ ಆತ್ಮಕಥೆಯಲ್ಲಿ ನೆನಪುಗಳನ್ನು ದಾಖಲಿಸಿಸಲು ಹೊರಡುವುದು ವ್ಯರ್ಥ’ ಈ ಎರಡು ವಾಕ್ಯ ಪ್ರಸಂಗಗಳು ಅಭಿತಾಬ್‍ರನ್ನು ಕಾಡಿವೆ. ನನ್ನನ್ನೂ ಕಾಡುತ್ತಿವೆ ಆಸಕ್ತ ಓದುಗರಾದ ನಿಮ್ಮನ್ನೂ ಕಾಡಬೇಕು. ಹಾಗಾಗಿ ಅಮಿತಾಬ್ ಎಂದೆಂದೂ ಸಾಮಾನ್ಯರ ಪ್ರತಿನಿಧಿ ಸೂಪರ್‍ಸ್ಟಾರ್
-ನಿಮ್ಮ ಕನ್ನೇಶ್.