ಕೋಲಶಿರ್ಸಿ ಕನ್ನೇಶ್ ಬರೆದ ಕತೆ: ಭೇಟೆ

ಭೂಮಿ (ಭೂಮಣಿ) ಹಬ್ಬದ ಆಡ್ಕೆ, ಬ್ಯಾಟಿಗ್ ಹೋಗನ್ರನ ಹುಡ್ರ’ ಎಂದ ರಾಮಜ್ಜ, ಹುಡುಗರ ಪ್ರತಿಕ್ರಿಯೆಗೂ ಕಾಯದೆ ಅದೇ ಉಸಿರಿನಲ್ಲಿ ‘ಗೌರತ್ಗೆ ಒಂದ್ ಕವ್ಳ ಕೊಡೆ’, ಎಂದು ಎಲೆ ಅಡಿಕೆ ಬೇಡಿದ. ‘ಬ್ಯಾಟೆ ಹುಚ್ ಈ ಹುಡ್ರಿಗೂ ಕಲ್ಸಬಡ ರಾಮಣ್ಣ; ಎಂದು ಹುಸಿ ಕೋಪದಿಂದ ಗದರಿಸುತ್ತ, ಎಲೆ ಅಡಿಕೆ ಕೈಯಲ್ಲಿ ಹಿಡಿದುಕೊಂಡು ಕುಟ್ಟಿಕೊಡ್ಲೆನೋ ರಾಮಣ್ಣ; ಎಂದು ಗೌರಮ್ಮ ಸಲಿಗೆಯಿಂದಲೇ ಕೇಳಿದಳು. ‘ನಾ ಕುಟ್ಕತ್ನಿ ಕೊಡೆ; ಎಂದವನೆ ಕವಳ ಪಡೆದು “ಆ ಬೇಡ್ಕಣಿ ಮಹಮದ್ ಸಾಬ ಸಾಯ್ಲಿ, ಬೋಳಿಮಗ ಸುಣ್ಣ ಕೊಡಕ ಬತ್ನಿ ಅಂದವ ಬರ್ನೆ ಇಲ್ಲ; ಹಂಗೆ ಒಂದ್ ಎಲಿಗೆ ತಟಗ್ ಸುಣ್ಣನೂ ಹಚ್ ಕೊಡೆ” ಎಂದವನೇ ಭುಜದ ಮೇಲಿದ್ದ ಕೋಲು, ಕಂಬಳಿಯನ್ನು ಕುಂಡೆಗೆ ಹಾಕಿ ಕುಳಿತುಕೊಂಡ.

ತನ್ನ ವಯಸ್ಸಿನ ದೆಸೆಯಿಂದಾಗಿ ‘’ರಾಮಜ್ಜ” ಎಂದು ಊರ ಅಬಾಲವೃದ್ಧ ರಾದಿಯಾಗಿ ಎಲ್ಲರಿಂದಲೂ ಕರೆಯಿಸಿಕೊಳ್ಳುತ್ತಿದ್ದ ಮಣೆಗಾರ ರಾಮಣ್ಣ, ತನ್ನ ವಿಚಿತ್ರ ಅಭ್ಯಾಸಗಳಿಂದ ಊರವರ ಬಾಯಿಗೆ ಆಹಾರವಾಗಿದ್ದ.

ಅಂತಹ ಸ್ಥಿತಿವಂತನೇನೂ ಅಲ್ಲದ ರಾಮಣ್ಣ ತನ್ನ ಜೀವಿತಾವಧಿಯಲ್ಲಿ ಕೃಷಿ ಕೂಲಿ ಮಾಡಿರುವುದಕ್ಕಿಂತ ದನ ಕಾಯುವ ಕಾಯಕ ಮಾಡಿದ್ದೇ ಹೆಚ್ಚು. ಬೆಳಗ್ಗಿನ ಸೊಪ್ಪು-ಸದೆ ದನಕರುಗಳಿಗೆ ಹುಲ್ಲಿನ ಹೊರೆ ತಂದವನು, ಕೊಟ್ಟ ಚಾ ಕುಡಿದು, ಮನೆ ಬಿಟ್ಟನೆಂದರೆ, ಮತ್ತೆ ಮನೆ ಸೇರುವುದು ಪಾವು ಸರಾಯಿ ಇಳಿಸುವ ಸರಹೊತ್ತಿಗೆ, ಮುದುಕನಾದರೂ “ದನಕಾಯುವ ಹುಡುಗ” ನ ಕೆಲಸ ಮಾಡುತ್ತಿದ್ದ ರಾಮಣ್ಣ, ಜನರ ಮನಸ್ಸನ್ನು ಅಚ್ಚಳಿಯದೇ ಅಚ್ಚೊತ್ತಿದ್ದರೆ ಅದಕ್ಕೂ ಅವನ ವಿಚಿತ್ರ ಅಭ್ಯಾಸಗಳ ದೆಸೆಯೇ ಕಾರಣ. ರಾಮಜ್ಜ ಅಲ್ಲ.. ಲ್ಲ, ರಾಮಣ್ಣನ ವಿಶೇಷ, ವಿಚಿತ್ರ ಹವ್ಯಾಸಗಳೆಂದರೆ, ಮುಂಜಾನೆ ತಿಂಡಿ ಚಾ ಆದ ನಂತರ, ನಡ್ನಕೇರಿ ಗೌರಮ್ಮನ ಮನೆಯಲ್ಲಿ ಮೊದಲ ಕವಳ, ನಂತರ ಮನೆಗಳ ಮತ್ತು ಕವಳಗಳ ಲೆಕ್ಕ ವೃದ್ಧಿಯಾಗುತ್ತ ಸಾಗುತ್ತದೆ.

ಮನೆ ಮನೆಗೆ ಹೋಗಿ, ಉಭಯ ಕುಶಲೋಪರಿ ವಿಚಾರಿಸಿ, ಕೆಲವೊಮ್ಮೆ ಕೊಟ್ಟ ಚಹಾ ಕುಡಿದು ಹೆಚ್ಚಿನ ಸಂದರ್ಭಗಳಲ್ಲಿ ‘’ಬೆಳಗಿನಿಂದ ನಾಕೈದು ಚಾ ಆತು”, ಎಂದು ನಿರಾಕರಿಸುತ್ತ, ಮತ್ತೊಂದು ಮನೆಗೆ ಪಾದ ಬೆಳೆಸುತ್ತಾನೆ. ಈ ರೂಢಿಯ ದೆಸೆಯಿಂದ, ರಾಮಜ್ಜ ಎಷ್ಟೋ ಸಾರಿ ದನಗಳನ್ನು ಕಳಕೊಂಡು ತೋಟ ಗದ್ದೆಗೆ ಓಡಾಡುವವರನ್ನು ‘ಇಲ್ಲೆಲ್ಲರು ದನ ಹೋದುವನ್ರ; ಬರಬಕರೆ ದನ ಕಂಡ್ಯನಾ” ಎಂದು ಮುಂತಾಗಿ ವಿಚಾರಿಸುವುದು ಸಾಮಾನ್ಯವಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ದಿನಚರಿ, ಸಾಯಂಕಾಲ 6ನ್ನು ಮೀರಿ ಮುಂದುವರಿದರೂ, ರಾಮಜ್ಜ ಸದಾಹೆಗಲ ಮೇಲೆ ಹಾಕಿಕೊಂಡಿರುತ್ತಿದ್ದ ಒಂದು ದನಕಾಯುವ ಕೋಲು ಮತ್ತು ಹಳೆಯ ಕಂಬಳಿಯನ್ನು ಬಿಡುತ್ತಿರಲಿಲ್ಲವಾದ್ದರಿಂದ ‘ರಾಮಜ್ಜ ಹುಡ್ತಾನೆ ಆ ಕಂಬಳಿ ಕೋಲು ಇತ್ತನ್ರೋ’ ಎನ್ನುವ ಚೇಷ್ಟೆಗೆ ಗುರಿಯಾಗುತ್ತಿದ್ದ, ಇದೇ ಇವನ ಎರಡನೇ ಅಭ್ಯಾಸ ಕೂಡ.

ರಾಮಜ್ಜನ ಕಂಬಳಿ, ಕೋಲು ಮತ್ತು ಕವಳದ ನೆಂಟಸ್ಥಿಕೆ ಎಷ್ಟು ಗಾಢವೆಂದರೆ ಒಮ್ಮೆ ಕಾರವಾರಕ್ಕೆ ಜಿಲ್ಲಾ ನ್ಯಾಯಾಧೀಶರ ಮುಂದೆ ಆಸ್ತಿಯೊಂದಕ್ಕೆ ಸಂಬಂಧಿಸಿದ ಪ್ರಕರಣದ ಸಾಕ್ಷಿಯಾಗಿ ಹೋಗಿದ್ದಾಗ, ಅದೇನಪ್ಪಾ ಬಟ್ಟೆ …ಅದನ್ನ್ಯಾಕ್ ತಂದಿದ್ದೆ…,ಎಂಬ ನ್ಯಾಯಾಧೀಶರ ಈ ಆಕ್ಷೇಪವನ್ನು ರಾಮಣ್ಣ ತನಗೆ ಸಿಕ್ಕ ಬಿರುದೆಂಬಂತೆ ಊರಲ್ಲೆಲ್ಲಾ ಪ್ರಚಾರ ಮಾಡಿ ಮಿಂಚಿದ್ದ. ಹೀಗೆ ಜೀವಂತ ದಂತಕಥೆಯಾಗಿಯೇ ಹೋಗಿದ್ದ .

ರಾಮಣ್ಣನೆಂದರೆ ಹಿರಿಯರ, ಯುವಕರು ಹೆಂಗಸರು; ಮಕ್ಕಳು ಎಲ್ಲರಿಗೂ ಅಚ್ಚು ಮೆಚ್ಚು. ಆಡ್ಕೆ ದಿವಸ ಹೆಗಡೇರ ಅಮ್ಮಂದಿರೊಂದಿಗೆ ನೆಂಟರ ಮನೆಗೆ ಹೋಗುವುದು. ಇನ್ನುಳಿದ ದಿವಸ ಅವರ ಮನೆ ದನ ಕಾಯುವ ಕೆಲಸ ಮಾಡುತ್ತಿದ್ದ ರಾಮಣ್ಣನಿಗೆ ಬೇರೆಯವರಿಗಿಂತ ತುಸು ಹೆಚ್ಚೇ ಭೇಟೆಯ ಆಸಕ್ತಿ ಇತ್ತಾದರೂ ಭೇಟೆಗೆ ಹೋಗಲಾರದ ಅಸಹಾಯಕತೆ.

ಹಾಗೆಂದು ಆಡ್ಕೆಯ ದಿನಗಳಲ್ಲೆಲ್ಲಾ ಯುವಕರನ್ನು ರಾಮಣ್ಣ ಬೇಟೆಗೆ ಪ್ರೇರೇಪಿಸಿ, ಉತ್ತೇಜಿಸದ ದಿನಗಳೇ ಇಲ್ಲ. ಕಾಲು ಮುಂದೆ ಮಾಡಿ ಒಂದು ಕೈಯಲ್ಲಿ ಬೀಡಿ ಎಲೆ ಹಿಡಿದು, ಇನ್ನೊಂದು ಕೈಯಲ್ಲಿ ಬೀಡಿ ಎಲೆಯನ್ನು ತಿಕ್ಕುತ್ತಾ, ಆಗತಾನೆ ಕುಟ್ಟಿ ಪುಡಿ ಮಾಡಿದ ಕವಳವನ್ನು ಮತ್ತೆಮತ್ತೆ ಮೆಲ್ಲುತ್ತಾ ‘ಈ ಗೌರತ್ಗೆ ಬ್ಯಾಟೆ ವಿಷ್ಯ ತಗ್ದ್ರೆ ಬೈತಾಳಲ್ಲಾ….ಎಂದು ಯೋಚಿಸತೊಡಗಿದ.

ಮುದ್ಕಿಯಾದ ಗೌರತ್ಗೆ ಅಥವಾ ಗೌರಕ್ಕ ಬೇಟೆ ವಿಷ್ಯದಲ್ಲಿ ಮೂಗು ಮುರಿಯಲು ಬಲವಾದ ಕಾರಣವೂ ಇತ್ತು.
ಮಲೆನಾಡಿನ ದಟ್ಟ ಅರಣ್ಯದಿಂದ ಆವೃತ್ತವಾಗಿರುವ, ಕಾಡುಪ್ರಾಣಿಗಳಿಂದ ಸಮೃದ್ಧವಾಗಿರುವ ಪ್ರದೇಶವೇ ಕ್ವಾಲ್ಸಿ.,ಕ್ವಾಲ್ಸೆ, ಕೋಲ್ಸೆ ಎಂದು ಕರೆಯಲಾಗುವ ನಾನೂರು ಮನೆಗಳ ಈ ದೊಡ್ಡಹಳ್ಳಿ 50 ವರ್ಷಗಳ ಹಿಂದೆ 60-80 ಮನೆಗಳ ಊರಾಗಿತ್ತು. ಘಟ್ಟದ ಕೆಳಗಿನವರು, ಅಕ್ಕಪಕ್ಕದವರು ಬಂದು ಸೇರಿ, ಕೆಲವರು ಇಲ್ಲಿಂದ ಜಾಗ ಖಾಲಿಮಾಡಿ, ಒಂದು ಮನೆ ಎರಡು ಬಾಗಿಲಾಗಿ, ಮುರಿದು ಮೂರಾಗಿ, ಮೂರಾಬಟ್ಟೆಯಾಗಿ ಮುನ್ನೂರರಿಂದ ನಾಲ್ಕು ನೂರರ ಸಂಖ್ಯೆ ದಾಟಿ ಕೋಲ್ಸೆ ಬೆಳೆದುನಿಂತಿತ್ತು.

‘ಕೋಲ್ಸೆ ಆದ್ರ ಮಳೆ ಹಬ್ಬದಗೆ ಕೊಂಡ ಹಾಯದ್ ನೋಡಿರನ……’ ಎಂದು ಕೇಳದವರೇ ಇಲ್ಲ. ಎನ್ನುವಷ್ಟು ಇಲ್ಲಿಯ ‘’ಆರಿದ್ರ ಮಳೆ” ಹಬ್ಬ ಸುತ್ತಲಿನ ಹತ್ತೂರಿಗೆ ಪ್ರಸಿದ್ಧವಾಗಿತ್ತು. ಗ್ರಾಮದ ಅದ್ರಮಳೆಹಬ್ಬ, ‘ಆದರೆ ಮಳೆ’, ಮತ್ತು ಆರಿದ್ರಮಳೆ ವóರ್ಷಧಾರೆಗೆ ಸಂಬ್ರಮಿಸುವ ಅವಕಾಶದಂತೆ ನಡೆಯುತ್ತದೆ. ಆರಿದ್ರ ಮಳೆಯ ಮಳೆವೈಭವ ದೊಂದಿಗೆ ಒಂದೆರಡು ದಿನ ತಿಂದುಂಡು ಹಾಯಾಗಿದ್ದು,ಮಳೆಗಾಲದ ಪ್ರಾರಂಭದ ವಿಶ್ರಾಂತಿ ಮುಗಿಸಿ, ಕೃಷಿ ಕೆಲಸ ಆರಂಭಿಸಿ ಮಲೆನಾಡಿನ ಸುದೀರ್ಘ ಮಳೆಗೆ ಹೊಂದಿಕೊಳ್ಳಲು ಹಿರಿಯರು ಮಾಡಿರಬಹುದಾದ ಈ ಮಳೆಹಬ್ಬ ಕಾಲಾಂತರದಲ್ಲಿ ಅನೇಕ ಬದಲಾವಣೆಗೆ ಆಗಾಗ ಹೊಂದಿಕೊಂಡಂತಿದೆ. ಮಾರನ ಕುಟುಂಬದವರೇ ಕುರಿತಲೆ ಹೊರುವುದು, ಊರಿನ ಮೂಲಕುಟುಂಬ ನಡ್ನಕೇರಿಯವರೇ ಗಾಮದೇವರ ಪೂಜಾರಿಕೆ ಮಾಡುವುದು, ಅದಕ್ಕೆ ತಳವಾರ ರಾಮಣ್ಣ ಜಾಗಟೆ ಹೊಡೆದು ಘೋಷಿಸುವುದು. ಆದ ನಂತರ, ನವ ವಧುವರರೊಂದಿಗೆ ಹೊಂತಗಾರ ಮಕ್ಕಳು ಹುರುಪಿನಿಂದ ದೇವರ ಮುಖ ಹೊರಲು ತಯಾರಾಗವುದು ಇದಕ್ಕೆಲ್ಲಾ ಕೆಲವು ಹಿರಿಯರೊಂದಿಗೆ ಈಶ್ವರ ಮಾರತಳ್ಳಿ ಒಂದೆರಡು ದಿನ ಅಹೋರಾತ್ರಿ ನಿರಂತರ ಉಚಿತ ಸೇವೆ ಮಾಡುವುದು ಮುಂತಾದ ಅನೇಕ ಧರ್ಮದ ಕರ್ಮಾಚರಣೆ ಮಾಡುವುದು. ಇದೇ ದೊಡ್ಡ ಸಾಧನೆ ಎಂಬಂತೆ ಕೆಲವರು ವಾರವಿಡೀ ಕೆಲಸಬಿಟ್ಟು ಊರಿಡೀ ಎದೆಯುಬ್ಬಿಸಿ ನಡೆಯುವುದು ಮುಂತಾದ ಅನೇಕ ಮುಗ್ಧ ಆಚರಣೆಗಳಿಂದಾಗಿ ಆರಿದ್ರಮಳೆಗೆ ಆರಿದ್ರಹಬ್ಬದ ಕೊಂಡದ ಕೆಂಡದ ಮೇಲೆ ನಡೆದು ವರ್ಷದ ಪಾಪ ಕಳೆದರೆ ಹಬ್ಬದ ಹರಕೆ ಮುಗಿದಂತೆ. ಹಬ್ಬದ ಹರಕೆ ನೆಂಟರ ಹಬ್ಬದೂಟ ಮುಗಿದ ಮೇಲೆ ಹಬ್ಬ ಮುಕ್ತಾಯವಾದರೂ ಹಬ್ಬದ ಕುರಿ ತಿಂದು, ಆಡಿಕೆಯ ದಿವಸ ಬೇಟೆಯಾಡಿ ಕುರಿ ಕರಗಿಸಿ, ಹಂದಿಯ ಬಾಡು ಸವಿಯುವವರೆಗೂ ಊರಿಂದ ಕದಲದ ಸಂಬಂಧಿಗಳು,ಬೇಟೆಯಾಡಿ ಹೋಗುವುದು ರೂಢಿ.

ಮಳೆಗಾಲದಲ್ಲಿ ಬೇಟೆಗಳೆಂದರೆ ಹತ್ತುಮೀನು ಹಿಡಿಯುವ ಮೀನುಬೇಟೆ,ಅಹೋರಾತ್ರಿ ಮಳೆ ಚಳಿಯಲ್ಲಿ ತಿರುಗುವ ರಾತ್ರಿಬೇಟೆ ನಡೆಯುವುದು ಸಾಮಾನ್ಯರೂಢಿ. ಆದರೆ ಹಗಲಿನ ಹಂದಿಬೇಟೆಗೆ ವಿಶಿಷ್ಟ ಸಂದರ್ಭ, ವಿಶೇಷಗಳ ಸಾಥ್ ಇರಲೇಬೇಕು.

ಭೂಮ್ಣಿಹಬ್ಬ, ಮಾರ್ನಮಿ,ದೀಪಾವಳಿಗಳು ಪಾಳಿಯಲ್ಲಿ ಬರುವ ಗದ್ದೆಕೊಯ್ಲಿನ ಸಂದರ್ಭದಲ್ಲಂತೂ ಅರಗುಪ್ಪಾ ,ಕುಣಜೆ,ಹಳದೋಟ,ತ್ಯಾರ್ಸಿ ಗಳಲ್ಲೆಲ್ಲಾ ಭೇ ಟೆಪ್ರೀಯರು ವಾರಕ್ಕೊಮ್ಮೆಯಾದರೂ ಭೇಟೆಗೆ ನುಗ್ಗಲೇ ಬೇಕು.ಕೋಲ್ಸೆ,ಹಳ್ಳಿಬೈಲುಗಳಲ್ಲಿ ಹಬ್ಬವಾಯಿತೆಂದರೆ ಮಾರನೇ ದಿವಸ ಬೇಟೆ ಮುಗಿಯಿತೆಂದೇ ಅರ್ಥ, ಹಬ್ಬದ ಆಡಿಕೆ ಬಿಟ್ಟು ಬೇರೆ ದಿನಗಳಲ್ಲಿ ಬೇಟೆಯಾಡುವವರ ಸಂಖ್ಯೆಯೇನು ಕಡಿಮೆ ಇಲ್ಲ. ಆದರೆ ಈ ಆಡ್ಕೆ ಬೇಟೆಯ ವಿಚಾರದ ಹಿಂದಿನ ಗೌರಮ್ಮನ ದುರಂತದ ನೆನಪು ಮಾತ್ರ ಕುತೂಹಲಕರ.
ಅಂದು ಭೂಮಣಿ ಹಬ್ಬದ ಆಡ್ಕೆ ದಿನ. ಪ್ರತಿದಿನದಂತೆ ಕೃಷಿ ಕೆಲಸ,ಸೊಪ್ಪು ಸೌದೆ ಎನ್ನುವ ಗೊಡೆವೆ ಇಲ್ಲದೆ ಎಲ್ಲರೂ ಹಿಂದಿನ ದಿನದ ಹಬ್ಬದ ಪುಷ್ಕಳ ಭೋಜನದ ಬಗ್ಗೆಯೇ ಮಾತನಾಡುತ್ತ, ಕವಳ ಜಗಿಯುತ್ತ, ಜಗಲಿಯಲ್ಲಿ ಪಟಾಂಗ ಹೊಡೆಯುತ್ತ, ನೆಲಕ್ಕೆ ಒರಗಿದ್ದರು. ಚಿಂತೆಯಿಲ್ಲದೆ ಸಂತೆಯಲ್ಲಿ ಮಲಗಿದವರಂತೆ ವಿರಮಿಸಿ ಮಾತನಾಡುತ್ತ, ಮಾತನಾಡುತ್ತಿರುವಾಗಲೇ ನಿದ್ರಾದೇವಿ ಒಬ್ಬೊಬ್ಬರನ್ನೇ ಆವರಿಸತೊಡಗಿದಳು.

‘ಹಬ್ಬಾ ಮಾಡಿ ಆಡ್ಕೆ ಅಂತ ಹೊತಾರೆನೇ ಮುನ್ಗ್‍ತರೆ ಕಳ್ನನ್ಮಕ್ಳು. ಬ್ಯಾಟೆಗೀಟೆ ಮಾಡ್ರ’ ಎಂದು ಗೊಣಗಿದ ಮಣೆಗಾರ ರಾಮಣ್ಣನ ಮಾತು, ಹಬ್ಬದ ಸಂಭ್ರಮದಲ್ಲಿ ವಿರಮಿಸಿದ್ದ ನಾರಾಯಣ, ವಾಸು ಬಂಗಾರಿ, ಸೋಮು ರಾಮಕೃಷ್ಣ, ಈಶ್ವರ ಎಲ್ಲರ ಕಿವಿ ತಟ್ಟಿದರೂ,ವಯಸ್ಸಿನಿಂದ ಎಲ್ಲರಿಗೂ ಕಿರಿಯನಾಗಿದ್ದ ಮಣೆಗಾರ ಬಲಿಯ ‘ಹೋಗನ್ರನ’ ಎಂಬ ಮಾತು ಬಲಿಯ ಉಪಸ್ಥಿತಿಯನ್ನು ಬಹಿರಂಗಗೊಳಿಸಿ ‘ಹೋಗನ್ರನ…..?ಎಂಬ ಪ್ರಶ್ನಾರ್ಥಕ ಬೇಡಿಕೆಗೆ ‘’ಹೋಗನ್ರನ”; ಹೋಗನ್ರನ’ ಎನ್ನುವ ಸಮ್ಮತಿಯೇ ಸಿದ್ಧತೆಯಾಗಿ ಹೋಗನ್ರ, ಇವತ್ತ ಆಡ್ಕೆ ಬ್ಯಾರೆ.. ಎನ್ನುವ ವಿಶೇಷಣವೂ ಸೇರಿಕೊಂಡಿತು.

ಮಲಗಿದವರನ್ನು ನೀರು ಹಾಕಿ ಎಚ್ಚರಗೊಳಿಸಿದಂತೆ ಎಲ್ಲರನ್ನೂ ಎಬ್ಬಿಸಿದ ರಾಮಣ್ಣ, ಬೇಲಿದಾಟಿ ಮನೆ ಸೇರಿಕೊಂಡ.ಯುವಕರ ಗುಂಪು ಬ್ಯಾಟೆಗೆ ಬರದರ್ ಬಾರಾ……., ಬ್ಯಾಟಿಗೆ ಬರ್ರೋ…’ಎನ್ನುತ್ತ ಎಲ್ಲರೂ ಒಬ್ಬೊಬ್ಬರಾಗಿ ಹೊರಟವರು, ಉಪ್ಪಡಕೆ ಕತ್ರಿ ಬಳಿಯ ಉಪ್ಪಳಿಗೆ ಮರದ ಕೆಳಗೆ ಸಮೂಹವಾಗಿ 20 ಕ್ಕೂ ಹೆಚ್ಚು ತಲೆಗಳನ್ನು ಎಣಿಸಲು ಸಾಧ್ಯವಾಯಿತು.

ಎಲ್ಲರೂ ಕವಳ ಮೆಲ್ಲುತ್ತಾ ಮುಂದಿನ ಕವಳದ ತಯಾರಿಯನ್ನು ಮಾಡಿಕೊಂಡರು. ಏ…ಸಲ್ಪ ಹೊಗೆಸಪ್ಪ್ ಇದ್ರ ಕೊಡ’ ಎಂದು ಮಾರ್ಯನನ್ನು ಯಾಚಿಸಿದ ನಾರಾಯಣನ ಮಾತಿಗೆ, ಏನೋ ಹುಡ್ಗ ನೀನೂ ಹೊಗೆಸಪ್ಪ್ ತಿನ್ನದ ಕಲ್ತ್ಯನ’ ಎಂಬ ಆಕ್ಷೇಪ ವ್ಯಕ್ತಪಡಿಸಿದ ವಾಸುನ ಮಾತಿಗೆ ‘’ಇಲ್ಲ ವಾಸು, ಹೊಗೆಸಪ್ಪ ಹಚ್ಕಿಂದ್ರೆ ಉಂಬ್ಳ ಹತ್ತದಿಲ್ಲ’ ಎಂದು ಜಿಗಣಿಯಿಂದ ರಕ್ಷಿಸಿಕೊಳ್ಳಲು ಸರಳ ಉಪಾಯವೇ ಇದೆಂದು ನಾರಾಯಣ ವಾಸುನ ಆಕ್ಷೇಪವನ್ನು ಮೆತ್ತಗಾಗಿಸಿದ. ಮನ್ನೆ, ಹಳದೊಟ್ ಕಾನಿಗೆ ಹೋಗಿವ್ ಆಗಿತ್ತು, ಎಂತದೂ ಸಿಗನಿಲ್ಲ; ಎಂದು ದೂರ್ನಕಿ ಮಾರ್ಯ ಹಳದೋಟದ ಕಡೆ ಬೇಟೆಗೆ ಹೋಗುವ ಪ್ರಸ್ತಾಪವನ್ನೇ ತಳ್ಳಿಹಾಕಿದ. ಉಡಿ, ಹಾಯ್ಗಳ ನಿರ್ಧರಿಸಿ, ಬೇಟೆ ಮಾಡುವ ಕೆಲಸದಲ್ಲಿ ನಿಷ್ಣಾತನಾಗಿದ್ದ ಮಾರ್ಯನ ಮಾತಿಗೆ ಯಾರೂ ದೂಸರಾ ಮಾತನಾಡಲಿಲ್ಲ.

‘ಹಂಗ್ಯರೆ ನೇರ್ಲಮನೆ ಗುಡ್ಡೆ, ಬಂಧೀಸರ, ಉಪ್ಪಡಿಕೆ ಕೋವಿನ ಬದಿಗೆ ಹೋಗನ’ ಎಂದು ಸಲಹೆ ಮಾಡಿದ ಸನ್ನು ನಾರಾಯಣನ ಮಾತಿಗೆ ಸಮ್ಮತಿ ದೊರೆತು, ಎಲ್ಲರೂ ಅಡಿ ಇಡಲು ಸಿದ್ದರಾದರೂ, ಮಾರ್ಯ ಮತ್ತು ದ್ಯಾವನ ಕೋವಿ ಸಿದ್ಧತೆಯಾಗಿಲ್ಲದ್ದರಿಂದ ಚರೆ,ಕತ್ತ, ಕೋವಿಯ ನಳಿಕೆಗೆ ತೂರುವ ಸಣ್ಣ ಕಬ್ಬಿಣದ ರಾಡು ಎಲ್ಲಾ ಪರೀಕ್ಷಿಸುತ್ತಿರುವಂತೆ ನಳಿಕೆಯಲ್ಲಿ ರಾಡನ್ನು ಬಲವಾಗಿ ನುಗ್ಗಿಸಿದ ಶಬ್ದವನ್ನು ಕೇಳಿದ ಬೇಟೆ ನಾಯಿಯೊಂದು ಕನಸಿನಿಂದೆದ್ದಂತೆ ‘ಬೌ…..ಬೌ..’ ಎಂದು ತನ್ನ ಸಹಚರರನ್ನು ಕರೆಯಿತು. ಬೇಟೆ ನಾಯಿಯ ಕರೆಯನ್ನು ಆಲಿಸಿದ ಹಡಬೆ ನಾಯಿಗಳೂ ಅದೇನೋ ಮುನ್ಸೂಚನೆ ಸಿಕ್ಕಂತೆ ಕುಂಯ್‍ಗುಟ್ಟ ತೊಡಗಿದವು. ಬೇಟೆಯ ತಂಡದೊಂದಿಗೆ ಕೋವಿ ಇದ್ದವರು ಕೋವಿ ಎತ್ತಿಕೊಂಡು ಉಪ್ಪಡಿಕೆ ಬೆಟ್ಟ ಹತ್ತಿದರು. ಆಡ್ಕೆ ದಿನ ಎಂಬ ಹುಮ್ಮಸ್ಸಿನಿಂದಲೋ ಓ……,ಓ,…….ಯ್……ಓ…..ಹೋ……..ಯ್…….ಎಂದು ಸೋಯುವವರ ಕೂಗು ಇತರ ದಿನಗಳಿಗಿಂತ ತುಸು ಹೆಚ್ಚೆ ದೊಡ್ಡದಾಗಿ ಉಪ್ಪಡಿಕೆ, ನೇರ್ಲಮನೆ ಬಯಲುದಾಟಿ, ಬಂಧಿಸರದ ಗದ್ದೆಯಂಚಿನ ನೀಲಗಿರಿ ತೋಪಿಗೆ ಹೊಡೆದು, ಪ್ರತಿಧ್ವನಿಯಾಗಿ, ಸುತ್ತಲಿನ ನಾಲ್ಕು ಹಳ್ಳಿಗಳ ಧ್ವನಿಗಳೆಲ್ಲಾ ಸೇರಿ ಮಾರ್ಧನಿಸತೊಡಗಿದವು.

ಬೇಟೆಯಲ್ಲಿ ಕೋವಿಪಾಲು,ಪೂಜೆಪಾಲು ಹೊತ್ತವರ ಪಾಲು, ದಾಯ,ಸುಡಮುರಿಪಾಲು, ಹಿಂಗೆಲ್ಲಾ ಯೋಚಿಸುವ ಸಮಯವಲ್ಲವಾದರೂ ಕೊಂಗತನಕ್ಕೆ ಹೆಸರಾದ ರಮೇಶ, ಆ ಧಾವಂತದಲ್ಲೂ ‘ನಾಗರ್ರಾಜ ಸಣ್ಣಕೋವಿ ಒಂದೇ ತಗುಂದು ಬಂದಿದನಾ…..? ಎಂದು ಗುರಿಗಾರ ನಾಗರಾಜನನ್ನು ಕಿಚಾಯಿಸಿದ,

‘ಕುಲ್ಡ್ ಎತಲಗೆ ಹೋಗ್ಯನೋ ಎಂದು ಕಾಲೆಳೆದ, ಪಾಲ್ಕೇಳಕೊಂದೈದಿರಿ ಸೋಯರಾ…… ಎಂದು ಹುರಿದುಂಬಿಸಿದ. ಉತ್ಸಾಹ ಮೇರೆಮೀರಬೇಕೆಂದೇ ಅಪೇಕ್ಷಿಸಿ,ಕಿರುಚಾಡಿದ.

ಈ ಕೂಗಾಟಕ್ಕೆ ಗದ್ದೆಯಲ್ಲಿ ಕೆಲಸ ಮಾಡುವವರ ಕೂ….ಓ…..ಯ್….ಧ್ವನಿಗೂಡಿತು. ಧ್ವನಿ, ಕೂಗು, ಗಾಳಿಗಳೆಲ್ಲಾ ಸೇರಿ ಬಿರುಗಾಳಿಯಾಯ್ತೋ ಎನ್ನುವಂತೆ ಮರಗಿಡಗಳು ಬಳುಕುತ್ತಾ, ಬಳುಕುತ್ತಾ ವಾಲುತ್ತಿವೆಯೇನೋ ಎನ್ನುವ ವಾತಾವರಣ ಸೃಷ್ಠಿಯಾಗುವ ಸಂದರ್ಭಕ್ಕೆ ಸರಿಯಾಗಿ ‘ಅಯ್ಯೊ’ ಎಂದು ಉದ್ಘಾರ ತೆಗೆದ ಈಶ್ವರ, ಚಿಕ್ಕ ಗಿಡವೊಂದನ್ನು ಜೋತುಬಿದ್ದು ದಾರಿ ಬದಲಿಸಿದ.

‘ಎ ಸರಿ ಹೋಗಲೇ ಎಂದು ಬಂಗಾರಿ ಎಚ್ಚರಿಸಿದನಾದರೂ, ಬೇಟೆಯ ಅವಸರದಲ್ಲಿ ಕ್ಷಣವೂ ನಿಲ್ಲದೆ ಮುಂದುವರಿದ ಈಶ್ವರ, ತುಸು ದೂರ ನಿಂತು ಕೈತಣ್ಣಗಾಗುತ್ತಿದೆಯಲ್ಲಾ ಎಂದು ಕೈ ನೋಡಿಕೊಂಡವನೆ ಕೈಯಲ್ಲಿ ಕೋಲಿನ ಜೊತೆಯಾಗಿ, ಮುದ್ದೆಯಾಗಿ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ ಹಸಿರುಹಾವನ್ನು ಕೈಯೇ ಬಿದ್ದುಹೋಗುವಂತೆ ಕೊಡಚಿ ಎಸೆದವನೇ ‘ಬೋಳಿಮಗನವು ಎಂತೆಂತವಲ ಸಿಗತವೇನೋ ಎಂದುಕೊಳ್ಳುತ್ತಿದ್ದಂತೆ, ಹಸಿರು ಹಾವು ಕಚ್ಚಿ ತನ್ನ ಪ್ರತಿಭಟನೆ ದಾಖಲಿಸಿತು. ಈ ಬಗ್ಗೆ ಅಂಥಾ ತಲೆಕೆಡಿಸಿಕೊಳ್ಳದೆ ಮೂತ್ರಸ್ನಾನದ ಉಪಚಾರ ಮಾಡಲಾಯಿತು.

ಎದುರಿನಿಂದ ಬಂದವರು ‘ಮೊಲ’ ‘ಮೊಲ’ಎಂದು ಅರಚಿದರೂ. ಮೊಲ’ ಮಲಗಳ ವ್ಯತ್ಯಾಸಗೊತ್ತಿಲ್ಲದವರು ಮೊಲವೋ? ಮಲವೋ?ಎನ್ನುವ ವ್ಯರ್ಥ ವಿಚಾರಕ್ಕೆ ತಲೆ ಕೊಡಲಿಲ್ಲ. ಬೇಟೆಯಾಡುವುದು ವರ್ಷದಲ್ಲಿ ನಾಲ್ಕೈದು ಬಾರಿ ಇವರಿಗೆ ಸಾಮಾನ್ಯವಾದರೂ. ಪ್ರಾಣಿ ಮುಳ್ಳು ಕಂಟಿ, ಧರೆ- ಕೊಡ್ಲುಗಳ ಜಾಗರೂಕತೆಯ ಬಯ ಇದ್ದೇ ಇತ್ತು. ‘ಏ ಹೆಜ್ಜೆ ಕಾಣ್ತವ್ರ, ಸೋಮ?’ ಎನ್ನುವ ಸಣ್ತಮ್ಮಜ್ಜನ ಪ್ರಶ್ನೆಯನ್ನು ಆಲಿಸಿದ ಸೋಮ, ‘ಸಣ್ತಮ್ಮ ನಿನ್ಯಾವಾಗ ಬಂದ್ಯೋ ಎಂದ, ಏ ಹಿಂಗೇ ಈ ಬದಿಗೆ ಬಂದಿದ್ನ ನಾನೂ ನಿಮ್ಮ ಸಂತಿಗೆ ಸೇರ್ಕಿಂದೆ’.

ಆ ಕಡೆಯಿಂದ ಓ….ಹೋ….ಯ್,….ಓ…ಹೋ….ಯ್…..ಎಂಬ ಶಬ್ಧ ಕೇಳಿ ಸೋಮನು ಮುಂದುವರೆದನಾದರೂ ಸಣ್ತಮ್ಮಜ್ಜ ಮರಕ್ಕೆ ಹತ್ತಿದ್ದ ಬಳ್ಳಿಯನ್ನು ಎಳೆಯುತ್ತಲೇ ಇದ್ದ. ಗುಡ್ಡೆ ಕಡೆ ಹೋದಾಗ, ಬೇಟೆಕಡೆ ಹೋದಾಗಲೆಲ್ಲ ಬಳ್ಳಿ ಎಳೆದು ಒಟ್ಟು ಮಾಡುವುದು ಸಣ್ತಮ್ಮಜ್ಜನ ಅತಿ ಸಾಮಾನ್ಯ ಹವ್ಯಾಸವಾದ್ದರಿಂದ ಸೋಮ ಹಿಂತಿರುಗಿ ನೋಡದೆ ಓ….ಹೋ…..ಯ್…. ಪ್ರಾರಂಭಿಸಿದ.


20 ಜನರ ನಂತರ ಸಣ್ತಮ್ಮಜ್ಜನೂ ಸೇರಿಕೊಂಡು ಇಪ್ಪತ್ತೊಂದು ಆಗಿದ್ದ ಬೇಟೆಯ ಬೇಟೆ ದಂಡು 2-3 ರ ಚಿಕ್ಕ ಗುಂಪುಗಳಾಗಿ ಐದರಿಂದ, ಆರಾಗಿ ಬೇರ್ಪಟ್ಟಿದ್ದರಿಂದ ಸೋಮ ಕೂ…..ಕೂ……ಓ……ಯ್…..ಎಂದು ವಿಶೇಷ ಸಂಕೇತದ ಕೂಗುಗಳನ್ನು ಹೊರಡಿಸಿದ. ಇಂಥ ಅನೇಕ ಭೇಟೆಗಳಿಗೆ ಹಲವು ಬಾರಿ ಎಡದಾರಿಯಲ್ಲಿ ಸೇರಿಕೊಳ್ಳುತಿದ್ದ ಸಣ್‍ತಮ್ಮಜ್ಜ ವಿಶೇಷ ಲಕ್ಷಣಗಳಿಂದ ಪ್ರಸಿದ್ಧನಾಗಿದ್ದ. ನಡುವಿನ ಮನೆಯ ಕೊನೆಯ ಪುತ್ರನಾಗಿದ್ದ ಸಣ್‍ತಮ್ಮ ಅಜಾನುಬಾಹು. ಕೆಲಸ,ಕುಡಿತ,ಸಾಹಸಗಳೆಂದರೆ ಪ್ರೀತಿ,ಈತ ಕೊಟ್ಟಿಗೆಗೆ ತರುತಿದ್ದ ಬೆಟ್ಟದ ಸೊಪ್ಪಿನ ಹೊರೆ ಅಲುಗಾಡಿಸುವವ ಅಂಥಗಂಡೇ ಆಗಿರಬೇಕಾಗಿತ್ತು.ನೇಮ-ನಿಯಮಗಳೂ ಕರಾರುವಕ್ಕು. ಬೇಟೆ ತೀಟೆಯೆಂದು ಸದಾ ಮಾಂಸಹಾರಿಯಾಗಿದ್ದ ಸಣ್‍ತಮ್ಮನ ಮೈಮೇಲೆ ಬರುವ ದೇವರ ದೆಸೆಯಿಂದಲೋ ಏನೋ,ಕರಾರುವಕ್ಕಾಗಿ ಸೋಮವಾರದ ಸಂಜೆ ಊಟದ ಬದಲು ಪಳಾರ ಮಾತ್ರ ಸೇವಿಸುತಿದ್ದ.ತೋಟ-ಗದ್ದೆ ಕೆಲಸದ ನಡುವೆ ಆಹಾರವೆಂದು ಕಟ್ಟಿಕೊಂಡು ಹೋಗುತಿದ್ದ ಬುತ್ತಿ ಗಂಟು ನಿಶ್ಚಿತ ಕೆಲಸದ ಪ್ರದೇಶದ ವರೆಗೆ ತಲುಪಿದ್ದೇ ಇಲ್ಲ, ಮಾರ್ಗ ಮಧ್ಯೆ ತಿಂದುಂಡು ಅನವರತ ದುಡಿಯುತ್ತಾ ‘ಭೇಟೆಕೊಲೆ’ ಸೋತಗೆ ನ್ವಾಟಾ ನೋಡುತ್ತಾ ವಿಚಿತ್ರದೈವಾರಾಧಕನಾದ ಸಣ್ತಮ್ಮ ಊರವರ ಪ್ರೀತಿಯ ಸಣ್ತಮ್ಮಜ್ಜನಾಗಿದ್ದ.ಬೇಟೆ,ಕೃಷಿ ಕೆಲಸ ತಿರುಗಾಟ ಎಲ್ಲೆ ಹೋದರೂ ಅದರೊಂದಿಗೆ ಅರಣ್ಯ ಉಪ ಉತ್ಫನ್ನಗಳನ್ನೆಲ್ಲಾ ಸಂಗ್ರಹಿಸುವ ವಿಚಿತ್ರ ಹವ್ಯಾಸಿಯಾಗಿದ್ದ.

ಸೋಯುವ ಓ..ಹೋಯ್ ಕೂಗಿಗೆ ಪ್ರತಿಯಾಗಿ ಓ…ಹೋ…..ಯ್…..ಎನ್ನುವ ಮರುಅಲೆಶಬ್ಧ ಸುತ್ತಲಿನ ಕಾನು, ಗುಡ್ಡೆ ಬಯಲುಗಳಲ್ಲಿ ತಿರುಗಿ ಪ್ರತಿಧ್ವನಿಸಿದ ಎರಡೋ ಮೂರೋ ನಿಮಿಷಕ್ಕೆ ಎಲ್ಲರೂ ಒಂದೆಡೆ ಸೇರಿದವರು. ‘ಎಂಥದ್ರೋ’ ಎಲ್ರೋ ಎನ್ನುವ ಶಬ್ಧ ಯಾರಿಂದ ಬಂತು ಎನ್ನುವುದನ್ನು ಗ್ರಹಿಸಲು ಸಮಯವನ್ನೇ ನೀಡದೆ ಒಂದರ ಹಿಂದೆ ಒಂದರಂತೆ ಉತ್ಸಾಹದ ನುಡಿಮುತ್ತುಗಳು ಉದುರಿದವು.

‘ಇಲ್ ನೋಡ್ರ ಹೆಜ್ಜೆ ಕಾಣ್ತವೆ”ಎಂದು ಸೋಮನ ಸಂಶೋಧನೆಯನ್ನು ವೀಕ್ಷಿಸಿ, ಪರಾಂಬರಿಸಿದವರು ಹೆಜ್ಜೆಯ ಜಾಡು ಹಿಡಿದು, ಅನುಕರಿಸಿದರು. ‘ಇಲ್ಲೇ ಇಳ್ದ ಹೋಗೈತಿ ನೋಡು’ ಎನ್ನುವ ಹೆಜ್ಜೆಯ ಜಾಡಿನ ಗುರುತಿನ ವೀಕ್ಷಣೆಯಲ್ಲಿದ್ದವರು ಕವಳ ಸಿದ್ಧ ಮಾಡುತ್ತ ಮುನ್ನಡೆಯುತ್ತಿದ್ದರೆ, ಬಳ್ಳಿಗಳನ್ನು ತಲೆಗೆ ಸುತ್ತಿಕೊಂಡು ಹೆಜ್ಜೆ ಹಾಕುತ್ತಿದ್ದ ಸಣ್ತಮ್ಮಜ್ಜನ ಇರುವನ್ನು ಎಲ್ಲರೂ ಗ್ರಹಿಸಿದ್ದರು. ಹೆಜ್ಜೆಯ ಜಾಡು ಹಿಡಿದು ‘ಗುಡ್ಡೇ ಮೇಲಿಂದು ನೆರ್ಲಮನೆ ಕಾನಗೆ ಐತಿ ನೋಡ್ರಿ’ ಎನ್ನುವ ತೀರ್ಮಾನವಾಗಿ, ಕೋವಿಯಿರುವ ಮಾರ್ಯ, ಈರ, ದ್ಯಾವ, ಸೋಮ ಒಂದಂದು ಹಾಯ್ಗಳದಲ್ಲಿ ನಿಲ್ಲುವುದೆಂದು ತೀರ್ಮಾನವಾಯಿತು. ಉಳಿದ ದಂಡು ಪ್ರತ್ಯೇಕ ಪ್ರತ್ಯೇಕವಾಗಿ ಚದುರಿ ಹೋಗಿ ನೇರ್ಲಮನೆ ಗುಡ್ಡೆಯನ್ನು ಮಾನವ ಸರಪಳಿಯೋಪಾದಿಯಲ್ಲಿ ಬಂಧಿಸಿತು.

ಓ…..ಹೋ…….ಯ್……ಬೇಟೆ ಸೋಯುವವರ ವೇಗಕ್ಕೆ, ಶಬ್ಧಕ್ಕೆ ಸಾಕ್ಷಿಯಾಗುವ ಗುಡ್ಡದ ಕುಬ್ಜ ಮರಗಳು ವಾಲಾಡಿ ತೇಲಾಡಿದರೆ ಪಕ್ಕದ ಕೊಡ್ಲುಗಳು ಬೇಟೆಯ ಸೋಯುವ ಧ್ವನಿಯನ್ನು ಪ್ರತಿಧ್ವನಿಸುತ್ತಿದ್ದವು ಓ….ಹೋ……ಯ್…….ಶಬ್ಧದ ಆರ್ಭಟ ನಿಲ್ಲುತ್ತಿದ್ದಂತೆಯೇ ಅಯ್ಯೋ’ ಎನ್ನುವ ಭಯ ಮಿಶ್ರಿತ ಆತಂಕದ ಕೂಗನ್ನು ಡಮ್’ ಎನ್ನುವ ಬಂದೂಕಿನ ಶಬ್ಧ ಹಿಂಬಾಲಿಸಿತು. ‘ಅಯ್ಯೋ’ ಎನ್ನುವ ಶಬ್ಧ ಯಾರ ಕಿವಿಗೂ ಬೀಳಲೇ ಇಲ್ಲ. ಬೇಟೆತಪ್ಪಿದ ಬೇಸರದಲ್ಲಿ ಮಾರ್ಯ, ಹಾವಿಗೆ ಹೆದರಿದ ಈಶ್ವರ ಎದುರಾದರು.

ಮಾರ್ಯ ಛೇ……ತಪ್ಪೋತ’ ಎಂದರೆ ಈಶ್ವರ ಭಯ ಅದುಮುತ್ತಲೇ ‘ಸಾಯ್ಲಿ ಮರಯ ಹಂದಿ ತುಕ್ಡಿನೂ ಸಾಕು,ಈ ಕಷ್ಟನೂ; ಎಂದು ಬೇಟೆಯ ಬಗೆಗಿನ ಅಸಮಾಧಾನವನ್ನು ಪ್ರತಿಫಲಿಸಿದ.

ನಿಮ್ಮಂತ ಹುಡ್ರೇ ಹಿಂಗಂದ್ರ ಹೆಂಗೋ? ಎ ನಿಮಗೆಲ್ಲ ರೂಢಿ ಐತಿ ಅಡ್ಡಿಲ್ಲ’ಎನ್ನುವ ಸಂಭಾಷಣೆ ಸಮಾರೋಪದಲ್ಲಿರುವಾಗ ‘ತಪ್ಪೋತನ್ರ’; ‘ಹೊಂಡ್ರ’ ಎನ್ನುವ ಅಸಮಾಧಾನ ಛಲ ಎಲ್ಲವೂ ಒಮ್ಮಿಂದೊಮ್ಮಿಗೆ ಪ್ರಕಟವಾದವು. ಬೇಟೆ ತಪ್ಪಿದ ನೋವಿಗೆ ವಿಷಾದದ ಔಷಧ ಹಚ್ಚಿ ಎಲ್ಲರೂ ಮತ್ತೆ ಸಿದ್ಧರಾದರು.

ಓ…..ಹೋ…..ಯ್….. ‘ಗುಂಡುತಾಗಿರಬೇಕು,ಆದರೂ ಸಾಯಲಿಲ್ಲ’ ಎನ್ನುವ ಮಾರ್ಯನ, ಸ್ವಗತ, ಸಣ್ತಮ್ಮಜ್ಜನ ಬಳ್ಳಿಕೋಯ್ತ, ಸೋಯುವವರ ಓ……. ಹೋ……..ಯ್………,ಮತ್ತೊಂದು ಚಿತ್ಕಾರ, ಜೊತೆಗೆ ಈಡು, ಅಬ್ಬ್ ಎನ್ನುವ ಶಬ್ಧದೊಂದಿಗೆ ಬಂದ ಒಂಟಿಗ, ಸಣ್ತಮ್ಮಜ್ಜನನ್ನು ಹಾಯ್ದೇ ಹೋಗಿದೆ. ಸಮೀಪದಲ್ಲಿದ್ದವರು ಜೀವಭಯದಿಂದ ಮರಗಿಡವೇರಿದ್ದಾರೆ. ಮಾರ್ಯನ ಈಡು ಹಂದಿಗೆ ನೆಟ್ಟಿದೆ, ಮಾರ್ಯ ಬೇಟೆಯ ಖುಸಿಯಲ್ಲಿ ಕುಸಿದು ಕುಳಿತು ಮಂದಹಾಸ ಬೀರುತ್ತಿದ್ದರೆ, ಬಲಿ, ನಾರಾಯಣ ಅಯ್ಯೋ, ಅಯ್ಯೋ, ಎಂದು ಜೋರಾಗಿ ಮತ್ತಷ್ಟು ಜೋರಾಗಿ ಕೂಗತೊಡಗಿದರು.

ಹಗ್ಗ ಕೊಯ್ದು ಎಳೆಯುತ್ತಿದ್ದ ಸಣ್ತಮ್ಮಜ್ಜ ಕತ್ತಿ ಹಗ್ಗದೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ……..ನೀರು……..ನೀರು……ವಯಸ್ಸಿನಲ್ಲಿ ಕಿರಿಯರಾದ ಬಲಿ, ನಾರಾಯಣ ತಾವೇನು ಮಾಡುತ್ತಿದ್ದೇವೆ, ಎನ್ನುವುದನ್ನು ಅರಿಯದೇ ಓಡಿ, ಪಕ್ಕದ ಗುಂಡಿಯಲ್ಲಿ ಬನಿಯನ್ ನೆನೆಸಿ, ಅದೇ ವೇಗದಲ್ಲಿ ಬಾಯಿಗೆ ಹಿಡಿದು ಹಿಂಡತೊಡಗಿದರು……ಹಾಂ….ಹಾಂ…… ಎಂದು ನರಳುತ್ತಿದ್ದ ಜೀವ ಒಂದೇ ಉಸುರಿಗೆ ನಿಂತು ಹೋಯಿತು.

ಮೂಗಿನ ಮುಂದೆ ಕೈ ಅಡ್ಡ ಮಾಡಿ, ಪರೀಕ್ಷಿಸಿ ಮುಖ ಎತ್ತಿದ ನಾರಯಣನನ್ನೇ ಭೇಟೆಯ ದಂಡು ಸುತ್ತುವರಿದಿದೆ. ಸೂರ್ಯ ಅಸ್ತಂಗತನಾಗಲು ಮರಗಿಡಗಳ ನಡುವಿನ ಬಿಡು ಜಾಗವನ್ನು ಹುಡುಕುತ್ತಿದ್ದಾನೆ. ಒಮ್ಮೇಲೇ ಮೌನ ಕ್ರಾಂತಿ, ಸದ್ದಿಲ್ಲ, ಸಪ್ಪಳವಿಲ್ಲ. ಸಣ್ತಮ್ಮಜ್ಜನ ಹಿಂಭಾಗ, ಹಿಂಭಾಗದಿಂದ ರಕ್ಷಣೆ ಪಡೆದಿದ್ದ, ವೃಷಣ ಚೀಲ ಒಡೆದು ರಕ್ತ ಉಕ್ಕಿಸುತ್ತಿವೆ.

ಎಂಥಾ ಕೆಲ್ಸಾಗೋತ್ರೋ ಮಾರಾಯಾ; ಎಂಬ ವಿಷಾದ ಭಯವನ್ನು ಎಳೆತಂದ ಅಭಿಪ್ರಾಯಕ್ಕೆ …ಕ…ಂಯ್ ಕೂ….ಂಯ್ ಏನೂ ಇಲ್ಲ ‘ಓಡ್ರ ಯಾರರೂ ಹೋಗಿ ಊರಿಗೆ ಹೇಳ್ರೀ’; ಎನ್ನುವ ಸಲಹೆಗೆ ಯಾರೋ ಒಂದಿಬ್ಬರು ಓಡಿದರು. ನಿಧಾನವಾಗಿ ದಿನ ಮುಗಿಸುತ್ತ ಕತ್ತಲೆಗೆ ಆಹ್ವಾನ ನೀಡುತ್ತಿದ್ದ ಸಾಯಂಕಾಲದಲ್ಲಿ ಭೇಟೆಯ ಅದ್ವಾನ ಗಾಳಿಯ ವೇಗವನ್ನು ಮೀರಿ ಊರವರ ಕಿವಿ ತುಂಬಿತು. ಜೀವಂತೂ ಇಲ್ಲ, ಕಂಬಳಿ ಕಟ್ಟಿ ಜೋಲಿ ಮಾಡಿ ತಗಹೋಗನ್ರಿ’ ಎನ್ನುವ ಯಾರದ್ದೊ ಸಲಹೆಗೆ ಸ್ಪಂದಿಸಿದ ಬೇಟೆಗಾರರ ಕೈಗಳು ಕಂಬಳಿಯಲ್ಲಿ ನಿರ್ಜೀವ ಸಣ್ತಮಜ್ಜನನ್ನು ಹಾಕಿಕೊಂಡು ಹೊತ್ತು ನಡೆದವು. ವಸ್ತು ಸ್ಥಿತಿ ಅರಿಯದ ಪರ ಊರಿನ ದಾರಿಹೋಕರು ‘ಹಂದಿನ ಕಂಬಳ್ಯಗ ಹಾಕಿ ಹೊಂಟರೆ’ ಎಂದುಕೊಳ್ಳುತ್ತಾ ದಾರಿ ಸವೆ ಸಿದರು. ಬೇಟೆಯ ಸಂಭ್ರಮದಲ್ಲಿರಬೇಕಾದ ಕೋಲ್ಸೆ ವಿಷಾದವನ್ನೇ ಹೊದ್ದು ಮಲಗಿತ್ತು. ಕೆಲವೇ ಸಮಯದ ಹಿಂದೆ ಗಂಡನ ನೀರಿಕ್ಷೆಯಲ್ಲಿ ಕುಂಕುಮ ಹಚ್ಚಿದ ಗೌರಮ್ಮನ ಹಣೆಯನ್ನು ಸರಿಕರ್ಯಾರೋ ಒರೆಸಿದರು. ಕೈ ತುಂಕೊಂಡಿದ್ದ ಹಸಿರು ಬಳೆಗಳು ಪಟಪಟನೆ ಮಣ್ಣಿಗೆ ಮರಳಿದವು. ಬೇಟೆ ನಾಯಿಗಳು ಮಾತ್ರ ‘ಬೊ…ವ್..,ಬೊ…ವ್’ ಎಂದು ಅರಚುತ್ತಲೇ ಇದ್ದವು.

– ಕೋಲಶಿರ್ಸಿ ಕನ್ನೇಶ್. ಸಮಾಜಮುಖಿ ಸಿದ್ದಾಪುರ.(ಉ.ಕ.)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *