ನನ್ನ ಓದು ಅರಿವಿನ ಮಿತಿಯಲ್ಲಿ ಪಿ.ಲಂಕೇಶ್ ಒಬ್ಬ ದಾರ್ಶನಿಕ. ಮಲೆನಾಡಿನ ಶಿವಮೊಗ್ಗ ಕೊನಗನವಳ್ಳಿಯ ಒಬ್ಬ ಬಡರೈತನ ಮಗ, ಅರಿವಿನೊಂದಿಗೆ ತನ್ನೂರು, ಜಾತಿ, ರಾಜಕಾರಣ ವ್ಯವಸ್ಥೆ, ಅವಸ್ಥೆ ಎಲ್ಲವನ್ನು ಸಹಜಕುತೂಹಲದಲ್ಲೇ ಪ್ರಶ್ನಿಸುತ್ತಾ ಬೆಳೆದವನು.
ಶಿವಮೊಗ್ಗದ ನೆಲದಲ್ಲಿ ವೈಚಾರಿಕ, ಚಾರಿತ್ರಿಕ ಚಳವಳಿ ಚಿಂತನೆಗಳು ನಡೆಯುತಿದ್ದಾಗ ಪ್ರೊಫೆಸರ್ ಆದರೂ ಸರ್ಕಾರಿ ಗುಲಾಮಿತನ, ಸ್ವಾರ್ಥದ ಲೋಭಕ್ಕೆ ಪಕ್ಕಾಗದ ಪಕ್ಕಾ ವ್ಯಕ್ತಿ. ಲಂಕೇಶ್ ತನ್ನ ಹಿನ್ನೆಲೆಯ ಲಿಂಗಾಯತ ಪಾಳೇಗಾರಿಕೆಯನ್ನು ವಿರೋಧಿಸುತ್ತಲೇ ದಲಿತನಾಗಲು ಪ್ರಯತ್ನಿಸಿದವರು! ಶೂದ್ರನೊಬ್ಬ ಲಿಂಗಾಯತನೋ, ಬ್ರಾಹ್ಮಣನೋ! ಆಗುವ ಪ್ರಕ್ರಿಯೆ ಸಹಜದ್ದು. ಆದರೆ, ಅಸಹಜವಾದ ಬ್ರಾಹ್ಮಣನೊಬ್ಬ, ಲಿಂಗಾಯತನೊಬ್ಬ ಶೂದ್ರನಾಗುವ ಕೆಳನಡೆಯುವ! ಪ್ರಕ್ರಿಯೆ ಪ್ರವಾಹದ ವಿರುದ್ಧದ ಈಜು.
ಅನಂತಮೂರ್ತಿ, ಲಂಕೇಶ್ ಸೇರಿದಂತೆ ಕೆಲವರಷ್ಟೇ ಆಯ್ದುಕೊಂಡ ಈ ವಿಲೋಮ ಸಂಚಲನೆ ನಿಜಕ್ಕೂ ಸಾಹಸದ ರೋಚಕತೆ. ಭಾರತೀಯ ರೋಗಗ್ರಸ್ಥ ಸಾಂಪ್ರದಾಯಿಕ ಗೊಡ್ಡು ಜಾಡ್ಯಗಳ ಭ್ರಮೆಯ ಸುಸಂಸ್ಕøತಿ! ಯಲ್ಲಿ ಈ ಎಲ್ಲರೊಳಗೊಂದಾಗುವ ಪರಿವರ್ತನಾ ಕೆಲಸ ಮೇಲ್ವರ್ಗ, ಮೇಲ್ಜಾತಿ ಪ್ರತಿನಿಧಿಗಳಿಗೆ ಸರಳವಂತೂ ಅಲ್ಲ. ಆದರೆ, ಲಂಕೇಶ್ ತನ್ನತನವನ್ನು ಅನವರತ ಪ್ರತಿಷ್ಠಾಪಿಸಿದರು.
ತಿನ್ನಲು ಕೊಲ್ಲುವ ವ್ಯಾಘ್ರಗಳು ಸೇಡಿಗೆ ಎಗರುತ್ತವೆ. ಸಿಟ್ಟಿನಿಂದ ಸ್ಫೋಟಿಸುತ್ತವೆ ಆದರೆ ನಗುನಗುತ್ತಲೇ ವಂಚಿಸಲು ಹಿಂಜರಿಯುತ್ತವೆ. ಎಂದು ‘ನೀಲು’ ಪದ್ಯದಲ್ಲಿ ಬರೆಯುವ ಲಂಕೇಶರ ಆಂತರ್ಯ ಇದಕ್ಕೇ ಸರಿಸಾಟಿಯಂತಿತ್ತು. ಬಹುಜನರ ಅಪೇಕ್ಷೆಯ ಕೃತಕ ಯಾಂತ್ರಿಕ ನಡವಳಿಕೆಯನ್ನು ಬೂಟಾಟಿಕೆ ಎಂದು ದೂಷಿಸುತಿದ್ದ ಲಂಕೇಶ್ ವಾಸ್ತವದಲ್ಲಿ ಕೂಡಾ ಅದರ ಉಗ್ರವಿರೋಧಿಯಾಗಿದ್ದರು. ಮನುಷ್ಯನ ಕೇಡು ಬುದ್ಧಿ-ಸಣ್ಣತನ (ಇವಿಲ್)ಗಳ ಬಗ್ಗೆ ಸಿನಿಕನಾದರೆ ಬದುಕುವ ಆಸೆ, ಆಕಾಂಕ್ಷೆಗಳೇ ಉಳಿಯುವುದಿಲ್ಲ ಎನ್ನುವ ಲಂಕೇಶ್ ತಮ್ಮ ಆತ್ಮಕಥನ ‘ಹುಳಿಮಾವಿನ ಮರ’ ದಲ್ಲಿ ‘ಪ್ರೇಮದಂತೆಯೇ ವಿಶ್ವಾಸ ಕೂಡಾ ಅದು ಬತ್ತಿಹೋಗುತ್ತದೆ. ಇಲ್ಲವಾಗುತ್ತದೆ. ಅನೇಕಾನೇಕ ಆಕಾಂಕ್ಷೆ, ತೆವಲುಗಳೊಂದಿಗೆ ಕೆಲಸ ಮಾಡುವ ಮನುಷ್ಯ ಶತ್ರುವಾಗುತ್ತಾನೆ. ದ್ರೋಹಿಯಾಗುತ್ತಾನೆ. ಕೊಲೆ ಮಾಡಲೂಹೇಸದವನಾಗುತ್ತಾನೆ.’ ಎನ್ನುತ್ತ ‘ಮನುಷ್ಯ ಎಷ್ಟು ವಿಚಿತ್ರ ಅವನಿಗೆ ಸಂಪತ್ತು ವಿದ್ಯೆ ಕಲೆ ಎಲ್ಲವೂ ಬೇಕು. ಆದರೆ, ಆತ ಯಾವುದೋ ಅಸಹ್ಯ ಜಿದ್ದಿನಿಂದ ಬದುಕುತ್ತಾನೆ. ಅದಿಲ್ಲದಿದ್ದರೆ ಅವನು ಬದುಕೋದಕ್ಕೆ ಕಾರಣವೇ ಸಿಗಲ್ಲ’ ಎಂದುಬಿಡುತ್ತಾರೆ.
ಒಂದು ಹಂತದಲ್ಲಿ ಮನುಷ್ಯನ ದೌರ್ಬಲ್ಯದ ವಿರುದ್ಧದ ಹೋರಾಟವೇ ಬದುಕು ಎಂದು ವ್ಯಾಖ್ಯಾನಿಸಿದಂತೆ ಕ್ವಚಿತ್ತಾಗಿ ಪ್ರತಿಪಾದಿಸುವ ಪಿ.ಎಲ್. ‘ಸಂತರನ್ನು ಕಂಡೊಡನೆ ಸಂದೇಹ ಪಟ್ಟವರು ಪಶ್ಚಾತ್ತಾಪ ಪಡುವ ಕಷ್ಟದಿಂದ ಮುಕ್ತರು’ ಎಂಬ ಪರಿಹಾರವನ್ನೂ ಸೂಚಿಸುತ್ತಾರೆ.
ಲಂಕೇಶ್ ಪತ್ರಕರ್ತನಾಗಿ, ಸಾಹಿತಿಯಾಗಿ ಇವೆರಡನ್ನೂ ಮೇಳೈಸಿಕೊಂಡು ಒಬ್ಬ ಮೇಷ್ಟ್ರಾಗಿ ಅನೇಕರನ್ನು ಮುಟ್ಟಿದ್ದಾರೆ. ತಟ್ಟಿದ್ದಾರೆ.
ಆದರೆ, ಇತ್ತೀಚೆಗೆ ಬಿಡುಗಡೆಯಾಗಿ ಹವಾ ಎಬ್ಬಿಸಿದ ‘ಇಂತಿ ನಮಸ್ಕಾರಗಳು’ ಪುಸ್ತಕ ಓದುತಿದ್ದರೆ ಲಂಕೇಶ್ ವಿಭಿನ್ನವಾಗಿ ದಕ್ಕುತ್ತಾರೆ.
ಲಂಕೇಶರ ಸಮಾಕಾಲೀನರಾಗಿ ಸಾಹಿತ್ಯ, ಸಾಹಿತ್ಯ ವಿಮರ್ಶೆಯಲ್ಲಿ ಅಂತರಾಷ್ಟ್ರೀಯ ಪಂಡಿತ ಎನ್ನುವ ಮಟ್ಟಿಗೆ ಹೆಸರು ಮಾಡಿದ್ದ ಡಿ.ಆರ್. ನಾಗರಾಜ್ ಕನ್ನಡದ ಒಂದು ವಿಶಿಷ್ಟ ಪ್ರತಿಭೆ. ಲಂಕೇಶ್ ಮತ್ತು ಡಿ.ಆರ್ ನಾಗರಾಜ್‍ರ ಶಿಷ್ಯರಾಗಿ ಅವರ ಮಮತೆ, ನಿಷ್ಠೂರತೆ ದಾರ್ಶನಿಕತೆಗಳ ಫಲಾನುಭವಿ ಲಕ್ಕಿ ವ್ಯಕ್ತಿಯಾಗಿರುವ ನಟರಾಜ್ ಹುಳಿಯಾರ್ ‘ಇಂತಿ ನಮಸ್ಕಾರಗಳು’ ಹೊತ್ತಿಗೆಯಲ್ಲಿ ತಮ್ಮ ಗುರುವರ್ಯರನ್ನು ಎಷ್ಟು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆಂದರೆ… ಲಂಕೇಶ್ ಎಂಬ ಕೆಂಪು ಗುಲಾಬಿ, ಡಿ.ಆರ್.ಎಂಬ ನೀಲಿಹೂ ಅವುಗಳೊಂದಿಗೆ ವರ್ಣಮಯ ಎಲೆ ಹೂಗಳೆಲ್ಲಾ ಸೇರಿ ಕಣ್ಮನಸೆಳೆಯುವ ಚಿತ್ತಾಕರ್ಷಕ ಮಾಲೆಯಂತೆ ‘ಇಂ. ನ.’ ಮೂಡಿಬಂದಿದೆ.
ಲಂಕೇಶರ ಸಾಹಿತ್ಯಿಕ ಪತ್ರಿಕೋದ್ಯಮ ಡಿ.ಆರ್.ರ ಪತ್ರಿಕಾ ಸಾಹಿತ್ಯ ಜೊತೆಗೆ ಅವರ ಅಧ್ಯಯನಾಸಕ್ತಿ ಮಾನವಸಹಜ ದೌರ್ಬಲ್ಯಗಳು ಎಲ್ಲವನ್ನೂ ಹೇಳುವಾಗ ನಟರಾಜ್ ಬೆರಗು, ತಲ್ಲಣಕ್ಕೊಳಗಾಗಿಲ್ಲವೇನೋ ಎನ್ನುವಷ್ಟು ಸಹಜವಾಗಿ ನಿರೂಪಿಸಿದ್ದಾರೆ.
ಈ ಪುಸ್ತಕ ನನಗೆ ದೊರೆತದ್ದು ತುಸುವಿಳಂಬವಾಗಿ ಆದರೆ, ಈ ಹೊತ್ತಿಗೆ ನನಗೆ ಸಿಗದೇ ಹೋದ ಸಂದರ್ಭದಲ್ಲಿ ನನ್ನ ‘ಕಳೆದುಕೊಂಡ’ ಪಟ್ಟಿಯಲ್ಲಿ ಈ ಹೆಸರೂ ನಮೂದಾಗುತಿತ್ತು.
ನಟರಾಜ್‍ರೇ ಹೇಳುವಂತೆ
ಸರಿಸುಮಾರು ಇಪ್ಪತ್ತು ವರ್ಷಗಳ ಎರಡು ಮಹಾನ್ ಶ್ರೇಷ್ಠರ ಒಡನಾಟ, ಅವರೊಂದಿಗಿನ ಸಲುಗೆ, ಮೆಚ್ಚುಗೆ ನಿಷ್ಠೂರತೆ ಎಲ್ಲವನ್ನೂ ಸಂಕ್ಷಿಪ್ತವಾಗಿ ನಮೂದುಮಾಡಿಕೊಳ್ಳದಿದ್ದರೆ ಎರಡು ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾಗಿ ಹುಬೇ ಹುಬೇ ಎನ್ನುವಂತೆ ಅಕ್ಷರಗಳಲ್ಲಿ ಕಡೆದು ದೃಷ್ಟಿಅಂತರ್‍ದೃಷ್ಟಿಗೆ ಆಪ್ತವಾಗುವಂತೆ ಚಿತ್ರಿಸಿಕೊಡುವುದು ಅಷ್ಟು ಸುಲಭದ (ಮಾತಲ್ಲ)-ಕೆಲಸವಲ್ಲ.
ಆದರೆ, ಅಸಾಮಾನ್ಯರ ಸಮ್ಯಕ್ ದೃಷ್ಟಿ ಅವರ ಪಾಂಡಿತ್ಯಗ್ರಹಿಕೆ ಅದನ್ನು ಸಾಹಿತ್ಯಕವಾಗಿ ದಾಖಲುಮಾಡುವ ನಟರಾಜ್‍ರ ದೂರದೃಷ್ಟಿಯ ಹೆಚ್ಚುಗಾರಿಕೆ ಬರಹದಲ್ಲೇ ಪ್ರತಿಬಿಂಬಿಸುತ್ತದೆ.
ಅಸಾಮಾನ್ಯ ಗುರುಗಳನ್ನು ಗ್ರಹಿಸುವಾಗ ಶಿಷ್ಯನಿಗೆ ಒಂಥರಾ ಖಾತರಗಳಿರಬೇಕು. ಆ ಖಾತರ, ಆಸಕ್ತಿಗಳು ಯಾವ ಪ್ರಮಾಣದಲ್ಲಿ ಕೆಲಸ ಮಾಡಿವೆ ಎಂದರೆ ಕನ್ನಡದ ಯಾವ ಪುಸ್ತಕವೂ ಕೊಡದ ಈ ಇಬ್ಬರ ಸಾಮಾನ್ಯ ಸಾಹಿತ್ಯ ಪರಿವರ್ತನಾಶೀಲ ಮನಸ್ಥಿತಿಯ ವಿಶೇಷಗಳನ್ನು ನಟರಾಜ್ ಹಂಸಕ್ಷೀರ ನ್ಯಾಯದ ಮಾದರಿಯಲ್ಲಿ ಗ್ರಹಿಸಿದ್ದಾರೆ ಬರಹದಲ್ಲಿ ಪ್ರವಹಿಸಿದ್ದಾರೆ.
ಪಿ.ಎಲ್.,ಡಿ. ಆರ್ ರ ಸಾಹಿತ್ಯ, ಬದ್ಧತೆ ಕಾಳಜಿ, ತುಟಿತ, ಕುಡಿತ ಎಲ್ಲವನ್ನೂ ನಾಭಿಯಾಳದ ಅಭಿಮಾನದಿಂದಲೇ ಎತ್ತಿ ಎತ್ತಿ ದಾಖಲಿಸುವ ನಟರಾಜ್ ಹುಳಿಯಾರರ ತಂತ್ರ ಎಲ್ಲೂ ಭಟ್ಟಂಗಿತನ ಎನಿಸಿಕೊಳ್ಳದಿರುವುದು ಈ ಹೊತ್ತಿಗೆಯ ಶ್ರೇಷ್ಠತೆ.
ಈ ಈರ್ವರ ಸಾಹಿತ್ಯ, ವಿನೋದ, ತಮಾಸೆ ಪರಸ್ಪರ ಒಪ್ಪಿಗೆ. ಕಾಲೆಳೆತ ಎಲ್ಲವನ್ನೂ ಸಹಜವಾಗಿ ದಾಖಲಿಸಿರುವ ಹುಳಿಯಾರರ ಕೊನೆಯ ಲೇಖನ ‘ಇಂತಿ ನಮಸ್ಕಾರಗಳು’
ಒಂಥರಾ ವಿರಕ್ತಿ ಮೂಡಿಸುವುದು ಈ ಕೃತಿಯ ಗುಣ ಮತ್ತು ದೋಷ ಕೂಡಾ. ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ಶಿಲ್ಫಿಗಳನ್ನು ವಿಮರ್ಶಾತ್ಮಕವಾಗಿ ಕಡೆದು ಕೊಟ್ಟಿರುವ ಹುಳಿಯಾರರ ‘ಇಂತಿ ನಮಸ್ಕಾರಗಳು’ ಹೊಸ ತಲೆಮಾರಿನ ಓದುಗರಿಗೆ ಒಂದು ವಿಶಿಷ್ಠ ಕೊಡುಗೆ. ಈ ಹೊತ್ತಿಗೆಯ ತ್ರಿಮೂರ್ತಿಗಳಾದ ಪಿ.ಎಲ್.,ಡಿ.ಆರ್. ಹುಳಿಯಾರರ ಆತ್ಮ-ಹೊಟ್ಟೆಗಳು ಸದಾ ತಣ್ಣಗಿರಲಿ
-ಇಂತಿ.ನಿಮ್ಮ ಕನ್ನೇಶ್