ಇದು ಪ್ರಪಂಚದ ವಿಸ್ಮಯ ಒಂದರ ಕತೆ!
ಶಿಥಿಲಗೊಳ್ಳುತ್ತಿರುವ ಐತಿಹಾಸಿಕ ಕಲ್ಲಿನ ಸಂಕ ಉಳಿಸಿಕೊಳ್ಳುವ ಪ್ರಯತ್ನ ಮಾಡುವವರ್ಯಾರು?
ಮಳವಳ್ಳಿ ಪುರಾತನ ಕಲ್ಲು ಸೇತುವೆಗೆ ಇನ್ನೆಷ್ಟು ದಿನದ ವೈಭವ?
ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ, ತಾಲೂಕಿನ ಮನಮನೆ ಪಂಚಾಯತ್ ವ್ಯಾಪ್ತಿಯ ಮಳವಳ್ಳಿಯ ಕಲ್ಲು ಸೇತುವೆ ಬಗ್ಗೆ ಕೇಳಿದ್ದೀರಾ?
ಹೌದು, ಈ ಪ್ರಶ್ನೆಗೆ ಅತಿ ವಿರಳವಾಗಿ ಹೌದು ಎಂದು ಉತ್ತರ ಬರಬಹುದು. ಯಾಕೆಂದರೆ, ಸಾರ್ವಜನಿಕ ವಲಯದಲ್ಲಿ ಕೇಳಿದ್ದೀವಲ್ಲ, ಕೇಳಿರಬೇಕಲ್ಲ ಎಂದು ಉತ್ತರಗಳೊಂದಿಗೆ ಅಸ್ಫಷ್ಟ ನೆನಪೂ ಬರಬಹುದು.
ಈ ಪುರಾತನ ಕಲ್ಲುಸಂಕ ನೋಡಿದರೆ ಭಾರತದ ಸಾರ್ವಜನಿಕ ವಲಯದ ವಿಸ್ಮøತಿ ತೆರೆದುಕೊಳ್ಳಬಹುದು. ಪ್ರಪಂಚದಲ್ಲೇ ಅತಿ ಅಪರೂಪ, ವಿರಳಾತಿವಿರಳ ಎನ್ನುವ ಈ ನೈಸರ್ಗಿಕ ಕಲ್ಲಿನ ಸೇತುವೆ ಇರುವ ಸ್ಥಿತಿ,ಗತಿ ನೋಡಿದರೆ ಬೇಸರವಾಗುವಂತಿದೆ ಇಲ್ಲಿಯ ದುಸ್ಥಿತಿ. ಈ ಮಳಲವಳ್ಳಿಯ ಕಲ್ಲು ಸೇತುವೆ ಇರುವುದು ಸಿದ್ದಾಪುರ ತಾಲೂಕಿನ ಗಡಿ ಪ್ರದೇಶದಲ್ಲಿ. ಹಾಗೆಂದು ಈ ಕಲ್ಲಿನ ಸೇತುವೆ ಹುಡುಕಲು ತಡಕಾಡುವ ಪ್ರಸಂಗವಿಲ್ಲ.
ಸಾಗರ,ತಾಳಗುಪ್ಪ,ಜೋಗ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸಣ್ಣ ಹೊಳೆಯೊಂದನ್ನು ತನ್ನಡಿ ಬಿಟ್ಟುಕೊಂಡಿರುವ ಈ ಸೇತುವೆಯ ಚರಿತ್ರೆ ದೊಡ್ಡದು.
ಹಿಂದೆ ಘಟ್ಟದ ಮೇಲಿನ ಸಿದ್ದಾಪುರ, ಸಾಗರ, ಶಿರಸಿಗಳ್ನು ಕರಾವಳಿಯ ತಾಲೂಕುಗಳೊಂದಿಗೆ ಜೋಡಿಸಿದ್ದೇ ಈ ಕಲ್ಲಿನ ನೈಸರ್ಗಿಕ ಸೇತುವೆ! ಎಂದರೆ ಎಂಥವರೂ ಹೌಹಾರುತ್ತಾರೆ. ಯಾಕೆಂದರೆ, ಸಾವಿರಾರು ವರ್ಷದ ಇತಿಹಾಸದ ಗರ್ಭದಲ್ಲಿ ನೂರಾರು ವರ್ಷಗಳ ಬ್ರಿಟೀಷ್ ಆಳ್ವಿಕೆ ಎದುರಾಗಿತ್ತಲ್ಲ ಆಗ ಕೂಡಾ ಚಕ್ಕಡಿಗಾಡಿ ದಾಟಿಸಲು ಅವಕಾಶ ನೀಡಿದ ಈ ಕಲ್ಲಿನ ಸೇತುವೆಯ ಕಾಲದ ಅಂತ್ಯ ಈಗಲೇ ಸಮೀಪಿಸಿದಂತಿದೆ.
ಎರಡ್ಮೂರು ತಾಲೂಕುಗಳು, ಜಿಲ್ಲೆಗಳು ವಿಭಿನ್ನ ಪರಿಸರದ ಕೊಂಡಿಯಾಗಿದ್ದ ಈ ಕಲ್ಲಿನ ಸೇತುವೆ ಈಗ ತನ್ನ ಕೊಂಡಿಯನ್ನೇ ಕಳಚಿಕೊಳ್ಳುವ ಹಂತ ಮುಟ್ಟಿದೆ. ಚಾರಿತ್ರಿಕ, ಐತಿಹಾಸಿಕ ಪ್ರಜ್ಞೆ ಇರುವವರಾದರೆ ಮಹತ್ವದ ಚಾರಿತ್ರಿಕ ಹಿನ್ನೆಲೆಯ ಈ ವಿಶಿಷ್ಟ ಸೇತುವೆಯನ್ನು ಉಪೇಕ್ಷಿಸುವಂತಿಲ್ಲ. ಆದರೆ ಇಲ್ಲಿ ಆಗಿದ್ದೇ ಬೇರೆ. ಅತಿಪುರಾತನ ಎನ್ನಬಹುದಾದ ಈ ಸೇತುವೆ ಮೊದಮೊದಲು ದೊಡ್ಡದಾಗಿತ್ತು ಅದರ ಮೇಲೇ ಜನ, ಜಾನುವಾರು, ಎತ್ತಿನ ಗಾಡಿಗಳೆಲ್ಲಾ ಸಂಚರಿಸುತಿದ್ದವು.
ಈಗ ಅದು ಸಿಥಿಲಗೊಳ್ಳುತ್ತಾ ಕಿರಿದಾಗುತ್ತಾ ಸಾಗುತ್ತಿದೆ. ಅದರ ಕೆಲವು ಭಾಗ ಕುಸಿದಿದ್ದನ್ನು ಇತ್ತೀಚಿನ ವರ್ಷಗಳಲ್ಲೇ ನಾವು ನೋಡಿದ್ದೇವೆ ಎನ್ನುತ್ತಾರೆ ಇಲ್ಲಿಯ ಸ್ಥಳಿಯ,ತಾಲೂಕಾ ಪಂಚಾಯತ್ ಮಾಜಿ ಸದಸ್ಯ ವಸಂತ ನಾಯ್ಕ.
ಇಲ್ಲಿಯ ಇತ್ತೀಚಿನ ಬೆಳವಣಿಗೆಗಳೂ ವಿಶೇಶವಾಗಿವೆ. ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ್ ಆಳ್ವರಿಗೆ ಈ ಭಾಗದ ಪ್ರಮುಖರು ಈ ನೈಸರ್ಗಿಕ ಕಲ್ಲಿನ ಸೇತುವೆ ಪುನರುಜ್ಜೀವನಕ್ಕೆ ಮನವಿ ಮಾಡಿದ್ದಾರೆ. ಈ ಮನವಿ ಆಧರಿಸಿ ಬೇಡಿಕೆ ಮಂಡಿಸಿದ ನಿವೇದಿತ್ ಆಳ್ವರಿಗೆ ಜಿಲ್ಲಾಧಿಕಾರಿಗಳು ಮಹತ್ವದ ಅಂಶ ತಿಳಿಸಿ ಅದರ ಅಭಿವೃದ್ಧಿಗೆ ಪರವಾನಗಿ ನೀಡಲು ಸಾಧ್ಯವಿಲ್ಲ. ಅದು ಪ್ರಪಂಚದಲ್ಲೇ ಅತಿಅಪರೂಪದ ಕಲ್ಲುಸಂಕ ಎನ್ನುವ ಮಾಹಿತಿ ನೀಡಿದ್ದಾರೆ. ನಂತರ ಅದರ ನಿರ್ವಹಣೆ, ಸಂರಕ್ಷಣೆ ಜವಾಬ್ಧಾರಿಯನ್ನು ಪುರಾತತ್ವ ಇಲಾಖೆಗೆ ನೀಡಬಹುದಿತ್ತು. ಆದರೆ ಈ ಬಗ್ಗೆ ಜಿಲ್ಲಾ ಆಡಳಿತ ನಿಗಾ ವಹಿಸಿದಂತೆ ಕಾಣುವುದಿಲ್ಲ. ಈ ಕಲ್ಲಿನ ಸೇತುವೆ ಪಕ್ಕದಲ್ಲಿ ಪರ್ಯಾಯವಾಗಿ ಚಿಕ್ಕ ಸೇತುವೆ ನಿರ್ಮಾಣ ಮಾಡಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಲ್ಲುಸೇತುವೆಯ ಮೇಲಿನ ಜನರಅವಲಂಬನೆಯನ್ನು ಕಡಿಮೆ ಮಾಡಿದೆ.ಆದರೆ ಕಲ್ಲುಸಂಕದ ಸಂರಕ್ಷಣೆ, ನಿರ್ವಹಣೆ ಜವಾಬ್ದಾರಿ ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆಯದಲ್ಲವೆ?
ಹೀಗೆ ಎಲ್ಲರ ಜವಾಬ್ದಾರಿ ಯಾರೊಬ್ಬರ ಜವಾಬ್ದಾರಿ, ಕೆಲಸವೂ ಅಲ್ಲ ಎನ್ನುವಂತೆ ಚಾರಿತ್ರಿಕ ಮಹತ್ವದ ಬಹುಅಪರೂಪದ ಕಲ್ಲಿನ ಸೇತುವೆ ನಿಧಾನವಾಗಿ ಕರಗತೊಡಗಿರುವುದಂತೂ ಸತ್ಯ.
ಈ ಬಗ್ಗೆ ಆಗಬೇಕಾದ ಕೆಲಸಗಳಿಗಾಗಿ ಈ ಭಾಗದ ಜನಪ್ರತಿನಿಧಿಗಳನೇಕರು ತಮ್ಮ ವಾದ ಮಂಡಿಸಿದ್ದಾರೆ.ಆದರೆ ವರ್ತಮಾನಕ್ಕೇ ಕಿವುಡಾಗಿರುವ ಪ್ರಭುತ್ವ, ಅಧಿಕಾರ ಶಾಹಿ, ರಾಜ್ಯ, ಜಿಲ್ಲಾ ಮಟ್ಟದ ಮುಖಂಡರು, ಜನಪ್ರತಿನಿಧಿಗಳು ಚಾರಿತ್ರಿಕ ಮಹತ್ವದ ಕೂಗಿಗೆ ಸ್ಫಂದಿಸುವರೆ? ಎನ್ನುವ ಭರವಸೆಗಳಿಗೂ ಅವಕಾಶವಿಲ್ಲ.
ಪುಂಡ,ಪೋಕರಿಗಳು, ಕಾಲನ ದಾಳಿಗೆ ಬಲಿಯಾಗಬಹುದಾದ ಈ ಪ್ರವಾಸಿ ಆಕರ್ಷಣೆ ಈತಿಹಾಸಿಕ ಮಹತ್ವದ ಕಲ್ಲುಸೇತುವೆಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಈಗಲಾದರೂ ಕೆಲಸ ಆಗಬೇಕಾಗಿರುವುದು ಅನಿವಾರ್ಯವಾಗಿದೆ.