ಶಬ್ಧ ಜಂಗುಂ ಜಕ್ಕುಂ. ಕತೆ ಸತ್ತವನು ಮರಳಿ ಬಂದಿದ್ದು……!


…………………. ‘ನನ್ನಿಂದ ತಪ್ಪಾಗಿರಲೂಬಹುದು ಅಕ್ಕಾ, ಈಗಲೂ ನನ್ನೊಳಗೆ ಯಾವುದು ಸರಿ ಯಾವುದು ತಪ್ಪು ಎಂಬ ದ್ವಂದ್ವ ಕಾಡುತ್ತಲೇ ಇದೆ.
. ನನ್ನನ್ನು ಇಡಿಯಾಗಿ ನಂಬಿದ್ದ ಅವ್ವ ಮತ್ತು ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಅಪ್ಪನ ವಿಷಯದಲ್ಲಿ -ಮಗನಾಗಿ ನಿರ್ವಹಿಸಬೇಕಾಗಿದ್ದ- ಕರ್ತವ್ಯವನ್ನು ನಾನು ಮಾಡಲಾಗಿಲ್ಲ ! ಬಾಲ್ಯದಿಂದಲೂ ಕರುಳಿನ ರುಚಿಹಂಚಿಕೊಳ್ಳುತ್ತಲೇ ಬಂದ ನಿನ್ನ ಹಣೆ ಬರಿದಾಗಿ ದಿಕ್ಕೆಟ್ಟು ಕೂತ ಸಂದರ್ಭದಲ್ಲೂ ನನಗೇನೂ ಮಾಡಲಾಗಲಿಲ್ಲ. ನನ್ನ ಹೊಕ್ಕುಳ ಬಳ್ಳಿಯನ್ನು ತನ್ನ ಮಣ್ಣಲ್ಲಿ ಅಡಗಿಸಿಕೊಂಡ ನೆಲ, ಮನೆ ಎಲ್ಲವನ್ನೂ ಬಿಟ್ಟು ನಾನು ಆ ಬಾವಾಜಿಯ ಬೆನ್ಹತ್ತಿ ಹೋಗಿಬಿಟ್ಟೆನಲ್ಲ,
ಯಾವ ಸೆಳೆತ, ಯಾವ ಒತ್ತಡ, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಯಿತು?-ಎಂದು ಈಗಲೂ ಯೋಚಿಸುತ್ತಿದ್ದೇನೆ.
‘ಬಾವಾಜಿ ಅಂದರೆ, ನಮ್ಮ ಕರಿಬಾವಾಜಿಯೇನೊ!…’ತಮ್ಮನ ಮಾತು ಬೆಳೆಯಲು ಬಿಡದೆ ಕೇಳಿದ್ದಳು ಜಾನಕಿ.
‘ಹೌದಕ್ಕ, ಅವರೇ!’… ‘ನಡುವೆ ಒಮ್ಮೆ ಅವರು ಬಂದುಹೋಗಿದ್ದರು ಇಲ್ಲಿಗೆ!’ ‘ಗೊತ್ತು ನನಗೆ. ಬೆಳ್ಳಿ ನಾಣ್ಯದ ಗಂಟನ್ನು ಕೊಟ್ಟು ಹೋದರಲ್ಲ?’ ಎಂದ.
‘ಅಂದರೆ, ನೀನೇ ಕಳಿಸಿದ್ದಿಯೇನೊ ಅವರನ್ನು?’-ಜಾನಕಿ ಉದ್ವೇಗಕ್ಕೆ ಒಳಗಾದಂತಿದ್ದಳು.
‘ಹೌದಕ್ಕ ನಮ್ಮ ‘ಕಾಂತಿವನ’ ದಲ್ಲಿ ಅದೂ ಒಂದು ವ್ಯವಸ್ಥೆ’ ‘ಇದೆಲ್ಲ ನನಗೊಂದು ಅರ್ಥ ಆಗೂದೆಲ್ಲವೂ ಮಾರುತಿ, ಒಟ್ಟಿನಲ್ಲಿ ….’ ‘ನಿಜ ಅಕ್ಕ, ಒಟ್ಟಿನಲ್ಲಿ ನನ್ನಿಂದ ಸಿಗಬೇಕಾದ ಯಾವ ಸುಖವೂ ಮನೆಗೆ ಸಿಗಲಿಲ್ಲ! ‘ಹಾಗಲ್ಲವೂ! -ಜಾನಕಿ ಮಧ್ಯೆ ಬಾಯಿ ಹಾಕಿ ಅಂದಳು:
ಇಡೀ ಮನೆಬಿಟ್ಟು -ಊರುಬಿಟ್ಟು ಹೊರಟ್ಹೋಗೂಕ್ ನಿಂಗೆ ಮನಸಾದ್ರೂ ಹ್ಯಾಂಗ್ ಬಂತೊ?’-ಅತ್ತಳು. ‘ನನ್ನ ಮಾತನ್ನು ಪೂರ್ತಿ ಕೇಳಿಸ್ಕೊಳ್ತಿಯಾ ಮೊದಲು?..ಅವ್ವನ ಮುಂದೆ ಇದೆಲ್ಲ ಹೇಳಿದ್ರೆ ಅವಳಿಗೆ ತಿಳಿಯಲಿಕ್ಕಿಲ್ಲ.
ಎಂದು ಅವಳಿಲ್ಲದ ಹೊತ್ತು ನೋಡಿ, ಇಲ್ಲಿಗೆ ನಿನ್ನನ್ನು ಕರೆದುಕೊಂಡು ಬಂದದ್ದು. ಹೇಳಲಾ?’…..
‘ಹೇಳು, ಕೇಳಿಸಿಕೊಳ್ಳೂದ್ ಬಿಟ್ಟರೆ ನಂಗೆ ಬ್ಯಾರೆ ಇನ್ನೇನಿದೆ?’- ಜಾನಕಿ ಅಂದಳು. ‘ಕರಿಬಾವಜಿ ನನ್ನನ್ನು ಸೆಳೆದ ಆ ಮೊದಲನೆಯ ಸಂದರ್ಭ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನಾನು ಏಳನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಬಾಳೆಗುಳಿ ಹಳ್ಳದಲ್ಲಿ ಮೀಯ್ಸಾಡಲು ಹೋದವನು ಮನೆಗೆ ತಡಮಾಡಿ ಬಂದೆ; ಅಪ್ಪ ಆಗ ಲೊಕ್ಕಿಸೆಳೆ ತಕ್ಕೊಂಡು ನನಗೆ ಹೊಡೆದದ್ದು ನೆನಪಿದೆಯಲ್ಲ?…
‘ನೆನಪಿದೆ’ -ಜಾನಕಿ ಅಂದು ನಡೆದ ಮುಂದಿನ ವಿಚಾರವನ್ನೂ ಬಿಚ್ಚಿದಳು: ‘ಆದಿನ ನೀನು ಊಟಮಾಡದೆ ಮಲಗಿದ್ದೆ. ಅಂದು ರಾತ್ರಿ ಇದೇ ಕರಿ ಬಾವಾಜಿ ನಮ್ಮ ಮನೆಯ ಚಿಟ್ಟೆಯ ಮೇಲೆ ರಾತ್ರಿ ಕಳೆದಿದ್ದರು . ಅಪ್ಪನ ಆತಂಕ, ಆರ್ಭಟ ಕೇಳಿಸಿಕೊಂಡು, ‘ಚಿನ್ನದಂಥ ಮಗ, ಚಿನ್ನದ ಹಾಗೆ ಎಲ್ಲರಿಗೆ ಬೇಕಾಗಿ ಇರ್ತಾನೆ ಮತ್ತು ಚಿನ್ನವನ್ನೇ ಕೊಡ್ತಾನೆ, ಚಿಂತೆಬೇಡ’ ಎಂಬುದಾಗಿ ಅಪ್ಪನಿಗೆ ಭರವಸೆಯ ಮಾತುಗಳನ್ನು ಹೇಳಿದ್ದರು.’
‘ಅದು ನನಗೆ ಚೆನ್ನಾಗಿ ನೆನಪಿದೆ ಅಕ್ಕ’ -ಮಾರುತಿ ಮುಂದಿನದನ್ನು ಹೇಳಿದಃ.ಮುಂದೊಂದು ದಿನ ಅವ್ವನ ಜೊತೆ ನಮ್ಮಿಬ್ಬರನ್ನು ಗ್ರಾಮದೇವರ ಮನೆಗೆ ಅಪ್ಪ ಕರಕೊಂಡು ಹೋಗಿ, ಬಾಗಿಲುಕಟ್ಟುವ- ಅದೇನೊ ಹರಕೆಗೆ ಸಂಬಂಧಪಟ್ಟ ಪೂಜೆ, ಮಾಡಿಸಿದ್ದ ನೋಡು, ಆ ದಿನ ಕುಂಬಾರ ಗುನಗರ ಮೈಮೇಲೆ ಬಂದ ಕುಲದೇವರು ಕೂಡ, ಈ ಕರಿಬಾವಾಜಿ ಹೇಳಿದ ರೀತಿಯಲ್ಲೇ ನನ್ನ ಬಗ್ಗೆ ಹೇಳಿದ್ದು ನೋಡಿ, ಅಪ್ಪ,
ಹೌಹಾರಿದ್ದು ನೆನಪಿದೆಯೇ ನಿನಗೆ ? ಅಂದಿನಿಂದ ಕರಿಬಾವಾಜಿಯನ್ನು ಅವ್ವಿಯಂತೂ ಗ್ರಾಮದೇವರೆಂದೇ ನಂಬಿಬಿಟ್ಟಿದ್ದಳು!’.
ಮಾರುತಿಯ ವಿವರಣೆ ಮುಂದುವರೆದಿತ್ತು: ‘ತೆಂಕಣಕೇರಿಯ ಬಂಡಿಹಬ್ಬದ ದಿನ ಅದು. ದೇವರು ಕೂತುಕೊಳ್ಳುವ ನೈಲೂರು ಕಂಬ ಇದೆಯಲ್ಲ , ಅದರ ಈ ಬಾಜು-ರಸ್ತೆ ಪಕ್ಕ ಒಂದು ಗುಡಿ ಇದೆ ನೋಡು, ಅದಕ್ಕೆ ಮೇಲ್ಛಾವಣಿ ಇಲ್ಲ , ಸುಣ್ಣದ ಗಾರೆಯಿಂದ ಮಾಡಿದ್ದಿರಬೇಕು, ಅದರಕಟ್ಟೆಯ ಮೇಲೆ ನಾನು ಮತ್ತು ನೀನು ಸಿಣ್ಣಿಮನೆಗೆ ಹೋಗುವಾಗ ಕೂತಿದ್ದೇವೆ. ಅಂದು ಹೋದಾಗಲೂ ನಾನು ಅಲ್ಲಿಯೇ ಕೂತಿದ್ದೆ. ಅಲ್ಲಿಗೆ ಈ ನಮ್ಮ ಕರಿಬಾವಾಜಿ ಯಾವ ದಿಕ್ಕಿನಿಂದ ಬಂದರು ಎಂಬುದು ಈಗಲೂ ನನಗೆ ಸ್ಪಷ್ಟವಾಗಿ ನೆನಪಾಗುತ್ತಿಲ್ಲ. ಸೊಂಟಕ್ಕೆ ಸುತ್ತಿಕೊಂಡ ಸ್ವಚ್ಛ ಬಿಳಿಬಟ್ಟೆ- ಅದು ಮೊಣಕಾಲದವರೆಗೆ ಮಾತ್ರ ಇತ್ತು
ಇತ್ತ ಮುಂಡವೂ ಅಲ್ಲ. ಅತ್ತ ಪಂಚೆಯೂ ಅಲ್ಲ, ಆ ತರದ್ದು ! ಮೈಮೇಲೆ ಅಷ್ಟೇ ಬಿಳಿದಾದ ದೋತಿಯೊಂದನ್ನು ಹೊದ್ದುಕೊಂಡಿದ್ದರು. ಹಣೆಯ ಮೇಲೆ ಬಿಳಿಯ ಬೊಟ್ಟೊಂದಿತ್ತು. ಮುಖದ ತುಂಬಾ ನನ್ನ ಹಾಗೇ ಅಮ್ಮನ ಕಲೆಬೇರೆ ! ಇವೆಲ್ಲ ನಿನಗೆ ಗೊತ್ತಿರುವಂಥದ್ದೇ. ಅವರ ಹಲ್ಲುಗಳು ಮಾತ್ರ ಮತ್ತೆ ಮತ್ತೆ ನೋಡಬೇಕು ಎಂಬಷ್ಟು ಬೆಳ್ಳಗಿದ್ದವಲ್ಲ?’ ಅವರು ನೇರ ನನ್ನ ಎದುರಿಗೇ ಬಂದು ನಿಂತರು. ‘ಇದು ನಿನ್ನ ಜಾಗ ಅಲ್ಲ, ಏಳು, ಹೋಗೋಣ, ನಂಬಿಕೆ ಇದ್ದರೆ ಬಾ’ ಎಂದು ಕರೆದರು.
ಅದು ಯಾಕೋ ನಾನು ಅವರ ಬೆನ್ಹತ್ತಿ ಹೋಗಿಯೇಬಿಟ್ಟೆ. ಮಂಜುಗುಣಿಯ ದಾರಿ ಹಿಡಿದು ಹೋಗಿದ್ದೆವು. ಅವರು ಮುಂದೆ ನಾನು ಹಿಂದೆ. ಒಂದು ಮೈಲು ಹೋಗುವುದರೊಳಗೆ ನನಗೆ ಹೆದರಿಕೆಯಾಯಿತು. ‘ನಾ ಬರೂದೆಲ್ಲ! ಅಂದವನೇ ಓಡಿ ಮನೆಗೆ ಬಂದುಬಿಟ್ಟೆ ! ಆದರೆ ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಅವರ ಮನೆಗೆ ಬಂದುಬಿಟ್ಟೆ ! ಅವರ ಬಗ್ಗೆ ನನ್ನ ಹಾಗೆ, ನಮ್ಮ ಮನೆಜನಕ್ಕೆ ಇದ್ದ ಗೌರವವೇ ಅದಕ್ಕೆ ಕಾರಣ ಇರಲೂಬಹುದು !’
‘ಮನೆಗೆ ಬಂದರೆ, ನಿನ್ನ ಗತಿ ಹೀಗಾದ ಬಗ್ಗೆ ,ಅಪ್ಪ ಗಾಳಿಹೊಡೆದು ಮಲಗಿದ ಬಗ್ಗೆ-ಅಂದು ನಮ್ಮ ಮನೆಗೆ ಬಂದಿದ್ದು -ಅಜ್ಜಿಮನೆ ಮಾದೇವಣ್ಣನ ಬಳಿಹೇಳಿ- ಅವ್ವ ಅಳ್ತಿದ್ದಳು. ನಾನೇನೂ ಮಾಡುವಂತಿರಲಿಲ್ಲ .ಓದಿಕೊಳ್ಳಲೂ ಮನಸ್ಸಾಗುತ್ತಿರಲಿಲ್ಲ . ಪುನಃ ಮರುದಿನ ಸಿಣ್ಣಿಮನೆಗೆಂದು ತೆಂಕಣಕೇರಿ ದಾರಿ ಹಿಡಿದೆ’ ‘ಅದೇ ಕಟ್ಟೆಯ ಮೇಲೆ ಕೂತುಕೊಂಡೆ. ಅರ್ಧತಾಸೂ ಕಳೆದಿರಲಿಲ್ಲ ; ಮತ್ತೆ ಕರಿಬಾವಾಜಿ !…ನಾನು ಓಡಲು ಎದ್ದುನಿಂತೆ: ಅವರೆಂದರು: ‘ಓಡಬೇಡ, ನಾನು ನಿನ್ನನ್ನು ಬಲವಂತದಿಂದ ಒಯ್ಯುವುದಿಲ್ಲ .ನಿನ್ನ ಮನೆ ನನ್ನ ಮನೆಯೂ ಕೂಡ ! ‘ನಿನ್ನೆ ನೀನೆಲ್ಲಿ ತೊಂದರೆಗೆ ಸಿಕ್ಕಿ ಹಾಕಿಕೊಂಡೆಯೋ ಎಂಬ ಚಿಂತೆ ರಾತ್ರಿ ಬಹಳ ಹೊತ್ತಿನ ತನಕ ನನ್ನನ್ನು ಕಾಡುತ್ತಿತ್ತು . ಈಗ ಖುಷಿಯಾಯಿತು. ನಾನು ಮರಳಿ ಹೋಗಲೇಬೇಕಾದ ದಿನ ಇದು, ಹೋಗುತ್ತೇನೆ. ನೀನು ನನ್ನ ಆಶ್ರಮವನ್ನೊಮ್ಮೆ ನೋಡುವುದಾದರೆ ನೋಡಲಿ ಎಂಬುದು ನನ್ನ ಅಭಿಲಾಷೆಯಾಗಿತ್ತು ;
ಇರಲಿ ಬಿಡು, ನಿನಗೆ ಭಯ ಇದೆ; ಭಯ ಬಿಟ್ಟವರು ಮಾತ್ರ ನನಗೆ ಬೇಕು. ಮತ್ತೊಮ್ಮೆ ಹೇಳುತ್ತೇನೆ, ನೀನು ಚಿನ್ನದಂಥ ಹುಡುಗ,ಚಿನ್ನದ ಹಾಗೆ ಎಲ್ಲರಿಗೂ ಬೇಕಾಗಿರುತ್ತಿ -ಎಂದವರೇ ನನ್ನ ಗಲ್ಲವನ್ನು ಮುದ್ದಾಗಿ ಮುಟ್ಟಿ ಸರಸರನೇ ಹೊರಟು ಹೋಗಿ ಬಿಟ್ಟರು. ‘ನಾನು ‘ಬಾವಾಜಿ’ ಎಂದು ಜೋರಾಗಿ ಕರೆದೆ; ನಿಂತು ಹಿಂದಿರುಗಿ ನೋಡಿದರು. ಅವರ ಮುಖದಲ್ಲಿ ಆಗ ಗುಲಾಭಿಯಂಥ ನಗುವಿತ್ತಕ್ಕ! ತಕ್ಷಣ ನನ್ನ ಬಗ್ಗೆ ನನಗೇ ಹೇಸಿಗೆ ಅನಿಸಿತು. ಹೋಗಿ ಬಿಡಬೇಕು, ಅವರ ಆಶ್ರಮ ನೋಡಿಬಿಡಬೇಕು ಎಂಬ ಆಸೆಯಾಯಿತು. ‘ನಾನೂ ಬರ್ತೇನೆ’ ಅಂದೆ. ‘ಸರಿಯÁಗಿ ಯೋಚಿಸು; ವಿಶ್ವಾಸ ಇದ್ದರೆ ಬಾ. ನಿನ್ನ ತಂದೆ-ತಾಯಿ, ಕುಟುಂಬ ಎಲ್ಲರನ್ನೂ ಒಂದಷ್ಟು ಕಾಲ ಬಿಟ್ಟರಬೇಕಾಗಬಹುದು; ಆದರೆ, ಖಂಡಿತಾ ನೀನು ಹೊಸ ಮನುಷ್ಯನಾಗುತ್ತಿ’ ಅಂದರು.
ಅವರ ಮುಖವನ್ನು ಇನ್ನೊಮ್ಮೆ ಕಣ್ತುಂಬಿ ನೋಡಿದೆ; ಗ್ರಾಮದೇವರ ಗುಡಿ ಗುನಗರು ಮೈಭಾರ ಬಂದಾಗ್ ಹೇಳ್ತದ್ರಲ್ಲ , ಅದೇ ನೆನಪಿಗೆ ಬಂತು. ಆ ನಮ್ಮ ಕುಲದೇವರೇ ಎದ್ದು ಬಂದು, ಈ ಕರಿಬಾವಾಜಿ ರೂಪದಲ್ಲಿ ಕರೆಯುತ್ತಿದ್ದಾನೆ ಅನಿಸಿತು! ‘ಬಾವಾಜಿ ನಾನು ಬರ್ತೇನೆ, ಆದರೆ ನಾನು ಮುಂದೆ ಓದಬೇಕು’ ಅಂದೆ.’ ‘ಅದಕ್ಕೆಂದೇ ನಿನ್ನನ್ನೀಗ ಕರೆದೊಯ್ಯುತ್ತಿರುವುದು, ಇಲ್ಲಿಯ ಶಿಕ್ಷಣ ನಿನ್ನ ಬೆಳವಣಿಗೆಗೆ ಸಾಲದು, ನಂಬಿಕೆ ಇದ್ದರೆ ಬಾ’ ಅಂದರು. ಗಟ್ಟಿ ಮನಸ್ಸು ಮಾಡಿ ಹೋಗಿಬಿಟ್ಟೆ! ‘ಹನೇಹಳಿ -ಬಂಕಿಕೊಡ್ಲ ದಾಟಿ ಗೋಕರ್ಣದ ಸಮೀಪ ಬಂದಿದ್ದೆವು. ಅವರ ಮಾತು ಮುಂದುವರೆದಿತ್ತು: ‘ಇದು ರಾತ್ರಿ ಇಲ್ಲೇ ವಸತಿ, ಹೀಗೇ, ಹೀಗೇ, ಒಂದೊಂದು ದಿನ ಒಂದೊಂದು ಸುರಕ್ಷಿತ ಜಾಗದಲ್ಲಿ’ ಅಂದವರು ಮುಂದುವರೆದು ಹೇಳಿದರು: ‘ನನ್ನ ಆಶ್ರಮ ಇದೆಯಲ್ಲ, ಅದು ನಾನು ಕಟ್ಟಿದ್ದಲ್ಲ, ನಿನ್ನಂಥವರೇ ಬೆಳೆಸಿದ್ದು’ ‘ನಿನ್ನಂಥ ಜಾಣರಿಗೆ ಅಲ್ಲೊಂದು ವಸತಿ ಶಾಲೆಯಿದೆ. ಒಮ್ಮೆ ಅಲ್ಲಿ ನೋಡಿದರೆ ನೀನು ಹಿಂತಿರುಗಿ ನೋಡಲಾರೆ ಬಾಬು.’ ಬಾವಾಜಿಯ ಈ ಮಾತು ಕೇಳಿ ನನಗೆ ಸ್ವಲ್ಪಭಯ ಅನಿಸಿತು. ‘ನನ್ನ ಅಪ್ಪ? ಅವ್ವ? ಅಕ್ಕ?….’ ಅನ್ನುತ್ತಿದ್ದಂತೆ, ಅವರೆಲ್ಲರ ರಕ್ಷಣೆ ನಿನ್ನದೇ, ಕ್ರಮೇಣ ಅರ್ಥವಾಗುತ್ತದೆ’ ಅನ್ನುವ ಸಮಜಾಯಿಸಿ ಕೂಡ ಅವರಿಂದಲೇ ಬಂತು. ಹೆಜ್ಜೆಹಾಕುತ್ತಲೇ ಇದ್ದೆವು. ಅವರ ಜೋಳಿಗೆಯಲ್ಲಿ ಬೆಣತಿಗೆ ಅಕ್ಕಿಯ ಜೊತೆ ಕುಚ್ಚಗಕ್ಕಿಯೂ ಇತ್ತು. ಬೇಯಿಸುವಾಗ, ನಿನಗೆ ಯಾವುದು ಇಷ್ಟ ?’ ಎಂದು ಕೇಳುತ್ತಿದ್ದರು. ದಿನಕ್ಕೊಂದು ಕಥೆ ಹೇಳುತ್ತಿದ್ದರು. ಅವರು ದಾರಿಮಧ್ಯೆ ಹೇಳಿದ ಒಂದು ಕಥೆ ಮಾತ್ರ ಭಯಾನಕ! ಅದನ್ನು ಕೇಳಿ ಅವರ ಬಗ್ಗೆ ನನಗೆ ಜಬಾನೇ ಕನಿಕರ ಹುಟ್ಟಿದ ಅವರು ಹೇಳಿದರು: ‘ನಾನೀಗ ನಿನ್ನನ್ನು ಕೇರಳಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ಆದರೆ ನನ್ನ ಮನೆಗಲ್ಲ. ನನ್ನ ಮನೆಗೆ ನಾನು ಹೋಗುವಂತೆಯೂ ಇಲ್ಲ – ಅಷ್ಟೇ ಏಕೆ, ನನ್ನ ಊರಿಗೆಕೂಡ. ಅದರ ಹಿಂದೊಂದು ದೊಡ್ಡ ಕಥೆಯಿದೆ. ನನ್ನ ಮುಖತುಂಬ ಮೈಲಿಬೇನೆಯ ಕಲೆಗಳಿದ್ದಾವಲ್ಲ, ನನಗೆ 22 ವರ್ಷ ತುಂಬಿದ್ದಾಗ ಬಂದದ್ದು ಆ ಬೇನೆ. ನಿನ್ನ ಮುಖದ ಮೇಲೂ ಇದೆ. ನಿನಗೆ ಎಷ್ಟರ ವರ್ಷಕ್ಕೆ ಬಂದದ್ದು?, ನೆನಪಿದೆಯೇ?’- ಕೇಳಿದರು. ‘ಹೌದು, ಅವ್ವ ಹೇಳುತ್ತಿದ್ದಳು, ನಾನು ಕೇವಲ ಆರು ತಿಂಗಳ ಶಿಶು ಇದ್ದೆನಂತೆ ! ಸಿರ್ಸಿಯ ಮಾರೆಮ್ಮನೇ ಮೈಮೇಲೆ ಕಾಣಿಸಿಕೊಂಡಿದ್ದಾಳೆಂಬ ಭಾವನೆ ಅವಳದಾಗಿತ್ತು. ಮುಟ್ಟಾದ ದಿನ-ಅಮ್ಮ ಮೈಮೇಲಿದ್ದ ಮಗುವಿಗೆ ಹಾಲು ಕುಡಿಸುವುದು ಹೇಗೆ?….ಇದು ಅವ್ವನ ಸಮಸ್ಯೆ ! ಆಗ ಒಂದು ಉಪಾಯ ಮಾಡಿದಳಂತೆ. ನಮ್ಮ ಮನೆಪಕ್ಕದ ಬೆಲಗಿನಲ್ಲಿ ತನ್ನ ಹೊಕ್ಕಳವರೆಗೆ ಹರಿಯುವ ನೀರಿನಲ್ಲಿ ನಿಂತುಕೊಳ್ಳುತ್ತಿದ್ದಳಂತೆ. ಆಗ ಅಪ್ಪ ನನ್ನನ್ನು ಎತ್ತಿ ಅವಳ ಕೈಗೆ ಕೊಟ್ಟು ಮೊಲೆಯುಣಿಸುವುದಕ್ಕೆ ಸಹಾಯಮಾಡುತ್ತಿದ್ದನಂತೆ. ಚಾಪೆಯ ಮೇಲೆ ಮಲಗಿಸಿದರೆ ಅಂಟಿಕೊಂಡು ದೊಡ್ಡಹುಣ್ಣಾಗಿ ಬಿಡಬಹುದೆಂಬ ಕಾರಣಕ್ಕಾಗಿ ನನ್ನನ್ನು ಬಾಳೆಲೆಯ ಮೇಲೆ ಮಲಗಿಸುತ್ತಿದ್ದರಂತೆ. ಇದನ್ನೆಲ್ಲ ಅವ್ವ, ಅಪ್ಪ ಆಗಾಗ ಮನೆಗೆ ಬಂದವರೊಡನೆ ಹೇಳುತ್ತಿದ್ದುದರಿಂದ ನನಗೆ ಗೊತ್ತು’-ಅಂದಿದ್ದೆ. ‘ಬಾವಾಜಿ ತಮ್ಮ ಕಥೆ ಮುಂದುವರಿಸಿದರು: ‘ಈ ಮೈಲಿ ದೆಸೆಯಿಂದ ನನ್ನ ಊರಲ್ಲಿ ನಾಲ್ಕೈದು ಜನ ಸತ್ತು ಹೋಗಿದ್ದರು. ನನಗೂ ಒಂದುದಿನ ಪೂರ್ತಿ ಪ್ರಜ್ಞೆ ತಪ್ಪಿತ್ತು. ನಾನೂ ಹೋಗಿಬಿಟ್ಟೆನೆಂದು ಊರಮಂದಿ ಭಾವಿಸಿ ಸುಟ್ಟು ಬೂದಿಮಾಡಲೆಂದು ನಮ್ಮೂರ ಮಸಣಗುಡ್ಡಕ್ಕೆ ಕೊಂಡೊಯ್ದರು!’ ‘ ಅಲ್ಲಿ ಮುಟ್ಟಿಗೆಗೆ ಹಚ್ಚಿದ ಬೆಂಕಿಯ ಶಾಖದಿಂದಾಗಿ ನನಗೆ ಪ್ರಜ್ಞೆ ಬಂತೆಂದು ಕಾಣುತ್ತದೆ, ಎದ್ದು ಕೂತಿದ್ದೇನೆ! ಸುತ್ತಲೂ ಕಟ್ಟಿಗೆ ರಾಶಿ! ಆರೆಂಟು ಜನ ದಿಕ್ಕೆಟ್ಟು ನಿಂತಿದ್ದಾರೆ! ಒಬ್ಬಿಬ್ಬರು ಹೆದರಿ ಓಡುತ್ತಿದ್ದಾರೆ. ನನಗೆ ಎಲ್ಲವೂ ಅರ್ಥವಾಯಿತು. ‘ನಾನು ಬದುಕಿದ್ದೇನೆ ನನ್ನನ್ನು ಸುಡಬೇಡಿ’ ಎಂದು ಕೇಳಿಕೊಂಡೆ. (ವಿಷ್ಣು ನಾಯಕ್ ರ ಜಂಗುಂಜಕ್ಕುಂ ಕಾದಂಬರಿಯಿಂದ ಆಯ್ದ ಭಾಗ)

????????????????????????????????????

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *