ಉತ್ತರ ಕನ್ನಡ ಜಿಲ್ಲೆಯ ರೈತವರ್ಗದಲ್ಲಿ ಹೆಚ್ಚು ಹಿಂದುಳಿದವರು ಹಾಲಕ್ಕಿ ಒಕ್ಕಲಿಗರೆಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದುವರೆಗಿನ ವಿವರಣೆ ಸಾಕು ಅನಿಸುತ್ತದೆ. ಈ ಜಿಲ್ಲೆಯಲ್ಲಿ ಇವರ ಹೊರತಾಗಿಯೂ ಬಹು ದೊಡ್ಡ ರೈತಸಮುದಾಯಗಳಿದ್ದವು, ಈಗಲೂ ಇವೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಇರಬಹುದಾದರೂ- ಆ ಇನ್ನುಳಿದ ರೈತಸಮುದಾಯಗಳ ಆರ್ಥಿಕ ಸ್ಥಿತಿಗತಿಯೂ ಕೂಡ ಇವರಿಗಿಂತ ತೀರಾ ಭಿನ್ನವಾಗೇನೂ ಇರಲಿಲ್ಲ. 1930-40 ರ ದಶಕದ ಆಚೀಚೆಯ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಅಧ್ಯಯನ ನಡೆಸಿದವರಿಗೆ ಈ ಮಾತು ಸ್ಪಷ್ಟವಾದೀತು.
ಸಾಮಾಜಿಕವಾಗಿ ದಲಿತರು, ಶೂದ್ರರು ಮತ್ತು ಹಾಲಕ್ಕಿಗಳಲ್ಲಿ ಒಡೆದು ಕಾಣುವಷ್ಟು ವ್ಯತ್ಯಾಸ ಇದ್ದರೂ ಆರ್ಥಿಕವಾಗಿ ಇವರೆಲ್ಲರ ಕಷ್ಟಪರಂಪರೆ ಒಂದೇ ಸಮಾಂತರ ರೇಖೆಗೆ
ದಕ್ಕುವಂಥದ್ದು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಸಾಯಕ್ಕೆ ಒಳಪಟ್ಟ ಭೂಮಿಯಲ್ಲಿ, ಶೇ.64 ಭಾಗ ಭೂಮಾಲಕರ ಹಂಗಿನಲ್ಲಿ ಬದುಕುವ ಗೇಣಿದಾರ ರೈತರು ಪ್ರತಿನಿಧಿಸುತ್ತಿದ್ದರು ಎಂಬುದನ್ನು
ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ಈ ಜನರಿಗೆ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅರಿವಿರಲಿಲ್ಲ ಎಂದೇನೂ ಭಾವಿಸಬೇಕಾಗಿಲ್ಲ. ಹಿಂದಕ್ಕೆ ಹೋದರೆ, 1920 ರ ದಶಕದಲ್ಲೇ ಕಾರವಾರ -ಸದಾಶಿವಗಡ ಭಾಗದಲ್ಲಿ ಕೃಷಿ -ಕಾರ್ಮಿಕರು ಸಣ್ಣ-ಸಣ್ಣ ಗುಂಪಾಗಿ ಸರ್ಕಾರದ ರೈತವಿರೋಧಿ ಭೂಕಾನೂನಿನ ವಿರುದ್ಧ ಸೆಣೆಸಲು ಸಜ್ಜಾಗತೊಡಗಿದ ಮಾಹಿತಿಗಳು ಸಿಗುತ್ತವೆ.
ಸಮತಾವಾದವನ್ನು ನೆಚ್ಚಿ ರೈತಸಮಸ್ಯೆಯನ್ನು ಕೈಗೆತ್ತಿಕೊಂಡು ಕೆಲವು ನಾಯಕರು, ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಎಚ್ಚರ ಮೂಡಿಸಿದ್ದುಂಟು. ಹೋರಾಟದ ದಾರಿ
-ದಿಕ್ಕು ಹೇಳಿ ಕೊಟ್ಟದ್ದೂ ಉಂಟು. ಆದರೆ ಯಾಕೋ ಒಂದು ದಿಟ್ಟ- ಧೀರ ಆಂದೋಲನವಾಗಿ ಅದು ರೂಪುಗೊಳ್ಳದೇ ಇದ್ದುದ ದುರ್ದೈವ.
ಕಾಲಕ್ರಮೇಣ ಜಿಲ್ಲೆಯ ಪ್ರತಿ ತಾಲೂಕಿನ ಪ್ರತಿಯೊಬ್ಬ ರೈತನ ಎದೆಯಲ್ಲೂ ತಾವು ಪಡುತ್ತಿರುವ ಆರ್ಥಿಕ ಬವಣೆ, ಅನುಭವಿಸುತ್ತಿರುವ ಅವಮಾನ -ಅತಂತ್ರ ಸ್ಥಿತಿಗಳು ಬಗ್ಗೆ ಪ್ರತಿರೋಧದ ಭಾವನೆ ಹೆಪ್ಪುಗಟ್ಟತೊಡಗಿತ್ತು. ಅದರೇನು ಮಾಡುವುದು ? ಜಿಲ್ಲೆಗೆ ಜಿಲ್ಲೆಯೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಅರ್ಪಿಸಿಕೊಂಡಂಥ ವಾತಾವರಣ ಸೃಷ್ಟಿಯಾಗಿದ್ದ ಸಂದರ್ಭವದು.
ಉತ್ತರ ಕನ್ನಡ ಮಾತ್ರವಲ್ಲ, ಇಡೀ ದೇಶಕ್ಕೇ ಈ ಮಾತನ್ನು ಅನ್ವಯಿಸಿ ಹೇಳಬಹುದು. ಸ್ವಾತಂತ್ರ್ಯದ ಮಹಾಯಜ್ಞದ ಕುದುರೆ ಎಬ್ಬಿಸಿದ ಹೋರಾಟದ ಕೆಂಧೂಳಿಯ ಮುಂದೆ ಉಳಿದ ಸಮಸ್ಯೆಗಳೆಲ್ಲ ಗೌಣ. ಆದಾಗ್ಯೂ ರಾಷ್ಟೀಯ ಕಾಂಗ್ರೆಸ್ಸಿನಲ್ಲಿ ‘ ಸಾಮಾಜಿಕ ನ್ಯಾಯದ ಪ್ರಶ್ನೆಗೂ ರಾಜಕೀಯ ಸ್ವಾತಂತ್ರ್ಯಕ್ಕೆ ನೀಡಿದಷ್ಟೇ ಮಹತ್ವ ನೀಡಬೇಕು’ ಎನ್ನುವ ಚಿಂತಕರ ಒಂದು ಪಡೆಯೇ ಸಿದ್ಧವಾಗಿತ್ತು. ಆರ್ಥಿಕ ಭದ್ರತೆಯಿಲ್ಲದ, ಸಾಮಾಜಿಕ ನ್ಯಾಯವಿಲ್ಲದ ಸ್ವಾತಂತ್ರ್ಯವನ್ನು ಪಡೆದುಕೊಂಡು ಇಷ್ಟು ದೊಡ್ಡ ದೇಶವನ್ನು ಮುನ್ನಡೆಸುವುದು ತಿಳಿದುಕೊಂಡಷ್ಟು ಸರಳ ಅಲ್ಲ ಎಂಬುದನ್ನು ಆ ಚಿಂತಕರು ಸಕಾರಣಗಳೊಂದಿಗೆ, – ಮಹಾತ್ಮಾ ಗಾಂಧಿಯೂ ಸೇರಿದಂತೆ – ಹೋರಾಟದ ಮುಂಚೂಣಿಯಲ್ಲಿದ್ದ ಎಲ್ಲರಿಗೂ ಬಿಂಬಿಸತೊಡಗಿದ್ದರು.
ಆದರೆ ಅವರ ನಿಲುವಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ಬೆಂಬಲ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲೇ, ‘ಕಾಂಗ್ರೆಸ್ ಸೋಷಿಯಲಿಸ್ಟ್ ಪೋರಂ’ (1934) ಎಂಬ ಹೆಸರಿನಿಂದ ಆಚಾರ್ಯ ನರೇಂದ್ರ ದೇವ, ಜೆ.ಪಿ., ಲೋಹಿಯಾ, ಈಸೂಪ್ ಮೆಹರ್ ಅಲಿ, ಸಾನೆ ಗುರೂಜಿ, ಮಿನೂಮಸಾನಿ, ಅಚ್ಯುತ ಪಟವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯ, ಎನ್.ಜಿ.ಗೋರೆ ಮುಂತಾದವರು ಕಾಂಗ್ರೆಸ್ಸಿನಿಂದ ಸಿಡಿದು ಬೇರೆಯಾದದ್ದು.
ಆಗಲೇ ಸಮಾಜವಾದದ ಪದಕ್ಕೂ ಸಮಾಜವಾದೀ ಪಥಕ್ಕೂ ಎಂದಿಲ್ಲದ ಜೀವಕಳೆ ತುಂಬಿದಂತಾಗಿ, ಅದು 20 ನೇ ಶತಮಾನವು ಕಂಡ ಭಾರತದ ಮಹತ್ವದ ಸೈದ್ಧಾಂತಿಕ ತಿರುವುಗಳಲ್ಲಿ ಒಂದೆನಿಸಿದ್ದು.
ದೇಶದಲ್ಲಾದ ಈ ಮಹತ್ವದ ಬದಲಾವಣೆಗೆ ಓಗೊಟ್ಟ ಕರ್ನಾಟಕದ ನೆಲದಲ್ಲಿ ಅಂಕೋಲೆಗೆ ಅಗ್ರಸ್ಥಾನ ಸಲ್ಲುತ್ತದೆ. ದಿನಕರ ದೇಸಾಯಿ ಆಗತಾನೇ ಸ್ನಾತಕೋತ್ತರ ಪದವಿ ಪಡೆದು ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಮೂಲಕ ಸಾರ್ವಜನಿಕ ರಂಗವನ್ನು ಪ್ರವೇಶ ಮಾಡಿದ್ದರು. ಈಗಾಗಲೇ ದಾಟಿ ಬಂದ ದಾಖಲೆಗಳು ಹೇಳುವಂತೆ ಉತ್ತರ ಕನ್ನಡ ಜಿಲ್ಲೆಯ, – ಅದರಲ್ಲೂ ಅಂಕೋಲೆಯ ರೈತರ ಕಡು ಕಷ್ಟಗಳನ್ನು ತನ್ನ ವಿದ್ಯಾರ್ಥಿಕಾಲದಿಂದಲೂ ಅತಿ ಸಮೀಪದಿಂದ ಕಂಡಿದ್ದ ದೇಸಾಯರಿಗೆ, ಯಾವ ವರ್ಗದ ಬಗ್ಗೆ ಆಚಾರ್ಯ ನರೇಂದ್ರ ದೇವ ಮುಂತಾದವರು ಉತ್ತರ ಭಾರತದಲ್ಲಿ ಹೋರಾಟಗಳನ್ನು ಹುಟ್ಟುಹಾಕತೊಡಗಿರುವರೋ, ಅಂಥದ್ದೇ ಒಂದು ವರ್ಗ ತನಗೆ ಜನ್ಮಕೊಟ್ಟ ಜಿಲ್ಲೆಯಲ್ಲೂ ಇರುವುದರಿಂದ ತನ್ನ ಬೆಂಬಲಕ್ಕೆ ನಿಲ್ಲಬಲ್ಲ ಸಂಗಾತಿಗಳ ಪಡೆಯೊಂದಿಗೆ ಇವರ ಜೀತಸದೃಶ ಬಾಳಿಗೊಂದು ನೆಮ್ಮದಿಯ ಕೊನೆ ಕಾಣಿಸಬೇಕೆನಿಸಿತು. ಈ ಹಿನ್ನೆಲೆಯಲ್ಲಿ ನಡೆಸಿದ ವಿವರವಾದ ಅಧ್ಯಯನದ ಒಂದು ಭಾಗವೇ ಈಗಾಗಲೇ ನಾವು ನೋಡಿ ಬಂದ ಹಾಲಕ್ಕಿ ಒಕ್ಕಲ ಕುರಿತಾದ- ದೇಸಾಯರ -ಮಾಹಿತಿ ಪುಸ್ತಿಕೆ.
(ವಿಷ್ಣು ನಾಯಕ ರ ದುಡಿಯುವ ಕೈಗಳ ಹೋರಾಟದ ಕತೆ ಪುಸ್ತಕದಿಂದ)