ಕತ್ತಲಲ್ಲೂ ಬೆಳಗಿದ ದಿನಕರರ ಬಗ್ಗೆ ಗೊತ್ತಾ ನಿಮಗೆ?


ಉತ್ತರ ಕನ್ನಡ ಜಿಲ್ಲೆಯ ರೈತರು ಅನ್ಯಾಯ ಮತ್ತು ಅವಮಾನಗಳಿಂದ ನರಳುತ್ತಿದ್ದರು. ಅವರ ದೈನಂದಿನ ಬದುಕಿನ ರೀತಿಯೇ ಅದನ್ನು ಹೇಳುತ್ತಿತ್ತು. ‘ಗೇಣಿಪದ್ಧತಿ’ ಎಂಬ ಆರ್ಥಿಕ ಗುಲಾಮಗಿರಿಯಲ್ಲಿ ಈ ಅರಣ್ಯ ಜಿಲ್ಲೆಯ ರೈತರು ಬದುಕುತ್ತಿದ್ದರು.
ವಿಶೇಷವಾಗಿ ಈ ಭಾಗದ ಆದಿವಾಸಿಗಳೆಂದೇ ಭಾವಿಸಲಾದ ಹಾಲಕ್ಕಿ ಒಕ್ಕಲಿಗರ ಸ್ಥಿತಿಯಂತೂ ಶೋಚನೀಯವಾಗಿತ್ತು. ಇವರಲ್ಲಿ ಬಹುತೇಕ ಮಂದಿ ನಿರಕ್ಷರಿಗಳಾಗಿದ್ದುದ್ದರಿಂದ ‘ಹಣೆಬರಹ’ವನ್ನು ಹಳಿದುಕೊಂಡು ನೋವುಗಳನ್ನು ನುಂಗಿಕೊಳ್ಳುವವರೇ ಹೆಚ್ಚಾಗಿದ್ದರು.
ಸರಕಾರದ ತೀರ್ವೆ ಕಟ್ಟಲಿಕ್ಕೂ ತತ್ವಾರವಾಗಿ ಎದೆ ಸುಡುತ್ತಿರುವಾಗಲೆ, ಬಾಕಿ ಉಳಿಸಿಕೊಂಡ ಗೇಣಿ ವಸೂಲಿಗಾಗಿ ಒಡೆಯ (ಭೂಮಾಲಿಕ)ಕೋರ್ಟಿನಿಂದ ಮನೆ ಜಪ್ತಿ ವಾರಂಟ್ ತರುತ್ತಿದ್ದ! ಇದು ಒಬ್ಬಿಬ್ಬರ ಬಿಕ್ಕಟ್ಟಾಗಿರಲಿಲ್ಲ. ಜಾತಿ ಪಂಗಡವೆನ್ನದೆ ಎಲ್ಲ ಗೇಣಿದಾರರ ಸಮಸ್ಯೆಯಾಗಿತ್ತು.
ಸಹನೆಯ ಕಟ್ಟು ಒಡೆಯುವುದರಲ್ಲಿತ್ತು. ಸಿಡಿಯಬೇಕು ಎಂಬ ಒಳ ಒತ್ತಡವಿದ್ದರೂ ಸಿಡಿಯುವ ಕ್ರಮ ಗೊತ್ತಿರಲಿಲ್ಲ. ಮಾರ್ಗದರ್ಶನದ ಅಗತ್ಯವಿತ್ತು. ಇಂತಹ ಸಂದರ್ಭದಲ್ಲಿ ಮನದ ಬೇಗೆಯನ್ನು ತೋಡಿಕೊಳ್ಳಲು ಈ ಭಾಗದ ರೈತಬಾಂಧವರಿಗೆ ಸಿಕ್ಕಿದ ಮೊದಲ ವ್ಯಕ್ತಿ ಕವಿ ದಿನಕರ ದೇಸಾಯಿ.
ದಿನಕರ ದೇಸಾಯಿ ಕೂಡ ಮೂಲತಃ ಭೂಮಾಲಿಕ ವರ್ಗಕ್ಕೆ ಸೇರಿದವರು. ಇಂಥವರು ರೈತರ ಸಮಸ್ಯೆಗಳನ್ನು ತನ್ನ ಒಳಗಡೆಗೆ ತೆಗೆದುಕೊಂಡು ಅವರಕಷ್ಟಪರಿಹಾರಕ್ಕಾಗಿಆಂದೋಲನದ ದಾರಿ ತೋರಿಸುತ್ತಾರೆಂದರೆ, ಅದೊಂದು ಸೋಜಿಗವೇ. ಮೇಲಾಗಿ ಅವರು ತಮ್ಮ ಶಿಕ್ಷಣ ಮುಗಿಸಿದ ನಂತರ ಹೋಗಿ ನೆಲೆಸಿದ್ದು ದೂರದ ಮುಂಬಯಿಯಲ್ಲಿ. ಮಹಾನ್ ದೇಶಭಕ್ತ ಗೋಪಾಲಕೃಷ್ಣ ಗೋಕಲೆ ಅವರು ಸ್ಥಾಪಸಿದ ‘ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ’ ಯ ಆಜೀವ ಕಾರ್ಯಕರ್ತರಾಗಿ ತಮ್ಮನ್ನು ಸಾರ್ವಜನಿಕ ಸೇವೆಗಾಗಿ ಅರ್ಪಿಸಿಕೊಂಡವರು.
ಅಲ್ಲಿಗೆ ಹೋಗುವ ಮುನ್ನ ಉತ್ತರ ಕನ್ನಡ ಜಿಲ್ಲೆಯ-, ಅದರಲ್ಲೂ ಅಂಕೋಲಾ ಭಾಗದ ಬಡ ರೈತರ ದೈನಂದಿನ ಬವಣೆಯ ಹತ್ತಿರದ ಪರಿಚಯ ಅವರಿಗೆ ಇದ್ದೇ ಇತ್ತು. ಅವರು ಹುಟ್ಟಿ ಬೆಳೆದದ್ದು ಅಂಕೋಲೆಯ ಕುಗ್ರಾಮಗಳಲ್ಲಿ ಒಂದಾದ ಅಲಗೇರಿಯಲ್ಲಿ. ಅಲಗೇರಿಗೆ ಹೊಂದಿಕೊಂಡದ್ದೇ ಕಂಡುಗದ್ದೆಯೆಂಬ ಮಜಿರೆ. ಕಂಡುಗದ್ದೆ ದಾಟಿ ಬಂದರೆ ಕಂತ್ರಿ. ಅಲ್ಲಿಂದ ಆಚೆ ಹೋದರೆ ಶಿರಕುಳಿ, ಈಚೆ ಬಂದರೆಅಂಬಾರಕೊಡ್ಲು. ಇವೆಲ್ಲ ತೀರ ಹಿಂದುಳಿದ ರೈತಾಪಿ ಬಡ ಹಾಲಕ್ಕಿಗಳ, ನಾಮಧಾರಿಗಳ, ಕೋಮಾರಪಂಥರ ಕೊಪ್ಪಗಳಿರುವ ಊರುಗಳು.
ನಾನು ಚಿಕ್ಕವನಿದ್ದಾಗ ಕಂಡುಗದ್ದೆಯ ಬೊಮ್ಮ ಗೌಡ ಮತ್ತು ಅವನ ಅಣ್ಣ ಮಳ್ ಗೌಡ ಎಂಬುವರು ಮೇಲಿಂದ ಮೇಲೆ ನಮ್ಮ ಮನೆಗೆ ಬರುತ್ತಿದ್ದರು. ನನ್ನ ತಂದೆಯ ಆತ್ಮೀಯ ಒಡನಾಟದಲ್ಲಿ ಇದ್ದ ಅವರು ದಿನಕರ ದೇಸಾಯಿಯವರ ರೈತ ಪರವಾದ ನಡವಳಿಕೆಯ ಬಗ್ಗೆ ತಾರೀಪು ಮಾಡುತ್ತಿದ್ದುದನ್ನು ಅನೇಕ ಸಲ ಕೇಳಿದ್ದೇನೆ.
ದೇಸಾಯಿಕಂಡುಗದ್ದೆಯಲ್ಲಿ ಇವರ ಗದ್ದೆಹಾಳೆಯ ಮೇಲೆ ನಡಕೊಂಡು ಹೋಗುತ್ತಿದ್ದುದು, ತಾಸುಗಟ್ಟಲೆ ನಿಂತು ಮಳೆ-ಬೆಳೆಯ ಬಗ್ಗೆ ಚರ್ಚಿಸುತ್ತಿದ್ದುದು, ತೀರ್ವೆ ಮತ್ತು ಗೇಣಿ ದರಗಳ ಬಗ್ಗೆ ವಿಚಾರಿಸುತ್ತಿದ್ದುದೆಲ್ಲ ನಮ್ಮ ಮನೆಯಲ್ಲಿ ಚರ್ಚೆಯಾಗುತ್ತಿತ್ತು. ಅವರ ಈ ಹಳೆಯ ‘ಪಟ್ಟಂಗ’ ಆಗ ನನಗೆ ಅಷ್ಟೊಂದು ಮುಖ್ಯವೆನಿಸಿರಲಿಲ್ಲ. ಕಾಲ ಕ್ರಮೇಣ ನಾನೂ ಕೆಂಪು ಬಾವುಟ ಹಿಡಿದು ಗೇಣಿಪದ್ಧತಿಗೆ ಧಿಕ್ಕಾರ ಹೇಳತೊಡಗಿದಾಗ ನನ್ನ ತಂದೆಯ ತಲೆಮಾರಿನ ಈ ಜನ ಆಡಿಕೊಳ್ಳುವ ಮಾತುಗಳು ನನಗೆ ಬಹು ಮುಖ್ಯವಾಗಿ ಕಂಡವು.
ದೇಸಾಯಿಯವರ ರೈತಪರವಾದ ಆಸಕ್ತಿ ಎಷ್ಟಿತ್ತೆಂಬುದನ್ನು ನನ್ನ ಭಾವ(ಅಕ್ಕನ ಗಂಡ) ಕುಸಲಪ್ಪ ನಾಯ್ಕ ನನಗೆ ಹೇಳುತ್ತಿದ್ದ. ಹೊಡೆ ಬಿರಿದು ಭತ್ತದ ಕದಿರು ಹೊರಬಂದಾಗ ಅದರ ತೆನೆಯನ್ನು ಕೈಯಲ್ಲಿ ಹಿಡಿದುಕೊಂಡು, ‘ಇದು ಪಾಂಡ್ಯ, ಇದು ಹಳಗ, ಇದು ಬಿಳಿಯಕ್ಕ,’-ಹೀಗೆ ಭತ್ತದ ಜಾತಿಯನ್ನು ತಟ್ಟನೆ ಗುರುತು ಹಚ್ಚಿ ಎಕರೆವಾರು ಇಳುವರಿಯ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದರಂತೆ. ರೈತರ ಜೊತೆಗಿನ ಅವರ ಈ ಎಲ್ಲ ಚರ್ಚೆ, ಪ್ರಶ್ನೆ ನಡೆಯುತ್ತಿದ್ದುದು ಬೆಂಗಳೂರು, ಮೈಸೂರುಗಳಲ್ಲಿ,

  • ಅವರು ಕಾಲೇಜು ಓದುತ್ತಿದ್ದ ದಿನಗಳ ರಜಾವಧಿಯಲ್ಲಿ,-ಊರಿಗೆ ಬಂದಾಗ. ಅಂಬಾರಕೊಡ್ಲದ ನಿಂಗುತಿಮ್ಮನ ಪ್ರಕಾರ, ದಿನಕರ ದೇಸಾಯಿ ಕಾಲೇಜು ಶಿಕ್ಷಣ ಓದುತ್ತಿದ್ದಾಗಲೇ ಹಾಲಕ್ಕಿಗಳ ಗುಮಟೆಪಾಂಗಿಗೆ ಹಾಡುಗಳನ್ನು ಬರೆದುಕೊಡುತ್ತಿದ್ದರು ಮತ್ತು ರಾತ್ರಿ ಸಮಯ ಗುಮಟೆಪಾಂಗು ನಡೆಯುವಲ್ಲಿ, ಬೆಂಕಿಹೊಡ್ಲದ ಮುಂದೆ ಕುಳಿತು ಹರಟೆ ಹೊಡೆಯುತ್ತಿದರಂತೆ. ಹರಟೆಯ ವಿಷಯವೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿಯೇ ಇರುತ್ತಿದ್ದವಂತೆ. ಇದನ್ನವರು ‘ರಾತ್ರಿ ಸಾಲೆ’ ಎಂದು ಕರೆಯುತ್ತಿದ್ದುದೂ ಉಂಟು.
    ಹೀಗೆ ಬಡರೈತಕುಟುಂಬಗಳ ಸಹವಾಸದಲ್ಲಿದ್ದ ದಿನಕರ ..ದೇಸಾಯರ ಆಲೋಚನಾ ಕ್ರಮದಲ್ಲಿ ಇತರೇ ಮೇಲ್ವರ್ಗದವರಿಗಿಂತ ಭಿನ್ನವಾದ ದೃಷ್ಟಿ ಕಂಡು ಬಂದರೆ, ಅದೇನು ವಿಶೇಷವಲ್ಲ.
    ಬಿ.ಎ. ಪದವಿ ಪಡೆದ ದಿನಕರ ದೇಸಾಯಿ ಎಂ.ಎ, ಎಲ್.ಎಲ್.ಬಿ, ಮುಗಿಸಿ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಿದ ಮೇಲೆ(1935) ಅವರ ಒಡನಾಟ ಬೆಳೆದದ್ದು ‘ಕಾರ್ಮಿಕ ಪಿತಾಮಹ’ ರೆನಿಸಿಕೊಂಡ ಎನ್.ಎಂ ಜೋಶಿ ಅವರೊಂದಿಗೆ.
    ಜೋಶಿ ಅವರು ಆಗ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಉಪಾಧ್ಯಕ್ಷರೂ ಆಗಿದ್ದರು. ದಿನಕರ ದೇಸಾಯಿ ಸಾರ್ವಜನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೇ ಮುಂಬಯಿಯ ಹಡಗು ಕಾರ್ಮಿಕ ಸಂಘಟನೆಯ ಮೂಲಕ. ಜೋಶಿಯವರನ್ನು ತನ್ನ ಸಾರ್ವಜನಿಕ ಸೇವಾ ಜೀವನದ ಗುರು ಎಂದೇ ಸ್ಮರಿಸಿಕೊಳ್ಳುತ್ತಿದ್ದ ದೇಸಾಯರು ಕಾರ್ಮಿಕ ಸಂಘಟನೆಯ ಕುರಿತ ತಮ್ಮ ಆರಂಭದ ದಿನಗಳ ಅನುಭವವನ್ನು ವಿವರಿಸಿದ್ದು ಹೀಗೆ,-
    “1935ರಲ್ಲಿ ನಾನು ದಿವಂಗತ ಗೋಖಲೆಯವರ ‘ಭಾರತ ಸೇವಕ ಸಮಾಜ’(sSeಡಿvಚಿಟಿಣs oಜಿ Iಟಿಜiಚಿ Soಛಿieಣಥಿ) ಸಂಸ್ಥೆಯನ್ನು-ಅದರ ಆಜನ್ಮ ಕಾರ್ಯಕರ್ತನಾಗಿ ಸೇರಿದಂದಿನಿಂದ ನನ್ನ ಹೆಚ್ಚಿನ ವೇಳೆಯನ್ನು ಕಾರ್ಮಿಕರ ಸೇವೆಯಲ್ಲೇ ಕಳೆಯುತ್ತಿದ್ದೆ. ಭಾರತದ ಕಾರ್ಮಿಕ ಆಂದೋಲನದ ಪಿತಾಮಹರಾಗಿದ್ದ ಎನ್.ಎಂ.ಜೋಶಿಯವರೇ ನನ್ನ ಗುರುಗಳು. ನಾನು ‘ಭಾರತ ಸೇವಕ ಸಮಾಜ’ವನ್ನು ಸೇರಿದಾಗ, ಅವರು ಅದರ ಮುಂಬೈ ಶಾಖೆಯ ಪ್ರಮುಖರಾಗಿದ್ದರು. ಅವರ ಮಾರ್ಗದರ್ಶನದಲ್ಲಿಯೇ ನಾನು ಸಾರ್ವಜನಿಕ ಜೀವನವನ್ನು ಆರಂಭಿಸಿದೆ…..
    ನನ್ನ ಗುರುಗಳ ಇಚ್ಛೆಯಂತೆ 1936 ರಲ್ಲಿ ಸಮುದ್ರ ಕೆಲಸಗಾರರ ಸಂಘಟನೆಯ ಕಾರ್ಯವನ್ನು ಮುಂಬೈ ನಗರದಲ್ಲಿ ಕೈಕೊಂಡೆ. ಈ ಸಂಘಟನೆಯನ್ನು ಹುಟ್ಟುಹಾಕುವ ಸಂದರ್ಭದಲ್ಲಿ ನಾನು ಕರೆದ ಆರಂಭದ ಸಭೆಗೆ ಕೇವಲ ಏಳು ಮಂದಿ ಕಾರ್ಮಿಕರು ಹಾಜರಿದ್ದರು.
    ಈ ರೀತಿ ಆರಂಭವಾದ ಸಂಘಟನೆಯ ಬೀಜವು ಎರಡೇ ವರ್ಷಗಳಲ್ಲಿ ವಿಶಾಲವೃಕ್ಷವಾಗಿ ಬೆಳೆದು ಮುಂಬೈಯಲ್ಲಿ ಬಲಾಢ್ಯ ಬ್ರಿಟಿಷ್ ಪಿ ಎಂಡ್ ಓ(P&ಔ) ಆಗಿ ಹಡಗು ಕಂಪನಿಯನ್ನು ಕಾಡಿಸಿತು…” (27-5-1982 ರಂದು ದಿನಕರರ ಸಂದರ್ಶನದಲ್ಲಿ ಪಡೆದ ವಿವರ).
    ಹೀಗೆ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿರುವಾಗಲೇ ನಡು-ನಡುವೆ ಅಂಕೋಲೆಗೆ ಬರುತ್ತಿದ್ದ ದಿನಕರ ದೇಸಾಯಿ ಇಲ್ಲಿಯ ರೈತರಲ್ಲೂ ಹೋರಾಟದ ಭೂಮಿಕೆಯನ್ನು ಸಿದ್ಧಪಡಿಸುವ ಆಲೋಚನೆ ಮಾಡಿದರು ಮಾತ್ರವಲ್ಲ, ಮೊದಲ ಹೆಜ್ಜೆಯಾಗಿ ರೈತರ ಸಂಕಷ್ಟಗಳನ್ನು ಪರಿಚಯಿಸುವಂಥ ಅತ್ಯಂತ ಸರಳಭಾಷೆಯ ಹಾಡು ಬರೆದು ಹಾಲಕ್ಕಿಗಳ ಗುಮಟೆ ಪಾಂಗಿಗೆ ಒದಗಿಸತೊಡಗಿದರು. ಇದರಿಂದ ನಿರಕ್ಷರಿಗಳ ಬಾಯಲ್ಲೂ ರೈತರ ಬವಣೆಯ ಕತೆ ಹಾಡಿನ ರೂಪದಲ್ಲಿ ಸೇರಿಕೊಳ್ಳುವಂತಾಯ್ತು. ಈ ಹಾಡು ಕಾಲಕ್ರಮೇಣ ರೈತರಲ್ಲಿ ಪ್ರತಿಭಟನೆಯ ಭೂಮಿಕೆ ನಿರ್ಮಾಣವಾಗಲು ನೈತಿಕಬಲವನ್ನೂ ತುಂಬತೊಡಗಿತು. ದೇಸಾಯರು ಹಾಲಕ್ಕಿಕೂಟಗಳನ್ನು ತಮ್ಮ ರೈತ ಸಂಘಟನೆಗೆ ಬಳಸಿಕೊಂಡ ಬಗ್ಗೆ ದಾಖಲೆಯೋ ಎಂಬಂತೆ,-ಹಾಲಕ್ಕಿಗಳ ಗುಮಟೆಪಾಂಗಿನಲ್ಲಿ ಸೇರಿಹೋಗಿರುವ ಗೀತೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದು.
    ಬಂದರು ಬಂದರು ದೇಸಾಯಿ ಸಾಯ್ಬರು
    ರಾತ್ರಿಸಾಲ್ಯಾಗೆ | ರಾತ್ರಿಸಾಲ್ಯಾಗೆ
    ಹಾಲಕ್ಕಿ ಒಕ್ಕಲ ರಾತ್ರಿಸಾಲೆಯ
    ನೋಡಲು ಬಂದವರೊ | ಇವರು
    ಕೂಟಕೆ ಬಂದವರೊ
    ಕಾರವಾರ ಜಿಲ್ಲೆಯ ಅಲಗೇರಿ ಊರಲಿ
    ಹುಟ್ಟಿ ಬೆಳೆದವರೊ | ಇವರು
    ಇಲ್ಲಿಗೆ ಬಂದಿಹರೊ
    ಹೋದಹೋದಲಿ ಬೆಳಕನು ಕೊಡುತ
    ಇಲ್ಲಿಗೆ ಬಂದಿಹರೊ | ಇವರು
    ಇಲ್ಲಿಗೆ ಬಂದಿಹರೊ
    ಬಂದರು ಬಂದರು ದೇಸಾಯಿ ಸಾಯ್ಬರು
    ರಾತ್ರಿ ಸಾಲ್ಯಾಗೆ | ರಾತ್ರಿ ಸಾಲ್ಯಾಗೆ (ವಿಷ್ಣು ನಾಯ್ಕ ರ ದುಡಿಯುವ ಕೈಗಳ ಹೋರಾಟದ ಕತೆಯಿಂದ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *