ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ.

ಕಾಗೋಡು ಕಲಿ’ ಹೆಚ್. ಗಣಪತಿಯಪ್ಪ.
ರತ್ನಾಕರ ನಾಯ್ಕ, ಉಪನ್ಯಾಸಕರು, ಅಂಕೋಲಾ.
“ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲಕೊಡುವುದು”
ಇದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬೀಜ ನುಡಿ.
ಈ ನುಡಿಗೂ ಕಾಗೋಡು ಕಲಿ ಹೆಚ್. ಗಣಪತಿಯಪ್ಪನವರಿಗೂ ಏನು ಸಂಬಂಧ?
ಎಂದು ನೀವು ಕೇಳಬಹುದು. ಶಿಕ್ಷಣ ಏನೆಲ್ಲ ಮಾಡಬಹುದು ಎಂಬುದು ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ಶರಣ ಚಳುವಳಿಯಲ್ಲಿ ಅಕ್ಷರ ಹೆಣ್ಣಿಗೆ ಮಾತನಾಡುವುದನ್ನು ಕಲಿಸಿತು. 20ನೇ ಶತಮಾನದಲ್ಲಿ ಅಕ್ಷರ ದಲಿತರಿಗೆ ದನಿಯಾಯಿತು. ಅಂತೆಯೇ ಹಲವು ಚಳವಳಿಗೆ ಅಕ್ಷರವೇ ಅಸ್ತ್ರವಾಯಿತು. ಅಂಕೋಲದ ರೈತ ಚಳವಳಿ ಮತ್ತು ಕಾಗೋಡು ರೈತ ಚಳವಳಿ ಅನಕ್ಷರಸ್ತ ರೈತರು ಒಂದಾಗಲು ಅಕ್ಷರ ಬಲ್ಲ ದಿನಕರ ದೇಸಾಯಿಒಂದೆಡೆ, ಇನ್ನೊಂದೆಡೆ ಹೆಚ್. ಗಣಪತಿಯಪ್ಪ ಕಾರಣರಾದರು.
ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಹೆಚ್. ಗಣಪತಿಯಪ್ಪ ಗಾಂಧೀಜಯಂತಿಗೆ ಎರಡು ದಿನ ಮೊದಲು 30-9-2014ರಂದು ಇಹಲೋಕ ಯಾತ್ರೆ ಕೈಕೊಂಡರು.
ಅವರಿಗೆ 90 ವರ್ಷವಾಗಿತ್ತು. (1924-2014) ಸಿದ್ದಾಪುರದ ಸಮೀಪದ ಹೊಸೂರಿನವರಾದ ಇವರು ಅಂದಿನ ಕಾಲದಲ್ಲೇ ಪಬ್ಲಿಕ್ ಪರೀಕ್ಷೆ (7ನೇ ಈಯತ್ತೆ) ಪಾಸುಮಾಡಿ ಗ್ರಾಮ ಪಂಚಾಯತ್‍ದಲ್ಲಿ ಕಾರ್ಯದರ್ಶಿಯಾಗಿ ನೌಕರಿ ಮಾಡಿದ ನಾಮಧಾರಿ ಹುಡುಗ.
ಗಾಂಧೀಜಿಯು ಕರೆಕೊಟ್ಟ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಪಾಲ್ಗೊಂಡು ನಾಲ್ಕು ತಿಂಗಳು ಸೆರೆವಾಸ ಅನುಭವಿಸಿದವರು. ಇದ್ದೊಂದು ನೌಕರಿಯನ್ನು ಕಳೆದುಕೊಳ್ಳುವಂತಾಯಿತು.
ಇದರಿಂದ ಮನೆಯವರ ತಿರಸ್ಕಾರ, ಊರವರ ಅಸಡ್ಡೆ ಅವಮಾನ ಅನುಭವಿಸುತ್ತಾರೆ. ಈ ಅವಮಾನ ತಾಳಲಾರದೆ ನೌಕರಿಯನ್ನು ಅರಸುತ್ತಾ ಸಿದ್ದಾಪುರವನ್ನು ಬಿಟ್ಟು ಸಾಗರ ತಾಲೂಕಿನ ಹಿರೇನೆಲ್ಲೂರಲ್ಲಿ ಬಂದು ನೆಲೆಸುತ್ತಾರೆ.
ಹಿರೆನೆಲ್ಲೂರಲ್ಲಿ ಖಾಸಗಿ ಶಾಲೆ ಪ್ರಾರಂಭಿಸಿ ದೀವರು, ಉಪ್ಪಾರರು ಇನ್ನೂ ಹಲವು ಹಿಂದುಳಿದ ವರ್ಗದ ಮಕ್ಕಳಿಗೆ ಅಕ್ಷರ ಕಲಿಸಲಾರಂಭಿಸುತ್ತಾರೆ.ಹಲವು ಸ್ವಾತಂತ್ರ್ಯ ಹೋರಾಟಗಾರರ ಹೋರಾಟ ಸ್ವಾತಂತ್ರ್ಯ ಬರುವಲ್ಲಿಯರೆಗೆ ನಿಲ್ಲುತ್ತದೆ. ಎಷ್ಟೋಜನ ಮಾಸಾಶನಕ್ಕೆ ಸೀಮಿತಗೊಂಡು ಅವರೆಲ್ಲ ಅಸ್ತಮಿಸುತ್ತಿದ್ದಾರೆ. ಆದರೆ ಹೆಚ್. ಗಣಪತಿಯಪ್ಪ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಆಗಿ ಉಳಿಯದೆ ಕಾಗೋಡು ರೈತ ಚಳವಳಿಯ ರೂವಾರಿಯೂ ಆದದ್ದು ವಿಶೇಷ.
1947ರಲ್ಲಿ ನಮಗೆ ಪಾರತಂತ್ರ್ಯದಿಂದ ಮುಕ್ತಿ ಸಿಕ್ಕತೇ ಹೊರತು ಜೀತದಿಂದ, ಭೂಮಾಲಿಕರ ದಬ್ಬಾಳಿಕೆಯಿಂದ ಅಸ್ಪ್ರಶ್ಯತೆಯಿಂದ ಮುಕ್ತಿ ಸಿಗಲಿಲ್ಲ. ನಿಜವಾದ ಎಷ್ಟೋ ಹೋರಾಟಗಳು ಸ್ವಾತಂತ್ರ್ಯ ನಂತರ ಪ್ರಾರಂಭಗೊಂಡವು. ಅಂತಹ ಹೋರಾಟದಲ್ಲಿ ಕಾಗೋಡು ರೈತ ಚಳವಳಿ ಸಹ ಒಂದು. ಗೇಣಿದಾರರು ಭೂಮಾಲಿಕರ ದಬ್ಬಾಳಿಕೆಯ ವಿರುದ್ಧ ದಂಗೆ ಎದ್ದ ಹೋರಾಟ ಇದು. ಈ ಹೋರಾಟಕ್ಕೆ ಬೀಜ ಬಿತ್ತಿದವರು ಇದೇ ಗಣಪತಿಯಪ್ಪ. ಶಿಕ್ಷಕರಾಗಿ ವೃತ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಕಾಗೋಡು, ಹಿರೇನೆಲ್ಲೂರು, ಕಾನ್ಲೆ, ತಡಗಳಲೆ ಗ್ರಾಮಗಳಲ್ಲಿ ಗೇಣಿ ಸಮಸ್ಯೆ ತೀವ್ರವಾಗಿತ್ತು. ಭೂಮಾಲಿಕರ ಜಮೀನು ಉಳುಮೆ ಮಾಡಿ, ಅದರಲ್ಲಿ ಬರುವ ಫಸಲನ್ನು ಗೇಣಿ ರೂಪದಲ್ಲಿ ಭೂಮಾಲಿಕರಿಗೆ ರೈತ ಕೊಡುವ ಅಳತೆಯಲ್ಲಿ ಆದ ಅನ್ಯಾಯದ ವಿರುದ್ಧ ಉಂಟಾದದ್ದೇ ಈ ಚಳುವಳಿ.
ಈ ಅನ್ಯಾಯವನ್ನು ಕುತೂಹಲದಿಂದ ಗಮನಿಸುತ್ತಿದ್ದ ಗಣಪತಿಯಪ್ಪ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರುಈ ಚಳುವಳಿಗೆ ತೆಗೆದುಕೊಂಡ ಅಸ್ತ್ರ ‘ಅಕ್ಷರ ಮತ್ತುಅರಿವು’. ಹಗಲು ಮಕ್ಕಳಿಗೆ ಅಕ್ಷರದ ವಿದ್ಯೆ ಕಲಿಸಿದರೆ, ರಾತ್ರಿ ಊರೂರು ತಿರುಗಿ ಗೇಣಿದಾರರಿಗೆ ಅರಿವಿನ ವಿದ್ಯೆ ಹೇಳಿ ಜಾಗೃತಗೊಳಿಸುತ್ತಿದ್ದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಸತ್ಯ, ಶಾಂತಿ, ಅಹಿಂಸೆ, ಸ್ವದೇಶಿ, ಉಪ್ಪು ಇವೆಲ್ಲ ಅಸ್ತ್ರಗಳಾದರೆ, ಕಾಗೋಡು ಚಳುವಳಿ ಸಹ ಅಹಿಂಸೆಯಿಂದ ಕೂಡಿತ್ತು.ಗಣಪತಿಯಪ್ಪನವರು ಗಾಂಧೀವಾದಿಗಳಾಗಿದ್ದೂ ಸಹ ಇದಕ್ಕೆ ಮುಖ್ಯ ಕಾರಣ.
ಕಾಗೋಡು ಚಳವಳಿ ‘ಕೊಳಗ’ ಮುರಿದ ನೊಗ, ಹರಿದ ಮಿಣಿ, ಕತ್ತರಿಸಿದ ಜೊತಗ (ಊಳುವ ಎತ್ತಿನ ಕೊರಳಿಗೆ ಕಟ್ಟುವ ಕತ್ತದ ಹಗ್ಗ) ಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡದ್ದು ವಿಶೇಷ.
ಈ ಪರಿಕಲ್ಪನೆ ಜನರಲ್ಲಿ ಮೂಡಿಸಿದವರು ಇದೇ ಗಣಪತಿಯಪ್ಪನವರು. ಗೇಣಿದಾರರು, ಭೂಮಾಲಿಕರ ಗದ್ದೆಯನ್ನು ಉಳುಮೆಮಾಡಿ ಭತ್ತವನ್ನು ಅಳತೆಮಾಡಿಕೊಡುವಲ್ಲಿಯ ಅಳತೆ ಮಾಪನ (ಕೊಳಗ)ದಲ್ಲಿ ಆದ ಅನ್ಯಾಯವನ್ನು ಕಾಗೋಡು ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಿದವರು ಹೆಚ್. ಗಣಪತಿಯಪ್ಪನವರು.
‘ಸಾಗರ ತಾಲ್ಲೂಕು ರೈತ ಸಂಘ’ವನ್ನು ಸ್ಥಾಪಿಸಿ ರೈತರಲ್ಲಿ ಸಂಘಟನೆಯ ಮಹತ್ವವನ್ನು ಅರುಹಿದರು. ರೈತರು ಸಂಘಟಿತವಾಗಿ ಹೋರಾಡಿದರೆ ಜಯ ಸಿಗುತ್ತದೆ ಎಂದು ಅವರಲ್ಲಿ ಆತ್ಮ ವಿಶ್ವಾಸ ತುಂಬಿದರು. ಭೂಮಾಲಿಕರು ಇವರ ಯಾವ ಬೇಡಿಕೆಗಳಿಗೂ ಸುತಾರಾಂ ಒಪ್ಪಲಿಲ್ಲ. ರೈತರೂ ಸುಮ್ಮನೆ ಕೂಡಲಿಲ್ಲ ಅವರೂ ಹೋರಾಟ ಸಭೆಗಳನ್ನು ಮಾಡಿದರು. ಇದಕ್ಕೆ ಪ್ರೇರಕರಾದ ಗಣಪತಿಯಪ್ಪನವರು ಮತ್ತೆ ಇಲ್ಲಿ ಸೆರೆವಾಸ ಅನುಭವಿಸಿದರು. ಅಲ್ಲದೆ ಇದೇ ಸಮಯಕ್ಕೆ ರಾಮಮನೋಹರ ಲೋಹಿಯಾ ಕಾಗೋಡಿಗೆ ಬಂದು ರೈತರ ಚಳುವಳಿಯಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾದರು.
ಲೋಹಿಯಾ ಬಂಧನ ಮತ್ತು ಸಾಗರದಲ್ಲಿ ಭೂಮಾಲಿಕರ ವಿರುದ್ಧ ನಡೆದ ಬೃಹತ್ ಮೆರವಣಿಗೆ ರಾಷ್ಟ್ರದ ಕಣ್ಣನ್ನು ತೆರೆಸಿ ಈ ಚಳುವಳಿ ರಾಷ್ಟ್ರೀಯ ರೂಪ ಪಡೆಯುವಂತಾಯಿತು. ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ಕಡಿದಾಳು ಮಂಜಪ್ಪ ಬೆಂಬಲ ಸೂಚಿಸಿದರು. ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತಹ ನಾಯಕರು ಹುಟ್ಟಿಕೊಂಡರು. ಚಳವಳಿ ಯಶಸ್ವಿಯಾಯಿತು. ಊಳುವವನೇ ಹೊಲದೊಡೆಯ ಕಾನೂನು ಬಂದಿತು. ಗೇಣಿದಾರರು ಅವರು ಊಳುವ ಭೂಮಿಯ ಒಡೆಯರಾದರು. ಇದಕ್ಕೆಲ್ಲ ಗಣಪತಿಯಪ್ಪನವರ ಮಾರ್ಗದರ್ಶನ ಪ್ರೇರಣೆಯಾಗಿತ್ತು.
ಗಣಪತಿಯಪ್ಪ ತೆರೆಮರೆಯ ನಾಯಕನಂತೇ ಉಳಿದರು. ಅವರ ಮುಖ್ಯಗುಣ ಸರಳತೆ, ಪ್ರಾಮಾಣಿಕತೆ, ಇತ್ತೀಚೆಗೆ ಅವರ ನಿಲುವಿನಲ್ಲಿ ದ್ವಂದ್ವತೆ ಇದ್ದರೂ ಅವರ ನಿಸ್ವಾರ್ಥತೆಯನ್ನು ಯಾರೂ ಮರೆಯುವಂತಿಲ್ಲ. ಬಿಳಿಯಾದ ಶುಭ್ರ ಬಟ್ಟೆ, ಗಾಂಧಿ ಟೋಪಿ, ನೆಹರು ಕೋಟು, ಬಿಟ್ಟು ಅವರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸದಾ ಸೈಕಲ್ ತುಳಿಯುತ್ತಲೇ ಹೋರಾಟಗಳನ್ನು ಸಂಘಟಿಸುತ್ತಿದ್ದ ರೀತಿ ಮೆಚ್ಚಲೇಬೇಕು.
ಆದರೆ ಅವರಿಗೆ ಚುನಾವಣಾ ರಾಜಕೀಯ ಮಾತ್ರ ಒಲಿಯಲೇ ಇಲ್ಲ. ಇಂತಹ ಸರಳ ಸಜ್ಜನ ವ್ಯಕ್ತಿ ಇನ್ನು ನೆನಪು ಮಾತ್ರ. ಶಿವಮೊಗ್ಗ ಜಿಲ್ಲೆಯಲ್ಲಿ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದ ಹಲವಾರು ನಾಯಕರು ಅಗಲುತ್ತಿದ್ದಾರೆ. ಅದರಲ್ಲೂ ದೀವರ ಸಮುದಾಯದಲ್ಲಿ ಕಾಗೋಡು ತಿಮ್ಮಪ್ಪನವರು ಗತಿಸಿದ ಮೇಲೆ ಈ ಜನಾಂಗದಲ್ಲಿ ಒಂದು ರೀತಿಯ ಅರಾಜಕತೆ ಕಾಡುವುದು ಸತ್ಯ.
ವರ್ತಮಾನದ ಸಂಕೀರ್ಣ ಸಂದರ್ಭದಲ್ಲಿ ಇತಿಹಾಸವನ್ನು ಮತ್ತುಸಮಾಜದ ಹಾಗೂ ಸಮುದಾಯದ ಧೀಮಂತ ನಾಯಕರನ್ನು ಗೌರವದಿಂದ ಕಾಣುವ ಪ್ರವೃತ್ತಿ ಕಡಿಮೆಯಾಗಿದೆ. ಗಣಪತಿಯಪ್ಪನವರಿಗೆ ಜನಾಂಗದವರಿಂದಲೂ ಅವಮಾನ ಆಗಿರುವುದು ಸತ್ಯ.ಗಾಂಧಿಯನ್ನೇ ಕೊಂದ ನಮಗೆ ಗಾಂಧಿವಾದಿಗೆ ಆಗುವ ಅವಮಾನ ಯಾವಲೆಕ್ಕ?
ಪಕ್ಕದ ಸಿದ್ದಾಪುರದಿಂದ ಹೊಟ್ಟೆಪಾಡಿಗೆ ಶಿಕ್ಷಕನಾಗಿ ಬಂದು, ಇಲ್ಲಿಯ ಜನರಲ್ಲಿ ಸ್ವಾತಂತ್ರ್ಯ ಸ್ವಾಭಿಮಾನ, ಆಕ್ರೋಶದ ಕೆಚ್ಚನ್ನು ಹಚ್ಚಿದ ಗಣಪತಿಯಪ್ಪನವರು ಆ ಭಾಗದ ರೈತರ ಪಾಲಿಗೆ ಅದರಲ್ಲೂ ತಳಸಮುದಾಯಕ್ಕೆ ಪ್ರಾತಃಸ್ಮರಣೀಯರು.
ಮಾತು ಬಂಡವಾಳ ಮಾಡಿಕೊಂಡು ಬಡಾಯಿಕೊಚ್ಚಿಕೊಳ್ಳುವವರ ಮಧ್ಯೆ, ಮಾತಿಲ್ಲದವರಿಗೆ ಮಾತಾದ ಗಣಪತಿಯಪ್ಪನಂತಹವರು ಇಂದು ಪ್ರಸ್ತುತವಾಗುತ್ತಾರೆ. ಸ್ವಚ್ಛಭಾರತ ಕೇವಲ ಕಸತೆಗೆಯುವುದರಲ್ಲಿ ಗಂಗೆ ಶುದ್ಧಿಮಾಡುವುದರಲ್ಲಿ ಮಾತ್ರ ಇಲ್ಲ. ಅದು ಅಸಮಾನತೆಯನ್ನು ಹೋಗಲಾಡಿಸಬೇಕು. ಮಾನಸಿಕ ಇಬ್ಬಂದಿತನವನ್ನು ದೂರಮಾಡಬೇಕು ಕೃತಜ್ಞತಾ ಗುಣವನ್ನು ರೂಢಿಸಿಕೊಳ್ಳಬೇಕು. ಆಗ ಗಾಂಧಿಗೂ ನೆಮ್ಮದಿ, ಗಾಂಧಿವಾದಿಗಳಿಗೂ ನೆಮ್ಮದಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *