

ಶಾಲೆಯಿಂದ ತಯಾರಾದ ಲಕ್ಷಾಂತರ ಬೀಜದುಂಡೆಗಳನ್ನು ನೆಲಕ್ಕೆ ಬೀರಿ ಮಾದರಿಯಾದ ಶಿಕ್ಷಕರು
ಬೀಜದುಂಡೆಗಳ ಮೂಲಕ ಸಸ್ಯೋತ್ಫಾದನೆ ಹಳೆಯ ವಿಧಾನ.
ಈ ವಿಧಾನದಿಂದ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಪ್ರತಿವರ್ಷ ಬೀಜದುಂಡೆ ತಯಾರಿಸುವ, ಅದನ್ನು ಕಾಡಿನಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ.
ಇಂಥದ್ದೇ ಕೆಲಸವನ್ನು ಸಿದ್ಧಾಪುರ(ಉ.ಕ.) ದ ಗಣಪತಿ ವಡ್ಡಿನಗದ್ದೆ ಮಾಡುತ್ತಾರೆ.
ಇವರು ಬೀಜದುಂಡೆ ತಯಾರಿಸುವುದಿಲ್ಲ, ಬದಲಾಗಿ ಕಾಡಿನ ಬೀಜಗಳನ್ನು ಸಂಗ್ರಹಿಸಿ, ಮೊಳಕೆಬರಿಸಿ, ಕಾಡು, ಸ್ಮಶಾನ,ಖಾಲಿ ಜಾಗದಲ್ಲಿ ನೆಡುತ್ತಾರೆ.
ಈ ಸೇವೆಗಾಗಿ ಗಣಪತಿಯವರಿಗೆ ಈಗಾಗಲೇ ಪ್ರಶಂಸೆ,ಸನ್ಮಾನಗಳು ನಡೆದಿವೆ.
ಇನ್ನೊಂದು ಉದಾಹರಣೆ ಶಿರಸಿಯಲ್ಲಿದೆ.
ಶಿರಸಿಯ ಬನವಾಸಿ ತಿಗಣಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಮಕ್ಕಳೇ ಲಕ್ಷಾಂತರ ಬೀಜದುಂಡೆಗಳನ್ನು ಮಾಡಿ ಕಾಡು, ನಾಡಿನಲ್ಲಿ ಬೀರಿದ್ದಾರೆ!.
ಬೇಸಿಗೆ ರಜೆ ಮತ್ತು ಇತರ ಅವಧಿಗಳಲ್ಲಿ ಮಕ್ಕಳು, ತಮ್ಮ ಮನೆಯವರು ತಿಂದ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ, ಶಾಲೆಗೆ ತಂದು ಶಾಲೆಯಲ್ಲಿ ಬೀಜದುಂಡೆಗಳನ್ನು ಮಾಡಿ ಮಣ್ಣಿಗೆ ಸೇರಿಸಿದ್ದಾರೆ. ಇಲ್ಲಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಾರುತಿ ಬನವಾಸಿ ಜಿಲ್ಲೆಯ ಸ್ಕೌಟ್ಸ್ & ಗೈಡ್ಸ್ ನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಾರೆ.
ನಿರಂತರ ಕ್ರೀಯಾಶೀಲತೆಯ ಈ ಶಿಕ್ಷಕ ಟೆಂಟ್ ಶಾಲೆ, ಕಲಿನಲಿ ಯೋಜನೆ ಸೇರಿದಂತೆ ಇಲಾಖೆಯ ಕಾರ್ಯಕ್ರಮ, ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಚುರುಕಾಗಿರುವ ಶಿಕ್ಷಕ.
ಸ್ಕೌಟ್ಸ್ & ಗೈಡ್ಸ್ ನಲ್ಲಿ ಹಿರಿಯ ಅಧಿಕಾರಿಗಳು ಹೇಳಿದ ಸಲಹೆ, ಸೂಚನೆಗಳನ್ನೇ ಚಾಲೇಂಜ್ ಆಗಿ ಸ್ವೀಕರಿಸಿದ ಮಾರುತಿ ಮಕ್ಕಳನ್ನು ಬೀಜದುಂಡೆ ತಯಾರಿಕೆ, ಬಿತ್ತನೆಗೆ ಪ್ರೋತ್ಸಾಹಿಸಿದ್ದಾರೆ.
ಸಹಶಿಕ್ಷಕರ ನೆರವು, ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರ ಸಹಕಾರ ಪಡೆದಿರುವ ಈ ಶಿಕ್ಷಕ ಈ ವರೆಗೆ ಲಕ್ಷ ಲೆಕ್ಕದಲ್ಲಿ ಬೀಜದುಂಡೆ ತಯಾರಿಸಿ, ಬಿತ್ತಿದ್ದಾರೆ.
ಶಾಲೆಯ ಪಠ್ಯ, ಪಠ್ಯೇತರ ಚಟುವಟಿಕೆಗಳೊಂದಿಗೆ ಅರಣ್ಯ ಬೆಳೆಸುವ ತಿಗಣಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪ್ರಯತ್ನಕ್ಕೆ ಇಲಾಖೆ,ಸಾರ್ವಜನಿಕರ ಸಹಕಾರ ದೊರೆತಿದೆ. ಕೆಲವೆಡೆ ಗಿಡನೆಟ್ಟರೆ ಮಾತ್ರ ಪದವಿ, ಶಿಕ್ಷಣ ಎನ್ನುವ ನಿಯಮ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ನಿಯಮ, ನೀತಿ, ಕಾನೂನು, ಆದೇಶಗಳಿಗೆ ಕಾಯದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಬೀಜದುಂಡೆ ತಯಾರಿಸಿ ಬಿತ್ತುವ ಕೆಲಸದ ಮೂಲಕ ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದಾರೆ.
‘ಶಿಕ್ಷಕ ಮಾರುತಿ ಮತ್ತವರ ಶಿಕ್ಷಕವೃಂದ ಮೊದಲಿನಿಂದಲೂ ಸಮಾಜಮುಖಿ ಕೆಲಸಗಳ ಮೂಲಕ ಉತ್ತಮ ಶೈಕ್ಷಣಿಕ ಸೇವೆ ಮಾಡುತಿದ್ದಾರೆ. ಮಾರುತಿ ಶಿಕ್ಷಕರು ತಮ್ಮ ಬಹುಮುಖಿ ವ್ಯಕ್ತಿತ್ವದಿಂದ ವಿದ್ಯಾರ್ಥಿಗಳಿಗೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬನವಾಸಿಯ ಉದ್ಯಮಿ ವಿಜಯ ಕಲಕರಡಿ ಮಾರುತಿ ಶಿಕ್ಷಕರ ಕೆಲಸ, ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ.


