
ಕಾ. ಕಾ. ಕಾಲೇಜು ಸ್ಟೈಲೆ…!
ಎಸ್.ಎಸ್. ಎಲ್.ಸಿ. ನಂತರ ಐ.ಟಿ.ಐ. ಮಾಡಬೇಕೆನ್ನುವ ನಮ್ಮ ಪಾಲಕರ ಆಸೆಯಂತೆ ಎಸ್.ಎಸ್.ಎಲ್.ಸಿ. ನಂತರ ಐ.ಟಿ.ಐ. ಗೆ ಅರ್ಜಿ ಗುಜರಾಯಿಸಿದೆ.
(ನಮ್ಮ ಸಂಬಂಧಿಯೊಬ್ಬರು ಆಗಾಗಲೇ ಐ.ಟಿ.ಐ. ಮುಗಿಸಿ ದಿಢೀರನೆ ನೌಕರಿ ಹಿಡಿದಿದ್ದರು)
ಒಟ್ಟಾರೆ, ಶ್ರಮ, ಓದು ಎಲ್ಲಾ ಯಕಶ್ಚಿತ್ ನೌಕರಿ, ದುಡ್ಡು ಮಾಡಿ ಬದುಕು ಸಾಗಿಸಲುಎಂದುಕೊಂಡಿದ್ದ ನನಗೆ ಈ ಐ.ಟಿ.ಐ. ಮಾಡಿ ಮೆಕ್ಯಾನಿಕ್ ಆಗುವುದು, ಟಿ.ಸಿ.ಎಚ್. ಮಾಡಿ ಕನ್ನಡ ಶಾಲೆ ಮಾಸ್ತರ್ ಆಗುವುದು ಇವ್ಯಾವೂ ನನ್ನಿಷ್ಟದ ಆಸೆಗಳೋ, ಗುರಿಗಳಾಗಿರಲಿಲ್ಲ!.
ಆದರೆ, ಅಂದಿನ ಕಾಲಕ್ಕೆ ತಕ್ಕಂತೆ ಐ.ಟಿ.ಐ. ಅಥವಾ ಟಿ.ಸಿ.ಎಚ್. ಮಾಡಿ, ಆ ಕಾಲದ ಅನಿವಾರ್ಯತೆ ಪೂರೈಸಿಕೊಂಡು ಜೀವನಪೂರ್ತಿ ಸರ್ಕಾರಿ, ಅರೆಸರ್ಕಾರಿ, ಖಾಸಗಿ ಗುಲಾಮಗಿರಿ ಮಾಡುವ ಆಸೆಯಂತೂ ನನ್ನಲ್ಲಿರಲಿಲ್ಲ. ಏನು ಮಾಡೋದು?. ಸುಲಭಕ್ಕೆ ಸಿಗುವ ನೌಕರಿ ಬಗ್ಗೆ ಅಸಡ್ಡೆ ಮಾಡುವ ನನ್ನನ್ನು ನಮ್ಮ ಸ್ನೇಹಿತರು, ಕುಟುಂಬ, ಊರು ಅಷ್ಟೇ ಏಕೆ ಜಗತ್ತೇ ಕ್ಷಮಿಸುವ, ವಿನಾಯತಿ ನೀಡಿ ನನ್ನ ಮೂಗಿನ (ಮೂಗಿನ ನೇರಕ್ಕೆನಡೆಯುವುದೆಂದರೇನು ಎನ್ನುವುದೇ ಗೊತ್ತಿಲ್ಲ!) ನೇರಕ್ಕೆ ಬದುಕಲು ಬಿಡದ ‘ಖಳನಾಯಕ’ ಸಮಾಜ ಜಗತ್ತು ನನ್ನೆದುರಿಗೆ ಬಂಡೆಯಂತೆ ಬಿದ್ದುಕೊಂಡಿತ್ತು.
ಒದೆಯುವ ಮನಸ್ಸಿದೆ. ಆದರೆ, ತಾಕತ್ತು ಗಟ್ಟಿತನವಿಲ್ಲ. ಈ ಸಿದ್ಧಾಂತ, ವೇದಾಂತದ ಕಥೆ ಹಾಗಿರಲಿ, ಕಾಲೇಜ್ ಕುತೂಹಲಕ್ಕೆ ಕಾರಣ ಹೇಳಬೇಕು. ಈ ಹಿಂದೆ ನಾನು ನನ್ನ ಸ್ನೇಹಿತರೆಲ್ಲಾ ಕಾರವಾರದಲ್ಲೇ ಹೈಸ್ಕೂಲು ಮುಗಿಸಿದ್ದರಿಂದ ನನ್ನ ಹೈಸ್ಕೂಲು ಪ್ರಾರಂಭದ ದಿನಗಳಲ್ಲಿ ನಮ್ಮೂರಿನಿಂದ ಕಾರವಾರಕ್ಕೆ ಬಿ.ಇ.ಡಿ. ಮಾಡಲು, ಕಾಲೇಜ್ ಕಲಿಯಲು ಬರುತ್ತಿದ್ದವರ ವಲಸೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ನಾನಿನ್ನೂ ಎಂಟರ ಚೆಡ್ಡಿಪೋರ, ನನ್ನೆದುರು ನಮ್ಮೂರಿನ ಲೋಕೇಶಣ್ಣ (ಎಲ್.ಕೆ.) ನಮ್ಮ ಮಾವ ಬಿ.ವಿ, ಎಸ್.ಕೆ.ನಾಯ್ಕ, ಎಮ್.ಎನ್.ನಾಯ್ಕ ಬೇಡ್ಕಣಿ, ದಯಾನಂದ ಹೆಮ್ಮನಬೈಲು ಗಣೇಶ್ ನಾಯ್ಕ ದೊಡ್ಮನೆ ಇವರೆಲ್ಲಾ ಇರುತ್ತಿದ್ದರು. ನಾನು ಶಿವಾಜಿ ಹೈಸ್ಕೂಲಿಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ, ಹೈಸ್ಕೂಲ್ ಆವರಣದಲ್ಲಿ ಇವರನ್ನೆಲ್ಲಾ ನೋಡಿದರೆ ವಿದೇಶದಲ್ಲಿದ್ದವರಿಗೆ ತಮ್ಮೂರಿನವರನ್ನು ಅಲ್ಲಿಯೇ ಕಂಡಾಗ ಆಗುವಷ್ಟು ಖುಷಿ,ಸಂಭ್ರಮಗಳಾಗುತ್ತಿದ್ದವು.
ನಮ್ಮ ಬಿ.ವಿ. ಮಾವನೊಂದಿಗೆ ಇವರೆಲ್ಲಾ ನನ್ನನ್ನು ಅಕ್ಕರೆಯಿಂದ ಕಂಡು, ಹೆಸರು ಕಾಳಿನ ರುಚಿಯಾದ ಪಾಯಸ ಕೊಟ್ಟು ಸಹಕರಿಸುವ ಮೂಲಕ ಪ್ರೀತಿ, ವಾತ್ಸಲ್ಯ ವ್ಯಕ್ತಪಡಿಸುತ್ತಿದ್ದರು. ಕೆಲವು ದಿನ ಈ ಹಿರಿಯರಿಂದ ನನ್ನೊಂದಿಗೆ ನನ್ನ ಸ್ನೇಹಿತರಿಗೂ ವಿಶೇಷ ಊಟ, ಚಾ. ತಿಂಡಿ ಸೇವನೆಯ ಉಧಾರತೆಯ ಫಲ ಸಿಗುತ್ತಿತ್ತು. ಇವರೆಲ್ಲರ ಪ್ರೀತಿ ವಿಶ್ವಾಸಗಳು ನಮ್ಮನ್ನು ಮೂಕರನ್ನಾಗಿಸಿ ನಾವು ಅವರಿಂದ ಕೇಳಿ ತಿಳಿದುಕೊಳ್ಳುವ ಭವಿಷ್ಯದ ಮಾರ್ಗದರ್ಶನದ ಸುಲಭ ಅವಕಾಶಗಳನ್ನೂ ಕಳೆದುಕೊಂಡಿದ್ದಿದೆ. ಬಿ.ಎಡ್. ಗೆಂದು ಒಂದೊಂದೇ ವರ್ಷ ಕಾರವಾರದಲ್ಲಿರುತ್ತಿದ್ದ ನಮ್ಮೂರಿನ ಹಿರಿಯರು ನಮ್ಮನ್ನು ಬಿಟ್ಟು ಊರು ಸೇರಿಕೊಳ್ಳುತ್ತಿದ್ದರು. ಈ ಹಿರಿಯಹಿತೈಸಿ, ಸ್ನೇಹಿತರಲ್ಲಿ ಗಣೇಶ್ ನಾಯ್ಕ ದೊಡ್ಮನೆ, ದಯಾನಂದ ನಾಯ್ಕ, ಹೆಮ್ಮನಬೈಲ್. ಸೇರಿದಂತೆ ಮತ್ತೊಂದೆರಡು ಜನ ನಮ್ಮ ಬಗ್ಗೆ ವಿಶೇಷ ಕಾಳಜಿ, ಮುತುವರ್ಜಿವಹಿಸಿ ಸಲಹೆ-ಮಾರ್ಗದರ್ಶನ ಮಾಡಿದ್ದನ್ನು ನಾನೆಂದೂ ಮರೆಯಲಾರೆ.
ಆಯ್ತು, ಈ ಪ್ರೀತಿ-ವಿಶ್ವಾಸಗಳೊಂದಿಗೆ ಕಾಲೇಜ್ ಲೈಫ್, ಕಾಲೇಜ್ ಹಾಸ್ಟೇಲ್ ಲೈಫ್ ಬಗೆಗೆಲ್ಲಾ ವಿಶಿಷ್ಟ. ವಿಶೇಷ ಎನ್ನಬಹುದಾದ ಅನೂಹ್ಯ ಕುತೂಹಲ ಇಟ್ಟುಕೊಂಡ ನನ್ನ ಪಯಣ, ಶಿವಾಜಿ ಹೈಸ್ಕೂಲ್ ಬಾಡದಿಂದ ಗ್ಯಾಸ್ ಕಾಲೇಜ್‍ಗೋ? ಕಾಜುಭಾಗದ ಐ.ಟಿ.ಐ ಕಾಲೇಜ್‍ಗೋ ಅಥವಾ…? ಎಂದೆಲ್ಲಾ ಸಂದಿಗ್ಧತೆಯಲ್ಲಿದ್ದ ಸಮಯವದು. ಕಾಲೇಜ್, ವಿಷಯ ಆಯ್ಕೆ ಯಾವುದಾದರೇನು(!) ಹಾಸ್ಟೇಲಂತೂ ಅನಿವಾರ್ಯವಾಗಿತ್ತು.
ಹಾಸ್ಟೇಲ್‍ನ ಸಂಬಂಧ-ಸಂಪರ್ಕ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಎಲ್ಲವೂ ಒಂಥರಾ ಸಂದಿಗ್ಧ ತಳಮಳದಿಂದಲೇ ಕೂಡಿತ್ತು. ಆದರೆ, ಆ ಅವಧಿಯಲ್ಲಿ ಸೋಮಲಿಂಗ, ಸಂತೋಷ ಜೊತೆಗೆ ನನಗಿದ್ದ ವಿಶೇಷ ಅನಕೂಲತೆಯೆಂದರೆ, ನನಗೆ ಆಗಲೇ ಕೊಂಕಣಿ, ಹಿಂದಿ ಬರತೊಡಗಿದ್ದವು. ಇಂಗ್ಲೀಷ್ ನನ್ನ ಫೆವರೇಟ್. ಓದಿ, ಬರೆದು ಬಟ್ಲರ್‍ನಲ್ಲಿ ಮಾತನಾಡಿ, ನಾನೂ ತ್ರಿಬಾಷಾವಿಶಾರದ ಎಂದುಕೊಳ್ಳಲು ಅಡ್ಡಿಇರಲಿಲ್ಲ. ಜೊತೆಗೆ ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ ಕೊಂಕಣಿಗಳೆಲ್ಲಾ ಸೇರಿ ಮೂರು ಭಾಷೆಗಳಲ್ಲಿ ‘ಡೋಂಟ್‍ವರಿ’ಎನ್ನುವಂತಿದ್ದೆ. ಆದರೂ ಕೀಳರಿಮೆ ಕಾಡುತ್ತಿತ್ತು. ಈ ಕೀಳರಿಮೆ ಆನುವಂಶೀಯವೋ? ಜಾತಿ ವಿಶೇಷವೋ ನನ್ನ ವೈಯಕ್ತಿಕ ನ್ಯೂನ್ಯತೆಯೋ? ಸಾಮಾಜಿಕಶಾಪವೋ? ಒಂದೂ ಅರ್ಥವಾಗುತ್ತಿರಲಿಲ್ಲ. ಅಷ್ಟೊತ್ತಿಗಾಗಲೇ ಕೃಷ್ಣಮೂರ್ತಿ ಕಾನಳ್ಳಿ ಎಸ್ಕೇಫ್ ಆಗಿ, ಕಾರವಾರದ ಗಣೇಶ್ ಚತುರ್ಥಿ ಸಮಯಕ್ಕೆ ಬಂದು ಮಾತನಾಡಿಸಿ ತೆರಳಿದ್ದ.
ಒಮ್ಮೆ ಗೋವಾ ಮತ್ತೊಮ್ಮೆ ಮೈಸೂರು, ಹೀಗೆ ಎರಡ್ಮೂರು ಬಾರಿ ಸಂಧಿಸಿದಾಗಲೂ ತಾನು ಆರಾಂ ಆಗಿ ನಾನಾ ಊರುಗಳಲ್ಲಿರುವುದಾಗಿ ತಿಳಿಸಿದ್ದ. ನಾನು ನನ್ನಲಿದ್ದ ನೂರರ ಲೆಕ್ಕದ ದುಡ್ಡನ್ನು ಭದ್ರವಾಗಿಟ್ಟುಕೊಳ್ಳುತ್ತಿದ್ದ ಬಗ್ಗೆ ಕಿಚಾಯಿಸಿ, ಕಿಸಕ್ಕನೆ ನಕ್ಕು, ತನ್ನ ಬಿಂದಾಸ್ ಸ್ವಭಾವವನ್ನು ಪರಿಚಯಿಸಿದ್ದ. ಮಹೇಂದ್ರ ಸೂರ್ಯರೆಲ್ಲಾ ಎಸ್ಕೇಪ್ ಆದಂತಿದ್ದರು.
ಪಿಲಾಯಿ ಯ್ಯಾನೆ ವೆಗಬಾಂಡ್ ಸಂತೋಷ, ಸೋಮಲಿಂಗ ಮೋಹನ ಶಿರಸಿಕರ್ ಸೇರಿದಂತೆ ಕೆಲವರೆಲ್ಲಾ ಗ್ಯಾಸ್ ಕಾಲೇಜಿಗೆ ಎಡ್ಮಿಟ್ ಆಗಿ ಕ್ಲಾಸಿಗೆ ಹೋಗಬೇಕು, ಆದರೆ, ನನಗೆ ಐ.ಟಿ.ಐ. ಗಾಗಿ ಕಾಜುಭಾಗ್ ಕಾಲೇಜಿಗೆ ಹೋಗುವುದು, ಹಾಸ್ಟೇಲ್ ಎಡ್ಮಿಷನ್‍ಗಾಗಿ ತಾ.ಪಂ. ಕಛೇರಿಯಿಂದ ಜಿಲ್ಲಾ ಹಿಂದುಳಿದ ವರ್ಗಗಳ ಕಛೇರಿಗೆ ಸುತ್ತಾಡುವ ಅನಿವಾರ್ಯತೆ ಉಂಟಾಯಿತು. ವಾಸ್ತವವಾಗಿ ನಮಗೆಲ್ಲಾ ಹಾಸ್ಟೇಲ್‍ಸೀಟ್ ಗ್ಯಾರಂಟಿ ಎಂದುಕೊಂಡಿದ್ದ ಸಮಯವದು. ಆದರೆ, ಸ್ಕೋರ್, ಮೀಸಲಾತಿ ವಿಚಾರಗಳಿಂದಾಗಿ ನಮ್ಮ ಸೋಮಲಿಂಗ, ಸಂತೋಷ ಸೇರಿದಂತೆ ಅನೇಕರಿಗೆ ಹಾಸ್ಟೇಲ್ ಸೀಟ್ ಸಿಕ್ಕಿತು. ಆದರೆ, ನಮ್ಮ ಬಳಗದಲ್ಲಿ ನನಗೆ ಮತ್ತು ಅದೇ ವರ್ಷ ನನ್ನ ತರಗತಿಗೆ ಬಂದ ಗಣೇಶ್ ಕಾನಗೋಡುಗೆ ಹಾಸ್ಟೇಲ್ ವ್ಯವಸ್ಥೆ ಆಗಿರಲಿಲ್ಲ. ನನ್ನ ಪರಿಚಯಸ್ಥ ಸ್ನೇಹಿತರಿದ್ದುದರಿಂದ ನಾನು ಅವರೊಂದಿಗೆ ಉಳಿದುಕೊಂಡು ಹೆಚ್ಚುವರಿ ಅನುಕೂಲತೆ ಪಡೆಯುತ್ತಿದ್ದೆ. ಪರಿಚಿತ ಸ್ನೇಹಿತರು, ಅಧಿಕಾರಿಗಳು ಅಡಿಗೆಯವರು ಎಲ್ಲರೂ ಇದ್ದರೂ, ನಾನೂ ಮುಜುಗುರದಿಂದಲೇ
ಹೆಚ್ಚುವರಿ ವಿಶೇಷ ಅನುಮತಿಯಿಂದ ಹಾಸ್ಟೇಲ್‍ನಲ್ಲೇ ಉಳಿಯುತಿದ್ದೆ. ನಮ್ಮ ಸಂಬಂಧಿ ಗಣೇಶ್ ನಾಯ್ಕ ಕಾನಗೋಡು, ಅವರ ಸಂಬಂಧಿ ನಂದನಗದ್ದಾದಲ್ಲಿದ್ದ ಮೂಲ ಹೊಸೂರಿನ ಹನುಮಂತಣ್ಣನವರ ಮನೆಯಲ್ಲಿ ಉಳಿಯುತ್ತಿದ್ದ. ಕಾರವಾರಕ್ಕೆ ಬರುವ ಮೊದಲು ನಮ್ಮ ಸಂಬಂಧಿಯೆಂದೂ ಗೊತ್ತಿರದಿದ್ದ ಗಣೇಶ್ ವಿಚಿತ್ರವಾಗಿ ಪರಿಚಯವಾಗಲು ನಮ್ಮ ಸಮಾನಮನಸ್ಕತೆ ಕಾರಣ. ನಮ್ಮ ಗಣೇಶನ ಅಣ್ಣ ಎಮ್.ಎಚ್. ಆಗ ಬಿ.ಎ .ಅಂತಿಮ ವರ್ಷ ಓದುತ್ತಿದ್ದ. ಮೊದಲೇ ಕುಳ್ಳಗೆ, ಕೃಷರು ಹಾಸ್ಟೇಲ್ ಸೀಟ್ ಗಿಟ್ಟಿಸಿಕೊಳ್ಳದ ನಾವಿಬ್ಬರೂ ಒಮ್ಮೆ ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಕಛೇರಿ ಅಲೆಯುತ್ತಾ ಅವರಿವರನ್ನು ಪರಿಚಯಿಸಿಕೊಳ್ಳುತ್ತಾ ಹಾಸ್ಟೇಲ್ ಸೀಟಿಗಾಗಿ ಅಲೆಯುವ ಅರೆ ಅಲೆಮಾರಿಗಳಾಗಿದ್ದೆವು.
(ಕನ್ನೇಶ್, ಹಾಸ್ಟೆಲ್ ಲೈಫ್ ನಿಂದ)
