ಬಹುಮುಖಿ
ಆಯ್.ಕೆ. ಸುಂಗೋಳಿಮನೆ
ಸುತ್ತಮುತ್ತ ಅಡಿಕೆ ತೋಟ,ಎಲ್ಲೆಲ್ಲೂ ಬೆಟ್ಟ ಬಸ್ ಹೋಗದ ಕುಗ್ರಾಮ, ಅಲ್ಲಿ ಒಂದು ಮನೆ ವಿದ್ಯಾವಂತರ ಕುಟುಂಬ, ವೃತ್ತಿ ಕೃಷಿ, ಹವ್ಯಾಸ ನಾಟಕ,ಮೂರ್ತಿತಯಾರಿ, ರಾಜಕಾರಣ ಇತ್ಯಾದಿ…..
ಇಷ್ಟು ಹೇಳಿದರೆ ಸುಂಗೋಳಿಮನೆ ಆಯ್.ಕೆ.ನಾಯ್ಕರನ್ನು ಪರಿಚಯಿಸಿದಂತೆ. ಆದರೆ, ಅವರು ಅರ್ಥವಾಗಬೇಕೆಂದರೆ ಅವರ ಕಲಾಜೀವನ ಪರಿಚಯವಾಗಬೇಕು. ಮೂರ್ನಾಲ್ಕುಮಕ್ಕಳ ತುಂಬು ಕುಟುಂಬದ ಹಿರಿಯಣ್ಣ ಈಶ್ವರ, ಪ್ರಾಥಮಿಕ ಶಾಲೆಯಲ್ಲಿ ರಾಮನಮೂರ್ತಿ
ಮಾಡಲು ಹೋಗಿ ಭಿಕ್ಷಾಂದೇಹಿ ರಾಮನನ್ನು ಮೂಡಿಸಿದ್ದರಂತೆ! ಆಗ ನಕ್ಕ ಸ್ನೇಹಿತರು, ಸಂಬಂಧಿಗಳಿಗೆ ತಾನೇನು ಎಂದು ತೋರಿಸಬೇಕೆಂದು ಮಣ್ಣಿನ ಮೂರ್ತಿ ತಯಾರಿಸತೊಡಗಿದರಂತೆ. ಶಿಕ್ಷಕರೊಬ್ಬರು ಈ ಬಾಲಕ ಈಶ್ವರನ ಆಸಕ್ತಿ ಗಮನಿಸಿ ಸರಸ್ವತಿ ಮೂರ್ತಿ ತಯಾರಿಸುವ ಜವಾಬ್ಧಾರಿ ವಹಿಸಿದರಂತೆ. ಅದು ಪಕ್ಕಾ ಆದ ಮೇಲೆ ಗಣಪತಿ ಮೂರ್ತಿ ಮಾಡಿ ಸೈ ಎನಿಸಿಕೊಂಡ ಈಶ್ವರ ಮುಂದೆ ಕಲೆಯಿಂದ ಕಲಾವಿದರಾಗಲು ನೀನಾಸಂ ಸೇರಿದರು. ನಂತರ ರಂಗಸೌಗಂಧ ಇತ್ಯಾದಿ ಓಡಾಟ, ಒಡನಾಟ. ಜೊತೆಗೆ ರಾಜಕೀಯ, ಧಾರ್ಮಿಕ,ಸಾಮಾಜಿಕ ಇತ್ಯಾದಿ….ಕೆಲಸ.
ಇಷ್ಟೆಲ್ಲವನ್ನೂ ಮಾಡುತಿದ್ದವರು ಸುಂಗೋಳಿಮನೆಯ ಈಶ್ವರ ನಾಯ್ಕ ಆಯ್.ಕೆ.ಸುಂಗೋಳಿಮನೆ ಎಂದು ಪರಿಚಿತರಾಗಿರುವ ಇವರ ಬಗ್ಗೆ ಅನೇಕರಿಗೆ ಪರಿಚಯವಿರಲು ಕಾರಣ ಇವರ ರಾಜಕೀಯ, ಸಾಮಾಜಿಕ, ರಂಗಭೂಮಿಯ ಸೇವೆ. ಆದರೆ ಇವುಗಳಿಗಿಂತ ಹೆಚ್ಚು ಇವರ ಶೃದ್ಧೆ, ಕಲಾವಂತಿಕೆ ಕಾಣುವುದು ಮೂರ್ತಿ ರಚನೆ ಮತ್ತು ಕೃಷಿ ಕೆಲಸದಲ್ಲಿ. ವೃತ್ತಿಯಿಂದ ಕೃಷಿಕರಾಗಿರುವ ಆಯ್.ಕೆ. ಪೃವೃತ್ತಿಯಿಂದ ಮಣ್ಣಿನಮೂರ್ತಿ ನಿರ್ಮಾಪಕರು, ಪ್ರತಿವರ್ಷ 50 ಕ್ಕೂ ಹೆಚ್ಚು ನಾನಾ ಮಣ್ಣಿನ ಮೂರ್ತಿ ಮಾಡುವ ಇವರು ಮಾಡುವ ಗಣಪತಿ ವಿಗೃಹಗಳಿಗೆ ಬೇಡಿಕೆ ಹೆಚ್ಚು.
ಕುಟುಂಬ, ಸ್ನೇಹಿತರು ಮಕ್ಕಳ ಸಹಕಾರದಿಂದ ಮೂರ್ತಿ ತಯಾರಕರಾಗಿ ಹೆಸರುವಾಸಿಯಾಗಿರುವ ಇವರ ಗಣಪತಿ ಮೂರ್ತಿಗಳಿಗೆ ತಾಲೂಕಿನಾದ್ಯಂತ ಬೇಡಿಕೆ. ಹೀಗೆ ಕಲಾವಿದ ಚಿತ್ರ, ಮೂರ್ತಿ, ನಾಟಕ, ಸಮಾಜಸೇವೆ, ಸೇರಿದಂತೆ ನಾನಾಮಜಲುಗಳಲ್ಲಿ ಗುರುತಿಸಿಕೊಂಡರೂ ಅವರ ಬದ್ಧತೆ,ಸಾಮಾಜಿಕ ಕಾಳಜಿ, ಪಕ್ಷ, ಸೈದ್ಧಾಂತಿಕ ನಿಷ್ಠೆಗಳಿಗೆ ಅವರಿಗೆ ಅವರೇ ಸಾಟಿ.
ಗ್ರಾಮೀಣ ಜೀವನದ ತುಂಬು ಅವಿಭಕ್ತ ಕುಟುಂಬದ ಬಹುಮುಖಿ ಪ್ರತಿಭೆಯಾಗಿರುವ ಈಶ್ವರ ನಾಯ್ಕ ಸಂಗೋಳಿಮನೆ ಎಲ್ಲಾ ಪ್ರತಿಭೆ,ಸಾಮಥ್ರ್ಯಗಳಿದ್ದೂ ಎಲೆಮರೆಯ ಕಾಯಿ. ಸಮಾಜ, ಸಂಘಟನೆಗಳು ಅವರ ಬಹುಮುಖಿ ಬದುಕಿಗೆ ಗೌರವಿಸದಿದ್ದರೆ ಅನ್ಯಾಯ ಮಾಡಿದಂತೆಯೇ ಸರಿ.