ನಾವಿನ್ನು ಸಮಾಜಮುಖಿ ದಿನಪತ್ರಿಕೆ ರೂಪಿಸುವತ್ತ ಲಕ್ಷವಹಿಸಬೇ
ಕಿದೆ. ನಮ್ಮ ಬದುಕಿನ ಹೋರಾಟಕ್ಕೆ ಈಗ 15 ವರ್ಷಗಳ ಪ್ರಾಯವಾದರೂ ಸಮಾಜಮುಖಿ ಚಟುವಟಿಕೆಗಳಿಗೆ ಒಂದು ಡಜನ್ ವರ್ಷಗಳು ಎಂದು ದಾಖಲಿಸಲೇನೂ ಅಡ್ಡಿಇಲ್ಲ.
ಈ ಒಂದು ಡಜನ್ ವರ್ಷಗಳಲ್ಲಿ ಕೋರ್ಟಿಗೆ ಅಲೆಸಿದವರೆಷ್ಟು ಜನ? ಕೊಂಕು ಕುಹಕ, ಟೀಕೆ, ದೂಷಣೆ, ವಿಮರ್ಶೆ ಮಾಡಿದ ಜನರೆಷ್ಟು? ಅವರೆಲ್ಲಾ ಹಾಗಾಗೇ ಹಾಳಾಗುತಿದ್ದಾರೆ ಪಾಪ! ಆದರೆ, ಸಮಾಜಮುಖಿ ಅಮೋಘ ಕಷ್ಟದ 9 ವರ್ಷಗಳನ್ನು ದಾಟಿ ಬಂದಿದೆ ಮುಂದಿನ ವರ್ಷವೇ ದಶಮಾನೋತ್ಸವ!
ಎಷ್ಟು ನೊಂದು-ನವೆಯಬೇಕಾಯಿತಲ್ಲ ಎನ್ನುವ ಸಂಕಟ ನಮಗಿಲ್ಲ. ಆಸೆ ಬುರುಕ ಲೋಭಿ ಲಾಭ ಪಿಪಾಸುಗಳ ಎದುರು ಆನೆ ನಡೆದಿದ್ದೇ ಹಾದಿ ಎನ್ನುವಂತೆ ಸಮಾಜಮುಖಿ ಸಾಗಿದ ಖುಷಿಯಿದೆ. ಆದರೆ, ಕೆಲವರು ಬೇಡಬೇಡವೆಂದರೂ ಆಗಾಗ ಅನವರತ ಎಂಬುವಂತೆ ನೆನಪಾಗುತ್ತಾರೆ
ಅವರಲ್ಲಿ ವಿಡಂಬಾರಿ, ಎಚ್.ಗಣಪತಿಯಪ್ಪ ಬಿ.ಟಿ.ನಾಯ್ಕ ಭಾಶಿ ಸೇರಿದಂತೆ ಕೆಲವರು.
ವಿಡಂಬಾರಿ ನಮ್ಮ ಸೈದ್ಧಾಂತಿಕ ಕಾರಣಗಳಿಂದಾಗಿ ಹತ್ತಿರವಾದವರು, ಆಗಾಗ ಬರೆಯುತ್ತಾರೆ. ಮಾತನಾಡುತ್ತಾರೆ. ಪ್ರತಿವರ್ಷ ತಾವೇ ನೆನಪಿಸಿಕೊಂಡು ಚಂದಾ ಮುಟ್ಟಿಸುತ್ತಾರೆ.
ವಿಶೇಷವೆಂದರೆ ಚಂದಾಹಣ ತಲುಪಿಸಲು ಅವರಿಗೆ ತೊಂದರೆ,ತಾಪತ್ರ್ಯಯ ಆಗದಿರುವುದು. ಶಿರಸಿಯಲ್ಲಿವರದಿಗಾರನಾಗಿದ್ದಾಗಿನಿಂದಲೂ ಬಿ.ಟಿ. ನಾಯ್ಕ ಭಾಶಿ ಪರಿಚಿತರಾಗಿದ್ದರು, ಅವರದೂ ತುಂಬು ಕುಟುಂಬ ಪ್ರಾಮಾಣಿಕ ರಾಜಕೀಯ ಜೀವನ ಸವೆಸಿದ ಅವರಲ್ಲಿ ವಿಶೇಷ ಎನ್ನಬಹುದಾದ ನಿಷ್ಠೂರತೆ, ಕಾಳಜಿ, ಬದ್ಧತೆಗಳಿದ್ದವು. ತಮಗಾಗದವರ ಬಗ್ಗೆ ಬೇಡ ಎನ್ನುವಷ್ಟು ಕಠೋರವಾಗಿ ಮಾತಾನಾಡಿ ಬಿಡುತಿದ್ದರು. ಅವರಲ್ಲಿ ಗುಣಗ್ರಾಹಿತ್ವವಿತ್ತು, ಶಾಂತರಾಮ ಹೆಗಡೆ, ಭೀಮಣ್ಣ ನಾಯ್ಕ, ದೇವರಾಯನಾಯ್ಕ ಸೇರಿದಂತೆ ಕೆಲವರ ಬಗ್ಗೆ ಒಂಥರಾ ಪ್ರೀತಿ ಇಟ್ಟುಕೊಂಡಿದ್ದ ಬಿ.ಟಿ. ನಾಯ್ಕರು ಶಿಕ್ಷಕರಾಗಿ ಸಮಾಜಸೇವಕರಾಗಿ ಸಮಾಜದ ಮುಖಂಡರಾಗಿ ಅನೇಕಮಿತಿಗಳೊಂದಿಗೆ ಸಂತೃಪ್ತರಂತಿದ್ದರು.
ಅವರಿಗೆ ನಿರಂತರವಾಗಿ ನಮ್ಮ ಪತ್ರಿಕೆ ತಲುಪುತಿತ್ತು ಸಿಕ್ಕಾಗ, ಕಂಡಾಗಲೆಲ್ಲಾ ಸಮಾಜದ ಓರೆ-ಕೋರೆ ತಪ್ಪು-ಒಪ್ಪುಗಳನ್ನು ಖಡಾಖಂಡಿತವಾಗಿ ಹೇಳುವ, ‘ನಿಮ್ಮ ಪತ್ರಿಕೆ ಬೆಳೆಯಬೇಕು.ಒಂದುಬಾರಿ ನಾವೆಲ್ಲಾ ಪ್ರವಾಸ ಮಾಡಿ ಚಂದಾ ಎತ್ತುವಾ ನಾನೇ ಕೆಲವರೊಂದಿಗೆ ಮಾತನಾಡಿ ಈ ಬಗ್ಗೆ ಯೋಜನೆ ರೂಪಿಸುತ್ತೇನೆ’ ಎನ್ನುತ್ತಲೇ ಒಂದು ಕೆಟ್ಟದಿನ ನಮ್ಮಿಂದ ದೂರಾಗಿ ಹೋಗಿಬಿಟ್ಟರು.
ಹೀಗೆ ಅಕಾಲಿಕವಾಗಿ ಹೋಗುವ ಮುನ್ನ ಅನಾರೋಗ್ಯದಲ್ಲಿದ್ದಾಗಲೇ ‘ಕನ್ನೇಶ್ ನಾನಂದುಕೊಂಡಂತೆ ಮಾಡಲಾಗಲಿಲ್ಲ, ಬಹುಶಃನಿಮ್ಮ ಚಂದಾ ಕೂಡಾ ಕೊಡಲಿಲ್ಲ’ ಎನ್ನುತ್ತಲೇ ಹತ್ತಿರಕ್ಕೆ ಕರೆದು ಸಾವಿರದ ಒಂದು ನೋಟನ್ನುಗಪ್‍ಚುಪ್ ಎನ್ನುವಂತೆ ನೀಡಿದರು. ಮತ್ತು ಈ ಕಾಲಕ್ಕೆ ನಿಮ್ಮಂಥವರೊಬ್ಬರಾದರೂ ಇದೀರಲ್ಲಾ ಎಂದುಬಿಟ್ಟರು,
……ಇನ್ನು ಗಣಪತಿಯಪ್ಪ.
ಮೊಟ್ಟ ಮೊದಲಿಗೆ ಗುರುಗಳಂತಿರುವ ಗಂಗಾಧರ ಹಿರೇಗುತ್ತಿ ಲೋಹಿಯಾ ಮತ್ತು ಲೋಹಿಯಾವಾದದ ಬಗ್ಗೆ ನನ್ನ ಕಿವಿಗೆ ಕೇಳಿಸಿದ್ದರು.
ಲೋಹಿಯಾ, ಲೋಹಿಯಾವಾದ ಎನ್ನುತ್ತಿದ್ದಾಗ ಇದೇನು ಎಂದು ತುಸುನಾಚಿಕೆ ಇಂದೆಂಬಂತೆ ತಲೆತಗ್ಗಿಸಿದ್ದೆ. ಆಗ ನನಗೆ ಇಪ್ಪತ್ತೆರಡೂ ಆಗಿರಲಿಲ್ಲ. ಲೋಹಿಯಾ ಬಗ್ಗೆ ಯೋಚಿಸಿ ಹುಡುಕಾಟ ಪ್ರಾರಂಭಿಸಿದೆ. ಪುಸ್ತಕದಲ್ಲಿ ಲೋಹಿಯಾ ಸಮಾಜವಾದ ಲೋಹಿಯಾವಾದಗಳೆಲ್ಲಾ ಅಸ್ಪಷ್ಟವಾಗಿ ಗೋಚರಿಸ ತೊಡಗಿದ್ದಾಗಲೇ ಕಾಗೋಡಿನ ರೈತ ಹೋರಾಟ ಆ ಬಗ್ಗೆ ತಿಳುವಳಿಕೆ ಇದ್ದವರೆಲ್ಲಾ ಪರಿಚಯವಾದರು.
ಕಾಗೋಡು, ಸಾಗರಗಳನ್ನೆಲ್ಲಾ ಸುತ್ತಿ ಮಾಹಿತಿ ಕಲೆಹಾಕುತಿದ್ದಾಗಲೇ ಗಣಪತಿಯಪ್ಪ ಪರಿಚಯವಾದರು ಅವರೊಂದಿಗೆ ಸ್ವಾಮಿರಾವ್ ಮನೆಯವರೆಗೆ ಅಶೋಕಮೂರ್ತಿ ತೀನಾರೊಂದಿಗೆ ಹೋಗಿದ್ದೆ. ಗಣಪತಿಯಪ್ಪ ಪರಿಚಯವಾಗಿ ಹತ್ತಿರವಾದರು. ಸಿಕ್ಕಾಗ, ಪತ್ರಿಕೆ ಓದಿ ಕರೆಮಾಡಿದಾಗಲೆಲ್ಲಾ ಗಣಪತಿಯಪ್ಪ ನನಗೆ ಧೈರ್ಯ ತುಂಬುತಿದ್ದರು.
ಈ ಕಾಲದಲ್ಲಿ ಹೀಗೆಲ್ಲಾ ಸಮಾಜವಾದ, ಸಮಾನತೆ, ಪ್ರಾಮಾಣಿಕತೆ ಎಂದೆಲ್ಲಾ ಕೆಲಸ ಮಾಡುತಿದ್ದೀರಲ್ಲಾ ನಿಮ್ಮಂಥವರು ಬೇಕು ಈ ಸಮಾಜಕ್ಕೆ ಎಂದೆಲ್ಲಾ ಬೆನ್ನುತಟ್ಟುತಿದ್ದರು, ಕೆಲವು ವರ್ಷಗಳಿಂದ ಅವರಿಗೆ ನಮ್ಮ ಸಮಾಜಮುಖಿ ತಲುಪುತ್ತಿತ್ತು. ಸಾಗರ ಶಿವಮೊಗ್ಗ ಕಡೆ ಹೋದಾಗಲೆಲ್ಲಾ ನಾನೂ ಆಗೀಗ ಅವರನ್ನು ಮಾತಾಡಿಸಿಕೊಂಡು ಬರುತಿದ್ದೆ. ಒಂದಿನ ಅಶೋಕಮೂರ್ತಿಯವರೊಂದಿಗೆ ಗಣಪತಿಯಪ್ಪನವರು ಮನೆಗೆ ಹೋದಾಗ ಆ ಹಿರಿಯ ಜೀವ ಏನೋ ಚಡಪಡಿಸುತ್ತಿರುವಂತೆ ಕಂಡಿತು. ಪ್ರಯತ್ನಪೂರ್ವಕವಾಗಿ ಅಶೋಕಮೂರ್ತಿಯವರೊಂದಿಗೆ ತಮ್ಮ ಮಗನನ್ನೂ ಹೊರಕ್ಕೆ ಕಳುಹಿಸಿ ಬಿಗಿಯಾಗಿ ನನ್ನ ಕೈ ಹಿಡಿದುಕೊಂಡವರು ಭಾಳಾ ಕಷ್ಟ ಅಲ್ಲ ಪತ್ರಿಕೆ ನಡೆಸೋದು ಎನ್ನುತ್ತಲೇ ಇತ್ತಿಂದತ್ತ ನೋಡಿ ಹುಶಾರಿಯಿಂದ ಸಾವಿರದ ಒಂದು ನೋಟನ್ನು ನನ್ನ ಕೈಲಿಟ್ಟು ‘ತೋರ್ಸಬೇಡಿ ಅವರಿಗೆಲ್ಲಾ, ಪತ್ರಿಕೆ ಬಿಡಬೇಡಿ’ ಎಂದೆಲ್ಲಾ ಹೇಳಿ ಜೊತೆಗೆ ಒಂದೆರಡು ಪುಸ್ತಕಗಳನ್ನು ಕೊಟ್ಟರು.
ಈ ಘಟನೆಯ ಮೊದಲೇ 2006-07 ರಲ್ಲಿ ನಮ್ಮ ಕನಸಿನ ಹಬ್ಬಕ್ಕೆ ಗಣಪತಿಯಪ್ಪನವರನ್ನು ಉದ್ಘಾಟಕರನ್ನಾಗಿ ಕರೆದು ಅವರಿಗೊಂದು ಸಣ್ಣ ಗೌರವಾರ್ಪಣೆಯನ್ನೂ ಸಲ್ಲಿಸಿ, ಕಳುಹಿಸಿಕೊಟ್ಟಿದ್ದೆ.
ಗಣಪತಿಯಪ್ಪನವರನ್ನು ಪ್ರಜ್ಞಾಪೂರ್ವಕವಾಗಿ ಮರೆತ ನಮ್ಮ ತಾಲೂಕಿನ ಬಗ್ಗೆ ಅವರಿಗೆ ಸಣ್ಣದೊಂದು ಅಸಮಾಧಾನವಿದ್ದಂತೆ ಕಾಣುತಿತ್ತು. ವ್ಯವಸ್ಥೆ ಸುಧಾರಣೆ, ಹೋರಾಟ, ಪ್ರತಿಭಟನೆಗಳೆಂದೆಲ್ಲಾ ತಾಸುಗಟ್ಟಲೆ ಮಾತನಾಡುತಿದ್ದ ಗಣಪತಿಯಪ್ಪ ಸಿದ್ಧಾಪುರದ ಯಾರನ್ನೂ ನೆನಪಿಸಿಕೊಳ್ಳುತ್ತಿರಲಿಲ್ಲ! ಬಂಗಾರಪ್ಪ, ಕಾಗೋಡು ತಿಮ್ಮಪ್ಪರ ಬಗ್ಗೆ ಅವರೂ ನನ್ನ ಶಿಷ್ಯರೇ ಎಂದು ವ್ಯಂಗ್ಯವಾಗಿ ನಕ್ಕಿದ್ದನ್ನು ಒಂದೆರಡು ಬಾರಿ ಗಮನಿಸಿದ್ದೇನಿ.
ಸ್ವಾತಂತ್ರ್ಯ ಹೋರಾಟಗಾರರಾಗಿ ಗೇಣಿದಾರರಮುಖಂಡರಾಗಿ, ರೈತಸಂಘದ ಪದಾಧಿಕಾರಿಯಾಗಿ ಬಡವರು, ರೈತರು ಅವಕಾಶವಂಚಿತರ ಬಗ್ಗೆ ದುಡಿದ ಈ ಹಿರಿಯರನ್ನು ದೊಡ್ಮನೆ ಕುಟುಂಬದ ಅಮೇಧ್ಯಫಲಾನುಭವಿಗಳೆಲ್ಲಾ ಹೀಯಾಳಿಸಿದರು. ದೂರಿದರು ಆರೋಪಿಸಿದರು.
ಹೀಗೆ ದೊಡ್ಮನೆ ಸಂಸ್ಥಾನದ ದ್ವಾರಪಾಲಕರು ಗುಲಾಮಿಫಲಾನುಭವಿಗಳಾದ ಅನೇಕ ನಾಮರ್ಧ ಶೂದ್ರರು ಈಗಲೂ ಇದ್ದಾರೆ. ಆದರೆ ಇಂಥ ಆಸೆಬುರುಕ ಗುಲಾಮರ ಯೋಗ್ಯತೆ ಗಣಪತಿಯಪ್ಪನವರ ಒಂದು ರೋಮ, ರೋಮಾಂಚನಕ್ಕೂ ಸಮಾನವಲ್ಲ. ಗಣಪತಿಯಪ್ಪನವರನ್ನು ಉಪೇಕ್ಷಿಸಿದ ಆಶಾಡಭೂತಿ ಲಾಭ ಬಡುಕರಿಂದಲೇ ಸಮಾಜದಾರಿ ತಪ್ಪುತ್ತಿದೆ ಅವರ ಚಿಂತನೆ ಬದುಕು ಹೊಸ ನಾಳೆಗಳಿಗೆ ಸ್ಪೂರ್ತಿ ಯೋಗಬೇಕಿದೆಯಷ್ಟೆ. (13ಅಕ್ಟೋಬರ್ 2014)
… ಒಂದು ಮನವಿ- ಮಾನ್ಯ ಓದುಗರೆ,
ಸಮಾಜಮುಖಿ ಚಿಂತನೆಯ ನಮ್ಮ ಕಷ್ಟದ ಹಾದಿಗೆ ಈಗ 20 ರ ಹರೆಯ. ಪತ್ರಿಕೋದ್ಯಮದ ಶಿಕ್ಷಣ,ನಂತರ ದೂರದರ್ಶನ,ನಡುನಡುವೆ ಉಪನ್ಯಾಸ,ಉಪನ್ಯಾಸಕ ವೃತ್ತಿ,ನಿರಂತರ 14-15 ವರ್ಷಗಳಿಂದ ಸಮಾಜಮುಖಿ. ಪತ್ರಿಕೆ ಚಂದಾ, ದೇಣಿಗೆ, ನೆರವು,ಸಹಾಯ ಮಾಡಿದವರಿಗಿಂತ ದೂರನಿಂತವರೇ ಅನೇಕ. ಈಗಲೂ ಸಮಾಜಮುಖಿ ಕಷ್ಟದಲ್ಲೇ ನಡೆಯುತ್ತಿದೆ. ಹಿತೈಶಿಗಳು, ಓದುಗರು, ದಾನಿಗಳು ಹಿಂದೆಲ್ಲಾ ಚಂದಾ ಕೊಡದೆ ಚಂದವಾಗಿ ಮಾತನಾಡಿದವರು, ಹಣಕೊಡಬೇಕಾದ ಸಂಕಟಕ್ಕೆ ದಾರಿಬದಲಿಸಿ ನಡೆದವರು ಯಾರೂ ನೆರವು ತಲುಪಿಸಬಹುದು.
ನಮ್ಮ ಖಾತೆ-ಸಮಾಜಮುಖಿ, ಸಿಂಡಿಕೇಟ್ ಬ್ಯಾಂಕ್ ಸಿದ್ಧಾಪುರ (0308220081658 ಆಯ್.ಎಫ್.ಎಸ್.ಸಿ.ಕೋಡ್ ಎಸ್.ವೈ.ಎನ್.ಡಿ. 0000308 ಹಣ,ನೆರವು,ಚಂದಾ ಮುಟ್ಟಿಸಿದವರು 9740598884 ಸಂಖ್ಯೆಗೆ ಕರೆಮಾಡಿ, ಅಥವಾ ಸಂದೇಶ ಮುಟ್ಟಿಸಿ.
https://samajamukhi.net/ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ತಿಳಿಸಿ
ಸತ್ಯ-ನಿಷ್ಟೂರ,ವಸ್ತುನಿಷ್ಟ ಸುದ್ದಿಗಳಿಗಾಗಿ ಲಾಗ್ ಇನ್ ಆಗಿ https://samajamukhi.net/