

ಶೀರಲಗದ್ದೆಗೆ ಬೇಕು ಸರ್ವಋತು ರಸ್ತೆ,
ತೆರೆಮರೆಯ ತಾಣ ಜನಾಕರ್ಷಣೆಯ ಕೇಂದ್ರ
ಜಲಪಾತಗಳ ಜಿಲ್ಲೆ ಉತ್ತರಕನ್ನಡದ ಸಿದ್ಧಾಪುರದ ಶೀರಲಗದ್ದೆ ಜಲಪಾತಕ್ಕೆ ಹೆಚ್ಚಿನ ಮಹತ್ವ, ಆಕರ್ಷಣೆ ಬರುತಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗಳು ಈ ಜಲಪಾತಕ್ಕೆ ಭೇಟಿ ನೀಡುತ್ತಿರುವುದು ಸಾಕ್ಷಿಯಾಗಿದೆ.
ಶಿರಸಿ-ಸಿದ್ಧಾಪುರ ರಾಜ್ಯ ಹೆದ್ದಾರಿಯಲ್ಲಿ ಸಿದ್ಧಾಪುರದಿಂದ 16 ಕಿ,ಮೀ ದೂರ ಮತ್ತು ಶಿರಸಿಯಿಂದ 22 ಕಿ.ಮೀ ದೂರದ ಶೀರಲಗದ್ದೆ ಜಲಪಾತ ವೀಕ್ಷಣೆ ಸರಳ ಮತ್ತು ಸುಲಭ ಇರುವುದರಿಂದ ರಾಜ್ಯ ಪರರಾಜ್ಯಗಳ ಜನರು ಈ ಜಲಪಾತಕ್ಕೆ ಭೇಟಿ ನೀಡಿ ನೀರು,ನಿಸರ್ಗದ ಸೊಬಗನ್ನು ಸವಿಯುತ್ತಿದ್ದಾರೆ.
ರಾಜ್ಯಮುಖ್ಯರಸ್ತೆಯಿಂದ ಕೇವಲ 2 ಕಿ.ಮೀ ದೂರದ ಅರಣ್ಯದ ಮಧ್ಯೆ ಹರಿಯುತ್ತಿರುವ ಈ ಜಲಧಾರೆ ಇಷ್ಟುವರ್ಷ ಎಲೆಮರೆಯ ಕಾಯಿಯಂತಿದ್ದುದೇ ಆಶ್ಚರ್ಯದ ವಿಷಯ. ಚಂಡ ಸೇರಿದಂತೆ ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣ ಈ ಜಲಪಾತದಲ್ಲಾದರೂ ಇದಕ್ಕೆ ಪ್ರಚಾರ,ಪ್ರಸಾರ ದೊರೆತದ್ದು ಕಡಿಮೆ.
ಸ್ಥಳಿಯ ನಾರಾಯಣ ನಾಯ್ಕ ಎನ್ನುವ ಯುವಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಈ ಜಲಪಾತದ ಪ್ರಚಾರ ಮಾಡಿದ ನಂತರ ಜನಾಕರ್ಷಣೆ ವೃದ್ಧಿಸಿತಾದರೂ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೊರ್ಟಲ್ ಕೊಟ್ಟ ಪ್ರಚಾರದಿಂದ ಈ ಜಲಪಾತಕ್ಕೆ ಹೆಚ್ಚಿನ ಪ್ರಚಾರ,ಜನಪ್ರೀಯತೆ ದೊರೆತಿದೆ.
ಹೀಗೆ ಎಲೆಮರೆಯ ಕಾಯಿಯಂತಿದ್ದ ಶೀರಲಗದ್ದೆ ಜಲಪಾತ ಕಾಳೇನಳ್ಳಿಗೆ ಸಮೀಪ ಸುಲಭ ಪ್ರಯಾಣಕ್ಕೆ ಸಿಗುವ ಅಪರೂಪದ ನೈಸರ್ಗಿಕ ಸೌಂದರ್ಯವಾದರೂ ಇಲ್ಲಿಗೆ ತೆರಳಲು ಸೂಕ್ತ ಸರ್ವಋತು ರಸ್ತೆಯಿಲ್ಲ.
ಈ ಜಲಪಾತಕ್ಕೆ ವ್ಯವಸ್ಥಿತ ರಸ್ತೆಮಾಡಿ ಎಂದು ಈ ಭಾಗದ ಜನಪ್ರತಿನಿಧಿಗಳು ಸಾಮಾಜಿಕ ಮುಖಂಡರಾದ ನಾರಾಯಣ,ಅಶೋಕ ನಾಯ್ಕ,ಗೌರೀಶ್ ನಾಯ್ಕ, ವಸಂತ ಹೆಗಡೆ, ಸುಬ್ರಾಯ ಮತ್ತೀಹಳ್ಳಿ ಸೇರಿದ ಅನೇಕರು ಸ್ಥಳಿಯ ಶಾಸಕರು, ಸಂಸದರನ್ನು ಆಗ್ರಹಿಸಿದ್ದರೂ ಕಳೆದ ಕೆಲವು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ಕಡೆ ಬೊಟ್ಟುಮಾಡುತ್ತಿರುವ ಇಲ್ಲಿಯ ಸಂಸದರು, ಶಾಸಕರು ಈ ಜಲಪಾತಕ್ಕೆ ‘ಬೇಡ’ ದವರಾಗಿದ್ದಾರೆ.
ಇತ್ತೀಚೆಗೆ ಈ ಜಲಪಾತಕ್ಕೆ ಭೇಟಿ ನೀಡಿದ ಸಿದ್ಧಾಪುರ ಪತ್ರಕರ್ತರ ತಂಡ ಇಷ್ಟು ಸಮೀಪದ ಅದ್ಭುತ ಜಲಪಾತ ಪ್ರಚಾರ,ಅಭಿವೃದ್ಧಿಯ ವಿಷಯದಲ್ಲಿ ಕತ್ತಲೆಯಲ್ಲಿರುವುದರಿಂದ ಬೇಸರ ವ್ಯಕ್ತಪಡಿಸಿ ಈ ಜಲಪಾತದ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳ ಪೂರೈಕೆಗೆ ಅಗತ್ಯ ಒತ್ತಡ, ಪ್ರಚಾರ ನೀಡುವುದಾಗಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವರಾಗಿದ್ದ ಹಿಂದಿನ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಕಣ್ಣಿಗೆ ಬೀಳದೆ, ಗಮನ ಸೆಳೆಯದ ಈ ಪ್ರೇಕ್ಷಣೀಯ ಸ್ಥಳದ ಅಭಿವೃದ್ಧಿ ಬಗ್ಗೆ ಈಗಿನ ರಾಜ್ಯ, ಕೇಂದ್ರ ಸರ್ಕಾರಗಳು ಕಣ್ಣು ತರೆಯಬಹುದೆ ಎನ್ನುವ ನಿರೀಕ್ಷೆ ಸ್ಥಳೀಯರಲ್ಲಿದೆ.
ರಸ್ತೆ, ವೀಕ್ಷಣಾಗೋಪುರ, ಪಾರ್ಕಿಂಗ್, ಊಟೋಪಚಾರಕ್ಕೆ ಅಗತ್ಯವಾಗಿ ಬೇಕಾದ ಹೋಟೆಲ್ ನಿರ್ಮಾಣವಾದರೆ ಸಿದ್ಧಾಪುರದ ಈ ಜಲಪಾತ ಪ್ರಪಂಚದ ಪ್ರಕೃತಿಪ್ರೀಯರನ್ನು ಆಕರ್ಷಿಸುವಲ್ಲಿ ಅನುಮಾನಗಳಿಲ್ಲ. ಆಸಕ್ತ ಚಾರಣ ತಜ್ಞರು ಇಲ್ಲಿ ಜಲಕ್ರೀಡೆ,ಜಲಸಾಹಸ ಚಾರಣಗಳನ್ನು ಆಯೋಜಿಸುವಂತೆ ಮಾಡಿ ಸ್ಥಳಿಯರು, ಪ್ರವಾಸಿಗಳಿಗೆ ಅನುಕೂಲಮಾಡಿಕೊಡುವ ಹಿನ್ನೆಲೆಯಲ್ಲಿ ಸ್ಥಳಿಯ ಆಡಳಿತ ಪ್ರಯತ್ನಿಸಬೇಕಾಗಿದೆ. ವರ್ಷದ ಕನಿಷ್ಟ ಆರು ತಿಂಗಳು ತುಂಬಿಹರಿಯುವ ಕಾರಗೋಡು ಹೊಳೆಯ ಈ ಶೀರಲಗದ್ದೆ ಜಲಪಾತ ಸಿದ್ಧಾಪುರದ ಪ್ರಮುಖ ಕೆಲವು ಪ್ರವಾಸಿತಾಣಗಳಲ್ಲಿ ಒಂದಾಗುವ ಸಾಧ್ಯತೆಗಳಂತೂ ಇವೆ.
ನಿಸರ್ಗ ಸೌಂದರ್ಯದ ಈ ಜಲಪಾತ ತೆರೆಮರೆಯಲ್ಲಿರುವುದೇ ಆಶ್ಚರ್ಯ,ಸ್ಥಳಿಯ ಜವಾಬ್ಧಾರಿ ವ್ಯಕ್ತಿಗಳು,ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಆಸಕ್ತಿವಹಿಸಿದರೆ ತಾಲೂಕಿನ ಈ ಜಲಪಾತ ಒಂದು ಪ್ರವಾಸಿತಾಣವಾಗುವುದಂತೂ ನಿಶ್ಚಿತ.ಗುಣಮಟ್ಟದ ಸರ್ವಋತು ರಸ್ತೆ ಇಲ್ಲಿಯ ಮೊದಲ ಆದ್ಯತೆ.- ರವೀಂದ್ರಭಟ್,ಗಂಗಾಧರ ಕೊಳಗಿ, ಬರಹಗಾರರು,ಸಿದ್ಧಾಪುರ



