ಮಹಾಮಳೆ!-ಭಾಗ-01
ಮನೆ,ಬೆಳೆ,ಭದ್ರತೆ, ರಕ್ಷಣೆಯ
ಅಪಾಯದಲ್ಲಿ ಹೆಗಡೆಮನೆ
ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಸಾಧ್ಯವೆ?
ಸಿದ್ಧಾಪುರ,ಆ.19-ಕಾರ್ಯಕ್ರಮಕ್ಕೆಂದು ಬಂದ ಅಣ್ಣ-ತಂಗಿ ಸಂಜೆವೇಳೆಗೆ ಹೊರಟು ನಿಂತಿದ್ದರು. ಅವರೊಂದಿಗಿದ್ದ ಮಕ್ಕಳು ಏನೋ ಹಿರಿಯರ ಕಸಿವಿಸಿ ಅರ್ಥವಾಗದೆ ಗೊಂದಲದಲ್ಲಿದ್ದರು. ಪ್ರತಿಬಾರಿ ಹೊರಡಲು ಸಿದ್ಧರಾಗುತಿದ್ದಾಗ, ಹೊರಡಲನುವಾದಾಗ ನಾಳೆ, ನಾಡಿದ್ದು ಹೋದರಾಯಿತು ಎನ್ನುವ ಬೇಡಿಕೆ ಈ ಬಾರಿ ಬಾಯಿಗೆ ಬರಲಿಲ್ಲ. ಯಾಕೆಂದರೆ ಮನೆ ಹಿಂದಿನ ಗುಡ್ಡದ ಪಕ್ಕದ ಕಾಲುವೆಯಿಂದ ಬರುತಿದ್ದ ನೀರು ಮನೆಯೊಳಗೆ ನುಗ್ಗಿ ಏನಾಗುವುದೋ ಎನ್ನುವ ಆತಂಕ. ನಮಗೆ ಅವರನ್ನು ಕಳುಹಿಸುವ ಧಾವಂತ, ಅವರಿಗೆ ಇಂಥ ಸ್ಥಿತಿಯಲ್ಲಿ ನಮ್ಮನ್ನು ಬಿಟ್ಟು ಹೋಗದ ಭಯ, ಅಣ್ಣ ದೇವರಿಗೆ ಹೂವು ಹಾಕಿ ಎಂಥಾ ಸ್ಥಿತಿಗೆ ನಮ್ಮನ್ನು ದೂಡಿಬಿಟ್ಟೆ ಎಂದು ಕಣ್ಣೀರು ಹಾಕುತಿದ್ದ, ನಮ್ಮೆಲ್ಲರ ಕಣ್ಣೀರ ಕಟ್ಟೆ ಒಡೆದು ನೀರು ದಳ,ದಳ… ಒಂದು ವಾರ ನಾವು ನಿದ್ರೆ ಮಾಡಲಿಲ್ಲ.ಅಂತೂ ಮಳೆನಿಂತು ಭಯ ಕಡಿಮೆಯಾದ ಸುಖ ಈಗ. ಹೀಗೆಂದು ತಮ್ಮ ಅನುಭವ ಹಂಚಿಕೊಳ್ಳುತ್ತಲೇ ಭಾವುಕರಾದವರು ಕೃಷಿಕ ಸದಾನಂದ ಹೆಗಡೆ,
2017 ರಲ್ಲಿ ಸ್ವಲ್ಫ ಬಿರುಕು ಕಾಣಿಸಿಕೊಂಡಿತ್ತು. ಈ ಜರಿ-ಧರೆ ಕುಸಿದರೆ ಮನೆಯೂ ಜಾರುತ್ತದೆ,ತೋಟ,ಬೆಳೆ ತೊಳೆಯುತ್ತದೆ ಎಂದು ಸಾಲಮಾಡಿ ಮೂರುಲಕ್ಷರೂಪಾಯಿ ವೆಚ್ಚದ ತಡೆ ಗೋಡೆ ಕಟ್ಟಿಸಿ ಸರಿಯಾಗಿ ಆರು ತಿಂಗಳು ಕಳೆದಿಲ್ಲ, ಮನೆ ಹಿಂದಿನ ಧರೆ ಕುಸಿಯಿತು, ಮನೆಯ ಅಡಿಪಾಯ, ಅಂಗಳ ಬಿರುಕು ಬಿಟ್ಟಿತು. ನೋಡಲು ಬಂದವರು ಮನೆ ಖಾಲಿ ಮಾಡಿ ಎಂದು ಗೋಗರೆಯತೊಡಗಿದರು. ನನ್ನ ಮನಸ್ಸು ಒಪ್ಪಲಿಲ್ಲ, ಬದುಕಿದ್ದರೂ ಇಲ್ಲೇ ಸತ್ತರೂ ಇಲ್ಲೇ ಎಂದು ನಿರ್ಧರಿಸಿ ಕುಸಿತು ಕೂತು ಬಿಟ್ಟೆ, ಸಂಬಂಧಿಗಳು, ಹಿತೈಶಿಗಳ ಒತ್ತಾಯದ ಎದುರು ನನ್ನ ಹಠ ಸೊರಗಿತು. ದುಖ:ದಿಂದ ಮನೆ ಬಿಟೆ,್ಟ ಹಲಗೇರಿ ಗಣಪತಿ ಹೆಗಡೆ ನಮ್ಮ ಸ್ಥಿತಿ ನೋಡಿ ಮರುಗಿದವರು ನಮ್ಮ ಮನೆಗೇ ಬನ್ನಿ, ನೆರೆ-ಮಳೆ ರಗಳೆ ಮುಗಿದ ನಂತರ ನೋಡಿದರಾಯಿತು ಎಂದು ಎಳೆದೊಯ್ದಂತೆ ನಮ್ಮನ್ನು ಸ್ಥಳಾಂತರಿಸಿದರು,ತಮ್ಮ ಮನೆಯಲ್ಲೇ ವಾಸಕ್ಕೆ ಜಾಗ ಕೊಟ್ಟರು.
ಈಗ ಬೆಳೆ ನಾಶವಾಗಿದೆ, ಮನೆ ವಾಸಕ್ಕೆ ಅಯೋಗ್ಯವಾಗಿದೆ.ಸರ್ಕಾರ ನಮ್ಮ ಕೈ ಹಿಡಿಯದಿದ್ದರೆ ನಮಗೆ ಭವಿಷ್ಯವಿಲ್ಲ ಹೀಗೆ ತಮ್ಮ ನೋವು, ಅನಿವಾರ್ಯತೆ ಹೇಳಿಕೊಂಡವರು ಶ್ರೀಕಾಂತ್ ಹೆಗಡೆ, ಇದು ಬೇಡ್ಕಣಿ ಪಂಚಾಯತ್ ಹೆಗಡೆಮನೆಯ ಕುಟುಂಬಗಳ ಪ್ರವಾಹದ ನಂತರದ ಗೋಳಿನ ಕತೆ.
ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಹಾನಿ, ಗೋಳು,ತೊಂದರೆಗಳ ಕತೆ ಕೇಳಿ ಘಾಸಿಗೊಂಡಿದ್ದ ನನಗೆ ಒಂದರ್ಧದಿನ ಇಂಥದ್ದಕ್ಕಾಗಿ ಹಾಳು ಮಾಡುವ ಮನಸ್ಸಿರಲಿಲ್ಲ, ಆದರೆ ರಮೇಶ್, ದಿವಾಕರರ ಒತ್ತಾಯಕ್ಕೆ ಮಣಿದು ಹೋದರೆ ಬೇಡ್ಕಣಿಯ ಹೆಗಡೆಮನೆ ಕೇರಿಯಲ್ಲಿ ಇಂಥ ಧಾರುಣ ವಾತಾವರಣವಿದೆ ಎಂಬುದನ್ನು ಕೇಳಿ ನಂಬಲು ಸಿದ್ಧನಿಲ್ಲದ ನನಗೆ ಅಲ್ಲಿಯ ಸಾಕ್ಷಾತ್ ದರ್ಶನ ನೋಡಿ ಬರದಿದ್ದರೆ ಇವರ ವಸ್ತುಸ್ಥಿತಿ ಅರ್ಥವಾಗುತ್ತಿರಲಿಲ್ಲ ಎನಿಸಿತು.
ಅನೇಕ ವರ್ಷಗಳ ಹಿಂದೆ ನೆಲೆಸಿರುವ ಇಲ್ಲಿಯ ಐದು ಮನೆಗಳ, ಮೂಲತ: ಒಂದೇ ಕುಟುಂಬ ಬೆಟ್ಟದ ಬೆನ್ನಿನ ಕೆಳಗೆ ತೋಟದ ಏರಿಮೇಲೆ ನೆಲೆಸಿವೆ. ಈ ಸಾಲುಮನೆಗಳ ಕೊನೆಯ ತುದಿಯ ಶ್ರೀಕಾಂತ್ ಹೆಗಡೆಯವರ ಮನೆಯ ಅಡಿಪಾಯ,ತೋಟದ ಏರಿ ಕುಸಿದು ಮನೆ ನೆಲಕ್ಕೊರಗುವ ಅಪಾಯದ ಹಂತ ತಲುಪಿದೆ.ಅದಕ್ಕೇ ತಾಕಿಕೊಂಡಿರುವ ಇನ್ನೊಂದು ಮನೆ ಸದಾನಂದ ಹೆಗಡೆಯವರದ್ದು, ಅಲ್ಲಿ ದೇವರ ವಾಸಸ್ಥಾನವಂತೆ! ಜಗಲಿ ಬಿರುಕು ಬಿಟ್ಟರೆ, ಮನೆಯ ಕಾಡುಮರಗಳ ಭದ್ರ ಅಂಕಣದ ಮನೆಯ ಮೇಲ್ಮಹಡಿ ಒರಗಿದೆ. ಇದೇ ಮನೆಗೆ ತಾಕಿಕೊಂಡೇ ಮತ್ತೆರಡು ಮನೆಗಳಿವೆ. ಮಲೆನಾಡಿನ ಹಳೆಯ ಶೈಲಿಯ ಮೂಲಮನೆಗೆ ಅಕ್ಕಪಕ್ಕಗಳಲ್ಲೇ ಆಧುನಿಕ ವಿನ್ಯಾಸಗಳ ಮನೆಗಳೂ, ವ್ಯವಸ್ಥೆಗಳೂ ಇವೆ. ಆದರೆ ತಳಪಾಯ ಮನೆಹಿಂದಿನ ಬೆಟ್ಟ, ಮನೆಮುಂದಿನ ತೋಟ ಎಲ್ಲವೂ ಮಹಾಮಳೆಯ ರಭಸಕ್ಕೆ ಮುನ್ನುಗ್ಗಿ ಮನೆಯನ್ನೇ ಅಲುಗಾಡಿಸುತ್ತಿವೆ.
ಯಾವುದೇ ವ್ಯಕ್ತಿ, ಅಧಿಕಾರಿ, ಮನುಷ್ಯ ಈ ಕುಟುಂಬಗಳನ್ನು ಅದೇ ಮನೆಯಲ್ಲಿ ಉಳಿಯಿರಿ ಎಂದು ಹೇಳಲಾರದ ಸ್ಥಿತಿ ಇದೆ. ಆದರೆ ಒಮ್ಮೆಲೇ ಹೊರಡಿ ಎಂದರೆ ಹೋಗುವುದೆಲ್ಲಿಗೆ?
ಆಶ್ರಯಕ್ಕೆ ಮನೆ, ದೈನಂದಿನ ಕರ್ಚು ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳುವುದ್ಹ್ಯಾಗೆ? ಎರಡು ವರ್ಷಗಳ ಹಿಂದೆಯೇ ಇಲ್ಲಿಯ ಶ್ರೀಕಾಂತ್ ಹೆಗಡೆಯವರ ಮನೆ ವಾಸ್ತವ್ಯಕ್ಕೆ ಅಯೋಗ್ಯ ಎಂದು ತಹಸಿಲ್ಧಾರರೇ ಶರಾ ಬರೆದಿದ್ದಾರೆ, ಆದರೆ ಪರ್ಯಾಯ ವ್ಯವಸ್ಥೆ ಮಾಡುವ ಸಂಪೂರ್ಣ ಅನುಕೂಲ, ಅವಕಾಶ ತಹಸಿಲ್ದಾರರಿಗಿದೆಯೇ?
ಸಣ್ಣ ಜನಪ್ರತಿನಿಧಿಗಳಿಂದ ರಾಜ್ಯ ವಿಧಾನಸಭಾ ಅಧ್ಯಕ್ಷರು, ಲೋಕಸಭೆ ಸದಸ್ಯರು, ಕೇಂದ್ರದ ಮಾಜಿ ಮಂತ್ರಿ, ರಾಜ್ಯದ ಮಾಜಿ ಮಂತ್ರಿಗಳು ಯಾರಿಗಿದೆ ಸಾಮಥ್ರ್ಯ, ಅಧಿಕಾರ.
ಸತ್ತಮೇಲೆ ಸಾಂತ್ವನ ಹೇಳಲು ಸಾವಿರಾರು ಬಾಯಿ ಸಿಕ್ಕಾವು? ಏನುಪಯೋಗ? ಜಿ.ಪಂ. ಸದಸ್ಯ ನಾಗರಾಜ್ ನಾಯ್ಕ ಎರಡೆರಡು ಬಾರಿ ಬಂದು ವಿಚಾರಿಸಿದ್ದಾರೆ, ಗ್ರಾಮಪಂಚಾಯತ್ ಆಡಳಿತ, ಅಧಿಕಾರಿ ವರ್ಗ ನೋಡಿ, ಭರವಸೆಯ ಮಾತನಾಡಿ ಹೋಗಿದೆ. ವಾಸ್ತವ್ಯ ಸ್ಥಳಾಂತರ ಮಾಡಿ, ಮನೆ ಕಟ್ಟಿಕೊಳ್ಳಲು ಸಹಕರಿಸಲು, ನೆರವಾಗಲು ಸರ್ಕಾರದ ಬಳಿ ಪರಿಹಾರ,ಯೋಜನೆಗಳಿಲ್ಲ ಎಂದರೆ ಅಲ್ಲೇ ಉಳಿದು ಸಾಯಬೇಕೆ?
ಸರ್ಕಾರ, ಸರ್ಕಾರದ ಕಾನೂನು, ರೀತಿ-ನೀತಿಗಳು ಬದಲಾಗಬೇಕು. ಯಾಕೆಂದರೆ ಅಪಾಯ, ಆಕಸ್ಮಿಕಗಳಲ್ಲಿ ಈ ಜನರನ್ನು ಕೊಲ್ಲಲು, ಯಾವುದೇ ಅನುಕೂಲ, ಪರ್ಯಾಯಗಳಿಲ್ಲದೆ ಇವರನ್ನು ನಿರಂತರ ಜೀವಂತ ಕೊಲ್ಲಲು ಸರ್ಕಾರ, ವ್ಯವಸ್ಥೆಗೂ ಅಧಿಕಾರವಿಲ್ಲ.
ನೆನಪಿಡಿ ಇಂಥವರು ಬದುಕು ಮೂರಾಬಟ್ಟೆಯಾದಾಗ ಯಾವುದೇ ದೇವರು, ಧರ್ಮ, ರಾಜಕೀಯ ಪ್ರೇರಿತ ಧರ್ಮರಕ್ಷಕರು ಬರುವುದಿಲ್ಲ, ಅವರಿಗೆ ಯಾವ ಯೋಗ್ಯತೆ, ಸಾಧ್ಯತೆಗಳೂ ಇರುವುದಿಲ್ಲ. ಇಂಥವರ ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗ ಆಗಬೇಕಾದುದೇನೆಂದರೆ ಈ ಐದೂ ಕುಟುಂಬಗಳೂ ಎತ್ತರದ ತಮ್ಮದೇ ಜಾಗದಲ್ಲಿ ಮನೆ ಕಟ್ಟಿಕೊಂಡು ಈ ಹಳೆಯ ಮನೆ, ವಾತಾವರಣ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಅದಕ್ಕೆ ಸರ್ಕಾರ, ವ್ಯವಸ್ಥೆ ತನ್ನ ಮಿತಿಯಲ್ಲಿ ಅವಕಾಶ, ಅನುಕೂಲ ಮಾಡಿಕೊಡಬೇಕು. ಮತ್ತೆ ಮಳೆಗಾಲ ಬರುವ ಮೊದಲೇ ಈ ವ್ಯವಸ್ಥೆ ಆಗಿ ಅವರಿಗೆ ಸರ್ಕಾರ, ವ್ಯವಸ್ಥೆಯ ಬಗ್ಗೆ ಭರವಸೆಮೂಡುವಂತಾಗಬೇಕು, ಅದರ ಜವಾಬ್ಧಾರಿ ಜನಪ್ರತಿನಿಧಿಗಳೇ ಹೊರಬೇಕು.
-ಕನ್ನೇಶ್, ಕೋಲಶಿರ್ಸಿ.