
ಒಂದುವಾರದ ಕೆಳಗೆ ಅಂದರೆ ಹಿಂದಿನ ಇದೇ ಸೋಮವಾರ ಬಾಳೂರಿನಲ್ಲಿ ಕಾಡುಕೋಣವೊಂದು ಸತ್ತಿರುವ ಸುದ್ದಿಯಾಯಿತು. ಇದರ ಹಿಂದಿನ ದಿನ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಅಪ್ಪ ಸ್ಥಳದಲ್ಲೇ ಮೃತಪಟ್ಟರೆ,ಮಗ ಕಂಗಾಲಾಗಿ ಕಾಲುಕಿತ್ತಿದ್ದ.
ಈ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣೆ ಮೆಟ್ಟಿಲೇರುವಾಗ ಅದಾಗಲೇ ಒಂದು ದಿನ ಕಳೆದು ಹೋಗಿತ್ತು. ವಾಸ್ತವವೆಂದರೆ.. ಕಾಡುಕೋಣನ ಬೇಟೆಗೆ ಬಂದಿದ್ದ ಹುಬ್ಬಳ್ಳಿಮೂಲದ ವ್ಯಕ್ತಿಗಳು ಕಾಡುಕೋಣನ ದಾಳಿಗೆ ಒಳಗಾದಾಗ ಮನುಷ್ಯ ಸತ್ತ ಪ್ರಕರಣ ಸಿದ್ಧಾಪುರ ಠಾಣೆಯಲ್ಲಿ ಕಾಡು ಹಂದಿಯ ದಾಳಿಗೆ ಬಲಿಯಾದ ವ್ಯಕ್ತಿ ಎಂದು ದಾಖಲಾಗುತ್ತದೆ. ಇದೇ ಪ್ರಕರಣ ಕಾಡುಕೋಣನ ಸಾವು ಶಿರಸಿ,ಜಾನ್ಮನೆ ವ್ಯಾಪ್ತಿಯಲ್ಲಿ ಕಾಡುಕೋಣದ ಅಸಹಜ ಸಾವು ಎಂದು ದಾಖಲಾಗುತ್ತದೆ. ಈ ಪ್ರಕರಣಗಳು ಗಲಿಬಿಲಿಯಾಗಲು, ಗೊಂದಲ ಹುಟ್ಟುಹಾಕಲು ಕಾರಣ ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ವ್ಯಾಪ್ತಿ ಬೇರೆಯಾಗಿರುವುದು.
ಶಿರಸಿ ಜಾನ್ಮನೆ ವ್ಯಾಪ್ತಿಯ ಕಾಡುಪ್ರಾಣಿ ಹಾವಳಿ, ದಾಳಿ ಶಿರಸಿಗೆ ಸಂಬಂಧಿಸಿದರೆ, ಮನುಷ್ಯ ಮೃತರಾದ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.
ಹೀಗೆ ಒಂದೇ ಸಂದರ್ಭ, ಎರಡು ಪ್ರಕರಣಗಳ ಹಿನ್ನೆಲೆಯಲ್ಲಿ ವಿಳಂಬ, ಗೊಂದಲ ಆಗಿದ್ದು ಸಹಜ. ಆದರೆ ಈ ಎರಡೂ ಅಸಹಜ ಸಾವುಗಳ ಹಿಂದೆ ಒಂದು ಜಾಲ ಇರುವ ಬಗ್ಗೆ ಶಿರಸಿ-ಸಿದ್ಧಾಪುರ ಭಾಗದಲ್ಲಿ ಬೀದಿಚರ್ಚೆಗಳು ನಡೆಯುತ್ತಿವೆ.
ಉತ್ತರಕನ್ನಡದ ಜನರಿಗೆ ಬೇಟೆ ಹವ್ಯಾಸ ಮತ್ತು ಮನರಂಜನೆ. ಲಾಗಾಯ್ತಿನ ಈ ಅಭ್ಯಾಸ ಈಗ ಕಡಿಮೆಯಾಗುತ್ತಿದೆಯಾದರೂ ಕಾಡುಬೇಟೆ ಮಾಡುವ ಸ್ಥಳಿಯರು ಕಾಡುಕುರಿ, ಕಾಡುಕೋಳಿ, ಕಾಡುಹಂದಿಗಳನ್ನು ಬಿಟ್ಟು ಬೇರೆ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಆದರೆ ಹೊರಜಿಲ್ಲೆಗಳಿಂದ ಇಲ್ಲಿಗೆ ಬೇಟೆಗೆ ಬರುವ ಜನರಿದ್ದಾರಲ್ಲ ಅವರಲ್ಲಿ ಬಹುತೇಕರು ಮಾಂಸ, ಚರ್ಮ, ಕಾಡುಪ್ರಾಣಿಗಳ ಅಂಗಾಂಗಮಾರುವ ಹವ್ಯಾಸಿ ಬೇಟೆಗಾರರು.
ಸಿದ್ಧಾಪುರದ ಬಾಳೂರು, ಹೇರೂರು,ಹಾರ್ಸಿಕಟ್ಟಾ, ದೊಡ್ಮನೆ,ಮಾವಿನಗುಂಡಿ ಭಾಗಗಳಲ್ಲಿ ಕನಿಷ್ಟ ನೂರಾರು ಕಾಡುಕೋಣಗಳು ಓಡಾಡುತ್ತವೆ. ಅವು ಮಾಡುವ ಬೆಳೆಹಾನಿ ತೊಂದರೆಗೆ ಬೇಸತ್ತ ಸ್ಥಳಿಯರು ಅವುಗಳ ವಧೆಗೆ ಹೊರಗಿನ ವ್ಯಕ್ತಿಗಳಿಗೆ ಸಹಕರಿಸುತ್ತಾರೆ. ಹೀಗೆ ಕಾಡುಕೋಣ, ಕಾಡೆಮ್ಮೆಗಳ ಉಪಟಳದಿಂದ ಬೇಸತ್ತವರ ನೆರವು, ಸಹಾಯ ಪಡೆಯುವ ‘ಹೊಗಿನವರು’ ಇಲ್ಲಿ ಬಂದು ಕಾಡುಕೋಣನ ಬೇಟೆಯಾಡುತ್ತಿರುವುದು ಇಲ್ಲಿ ಮಾಮೂಲು. ಈ ಪರಂಪರೆಯ ಕೊಂಡಿಯಾದ ಹುಬ್ಬಳ್ಳಿ ಮೂಲದ ವ್ಯಕ್ತಿ ತನ್ನ ಮಗನೊಂದಿಗೆ ಬೇಟೆಗೆ ಬಂದು ಬಂದೂಕಿನಿಂದ ಕಾಡುಕೋಣನ ಹತ್ಯೆ ಮಾಡಿದ್ದಾನೆ. ಕಾಡುಕೋಣ ಸತ್ತಿರುವುದನ್ನು ಧೃಡಪಡಿಸಿಕೊಳ್ಳಲು ಸಮೀಪಕ್ಕೆ ಹೋದ ಬೇಟೆಗಾರನನ್ನು ಕಾಡು ಕೋಣ ತಿವಿದು ಕೊಂದಿದೆ. ಈ ಆಘಾತದಿಂದ ಕಂಗಾಲಾದ ಮೃತವ್ಯಕ್ತಿಯ ಮಗ ಈಗಲೂ ಆ ಶಾಕ್ನಿಂದ ಹೊರಬಂದಂತಿಲ್ಲ. ಈ ಪ್ರಕರಣ ದೊಡ್ಡದಾಗಬಾರದೆಂದು ಯೋಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಕೋಣನ ಸಾವಿಗೆ ಕಾರಣ ಸ್ಫಷ್ಟವಿಲ್ಲ ಎಂದು ಶರಾ ಬರೆದಿದ್ದಾರೆ.
ಆದರೆ ಪೊಲೀಸರು ಬೈಕ್ ಮೇಲೆ ಹೋಗುತಿದ್ದ ವ್ಯಕ್ತಿ ಮೇಲೆ ಕಾಡುಕೋಣ ದಾಳಿ ಮಾಡಿದೆ ಎಂದು ನಿಧಾನಿಸಿ ಪ್ರಕರಣ ದಾಖಲಿಸಿದ್ದಾರಲ್ಲ. ಆ ಪ್ರಕರಣದ ನಂತರ ಸ್ಥಳಿಯ ಮಾಹಿತಿ ಮೇರೆಗೆ ಮತ್ತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಾಡುಕೋಣನ ದೇಹದಲ್ಲಿ ಗುಂಡುಗಳು ಪತ್ತೆಯಾಗಿವೆ!.
ಹೀಗೆ ರೋಚಕ ಪತ್ತೆದಾರಿ ಕತೆಯಂತಿರುವ ಈ ಪ್ರಕರಣ ಉತ್ತರಕನ್ನಡಕ್ಕೆ ಹೊರಜಿಲ್ಲೆಗಳಿಂದ ಬಂದು ಬೇಟೆಯಾಡುವ ಜಾಲವೊಂದನ್ನು ಭೇದಿಸಿದೆ. ಕಾಡುಕೋಣ, ಕಾಡೆಮ್ಮೆಗಳ ಮಾಂಸ ಔಷಧಿಯಾಗಿ ಬಳಕೆಯಾಗುತ್ತಿರುವುದು, ಅದರ ಮಾಂಸ, ಕೊಬ್ಬು, ಕೊಂಬು ಸೇರಿದಂತೆ ಕಾಡುಕೋಣಕ್ಕೆ ಲಕ್ಷಾಂತರ ಮೌಲ್ಯವಿರುವ ಹಿನ್ನೆಲೆಯಲ್ಲಿ ಕಾಡುಕೋಣಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಕಾಡುಕೋಣ, ಕೋಡಗಗಳಿಗೆ ಪ್ರತ್ಯೇಕ ಪಾರ್ಕ್ ಮಾಡದಿದ್ದರೆ ಸ್ಥಳಿಯರ ನೆರವಿನಿಂದ ಈ ಸಂಕುಲ ನಾಶವಾಗುವ ಅಪಾಯವಂತೂ ಮುಂದಿದೆ. ಅಂದಹಾಗೆ ಬಾಳೂರಿನಲ್ಲಿ ಹತ್ಯೆಯಾದ ಕಾಡುಕೋಣ ಸತ್ತರೂ ಲಕ್ಷ, ಬದುಕಿದ್ದರೂ ಲಕ್ಷ ಎಂಬುದನ್ನು ಸಾಬೀತುಮಾಡಿದೆ.

