
ನಮ್ಮದು ಅರ್ಚಕರ ಕುಟುಂಬ, ಬಾಲ್ಯದಲ್ಲಿ ಅಜ್ಜ-ಅಪ್ಪನ ಜೊತೆ ದೇವಾಲಯದ ಪೂಜೆಗೆ ಹೋಗಿ ಭಕ್ತರಿಗೆ ತಿರ್ಥ-ಪ್ರಸಾದ ಹಂಚಿ, ಗುಡಿಯ ಪೌಳಿಯಲಿ ಕಾಯಿ ಒಡೆಯುತ್ತಿದ್ದೆ. ತದನಂತರ ಪ್ರೌಢಾವಸ್ಥೆಗೆ ಬಂದ್ಮೆಲೆ ನಾನೇ ಪೂಜೆ ಮುಗಿಸಿಕೊಂಡು ರಾತ್ರಿ ಬರುವಾಗ ಆರತಿ ತಟ್ಟೆ ಮತ್ತು ಕಾಣಿಕಾ ಡಬ್ಬೆಯೊಳಗಿನ ಅಷ್ಟೂ ದುಡ್ಡನ್ನು ಎಣಿಸಿಕೊಂಡು ಗೂಡು ಸೇರುತ್ತಿದ್ದೆ.
ಪ್ರೌಢ ಶಿಕ್ಷಣ ಮುಗಿದ ಮೇಲೆ ಚಿತ್ರಕಲಾ ಪದವಿಯ ಓದಿಗಾಗಿ ದೂರದ ಗದುಗಿನ ಪಟ್ಟಣಕ್ಕೆ ಕಾಲಿಟ್ಟ ನಂತರ ದೇವರು ಮತ್ತು ಧರ್ಮದ ಪರಿಕಲ್ಪನೆಯೇ ಬೇರೆಯಾಯಿತು. ದೇವರ ಚಿತ್ರಗಳನ್ನೆಲ್ಲಾ ರವಿವರ್ಮ ಕಲಾವಿದ ರಚಿಸಿದ ಕಲಾಕೃತಿಗಳು ಅನ್ನೊ ವಾಸ್ತವ ಅರಿವಿಗೆ ಬಂತು.
ಶಿಲ್ಪ ಕಲಾವಿದನ ಶ್ರಮವನ್ನು ಕಿಂಚತ್ತೂ ನೆನೆಯದೆ, ನಮ್ಮ ಗುಡಿಯೊಳಗಿನ ದೇವರು ‘ಉದ್ಭವಮೂರ್ತಿ’ ಅಂತಾ ಅಜ್ಜ-ಅಪ್ಪಾ ಬಂದ ಭಕ್ತರಿಗೆಲ್ಲಾ ಭ್ರಮೆ ಹುಟ್ಟಿಸುತ್ತಿದ್ದ ಅಂದಿನ ದಿನಗಳೆಲ್ಲಾ ಇಂದು ನನಗೆ ನೆನಪಾಗಿ ಪಾಪ ಪ್ರಜ್ಞೆ ಕಾಡಲು ಆರಂಭವಾಯಿತು.
ಅಜ್ಜ, ಅಪ್ಪ ಮತ್ತು ನಾನು ಪೂಜೆ ಮಾಡುವುದಾದರೆ, ಅವ್ವ, ಅಕ್ಕ-ತಂಗಿ ಯಾಕೆ ಪೂಜೆ ಮಾಡಬಾರದು? ಅನ್ನೊ ಪ್ರಶ್ನೆ ನಿರಂತರ ಕಾಡಲಾರಂಭಿಸಿತು. ವೈಚಾರಿಕತೆಗೆ ತೆರೆದುಕೊಂಡಿರುವ ಮನಸ್ಸು ಗುಡಿಯ ಗಡಿಯೊಳಗಿನ ಕೆಲ ನಂಬಿಕೆಗಳನ್ನು ಸುಲಭಕ್ಕೆ ಒಪ್ಪಿಕೊಳ್ಳಲಿಲ್ಲ.
ಗುಡಿಯೊಳಗೆ ಭಕ್ತರು ಆರತಿ ತಟ್ಟೆಯಲಿ ಹಾಕಿ ಹೋಗುವ ದುಡ್ಡಿಗೂ, ಗುಡಿಯ ಮುಂದುಗಡೆ ಆ ಭಿಕ್ಷುಕರ ತಟ್ಟೆಯೊಳಗೆ ಹಾಕುವುದಕ್ಕೂ ಏನು ವ್ಯತ್ಯಾಸ? ಅರ್ಚಕರಾದ ನಾವೂ ಒಂದು ಅರ್ಥದಲ್ಲಿ ಭಿಕ್ಷುಕರೆ!? ಆರತಿ, ಅರ್ಚನೆ, ಅಭಿಷೇಕ, ರುದ್ರಾಭಿಷೇಕ ಹೀಗೆ ಹಲವುಗಳಿಗೆ ಇಂತಿಷ್ಟೆಂದು ದರ ನಿಗದಿ ಪಡಿಸಿದ ಗುಡಿಯೊಳಗಿನ ಫಲಕ, ಹೊಟೇಲ್‍ನಲ್ಲಿರುವ ರೇಟ್‍ಬೋರ್ಡನಂತೆ ಕಾಣತೊಡಗಿತು. ಶ್ರೀಮಂತ ಭಕ್ತರಿಗೆ ವಿಶೇಷ ಅರ್ಚನೆ ಹಾಗೂ ಪ್ರಸಾದ, ಅದೇ ಬಡಭಕ್ತರಿಗೆ ಕಾಟಾಚಾರದ ಅರ್ಚನೆ ಪ್ರಸಾದಗಳು ನನಗೇಕೊ ಅಸಹ್ಯ ಹುಟ್ಟಿಸಿದವು.
ಅನ್ಯಾಯದ ದುಡ್ಡಿನಲ್ಲಿ ದೇವರಿಗೂ ಒಂದಿಷ್ಟು ಪಾಲುಕೊಟ್ಟು ಪುನೀತರಾದೆವೆನ್ನುವ ಪಾಪಿ ಭಕ್ತರು ಒಂದಡೆಯಾದರೆ, ದೇವರ ಹೆಸರಲ್ಲಿ ಬರುವ ಧನಕನಕಾದಿಗಳನ್ನೆಲ್ಲಾ ಸ್ವಾಹಃ ಮಾಡುವಾಗ ನನ್ನ ಅಂತಃಸಾಕ್ಷಿ ಅದೇಕೊ ಒಪ್ಪಿಕೊಳ್ಳಲಿಲ್ಲ. ‘ಪೂಜಿಸುವ ಕೈಗಳಿಗಿಂತ, ದುಡಿಯುವ ಕೈಗಳೆ ಮೇಲು’ ಅನ್ನೊ ಅನುಭವಿಕರ ನುಡಿ, ಹೀಗೆ ಹಲವು ವಿಚಾರಗಳು ಯರ್ರಾಬಿರ್ರಿಯಾಗಿ ತಲೆಯೊಳಗೆ ಹರಿದಾಡಿ ನನ್ನನ್ನು ಹಣ್ಣುಮಾಡಿದವು. ನಿಧಾನವಾಗಿ ದೇವರ ಬಗ್ಗೆ ಆಸ್ತೆ ಕಡಿಮೆಯಾಗಿ, ದೇವರನ್ನು ನೋಡುವ, ಗ್ರಹಿಸುವ ರೀತಿಯೇ ಬೇರೆಯಾಯಿತು.
ನಾನೀಗಲೂ ಮತ್ತೆಮತ್ತೆ ನನ್ನ ಗುಡಿಯ ನೋಡಲು ಹೋಗುವೆ, ದೇವಾಲಯದ ಆವರಣದಲ್ಲಿ ಕಾಲಿಟ್ಟ ತಕ್ಷಣ ಸುತ್ತಲಿನ ನಿಸರ್ಗ ಸೌಂದರ್ಯ, ಹಕ್ಕಿಗಳ ಚಿಲಿಪಿಲಿ, ಝುಳುಝುಳು ಹರಿಯುವ ನೀರಿನ ನಿನಾದ ಹಾಗೂ ಗುಡಿಯ ಒಳ-ಹೊರಗಿನ ಶಿಲ್ಪಕಲೆಯ ಕುರಿತೆ ಹೆಚ್ಚೆಚ್ಚು ಧ್ಯಾನಿಸುವೆ. ಮೌನವಾಗಿ ಅವುಗಳೊಂದಿಗೆ ಸಂವಾದಿಸಿ, ಕಡೆಗೆ ಗರ್ಭಗುಡಿಗೆ ಹೋಗಿ ಶಿರಸಾಷ್ಟಾಂಗವಾಗಿ ನಮಿಸಿ ನಿರಾಳವಾಗುತ್ತೇನೆ, ದೇವರಿದ್ದಾನೆಂಬ ನಂಬಿಕೆಯಿಂದಲ್ಲ, ನನ್ನ ನಮನಗಳು ಅದ್ಭುತವಾಗಿ ಗುಡಿಯನ್ನು ಕಟೆದಿಟ್ಟ ಆ ಮಹಾನ್ ಶಿಲ್ಪಿಗಳಿಗೆ ಮತ್ತು ಇಂತಹದ್ದೊಂದು ದೇವಾಲಯ ಕಟ್ಟಿಸಬೇಕೆಂದು ನಿರ್ಧರಿಸಿದ ಅಂದಿನ ಅರಸರಿಗೆ ಸಲ್ಲಲೆಂಬ ಮಹಾದಾಶೆಯಿಂದ.
ಪದ್ಯವೋ.. ಗದ್ಯವೋ.. ಗೊತ್ತಿಲ್ಲ ‘ಸ್ತ್ರೀ ಮೂರ್ತಿಯೊಂದರ ಸ್ವಗತಃ’ ಅನ್ನೊ ಶಿರ್ಷಿಕೆಯ ಅಡಿಯಲ್ಲಿ ಹಾಗೆ ಸುಮ್ಮೆನೆ ಒಂದಿಷ್ಟು ಬರೆದಿಟ್ಟು ನಿದ್ದೆಗೆ ಜಾರಿದೆ.
‘ಕಣ್ಣು, ಕಿವಿ, ಮೈ, ಕೈಗಳಲ್ಲಿ ನಿಶಕ್ತಿಯೇ ಆವರಿಸಿದೆ/ ಆದರೂ ಶಕ್ತಿಮಾತೆಯೆಂದು ಭಕ್ತರಲಿ ಭ್ರಮೆ ಹುಟ್ಟಿಸಿ/ ಧನ;ಕನಕಾದಿಗಳನ್ನೆಲ್ಲಾ ಪುರೋಹಿತರು ಸ್ವಾಹಃ ಮಾಡಿ/ಶಿಲ್ಪಿಯ ಶ್ರಮವನ್ನು ಮಣ್ಣುಪಾಲು ಮಾಡಿದ್ದಾರೆ.
ನಿತ್ಯ ಗಂಧ, ಕುಂಕುಮ ಲೇಪಿಸಿ ಮೈ ತುಂಬಾ ಹೂ ಹಾಕಿ/ ಪುರೋಹಿತಶಾಹಿಗಳು ಸಿಂಗರಿದ ಮೇಲೆ/ ಭಕ್ತರೆಲ್ಲಾ ಗುಂಪು ಗುಂಪಾಗಿ ಮಾಲೆ, ಕಾಯಿ ತಂದು/ ಹೆಣಕೆ ಪೂಜೆ ಮಾಡಿಸಿದಂತೆ ನನಗೂ ಮಾಡಿಸುತ್ತಾರೆ.
ರಥಕೆ ತುರಾಯಿ ಚುಚ್ಚಿ ವರುಷಕ್ಕೊಮ್ಮೆ ಜಾತ್ರೆ ಮಾಡುವಾಗ/ಅಷ್ಟ ದಿಕ್ಕುಗಳಿಂದ ಅಸಂಖ್ಯ ಭಕ್ತರೆಸೆಯುವ ಹಣ್ಣು ಕಾಯಿ/ ಉತ್ತತ್ತಿಗಳ ಹೊಡೆತಕ್ಕೆ ನಾನು ತತ್ತರಿಸಿ ಹೋಗಿರುವೆ/ ನಿಜಕ್ಕೂ ಅದು ಜಾತ್ರೆಯಲ್ಲ, ನನ್ನ ಅಂತಿಮ ಯಾತ್ರೆ.
ಮುಂಜಾವಿನ ಥಂಡಿಯಲಿ ತುಂಡು ಬಟ್ಟೆ ಉಟ್ಟು/ ಸಂಕೋಚವಿಲ್ಲದೆ ನನ್ನುಡುಗೆ ಬಿಚ್ಚಿ ಬೆತ್ತಲೆಗೊಳಿಸುತ್ತಾರೆ/ ತಲೆಯ ಮೇಲೆ ಏನೇನೊ ಸುರುವಿ ಮೊಲೆ, ತೊಡೆ ಎಲ್ಲಡೆ ಕೈಯಾಡಿಸುತ್ತಾರೆ/ ಆದರೂ ‘ಅಬಲೆಯ ಮೇಲೆ ಅರ್ಚಕರ ಅತ್ಯಾಚಾರ’/ ಅಂತಾ ಎಲ್ಲೂ ನಾನು ಸುದ್ದಿಯಾಗವುದಿಲ್ಲ/ ಸುದ್ದಿಗಾರರೂ ಪುರೋಹಿತಶಾಹಿಗಳ ಸಂಬಂಧಿಗಳೆನೋ.
ತಮ್ಮ ಮ(ನ)ನೆಯನ್ನಷ್ಟೆ ಬೆಳಗಿಸಿಕೊಳ್ಳುವ ಅರ್ಚಕರು/ ಜಗವ ಬೆಳಗುವ ಜಗನ್ಮಾತೆ ನಾನೆಂದು ಉಲಿಯುತ್ತಾರೆ/ ನನ್ನೊಳಗಿನ ಆಗಾಧ ನೋವನ್ನು ಹೇಗೆ ಅರುಹಲಿ?/ ಆ ಶಿಲ್ಪಿ ಜೀವ ತುಂಬಿದ್ದರೆ ಈ ಜಗದ ಕತೆಯೇ ಬೇರೆಯಿತ್ತು!.
-ವೀರಲಿಂಗನಗೌಡ್ರ.
9448186099



