
ಕೊಳೆರೋಗಕ್ಕೆ ಬಲಿಯಾದ ಅಡಿಕೆ,ಕಾಳುಮೆಣಸು ತೋಟಿಗರ ಆತಂಕ ಹೆಚ್ಚಿಸಿದ ಬಿಸಿಲುಮಳೆ
ಈವರೆಗಿನ ಸಮೀಕ್ಷೆಯಂತೆ3018 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರದ ಉತ್ತರಕನ್ನಡ ಜಿಲ್ಲೆಯ ಬೆಳೆಹಾನಿ 64 ಕೋಟಿ, ಈಗಿನ ವರದಿಯಂತೆ ಈ ಮಳೆಗಾಲದ ಅಂತ್ಯದ ವರೆಗೆ 20ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಗಳ ಹಾನಿ ಪ್ರಮಾಣ 300 ಕೋಟಿ ರೂಪಾಯಿಗಳಾಗಬಹುದು.
-ಡಾ.ಬಿ.ಪಿ.ಸತೀಶ್ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ಶಿರಸಿ
ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರಕನ್ನಡ ಜಿಲ್ಲೆ ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಈ ವರ್ಷ ಸುರಿದ ವಿಪರೀತ ಮಳೆ ಮತ್ತು ಈಗಿನ ಮಳೆ-ಬಿಸಲು ವಾತಾವರಣ ಬೆಳೆಗಳ ಮೇಲೆ ತೀವೃ ಪರಿಣಾಮ ಬೀರಿದೆ.
ಭತ್ತದ ಗದ್ದೆಗಳಲ್ಲಿ ತುಂಬಿರುವ ಪ್ರವಾಹದ ಮಣ್ಣು ಭತ್ತದ ಬೆಳೆಯನ್ನು ಮಣ್ಣುಮಾಡಿದ್ದರೆ, ತೋಟಿಗರ ಸ್ಥಿತಿ ಚಿಂತಾಜನಕವಾಗುವಂತೆ ಈ ವರ್ಷದ ಮಹಾಮಳೆ ಮತ್ತು ನಂತರದ ಬಿಸಿಲು ಮಳೆ ಕೆಲಸ ಮಾಡಿವೆ.
ಮಳೆಯಿಂದಾದ ನೇರ ಬೆಳೆಹಾನಿ ಬಗ್ಗೆ ಜಂಟೀ ಸಮೀಕ್ಷೆಮಾಡಿರುವ ಕಂದಾಯ, ಕೃಷಿ ಮತ್ತು ತೋಟಗಾರಿಗೆ ಇಲಾಖೆಗಳು ಶೇ,35-40 ಹಾನಿ ಎಂದು ವರದಿ ಮಾಡಿವೆ. ಆದರೆ ಈ ಸಮೀಕ್ಷೆಯಲ್ಲಿ ಸಂಪೂರ್ಣ ರೈತರು ಮತ್ತು ಕೃಷಿ ಕ್ಷೇತ್ರವನ್ನು ಸಮೀಕ್ಷೆ ಮಾಡಲಾಗಿಲ್ಲ.
ತೋಟಗಾರಿಕೆ ಇಲಾಖೆ ಈಗಾಗಲೇ ಪ್ರಾಥಮಿಕ ಹಾನಿಯ ವರದಿಯನ್ನು ರವಾನಿಸಿದ್ದು ಇದು ಆಗಷ್ಟ್ ತಿಂಗಳ ಮೊದಲಾರ್ಧದ ಹಾನಿಯ ಸಮೀಕ್ಷೆಯಾಗಿದೆ. ಈಗಾಗಲೇ ಆಗಿರುವ ಸಮೀಕ್ಷೆಗೆ ಸಿಕ್ಕ ಬೆಳೆಹಾನಿ ಹಾಗೂ ಈ ವರೆಗೂ ಲೆಕ್ಕಕ್ಕೆ,ವರದಿಗೆ ಸಿಗದ ಬೆಳೆಹಾನಿಗೆ ತಾಳೆನೋಡಿದರೆ ಲೆಕ್ಕಕ್ಕೆ ಸಿಗದ ಮತ್ತು ವರದಿಯೊಳಗೆ ಬರದ ಬೆಳೆಹಾನಿ ಪ್ರಮಾಣವೇ ಹೆಚ್ಚು ಎನ್ನಲಾಗುತ್ತಿದೆ.
ತೋಟಗಾರಿಕೆ ಬೆಳೆ ಹಾನಿ ವಿಳಂಬವಾಗಿ ಗಮನಕ್ಕೆ ಬರುವುದು, ಹಾಗೂ ಮಳೆಗಾಲ ಇನ್ನೂ ಒಂದು ತಿಂಗಳು ಬಾಕಿಇರುವುದರಿಂದ ತೋಟಗಾರಿಕಾ ಬೆಳೆಗಳ ಸಮಗ್ರಹಾನಿ 70-75% ದಾಟಿದರೆ ಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯವಿದೆ.
ಸಮಾಜಮುಖಿ ಪ್ರತಿನಿಧಿಜೊತೆ ಮಾತನಾಡಿದ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಈಗ ತ್ವರಿತವಾಗಿ ಮಳೆಹಾನಿ ವರದಿ ಸಲ್ಲಿಸುವ ಗಡಿಬಿಡಿಯಲ್ಲಿ ಸಾಧ್ಯವಾದಷ್ಟು ನಿಖರವಾಗಿ ಸಮೀಕ್ಷೆಮಾಡಿ ವರದಿ ನೀಡಲಾಗಿದೆ. ಆದರೆ ಅರ್ಜಿ ಕೊಡದ ರೈತರು, ನಿಧಾನವಾಗಿ ಬೆಳಕಿಗೆ ಬಂದ ಹಾನಿ ಹಾಗೂ ಸಮೀಕ್ಷೆ, ಕಾಲಮಿತಿ ನಂತರದ ಹಾನಿಗಳು ಸೇರ್ಪಡೆಯಾಗದಿರುವುದರಿಂದ ಈಗ ಸಮೀಕ್ಷೆಗೆ ದೊರೆತಿರುವ, ವರದಿಯೊಳಗೆ ಕಾಣಿಸಿದ ಹಾನಿಗಿಂತ ವಾಸ್ತವದ ಹಾನಿ ಹೆಚ್ಚು ಎಂದಿದ್ದಾರೆ.
ಈ ಹಿಂದಿನ ತರಾತುರಿಯ ಪ್ರಾಥಮಿಕ ಸಮೀಕ್ಷೆಯ ನಂತರ ಕೂಡಾ ತೋಟಗಾರಿಕಾ ಬೆಳೆಗಳ ಹಾನಿ ಬಗ್ಗೆ ಅರ್ಜಿ ಸಲ್ಲಿಸಲು ಸಮಯಾವಕಾಶವಿದ್ದು ಅಡಿಕೆ, ಬಾಳೆ, ಶುಂಠಿ, ಕಾಳುಮೆಣಸು ಸೇರಿದ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಈಗಲೂ ತೋಟಗಾರಿಕೆ ಇಲಾಖೆಗೆ ಅರ್ಜಿ ನೀಡಲು ಅವಕಾಶವಿದೆ.

