ಕಾನೂರು ಕೋಟೆಯಲ್ಲಿ ಕಾಗೋಡು ತಿಮ್ಮಪ್ಪನವರ ಜೊತೆ…ಕಾಕನೂರಲ್ಲ ಇದು ನಮ್ಮ ಕಾನೂರಿನ ಕತೆ-

ಕಾನೂರು ಕೋಟೆಯಲ್ಲಿ ಕಾಗೋಡು ತಿಮ್ಮಪ್ಪನವರ ಜೊತೆ…

ಇಬ್ಬನಿಯಂತೆ ಉದುರುವ ಸೋನೆ ಮಳೆ. ಕಡಲಂಚಿ£ಂದ ಧಾವಿಸಿಬರುತ್ತ ಆಕಾಶವೆಲ್ಲ ಆವೃತ್ತಗೊಂಡ ಕಪ್ಪನೆಯ ದಟ್ಟ ಮೋಡಗಳ ಹಿಂಡು, ಜಾರು ನೆಲ, ಕೆಸರು, ನೆಲಕ್ಕೆ ಕಾಲಿಟ್ಟರೆ ಬೆನ್ನು ಡೊಂಕು ಮಾಡಿಕೊಂಡು ಗಡಿಬಿಡಿಯಲ್ಲಿ ಕಚ್ಚಿಕೊಳ್ಳುವ ಸಣ್ಣ, ದೊಡ್ಡ ಇಂಬಳಗಳ ಕಾಟ.. ಈ ಎಲ್ಲ ಕಿರಿಕಿರಿಗಳ ನಡುವೆಯೂ ಎದುರಿನ ಆಳ ಪ್ರಪಾತದಲ್ಲಿ ಏಕಾಂಗಿಯಾಗಿ ಮೇಲೆದ್ದುನಿಂತ ಬೃಹತ್ ಪರ್ವತ. ದಟ್ಟವಾದ ಕಾಡು ಬೆಳೆದಿದ್ದ ಆ ಗುಡ್ಡದ ಸುತ್ತ ಅಂಚಿನಲ್ಲಿ ಪಾಗಾರದಂತೆ ಕಾಣುವ ಗೋಡೆ ಸಾಲು ಚಕ್ಕನೆ ಗಮನ ಸೆಳೆಯಿತು. ತಿರುವುಮುರುವುಗಳ ಆ ಮಣ್ಣಿನ ರಸ್ತೆಯಲ್ಲಿ ಜೀಪಿನ ಚಕ್ರ ಜಾರುತ್ತಿತ್ತು. ಎಲ್ಲಿ ಆ ಪ್ರಪಾತದೊಡಲಲ್ಲಿ ಬೀಳುತ್ತೇವೆಯೋ ಎನ್ನುವ ಆತಂಕದಲ್ಲೂ ನಮಗೆ ದೃಷ್ಟಿ ಹೊರಗೆ ಚಾಚಿ ಆ ಸೃಷ್ಟಿ ವಿಸ್ಮಯವನ್ನು ನೋಡುವ ತವಕ.
ಆ ಆಳದಲ್ಲಿ ಎದ್ದುನಿಂತ ಗೋಪುರದಂಥ ಶೃಂಗ ಕಾನೂರು ಕೋಟೆಯ ಗುಡ್ಡ. ನಾವು ಕಾರ್ಗಲ್, ಭಟ್ಕಳ ರಸ್ತೆಯಿಂದ ಒಳಕ್ಕೆ 10-12 ಕಿಮೀ ದೂರದ ಕಾನೂರು ಭಾಗದಿಂದ ಕೋಟೆಯತ್ತ ಹೋಗುತ್ತಿದ್ದೆವು. ಹಲವು ವರ್ಷಗಳಿಂದ ನೋಡಬೇಕೆಂದು ಕಾತರಿಸಿದ್ದ ಕಾನೂರು ಕೋಟೆ ಕೊನೆಗೂ ಕಣ್ವಶವಾಗುತ್ತಿದೆ ಎನ್ನುವ ಸಂತೋಷ ಒಂದೆಡೆಯಾದರೆ, ನಾವೆಲ್ಲ ಪ್ರೀತಿಸುವ, ಗೌರವಿಸುವ, ಅಭಿಮಾನಪಡುವ ಕಾಗೋಡು ತಿಮ್ಮಪ್ಪನವರೂ ನಮ್ಮೊಂದಿಗೆ ಕೋಟೆಯನ್ನು ನೋಡಲು ಬಂದಿದ್ದಾರೆ ಎನ್ನುವದು ಖುಷಿಯ,ಅಚ್ಚರಿಯ, ಒಂಚೂರು ಭಯದ ಸಂಗತಿಯೂ ಆಗಿತ್ತು.
ಮುಂದೆ ಬೆಂಗಾವಲಿನ ಪೊಲೀಸ್ ಜೀಪ್, ಅದರ ಹಿಂದೆ ವಿಧಾನ ಸಭಾಧ್ಯಕ್ಷ ತಿಮ್ಮಪ್ಪನವರ ಕಾರು, ಅದರ ಹಿಂದೆ ಶರಾವತಿ ಅಭಯಾರಣ್ಯದ ರೇಂಜರ್ ಜೊತೆ ನಾವಿದ್ದ ಜೀಪ್. ನಾವು ಘಟ್ಟದ ಮೇಲಿನಿಂದ ಕೆಳಕ್ಕಿಳಿಯುತ್ತಿದ್ದೆವು. ಘಟ್ಟವಿಳಿಯುವ ತಿರುವು ರಸ್ತೆ ಮುಗಿದು, ಕಿರಿದಾದ ಕೆಸರಿನ, ಒಮ್ಮೆ ಏರು, ಹಾಗೇ ಸಡನ್ನಾಗಿ ಇಳುಕಲು ದಾರಿಯಲ್ಲಿ ಅತ್ತಿತ್ತ ಜಾರುವ ಚಕ್ರಗಳನ್ನು ಹಿಡಿತಕ್ಕೆ ತರುತ್ತ, ವಾಹನ ಚಲಾಯಿಸುವ ಚಾಲಕರ ಬಗ್ಗೆ ಎಲ್ಲರಿಗೂ ಬೆರಗು. ವಾಹನದ ತಾಕತ್ತು ಜಬರ್‍ದಸ್ತಾಗಿರುವಷ್ಟೇ ಚಾಲಕರ ನೈಪುಣ್ಯತೆಯೂ ಅಂಥ ದಾರಿಗಳಲ್ಲಿ ತುಂಬ ಮುಖ್ಯ. ದೊಡ್ಡ ದಿನ್ನೆಗಳನ್ನೂ ನಿರಾಯಾಸ ಹತ್ತಿ, ಜಾರು ಇಳುಕಲನ್ನೂ ಸಲೀಸಾಗಿ ಇಳಿದು, ಎಲ್ಲೂ ಜಾರದೇ, ಕೆಸರಲ್ಲಿ ಹೂಳದೇ ಕಾಡಿನೊಡಲಲ್ಲಿ ತೂರಿಕೊಂಡು ಹೋದ ದಾರಿಯಲ್ಲಿ ಸಾಗಿದ ವಾಹನಗಳು ದೊಡ್ಡ ಏರನ್ನು ಹತ್ತಿ ಗಕ್ಕನೆ ಬ್ರೇಕ್ ಒತ್ತಿದಾಗ ಎದುರಿಗೆ ಕಂಡದ್ದು ಎತ್ತರದ ಕಲ್ಲಿನ ಗೋಡೆ ಸಾಲಿನ ನಡುವಿನ ಭರ್ಜರಿ ಮಹಾದ್ವಾರ. 14ರಿಂದ 16ನೇ ಶತಮಾನದವರೆಗೆ ವಿಜೃಂಭಿಸಿದ ಗೇರಸೊಪ್ಪೆ ರಾಜ್ಯದ ಕೋಟೆ. ಹತ್ತಿರದಲ್ಲೇ ಈ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದು ಈಗ ನಗರಬಸ್ತಿಕೇರಿ ಎಂದು ಕರೆಯಿಸಿಕೊಳ್ಳುವ ಕಾಡು ಬೆಳೆದು ಅವಶೇಷಗಳಷ್ಟೇ ಉಳಿದ ಜನರಿಲ್ಲದ ಊರು.
ಇನ್ನೂರಕ್ಕೂ ಹೆಚ್ಚು ಕ್ಷೇತ್ರಾಧಿಪತಿಗಳ ಮುಖ್ಯಸ್ಥ ನಮ್ಮಂಥ ಚಿಲ್ಲರೆ ಕಾಲಾಳುಗಳ ದಂಡಿನೊಡನೆ ಕೋಟೆಯನ್ನು ನೋಡಲು ಬಂದ ಸಂಭ್ರಮವೋ? ಜೀಪ್‍ನಿಂದ ನೆಲಕ್ಕೆ ಕಾಲಿಡುತ್ತಿದ್ದಂತೇ ಆವರೆಗಿನ ಜಿಟಿಜಿಟಿ, ಅಬ್ಬರದ ಮಳೆಯಾಗಿ ಸುರಿಯತೊಡಗಿತು. ಆ ಮಳೆಗೆ ಕೋಟೆಯ ಮಹಾದ್ವಾರವೇ ನಮಗೆಲ್ಲ ಆಸರೆಯಾಯಿತು. ಹತ್ತಡಿಗಿಂತಲೂ ದಪ್ಪನಾದ, ಎತ್ತರದ ಬಿಳಿಕಲ್ಲಿನ ಆ ಮಹಾದ್ವಾರದ ಮುಂಡಿಗೆಗಳನ್ನು ನೋಡುತ್ತ ತಿಮ್ಮಪ್ಪನವರು ಮೊದಲಿಗೆ ಉದ್ಗರಿಸಿದ್ದು “ ಆಗಿನ ಕಾಲದಲ್ಲೇ ಇದನ್ನೆಲ್ಲ ಮಾಡೀದ್ರಲ್ಲಾ! ಏನು ಸಸಾರಾನಾ? ಈಗಿನಾಂಗೇ ಟೆಕ್ನಾಲಜಿನೂ ಇರ್ಲಿಲ್ಲ. ಹ್ಯಾಂಗ ತಂದ್ರೋ?ಹ್ಯಾಂಗೆ ನಿಲ್ಲಿಸಿದ್ರೋ?” ನಮ್ಮೆಲ್ಲರಂತೇ ತಿಮ್ಮಪ್ಪನವರೂ ಆ ಮಹಾದ್ವಾರವನ್ನು ಕಂಡು ಚಕಿತರಾಗಿದ್ದರು.
ಅದರ ಅಕ್ಕಪಕ್ಕ ಚೌಕಾಕಾರದ ಕಲ್ಲುಗಳನ್ನು ಚೂರು ಪದರವಿರದಂತೆ ಜೋಡಿಸಿ ಕಟ್ಟಿದ ಎತ್ತರದ ಕೋಟೆ; ಮೇಲ್ಭಾಗದಲ್ಲಿ ಕಾವಲಿನ ಬುರುಜು. ಗತಕಾಲಕ್ಕೆ ಸೇರಿಹೋದ ಸಾಮ್ರಾಜ್ಯವೊಂದರ ಇತಿಹಾಸದ ಮುನ್ನುಡಿಯಂತೆ ಅವು ನನಗೆ ಭಾಸವಾದವು.
ಮಳೆ ನಿಲ್ಲುವಷ್ಟೂ ಕಾಲವೂ ಅಗಲವಾದ ಆ ಧ್ವಾರದ ಕೆಳಗೆ ನಿಂತು ರೇಂಜರ್ ತೋರಿಸಿದ ಇಡೀ ಕಾನೂರು ಕೋಟೆಯ ಮ್ಯಾಪ್ ನೋಡಿದ ನಂತರದಲ್ಲಿ ನಮ್ಮ ಕೋಟೆ ನೋಡುವ ಕಾರ್ಯಕ್ರಮ ಶುರುವಾಯ್ತು.
ಕ್ವಚಿತ್ತಾಗಿ ಗಮನಿಸಿದ್ದರೂ ಕಾನೂರು ಕೋಟೆಯ ವಿಸ್ತೀರ್ಣ, ಅದರ ವಿನ್ಯಾಸ, ಎಷ್ಟೇ ಪರಿಚಿತವಿದ್ದರೂ ದಿಕ್ಕು ತಪ್ಪಿಸುವಂತಿದ್ದ ದಾರಿಗಳು ನಮ್ಮಲ್ಲಿ ಅಚ್ಚರಿ ಹುಟ್ಟಿಸಿದ್ದವು. ಅದನ್ನೇ ಮಾತನಾಡುತ್ತ ಬಿಳಿಕಲ್ಲಿನ ಅಗಲವಾದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪಾವಟಿಗೆಗಳನ್ನು ಹತ್ತುತ್ತ ಹೋದೆವು. ಗೇರಸೊಪ್ಪಾ ಸಾಮ್ರಾಜ್ಯದ ಅರಸರು, ರಾಣಿಯರು ಅದೆಷ್ಟು ಬಾರಿ ಆ ಪಾವಣಿಗೆಗಳಿಗೆ ಪಾದ ಸೋಕಿಸಿದ್ದರೋ?
ಅದೆಷ್ಟು ಅಶ್ವಗಳು, ಅದೆಷ್ಟು ಸೈನಿಕರು ಆ ಮೆಟ್ಟಿಲುಗಳನ್ನು ಹತ್ತಿಳಿದಿದ್ದರೋ? ಆ ಪಾದಾಘಾತಕ್ಕೆ ಸವೆದಿರಬಹುದಾದ ಪಾವಟಿಗೆ ಮಳೆಗೆ ಒದ್ದೆಯಾಗಿ ಜಾರುತ್ತಿತ್ತು. ಕೆಲವು ಮೆಟ್ಟಿಲುಗಳನ್ನು ತ್ರಾಸುಪಡದೇ ತಿಮ್ಮಪ್ಪನವರು ಹತ್ತಿಬಂದರು. ನಂತರ ಎರಡೂ ಪಕ್ಕದಲ್ಲಿ ಎತ್ತರದ ಗೋಡೆಗಳಿದ್ದ ಗಿಡಗಂಟಿ ಬೆಳೆದ ಕಿರಿದಾದ ಉದ್ದನೆಯ ಓಣಿಯನ್ನು ದಾಟಿದ ನಂತರ ಹಿಂದೊಮ್ಮೆ ಸಧೃಡವಾಗಿದ್ದು ಈಗ ಕುಸಿಯುತ್ತಿರುವ ಕೋಟೆಯ ಸಾಲುಗಳು ಎರಡೂ ಪಕ್ಕದಲ್ಲಿಯೂ ಆರಂಭಗೊಂಡವು. ಮಾರಗಲದ, ನಾಲ್ಕಾರು ಆಳು ಎತ್ತರದ ಗೋಡೆಗಳು ಗುಡ್ಡದ ಅಂಚಿನಲ್ಲಿದ್ದ ಕೋಟೆ ಕಟ್ಟಲು ಬಳಸಿದ್ದು ಪದರಶಿಲೆಗಳು; ಅಷ್ಟೊಂದು ಕಲ್ಲುಗಳನ್ನು ಎಲ್ಲಿಂದ ತಂದರೋ? ಹೇಗೆ ಸಂಗ್ರಹಿಸಿದರೋ?. ಜಿನುಗುತ್ತಿದ್ದ ಮಳೆಯಲ್ಲೇ ಕುಸಿದು ಬಿದ್ದ ಕೋಟೆ, ಶಿಥಿಲಗೊಂಡ ಕಟ್ಟಡಗಳು,ಪಾಳುಬಿದ್ದ ಬಾವಿಗಳನ್ನ ನೋಡುತ್ತ ಬಂದೆವು. ಮಳೆಯ ಹನಿಗೆ ಮರುಹುಟ್ಟು ಪಡೆದ ಉಂಬಳಗಳು ಅದೆಷ್ಟು ಸಹಸ್ರ ಸಂಖ್ಯೆಯಲ್ಲಿದ್ದವೋ? ಕಡ್ಡಿಯಷ್ಟು ಚಿಕ್ಕದರಿಂದ ಹೆಬ್ಬೆರಳು ಗಾತ್ರದ ಉಂಬಳಗಳು ಕಾಲನ್ನು ಮುತ್ತಿಕೊಳ್ಳುತ್ತಿದ್ದವು. ಅವನ್ನು ಕಿತ್ತು ಹಾಕುವ, ಕಾಲಿಗೆ ಹತ್ತದಂತೆ ಜಾಗ್ರತೆ ವಹಿಸುವ ಪಡಿಪಾಟಲೇ ನಮಗೆ ಮುಖ್ಯವಾಯಿತು.
ನಾವು ತಕಪಕ ಕುಣಿಯುತ್ತ ನಡೆಯುತ್ತಿದ್ದರೆ ತಿಮ್ಮಪ್ಪನವರು ಮಾತ್ರ ಆ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದಂತಿದ್ದರು. ನಿಧಾನಕ್ಕೆ ಅತ್ತಿತ್ತ ಅವಲೋಕಿಸುತ್ತ, ಇತಿಹಾಸದ ಬಗ್ಗೆಯೇ ಮಾತನಾಡುತ್ತ ಬರುತ್ತಿದ್ದರು. ಸುತ್ತಲಿನದನ್ನು ಕಂಡು ಬೆರಗು, ಕುತೂಹಲ, ಅಚ್ಚರಿ, ವಿಷಾದ ಪ್ರಾಯಶ: ನಮ್ಮಂತೇ ಅವರಿಗೂ ಆಗುತ್ತಿದ್ದಿರಬೇಕು. ಅವತ್ತು ತುಂಬಾ ಲವಲವಿಕೆ, ಕುಷಾಲು ಮಾಡುವ ಮೂಡ್ ಅವರದ್ದಿತ್ತು. ಅವರೆಲ್ಲಿಯಾದರೂ ಜಾರಿಬಿಟ್ಟಾರೆಂದು ಅವರ ಕಾರ್ ಚಾಲಕ ರಾಮಕೃಷ್ಣ ಹಾಗೂ ಮತ್ತೊಬ್ಬರು ಅವರ ಕೈಗಳನ್ನು ಹಿಡಿದುಕೊಂಡಿದ್ದರು. ಕೋಟೆಯ ನಡುವಿನ ಪುಟ್ಟ ಗುಡ್ಡವೊಂದರ ಮೇಲೆ ಹಳೆಯ ದೇವಾಲಯವಿದೆಯೆಂದು ಜೊತೆಗಿದ್ದ ಫಾರೆಸ್ಟ ಗಾರ್ಡ್ ಹೇಳಿದರು. ಆಗಲೇ ಸಾಕಷ್ಟು ದೂರ ನಡೆದಿದ್ದ ತಿಮ್ಮಪ್ಪನವರು ‘ಹೂಂ. ನಡೀರಿ, ಅದ್ನೂ ನೋಡಿದ್ರಾಯ್ತು’ ಎಂದು ತಮಗಾದ ಆಯಾಸವನ್ನು ಮರೆಸಿ, ನಮಗೆ ಹುಮ್ಮಸ್ಸು ತುಂಬಿದರು.
ನಿಧಿಕಳ್ಳರ ಆಕ್ರಮಣಕ್ಕೆ ತುತ್ತಾದ ಆ ಎರಡೂ ದೇವಾಲಯಗಳು ಜೀರ್ಣಾವಸ್ಥೆಗೆ ತಲುಪಿದ್ದವು. ಬಳಿಕಲ್ಲಿನಲ್ಲಿ ಕಟ್ಟಿದ ಆ ದೇವಾಲಯಗಳ ಒಳಗೆ ಮೂರ್ತಿಗಳ ಬದಲಾಗಿ ದೊಡ್ಡ ಕಂದಕ ತೋಡಲಾಗಿತ್ತು. ನೆಲದೊಳಗೆ ನಿಧಿಯಿರುವ ಶಂಕೆಯಿಂದ ಮೂರ್ತಿಗಳನ್ನು ಕಿತ್ತು ಅವುಗಳ ಬುಡ ಶೋಧಿಸಿದ್ದರು. ಸುಮಾರು ಇಪ್ಪತೈದು ಅಡಿಗೂ ಉದ್ದದ ಧ್ವಜಸ್ಥಂಭವನ್ನು ಉರುಳಿಸಿದ್ದರು. ಒಂದು ಅಪೂರ್ವವಾದ ಕಲಾಕೃತಿ ಮನುಷ್ಯನ ಹಣದಾಸೆಗೆ ಬಲಿಯಾಗಿತ್ತು. ನಾವು ಆಗಲೇ ಕನಿಷ್ಠ 4-5 ಕಿಮೀ.ಸುತ್ತಾಡಿದ್ದೆವು. ಉಂಬಳಗಳು ಕಚ್ಚಿ,ರಕ್ತ ಹೀರಿ ಉದುರಿದ ಜಾಗದಲ್ಲಿ ರಕ್ತ ಸೋರುತ್ತಿತ್ತು. ಕಾಲ ಬುಡದಲ್ಲಿ ಹತ್ತಿದ ಉಂಬಳಗಳು ಮೇಲಕ್ಕೂ ಹತ್ತುತ್ತಿದ್ದವು. ನಮಗೆ ಸುಸ್ತಾಗುತ್ತಿದೆ ಅನ್ನಿಸುವಾಗ ತಿಮ್ಮಪ್ಪನವರ ಪಾಡು ಏನಾಗಿರಬಹುದು? ಅವರ ಕಾಲ್ಗಳಿಗೂ ಉಂಬಳಗಳು ಕಚ್ಚಿಕೊಂಡಿದ್ದವು.
ಹೊರಟ ಜಾಗಕ್ಕೆ ವಾಪಸ್ಸು ಬಂದಾಗ ಸಂಜೆಯಾಗುತ್ತಲಿತ್ತು. ಅಲ್ಲಿ ನಿಂತ ತಿಮ್ಮಪ್ಪನವರು ತಮ್ಮೊಳಗಿನ ತುಮುಲವನ್ನು ಹತ್ತಿಕ್ಕಲಾಗದೇ “ ನೋಡ್ರಾ, ಹೆಂಗಿದ್ದ ಸಾಮ್ರಾಜ್ಯ ಹೆಂಗಾಗೋಯ್ತು. ಹೆಸರು ಹೇಳಕೂ ಒಬ್ರಿಲ್ಲದಂಗೇ ನಾಶವಾಗಿ ಹೋಯ್ತಲ್ರಾ” ಎಂದರು.
ಈ ನೆಲದ ಸಾರವನ್ನು ಉಂಡ ಕಾಳುಮೆಣಸು, ಯಾಲಕ್ಕಿಗಳ ಖ್ಯಾತಿಯನ್ನು ದೂರದ ನಾಡಿಗೂ ಪಸರಿಸಿದ, ಈ ಸಾಂಬಾರುಪಧಾರ್ಥಗಳ ಮೂಲವನ್ನರಸಿ ಸಾವಿರಾರು ಮೈಲಿಯಿಂದ ವಿದೇಶಿಯರೂ ಬರುವಂತಾದ, ಒಂದು ಕಾಲದಲ್ಲಿ ವೈಭವದಿಂದ ಮೆರೆದ ನೆಲದಲ್ಲಿ ನಾವು ನಡೆದಾಡಿದ್ದೆವು. ಈಗ ಗತವನ್ನು ನೆನಪಿಸುವ, ಕುಸಿದುಹೋದ, ಶಿಥಿಲಗೊಂಡ ಪಳೆಯುಳಿಕೆಗಳಷ್ಟೇ ನಮ್ಮೆದುರಿಗಿದ್ದವು. ಎಲ್ಲರಲ್ಲೂ ಸಣ್ಣದಾದ ನೋವು, ವಿಷಾದ. ಅದು ತಿಮ್ಮಪ್ಪನವರಲ್ಲೂ ಖಂಡಿತಾ ಮಿಡುಕುತ್ತಿತ್ತು. ಒಂದು ಕ್ಷಣ ಕಣ್ಣುಮುಚ್ಚಿ ಮೂರ್ನಾಲ್ಕು ಶತಮಾನಗಳ ಆ ದಿನಗಳನ್ನು ಊಹಿಸಿಕೊಳ್ಳಲೆತ್ನಿಸಿದೆ. ಕುದುರೆಗಳ ಕೆನೆತ, ಖುರಪುಟಗಳ ಸದ್ದು, ಸೈನಿಕರ ಘೋಷ, ಕಹಳೆಯ ಧ್ವನಿ, … ನನ್ನೊಳಗೆಲ್ಲೋ ಕೇಳಿದಂತಾಯಿತು. ತಲೆ ಕೊಡವಿ ಮತ್ತೆ ವಾಸ್ತವಕ್ಕೆ ಬರಲೆತ್ನಿಸಿದೆ.
ಈ ಎಲ್ಲದರ ನಡುವೆ ನನಗೆ ತಿಮ್ಮಪ್ಪನವರು ಕೌತುಕ, ಅಚ್ಚರಿ ಮೂಡಿಸಿದ್ದರ ಜೊತೆಗೆ ಪ್ರಶ್ನಾರ್ಥಕ ಚಿನ್ಹೆಯಾಗಿಯೂ ಕಂಡಿದ್ದರು. ಈ ಇಳಿವಯಸ್ಸಿನಲ್ಲಿ ನಮ್ಮಂಥ ಯುವಕರು ಬರಲು ಹಿಂದೇಟು ಹಾಕುವ ದಟ್ಟಾರಣ್ಯದ ನಡುವೆ ಅವರು ಓಡಾಡಿದ್ದರು. ನಮಗಿಂತ ಚುರುಕಾಗಿ ನಡೆದಾಡಿದ್ದರು. ನಮ್ಮಷ್ಟೇ ಕುತೂಹಲ, ವಿಸ್ಮಯದಿಂದ ಕೋಟೆಯನ್ನು, ಅಲ್ಲಿರುವ ಎಲ್ಲವನ್ನೂ ನೋಡಿದ್ದರು. ಬೆರಗು, ಆಶ್ಚರ್ಯ, ವಿಷಾದ ಹಲವು ಭಾವಗಳನ್ನು ಅನುಭವಿಸಿ, ಹೊಮ್ಮಿಸಿದ್ದರು. ಈ ವಯಸ್ಸಿನಲ್ಲೂ ಇವರಿಗಿರುವ ದೈಹಿಕ, ಮಾನಸಿಕ ಶಕ್ತಿ ಎಂಥದ್ದಿರಬಹುದು? ಅದನ್ನು ಪಡೆದ ಬಗೆ ಏನಿರಬಹುದು? ನನ್ನ, ನನ್ನ ನಂತರದ ತಲೆಮಾರಿಗೆ ಸಾಧ್ಯವೇ ಆಗದ ಈ ಬಗೆಯ ಸಾಮಥ್ರ್ಯ ಬಂದದ್ದಾದರೂ ಎಲ್ಲಿಂದ?
ಒಂದು ಕನಸಿನಂತೇ ನಡೆದುಹೋದ ಘಟನೆ ಇದು;
ಒಂದು ಉನ್ನತ ಸ್ಥಾನದಲ್ಲಿರುವ ಹಿರಿಯ ರಾಜಕಾರಣಿ ಸರಳವಾಗಿ ನಮ್ಮೊಂದಿಗೆ ನಡೆದಾಡಿದ್ದು, ಚರಿತ್ರೆಯ ಬಗ್ಗೆ ಆಸಕ್ತಿ, ಅದಕ್ಕೆ ಸ್ಪಂದಿಸುವ ಗುಣಗಳನ್ನು ವ್ಯಕ್ತಪಡಿಸಿದ್ದು, ಸ್ವಲ್ಪವೂ ದರ್ಪ, ಅಹಂಕಾರಗಳನ್ನು ತೋರಿಸದೇ ಗಂಭೀರವಾಗೇ ತಮಾಷೆ ಮಾಡುತ್ತಿದ್ದುದು ಎಲ್ಲವೂ. ಆದರೆ ಈ ಸಂದರ್ಭ ನನಗಂತೂ ಬಹುಮುಖ್ಯ ಪಾಠ ಮತ್ತು ಅನುಭವ. ಬಹುತೇಕ ರಾಜಕಾರಣಿಗಳಲ್ಲಿ, ಅದರಲ್ಲೂ ಇತ್ತೀಚಿನವರಲ್ಲಿ- ಕಾಣಲಾಗದ ಅಪರೂಪದ ವ್ಯಕ್ತಿತ್ವ ಕಾಗೋಡು ತಿಮ್ಮಪ್ಪನವರದ್ದು ಎಂದು ಧೃಡಪಡಿಸಿದೆ. ಆ ಕಾರಣಕ್ಕಾಗೇ ಅವರ ಬಗ್ಗೆ ಇದ್ದ ಪ್ರೀತಿ, ಗೌರವ, ಅಭಿಮಾನ ಮತ್ತಷ್ಟು ಹೆಚ್ಚಿದೆ. ಮತ್ತು ಅದೊಂದು ಸ್ಮøತಿಯಾಗಿ ನಾನಿರುವ ತನಕ ನನ್ನೊಳಗಿರುತ್ತದೆ.
-ಗಂಗಾಧರ ಕೊಳಗಿ ಸಿದ್ಧಾಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *