
ಆನವಟ್ಟಿಗೆ ವಿರೋಧ, ಬನವಾಸಿಗೆ ಸ್ವಾಗತ
ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಐತಿಹಾಸಿಕ ಪ್ರಸಿದ್ಧ ಪ್ರದೇಶ. ಈ ಬನವಾಸಿಯನ್ನು ಅಭಿವೃದ್ಧಿಪಡಿಸುವುದು, ಅದಕ್ಕೆ ಹೆಚ್ಚಿನ ಮಹತ್ವ, ಪ್ರಾಮುಖ್ಯತೆ ದೊರೆಯುವಂತೆ ಮಾಡುವುದು ಈ ನಾಡಿನ ಸರ್ಕಾರಗಳ ಕರ್ತವ್ಯ.
ಕನ್ನಡದ ಮೊದಲ ರಾಜಧಾನಿಯಾಗಿ ಜಗದ್ವಿಖ್ಯಾತವಾಗಿದ್ದ ಬನವಾಸಿಯನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯ (ರಾಜಧಾನಿ) ವಿಭಾಗ ಮಾಡುವುದು ಬನವಾಸಿಯ ಅನನ್ಯತೆಯ ದೃಷ್ಟಿಯಿಂದ ಮಹತ್ವದ್ದು, ಆದರೆ ಆಳುವವರು,ಪ್ರಭುತ್ವ ಆಡಳಿತ ಬನವಾಸಿಯನ್ನು ಸಂಗೀತಕುರ್ಚಿಯಂತಾಗಿಸಿಕೊಂಡಿದೆ. ಶ್ವೇತಪುರ, ಸಂಗೀತಪುರ ಎಂಬೆಲ್ಲಾ ವಿಶೇಶಣಗಳಿಂದ ಗುರುತಿಸಿಕೊಂಡಿದ್ದ ಬನವಾಸಿ ವಾಸ್ತುಶಿಲ್ಫಗಳು, ನೀರಾವರಿ ನಿರ್ವಹಣೆ ಸೇರಿದಂತೆ ಅನೇಕ ಕೊಡುಗೆಗಳನ್ನು ನಾಡಿಗೆ ಕೊಟ್ಟ ಹಿಂದಿನ ರಾಜಧಾನಿ. ಈ ಬನವಾಸಿ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದರೆ ಕನಿಷ್ಟ ಅದಕ್ಕೆ ಸಲ್ಲುವ ಮಹತ್ವ ದೊರೆಯುತಿತ್ತು. ಆದರೆ ಇದು ಕನಿಷ್ಟ ಒಂದು ತಾಲೂಕು ಕೇಂದ್ರವಾಗಿರದಿದ್ದುದು ಆಳುವವರ ವಿದ್ರೋಹಕ್ಕೆ ಹಿಡಿದ ಕನ್ನಡಿ.
ಬನವಾಸಿ ಮೊದಲು ಐತಿಹಾಸಿಕ ಪ್ರದೇಶ, ನಂತರ ಸಾಹಿತ್ಯ, ಸಂಗೀತ, ಕೃಷಿಯ ಸಾಧಕರ ಊರು. ಈ ಊರು ಶಿರಸಿ ತಾಲೂಕಿನಲ್ಲಿದೆಯಾದರೂ ಈ ಭಾಗಕ್ಕೆ ಜನಪ್ರತಿನಿಧಿ ಯಲ್ಲಾಪುರ ಕ್ಷೇತ್ರದವರು!. ಬನವಾಸಿಯ ಐತಿಹಾಸಿಕ ಮಹತ್ವಕ್ಕೆ ಅಪಚಾರ ಮಾಡುವ ಪ್ರಭುತ್ವದ ಅನೇಕ ತಪ್ಪು ತೀರ್ಮಾನಗಳಲ್ಲಿ ಉಪವಿಭಾಗದ ತಾಲೂಕಿನಿಂದ ಬನವಾಸಿಯನ್ನು ಬೇರ್ಪಡಿಸಿ ಹೊರ ತಾಲೂಕಿಗೆ ಸೇರಿಸಿದ್ದು ಸೇರುತ್ತದೆ.
ಈ ಸೇರ್ಪಡೆ ಹಿಂದೆ ಆಗ ರಾಜ್ಯ ಚುನಾವಣಾ ಆಯುಕ್ತರಾಗಿದ್ದವರು ಸ್ಥಳಿಯ ಹೆಗಡೆ ಎನ್ನುವವರು ಎಂಬುದು ಕಾಕತಾಳೀಯವೇನಲ್ಲ. ಹೀಗೆ ರಾಜಕೀಯ ಸ್ವಾರ್ಥಿಗಳ ಆಟಾಟೋಪಕ್ಕೆ ಗುರಿಯಾಗಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸಿಡಿದ ಬನವಾಸಿ ಬಹುಹಿಂದೆ ತಾಲೂಕು ಕೇಂದ್ರವಾಗಬಹುದಿತ್ತು. ಆದರೆ ದಾಂಡೇಲಿಯನ್ನು ಪ್ರತ್ಯೇಕ ತಾಲೂಕಾಗಿಸಿದ ಪ್ರಭುತ್ವ ಬನವಾಸಿಯನ್ನು ಅಕ್ಷರಶ: ವನವಾಸಿಯನ್ನಾಗಿಸಿದೆ.
ಬನವಾಸಿ, ಸಿದ್ಧಾಪುರ ಸೇರಿದಂತೆ ಕೆಲವು ಪ್ರದೇಶವನ್ನು ಸೇರಿಸಿ ಶಿಕಾರಿಪುರ ಅಥವಾ ಸಾಗರ ಜಿಲ್ಲೆಯನ್ನಾಗಿಸುವ ಪ್ರಭಾವಿ ರಾಜಕಾರಣಿಗಳ ಪ್ರಯತ್ನಕ್ಕೆ ಉತ್ತರಕನ್ನಡ ಜಿಲ್ಲೆಯ ಐತಿಹಾಸಿಕ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಪ್ರದೇಶಗಳು ಬಲಿಯಾಗುತ್ತಿವೆ ಎನ್ನುವ ಕೂಗು ಬಹುಹಿಂದೇ ಎದ್ದಿದೆ. ಈಗ ಬನವಾಸಿ ಹೋಬಳಿಯನ್ನು ನೆರೆಯ ಶಿವಮೊಗ್ಗ ಜಿಲ್ಲೆಯ ಸೊರಬದ ಸಾಧ್ಯತೆಯ ಆನವಟ್ಟಿ ತಾಲೂಕಿಗೆ ಸೇರಿಸುವ ಪ್ರಯತ್ನ ನಡೆಯುತ್ತಿರುವ ಗುಲ್ಲೆದ್ದು ಅದಕ್ಕೆ ಬನವಾಸಿ ಭಾಗದ ಪ್ರಮುಖರ ಪ್ರತಿಭಟನೆಗಳು ದಾಖಲಾಗಿವೆ.
ನೆರೆಯ ಜಿಲ್ಲೆಯ ಹೋಬಳಿ ತಾಲೂಕುಗಳನ್ನು ಹಾಗೆ ಮನಬಂದಂತೆ ಯಾವುದೋ ತಾಲೂಕು, ಕ್ಷೇತ್ರ, ಜಿಲ್ಲೆಗಳಿಗೆ ಸೇರಿಸಬಹುದೆ? ಹೀಗೆ ಸೇರಿಸುವ ಸಾಧ್ಯತೆ ಇದ್ದರೆ ಅಲ್ಲಿಯ ಭಾಗೋಲಿಕ,ಸಾರ್ವಜನಿಕ ಮಹತ್ವ, ಅಭಿಪ್ರಾಯಗಳಿಗೆ ಬೆಲೆ ಇಲ್ಲವೆ? ಅಷ್ಟಕ್ಕೂ ಇಂಥ ಸೇರ್ಪಡೆ, ತೆಗೆದುಹಾಕುವ ಪ್ರಕ್ರೀಯೆಗಳನ್ನು ಯಾರದ್ದೋ ಅನುಕೂಲ, ಯಾವುದೋ ಹಿತಾಸಕ್ತಿಯ ಕಾರಣಕ್ಕೆ ಮಾಡಬಹುದೆ? ಇಂಥ ಪ್ರಮುಖ ಪ್ರಶ್ನೆಗಳ ಹಂಗಿಲ್ಲದೆ ಗೋಡಾ ಹೈ ಮೈದಾನ್ ಹೈ ಎನ್ನುವಂತೆ ಗುಲಾಮಿ ಸರ್ಕಾರದ ಮುಖ್ಯಮಂತ್ರಿಯೊಬ್ಬ ತನ್ನ ವೈಯಕ್ತಿಕ, ತಮ್ಮ ತಾಲೂಕು, ಜನರ ಹಿತಾಸಕ್ತಿಗಾಗಿ ಅನ್ಯರ ಹಿತಾಸಕ್ತಿ, ಅಭಿಪ್ರಾಯ ಧಿಕ್ಕರಿಸಬಹುದೆ? ಹಿಂದೆ ಶಿರಸಿ ಕ್ಷೇತ್ರದಲ್ಲಿದ್ದ ಬನವಾಸಿ ಹೋಬಳಿಯನ್ನು ಪ್ರತ್ಯೇಕಿಸಿ ಯಲ್ಲಾಪುರಕ್ಕೆ ಸೇರಿಸಲು ಪ್ರಯತ್ನಿಸಿ ಯಶ ಸಾಧಿಸಿರುವ ಮಾತಾಂಧ ಶಕ್ತಿಗಳು ಹಿಂದಿನಂತೆಯೇ ಈಗಲೂ ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸಿ ನಂತರ ತಮ್ಮ ಸೋಗುಗಳಾದ ಜಾತಿ, ಧರ್ಮ,ಪಕ್ಷ, ಸಂಘಗಳ ನೆರವಿನಿಂದ ಜನಾಭಿಪ್ರಾಯ, ಒಪ್ಪಿಗೆ ಖರೀದಿಸುವ ಹುನ್ನಾರದ ಬಗ್ಗೆ ಬನವಾಸಿ ಭಾಗದ ಜನರು ತಕರಾರು ದಾಖಲಿಸಿರುವುದು ಉತ್ತಮ ಬೆಳವಣಿಗೆ.
ಹಾಗೆಯೇ ಬನವಾಸಿಯನ್ನು ಪ್ರತ್ಯೇಕ ತಾಲೂಕು ಕೇಂದ್ರ, ಶಿರಸಿ ಅಥವಾ ಬನವಾಸಿ ಜಿಲ್ಲಾ ಕೇಂದ್ರ ಮಾಡಿಕೊಳ್ಳುವ ಸಾರ್ವಜನಿಕರ ಒಲುವನ್ನು ಆ ಭಾಗದ ಪ್ರಮುಖರು ಹಕ್ಕೊತ್ತಾಯ, ಹೋರಾಟವಾಗಿ ರೂಪಿಸದಿದ್ದರೆ ಸ್ವಾರ್ಥಕ್ಕಾಗಿ ದೇಶಪ್ರೇಮ, ದೇಶಭಕ್ತಿ, ಬೂಟಾಟಿಕೆಯ ನಕಲಿ ರಾಷ್ಟ್ರೀಯತೆಗಳನ್ನೇ ಬಳಸಿಕೊಂಡು ಠಕ್ಕರು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಪ್ರಯತ್ನ ಮಾಡಲಾರರು ಎಂಬುದಕ್ಕೆ ಯಾವುದೇ ಭರವಸೆ ಇಲ್ಲ. ಹಾಗಾಗಿ ದೇಶಪ್ರೇಮದ ಸೋಗು ರಾಷ್ಟ್ರೀಯತೆ, ಒಂದೇಧ್ವಜ ಎನ್ನುವ ಹಸಿಸುಳ್ಳುಗಳ ಮೂಲಕ ದೇಶದ ಬಹುಸಂಖ್ಯಾತರಿಗೆ ಚಿಪ್ಪು ಹಿಡಿಸಲು ಹೊರಟಿರುವ ಪರಿವಾರದ ದುಷ್ಟ ಚಿಂತನೆಗಳ ಹಿನ್ನೆಲೆಯಲ್ಲಿ ಶಿರಸಿ ಕ್ಷೇತ್ರದಿಂದ ಬನವಾಸಿ ಬೇರ್ಪಡಿಸಿರುವುದು, ಈಗ ಬನವಾಸಿಯನ್ನು ನೆರೆಯ ಆನವಟ್ಟಿಯೋಜಿತ ತಾಲೂಕಿಗೆ ಸೇರ್ಪಡೆಗೆ ಮುಂದಾಗಿರುವುದು ಇವುಗಳ ಹಿಂದೆ ಧರ್ಮ, ದೇಶಭಕ್ತಿಯ ಮುಖವಾಡದ ಸ್ವಾರ್ಥಿಗಳ ಲಾಭದ ರಾಜಕಾರಣವಿದೆ ಎನ್ನುವ ಸತ್ಯ ಬನವಾಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಅರ್ಥವಾಗಬೇಕು.
ಆದರೆ ಸೋಗಲಾಡಿ ಸುಳ್ಳುಗಾರರ ಸಂಘದ ಲಾಭಕೋರ ಧರ್ಮಾಂಧರನ್ನು ಆಯ್ಕೆ ಮಾಡುವ ಜನತೆ ತಮ್ಮ ಅನುಕೂಲ, ಅಭಿರುಚಿಗಳನ್ನು ಬೂಟಾಟಿಕೆಯ ದೇಶಭಕ್ತ, ಮತಾಂಧ ದುಷ್ಟ ರಾಜಕಾರಣಿಗಳಿಗೆ ಮಾರುತ್ತಿರುವಾಗ ಬನವಾಸಿ ತನ್ನ ಅನನ್ಯತೆ, ವಿಶಿಷ್ಟತೆ, ಮಹತ್ವ ಉಳಿಸಿಕೊಳ್ಳುವುದೆ? ಇದೇ ಬನವಾಸಿ ದೇಶದ ಜನರಿಗಿರುವ ಸವಾಲು ಕೂಡಾ. ಅಂದಹಾಗೆ ಈ ವಿಚಾರಗಳೆಲ್ಲಾ ಘನತೆವೆತ್ತ ಮಾನ್ಯ ಹಾಲಿ ವಿಧಾನಸಭಾ ಅಧ್ಯಕ್ಷರು ಮತ್ತು ಹಿಂದಿನ ಕೇಂದ್ರದ ಕೌಶಲ್ಯಾಭಿವೃದ್ಧಿ! ಮಂತ್ರಿಗಳಿಗೆ ತಿಳಿದಂತಿಲ್ಲ.ಅವರ ಹಿಂಬಾಲಕ ಭಕ್ತರ ಬಗ್ಗೆ ಮಾತನಾಡುವುದರಲ್ಲೂ ಯಾವ, ಅರ್ಥ, ಮಹತ್ವ ಕಾಣಿಸುತ್ತಿಲ್ಲ.



