

ಸಿದ್ಧಾಪುರ ತಾಲೂಕಿನ ಬಿಳಗಿ, ಹೊಸೂರು,ಬೇಡ್ಕಣಿ ಸೇರಿದಂತೆ ಕೆಲವೆಡೆ ಮನೆ ಕೆಲಸ, ರಸ್ತೆ, ರಿಪೇರಿಗಳಿಗೆ ಅವಕಾಶ ಕೊಡದ ಪುರಾತತ್ವ ಇಲಾಖೆ, ಮಹತ್ವದ ಪಳಯುಳಿಕೆಯಾದ ನೈಸರ್ಗಿಕ ಕಲ್ಲಿನ ಸೇತುವೆ ವಿಚಾರದಲ್ಲಿ ಕಣ್ಣಿದ್ದೂ ಕುರುಡು ಎನ್ನುವಂತಿದೆ.ಐತಿಹಾಸಿಕ, ನೈಸರ್ಗಿಕ ಮಹತ್ವದ ಪಳಯುಳಿಕೆಗಳನ್ನು ಉಳಿಸಿ, ಸಂರಕ್ಷಿಸುವ ಹಿನ್ನೆಲೆಯಲ್ಲಿ ಕೆಲಸಮಾಡಬೇಕಾದ ಅವಶ್ಯಕತೆ ಈಗ ಹೆಚ್ಚಾಗಿದೆ.
ಜಗತ್ತಿನ ವಿಸ್ಮಯ ಎನ್ನಲಾಗುವ ಸಿದ್ಧಾಪುರ ಮನ್ಮನೆ ಮಳವಳ್ಳಿಯ ನೈಸರ್ಗಿಕ ಕಲ್ಲಿನ ಸೇತುವೆ ಶಿಥಿಲವಾಗುತ್ತಿರುವ ವಿದ್ಯಮಾನ ಕಳವಳಕ್ಕೆ ಕಾರಣವಾಗಿದೆ. ಜಗತ್ತಿನ ಯಾವ ಭಾಗದಲ್ಲೂ ಇರದ ಕಲ್ಲಿನ ನೈಸರ್ಗಿಕ ಸೇತುವೆ ಉತ್ತರಕನ್ನಡ ಜಿಲ್ಲೆಯ ಗಡಿಭಾಗದ ಜೋಗ ಸಮೀಪದಲ್ಲಿದೆ. ಈ ವಿಸ್ಮಯ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಕೇಂದ್ರವಾಗಿದೆ. ಆದರೆ ಇದರ ರಕ್ಷಣೆ ಮತ್ತು ಸುರಕ್ಷಿತತೆಗೆ ಯಾರೂ ಜವಾಬ್ಧಾರಿ ಹೊರದಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಎತ್ತಿನ ಗಾಡಿ, ಕುದುರೆ ಟಾಂಗಾ,ಕುದುರೆ ಸವಾರಿ ಮಾಡುತ್ತಾ ಉತ್ತರಕನ್ನಡದಿಂದ ಶಿವಮೊಗ್ಗ ಮತ್ತು ಗೇರುಸೊಪ್ಪಾ ತಲುಪಲು ಬಳಸುತಿದ್ದ ಈ ಕಲ್ಲಿನ ಸೇತುವೆ ರಕ್ಷಣೆ, ಭದ್ರತೆ ಇಲ್ಲದೆ ಯಾರಿಗೂ ಸಂಬಂದಿಸಿüಲ್ಲದ ಪಳಯುಳಿಕೆಯಂತಾಗಿದೆ.
ಸುಮಾರು 80-100 ವರ್ಷಗಳ ಹಿಂದೆ 40 ಅಡಿಗಳಿಗಿಂತ ಅಗಲವಾಗಿದ್ದ ಈ ನೈಸರ್ಗಿಕ ಸೇತುವೆ ಕುಸಿಯುತ್ತಾ,ಕಳಚುತ್ತಾ ಈಗ ನಾಲ್ಕೈದು ಅಡಿಯಷ್ಟು ಕಿರಿದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯ ಸಣ್ಣಹೊಳೆಗೆ ಬಾಂದಾರ ಮತ್ತು ಸೇತುವೆ ನಿರ್ಮಿಸುವ ಮೊದಲು ಜನ-ಜಾನುವಾರುಗಳ ಸಾಗಾಟಕ್ಕೆ ಬಳಕೆಯಾಗುತಿದ್ದ ಈ ನೈಸರ್ಗಿಕ ಸೇತುವೆ ಪುನರುಜ್ಜೀವನಕ್ಕೆ ಕರಾವಳಿ ಪ್ರಾಧಿಕಾರದಿಂದ ಹತ್ತು ಲಕ್ಷ ಮಂಜೂರಿಯಾಗಿತ್ತಾದರೂ ಜಿಲ್ಲಾಧಿಕಾರಿಗಳು ಈ ಕಾಮಗಾರಿಗೆ ಅನುಮತಿ ನೀಡಿಲ್ಲ. ಮೊದಮೊದಲು ವಿಸ್ತಾರವಾಗಿದ್ದ ಈ ಕಲ್ಲಿನ ಸೇತುವೆ ಇತ್ತೀಚಿನ ದಿನಗಳಲ್ಲಿ ಶಿಥಿಲವಾಗುತ್ತಾ ಕ್ಷಯಿಸುತ್ತಿರುವುದರಿಂದ ಜಿಲ್ಲಾಡಳಿತ ಇದರ ಸಂರಕ್ಷಣೆಯ ಹೊಣೆ ಹೊರಬೇಕು ಇಲ್ಲ ಇದನ್ನು ಪುರಾತತ್ವ ಇಲಾಖೆಯ ಮುತುವರ್ಜಿಗೆ ವಹಿಸಬೇಕು ಎನ್ನುವುದು ಈ ಭಾಗದ ಪ್ರಮುಖ ಸಾಮಾಜಿಕ ಕಾರ್ಯಕರ್ತ ವಸಂತ ನಾಯ್ಕ ಮಳಲವಳ್ಳಿಯವರ ಅನಿಸಿಕೆ.
ಈ ಕಲ್ಲಿನ ಸೇತುವೆ ಬಗ್ಗೆ ಐತಿಹಾಸಿಕ ಮಾಹಿತಿ ನನ್ನ ಬಳಿ ಇಲ್ಲ, ಆದರೆ ಸಂಶೋಧನೆ ಮಾಡಿದರೆ ಇದರ ಐತಿಹಾಸಿಕ ಮಹತ್ವ ಹೊರಬರಬಹುದು ಎನ್ನುತ್ತಾರೆ ಇತಿಹಾಸ ತಜ್ಞ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ.
ಹೀಗೆ ವಿಶಿಷ್ಟ,ವಿನೂತನ ಎನ್ನುವಂತಿರುವ ಈ ನೈಸರ್ಗಿಕ ಕಲ್ಲಿನ ಸೇತುವೆ ಪ್ರವಾಸಿಗರಿಗೆ ಗೊತ್ತೇ ಹೊರತು,ಪುರಾತತ್ವ ಇಲಾಖೆಯಾಗಲಿ, ರಾಜ್ಯ ಪ್ರವಾಸೋದ್ಯಮ ಇಲಾಖೆಯಾಗಲಿ ಇದನ್ನು ಗಮನಿಸಿಲ್ಲ. ಸ್ವಾತಂತ್ರ್ಯ ಹೋರಾಟ, ಕಾಗೋಡು ಚಳವಳಿಗಳ ಧೀರರ ನೆಲವಾದ ಸಿದ್ಧಾಪುರ ತಾಲೂಕಿನಲ್ಲಿ ಈ ವಿಸ್ಮಯ ಇರುವ ಬಗ್ಗೆ ಜನತೆ ಹೆಮ್ಮೆಯಿಂದ ಬೀಗುತ್ತಾರೆ.ಆದರೆ ಕೆಲವು ಸ್ಥಳಿಯ ರಾಜಕಾರಣಿಗಳನ್ನು ಬಿಟ್ಟರೆ ಶಿರಸಿ ಕ್ಷೇತ್ರ, ಉತ್ತರ ಕನ್ನಡವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವವರು ಈ ವಿಸ್ಮಯದ ಬಗ್ಗೆ ಎಲ್ಲೂ ಬೆಳಕು ಚೆಲ್ಲಿಲ್ಲ.
ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೋರ್ಟಲ್ ಗಳಲ್ಲಿ ಒಂದೆರಡು ಬಾರಿ ಬರೆದು ಪರಿಚಯ, ಇದರ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿಸಿದ್ದಾಗ್ಯೂ ಸಿದ್ಧಾಪುರ ತಾಲೂಕಾ ಆಡಳಿತ, ಉತ್ತರ ಕನ್ನಡ ಜಿಲ್ಲಾಡಳಿತ ಜನಪ್ರತಿನಿಧಿಗಳು ಗಮನ ಹರಿಸಿಲ್ಲ.
ಭವಿಷ್ಯದಲ್ಲಿ ಐತಿಹಾಸಿಕ ದಾಖಲೆ, ಪುರಾತನ ವೈಶಿಷ್ಟ್ಯ ಆಗಿ ಚಿತ್ರದಲ್ಲಿ ಮಾತ್ರ ನೋಡುವಂತೆ ಮಾಡುವ ಬದಲು ಸರ್ಕಾರ ಈ ಕಲ್ಲಿನ ಸೇತುವೆಯನ್ನು ಉಳಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ.





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
