ಆರ್ಥಿಕ ಹಿಂಜರಿತ – ಆತಂಕದಲ್ಲಿ ಭಾರತ..?

ಆರ್ಥಿಕ ಹಿಂಜರಿತ – ಆತಂಕದಲ್ಲಿ ಭಾರತ..? (Recession in India..?)

ಆರ್ಥಿಕ ಹಿಂಜರಿತ – ಆತಂಕದಲ್ಲಿ ಭಾರತ..? (Recession in India..?)

ಭಾರತದ ಜನಸಾಮಾನ್ಯರಲ್ಲಿ ಕೊಂಚ ಕೊಂಚ ಆತಂಕ ಆರಂಭವಾಗಿದೆ. ಪ್ರತಿದಿನ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಪದೇ ಪದೇ ಬರುವ ಅವೇ ಸುದ್ದಿಗಳು, ದೊಡ್ಡ ದೊಡ್ಡ ಕಂಪನಿಗಲ್ಲಿ ಕೆಲಸ ಕಡಿತ, ಸಂಬಳದಲ್ಲಿ ಕಡಿತ, ದೇಶಧ ಜಿಡಿಪಿ ಕಡಿತ, ಮಾರುಕಟ್ಟೆಯಲ್ಲಿ ಬೇಡಿಕೆ ಕಡಿತ, ಬೆಲೆಯಲ್ಲಿ ಯಾವುದೇ ಕಡಿತವಿಲ್ಲದೇ ದಿನೇ ದಿನೇ ಏರುತ್ತಿರುವ ದಿನನಿತ್ಯದ ವಸ್ತುಗಳು ಹೀಗೆ.. ಅಸಲಿಗೆ ಯಾವೆಲ್ಲ ಸರಕು ಸೇವೆಗಳ ಬೆಲೆಯಲ್ಲಿ ಏರಿಕೆ ಆಗಬೇಕಿತ್ತೋ ಮತ್ತು ಯಾವೆಲ್ಲ ಸರಕು ಸೇವೆಗಳು ಸಸ್ತಾಗಬೇಕೆತ್ತೋ ಅದಾವುದೂ ಆಗುತ್ತಿಲ್ಲ. ಎಲ್ಲವೂ ತಿರುವು ಮುರುವಾಗುತ್ತಿದೆ. ಜನಸಾಮಾನ್ಯರ ನಿರೀಕ್ಷೆಗಳು ಕೂಡ ಅದಲು ಬದಲಾಗುತ್ತಿವೆ. ಕೆಲವರು ಆಳುವ ಸರಕಾರವನ್ನು ಬೈಯುತ್ತಿದ್ದಾರೆ ಇನ್ನು ಕೆಲವರು ಕಾರ್ಪೋರೇಟ್ ಕಂಪನಿಗಳತ್ತ ಬೆಟ್ಟು ಮಾಡುತ್ತಾರೆ. ಕೆಲವು ಆರ್ಥಿಕ ತಜ್ಞರು ಇದನ್ನು ಆರ್ಥಿಕ ಹಿಂಜರಿತವೆಂದು ಹೆಸರಿಡುತ್ತಿದ್ದಾರೆ. ಒಟ್ಟಾರೆಯಾಗಿ ಭಾರತದ ಅರ್ಥವ್ಯವಸ್ಥೆಯಲ್ಲಿ ಏರುಪೇರಾಗುತ್ತಿರುವುದಂತೂ ಸತ್ಯ.

ನಮ್ಮ ದೇಶದ ಬಹುಸಂಖ್ಯಾತ ಜನಸಾಮಾನ್ಯರಿಗೆ ಅರ್ಥವ್ಯವಸ್ಥೆಯ ಅಂಕಿ ಅಂಶಗಳು, ಇಲ್ಲಿನ ವಿಶ್ಲೇಷಣೆಗಳು, ಫಾರ್ಮುಲಾಗಳು, ಇವಾವುದೂ ಅರ್ಥವಾಗುವುದಿಲ್ಲ. ದಿನಬಳಕೆಯ ಅಗತ್ಯ ಸರಕು ಮತ್ತು ಸೇವೆಗಳ ಮೇಲಿನ ದರ ಬದಲಾವಣೆಯ ಮೇಲಷ್ಟೇ ಅರ್ಥವ್ಯವಸ್ಥೆಯನ್ನು ವಿಶ್ಲೇಷಣೆ ಮಾಡಬಲ್ಲರು. ಮೊದಮೊದಲಿಗೆ 20 ರೂಪಾಯಿ ಇದ್ದ ಒಂದು ಕಿಲೋ ಟೊಮೆಟೋ ಬೆಲೆ ಇಂದು 50ಕ್ಕೆ ಏರಿದೆ,ಈರುಳ್ಳಿ ನೆನಪಾದರೆ ಕಣ್ಣಲ್ಲಿ ನೀರು ಬರುತ್ತದೆ. ಯಾಕೆ ಹೀಗೆಲ್ಲ ಆಗುತ್ತಿದೆ? ಬೆಲೆ ಹೆಚ್ಚಾಗುತ್ತಿದೆ ಅಂದರೆ ಪೂರೈಕೆ ಕಡಿಮೆಯಾಗುತ್ತಿದೆ ಎಂದೇ ಅರ್ಥ. ಪೂರೈಕೆ ಕಡಿಮೆಯಾದಾಗ ಬೆಲೆ ಏರಿಕೆ ಸಹಜ. ಪೂರೈಕೆ ಮಾರುಕಟ್ಟೆಯ ಬೇಡಿಕೆಯ ಮೇಲೆ ಬದಲಾಗುತ್ತಿರುತ್ತದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗದಾಗ ಸಹಜವಾಗಿ ಬೆಲೆ ಏರಿಕೆ ಆರಂಭವಾಗುತ್ತದೆ.  ಅಂದರೆ ಬೆಲೆ ಏರಿಕೆ ಮತ್ತು ಇಳಿಕೆಯ ಆಧಾರದ ಮೇಲೆ ಇಡೀ ಅರ್ಥವ್ಯವಸ್ಥೆಯ ಚಲನೆಯನ್ನು ಅರ್ಥಮಾಡಿಕೊಳ್ಳುವ ಜನಸಾಮಾನ್ಯರ ವಿಶ್ಲೇಷಣೆಗಳು ಒಂದರ್ಥದಲ್ಲಿ ಸರಿ ಎನಿಸುತ್ತದೆ.

ಇಂದಿನ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿ ನೂರಾರು ಸಮಸ್ಯೆಗಳನ್ನು ನೋಡಿದರೆ ನಮ್ಮ ಅರ್ಥವ್ಯವಸ್ಥೆಯ ಆರೋಗ್ಯ ಹದಗೆಟ್ಟಿರುವುದಂತೂ ಸತ್ಯ. ಅಸಲಿಗೆ ನಮ್ಮ ಅರ್ಥವ್ಯವಸ್ಥೆಯಲ್ಲಿ ಏನಾಗುತ್ತಿದೆ ಅಥವಾ ಏನಾಗಬಹುದು ಎಂಬುದರ ಬಗ್ಗೆ ಒಂದು ವಿಶ್ಲೇಷಣೆ.

ಅರ್ಥವ್ಯವಸ್ಥೆಯ ಸ್ಥಿತಿಯನ್ನು ಹೇಗೆ ಅಳೆಯಲಾಗುತ್ತದೆ.( How the state of the economy is measured)

ದೇಶದ ಅರ್ಥವ್ಯವಸ್ಥೆಯ ಪ್ರಗತಿಯನ್ನು ಆ ದೇಶದ ಜಿಡಿಪಿ ದರದ ಮೂಲಕ  ಅಳೆಯಲಾಗುತ್ತದೆ.ಜಿಡಿಪಿ ದರದ ಬದಲಾವಣೆಯೇ ದೇಶದ ಅರ್ಥವ್ಯವಸ್ಥೆಯು ಸಾಗುತ್ತಿರುವ ದಿಕ್ಕಿನ ಸಂಕೇತವಾಗಿದೆ. ಹಾಗಾದರೆ ಜಿಡಿಪಿ ಎಂದರೇನು ಎಂದು ತಿಳಿದುಕೊಳ್ಳುವುದು ಅವಶ್ಯ.

ಜಿಡಿಪಿ- ಒಟ್ಟೂ ರಾಷ್ಟ್ರೀಯ ಉತ್ಪನ್ನ (Gross domestic product)

ರಾಷ್ಟ್ರೀಯ ಉತ್ಪನ್ನ (GDP) ಒಂದು ದೇಶದ ಅರ್ಥವ್ಯವಸ್ಥೆಯನ್ನು ಅಳೆಯುವ ಒಂದು ಮಾಪನ. ಒಂದು ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕುಗಳ ಮತ್ತು ಸೇವೆಗಳ ಒಟ್ಟು ಮಾರುಕಟ್ಟೆಯ ಮೌಲ್ಯವು ಆ ದೇಶದ ರಾಷ್ಟ್ರೀಯ ಉತ್ಪನ್ನವಾಗುತ್ತದೆ. ಈ ಉತ್ಪನ್ನವನ್ನು ಆ ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದರೆ ಅದನ್ನು ತಲಾ ಆದಾಯವೆಂದು ಕರೆಯಲಾಗುತ್ತದೆ.

ಒಟ್ಟೂ ರಾಷ್ಟ್ರೀಯ ಉತ್ಪನ್ನ (GDP) ವನ್ನು ಅಳೆಯುವುದು ಹೇಗೆ: (How to Calculate GDP)

ರಾಷ್ಟ್ರೀಯ ಉತ್ಪನ್ನವನ್ನು ಅಳತೆ ಮಾಡಲು ಬೇರೆ ಬೇರೆ ವಿಧಾನಗಳಿವೆ ಆದರೆ ನಮ್ಮ ದೇಶದಲ್ಲಿ ಖರ್ಚುಗಳ ಮೂಲಕ ಅಳೆಯಲಾಗುತ್ತದೆ. ಅಂದರೆ

ರಾಷ್ಟ್ರೀಯ ಉತ್ಪನ್ನ = ಬಳಕೆ + ಬಂಡವಾಳ ಹೂಡಿಕೆ + ಸರಕಾರಿ ವೆಚ್ಚಗಳು + (ರಫ್ತುಗಳು − ಆಮದುಗಳು)

Gross National Product = Consumption + Investment + Government Expenditure + (Exports – Imports)

ಬಳಕೆ ಎಂಬುದು ದೇಶದ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಉಪಯೋಗಿಸುವ ಸರಕು ಮತ್ತು ಸೇವೆಗಳನ್ನು ಒಳಗೊಳ್ಳುತ್ತದೆ. ಆಹಾರ, ಬಾಡಿಗೆ, ವೈದ್ಯಕೀಯ ವೆಚ್ಚಗಳು ಇತ್ಯಾದಿ ಇದರಲ್ಲಿ ಸೇರುತ್ತದೆ.

ಬಂಡವಾಳ ಹೂಡಿಕೆ : ಉದ್ಯಮಗಳು ತಮ್ಮ ಕೆಲಸಗಳಿಗಾಗಿ ಉಪಯೋಗಿಸುವ ವೆಚ್ಚ. ಉದಾಹರಣೆಗೆ ಉದ್ಯಮವು ಯಂತ್ರಗಳನ್ನು ಅಥವಾ ತಂತ್ರಾಂಶಗಳನ್ನು ಕೊಳ್ಳಲು ಹೂಡುವ ಬಂಡವಾಳ.

 ಸರ್ಕಾರಿ ವೆಚ್ಚ ಎಲ್ಲಾ ಸರ್ಕಾರಿ ವೆಚ್ಚಗಳನ್ನು ಒಳಗೊಳ್ಳುತ್ತದೆ. ತನ್ನ ಕೆಲಸಗಾರರ ವೇತನಗಳು, ಸೇನೆಗಾಗಿ ಕೊಳ್ಳುವ ಶಸ್ತ್ರಾಸ್ತ್ರಗಳು, ಇತ್ಯಾದಿ.

ರಫ್ತುಗಳು: ದೇಶದಿಂದ ಹೊರಹೋಗುವ ಸರಕು ಮತ್ತು ಸೇವೆಗಳನ್ನು ಉತ್ಪನ್ನದಿಂದ ಕಳೆಯಲಾಗುತ್ತದೆ.

ಆಮದುಗಳು: ದೇಶದ ಆಂತರಿಕ ಬಳಕೆಗೆ ಹೊರ ದೇಶಗಳಿಂದ ಖರೀದಿ ಮಾಡುವ ಸರಕು ಸೇವೆಗಳನ್ನು ಇದಕ್ಕೆ ಸೇರಿಸಲಾಗುತ್ತದೆ.

ಜಿಡಿಪಿ, ಖರ್ಚುಗಳನ್ನು ಲೆಕ್ಕಹಾಕುತ್ತದೆ. ಹೆಚ್ಚು ಜಿಡಿಪಿ ದರ ದೇಶದ ಉತ್ತಮ ಅರ್ಥವ್ಯವಸ್ಥೆಯನ್ನು ಪ್ರತಿಬಿಂಬಿಸಿದರೆ, ವೃದ್ದಿಸುತ್ತಿರುವ ಜಿಡಿಪಿ ದರ ಪ್ರಗತಿಯ ಅರ್ಥವ್ಯವಸ್ಥೆಯನ್ನು ಸಂಕೇತಿಸುತ್ತದೆ.

ಭಾರತದಲ್ಲಿ ಜಿಡಿಪಿ ಸಾಗುತ್ತಿರುವ ದಾರಿ: (Way of GDP in India)ಇದನ್ನೂ ಓದಿ:  ತೆರಿಗೆ..ಭಾರ ಭಾರ!!!… ಯಾರಿಗೆ?

ಭಾರತದಲ್ಲಿ ಜಿಡಿಪಿಯನ್ನು ತ್ರೈಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ. ಅಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ನಮ್ಮ ಅರ್ಥವ್ಯವಸ್ಥೆ ಪರಿಷ್ಕರಣೆಗೆ ಒಳಗಾಗುತ್ತದೆ. ಭಾರತದಲ್ಲಿ ಕಳೆದ ಮೂರು ವರ್ಷಗಳಲ್ಲಿ ಜಿಡಿಪಿ ದರದ ಬದಲಾವಣೆಯನ್ನು ಗಮನಿಸಿ. ಜುಲೈ 2016 ರ ತ್ರೈಮಾಸಿಕ ಅವಧಿಯಲ್ಲಿ 8.7% ಇದ್ದ ಜಿಡಿಪಿ ಜನೆವರಿ 2017ರಲ್ಲಿ 7.4%, ರಂತೆ ಸಾಗಿ ಅಕ್ಟೋಬರ 2018ಕ್ಕೆ 7% ಕ್ಕೆ ಬಂದು ತಲುಪಿತು. ತದನಂತರ ಜಿಡಿಪಿ ದರದಲ್ಲಿ ಚೇತರಿಕೆಯೇ ಸಾಧ್ಯವಾಗಲಿಲ್ಲ. 6.6%..5.8%.. ಪ್ರಸ್ತುತ 5% ಕುಸಿದಿದೆ ಮತ್ತು ಇದು ಕಳೆದ ಆರು ವರ್ಷದಲ್ಲಿ ಅಂದರೆ 24 ತ್ರೈಮಾಸಿಕ ಅವಧಿಯಲ್ಲೇ ದಾಖಲಾದ ಕನಿಷ್ಟ ಜಿಡಿಪಿ ಪ್ರಗತಿಯಾಗಿದೆ. ಇದು ಹೀಗೆಯೇ ಹಿಮ್ಮುಖವಾಗಿ ಚಲಿಸುವುದು ಮುಂದುವರೆದರೆ ಭಾರತದ ಅರ್ಥವ್ಯವಸ್ಥೆ ಅಪಾಯದ ಕಡೆಗೆ ಸಾಗುತ್ತಿದೆ ಎಂದೇ ಅರ್ಥ.

ಜಿಡಿಪಿ ದರದ ಬದಲಾವಣೆ ಮತ್ತು ಅದರ ಅರ್ಥಗಳು: (Variation in GDP rate and Its sign)

ಜಿಡಿಪಿ ದರದಲ್ಲಿನ ಬದಲಾವಣೆಗಳ ಆಧಾರದ ಮೇಲೆ ಅರ್ಥವ್ಯವಸ್ಥೆಯ ಆರೋಗ್ಯವನ್ನು ಅಳೆಯಲಾಗುತ್ತದೆ. ಒಂದು ದೇಶದ ಅರ್ಥವ್ಯವಸ್ಥೆಯ ಸ್ಥಿತಿಯನ್ನು ಮೂರು ರೀತಿಯಲ್ಲಿ ಹೇಳಬಹುದು, ನಿಧಾನ ಪ್ರಗತಿ (Slow Growth), ಆರ್ಥಿಕ ಹಿಂಜರಿತ (Recession) ಮತ್ತು ಖಿನ್ನತೆಯ (Depression) ಸ್ಥಿತಿ. ಈ ಮೂರೂ ಹಂತಗಳನ್ನು ಜಿಡಿಪಿ ಬೆಳವಣಿಗೆಯ ಆಧಾರದ ಮೇಲೆಯೇ ನಿರ್ಥರಿಸಲಾಗುತ್ತದೆ. ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ನಕಾರಾತ್ಮಕವಾಗಿ ಅಥವಾ ಹಿಮ್ಮುಖವಾಗಿ ಚಲಿಸಲಾರಂಭಿದರೆ ಆಗ ಅರ್ಥವ್ಯವಸ್ಥೆ ನಿಧಾನ ಪ್ರಗತಿಯ ಹಂತದಲ್ಲಿ ಇದೆ ಎಂದು ಅಥವಾ ಕುಂಟಿತ ಪ್ರಗತಿಯೆಂದು ಅರ್ಥೈಸಲಾಗುತ್ತದೆ. ಹೀಗೆ ನಕಾರಾತ್ಮಕವಾಗಿ ಜಿಡಿಪಿ ಚಲನೆ ಮುಂದುವರೆಯುತ್ತಾ ಹೋದಲ್ಲಿ ಆಗ ಆರಂಭವಾಗುವುದೇ ಆರ್ಥಿಕ ಹಿಂಜರಿತದ ಸ್ಥಿತಿ. ಆರ್ಥಿಕ ಹಿಂಜರಿತದ ಸ್ಥಿತಿ ಹಾಗೆಯೇ ಧೀರ್ಘಕಾಲದವರೆಗೆ ಮುಂದುವರೆಯುತ್ತಾ ಹೋದರೆ ಅರ್ಥವ್ಯವಸ್ಥೆ ಖಿನ್ನತೆಯ ಹಂತಕ್ಕೆ ತಲುಪುತ್ತದೆ. ಈ ಮೂರೂ ಹಂತಗಳನ್ನೂ ಸಾಮಾನ್ಯವಾಗಿ ಆರ್ಥಿಕ ಹಿಂಜರಿತವೆಂದು ಕರೆಯಲಾಗುತ್ತದೆ. ಆದರೆ ಪರಿಣಾಮಗಳು ಮಾತ್ರ ಬೇರೆ ಬೇರೆಯಾಗಿರುತ್ತದೆ. ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿ ಮುಂದುವರೆಯುತ್ತಾ ಹೋದಲ್ಲಿ ನಿರುದ್ಯೋಗ ಹೆಚ್ಚಾಗುತ್ತದೆ, ಮಾರುಕಟ್ಟೆಯ ಬೇಡಿಕೆ ಕುಸಿಯುತ್ತದೆ, ಉತ್ಪಾದನಾ ವಲಯ ರೋಗಗ್ರಸ್ಥವಾಗುತ್ತದೆ, ರಫ್ತು ಇಳಿಮುಖವಾಗುತ್ತದೆ, ಆಮದು ವೃದ್ಧಿಸುತ್ತದೆ, ಒಟ್ಟಾರೆ ಹಣದ ಹರಿವು ನಿಧಾನಗೊಂಡು ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

ಭಾರತದಲ್ಲಿ ಆರ್ಥಿಕ ಹಿಂಜರಿತವೇ..? (Is recession in India..?)

ಭಾರತದಲ್ಲಿ ಜಿಡಿಪಿ ಸಾಗುತ್ತಿರುವ ಹಾದಿಯನ್ನು ನೋಡಿ, ಜುಲೈ 2018 ರ ತ್ರೈಮಾಸಿಕ ಅವಧಿಯಲ್ಲಿ ಧಾಖಲಾದ 8 ಪ್ರತಿಶತ ಜಿಡಿಪಿ ದರ ಹಿಂದಿನ ಒಂದು ವರ್ಷದಲ್ಲಿ ಗರಿಷ್ಟ ಮಟ್ಟದ್ದಾಗಿತ್ತು. ಆ ನಂತರ ತ್ರೈಮಾಸಿಕವಾಗಿ ದಾಖಲಾದ ಜಿಡಿಪಿ ದರ ಕ್ರಮವಾಗಿ 7%, 6.6%, 5.8% ಮತ್ತು ಜುಲೈ 2019ರ ವೇಳೆಗೆ 5% ಕ್ಕೆ ಬಂದು ತಲುಪಿದೆ. ಮಾನ್ಯ ಹಣಕಾಸು ಮಂತ್ರಿಯವರು ಹೇಳುವಂತೆ, ಅಭಿವೃದ್ಧಿಯ ಹಾದಿಯಲ್ಲಿ ಜಿಡಿಪಿಯಲ್ಲಿನ ಬದಲಾವಣೆ ಸಹಜ. ಆದರೆ ನಿರಂತರ ಜಿಡಿಪಿ ಕುಸಿತ ಅಭಿವೃದ್ದಿಯನ್ನು ಸಂಕೇತಿಸಲು ಸಾಧ್ಯವಿಲ್ಲ. ಹಲವಾರು ಹಣಕಾಸು ತಜ್ಞರು ಹೇಳುವಂತೆ ಇದು ಆರ್ಥಿಕ ಹಿಂಜರಿತದ ಆರಂಭದ ಹಂತ. ಇದಕ್ಕೆ ಪುರಾವೆಯಾಗಿ ದೇಶದ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಬೇಕಿದೆ. ಉತ್ಪಾದನಾ ವಲಯ ಕುಂಟಿಗೊಂಡು ನೆಲಕಚ್ಚಿದೆ. ಅಟೋ ಉದ್ಯಮ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ರೀಯಲ್ ಎಸ್ಟೇಟ್, ಸಿಮೆಂಟ್ ಉದ್ಯಮ, ಗಾರ್ಮೆಂಟ್ಸ್, ಕೃಷಿ, ನಿರ್ಮಾಣ ವಲಯ ಹೀಗೆ ದೇಶದ ಪ್ರಮುಖ ಕ್ಷೇತ್ರಗಳು ತತ್ತರಿಸುತ್ತಿವೆ ಮತ್ತು ಬಹುಪಾಲು ಕಂಪನಿಗಳು ಸಿಬ್ಬಂದಿ ಪ್ರಮಾಣವನ್ನು ಕಡಿತಗೊಳಿಸಲು ನಿರ್ಧರಿಸಿವೆ. ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ವೃದ್ದಿಯಾಗುತ್ತಿದೆ. ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ 8.2% ಇದ್ದರೆ ಅದು ನಗರ ಪ್ರದೇಶದಲ್ಲಿ 9.4% ರಷ್ಟಿದೆ ಇದು ಕಳೆದ 45 ವರ್ಷಗಳಲ್ಲೇ ಗರಿಷ್ಟವೆಂದು ಹೇಳಲಾಗುತ್ತಿದೆ. 2008ರಲ್ಲಿ ಜಾಗತಿಕ ಬಿಕ್ಕಟ್ಟಿನಿಂದಾಗಿ ಎದುರಾದ ಸಂಕಷ್ಟದ ಸ್ಥಿತಿ ಮತ್ತೆ ಮರುಕಳಿಸಿದೆ ಅಂತೆನಿಸುತ್ತಿದೆ ಮತ್ತು ಅದು ಹಿಂದಿನದಕ್ಕಿಂತಲೂ ಕಠೋರವಾಗಿರುತ್ತದೆ ಎನ್ನುವುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ.

ಭಾರತದ ಆರ್ಥಿಕ ಹಿಂಜರಿತಕ್ಕೆ ಕಾರಣಗಳು: (Causes of India’s recession)

2008ರಲ್ಲಿ ಯುರೋಪ್ ಮತ್ತು ಅಮೇರಿಕದಲ್ಲಾದ ಮಹಾಕುಸಿತ ಜಗತ್ತಿನ ಹಲವಾರು ದೇಶಗಳನ್ನು ಸಂಕಷ್ಟಕ್ಕೆ ನೂಕಿತ್ತು. ಇಂದು ಯಾವ ದೇಶವೂ ಸ್ವತಂತ್ರವಾದ ಆರ್ಥಿಕ ವ್ಯವಸ್ಥೆಯನ್ನು ಹೊಂದಿಲ್ಲ. ಪ್ರತಿಯೊಂದು ದೇಶವೂ ಇನ್ನೊಂದು ದೇಶವನ್ನು ಅವಲಂಬಿತವಾಗಿದೆ. ಹಾಗಾಗಿ ಒಂದು ದೇಶದ ಅರ್ಥವ್ಯವಸ್ಥೆಯ ಸೋಂಕು ಹಲವಾರು ದೇಶದ ಅರ್ಥವ್ಯವಸ್ಥೆಯನ್ನು ಆವರಿಸಿಬಿಡುತ್ತದೆ. ಆದರೆ ಅರ್ಥವ್ಯವಸ್ಥೆಗೆ ತಗುಲುವ ಈ ಸೋಂಕು ಅಂದರೆ ಆರ್ಥಿಕ ಹಿಂಜರಿತಕ್ಕೆ ಇಂಥದ್ದೇ ನಿಖರ ಕಾರಣಗಳನ್ನು ಗುರುತಿಸುವುದು ಕಷ್ಟ. ದೇಶದ ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ಆರ್ಥಿಕ ಹಿಂಜರಿತ ಸಂಭವಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಇತ್ತೀಚೆಗೆ ಹೇಳಿದಂತೆ ಇಂದಿನ ಬಿಕ್ಕಟ್ಟಿಗೆ ಬಾಹ್ಯ ಕಾರಣಗಳಿಗಿಂತ ದೇಶದ ಆಂತರಿಕ ಕಾರಣಗಳು ಪ್ರಮುಖ ಕಾರಣಗಳಾಗಿವೆ. ಆರ್ಥಿಕ ಹಿಂಜರಿತಕ್ಕೆ ನಿಖರವಾಗಿ ಹೇಳಲಾಗದಿದ್ದರೂ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದು.ಇದನ್ನೂ ಓದಿ:  ಟಿಡಿಎಸ್ ವಂಚನೆ..ಸೀದಾ ಸೆರೆಮನೆ! (FRAUD IN TDS AND TCS)

ನೋಟು ರದ್ದತಿ ಪ್ರಕರಣ: (Demonetisation)

ನವೆಂಬರ್ 8, 2016ರ ಮಧ್ಯರಾತ್ರಿ ಭಾರತೀಯರಿಗೆ ಶಾಕ್ ನೀಡಿದ ಪ್ರಕರಣವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಸಮಯ ಬಂದಿದೆ. ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳನ್ನು ಯೋಚಿಸದೇ ಕಪ್ಪುಹಣವನ್ನು ಬಯಲುಮಾಡುವ ಮತ್ತು ದೇಶವನ್ನು ಕ್ಯಾಶ್ ಲೆಸ್ ದೇಶವನ್ನಾಗಿ ಮಾಡುವ ಉದ್ದೇಶದಿಂದ ಹೇರಿದ ಈ ನಿರ್ಧಾರ ಜನಸಾಮಾನ್ಯರಿಗೆ ಅಪಾರ ಸಂಕಷ್ಟವನ್ನು ತಂದಿರುವುದು ಸತ್ಯವಾಗಿದೆ. ಈ ನಿರ್ಧಾರದಿಂದ ಎಷ್ಟು ಹಣ ಸರಕಾರದ ಖಜಾನೆ ಸೇರಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಇಂದು ಸರಕಾರದ ಖಜಾನೆಯೂ ಖಾಲಿಯಾಗಿರುವುದಕ್ಕೆ ರಿಸರ್ವ್ ಬ್ಯಾಂಕಿನ ಮೀಸಲು ನಿಧಿಯನ್ನು ವಶಪಡಿಸಿಕೊಂಡಿರುವುದೇ ಪುರಾವೆಯಾಗಿದೆ.

ನೋಟು ರದ್ದತಿ ನಿರ್ಧಾರ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿದ ನಿರ್ಧಾರವೆಂದು ಬಣ್ಣಿಸಲಾಗುತ್ತಿದೆ. ಈ ಪ್ರಕರಣದ ನಂತರ ದೇಶದ ಮಾರುಕಟ್ಟೆಯಲ್ಲಿ ಅನುಭೋಗ (Comsumption)ದ ಪ್ರಮಾಣ 40% ಕುಸಿದು ಹೋಯಿತು. ನಗದು ಹಣವನ್ನೇ ನೆಚ್ಚಿಕೊಂಡ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ 90% ವ್ಯವಹಾರಗಳು ನಗದು ಸ್ವರೂಪದಲ್ಲಿಯೇ ನಡೆಯುತ್ತವೆ. ನಗದು ಹರಿವು ನಿಂತುಹೋದ ಮೇಲೆ ವ್ಯವಹಾರಗಳು ಸಹಜವಾಗಿ ಕಡಿಮೆಯಾಯಿತು. ಇದರ ಪರಿಣಾಮವಾಗಿ ಮುಚ್ಚಿಹೋದ ಎಷ್ಟೋ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಮತ್ತೆ ತಲೆಎತ್ತದಂತೆ ನಾಶವಾದವು. ಅಖಿಲ ಭಾರತ ತಯಾರಕರ ಸಂಸ್ಥೆ ( All India Manufacturers’ Organisation -AIMO) ನಡೆಸಿದೆ ಸಮೀಕ್ಷೆಯ ಪ್ರಕಾರ ನೋಟು ರದ್ದತಿಯ ಮೊದಲ 34 ದಿನಗಳ ಅಧ್ಯಯನದಲ್ಲಿ, ದೇಶದಲ್ಲಿರುವು 3 ಲಕ್ಷ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ 35% ಉದ್ಯೋಗ ಮತ್ತು 50% ಆದಾಯದಲ್ಲಿ ನಷ್ಟವನ್ನು ಅನುಭವಿಸಿದವು. ಪಂಜಾಬ್, ಹರಿಯಾಣ, ದೆಹಲಿಯ ಚೇಂಬರ್ ಆಫ್ ಕಾಮರ್ಸ್ ಸಮೀಕ್ಷೆ ಹೇಳುವಂತೆ ದೇಶದ 80% ಉದ್ದಿಮೆಗಳು ತಮ್ಮ ಮಾರಾಟದಲ್ಲಿ ಕುಸಿತವನ್ನು ಅನುಭವಿಸಿವೆ. ಹೀಗೆ ದೇಶದ ಬಹುಪಾಲು ಉದ್ದಿಮೆಗಳು ಹಿನ್ನೆಡೆ ಅನುಭವಿಸುತ್ತಾ ಬಂದಿರುವುದು ಜಿಡಿಪಿ ವರದಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸರಕು ಮತ್ತು ಸೇವಾ ಕಾಯ್ದೆ-ಜಿಎಸ್ಟಿ: (Goods and Service Tax)

ನೋಟು ರದ್ದತಿ ಪ್ರಕರಣದಿಂದ ಅದಾಗಲೇ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದ ದೇಶದ ಮಾರುಕಟ್ಟೆಗೆ ಮತ್ತೊಂದು ಆಘಾತ ನೀಡಿದ್ದು ಜೂನ್ 2017 ರಲ್ಲಿ ಜಿಎಸ್ಟಿ ಮೂಲಕ. ತೆರಿಗೆ ಸುಧಾರಣೆ ಪ್ರಕ್ರಿಯೆಯ ಭಾಗವಾಗಿ ಸರಕು ಮತ್ತು ಸೇವಾ ಕಾಯ್ದೆ ಒಂದು ಅತ್ಯುತ್ತಮ ಕಾಯ್ದೆಯಾಗಿದೆ. ಭಾರತದಲ್ಲಿ 2008ರಿಂದ ಚರ್ಚೆಯಲ್ಲಿದ್ದ ಈ ಕಾಯ್ದೆಯನ್ನು ಜಾರಿಗೆ ತರಲು ಹಲವಾರು ಬಾರಿ ಪ್ರಯತ್ನ ನಡೆದಿದ್ದರೂ ಸಫಲವಾಗಿರಲಿಲ್ಲ. ಅದು ಜಾರಿಗೆ ಬಂದಿದ್ದು ಅರ್ಥವ್ಯವಸ್ಥೆ ಆತಂಕದ ಸ್ಥಿತಿಯಲ್ಲಿ ಇರುವಾಗ. ಅದಾಗಲೇ ನೋಟ್ ಬ್ಯಾನ್ ಆಘಾತಕ್ಕೆ ಒಳಗಾಗಿದ್ದ ಅರ್ಥವ್ಯವಸ್ಥೆ ಜಿಎಸ್ಟಿ ಜಾರಿಯಿಂದ ಹಿಮ್ಮುಖವಾಗಿ ದಾಪುಗಾಲಿಡತೊಡಗಿತು.

ಜಾಗತಿಕವಾಗಿ ಮಾನ್ಯತೆ ಪಡೆದ ಜಿಎಸ್ಟಿ ಕಾಯ್ದೆ ಹೇಗೆ ಭಾರತದಲ್ಲಿ ನಕಾರಾತ್ಮಕವಾಗಿ ಪರಿಣಾಮ ಬೀರಿತು ಎಂದು ವಿಶ್ಲೇಷಣೆ ಮಾಡಬೇಕಿದೆ. ಜಿಎಸ್ಟಿ ಪರಿಣಾಮವಾಗಿ ಭಾರತದಲ್ಲಿ ಅಭೂತಪೂರ್ವ ಬದಲಾವಣೆ ಸಾಧ್ಯವೆಂದು ಮೊದಮೊದಲಿಗೆ ಬಿಂಬಿಸಲಾಗಿತ್ತು. ಅಸಲಿಗೆ ಪ್ರಪಂಚದ ಬಹುದೊಡ್ಡ ಅರ್ಥವ್ಯವಸ್ಥೆಯ ಮೇಲೆ ವ್ಯಾಪಕವಾಗಿ ಪರಿಣಾಮವನ್ನು ಉಂಟುಮಾಡಬಲ್ಲ ಒಂದು ಕಾಯ್ದೆಯನ್ನು ಜಾರಿಗೆ ತರುವಾಗ ಅದರ ಪೂರ್ವತಯಾರಿಯೂ ಅಷ್ಟೇ ವ್ಯಾಪಕವಾಗಿರಬೇಕಿತ್ತು. ಆದರೆ ಭಾರತದಲ್ಲಿ ಪೂರ್ವತಯಾರಿಗಿಂತ ಅದರ ಪ್ರಚಾರ ಕಾರ್ಯವೇ ಹೆಚ್ಚಾಗಿ ನಡೆದಿದ್ದು ಸತ್ಯ. ನಮ್ಮ ದೇಶದ ಅರ್ಥವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಕಾಯ್ದೆಯನ್ನು ರೂಪಿಸುವ ಬದಲಾಗಿ, ಮೊದಲು ಕಾಯ್ದೆಯನ್ನು ಜಾರಿಗೆ ತಂದು ತದನಂತರ ಬದಲಾವಣೆಗಳನ್ನು ಮಾಡುವಂತಾಯಿತು. ಹಾಗೆ ಮಾಡಲಾದ ಬದಲಾವಣೆಗಳು ಒಂದಲ್ಲ ಎರಡಲ್ಲ ಸರಕಾರದ ಸುತ್ತೊಲೆ, ಅಧಿಸೂಚನೆಗಳು, ಅಡ್ವಾನ್ಸ್ ರೂಲಿಂಗ್, ಇತ್ಯಾದಿಗಳೆಲ್ಲ ಸೇರಿದರೆ ಸಾವಿರರಾರು ಸಂಖ್ಯೆಗಳಲ್ಲಿ ಇವೆ. ಅದು ನಿರಂತರವಾಗಿ ಜಾರಿಯಲ್ಲಿ ಇವೆ ಕೂಡ. ಇನ್ನೊಂದು ಪ್ರಮುಖ ಅಂಶವೇನೆಂದರೆ ಜಿಎಸ್ಟಿ ಜಾರಿಯಿಂದ ಹತ್ತಾರು ತೆರಿಗೆಗಳ ಬದಲಾಗಿ ಒಂದೇ ತೆರಿಗೆ ಇರುವ ಕಾರಣದಿಂದ ಸರಕು ಸೇವೆಗಳ ಬೆಲೆಯಲ್ಲಿ ಭಾರಿ ಇಳಿಕೆ ಆಗಬಹುದೆಂಬ ನಿರೀಕ್ಷೆ ಜನಸಾಮಾನ್ಯರದ್ದಾಗಿತ್ತು. ವಾಸ್ತವಿಕವಾಗಿ ಹಾಗೆಯೇ ಆಗಬೇಕಿತ್ತು. ಆದರ ಭಾರತದ ಉತ್ಪಾದನಾ ವಲಯ ತೆರಿಗೆ ಬದಲಾವಣೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲೂ ಇಲ್ಲ ಮತ್ತು ಗ್ರಾಹಕರಿಗೆ ಬೆಲೆಯಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ.

ಜಿಎಸ್ಟಿ ಜಾರಿಯಾದ ಮೇಲೆ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದುದು ಮಾಸಿಕ ಜಿಎಸ್ಟಿ ಸಂಗ್ರಹ ಮೇಲೆ ಮಾತ್ರ. ಜಿಎಸ್ಟಿ ಸಂಗ್ರಹ ಎಪ್ರಿಲ್ 2019ರಲ್ಲಿ ಒಂದು ಲಕ್ಷ ಕೋಟಿಯನ್ನು ದಾಟಿದಾಗ ಜಿಎಸ್ಟಿ ಕಾಯ್ದೆಯ ಯಶಸ್ಸಿನ ಭಾಗ ಎನ್ನುವಂತೆ ಸಂಭ್ರಮಿಸಲಾಗಿತ್ತು. ಆದರೆ ಅದು ದೇಶದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ ಅರ್ಥವ್ಯವಸ್ಥೆಯನ್ನು ದುಸ್ಥಿತಿಗೆ ತಂದು ನಿಲ್ಲಿಸಿದ್ದು ಆಕಸ್ಮಿಕವೋ ಅಥವಾ ಸಹಜ ಪರಿಣಾಮವೋ ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ.ಇದನ್ನೂ ಓದಿ:  ಮನೆ ಮಾರಾಟ ಮತ್ತು ತೆರಿಗೆ ಸಂಕಟ! (SALE OF HOUSE PROPERTY AND CAPITAL GAIN RULES)

ಬ್ಯಾಂಕಿಂಗ್ ವ್ಯವಸ್ಥೆಯ ವೈಫಲ್ಯ (Failure of Banking Sector)

ಬ್ಯಾಂಕ್ ಗಳು ಪ್ರತಿಯೊಂದು ಅರ್ಥವ್ಯವಸ್ಥೆಯ ಜೀವಾಳ ಮತ್ತು ಪ್ರತಿಯೊಂದು ಅರ್ಥವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರದ ಯಶಸ್ಸು ಮತ್ತು ವೈಫಲ್ಯಗಳ ಮೇಲೆ ನಿಂತಿರುತ್ತದೆ. 2008ರ ಮಹಾ ಕುಸಿತಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಹೊಣೆಗಾರರನ್ನಾಗಿ ಮಾಡಿರುವುದನ್ನು ಸ್ಮರಿಸಬಹುದು. ಇಂದು ಭಾರತದಲ್ಲಿ ಅತಿಹೆಚ್ಚು ಬ್ಯಾಂಕುಗಳ ಪ್ರಗತಿ ತೀರ ಮಂದಗತಿಯಲ್ಲಿದೆ. ಅನುತ್ಪಾದಕ ಆಸ್ತಿ (NPA-Non Performing Assets) ಎಂಬ ಖಾಯಿಲೆ ಬ್ಯಾಂಕುಗಳನ್ನು ಬೆಂಬಿಡದೇ ಕಾಡುತ್ತಿರುವುದು ಬ್ಯಾಂಕಿಂಗ್ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ. ಸರಳವಾಗಿ ಹೇಳುವುದಾದರೆ ಅನುತ್ಪಾದಕ ಆಸ್ತಿ ಎಂದರೆ ಕೊಟ್ಟ ಸಾಲ ವಾಪಸು ಬರದೇ ಹೋದರೆ ಅದನ್ನು ಅನುತ್ಪಾದಕ ಆಸ್ತಿ ಎಂದು ಕರೆಯಲಾಗುತ್ತದೆ. 2019ರ ಅಂತ್ಯಕ್ಕೆ ಹೀಗೆ ವಾಪಸು ಬರದೇ ಇರುವ ಸಾಲದ ಮೌಲ್ಯ 9.4 ಲಕ್ಷ ಕೋಟಿ ರೂಪಾಯಿಗಳು. ಬ್ಯಾಂಕುಗಳ ಬೆಳವಣಿಗೆ ನಿಂತಿರುವುದೇ ನೀಡುವ ಸಾಲದ ಮೇಲೆ. ಹೀಗಿರುವಾಗ ಕೊಟ್ಟಸಾಲ ವಾಪಸು ಬರದೇ ಹೋದರೆ ಬ್ಯಾಂಕುಗಳ ಪ್ರಗತಿಯ ಮೇಲೆ ಸಹಜವಾಗಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಷ್ಟು ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿ (NPA-Non Performing Assets) ಸೃಷ್ಟಿಯಾಗಲು ಕಾರಣ ಬ್ಯಾಂಕುಗಳ ಸಾಲ ನೀಡಿಕೆ ನಿಯಮಗಳ ದುರುಪಯೋಗವೆಂದು ಆರೋಪಿಸಲಾಗುತ್ತಿದೆ. ಸಾಲದ ಮರುಪಾವತಿಯ ಬಗ್ಗೆ ನಿಖರ ಖಾತ್ರಿ ಇಲ್ಲದೇ ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಾಲ ನೀಡಿ ಕೈಸುಟ್ಟುಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಜನಸಾಮಾನ್ಯರಿಗೆ ಸಾಲ ನೀಡುವಾಗ ನೂರಾರು ದಾಖಲೆಗಳನ್ನು ಕೇಳಿ ಹತ್ತಾರು ಬಾರಿ ಅಲೆದಾಡುವಂತೆ ಮಾಡುವ ಬ್ಯಾಂಕುಗಳು ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಸಾಲ ನೀಡುತ್ತಿವೆ. ಆದರೆ ಸೋಜಿಗವೆಂದರೆ ಬ್ಯಾಂಕುಗಳ ಅನುತ್ಪಾದಕ ಆಸ್ತಿ (NPA-Non Performing Assets)ಗಳ ಲಿಸ್ಟಿನಲ್ಲಿರುವ ಜನ ಸಾಮಾನ್ಯ ಸಂಖ್ಯೆ ಮಾತ್ರ ನಗಣ್ಯ.

ಮೊದಮೊದಲು ‘ಸೇವೆ’ಯನ್ನು ತಮ್ಮ ಮೂಲ ಉದ್ದೇಶವಾಗಿಟ್ಟುಕೊಂಡ ಬ್ಯಾಂಕುಗಳು ಜಾಗತೀಕರಣದ ತರುವಾಯ ಅದನ್ನು ‘ಲಾಭ’ಕ್ಕೆ ಬದಲಾಯಿಸಿಕೊಂಡವು. ಲಾಭದ ಹಿಂದೆ ಬಿದ್ದ ಬ್ಯಾಂಕುಗಳು ಜನಸಾಮಾನ್ಯನನ್ನು ಮರೆತು ಉದ್ಯಮಿಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಿದವು. ಹಾಗೆ ಅಗತ್ಯ ಮೀರಿ ನೀಡಿದ ಸಾಲಗಳು ವಾಪಸು ಬಾರದೇ ಇಂದು 9.4 ಲಕ್ಷ ಕೋಟಿಗೆ ಬಂದು ನಿಂತಿದೆ. ಇತ್ತ ಭಾರತದ ಜನಸಾಮಾನ್ಯರ ಕೃಷಿ ಕ್ಷೇತ್ರ ಬಂಡವಾಳವಿಲ್ಲದೇ ಸೋತು ಸರಕಾರದ ಸಬ್ಸಿಡಿಗಾಗಿ ಎದುರು ನೋಡುವ ಸ್ಥಿತಿಗೆ ಬಂದು ತಲುಪಿದೆ.

ಹೀಗೆ ಭಾರತದ ಬ್ಯಾಂಕುಗಳು ಸ್ವಯಂ ವ್ಯಾಧಿಯನ್ನು ಅಂಟಿಸಿಕೊಂಡು ದೇಶದ ಅರ್ಥವ್ಯವಸ್ಥೆಯ ಹಿನ್ನಡೆಗೆ ಕೊಡುಗೆ ನೀಡುತ್ತಿವೆ. ಬ್ಯಾಂಕುಗಳ ಪರಿಸ್ಥಿತಿಯನ್ನು ಅರಿತುಕೊಂಡ ಸರಕಾರ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದ್ದು ಅದರ ಮೊದಲ ಹಂತವಾಗಿ ರಾಷ್ಟ್ರೀಕರಣಗೊಳಿಸುತ್ತಿದೆ. ರಾಷ್ಟ್ರೀಕರಣದಿಂದ ಪರಸ್ಥಿತಿ ಸುಧಾರಣೆಗೆ ಒಳಗಾಗುವುದೇ..? ದೀರ್ಘಾವಧಿಯಲ್ಲಿ ಸಕಾರಾತ್ಮಕ ಪರಿಣಾವನ್ನು ನಿರೀಕ್ಷಿಸಬಹುದಾದರೂ ಅರ್ಥವ್ಯವಸ್ಥೆ ತಳಮಟ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಈ ಬದಲಾವಣೆ ಅರ್ಥವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರಬಹುದೆಂದು ಕಾದು ನೋಡಬೇಕು.

ಪರಿಹಾರೋಪಾಯಗಳು. (Remidies)

ದೇಶದ ಅರ್ಥವ್ಯವಸ್ಥೆಯನ್ನು ಸರಿಪಡಿಸುವುದೆಂದರೆ ದೇಶದ ಜನತೆಯ ಖರೀದಿ ಸಾಮರ್ಥ್ಯವನ್ನು ವೃದ್ದಿಸುವುದು. ಜನರ ಬಳಿ ಹಣವಿಲ್ಲವೆಂದರೆ ಹೇಗೆ ಖರ್ಚು ಮಾಡಬಲ್ಲರು. ಮೊದಲು ಜನರ ಆದಾಯ ವೃದ್ದಿಯಾಗಬೇಕು, ಆದಾಯಕ್ಕೆ ನಿರುದ್ಯೋಗ ನಿವಾರಣೆ ಆಗಬೇಕು, ನಿರುದ್ಯೋಗದ ಸಮಸ್ಯೆ ಬಗೆಹರಿಯಬೇಕೆಂದರೆ ದೇಶದ ಉತ್ಪಾದನಾ ವಲಯದ ಚಟುವಟಿಕೆಗಳು ತೀವ್ರವಾಗಬೇಕು. ಕೊನೆಯಲ್ಲಿ ದೇಶದ ಉತ್ಪಾದನೆ ಗ್ರಾಹಕರ ಕೊಳ್ಳುವ ಶಕ್ತಿಯನ್ನೇ ಅವಲಂಬಿಸಿದೆ. ಹಾಗಾಗಿ  ಪರಿಹಾರದ ಮಾರ್ಗಗಳನ್ನು ಎಲ್ಲಿಂದ ಆರಂಭಿಸಬೇಕು? ದೇಶದ ಅರ್ಥವ್ಯವಸ್ಥೆಯ ಪ್ರತಿಯೊಂದು ಅಂಗವೂ ಸರಪಳಿಯಂತೆ ಜೋಡಿಸಿಕೊಂಡಿವೆ. ಒಂದಕ್ಕೊಂದು ಪೂರಕವಾಗಿ ಸಮತೋಲನದಿಂದ ಸಾಗುವಂತೆ ಮಾಡಿದಾಗ ಅರ್ಥವ್ಯವಸ್ಥೆ ಪ್ರಗತಿಯತ್ತ ಸಾಗಲು ಸಾಧ್ಯ. ಹಾಗಾಗಿ ಜವಾಬ್ದಾರಿ ಸರಕಾರಗಳು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವಾಗ ಈ ಸಮತೋಲನದ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು.

ಕೇಂದ್ರ ಸರಕಾರ ಅರ್ಥವ್ಯವಸ್ಥೆಯ ಚೇತರಿಕೆಗೆ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಲವಾರು ಸುಧಾರಣ ಕ್ರಮಗಳನ್ನು ಘೋಷಣೆ ಮಾಡಿದೆ ಕಾರ್ಪೋರೇಟ್ ತೆರಿಗೆ ವ್ಯವಸ್ಥೆಯಲ್ಲಿ ವಿಶೇಷ ರಿಯಾಯತಿಯನ್ನು ನೀಡಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕ್ರಮಕೈಗೊಂಡಿರುವುದು ಹೆಚ್ಚು ಮಹತ್ವವೆನಿಸುತ್ತಿದೆ. ದೇಶದ ಬೇರೆ ಬೇರೆ ಉತ್ಪಾದನಾ ವಲಯದ ಚೇತರಿಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸೊರಗುತ್ತಿರುವ ಕೃಷಿ ಕ್ಷೇತ್ರಕ್ಕೆ ಬೆಂಬಲ ಬೇಕಿದೆ. ಉದ್ಯೋಗ ಸೃಷ್ಟಿಯಾಗಬಲ್ಲ ಯೋಜನೆಗಳು ಜಾರಿಯಾಗಬೇಕು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಬೆಂಬಲ ನೀಡಬೇಕು. 2020ರ ಅಂತ್ಯಕ್ಕೆ ಹಿಂಜರಿತ ವಿಶ್ವಾದ್ಯಂತ ವ್ಯಾಪಿಸುವ ಬಗ್ಗೆ ವ್ಯಕ್ತವಾದ ಕಳವಳವನ್ನು ಗಮನದಲ್ಲಿ ಇಟ್ಟುಕೊಂಡು ಸರಕಾರ ಅಗತ್ಯ ಕ್ರಮಗಳಿಗೆ ಮುಂದಾಗಬೇಕಿದೆ.

ಮುಂದಿನ ತ್ರೈಮಾಸಿಕ ವರದಿಯ ಮೇಲೆ ಎಲ್ಲರ ಕಣ್ಣು.

ಭಾರತದ ಜಿಡಿಪಿ ಬೆಳವಣಿಗೆ ಈಗಾಗಲೇ ಆತಂಕ ಮೂಡಿಸಿದೆ.ಆರ್ಥಿಕ ತಜ್ಞರು ದೇಶದಲ್ಲಿ ಆರ್ಥಿಕ ಹಿಂಜರಿತದ ಆರಂಭವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಆತಂಕ ಮತ್ತು ಅಭಿಪ್ರಾಯಗಳಿಗೆ ಕಾರಣ ಇಳಿಮುಖದತ್ತ ಸಾಗುತ್ತಿರುವ ಜಿಡಿಪಿ ಮತ್ತು ಕಳೆದ ತ್ರೈಮಾಸಿಕ ಅವಧಿಯಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಮಾಡಿರುವುದೂ ಕೂಡ ಆಗಿದೆ. ಜೂನ್ ತ್ರೈಮಾಸಿಕ ಅವಧಿಯಲ್ಲಿ 5% ಕ್ಕೆ ಬಂದಾಗ ಜಿಡಿಪಿ ಬಹು ಚರ್ಚಿತ ಸಂಗತಿಯಾಗಿತ್ತು. ಹಾಗಾಗಿ ಮುಂದಿನ ತ್ರೈಮಾಸಿಕ ಅಂದರೆ ಜುಲೈ-ಸಪ್ಟಂಬರ್ ಅವಧಿಯಲ್ಲಿ ಹಬ್ಬಗಳ ಸುಗ್ಗಿಯಿಂದಾಗ ದೇಶದ ಅರ್ಥವ್ಯವಸ್ಥೆಯಲ್ಲಿ ಚೈತನ್ಯ ಉಂಟಾಗಬಹುದೆಂಬ ನಿರೀಕ್ಷೆ ಹಲವರದ್ದು. ಒಂದು ವೇಳೆ ಈ ಅವಧಿಯಲ್ಲಿಯೂ ಜಿಡಿಪಿ ಮತ್ತೆ ಇಳಿಮುಖವಾಗಿ ಚಲಿಸಿದರೆ ಮಾತ್ರ ಆರ್ಥಿಕ ಹಿಂಜರಿತ ಸ್ಪಷ್ಟವಾಗುತ್ತದೆ ಮತ್ತು ದೇಶ ಅದನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ.

ಅಡ್ಮಿನ್ ; ಲಾ ಛೇಂಬರ್ ಶಿರಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *