ಕೋಮುವಾದ ಮತ್ತು ಮೂಲಭೂತವಾದ ಎರಡೂ ಅಪಾಯ

ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಕೆಲವು ವಿಚಾರಗಳು
ಕೋಮುವಾದ ಮತ್ತು ಮೂಲಭೂತವಾದ
ಎರಡೂ ಅಪಾಯ
ವಿದ್ಯಾರ್ಥಿಗಳ ಕುರಿತು ಪ್ರಮುಖವಾಗಿ ಎರಡು ಬಗೆಯ ಅಭಿಪ್ರಾಯಗಳು ಜನಸಮುದಾಯಗಳಲ್ಲಿದೆ. ಒಂದನೆಯದು ‘ಇವರು ತಮ್ಮ ಜವಾಬ್ದಾರಿ ಮರೆತ ಜನರು. ಸಮುದಾಯದ ದುಃಖ ದುಮ್ಮಾನಕ್ಕೆ ಇವರು ಮಿಡಿಯುವುದಿಲ್ಲ. ದುಡಿಮೆಯ ಮೌಲ್ಯ ಇವರಿಗೆ ಗೊತ್ತಿಲ್ಲ. ಆದ್ದರಿಂದಲೇ ದುಂದುವೆಚ್ಚ ಮಾಡುತ್ತಾರೆ. ಬೈಕುಗಳಲ್ಲಿ ಸುತ್ತುತ್ತಾ, ಮೊಬೈಲುಗಳಲ್ಲಿಯೇ ಕಾಲ ಕಳೆಯುತ್ತಾರೆ. ತಮ್ಮ ಸಂಸ್ಕøತಿ ಮರೆತು ಸ್ವಚ್ಚಂದ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬುದು. ಎರಡನೆಯದು ಸದಭಿಪ್ರಾಯ. ವಿದ್ಯಾರ್ಥಿಗಳ ಬಗ್ಗೆ ವಿಶ್ವಾಸವನ್ನು ತೋರುವ , ಅವರು ಈ ಸಮಾಜಕ್ಕೆ ಆಸ್ತಿಯಾಗಬಲ್ಲರು ಎಂಬ ಭರವಸೆಯುಳ್ಳದ್ದು.
ಆದರೆ ವಿದ್ಯಾರ್ಥಿಗಳನ್ನು ನೆಗೆಟೀವ್ (ನೇತ್ಯಾತ್ಮಕ) ಆಗಿ ನೋಡುವ ಜನಸಮುದಾಯ ಎದ್ದು ಕಾಣುವಂತಿದೆ. ಯಾವಾಗಲೂ ನೆಗೆಟೀವ್ ಅಂಶಗಳೇ ಹೆಚ್ಚು ಜನರ ಗಮನ ಸೆಳೆಯುವುದು ಒಂದು ಸಾಮಾನ್ಯ ಕಾರಣ. ಟಿ.ವಿ.ಯಂತಹ ವಿದ್ಯುನ್ಮಾನ ಮಾಧ್ಯಮಗಳೂ ವಿದ್ಯಾರ್ಥಿಗಳ ಸಣ್ಣಪುಟ್ಟ ತಪ್ಪುಗಳನ್ನೆಲ್ಲಾ ವೈಭವೀಕರಿಸಿ ಪ್ರಸಾರ ಮಾಡುವುದೂ ಜನರು ವಿದ್ಯಾರ್ಥಿಗಳನ್ನು ತಪ್ಪು ದೃಷ್ಟಿಯಲ್ಲಿ ನೋಡಲು ಪ್ರೇರಣೆ ನೀಡುತ್ತವೆ.
ನಮ್ಮ ಸುತ್ತಲೂ ನಡೆಯುತ್ತಿರುವುದನ್ನು ನೋಡಿದರೆ ನಮ್ಮಲ್ಲಿ ಆಕ್ರೋಶ ಮತ್ತು ಇದನ್ನು ಸರಿಪಡಿಸಲು ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಹತಾಶ ಭಾವನೆ ನಮ್ಮಲ್ಲಿ ಮೂಡಿರುತ್ತದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ.
ನಮ್ಮನ್ನು ಆಳುತ್ತಿರುವ ಸರ್ಕಾರಗಳು ಸಾವಿರಾರು-ಲಕ್ಷಾಂತರ ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಹಗರಣಗಳಲ್ಲಿ ಮುಳುಗಿವೆ. ದಿನಕ್ಕೊಂದು ಹಗರಣಗಳು ಹೊರಬರುತ್ತಿವೆ. ಜನರಿಂದ ಜನರ ನೆಮ್ಮದಿಗಾಗಿ ಆಯ್ಕೆಯಾಗಿರುವ ರಾಜಕಾರಣಿಗಳು ವಿಧಾನಸಭೆಯಲ್ಲಿ ಮೊಬೈಲುಗಳಲ್ಲಿ ಏನು ನೋಡುತ್ತಿದ್ದರು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ರಾಜ್ಯದ ಅಧರ್Àಕ್ಕೂ ಹೆಚ್ಚುಭಾಗದ ಜನ ಬರದಿಂದ ತತ್ತರಿಸಿರುವಾಗ ನಮ್ಮ ರಾಜಕಾರಣಿಗಳು ರೆಸಾರ್ಟುಗಳಲ್ಲಿ ಮಜಾ ಉಡಾಯಿಸುತ್ತಿರುವುದನ್ನು , ತಮ್ಮ ಚೇಲಾಗಳಿಂದ ನಿರ್ಲಜ್ಜವಾಗಿ ಸನ್ಮಾನ ಮಾಡಿಸಿಕೊಳ್ಳುತ್ತಿರುವುದನ್ನು ಮತ್ತು ಭ್ರಷ್ಟ ಹಣದಿಂದ ಊರೂರನ್ನೇ ಕೊಂಡುಕೊಳ್ಳುತ್ತಿರುವುದನ್ನು ನೀವು ಅಸಹಾಯಕರಾಗಿ ನೋಡುತ್ತಿದ್ದೀರಿ ಎಂಬುದೂ ನನಗೆ ಗೊತ್ತು.
ನಾವೇನೋ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೆಮ್ಮೆಯಿಂದ ಬೀಗುತ್ತೇವೆ. ನಿಜಕ್ಕೂ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವೇ? ಇದು ಜನರಿಂದ ಜನರಿಗಾಗಿ ಜನರಿಗೋಸ್ಕರ ಆಯ್ಕೆಮಾಡಿದ ಸರ್ಕಾರವೇ? ಇದು ಒಂದು ವೇಳೆ ಸತ್ಯವೇ ಆಗಿದ್ದಲ್ಲಿ ಈ ಸರ್ಕಾರಗಳು ಉದ್ಯಮಿಗಳು ಆರಂಭಿಸುವ ಬೃಹತ್ ಉದ್ಯಮಗಳಿಗಾಗಿ ಲಕ್ಷಾಂತರ ರೈತರನ್ನು , ಬಡಜನರನ್ನು ಅವರ ಊರುಗಳಿಂದ ಯಾಕೆ ಎತ್ತಂಗಡಿ ಮಾಡುತ್ತಿವೆ? ಏಕೆಂದರೆ ಇವು ಜನರಿಗಾಗಿ ಇರುವ ಸರ್ಕಾರಗಳಲ್ಲ.
ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳು ನಡೆಸುತ್ತಿರುವ ಸರ್ಕಾರಗಳಾಗಿವೆ. ಆದ್ದರಿಂದಲೇ ಈ ದೇಶದ ಒಟ್ಟು ಆದಾಯದ ಇಪ್ಪತ್ತೈದು ಭಾಗ ಕೇವಲ ನೂರು ಜನ ಉಧ್ಯಮಪತಿಗಳಿಗೆ ಸೇರಿದೆ. ಈಗ ಈ ದೇಶ ಸ್ಪಷ್ಟವಾಗಿ ಕಾರ್ಪೊರೇಟ್ ಶ್ರೀಮಂತರ ಇಂಡಿಯಾ ಮತ್ತು ಬಡವರ ಭಾರತ ಎಂದು ವಿಭಾಗಿಸಲ್ಪಟ್ಟಿದೆ. ಅನಿಲ್ ಅಂಬಾನಿಯ ಆದಾಯ ಕರ್ನಾಟಕ ರಾಜ್ಯದ ವಾರ್ಷಿಕ ಬಜೆಟ್ಟಿಗಿಂತಲೂ ಅಧಿಕವಾಗಿದೆ. ಇದೇ ಹೊತ್ತಿನಲ್ಲಿ ಜಗತ್ತಿನಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಒಟ್ಟು ಮಕ್ಕಳ ಸಂಖ್ಯೆಯಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿ ಭಾರತದಲ್ಲೇ ಇದ್ದಾರೆ. ಆ ಬಡಮಕ್ಕಳ ಸಂಖ್ಯೆ ಐದು ಕೋಟಿ ಎಪ್ಪತ್ತು ಲಕ್ಷ ಎಂದು ಸರ್ಕಾರದ ಅಂಕಿ ಸಂಖ್ಯೆಗಳೇ ಹೇಳುತ್ತವೆ.
ಜನರ ಹೋರಾಟದ ಫಲವಾಗಿ ರಚನೆಯಾದ ಉಳುವವನೇ ಹೊಲದೊಡೆಯ ಎಂಬ ರೈತ ಪರ ಕಾನೂನು ಇಂದು ತನ್ನ ಮೌಲ್ಯವನ್ನು ಕಳೆದುಕೊಂಡಿದ್ದು ಬಹುರಾಷ್ಟ್ರೀಯ ಕಂಪನಿಗಳಿಗೋಸ್ಕರ ರೈತರ ಫಲವತ್ತಾದ ಲಕ್ಷಾಂತರ ಎಕರೆ ಗದ್ದೆ ತೋಟಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ರೈತರ ಹೋರಾಟಗಳೂ ಕ್ಷೀಣಿಸುತ್ತಿದ್ದು ಈಗ ಭೂಮಿ ಉಳಿಸಿಕೊಳ್ಳುವ ಹೋರಾಟದ ಬದಲಿಗೆ ತಮ್ಮಿಂದ ಕಿತ್ತುಕೊಂಡ ಜಮೀನುಗಳಿಗೆ ಹೆಚ್ಚಿನ ಪರಿಹಾರ ಕೊಡಿ ಎಂಬ ಹೋರಾಟ ಆರಂಭವಾಗಿರುವುದು ಈ ನಾಡಿನ ದುರಂತದ ಮುನ್ನುಡಿಯಂತಿದೆ.
ಸಾಮಾಜಿಕವಾಗಿ ಜಾತಿವ್ಯವಸ್ಥೆ ಮತ್ತಷ್ಟು ಪ್ರಬಲವಾಗಿದೆ. ದಲಿತರು ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಲವು ಪಟ್ಟು ಹೆಚ್ಚಾಗಿವೆ..
ಇನ್ನೊಂದು ಧರ್ಮದವರ ವಿರುದ್ಧ ನಡೆಸಲಾಗುವ ಕೋಮುವಾದದಿಂದ ಇತ್ತೀಚಿನ ಗುಜರಾತ್ ದಳ್ಳುರಿಯವರೆಗೆ ಲಕ್ಷಾಂತರ ಜನ ತಮ್ಮ ಜೀವ ಮತ್ತು ಬದುಕುಗಳನ್ನು ಕಳೆದುಕೊಂಡಿದ್ದಾರೆ. ಕರ್ನಾಟಕವನ್ನು ಗುಜರಾತ್ ಮಾಡುವ ಪ್ರಯತ್ನ ದಕ್ಷಿಣ ಕನ್ನಡ ಜಿಲ್ಲೆಯಿಂದ ವ್ಯವಸ್ಥಿತವಾಗಿ ಆರಂಭವಾಗಿರುವುದು ನಮಗೆಲ್ಲ ತಿಳಿದಿದೆ. ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸುತ್ತ ತಮ್ಮ ಧರ್ಮಿಯರನ್ನೆ ಮತ್ತು ತಮ್ಮ ಧರ್ಮದ ಮಹಿಳೆಯರನ್ನೆ ಶೋಷಿಸುವ ಮೂಲಭೂತವಾದÀವೂ ನಮ್ಮ ನಡುವೆ ಅಪಾಯಕಾರಿಯಾಗಿ ಬೆಳೆಯುತ್ತಿದೆ.
ಮೂಲಭೂತವಾದವೆಂದರೆ ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಮೊನ್ನೆ ಪತ್ರಿಕೆಯಲ್ಲಿ ವರದಿಯೊಂದನ್ನು ಓದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಮಡದಿಗೆ ಮೊಬೈಲಿನಲ್ಲಿ ಕರೆ ಮಾಡಿ ಮೂರು ಬಾರಿ ತಲಾಖ್ ಹೇಳಿ ಮರುದಿನ ತನ್ನ ತಪ್ಪು ಅರಿವಾಗಿ ತಲಾಕ್ ಹಿಂಪಡೆದರೂ ಅಲ್ಲಿನ ಧಾರ್ಮಿಕ ಮುಖಂಡರು ಗಂಡ ಹೆಂಡತಿಯರನ್ನು ಬೇರೆ ಬೇರೆ ಮಾಡಿದ್ದು. ಗೆಳೆಯ ಇಸ್ಮತ್ ಹೇಳಿದ ಪ್ರಕಾರ ದಕ್ಷಿಣ ಕನ್ನಡದಲ್ಲಿ ಇದೇ ಧಾರ್ಮಿಕ ಗುರುಗಳು ಬೀದಿ ಬದಿ ವ್ಯಾಪಾರ ಮಾಡುವುದನ್ನು ಅದು ಕುರಾನ್ ಗೆ ವಿರುದ್ಧವಿದೆಯೆಂದು ಫತ್ವಾ ಹೊಡೆಸಿದ್ದು.
ಮರ್ಯಾದಾ ಹತ್ಯೆಗಳೆಂಬ ನೀಚಕೃತ್ಯಗಳು ಕರ್ನಾಟಕಕ್ಕೆ ಕಾಲಿರಿಸಿವೆ. ಹಾವೇರಿಯ ತಿರುಮಲದೇವರಕೊಪ್ಪದಲ್ಲಿ ಮೇಲ್ಜಾತಿಯವನೊಬ್ಬ ಕಟ್ಟಿಸಿದ ಮನೆಯ ವಾಸ್ತು ಸರಿಯಿಲ್ಲವೆಂದು ದಲಿತ ಹುಡುಗನೊಬ್ಬನನ್ನು ಬಲಿಕೊಡಲಾಗಿದೆ. ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಮೌಢ್ಯತೆ ಹೆಚ್ಚಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.
ಈ ನಾಡು ಇಂತಹ ಸಂಕಷ್ಟಗಳಲ್ಲಿರುವಾಗ ಇವಕ್ಕೆ ಏಕೈಕ ಆಶಾಕಿರಣವಾಗಿ ಗೋಚರಿಸುತ್ತಿರುವುದು ನೀವೆ.(ವಿದ್ಯಾರ್ಥಿಗಳೇ)
ಏಕೆಂದರೆ ನಿಮಗೆ ಅಪಾರವಾದ ಕ್ರಿಯಾಶಕ್ತಿಯಿದೆ. ಸಂಘಟನಾ ಚತುರತೆಯಿದೆ. ಸಮಾಜದ ಬಗ್ಗೆ ಕಳಕಳಿಯಿದೆ. ಆದರ್ಶವಿದೆ. ಇದಕ್ಕೆಲ್ಲಾ ತಳಹದಿಯಾಗಿ ನಿಮ್ಮೊಳಗೆ ನೈತಿಕ ಶಕ್ತಿಯಿದೆ. ಭಗತ್ ಸಿಂಗ್ ನಂತಹ ಸ್ವಾತಂತ್ರ್ಯ ಹೋರಾಟಗಾರರೂ, ಶಾಂತವೇರಿ ಗೋಪಾಲಗೌಡರಂತಹ ಮಾದರಿ ರಾಜಕಾರಣಿಗಳು, ಕುವೆಂಪು ರಂತಹ ಪ್ರಚಂಡ ಪ್ರತಿಭೆಯ ಸಾಹಿತಿಗಳೂ ವಿದ್ಯಾರ್ಥಿಗಳಾಗಿದ್ದಾಗಲೇ ತಮ್ಮ ಕ್ರಿಯಾಶಕ್ತಿಯಿಂದ ಗಮನ ಸೆಳೆದಿದ್ದರು ಎಂಬುದನ್ನು ಇಲ್ಲಿ ನಾನು ನಿಮ್ಮ ಗಮನಕ್ಕೆ ತರಬಯಸುತ್ತೇನೆ.
ನೀವು ಶ್ರಮಪಟ್ಟು ಓದಿ ಒಳ್ಳೆಯ ಅಂಕ ಪಡೆದು ಒಳ್ಳೆಯ ಉದ್ಯೋಗವನ್ನು ಹಿಡಿದು ಬದುಕಿನಲ್ಲಿ ನೆಲೆ ನಿಲ್ಲುವುದು ಮುಖ್ಯ ಎಂದು ನಾನೂ ನಂಬುತ್ತೇನೆ. ಇದರೊಂದಿಗೆ ನೀವು ನಾಯಕತ್ವದ ಗುಣಗಳನ್ನು ಪಡೆದು ಯಾವುದೋ ಪಕ್ಷದ ನಾಯಕನಾಗಿ ಬೆಳೆಯಬಹುದು. ಆದರೆ ಇದಕ್ಕೂ ಮೀರಿ ನಾವು ಈ ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ. ನೀವು ನಿಮ್ಮ ಶಕಿ ಮೀರಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲೇಬೇಕಾದ ಸಂಕೀರ್ಣ ಕಾಲಘಟ್ಟದಲ್ಲಿದ್ದೀರಿ.
ಪ್ರಸ್ತುತ ವಿವಿಧ ಧರ್ಮಗಳ ನಡುವೆ ಪರಸ್ಪರ ಅಪನಂಬಿಕೆ ಸೃಷ್ಟಿಯಾಗಿದೆ. ಈ ಅಪನಂಬಿಕೆಯನ್ನು ತುಂಬಾ ವ್ಯವಸ್ಥಿತವಾಗಿ ಹುಟ್ಟಿಸಲಾಗಿದೆ. ಒಂದೇ ಧರ್ಮದ ಇಬ್ಬರು ಪರಸ್ಪರ ವೈಯಕ್ತಿಕ ಕಾರಣಕ್ಕೆ ಕಾದಾಡಿದರೆ ಅದು ಜಗಳ. ಅದೇ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಧರ್ಮಕ್ಕೆ ಸೇರಿದರೆ ಅದು ಕೋಮುಗಲಭೆ. ಕೊಲೆ,ಅತ್ಯಾಚಾರ, ದರೋಡೆ ಇವುಗಳನ್ನೆಲ್ಲ ಧರ್ಮಸಂರಕ್ಷಣೆ ಎಂದು ಸಮರ್ಥಿಸುವ ಕುಲಗೆಟ್ಟ ಸಮಾಜ ನಿರ್ಮಾಣವಾಗುತ್ತಿದೆ. ಸಹೋದರ ಧರ್ಮದ ಬಗ್ಗೆ ಹೀನಾಯವಾಗಿ ಮಾತನಾಡುವ ಧರ್ಮಾಂಧನೊಬ್ಬ ನಮ್ಮ ಮುಖ್ಯಮಂತ್ರಿಗಳ ಗುರುಗಳು. ಮಾನ್ಯ ಮುಖ್ಯಮಂತ್ರಿಗಳ ಊರಿನಲ್ಲಿ ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸಿದ ವ್ಯಕ್ತಿಗಳನ್ನು ಕಾನೂನು ರೀತ್ಯಾ ಬಂಧಿಸಿದರೆ ಕಾನೂನು ಪಾಲಿಸಿದ ಪೊಲೀಸ್ ಅಧಿಕಾರಿಗಳನ್ನೇ ಸರ್ಕಾರ ವರ್ಗಾಯಿಸುತ್ತದೆ.
ಯಾವ ಹೆಸರಿನಲ್ಲಿ ಮಾಡಿದರೂ ಕೊಲೆ ಕೊಲೆಯೇ, ಅತ್ಯಾಚಾರ ಅತ್ಯಾಚಾರವೇ, ದರೋಡೆ ದರೋಡೆಯೇ. ಯಾವುದೇ ಬಗೆಯ ದುಷ್ಕøತ್ಯವನ್ನು ಯಾರು ಮಾಡಿದರೂ ಅವರು ಯಾವುದೇ ಧರ್ಮಕ್ಕೆ,ಜಾತಿಗೆ ಸೇರಿರಲಿ,ಅವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು. ಶಿಕ್ಷೆ ನೀಡುವುದು ಅಪರಾಧಿಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪವಾಗಿ ಆತನ ಮನಃಪರಿವರ್ತನೆ ಮಾಡಲಿಕ್ಕೆ. ದುಷ್ಕøತ್ಯ ಮಾಡದವರಿಗೆ ಶಿಕ್ಷೆ ನೀಡದಿದ್ದರೆ ಅವರು ರಾಕ್ಷಸರಾಗಿ ಬೆಳೆಯುತ್ತಾರೆ. ಭಸ್ಮಾಸುರರಾಗಿ ಬೇರೆಯವರನ್ನು ಮಾತ್ರವಲ್ಲ ಕೊನೆಗೆ ತಮ್ಮವರನ್ನೇ ನಾಶ ಮಾಡುತ್ತಾರೆ.
ಅಕ್ಕ ಸೀತೆಗಾದರೋ ಒಮ್ಮೆ ಮಾತ್ರ ಅಗ್ನಿಪರೀಕ್ಷೆ , ಆದರೆ ನಾವು ಮಾತ್ರ ದಿನನಿತ್ಯ ನಮ್ಮ ದೇಶಪ್ರೇಮವನ್ನು ಸಾಬೀತುಪಡಿಸಬೇಕು ಎಂದು ಕವಿಮಿತ್ರ ಪೀರ್ ಬಾಷಾ ಕವನವೊಂದರಲ್ಲಿ ಬರೆಯುತ್ತಾರೆ. ನಿಮ್ಮ ಸಂಕಟವನ್ನು ನಾನು ಬಲ್ಲೆ. ಆದರೆ ಇದಕ್ಕೆ ನಾನು ಎಲ್ಲಾ ಹಿಂದೂ ಧರ್ಮೀಯರನ್ನು ಹೊಣೆ ಮಾಡಲಾರೆ. ಏಕೆಂದರೆ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಹಿಂದೂಗಳಿಗೆ ಯಾರ ಕುರಿತು ಅಪನಂಬಿಕೆಗಳಿಲ್ಲ. ಆದರೆ ಕೆಲವು ಮತಾಂಧರು ಇಂತಹ ಅಪನಂಬಿಕೆಗಳನ್ನು ವ್ಯವಸ್ಥಿತವಾಗಿ ಹಬ್ಬಿಸುತ್ತಿದ್ದಾರೆ. ಈಗ ಕಾಲೇಜುಗಳಲ್ಲಿಯೂ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳ ನಡುವೆ ಬಿರುಕುಗಳನ್ನು ಮೂಡಿಸಲು ಪ್ರಯತ್ನಿಸಲಾಗುತ್ತಿದೆ.ಇದಕ್ಕೆ ನೀವು ಬೆಲೆ ನೀಡಿ ಅಪನಂಬಿಕೆ ಬೆಳೆಸಿಕೊಂಡರೆ ಲಾಭವಾಗುವುದು ಮತಾಂಧರಿಗೆ ಮಾತ್ರ.
ನಮ್ಮ ಊರಿನ ಒಂದೆರೆಡು ವಿಷಯಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಬಯಸುತ್ತೇನೆ.ನಮ್ಮ ಊರಿನಲ್ಲಿ ಇರುವುದು ನೂರಕ್ಕೆ 95 ಭಾಗ ಹಿಂದೂಗಳು 5 ಭಾಗ ಮುಸ್ಲೀಮರು. ಆದರೆ ಕಳೆದ 10 ವರ್ಷದಿಂದ ನಮ್ಮ ಗ್ರಾಮ ಪಂಚಾಯತ ಸದಸ್ಯರಾಗಿರುವವರು ಮುಸ್ಲಿಮ್.
ನಮ್ಮ ಊರಿನಲ್ಲಿ ಒಂದು ಘಟನೆ ನಡೆಯಿತು. ಯಾಕೂಬ್ ನನ್ನ ಕಿರಿಯ ಗೆಳೆಯ ಊರಿನಲ್ಲಿ ಒಂದು ಲಗೇಜ್ ಆಟೋವನ್ನು ಬಾಡಿಗೆಗೆ ಓಡಿಸುತ್ತಾನೆ ಈತನ ಈ ಆಟೋದಲ್ಲ್ಲಿ ಒಮ್ಮೆ ಊರಿನ ಮಹಿಳೆಯೊಬ್ಬರು ತಮ್ಮ ಒಂದೆರಡು ದನಗಳನ್ನು ಹಾಕಿಕೊಂಡು ಹೊರಟರು. ಅವರೊಂದಿಗೆ ಅವರ ಮಗನೂ ಆಟೋದಲ್ಲಿದ್ದನು. ದನಗಳನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಂಡ ಸಂಘಟನೆಯೊಂದರ ಕೆಲವರು ಆಟೋವನ್ನು ತಡೆದು ಆಟೋ ಚಾಲಕನನ್ನು ದನವನ್ನು ಆಕ್ರಮವಾಗಿ ಕಟುಕರಿಗೆ ಮಾರಲು ಸಾಗಿಸುತ್ತಿದ್ದಾನೆ ಎಂದು ಹುಯಿಲೆಬ್ಬಿಸಿ ಆತನನ್ನು ಥಳಿಸಲು ಮತ್ತು ಪೊಲೀಸ್ ಠಾಣೆಗೆ ಕರೆದೊಯ್ಯಲು ಸನ್ನಾಹ ನಡೆಸಿದ್ದಾರೆ. ಆ ಮಹಿಳೆ ಸ್ಪಷ್ಟವಾಗಿ ಇದು ನನ್ನ ದನಗಳೆಂದೂ ಇದನ್ನು ನನ್ನ ಬಂಧುಗಳೊಬ್ಬರಿಗೆ ಮಾರಲು ತೆಗೆದುಕೊಂಡು ಹೋಗುತ್ತಿದ್ದೆವೆಂದೂ, ಇದರಲ್ಲಿ ಆಟೋ ಚಾಲಕನ ತಪ್ಪೇನು ಇಲ್ಲವೆಂದು ಹೇಳಿದರೂ ಅವರು ಕೇಳುತ್ತಿಲ್ಲ. ‘ನಿಮ್ಮನ್ನು ಹಾಗು ನಿಮ್ಮ ಮಗನನ್ನು ಬೇಕಾದರೆ ಬಿಡುತ್ತೇವೆ . ಆದರೆ ಈ ಆಟೋ ಚಾಲಕನನ್ನು ಮಾತ್ರ ಬಿಡುವುದಿಲ್ಲವೆಂದು’ ಅವರು ಪಟ್ಟು ಹಿಡಿದಿದ್ದಾರೆ. ಆಗ ಆ ಮಹಿಳೆ ‘ ಬೇಕಾದರೆ ನನ್ನನ್ನು ಮತ್ತು ನನ್ನ ಮಗನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ , ಆದರೆ ಹೊಟ್ಟೆಪಾಡಿಗಾಗಿ ನಮ್ಮೊಂದಿಗೆ ಬಾಡಿಗೆಗೆ ಬಂದ ಈ ಆಟೋ ಚಾಲಕನನ್ನು ಮುಟ್ಟಿದರೆ ಪರಿಸ್ಥಿತಿ ಸರಿಯಿರುವುದಿಲ್ಲವೆಂದು’ ಜೋರಾಗಿ ಗಲಾಟೆಯೆಬ್ಬಿಸಿದ್ದಾರೆ. ಅವರ ಅಬ್ಬರದಿಂದ ಆ ಸಂಘಟನೆಯವರು ನಿರುಪಾಯವಾಗಿ ಮರಳಿದ್ದಾರೆ. ಇಂತಹ ವಿವೇಕವಿರುವವರ ಸಂಖ್ಯೆ ಸಾಕಷ್ಟಿದೆ.
ನಾವು ಯಾವುದೇ ಧರ್ಮಕ್ಕೆ ಸೇರಿರಲಿ ಯಾರು ತಪ್ಪು ಮಾಡಿದರೂ ಅದನ್ನು ತಪ್ಪು ಎಂದು ಹೇಳುವ ದಿಟ್ಟತೆ ತೋರಬೇಕು. ನಾವು ಎಲ್ಲರೊಡನೆ ಬೆರಯಬೇಕು. ಸ್ನೇಹವನ್ನು ಸಂಪಾದಿಸಬೇಕು. ನಾವೆಲ್ಲ ಒಟ್ಟಾಗಿರುವವರೆಗೂ ನಮ್ಮ ನಡುವೆ ಬಿರುಕು ಮೂಡಿಸಲು ಯಾರಿಗೂ ಸಾಧ್ಯವಿಲ್ಲ. ಈ ದೇಶದ ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ನಾವೆಲ್ಲರೂ ಒಂದೇ.
ಮುಸ್ಲಿಂರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಸಮಿತಿಯ ವರದಿಯನ್ನು ಓದಿದರೆ ದಿಗ್ಭ್ರಮೆಯಾಗುತ್ತದೆ. ಬಡತನ ಮತ್ತು ಅನಕ್ಷರತೆಯ ಪ್ರಮಾಣ ದಲಿತರಿಗಿಂತಲೂ ಕಡಿಮೆಯಿದೆ. ಈ ಪ್ರಮಾಣ ಆದಿವಾಸಿಗಳಿಗೆ ಸಮನಾಗಿದೆ. ಮುಸ್ಲೀಮರ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದಾಗ ನ್ಯಾಯಾಂಗ,ಆಡಳಿತಾಂಗ ಮತ್ತು ಶಾಸಕಾಂಗಗಳಲ್ಲಿ ಅವರ ಪ್ರಾತಿನಿಧ್ಯ ನಗಣ್ಯವೆನ್ನುವಷ್ಟು ಕಡಿಮೆಯಿದೆ. ಮುಸ್ಲಿಮರ ಪ್ರಾತಿನಿಧ್ಯ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತಲೂ ಅಧಿಕವಿರುವ ಏಕೈಕ ಜಾಗವೆಂದರೆ ಅದು ಜೈಲುಗಳು.
ಸಾಚಾರ್ ವರದಿ ಇನ್ನೊಂದು ಪ್ರಮುಖ ಅಂಶವನ್ನು ಹೇಳುತ್ತದೆ. ಒಂದು ಜನಾಂಗಕ್ಕೆ ಸೇರಿದ್ದೇವೆ ಎನ್ನುವ ಕಾರಣಕ್ಕಾಗಿಯೇ ಹತ್ತಿಕ್ಕಲ್ಪಟ್ಟ ಸಮುದಾಯವೆಂದರೆ ಅದು ಮುಸ್ಲಿಮರು. ಮುಸ್ಲೀಮರಲ್ಲಿ ಮಧ್ಯಮವರ್ಗ ಎನ್ನುವುದೇ ಇಲ್ಲ ಎಂದು ವರದಿ ಹೇಳುತ್ತದೆ. ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳಗಳಲ್ಲಿ ಮುಸ್ಲೀಮರ ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದ್ದು ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎಂದು ವರದಿ ತಿಳಿಸುತ್ತದೆ. ವಿದ್ಯಾರ್ಥಿಮಿತ್ರರು ಸಾಚಾರ್ ವರದಿಯನ್ನು ಅಗತ್ಯವಾಗಿ ಓದಬೇಕು.
ನಾವು ನಮ್ಮ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಕುವೆಂಪು, ಪಿ.ಲಂಕೇಶ್, ಡಾ.ರಹಮತ್ ತರೀಕೆರೆ, ಪೂರ್ಣಚಂದ್ರ ತೇಜಸ್ವಿ, ಸಾರಾ ಅಬೂಬಕರ್, ಅನಂತಮೂರ್ತಿ ಇವರು ರಚಿಸಿದ ಸಾಹಿತ್ಯವನ್ನು ಗಂಭೀರವಾಗಿ ಓದಬೇಕು. ಕುವೆಂಪು ರ ವಿಚಾರ ಕ್ರಾಂತಿಗೆ ಆಹ್ವಾನ,ಪಿ.ಲಂಕೇಶರ ಟೀಕೆ ಟಿಪ್ಪಣಿಗಳು ಅದರಲ್ಲೂ ‘ಇಟ್ಟಿಗೆ ಪವಿತ್ರವಲ್ಲ,ಜೀವ ಪವಿತ್ರ ಎಂಬ ಲೇಖನ,’ ರಹಮತ್ ಅವರ ಧರ್ಮಪರೀಕ್ಷೆ, ಕರ್ನಾಟಕದ ಸೂಫಿಗಳು, ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ, ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿ. ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ವಂತೂ ವಿದ್ಯಾರ್ಥಿಗಳ ಕುರಿತೇ ಇದೆ.
ಕುವೆಂಪು ಅವರ ಕವನದ ಕೆಲವು ಸಾಲುಗಳನ್ನು ಓದಬಯಸುತ್ತೇನೆ.
ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ !
ಸಿಲುಕಿದಿರಿ ಮತವೆಂಬ ಮೋಹದಜ್ಞಾನಕ್ಕೆ :
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ;
ಓ ಬನ್ನಿ ಸೋದರರೆ , ವಿಶ್ವಪಥಕೆ
ಈ ವೈಚಾರಿಕ ದೃಷ್ಟಿಕೋನ ನಮ್ಮದಾಗಬೇಕು. ಕುದಿಯುತ್ತಿರುವ ಈ ಸಮಾಜಕ್ಕೆ ಕುವೆಂಪು ನೀಡಿದ ಈ ಪರಿಹಾರಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ ಎನ್ನುವುದು ನನ್ನ ನಂಬಿಕೆ.

  • ಸರ್ಜಾಶಂಕರ ಹರಳಿಮಠ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *