

ಕಾಗೋಡುತಿಮ್ಮಪ್ಪನವರಿಗೆ
35 ವರ್ಷಗಳಲ್ಲಿನ
ಎರಡು ವಿಭಿನ್ನ ಪತ್ರಗಳು
ದೀವರು ಈಡಿಗರಲ್ಲ. ಎಂದು ಅನೇಕ ವರ್ಷಗಳಿಂದ ಚರ್ಚೆ, ಸಂವಾದ, ವಿವಾದಗಳೆಲ್ಲಾ ನಡೆಯುತ್ತಿವೆ. 1970-80 ರ ದಶಕದಲ್ಲಿ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಗೋಪಾಲಗೌಡರ ನೇತೃತ್ವದಲ್ಲಿ ಸದನದ ಒಳಗೆ, ಹೊರಗೂ ಚರ್ಚೆ ನಡೆದು ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರಿಂದಾಗಿ ದೀವರ ಪಂಗಡ ಇತರ ಹಿಂದುಳಿದವರ ಪಟ್ಟಿಯಲ್ಲಿ ಸೇರ್ಪಡೆಯಾಯಿತು. ಇದೇ ಸಮಯದಲ್ಲಿ ರಾಜ್ಯದ ಕೆಲವೆಡೆ ಅನೇಕರು ಈ ಚರ್ಚೆ ಸಂವಾದಗಳಲ್ಲಿ ಪಾಲ್ಗೊಂಡು ‘ದೀವರ’ ವಿಚಾರವನ್ನು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು.
ರೈತ ಹೋರಾಟಗಾರ ದಿನಕರ ದೇಸಾಯಿಯವರಿಗೆ ತಾಲೂಕಿನಲ್ಲೇ ಮೊಟ್ಟಮೊದಲ ಬಾರಿಗೆ ವೇದಿಕೆ ಕಲ್ಪಿಸಿದ ನಮ್ಮೂರು ಕೋಲಶಿರ್ಸಿ, ದೀವರು ನಾಮಧಾರಿಗಳ ಸಂಘಟನೆಗೆ ನಮ್ಮಜ್ಜ ಕನ್ನಾ ಕೆ. ನಾಯ್ಕರ ನೇತೃತ್ವದಲ್ಲಿ ಸಂಘಟನೆ ಪ್ರಾರಂಭಿಸಿತ್ತು.
ಇಂಥ ವಿಶೇಷಗಳಿಗೆ ಮತ್ತೊಂದು ಸೇರ್ಪಡೆಯೆಂಬಂತೆ. ನಮ್ಮ ಚಿಕ್ಕಪ್ಪ 1980 ರಲ್ಲಿ ಅಂದಿನ ಲೋಕೋಪಯೋಗಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಪತ್ರ ಬರೆದು, ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ದಾಖಲಾತಿಗಳೊಂದಿಗೆ
ಹಕ್ಕೊತ್ತಾಯ ಮಾಡಿದ್ದ ಪತ್ರ ಒಂದು ಇತ್ತೀಚೆಗೆ ದೊರೆತು, ಅದನ್ನು ನಮ್ಮ ತಮ್ಮಂದಿರು ನನಗೆ ನೀಡಿದರು.
ದೀವರ ಅಸ್ತಿತ್ವ ಅವಕಾಶ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ವಿಶೇಷತೆಗಳ ಬಗ್ಗೆ ನಮ್ಮ ಪತ್ರಿಕೆಯಲ್ಲೇ ಚರ್ಚೆಯಾಗುತಿದ್ದರೂ ಈ ಬಗ್ಗೆ ನನ್ನ ಚಿಕ್ಕಪ್ಪ ಎನ್.ಕೆ.ನಾಯ್ಕ ಎಂದೂ ಚರ್ಚಿಸಿರಲಿಲ್ಲ.(ಕೆಲವು ವಿಚಾರ ವಿನಿಮಯಕ್ಕೆ ಅವರೇ ಖಾತರಿಸಿದ್ದರೂ ಸಮಯಾವಕಾಶ ದೊರೆಯದೆ ಊನವಾದಂತಾಗಿದೆ.)
ದೀವರಲ್ಲಿ ಈಗೀಗ ರಾಜಕೀಯ, ಆರ್ಥಿಕ, ಸಾಮಾಜಿಕ ಲಾಭಾಕಾಂಕ್ಷೆ ಹೆಚ್ಚುತಿದ್ದು ಅವುಗಳೆಲ್ಲಾ ಸ್ವಾಮಿ, ಮಠ, ಧಾರ್ಮಿಕತೆಆಧ್ಯಾತ್ಮಿಕತೆ!ಗಳ ರೂಪ ಪಡೆದು ದುಷ್ಟ ಲಾಭಕೋರರ ತಥಾಕಥಿತ ಬೈಲಾಟಕ್ಕೆ ವೇದಿಕೆ ಯಾದಂತಾಗಿದೆ.
ಕಳೆದ ವಾರ ಅಕಾಲಿಕ ಅನಾರೋಗ್ಯದಿಂದ ನಮ್ಮನ್ನಗಲಿದ ನಮ್ಮ ಚಿಕ್ಕಪ್ಪ ಎನ್.ಕೆ.ನಾಯ್ಕ 1980 ರಷ್ಟು ಹಿಂದೆ ದೀವರ ಬಗ್ಗೆ ಸಚಿವರಿಗೆ …ಮನವರಿಕೆ ಮಾಡಲು ಬರೆದ ಪತ್ರ ಈಗಲೂ ಪ್ರಸ್ತುತ, ಚರ್ಚಾರ್ಹ ಎಂದು ಭಾವಿಸಿ, ಆ ಪತ್ರವನ್ನು ಇಲ್ಲಿ ಪ್ರಕಟಿಸುತಿದ್ದೇವೆ.
ಮಾನ್ಯ ಶ್ರೀ. ಕಾಗೋಡು ತಿಮ್ಮಪ್ಪನವರು. ಲೋಕೋಪಯೋಗಿ ಸಚಿವರು ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು.
ಇವರ ಸನ್ನಿಧಾನಕ್ಕೆ . ಧೀವರ ಸಮಾಜದ ಮನವಿ-
ವಿಷಯ: ನಮ್ಮ ಸಮಾಜವನ್ನು ಹಿಂದುಳಿದ ಬುಡಕಟ್ಟು ಪಂಗಡ(ಟ್ರೈಬ್) ಎಂದು ಹಾವನೂರು. ವರದಿಯಲ್ಲಿ ಸೇರಿಸಬೇಕೆಂಬುದು.
ಸನ್ಮಾನ್ಯರೇ
ಹಾವನೂರು ವರದಿಯಲ್ಲಿ ಕೈಬಿಟ್ಟ ಕೆಲವು ಜಾತಿಗಳಿಗೆ ಆಗಬಹುದಾದ ಅನ್ಯಾಯವನ್ನು ಸರಿಪಡಿಸಲು ಶಾಸಕರ ಸಮಿತಿಯನ್ನು ಸನ್ಮಾನ್ಯ ಶ್ರೀ. ಆರ್. ಗುಂಡುರಾವ್ ಮುಖ್ಯಮಂತ್ರಿಗಳಾಗಿರುವ ಸರ್ಕಾರವು. ನೇಮಕ ಮಾಡಿರುವುದನ್ನು ತಿಳಿದು. ಅಪರಿಮಿತಸಂತೋಷವಾಯಿತು.
ಈಗ ಜಾರಿಗೆ ಬಂದಿರುವ ಹಾವನೂರ ವರದಿಯಲ್ಲಿ ನಮ್ಮ ಸಮಾಜವನ್ನು ಈಡಿಗ ಕೋಮಿನೊಂದಿಗೆ ಸೇರಿಸಿರುವುದರಿಂದ. ನಮಗೆ ತುಂಬಾ ಅನ್ಯಾಯವಾಗಿವುದನ್ನು ತಮ್ಮ ಸಮೀತಿಯ ಗಮನಕ್ಕೆ ತರಬಯಸುತಿದ್ದೇವೆ. ಈ ಸಮಾಜವನ್ನು ಪ್ರತ್ಯೇಕವಾಗಿ ಹಿಂದುಳಿದ ಬುಡಕಟ್ಟು. ಪಂಗಡಕ್ಕೆ ಸೇರಿಸಬೇಕೆಂಬುದನ್ನು ಹಾವನೂರ ಆಯೋಗ ಸಾಗರಕ್ಕೆ ಬಂದಾಗ ದಿ 27.6.1973 ರಂದು ಮನವಿ ಸಲ್ಲಿಸಿದ್ದೆವು.
ಈಗ ಮತ್ತೊಮ್ಮೆ ಅದೇ ಬೇಡಿಕೆಯನ್ನು ತಮ್ಮ ಮುಂದಿಡುತ್ತಿದ್ದೇವೆ. ಈ ದೀವರ ಸಮಾಜವು ಒಟ್ಟು 3ಲಕ್ಷ್ಯ ಜನಸಂಖ್ಯೆಗಿಂತಲೂ ಕಡಿಮೆ ಇರುವುದೆಂದು ಅಂದಾಜು
ಮಾಡಿರುತ್ತೇವೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ . ಕಾರವಾರ ಜಿಲ್ಲೆಯ ಸಿದ್ಧಾಪುರ ಮತ್ತು ಶಿರಸಿ ತಾಲೂಕುಗಳ ಹಳ್ಳಿಗಾಡಿನ ಗುಡ್ಡ ಬೆಟ್ಟಗಳ ಅಂಚಿನ ಕಾಡುಬೆಟ್ಟಗಳಲ್ಲಿ ಗುಂಪು ಗುಂಪಾಗಿ ಹುಲ್ಲು ಗುಡಿಸಲುಗಳನ್ನು ಕಟ್ಟಿಕೊಂಡು ಸಹಸ್ರಾರು ವರ್ಷಗಳಿಂದ ನೆಲೆಸಿರುವ ಒಂದು ಬುಡಕಟ್ಟಿನ ಜನರು ದೀವರು. ಇವರಿಗೆ ಹಳೆಪೈಕರು, ನಾಯಕರು ಮತ್ತು ನಾಯಕ ಮಕ್ಕಳು ಎಂಬ ಹೆಸರಿನಲ್ಲಿಕರೆಯಲ್ಪಡುವವರಾಗಿದ್ದೇವೆ.
ನಮ್ಮ ಸಾಮಾಜಿಕ ದುಸ್ಥಿತಿ;
ನಮ್ಮನ್ನು ಈಡಿಗರು ಎಂದು ಕರೆಯಲು ಪ್ರಾರಂಭವಾದದ್ದು ಕೇವಲ 2.3 ವರ್ಷಗಳಿಂದ ಮಾತ್ರ. ಇದಕ್ಕೆ ಮೊದಲು. ಈಡಿಗ ಎಂಬ ಹೆಸರೇ ನಮಗೇ ತಿಳಿದಿರಲಿಲ್ಲ. ಈಡಿಗ ಕೋಮಿನವರಿಗಿಂತ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳು ತೀರಾ ಕೆಳಮಟ್ಟದಲ್ಲಿರುತ್ತವೆ. ಆ ಕಾರಣದಿಂದಲೇ ಈಡಿಗರು ಇಂದಿಗೂ ಈ ಸಮಾಜದ ವಿದ್ಯಾವಂತ ಗಂಡುಮಕ್ಕಳನ್ನು ಆಯ್ಕೆ ಮಾಡಿಕೊಂಡು ತಮ್ಮ ಹೆಣ್ಣು ಮಕ್ಕಳೊಡನೆ ಮದುವೆ ಮಾಡಿ ಅವರನ್ನು ತಮ್ಮೊಳಗೆ ಸೇರಿಸಿಕೊಳ್ಳುತ್ತಾರೆ, ವಿನಃ ನಮ್ಮ ಜಾತಿಯ ಹೆಣ್ಣು ಮಕ್ಕಳನ್ನು ಅವರ ಗಂಡುಮಕ್ಕಳಿಗೆ ಮದುವೆಮಾಡಿಕೊಂಡು ತಮ್ಮ ಸಂಸಾರಕ್ಕೆ ಸೇರಿಸಿಕೊಳ್ಳುವುದಿಲ್ಲ.
ಹಾಗೆಯೇ ಮೇಲು ಜಾತಿಯ, ಜನರು ಈಡಿಗರನ್ನು ಅಸ್ಪøಶ್ಯರನ್ನಾಗಿ ನಡೆಸಿಕೊಂಡಿರಲಿಲ್ಲವೆಂದು ತಿಳಿದುಬರುತ್ತದೆ. ಆದರೆ ಈ ಸಮಾಜದ ಜನರನ್ನು ಇಲ್ಲಿಯ ಮೇಲುಜಾತಿ ಜನರೂ ಇಂದಿಗೂ ಕೆಲವು ಹಳ್ಳಿ ಪ್ರದೇಶಗಳಲ್ಲಿ ಅಸ್ಪ್ಯಶ್ಯರಾಗಿ ನೋಡಿಕೊಳ್ಳುತ್ತಿರುವುದು, ರೂಢಿಯೇ. ಮೇಲ್ಜಾತಿಯ ಜನರು ದೀವರು ಸಮಾಜದ ಜನರು ಮುಟ್ಟಿದ ಆಹಾರವನ್ನು ಸೇವಿಸುವುದಿಲ್ಲ ಇವರ ಮನೆಯೊಳಗಿನ ನೀರನ್ನು ಸಹ ಕುಡಿಯುವುದಿಲ್ಲ. ಈ ಜನರು ಮುಟ್ಟಿದ ಬಟ್ಟೆಗಳು ಮೈಲಿಗೆಯೆಂದು ತಿಳಿಯಲಾಗುತ್ತಿತ್ತು. ಅದಕ್ಕಾಗಿ ಈ ದೀವರು ಅವರ ಮನೆಗಳಿಗೆ ಹೋದಾಗ ಕುಳಿತುಕೊಳ್ಳಲು ನಾರಿನಿಂದ ಮಾಡಿದ ಗೋಣಿ ಕಟ್ಟುಗಳನ್ನು ಕೊಡುವ ಪದ್ಧತಿ ಈಗಲೂ ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.
ಈಡಿಗರಲ್ಲಿ ಹೆಂಡ ಸರಾಯಿ ಕುಡಿಯುವುದಕ್ಕೆ ಸಾಮಾಜಿಕ ನಿಷೇಧವಿರುತ್ತದೆ. ಆದರೆ ಇವರಲ್ಲಿ ಅಂಥಹ ನಿಷೇಧವಿಲ್ಲ. ಪೂಜಾ ವಿಧಾನಗಳಲ್ಲೂ ಈಡಿಗರೂ ಸುಸಂಸ್ಕøತ ಪದ್ಧತಿಯನ್ನು ಅನುಸರಿಸುತ್ತಾರೆ. ಮೇಲುಜಾತಿಯವರಂತೆಯೇ ವಾಸದ ಮನೆಯಲ್ಲಿ ವೆಂಕಟ್ರಮಣ ಮೊದಲಾದ ದೇವರನ್ನು ನಿತ್ಯವೂ ಪೂಜಿಸುತ್ತಾರೆ. ಹರಿಜನರಂತೆ ಈ ಜನರಿಗೂ ದೇವಸ್ಥಾನದ ಒಳಗೆ ಪ್ರವೇಶ ನಿಷೇದಿಸಲಾಗುತ್ತದೆ, ಈಗೀಗ ಹರಿಜನರೊಂದಿಗೆ ನಮಗೂ ಅವಕಾಶ ದೊರೆಯುಲು ಪ್ರಾರಂಭವಾಗಿದೆ. ಕೆಲವು ಕಡೆಗಳಲ್ಲಿ ಇನ್ನೂ ದೊರೆಯಬೇಕಾಗಿದೆ.
ಉದ್ಯೋಗ :
ನಮ್ಮ ಇಡೀ ದೀವರ ಸಮಾಜವು ಮೆಲ್ಜಾತಿಯವರ ಭೂಮಿಯಲ್ಲಿ ಗೇಣಿದಾರರಾಗಿ ಕೂಲಿಕಾರರಾಗಿ ಜೀತದ ಆಳುಗಳಾಗಿ ದುಡಿಯುವುದನ್ನು ಬಿಟ್ಟರೆ, ಬೇರೆ ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಂಡಿಲ್ಲ. ಕೇವಲ ಹತ್ತೆಂಟು ವರ್ಷಗಳ ಈಚೆಗೆ ಅಲ್ಲೊಬ್ಬ ಇಲ್ಲೊಬ್ಬರಂತೆ ಬೇರೆ ಉದ್ಯೋಗ ಮತ್ತು ಸರಕಾರಿ ನೌಕರಿಯಲ್ಲಿ ಹೋಗತೊಡಗಿದ್ದಾರೆ. ಆದರೂ ಯಾವುದೇ ದೊಡ್ಡ ಕಾಂಟ್ರಾಕ್ಟ್ ಕೈಗಾರಿಕೆ, ವ್ಯಾಪಾರ ಉದ್ಯೋಗಗಳಲ್ಲಿ ಇಂದಿಗೂ ಯಾರೂ ಮುಂದುವರಿದಿಲ್ಲ.
ವಿದ್ಯಾಭ್ಯಾಸ: ಕಳೆದ 30 ವರ್ಷಗಳ ಹಿಂದೆ ಈ ಜಾತಿಯವರಲ್ಲಿ ಒಬ್ಬನಾದರೂ ಎಸ್. ಎಸ್. ಎಲ್. ಸಿವರೆಗೆ ಓದಿದವನೂ ಇರಲಿಲ್ಲವೆಂದರೆ, ವಿದ್ಯಾಭ್ಯಾಸದ,ಪರಿಸ್ಥಿತಿ ಹೇಗಿದೆ? ಎಂಬುದಕ್ಕೆ ನಿದರ್ಶನವಾಗುತ್ತದೆ.
ನಾವು ಈ ವಿಷಯದಲ್ಲಿ ಅದೆಷ್ಟು
ಹಿಂದೆ ಉಳಿದಿರುವ ಸಮಾಜ ಎಂಬುದನ್ನು ಬೇರೆ ಹೇಳಬೇಕಿಲ್ಲ. ಈಗಲೂ ಸಹ ನೂರಕ್ಕೆ 50% ರಷ್ಟು ಮಕ್ಕಳು. ಶಾಲೆಗೆ ಹೋಗುವ ಪರಿಸ್ಥಿತಿ ವರ್ಣನೆಗೆ ನಿಲುಕದ್ದೇನಲ್ಲ. ಕಡುಬಡತನದ ಇಂತಹ ಕಷ್ಟದ ಸ್ಥಿತಿಯಲ್ಲಿರುವ ಸಮಾಜ ಮೇಲೆ
ಬರಲು ಸರ್ಕಾರದ ವಿಶೇಷ ಸೌಲಭ್ಯ ಮತ್ತು ಸಹಾಯಗಳು ದೊರೆಯುವುದೊಂದೇ ನಮಗೆ ತೋರುವ ಮಾರ್ಗವಾಗಿದೆ. ಈಡಿಗರೆಂದು ಕರೆಯಿಸಿಕೊಂಡಿದ್ದರಿಂದಲೇ ನಾವು ಅವರಿಗೆ ಸರಿಸಮಾನರಾಗಲಿಲ್ಲವೆಂಬುದನ್ನು ತಮ್ಮ ಗಮನಕ್ಕೆ ತರುವುದೇ ನಮ್ಮ ಮನವಿಯ ಉದ್ದೇಶ.
ಅದಕ್ಕಾಗಿ ಈ ದೀವರ ಜಾತಿಯನ್ನು ಪ್ರತೇಕವಾಗಿ ಪರಿಗಣಿಸಿ ಹಿಂದುಳಿದ ಬುಡಕಟ್ಟಿನ ಪಂಗಡ (ಟ್ರೈಬ್) ಎಂದು ವರದಿಯಲ್ಲಿ ಸೇರಿಸಿ ನಮ್ಮ ಏಳಿಗೆಗೆ ಸಹಾಯ ಮಾಡಬೇಕೆಂದು ತಮ್ಮಲ್ಲಿ ಅತ್ಯಂತ ನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ. -ನಾರಾಯಣ ಕೆ. ನಾಯ್ಕ, ಕೋಲಶಿರ್ಸಿ, ಸಿದ್ಧಾಪುರ (ದೀವರ ಸಮಾಜದ ಪರವಾಗಿ)ದಿ.29-12-1980.
ಕಾಗೋಡು ತಿಮ್ಮಪ್ಪನವರಿಗೆ ಲಕ್ಷ್ಮಣರ ಪತ್ರ
ಸನ್ಮಾನ್ಯ ಸಭಾಪತಿಗಳಾದ ಕಾಗೋಡು ತಿಮ್ಮಪ್ಪ ನವರೆ……
ನೀವು ಬಹುಹಿಂದೆ ಗೇಣಿ ಹೋರಾಟದ ಪರವಾಗಿ ಕೆಲಸಮಾಡಿ ನಮ್ಮ ಸಮಾಜ, ಬಡವರು, ದುರ್ಬಲರಿಗೆ ನ್ಯಾಯ ಒದಗಿಸಿದ್ದೀರಿ. ಈಗ ಹಿಂದುಳಿದ ವರ್ಗಗಳು,ದಲಿತರು ಸೇರಿದಂತೆ ಬಹುಸಂಖ್ಯಾತರಾದ ಬಡಜನರ ಪರವಾದ ವಕಾಲತ್ತು ಕಾರ್ಯಚಟುವಟಿಕೆಗಳಲ್ಲಿ ಈಗಲೂ ನೀವೇ ಮುಂದಿದ್ದೀರಿ. ಅರಣ್ಯ ಹಕ್ಕು ಮಾನ್ಯತಾ ಅಧಿನಿಯಮದ ವಿಚಾರದಲ್ಲಿ ನೀವು ಈ ವಯಸ್ಸಿನಲ್ಲೂ ಆಸಕ್ತಿಯಿಂದ ಕೆಲಸ ಮಾಡುತ್ತಾ ಸಾಗರ-ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದವರೆಗೂ ಅಧಿಕಾರಿಗಳನ್ನು ನಿಯಂತ್ರಿಸಿ, ಕೆಲಸ ಮಾಡುತಿದ್ದೀರಿ. ಆದರೆ, ನಿಮ್ಮ ಕ್ಷೇತ್ರಕ್ಕೆ ತಾಕಿಕೊಂಡಿರುವ ನಮ್ಮ ತಾಲೂಕಿನಲ್ಲಿ ಅರಣ್ಯ ಅತಿಕ್ರಮಣ,
…………ರೆವಿನ್ಯೂ ಜವಾಬ್ಧಾರಿ ಸೇರಿದಂತೆ ಜನಪರವಾದ ಯಾವ ಕೆಲಸಗಳೂ ಇಲ್ಲಿ ಸರಿಯಾಗಿ ನಡೆಯುತ್ತಿಲ್ಲ.
ನಮ್ಮ ತಾಲೂಕಿಗೆ ಗಣಪತಿಯಪ್ಪ , ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರ ಹೆಗ್ಗಳಿಕೆಯ ಚರಿತ್ರೆ ಇದೆ. ಆದರೆ ಜನಪರ ಕೆಲಸಗಳ ವಿಚಾರದಲ್ಲಿ ನಮ್ಮ ತಾಲೂಕು ಸದಾ ಹಿಂದೆ. ಈಗಲೂ ತಾಲೂಕಿನಲ್ಲಿ ಅರಣ್ಯ ಮಾನ್ಯತೆ ಕಾನೂನಿನ ಅನುಷ್ಠಾನದ ಬಗ್ಗೆ ಸಭೆ-ಸಮಾರಂಭ ತಿಳುವಳಿಕೆ ಸಭೆಗಳಂಥ ಕೆಲಸಗಳು ನಡೆಯುತ್ತಿರುವುದು ದುರಂತ ಮತ್ತು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ವಿಶೇಷ ಆದೇಶ ಅಥವಾ ನಿರ್ದೇಶನ ನೀಡುವ ಮೂಲಕ ನೀವು ಈ ವಿಚಾರದಲ್ಲಿ ಮಧ್ಯೆಪ್ರವೇಶಿಸಿ ನಮ್ಮ ತಾಲೂಕಿನ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು. ಹಿಂದೆ ಭೂಸುಧಾರಣೆ ಕಾನೂನು ಜಾರಿ ವಿಚಾರವಿರಲಿ, ಅಥವಾ ಮತ್ತಾವುದೇ ಜನಪರ ಕಾರ್ಯಕ್ರಮ ಯೋಜನೆಗಳಿರಲಿ ನೀವು ಮುತುವರ್ಜಿಯಿಂದ ಕೆಲಸಮಾಡಿದ್ದೀರಿ ನಿಮ್ಮಂಥವರು ನಮ್ಮ ಜನಪ್ರತಿನಿಧಿಗಳಾಗದಿರುವುದರಿಂದ ನಮಗೆ ಸದಾ ಅನ್ಯಾಯವಾಗಿದೆ. ಈಗಲೂ ಸರ್ಕಾರದ ಜನಪರ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದರೆ ನಮ್ಮ ಸ್ಥಿತಿ ಚಿಂತಾಜನಕವಾಗುವುದರಲ್ಲಿ ಎರಡು ಮಾತಿಲ್ಲ.
ಈ ಎಲ್ಲಾ ವಿಚಾರಗಳ ಹಿನ್ನಲೆಯಲ್ಲಿ ನಾವು ನಿಮ್ಮ ಗಮನಕ್ಕೆ ತಂದುವಿನಯಪೂರ್ವಕವಾಗಿ ಪ್ರಾರ್ಥಿಸುವುದೆಂದರೆ ನಮ್ಮ ತಾಲೂಕು ನಮ್ಮ ಜನರ ಬಗ್ಗೆ ಕೂಡಾ ನೀವು ಗಮನಹರಿಸಬೇಕು. ನೀವೆಲ್ಲಾ ಕೊಡಿಸಿದ ಭೂಮಿ ಸಾಗುವಳಿ ಮಾಡುವವರಿಲ್ಲದೆ ಹಾಳಾಗುತ್ತಿದೆ.ಲಾಭವಿಲ್ಲದ ಕೃಷಿ, ಊರಿನಲ್ಲಿದ್ದು ಏನು ಮಾಡುವುದೆಂದು ಚಿಂತಿಸುತ್ತಾ ಯುವಕರು ನಗರಕ್ಕೆ ವಲಸೆ ಹೋಗುತಿದ್ದಾರೆ. ಸಾಹಿತ್ಯಿಕ ಸಾಂಸ್ಕøತಿಕ ಅರಿವುಗಳಿಲ್ಲದ ನಮ್ಮ ಜನತೆ ನಗರೀಕರಣದ ನಾಗಾಲೋಟಕ್ಕೆ ಸಿಲುಕಿ ನಾಮಾವಶೇಷವಾಗುತ್ತಾರೋ ಎನ್ನುವ ಆತಂಕ ನಮಗಿದೆ. ನಮ್ಮ ಭೂಮಿ, ಕಲೆ, ಸಂಸ್ಕøತಿ ವಾತಾವರಣವನ್ನು ಸಂರಕ್ಷಿಸಬೇಕೆಂದರೆ ನಮಗೊಂದು ಶಾಶ್ವತ ನೆಲೆ-ಬೆಲೆ ಬೇಕು ಈ ವಿಚಾರ ನಿಮ್ಮ ಗಮನಕ್ಕಿರಲಿ
-ಲಕ್ಷ್ಮಣ ಜಿ.ನಾಯ್ಕ ಬೇಡ್ಕಣಿ ವ್ಯವಸ್ಥಾಪಕರು ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ, ಸಿದ್ಧಾಪುರ(ಉ.ಕ)



