

ಅಕಾಲದಮಳೆಯ ನಡುವೆ
ತಣ್ಣಗಾದ ದೀಪಾವಳಿ
ಮಲೆನಾಡಿನ ದೊಡ್ಡ ಹಬ್ಬ ದೀಪಾವಳಿಯ ಸಂಬ್ರಮಕ್ಕೆ ಮಳೆ ತಣ್ಣೀರೆರಚಿದೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ ಬೀಳುತ್ತಿರುವ ಮಳೆ
ರೈತರನ್ನು ಕಂಗಾಲು ಮಾಡಿದೆ. ಮಳೆ-ಬೆಳೆ ಆಶ್ರಯಿಸಿರುವ ರೈತರು ಸೊಂಪಾಗಿದ್ದರೆ ಹಬ್ಬಕ್ಕೆ ಮಜಾ. ಆದರೆ ಈ ವರ್ಷದ ಮಳೆ ರೈತರ ಖುಷಿ-ಸಂಬ್ರಮ ಕಸಿದುಕೊಂಡಿದೆ.
ರೈತರು ತಾವು ಬೆಳೆದ ಫಸಲನ್ನೇ ವಿಭಿನ್ನವಾಗಿ ಪೂಜಿಸುವ ಹಬ್ಬಕ್ಕೆ ಅಡಿಕೆ, ಅಡಿಕೆಯ ಹಿಂಗಾರ ತೆಗೆಯಲು ಈ ಅಕಾಲದ ಮಳೆ ಅನುಕೂಲ ಮಾಡಿಕೊಟ್ಟಿಲ್ಲ. ಸಿದ್ಧಾಪುರದಂಥ ಚಿಕ್ಕ ನಗರದಲ್ಲಿ ಕೂಡಾ ಅಡಿಕೆ, ಹಿಂಗಾರ, ಎಲೆ ಸೇರಿದಂತೆ ದೀಪಾವಳಿ ಫಲಾವಳಿಗಳು ಮಾರುಕಟ್ಟೆಪ್ರವೇಶಿಸಿವೆ. ರೈತರು ಅಡಿಕೆ,ಸಿಂಗಾರ ತೆಗೆಯುವ ಕೂಲಿಗೆ ಕೊಡುವ ವೇತನದಲ್ಲಿ ನಗರದಲ್ಲಿ ಈ ವಸ್ತುಗಳು ಸಿಗುತ್ತವೆ ಎಂದುಕೊಂಡು ಖರೀದಿಯಲ್ಲಿ ತೊಡಗಿದ್ದ ರೈತರ ನಿರುತ್ಸಾಹದ ಹಿಂದೆ ಈ ವರ್ಷದ ಮಳೆಯ ಪ್ರಭಾವವಿದೆ.
ಖರೀದಿ ಜೋರು-
ಮೂರು-ನಾಲ್ಕು ದಿವಸಗಳ ದೀಪಾವಳಿ ಈ ವರ್ಷಮೂರೇ ದಿನಗಳಿಗೆ ಸೀಮಿತವಾಗಿರುವುದು ಈ ವರ್ಷದ ವಿಶೇಶ. ಪ್ರತಿವರ್ಷ ಅಮವಾಸ್ಯೆಯ ಹಿಂದಿನ ದಿವಸದಿಂದ ವರ್ಷತೊಡಕಿನ ವರೆಗೆ ಗ್ರಾಮೀಣ ಜನರಿಗೆ ನಾಲ್ಕೈದು ದಿನಗಳು, ನಗರದ ಜನರಿಗೆ ಮೂರು ದಿವಸಗಳ ಹಬ್ಬ ನಡೆಯುವುದು ವಾಡಿಕೆ.
ಆದರೆ ಈ ವರ್ಷ ಅಮವಾಸ್ಯೆ, ಮರುಪಾಡ್ಯಗಳು ತಳುಕುಹಾಕಿಕೊಂಡಿರುವುದರಿಂದ ಬಹುತೇಕ ಕಡೆ ಗೋಪೂಜೆ ಸೋಮುವಾರವೇ ನಡೆಯುತ್ತಿದೆ. ವೈದಿಕರು ರಾಕ್ಷಸನನ್ನು ಸಂಹರಿಸುವ ರೀತಿ, ಅಬ್ರಾಹ್ಮಣರು ತಮ್ಮ ದ್ರಾವಿಡದೊರೆ ಬಲೀಂದ್ರನನ್ನು ಆರಾಧಿಸುವ ರೀತಿ-ನೀತಿಗಳಿಂದ ಆಚರಿಸುವ ಈ ಹಬ್ಬ ಮಾಂಸಾಹಾರ,ಸಿಹಿತಿನಿಸುಗಳ ವಿಶೇಶದ ಉತ್ಸವ.
ಮಲೆನಾಡಿನ ಕೆಲವು ಕಡೆ ಗೋಪೂಜೆ, ದನ ಬೆರೆಸುವ ಮೊದಲು ಪ್ರಾಣಿಬಲಿಕೊಟ್ಟು ಈ ಹಬ್ಬವನ್ನು ಆಚರಿಸುತ್ತಾರೆ. ಬದಲಾಗುತ್ತಿರುವ ರೀತಿ-ನೀತಿ, ಆಧುನಿಕತೆಯ ಸ್ಫರ್ಶ, ಪಶುಪಾಲನೆಯ ವಿರಳತೆಗಳ ನಡುವೆ ಈ ವರ್ಷದ ದೀಪಾವಳಿಗೆ ಮಳೆಯ ರಗಳೆ ಕೂಡಾ ಸೇರಿದೆ. ಆದರೆ ಹೂವು,ಹಣ್ಣು, ಮೀನು-ಮಾಂಸ ಖರೀದಿಯ ಪ್ರಮಾಣ,ಉತ್ಸಾಹ ತಗ್ಗಿಲ್ಲ.
ಕಾಗೋಡುತಿಮ್ಮಪ್ಪನವರಿಗೆ
35 ವರ್ಷಗಳಲ್ಲಿನ
ಎರಡು ವಿಭಿನ್ನ ಪತ್ರಗಳು
ದೀವರು ಈಡಿಗರಲ್ಲ. ಎಂದು ಅನೇಕ ವರ್ಷಗಳಿಂದ ಚರ್ಚೆ, ಸಂವಾದ, ವಿವಾದಗಳೆಲ್ಲಾ ನಡೆಯುತ್ತಿವೆ. 1970-80 ರ ದಶಕದಲ್ಲಿ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಗೋಪಾಲಗೌಡರ ನೇತೃತ್ವದಲ್ಲಿ ಸದನದ ಒಳಗೆ, ಹೊರಗೂ ಚರ್ಚೆ ನಡೆದು ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರಿಂದಾಗಿ ದೀವರ ಪಂಗಡ ಇತರ ಹಿಂದುಳಿದವರ ಪಟ್ಟಿಯಲ್ಲಿ ಸೇರ್ಪಡೆಯಾಯಿತು. ಇದೇ ಸಮಯದಲ್ಲಿ ರಾಜ್ಯದ ಕೆಲವೆಡೆ ಅನೇಕರು ಈ ಚರ್ಚೆ ಸಂವಾದಗಳಲ್ಲಿ ಪಾಲ್ಗೊಂಡು ‘ದೀವರ’ ವಿಚಾರವನ್ನು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು.
ರೈತ ಹೋರಾಟಗಾರ ದಿನಕರ ದೇಸಾಯಿಯವರಿಗೆ ತಾಲೂಕಿನಲ್ಲೇ ಮೊಟ್ಟಮೊದಲ ಬಾರಿಗೆ ವೇದಿಕೆ ಕಲ್ಪಿಸಿದ ನಮ್ಮೂರು ಕೋಲಶಿರ್ಸಿ, ದೀವರು ನಾಮಧಾರಿಗಳ ಸಂಘಟನೆಗೆ ನಮ್ಮಜ್ಜ ಕನ್ನಾ ಕೆ. ನಾಯ್ಕರ ನೇತೃತ್ವದಲ್ಲಿ ಸಂಘಟನೆ ಪ್ರಾರಂಭಿಸಿತ್ತು.


