ಅಸಿಯಾನ್ ಒಪ್ಪಂದ : ಯೋಚಿಸಬೇಕಿದೆ ಹೃದಯದಿಂದ.. RCEP-Regional Comprehensive Economic Partnership-by lawchambersirsi

ಒಂದು ಕಡೆ ಅಸಿಯಾನ್ ಎಂಬ ಬೃಹತ್ ಒಕ್ಕೂಟ.. ಇನ್ನೊಂದೆಡೆ ಹಸಿವು ನೀಗಿಸಿಕೊಳ್ಳಲು ದಿನಪ್ರತಿ ಹೋರಾಡುತ್ತಿರುವ ಅಸಂಖ್ಯ ಭಾರತೀಯರು… ಒಪ್ಪಂದಕ್ಕೆ ಅಂಕಿತ ಹಾಕುವಾತ ಯಾರ ಕಡೆ ನಿಲ್ಲಬೇಕು..? ಸವಾಲು ಎದುರಾಗಿ ನಿಂತಿದೆ. ವರ್ತಮಾನ ಮತ್ತು ಭವಿಷ್ಯ ಎರಡೂ ಮುಖ್ಯ. ಆಯ್ಕೆ ಯಾವುದು..?

ಕ್ಷಣಗಣನೆಯಂತೂ ಆರಂಭವಾಗಿದೆ.
ಅಸಿಯಾನ್ ಹೆಸರು ಕೇಳಿದಾಕ್ಷಣ ಭಾರತೀಯ ಬೆವರುತ್ತಿದ್ದಾನೆ. ನವೆಂಬರ್ ನಾಲ್ಕನೇ ತಾರೀಖಿಗೆ ಬೀಳುವ
ಅಂಕಿತ ಶತಕೋಟಿ ಭಾರತೀಯರನ್ನು ಗೋಳಾಟಕ್ಕೆ ನೂಕುವ ಒಪ್ಪಂದಕ್ಕೆ ಬೀಳುವ ರುಜುವಾಗುವುದಂತೂ ಸತ್ಯ. ದೇಶಾದ್ಯಂತ
ಅಸಿಯಾನ್ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರಕಾರಕ್ಕೂ ಉಭಯ ಸಂಕಟ ಆರಂಭವಾಗಿದೆ.
ಅಸಿಯಾನ್ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ. ಸರಕಾರದ ನಿರ್ಧಾರಕ್ಕೆ ಇಡಿ
ದೇಶವೇ ಕಾಯುತ್ತಿದೆ. ಅಷ್ಟಕ್ಕೂ ಅಸಿಯಾನ್ ಎಂದರೇನು? ಅದರ ಹಿನ್ನೆಲೆ ಏನು? ಯಾಕೆ ಭಾರತೀಯರು ಈ ಪರಿ
ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ.

ಅಸಿಯಾನ್ ಎಂದರೇನು? (What is ASEAN)

ಏಷ್ಯಾದ
ಹತ್ತು ದೇಶಗಳಾದ  ಬ್ರೂನೈ,
ಕಾಂಬೋಡಿಯಾ, ಸಿಂಗಾಪುರ, ಫಿಲಿಫ್ಫಿನ್ಸ್, ಇಂಡೋನೇಷಿಯಾ, ಲಾವೋಸ್, ಥೈಲಾಂಡ್, ಮಲೇಷಿಯಾ,
ವಿಯೆಟ್ನಾಂ ಮತ್ತು ಮ್ಯಾನ್ಮಾರ್ ಸೇರಿ
ಮಾಡಿಕೊಂಡಿರುವ ಒಂದು ವ್ಯಾಪಾರಿ ಸಂಘಟನೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (Association of Southeast Asian Nations –ASEAN)
ವನ್ನು ಸಂಕ್ಷಿಪ್ತವಾಗಿ ಅಸಿಯಾನ್ ಸಂಘಟನೆಯೆಂದು ಕರೆಯಲಾಗುತ್ತದೆ. ಈ ಹತ್ತು ದೇಶಗಳನ್ನು
ಅಸಿಯಾನ್ ದೇಶಗಳೆಂದು ಗುರುತಿಸಲಾಗುತ್ತದೆ. ಈ ಹತ್ತು ರಾಷ್ಟ್ರಗಳ ಒಕ್ಕೂಟದ ಜೊತೆಗೆ ಸದಸ್ಯತ್ವ ಹೊಂದಿರುವ
ಅಸ್ಟ್ರೇಲಿಯಾ, ಭಾರತ, ಚೀನಾ, ಜಪಾನ್, ಕೊರಿಯಾ ಮತ್ತು ನ್ಯೂಜಿಲೇಂಡ್ ದೇಶಗಳು ಮುಕ್ತ ವ್ಯಾಪಾರಕ್ಕಾಗಿ
ಒಪ್ಪಂದವನ್ನು ಮಾಡಿಕೊಳ್ಳಲು ಸಜ್ಜಾಗಿವೆ. ಈ ಒಪ್ಪಂದವನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ
( RCEP-Regional Comprehensive Economic Partnership) ವೆಂದು ಕರೆಯಲಾಗುತ್ತದೆ. ಈ ಹದಿನಾರು
ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರಕ್ಕಾಗಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ನಡೆಯುತ್ತಿರುವ ಚರ್ಚೆ
ಇನ್ನೂ ಅಂತಿಮ ಸ್ವರೂಪಕ್ಕೆ ಬರಬೇಕಾಗಿದೆ.

ಅಸಿಯಾನ್ ಇತಿಹಾಸ – History of ASEAN

ಆಸಿಯಾನ್ ಸಂಘಟನೆಯನ್ನು 1967ನೇ ಇಸವಿಯ ಆಗಸ್ಟ್ 8 ರಂದು ಬ್ಯಾಂಕಾಕ್‌ನಲ್ಲಿ
ಐದು ಮೂಲ ಸದಸ್ಯ ರಾಷ್ಟ್ರಗಳಾದ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್ ಮತ್ತು
ಥೈಲ್ಯಾಂಡ್ ದೇಶಗಳು ಸೇರಿ ಸ್ಥಾಪನೆ ಮಾಡಿದವು. ಬ್ರೂನಿ ದಾರುಸ್ಸಲಾಮ್ 1984 ಜನವರಿ 8 ರಂದು,
ವಿಯೆಟ್ನಾಂ 1995  ಜುಲೈ 28  ರಂದು, ಲಾವೋಸ್ ಮತ್ತು ಮ್ಯಾನ್ಮಾರ್ 23 ಜುಲೈ 1997
ರಂದು ಮತ್ತು ಕಾಂಬೋಡಿಯಾ 30 ಏಪ್ರಿಲ್ 1999 ರಂದು ಈ ಸಂಘಟನೆಗೆ ಸೇರ್ಪಡೆಗೊಂಡವು.

ಆಸಿಯಾನ್ ಪ್ರಾದೇಶಿಕ ವೇದಿಕೆ (ARF-ASEAN Regional Forum)

ಆಸಿಯಾನ್ ಪ್ರಾದೇಶಿಕ ವೇದಿಕೆಯನ್ನು 1994ರಲ್ಲಿ ಸ್ಥಾಪನೆ
ಮಾಡಲಾಯಿತು. ಪ್ರಸ್ತುತ 27 ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿವೆ. ಆಸ್ಟ್ರೇಲಿಯಾ,
ಬಾಂಗ್ಲಾದೇಶ, ಬ್ರೂನಿ ದಾರುಸ್ಸಲಾಮ್, ಕಾಂಬೋಡಿಯಾ, ಕೆನಡಾ, ಚೀನಾ, ಯುರೋಪಿಯನ್ ಯೂನಿಯನ್,
ಭಾರತ, ಇಂಡೋನೇಷ್ಯಾ, ಜಪಾನ್, ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ, ರಿಪಬ್ಲಿಕ್
ಆಫ್ ಕೊರಿಯಾ, ವೋಸ್, ಮಲೇಷ್ಯಾ, ಮ್ಯಾನ್ಮಾರ್, ಮಂಗೋಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಪಪುವಾ
ನ್ಯೂ ಗಿನಿಯಾ, ಫಿಲಿಪೈನ್ಸ್, ರಷ್ಯಾದ ಒಕ್ಕೂಟ, ಸಿಂಗಾಪುರ, ಶ್ರೀಲಂಕಾ, ಥೈಲ್ಯಾಂಡ್, ಟಿಮೋರ್
ಲೆಸ್ಟೆ, ಯುನೈಟೆಡ್ ಸ್ಟೇಟ್ಸ್ ಮತ್ತು ವಿಯೆಟ್ನಾಂ ಇವು ಸದಸ್ಯ ರಾಷ್ಟ್ರಗಳಾಗಿವೆ

ಅಸಿಯಾನ್ ಸಂಘಟನೆಯ ಉದ್ದೇಶಗಳು – Objectives of ASEAN

ಆಸಿಯಾನ್ ಸಂಘಟನೆಯ ಉದ್ದೇಶಗಳು:

(1) ಜಂಟಿ ಸಹಭಾಗಿತ್ವದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳ ನಡುವೆ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಸಾಧಿಸುವುದು ಮತ್ತು ಶಾಂತಿಯನ್ನು ನಿರ್ಮಿಸುವುದು

(2) ಈ ದೇಶಗಳ ನಡುವೆ ಶಾಂತಿಯನ್ನು ಕಾಪಾಡುವುದು, ನ್ಯಾಯ ಮತ್ತು ಕಾನೂನಿನ ನಿಯಮಗಳನ್ನು ಗೌರವಿಸುವ ಮೂಲಕ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವುದು.

 1995 ರಲ್ಲಿ ಆಸಿಯಾನ್ ಸಂಘಟನೆಯು  “ಸಹಕಾರಿ ಶಾಂತಿ ಮತ್ತು ಸಮೃದ್ಧಿಯ ಹಂಚಿಕೆಯು
ತನ್ನ  ಮೂಲಭೂತ ಗುರಿಗಳಾಗಿವೆ”
ಎಂದು ಪುನರುಚ್ಚರಿಸಿತು.

ಅಸಿಯಾನ್ ಮತ್ತು ಭಾರತ – ASEAN and India

1992ರಲ್ಲಿ ಭಾರತವು ಅಸಿಯಾನ್ ಒಕ್ಕೂಟಕ್ಕೆ sectoral dialogue
partner ಆಗಿಯೂ 1996 ರಿಂದ full dialogue partner ಆಗಿಯೂ 2012 ರಿಂದ ಕಾರ್ಯತಂತ್ರದ ಪಾಲುದಾರನಾಗಿ (strategy partner) ಪೂರ್ಣಪ್ರಮಾಣದಲ್ಲಿ ಸೇರ್ಪಡೆಗೊಂಡಿತು. 2010 ರಲ್ಲಿ ಭಾರತಕ್ಕೆ ಅಸಿಯಾನ್
ರಾಷ್ಟ್ರಗಳಿಂದ ಆಮದಾಗುವ ಸರಕು ಮತ್ತು ಸೇವೆಗಳ ಮೇಲೆ ಸುಂಕವನ್ನು ಕಡಿಮೆ ಮಾಡುವ ಮೂಲಕ ಮುಕ್ತ
ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ನೆನಪಿಡಿ ಹೀಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ
ಹಾಕಿದ್ದು ಕೆಲವೇ ಅಸಿಯಾನ್ ರಾಷ್ಟ್ರಗಳೊಂದಿಗೆ ಮಾತ್ರ.

ಭಾರತವು ಅಸಿಯಾನ್ ಒಕ್ಕೂಟಕ್ಕೆ ಸೇರ್ಪಡೆಗೊಂಡ 25ನೇ ವರ್ಷಾಚರಣೆಯನ್ನು
ಆಚರಿಸಲು ನವದೆಹಲಿಯಲ್ಲಿ ಆಸಿಯಾನ್ ಇಂಡಿಯಾ ಸ್ಮರಣಾರ್ಥ ಶೃಂಗಸಭೆಯನ್ನು ನಡೆಸಲಾಯಿತು ಮತ್ತು 2018ರ
ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಅಸಿಯಾನ್ ಒಕ್ಕೂಟದ ಎಲ್ಲಾ 10 ದೇಶಗಳ ಪ್ರತಿನಿಧಿಗಳು
ಭಾಗವಹಿಸಿದ್ದನ್ನು ಸ್ಮರಿಸಬಹುದು.

ಅಸಿಯಾನ್ ಒಕ್ಕೂಟಕ್ಕೆ ಭಾರತವು ಸದಾ ಬೆಂಬಲವನ್ನು ನೀಡುತ್ತಾ ಬಂದಿದೆ.
ಪೂರ್ವ ನೋಟ ನೀತಿಯನ್ನು (Look East Policy) ಅಳವಡಿಸಿಕೊಂಡಿರುವ ಭಾರತಕ್ಕೆ ಅದು ಅನಿವಾರ್ಯವೂ
ಹೌದು. ಇಂದು ಭಾರತದ ಒಟ್ಟೂ ವಹಿವಾಟಿನಲ್ಲಿ ಕನಿಷ್ಟ 10-15% ಪಾಲು ಅಸಿಯಾನ್ ರಾಷ್ಟ್ರಗಳೊಂದಿಗೆ ಇದೆ.
ಏಷ್ಯಾ ಖಂಡದಲ್ಲಿ ಚೀನಾದ ಪೈಪೋಟಿಯ ಜೊತೆಗೆ ಪ್ರಬಲ ದೇಶವಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಅಸಿಯಾನ್
ಒಂದು ಪ್ರಮುಖ ವೇದಿಕೆಯಾಗಿದೆ.

ಮುಕ್ತ ವ್ಯಾಪಾರ ಒಪ್ಪಂದ – Free Trade Agreement

1996ರಲ್ಲಿ ಭಾರತವು ಅಸಿಯಾನ್ ಒಕ್ಕೂಟಕ್ಕೆ ಸೇರ್ಪಡೆಗೊಂಡರೂ  ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಮಾತ್ರ 2010 ರಲ್ಲಿ ಮತ್ತು ಆ ಒಪ್ಪಂದವು ಕೆಲವು ಶರತ್ತುಬದ್ದವಾಗಿ ಕೆಲವೇ ರಾಷ್ಟ್ರಗಳೊಂದಿಗೆ (ಜಪಾನ್ ಮತ್ತು ದಕ್ಷಿಣ ಕೊರಿಯಾ) ಮಾತ್ರ ಸೀಮಿತವಾಗಿತ್ತು. ಇಂದು ದೇಶಾದ್ಯಂತ ಚರ್ಚೆಯಲ್ಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ (RCEP-Regional Comprehensive Economic Partnership) ಅಸಿಯಾನ್ ಒಕ್ಕೂಟದಲ್ಲಿ ಇರುವ ಇತರ ಎಲ್ಲಾ ರಾಷ್ಟ್ರಗಳೊಂದಿಗೂ ಶರತ್ತುರಹಿತವಾಗಿ ಮುಕ್ತ ವ್ಯಾಪಾರಕ್ಕೆ ಒಪ್ಪಿಕೊಳ್ಳುವುದಾಗಿದೆ. ಎಲ್ಲಕ್ಕಿಂತ ಹೆಚ್ಚಿನ ಆತಂಕಕ್ಕೆ ಕಾರಣ ಇತರೇ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮತ್ತು ನ್ಯೂಜಿಲ್ಯಾಂಡ್ ದೇಶಗಳ ಹೆಸರು ಇರುವುದು. ಭಾರತಕ್ಕೆ ಉಭಯ ಸಂಕಟ ಆರಂಭವಾಗಿದ್ದು ಈ ಕಾರಣಕ್ಕಾಗಿಯೇ.

ಅಸಿಯಾನ್ ಒಪ್ಪಂದದ ಲಾಭಗಳು – Benefits of ASEAN Treaty

ಅಸಿಯಾನ್ ಜಗತ್ತಿನಲ್ಲಿ ಒಂದು ಪ್ರಮುಖ ಆರ್ಥಿಕ ಒಕ್ಕೂಟವಾಗಿ ಗುರುತಿಸಲ್ಪಟ್ಟಿದೆ. ಈ ಒಕ್ಕೂಟವು
ಜಗತ್ತಿನ 45% ಜನಸಂಖ್ಯೆಯನ್ನು ಹೊಂದಿದ್ದು ಜಗತ್ತಿನ ವಾರ್ಷಿಕ ಜಿಡಿಪಿಯಲ್ಲಿ 25% ರಷ್ಟು ಪಾಲನ್ನು
ಹೊಂದಿದೆ. ಒಂದು ವೇಳೆ ಈ ಹದಿನಾರು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಟ್ಟರೆ ಆಗ ಅಸಿಯಾನ್ ಪ್ರಪಂಚದ
ಅತಿದೊಡ್ಡ ಆರ್ಥಿಕ ವಲಯ ಅಥವಾ ಒಕ್ಕೂಟವಾಗಿ ಬದಲಾಗಲಿದೆ. ಇಂಥಹ ಒಕ್ಕೂಟದಲ್ಲಿ ಸದಸ್ಯತ್ವ ಪಡೆದುಕೊಂಡ
ರಾಷ್ಟ್ರವು ತನ್ನ ಆರ್ಥಿಕ ಚಟುವಟಿಕೆಗಳ ವ್ಯಾಪಕ ವಿಸ್ತರಣೆಯ ಎಲ್ಲ ಬಾಗಿಲುಗಳನ್ನೂ ತೆರದುಕೊಂಡಂತೆ
ಆಗುತ್ತದೆ.

ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ಭಾರತವು ಕಾಲಾನುಕ್ರಮದಂತೆ ತನ್ನ ವಿದೇಶಾಂಗ ನೀತಿಯನ್ನು
ಬದಲಾಯಿಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. Look East and Act East Policy ಘೋಷಣೆಯ
ಹಿಂದೆ ಅಭಿವೃದ್ದಿಯ ಆಶಯಗಳನ್ನು ಗುರುತಿಸಬಹುದು. ಒಂದೊಮ್ಮೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ
ಅಣಿಯಾದರೆ ಅರ್ಥ ಜಗತ್ತಿಗೆ ಭಾರತದ ಮಾರುಕಟ್ಟೆ ತೆರೆದಂತೆ ಆಗುತ್ತದೆ ಮತ್ತು ಭಾರತಕ್ಕೂ ತನ್ನ ವ್ಯಾಪಾರೋದ್ಯಮದ
ವಿಸ್ತರಣೆಗೆ ಅರ್ಧವಿಶ್ವ ಬಾಗಿಲನ್ನು ತೆರೆಯುತ್ತದೆ. ಅರ್ಧ ವಿಶ್ವವೇ ನಮ್ಮೆದುರು ನಿಂತಾಗ ಸಹಜವಾಗಿ
ಸ್ಪರ್ಧೆ ಆರಂಭವಾಗುತ್ತದೆ, ವಾಣಿಜ್ಯೋದ್ಯಮದ ಚಟುವಟಿಕೆಗಳು ವಿಸ್ತರಣೆ ಆಗುತ್ತದೆ, ಆರ್ಥಿಕತೆ ವೃದ್ದಿಯಾಗುತ್ತದೆ
ಮತ್ತು ಅದರಿಂದ ಅಭಿವೃದ್ದಿ ಸಾಕಾರಗೊಳ್ಳುತ್ತದೆ.

ಭಾರತದಲ್ಲಿ ಸೇವಾ ಕ್ಷೇತ್ರ ಹೆಚ್ಚು ಸಶಕ್ತವಾಗಿದ್ದು, ಈ ಒಪ್ಪಂದದಿಂದ ಅಪಾರ ಬೆಳವಣಿಗೆಯನ್ನು
ಸಾಧಿಸಲು ಸಾಧ್ಯವಾಗುತ್ತದೆ.

ಒಂದೊಮ್ಮೆ ಭಾರತ ಅಸಿಯಾನ್ ಕೂಟದಿಂದ ಹೊರಗುಳಿದಲ್ಲಿ ಇಂದಿನ ವಾಣಿಜ್ಯೋದ್ಯಮ ಯಥಾ ಪ್ರಕಾರ ಸಾಗಬಹುದು.
ಸ್ಪರ್ಧೆ ಕೂಡ ನಮ್ಮೊಳಗೆ ಮಾತ್ರ ಉಳಿಯಬಹುದು ಮತ್ತು ಅದರಿಂದ ಆರ್ಥಿಕ ಅಭಿವೃದ್ದಿಗೂ ತೊಡಕಾಗಬಹುದು.
ಎಲ್ಲಕ್ಕಿಂತ ಹೆಚ್ಚಿನದಾಗಿ ಒಂದು ಬೃಹತ್ ಆರ್ಥಿಕ ಒಕ್ಕೂಟದಿಂದ ಹೊರಗುಳಿದ ಮೇಲೆ ಏಷ್ಯಾ ಖಂಡದಲ್ಲಿ
ಭಾರತದ ರಾಜಕೀಯ ಪ್ರಾಬಲ್ಯ ಕ್ಷೀಣಿಸಬಹುದು. ಚೀನಾ ದೇಶದ ಪ್ರಾಬಲ್ಯಕ್ಕೆ ಸ್ಪರ್ಧೆಯೇ ಇಲ್ಲದೇ ಏಷ್ಯಾದ
ಪ್ರಬಲ ರಾಷ್ಟ್ರವಾಗಿ ಚೀನಾ ಹೊರಹೊಮ್ಮಬಹುದು.

ಭಾರತೀಯರ ಸಂಕಟ.

ಒಂದು ಕಡೆ ಅಸಿಯಾನ್ ಎಂಬ ಬೃಹತ್ ಒಕ್ಕೂಟ ಇನ್ನೊಂದೆಡೆ ಹಸಿವು ನೀಗಿಸಿಕೊಳ್ಳಲು ದಿನಪ್ರತಿ ಹೋರಾಡುತ್ತಿರುವ
ಅಸಂಖ್ಯ ಭಾರತೀಯರು… ಒಪ್ಪಂದಕ್ಕೆ ಸಹಿ ಹಾಕುವಾತ ಯಾರ ಕಡೆ ನಿಲ್ಲಬೇಕು..? ಸರಕಾರಕ್ಕೆ ಸವಾಲಾಗಿ ನಿಂತಿದೆ.
ವರ್ತಮಾನ ಮತ್ತು ಭವಿಷ್ಯ ಎರಡೂ ಮುಖ್ಯ. ಯಾವುದು ಆಯ್ಕೆ..?

ಭೌಗೋಳಿಕವಾಗಿ ಭಾರತ ವಿಸ್ತಾರವಾದ ದೇಶ. ಭಾರತೀಯರ ಜೀವನವೂ ಕೂಡ ಅಷ್ಟೇ ವಿಶಾಲ ಮತ್ತು ವೈಶಿಷ್ಟ್ಯಪೂರ್ಣತೆಯಿಂದ
ಕೂಡಿದೆ. ಈ ದೇಶದ ನೂರು ಜನರಲ್ಲಿ ತೊಂಬತ್ತು ಜನ ಬಡವರು, ಶ್ರಮಿಕರು, ಅಸಹಾಯಕರು ಎಂಬ ಜನಸಾಮಾನ್ಯ
ಶ್ರೇಣಿಯಲ್ಲಿ ಬರುವಂಥವರು. ಇಂಥಹ ಜನರಿಂದಲೇ ಸೃಷ್ಟಿಯಾದ ಒಂದು ಕ್ಷೇತ್ರ ದೇಶದ 80 ಪ್ರತಿಶತ ಜನರಿಗೆ
ಉದ್ಯೋಗ ನೀಡಿದೆ, ದೇಶದ ವಾರ್ಷಿಕ ಉತ್ಪನ್ನಕ್ಕೆ 40 ಪ್ರತಿಶತ ಕೊಡುಗೆಯನ್ನು ನೀಡಿದೆ. ಆ ಕ್ಷೇತ್ರವನ್ನು
ನಾವು ಅಸಂಘಟಿತ ಕ್ಷೇತ್ರ (Unorganized Sector) ಎಂದು ಕರೆದಿದ್ದೇವೆ. ಈ ಕ್ಷೇತ್ರ ಭಾರತದ ಆರ್ಥಿಕ
ಚಿತ್ರಣವನ್ನು ಬದಲಾಯಿಸುವಷ್ಟು ವಿಶಾಲವಾಗಿದೆ. ತಾಂತ್ರಿಕ ನೈಪುಣ್ಯತೆ, ಅಕ್ಷರ ಜ್ಞಾನ, ಬಂಡವಾಳ ಇತ್ಯಾದಿ
ಮೂಲಭೂತ ಸೌಕರ್ಯಗಳ ಕೊರತೆಯಿಂದ ತಮ್ಮ ತಮ್ಮ ಜೀವನ ನಿರ್ವಹಣೆಗಾಗಿ ಯಾವುದೋ ಉದ್ಯೋಗದಲ್ಲಿ ತೊಡಗಿರುವ
ಅಸಂಖ್ಯಾತ ಜನರೆಲ್ಲ ಇದೇ ಕ್ಷೇತ್ರದಲ್ಲಿ ಗುರುತಿಸಲ್ಪಡುತ್ತಾರೆ. ಯಾಕೆ ಭಾರತದ ಅಸಂಘಟಿತ ವಲಯದ ಬಗ್ಗೆ
ವಿಶೇಷವಾಗಿ ಉಲ್ಲೇಖಿಸಬೇಕಾಗಿ ಬಂತೆಂದರೆ ಅಸಿಯಾನ್ ಒಪ್ಪಂದದ ಮೊದಲ ಬಲಿಪಶು ಭಾರತದ ಅಸಂಘಟಿತ ವಲಯ
ಎಂಬ ಕಾರಣಕ್ಕಾಗಿ. ಭಾರತದ ಅಸಂಘಟಿತ ವಲಯ ಸಂಕಷ್ಟಕ್ಕೆ ಒಳಗಾದರೆ ಬಹುಸಂಖ್ಯಾತ ಭಾರತೀಯರು ಸಂಕಷ್ಟಕ್ಕೆ
ನೂಕಲ್ಪಡುತ್ತಾರೆ ಎಂಬ ಕಾರಣಕ್ಕಾಗಿ.

ಕೃಷಿ ಕ್ಷೇತ್ರ

ಜಾಗತೀಕರಣದ ತರುವಾಯ ಸದಾ ಅವಗಣನೆಗೆ ಒಳಗಾಗುತ್ತ ಬಂದಿರುವ ಭಾರತದ ಕೃಷಿ ಕ್ಷೇತ್ರ ಇತ್ತಿಚಿನವರೆಗೂ
ಅತಿವೃಷ್ಟಿ ಅನಾವೃಷ್ಟಿಯಿಂದ ತತ್ತರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತದಲ್ಲಿ ತಾಂತ್ರಿಕತೆಯನ್ನು
ಅತ್ಯಂತ ಕನಿಷ್ಟಮಟ್ಟದಲ್ಲಿ ಅಳವಡಿಸಿಕೊಂಡಿರುವ ಕ್ಷೇತ್ರವೆಂದರೆ ಅದು ಕೃಷಿ ಮಾತ್ರ. ಹೆಚ್ಚಿನ ಶ್ರಮವನ್ನು
ವಿನಿಯೋಗಿಸಿ ಕಡಿಮೆ ಲಾಭ ನೀಡುವ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ನಷ್ಟವನ್ನೇ ದಯಪಾಲಿಸುವ ಕ್ಷೇತ್ರ.
ವಾಣಿಜ್ಯ ಬೆಳೆಗಳಾದ ತೋಟಗಾರಿಕೆ ಉತ್ಪನ್ನಗಳೇ ದೇಶದ ರೈತರಿಗೆ ಆರ್ಥಿಕವಾಗಿ ನೆರವಾಗುತ್ತಿರುವ ಉತ್ಪನ್ನಗಳೆಂದು
ಹೇಳಬಹುದು. ಇಲ್ಲಿನ ನೂರಾರು ಸಮಸ್ಯೆಗಳಿಂದಲೂ, ಸರಕಾರದ ನಿರಂತರ ಅವಗಣನೆಯ ಕಾರಣಗಳಿಂದಲೂ ಭಾರತದ ಕೃಷಿ
ಕ್ಷೇತ್ರ ಇಂದಿಗೂ ವಾಣಿಜ್ಯ ಸ್ವರೂಪವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿಯೇ ಕೃಷಿ
ಉತ್ಪನ್ನಗಳ ಗುಣಮಟ್ಟವೂ ಕೂಡ ಜಾಗತಿಕ ಮಟ್ಟದಲ್ಲಿ ಪೈಪೋಟಿಯನ್ನು ಕೊಡುವಲ್ಲಿ ವಿಫಲವಾಗುತ್ತಿದೆ. 

ಇಂಡೋನೇಶಿಯಾ, ಮಲೇಶಿಯಾ, ಶ್ರೀಲಂಕಾ ದೇಶಗಳು ತೋಟಗಾರಿಕೆಗೆ ಹೆಸರು ಪಡೆದಿವೆ. ಆಸ್ಟ್ರೇಲಿಯಾದ
ಕಬ್ಬು ಭಾರತದ ಕಬ್ಬನ್ನು ಕಹಿ ಮಾಡುವಷ್ಟು ಸಶಕ್ತವಾಗಿದೆ. ಮುಕ್ತ ವ್ಯಾಪರ ಒಪ್ಪಂದದಿಂದ ಅವು ಭಾರತಕ್ಕೆ
ಪ್ರವೇಶ ಪಡೆದಲ್ಲಿ ಭಾರತದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ವ್ಯಾಪಕ ಕುಸಿತ ಆರಂಭವಾಗುತ್ತದೆ. ಜಾಗತಿಕ
ಮಟ್ಟದಲ್ಲಿ ಪೈಪೋಟಿಕೊಡುವಷ್ಟು ಸಶಕ್ತರಿಲ್ಲದ ಭಾರತೀಯ ರೈತರು ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

ಹೈನುಗಾರಿಕೆ ಉದ್ಯಮ

ಇಂದಿಗೂ ಉದ್ಯಮದ ಸ್ವರೂಪವನ್ನು ಪಡೆದಿರದ ಭಾರತದ ಹೈನುಗಾರಿಕೆ, ಮನೆಮಂದಿಯೆಲ್ಲ ಕೂಡಿ ಮಾಡುವ
ಮನೆಗೆಲಸದಂತೆ ಸಾಗುತ್ತ ಬಂದಿದೆ. ಸಹಕಾರಿ ಸಂಘಗಳು ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದರೂ ಅದಕ್ಕೊಂದು
ವಾಣಿಜ್ಯ ಸ್ವರೂಪವನ್ನು ನೀಡಲು ಸಾಧ್ಯವಾಗಲಿಲ್ಲ ಆದರೂ ಇಂದು ಸುಮಾರು ಹತ್ತು ಕೋಟಿ ಜನರು ಹೈನೋದ್ಯಮದಲ್ಲಿ
ತೊಡಗಿಸಿಕೊಂಡಿದ್ದಾರೆ. ಈಗ ನ್ಯೂಜಿಲ್ಯಾಂಡ್ ಎಂಬ ದೇಶ ಎದುರಾಗಿದೆ. ಕೇವಲ 45ಲಕ್ಷ ಜನರಿರುವ ಆ ದೇಶದ
ಹೈನೋದ್ಯಮ ಪ್ರಪಂಚದಲ್ಲಿಯೇ ಹೆಸರು ಪಡೆದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ನೈಪುಣ್ಯತೆಯಿಂದ
ತನ್ನ ಹೈನು ಉತ್ಪನ್ನದ 90% ಭಾಗವನ್ನು ಹೊರದೇಶಕ್ಕೆ ರಫ್ತು ಮಾಡುತ್ತಿದೆ. ಸಧ್ಯ ಭಾರತ ಆ ದೇಶದ ಕಣ್ಣ
ಮುಂದಿದೆ. ಮುಕ್ತ ವ್ಯಾಪರ ಒಪ್ಪಂದ ಭಾರತ ಹೈನೋದ್ಯಮದ ಮೇಲೆ ಹೇಗೆ ಮಾರಕ ಪರಿಣಾಮ ಬೀರಬಹುದು ಯೋಚಿಸಿ
ನೋಡಿ.

ಇನ್ನು ಜವಳಿ ಉದ್ಯಮ, ವಾಹನ ಬಿಡಿಬಾಗಗಳ ಘಟಕಗಳು, ಔಷಧಿ ಉದ್ಯಮ ಹೀಗೆ ಸಾಲು ಸಾಲು ಉದ್ಯಮಗಳ ಮೇಲೆ
ನೇರ ಪರಿಣಾಮ ಉಂಟಾಗುವುದಂತೂ ಸತ್ಯ. ಈ ಎಲ್ಲ ಉದ್ಯಮಗಳು ಭಾರತದಲ್ಲಿ ಇಂದಿಗೂ ಗುಡಿ ಅಥವಾ ಸಣ್ಣ ಕೈಗಾರಿಕಾ
ಹಂತದಲ್ಲಿಯೇ ಇರುವುದು ಗಮನಾರ್ಹ. ಸದಾ ಆರ್ಥಿಕ ಸಂಕಷ್ಟದಲ್ಲಿ ಉಳಿದುಕೊಂಡಿರುವ ಈ ಉದ್ಯಮಗಳು ಜಾಗತಿಕ
ಮಟ್ಟದಲ್ಲಿ ಪೈಪೋಟಿಗೆ ಅಣಿಯಾಗುವ ಹೊತ್ತಿಗೆ ವಿದೇಶಿ ಕಂಪನಿಗಳು ಭಾರತವನ್ನು ಸಂಪೂರ್ಣ ಆಕ್ರಮಿಸಿಕೊಳ್ಳಬಹುದು.

ಚೀನಾ ಎಂಬ ಮಗ್ಗಲು ಮುಳ್ಳು..

ಭಾರತಕ್ಕೆ ಪ್ಲಾಸ್ಟಿಕ್ ಸಂಸ್ಕೃತಿಯನ್ನು ಕಲಿಸಿದ ಹೆಮ್ಮೆ ಚೀನಾಗೆ ಸಲ್ಲಬೇಕು. ಇಂದು ಅದೇ ಪ್ಲಾಷ್ಟಿಕ್
ವಸ್ತುಗಳನ್ನು ನಿಷೇಧಿಸಲು ಮುಂದಾಗುತ್ತಿರುವ ನಾವು ಮತ್ತೆ ಅದೇ ಚೀನಾದತ್ತ ಮುಖ ಮಾಡಬೇಕೆ..? ಚೀನಾ
ಎಂಬ ರಾಷ್ಟ್ರದ ಬಗ್ಗೆ ಭಾರತೀಯರಿಗೆ ಅಸಾಮಾನ್ಯ ಕುತೂಹಲವಿದೆ, ಕೊಂಚ ಭಯವೂ ಇದೆ. ಅದೆಷ್ಟು ಸುಂಕ ಹಾಕಿದರೂ
(40% ಕ್ಕೂ ಅಧಿಕ) ಇಂದು ಹಳ್ಳಿ ಹಳ್ಳಿಗಳಲ್ಲಿ “ಚೀನಾ ಐಟಂ”ಗಳು ಕೈಗೆಟಕುವಷ್ಟು ಅಗ್ಗವಾಗಿ ದೊರಕುತ್ತಿವೆ.
ಎಲೆಕ್ಟ್ರಾನಿಕ್ ಸರಕುಗಳ ಖರೀದಿಗೆ ಹೋದಲ್ಲಿ ಮೊದಲು ಕೇಳುವ ಪ್ರಶ್ನೆಯೇ “ಚೀನಾ ಐಟಮ್ಮಾ” ಎಂದಾಗಿದೆ.
 ಬಹುಷಃ ಚೀನಾ ದೇಶದ ನವೀನತೆಗೆ
(Innovativeness) ಸವಾಲಾಗಬಲ್ಲ ರಾಷ್ಟ್ರ ಜಗತ್ತಿನಲ್ಲಿ ಇನ್ನೊಂದಿಲ್ಲ. ಚೀನಾದ ಈ ಪರಿ ಚಮತ್ಕಾರಕ್ಕೆ
ಬೇಸತ್ತು ಅಥವಾ ಬೆದರಿ ಅಮೇರಿಕವೇ ಮತ್ತೆ ಮತ್ತೆ ನಿಷೇಧದ ಮಾತನ್ನಾಡುತ್ತಿದೆ. ಇಂದು ನಮ್ಮ ದೇಶ ಚೀನಾ
ಸರಕುಗಳಿಗೆ ಸುಂಕ ರಹಿತವಾಗಿ ಬಿಕರಿ ಮಾಡಲು ಇಡೀ ದೇಶದ ಮಾರುಕಟ್ಟೆಯನ್ನು ತೆರೆಯಬೇಕಾದ ಸಂದಿಗ್ಧತೆಗೆ
ಒಳಗಾಗಿದೆ. ತಾಂತ್ರಿಕವಾಗಿ ಅಸಾಮಾನ್ಯ ಪ್ರಾವೀಣ್ಯತೆಯನ್ನು ಅಳವಡಿಸಿಕೊಂಡಿರುವ ಚೀನಾ ಕೈಗಾರಿಕಾ ವಲಯ
ಭಾರತದ ಕೈಗಾರಿಕಾ ಕ್ಷೇತ್ರದ ಮೇಲೆ ಗಧಾ ಪ್ರಹಾರ ಮಾಡುವುದು ನಿಶ್ಚಿತ. ಚೀನಾ ಬಹುಕಾಲದಿಂದ ಭಾರತದ
ಅತಿದೊಡ್ಡ ಮಾರುಕಟ್ಟೆಯ ಮೇಲೆ ಸವಾರಿ ಮಾಡಲು ಕಾಯುತ್ತಿದೆ. ಅದೇ ಕಾರಣಕ್ಕಾಗಿ ಅಸಿಯಾನ್ ಒಪ್ಪಂದಕ್ಕೆ
ಸಹಿ ಹಾಕುವ ಗೊಂದಲದಲ್ಲಿರುವ ಭಾರತದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕಿಸಲು ಆರಂಭಿಸಿದೆ.

ಹೃದಯದಿಂದ ಯೋಚಿಸಲು ಸಕಾಲ..

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಬೇಷರತ್ತಾಗಿ ಬೆಂಬಲವನ್ನು ವ್ಯಕ್ತಪಡಿಸಿಲ್ಲ. ಹಂತಹಂತವಾಗಿ
ಸುಂಕವನ್ನು ಕಡಿತಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಹಾಗೆಯೇ ಯಾವೆಲ್ಲ ಸರಕು ಮತ್ತು ಸೇವೆಗಳು
ಒಪ್ಪಂದದ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತವೆ ಎನ್ನುವ ಸಂಗತಿಯೂ ಬಹಿರಂಗವಾಗಿಲ್ಲ. ಆದರೆ ಒಂದಂತೂ
ಸತ್ಯ, ಭಾರತದ ಯಾವುದೇ ಶರತ್ತುಗಳನ್ನು ಒಕ್ಕೂಟದ ಯಾವ ರಾಷ್ಟ್ರವೂ ಒಪ್ಪುತ್ತಿಲ್ಲ. ಬರುವುದಿದ್ದಲ್ಲಿ
ಬೇಷರತ್ತಾಗಿ ಬನ್ನಿ, ಇಲ್ಲವೇ ಹೊರಗೆ ಉಳಿಯಿರಿ ಎಂಬ ಖಡಕ್ ಸಂದೇಶ ರವಾನೆಯಾಗಿದೆ.

ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಸರಕಾರ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಮೌನವಾಗಿದೆ.
ನಿಜಕ್ಕೂ ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಪ್ಪಂದಕ್ಕೆ ಅಂಕಿತ ಹಾಕುವಾತ ಹೃದಯದಿಂದ ಯೋಚಿಸಬೇಕಿದೆ.
ಕೋಟ್ಯಾಂತರ ಭಾರತೀಯರ ಬದುಕನ್ನು ಸಂಕಷ್ಟಕ್ಕೆ ನೂಕುವು ಈ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವೇ
ಪ್ರಜೆಗಳೇ ಅಧಿಕಾರವನ್ನು ಕೊಟ್ಟ ಸರಕಾರ ತನ್ನ ದೇಶದ ಪ್ರಜೆಗಳಿಗೆ ಕೊಡುವ ನಿಜವಾದ ಗೌರವವೆಂದು ಭಾವಿಸುತ್ತೇನೆ.

ಅಡ್ಮಿನ್; ಲಾ ಛೇಂಬರ್ ಶಿರಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *