ಈ ಬಾರಿಯ ಮಳೆಯ ಅಬ್ಬರಕ್ಕೆ ಹಲವು ರೀತಿಯಲ್ಲಿ ಸಮಸ್ಯೆಗಳನ್ನೆದುರಿಸಿದ ಕೃಷಿಕರು ಹೇಗೋ ಕಷ್ಟಪಟ್ಟು 3-4 ಬಾರಿ ಭತ್ತದ ಸಸಿ ನಾಟಿ ಮಾಡಿ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಹಲವು ರೀತಿಯ ಸಂಕಷ್ಠಗಳನ್ನ ಎದುರಿಸಬೇಕಾಗಿ ಬಂದಿದೆ.
ಹಲವು ರೈತರ ಕಟಾವು ಮಾಡಿದ ಬೆಳೆ ಮಳೆಯಲ್ಲಿ ನೆಂದಿದೆ. ಕೆಲವರದ್ದು ಸಸಿಗಳು ಬೆಳೆದಿಲ್ಲ. ಆದರೆ ಪಟ್ಟಣದ ಹೊಸೂರು ಗ್ರಾಮದ( ಸದ್ಯ ಪಟ್ಟಣದ ಇಂದಿರಾನಗರದಲ್ಲಿ ವಾಸ್ತವ್ಯ ಹೊಂದಿರುವ) ನೆಲ್ಲಿಕೊಪ್ಪ ಎನ್ನುವಲ್ಲಿ(ಸ.ನಂ.31) ನಾರಾಯಣ ಬೊಮ್ಮ ಮಡಿವಾಳ ಎನ್ನುವ ಕೃಷಿಕರ ಭತ್ತದ ಬೆಳೆಯ ಸ್ಥಿತಿ ಗಂಭೀರವಾಗಿದೆ.
ಅವರ ಭತ್ತದ ಗದ್ದೆಯ ಬೆಳೆ ಸಂಪೂರ್ಣವಾಗಿ ಜೊಳ್ಳಾಗಿ ಒಣಗತೊಡಗಿವೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಸ್ಥಿತಿ ಅವರದ್ದಾಗಿದೆ.
ಸುಮಾರು 1 ಎಕರೆ 31 ಗುಂಟೆ ಭತ್ತದ ಗದ್ದೆ ಹೊಂದಿರುವ ನಾರಾಯಣ ಮಡಿವಾಳರು ಮಟ್ಟಳಗ ಭತ್ತದ ಬೀಜಗಳನ್ನು ಸಸಿಮಡಿ ಮಾಡಿ ನಂತರ ನಾಟಿ ಮಾಡಿದ್ದರು. ಮಳೆಯ ನೀರಿನಿಂದ ಸಸಿಗಳು ಕೊಳೆತರೂ ಮತ್ತೆ ನಾಟಿ ಮಾಡಿದ್ದರು. ಸಮರ್ಪಕವಾಗಿ ಗೊಬ್ಬರ ನೀಡಿ ಔಷಧಿಯನ್ನೂ ಸಿಂಪರಣೆ ಮಾಡಿದ್ದರು. ಉತ್ತಮ ರೀತಿಯಲ್ಲಿ ಬೆಳೆದ ಭತ್ತದ ಸಸಿಗಳು ತೆನೆಯೊಡೆದು ಕಾಳುಗಳು ಗಟ್ಟಿಯಾಗುವಾಗ ಸಂಪೂರ್ಣ ಜೊಳ್ಳಾಗಿವೆ.
ಪ್ರತಿವರ್ಷ 40ರಿಂದ 45 ಚೀಲ ಭತ್ತ ಬೆಳೆಯುತ್ತಿದ್ದ ಜಮೀನಿನಲ್ಲಿ ಈ ಬಾರಿ ಕನಿಷ್ಠ 50 ಚೀಲ ಭತ್ತ ದೊರೆಯಬಹುದು ಎನ್ನುವಷ್ಟು ಫಸಲು ಉತ್ತಮವಾಗಿದೆ. ಆದರೆ ಭತ್ತದ ತೆನೆಗಳೆಲ್ಲ ಜೊಳ್ಳಾಗಿದ್ದು, ಇನ್ನೂ ಗಟ್ಟಿಯಾಗುತ್ತಿರುವ ಕಾಳುಗಳೂ ಜೊಳ್ಳಾಗುವ ಲಕ್ಷಣ ಕಂಡುಬರುತ್ತಿದೆ. 50 ಚೀಲವಿರಲಿ, ಕನಿಷ್ಠ ಪಕ್ಷ 10 ಚೀಲ ಒಳ್ಳೆಯ ಭತ್ತ ದೊರೆಯುವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಅವರ ಭತ್ತದ ಆ ಪ್ರದೇಶದ ಇತರ ಹಲವರ ಭತ್ತದ ಬೆಳೆಯಲ್ಲೂ ಜೊಳ್ಳಾಗಿರುವದು ಕಂಡುಬರುತ್ತಿದೆ.
ಸಸಿನಾಟಿ, ಗೊಬ್ಬರ, ಇನ್ನಿತರ ಕೃಷಿಕಾರ್ಯಗಳ ವೆಚ್ಚವೂ ನಾರಾಯಣ ಮಡಿವಾಳರಿಗೆ ದೊರೆಯುವ ಭತ್ತದಿಂದ ಗಿಟ್ಟುವಂತಿಲ್ಲ.
ಅಪಾರ ಪ್ರಮಾಣದಲ್ಲಿ ಭತ್ತದ ಕಾಳುಗಳು ಜೊಳ್ಳಾಗಿರುವದಕ್ಕೆ ಪ್ರಾಕೃತಿಕ ವಿದ್ಯಮಾನವೋ, ಇನ್ಯಾವ ಕೀಟ ಬಾಧೆ ಕಾರಣವೋ? ಆದರೆ ಕೃಷಿಯನ್ನೇ ನಂಬಿದ ರೈತರು ಈ ರೀತಿಯ ನಷ್ಠವನ್ನು ಎದುರಿಸಲಾರರು. ಬೆಳೆಯನ್ನ ನಂಬಿ ಜೀವನ ನಡೆಸುವ, ಕೃಷಿ ಕಾರ್ಯಕ್ಕೆ ಸಾಲ ಮಾಡುವ ರೈತರಿಗೆ ಬೆಳೆ ಈ ರೀತಿ ಸಂಪೂರ್ಣವಾಗಿ ಕೈಕೊಟ್ಟರೆ ಮಾಡುವದಾದರೂ ಏನು ಎನ್ನುವದು ನಾರಾಯಣ ಮಡಿವಾಳರ ಪ್ರಶ್ನೆಯಾಗಿದೆ.
ವಿಪರ್ಯಾಸದ ಸಂಗತಿಯೆಂದರೆ ಬೆಳೆವಿಮೆ ಅಥವಾ ಇನ್ನಿತರ ಪರಿಹಾರಗಳು ಕೃಷಿಕರಿಗಾಗುವ ಈ ರೀತಿಯ ಹಾನಿಗೆ ಲಭ್ಯವಾಗುತ್ತಿಲ್ಲ. ಕಣ್ಣೆದುರು ನಷ್ಠವಾಗಿದ್ದು ಕಂಡುಬಂದರೂ ನಿಯಮಗಳು ಇಂಥವನ್ನು ಪರಿಗಣಿಸದಿರುವದು ನಿಜಕ್ಕೂ ಬೆಳೆ ನಷ್ಠವಾದ ರೈತರಿಗೆ ಆಗುವ ಅನ್ಯಾಯ. ಜನಪ್ರತಿನಿಧಿಗಳು, ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಈ ರೀತಿ ಹಾನಿಗೊಳಗಾದ ರೈತರಿಗೆ ನೆರವಾಗುವಲ್ಲಿ ಜವಾಬ್ದಾರಿಯುತವಾಗಿ ಕ್ರಮ ವಹಿಸಬೇಕಿದೆ ಎನ್ನುವದು ಹಲವು ಕೃಷಿಕರ ಅಭಿಪ್ರಾಯವಾಗಿದೆ.
ನಾರಾಯಣ ಮಡಿವಾಳರ ಭತ್ತದ ಗದ್ದೆಗೆ ಕೃಷಿ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಜೊಳ್ಳಾಗುವದಕ್ಕೆ ನಿಖರ ಕಾರಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಅಧಿಕಾರಿಗಳು, ಸಾರ್ವಜನಿಕರು ಇಲ್ಲದೆ
ಕಾಟಾಚಾರಕ್ಕೆ
ನಡೆದ ಗ್ರಾಮ ಸಭೆ
ಅಧಿಕಾರಿಗಳಿಗೂ ಸಾರ್ವಜನಿಕರಿಗೂ ಸಂಪರ್ಕ ಕಲ್ಪಿಸಿ ಅವರ ಕುಂದು-ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯಾವ ಅಧಿಕಾರಿಗಳು ಬಾರದೇ ತಾಲೂಕಿನ ಬೇಡ್ಕಣಿಯಲ್ಲಿ ಕಾಟಾಚಾರಕ್ಕೆ ಗ್ರಾಮ ಸಭೆ ನಡೆಯಿತು.
ಸರಕಾರದ ಆದೇಶದಂತೆ ಮಿಷನ್ ಅಂತ್ಯೋದಯ ಹಾಗೂ 2020-21ರ ನಮ್ಮ ಗ್ರಾಮ ನಮ್ಮ ಯೋಜನೆ ತಯಾರಿಕೆಯ ಗ್ರಾಮ ಸಭೆಯನ್ನುತಾಲೂಕಿನ ಬೇಡ್ಕಣಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಬೆಳಿಗ್ಗೆ 10-30ಕ್ಕೆ ಕರೆಯಲಾದ ಸಭೆ 12-30ಕ್ಕೆ ಪ್ರಾರಂಭವಾಯಿತು. ಆದರೂ ನೋಡಲ್ ಆಫೀಸರ್ ಶಿಶು ಅಭಿವೃಧ್ಧಿ ಯೋಜನಾಧಿಕಾರಿ, ಶಿಕ್ಷಣ, ಪಶುಸಂಗೋಪನೆ, ಅರಣ್ಯ, ತೋಟಗಾರಿಕೆ ಅಧಿಕಾರಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವ ಇಲಾಖೆಯ ಅಧಿಕಾರಿಗಳೂ ಗ್ರಾಮಸಭೆ ಕಡೆ ಸುಳಿಯಲಿಲ್ಲ.
ಬೆರಳೆಣಿಕೆ ಜನರು ಸಭೆಯಲ್ಲಿದ್ದರೂ ಬಹುತೇಕರು ಪಂಚಾಯತ ಸಿಬ್ಬಂದಿಗಳೇ ಆಗಿದ್ದರು. ಅಧಿಕಾರಿಗಳು ಬರುವುದಿ¯ ್ಲ. ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇಲಾಖೆಗಳಿಗೆ ಹೋದರಾಯಿತು ಎಂದು ಸಾರ್ವಜನಿಕರು ಗ್ರಾಮ ಸಭೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ.