

ಸಿದ್ಧಾಪುರ ತಾಲೂಕಿನ ಏಕೈಕ ಕರಕುಶಲ ಕೈಗಾರಿಕಾ ಕೆಲಸಗಾರರ ಸಂಘ ಪುನಶ್ಚೇತನಕ್ಕೆ ಕಾಯುತ್ತಾ ಉಸಿರು ಹಿಡಿದುಕೊಂಡಿದೆ. ಸಹಕಾರಿ ಜಿಲ್ಲೆಯೆಂದೇ ಪ್ರಖ್ಯಾತವಾಗಿರುವ ಉತ್ತರಕನ್ನಡದಲ್ಲಿ ತೋಟಗಾರಿಕೆ,ಕೃಷಿ, ಕೈಗಾರಿಕೆಗಳನ್ನೊಳಗೊಂಡ ವಿವಿದೋದ್ಧೇಶ ಸಹಕಾರಿ ಸಂಘಗಳು ಉತ್ತಮ ಕೆಲಸಗಳ ಮೂಲಕ ಸಾಧನೆ ಮಾಡಿವೆ.
ಇಂಥ ಘನ ಉದ್ದೇಶದಿಂದ ಸಿದ್ದಾಪುರದ ಪ್ರಮುಖರಿಂದ ಪ್ರಾರಂಭವಾದ ಕಾನಗೋಡು ಗ್ರಾ.ಪಂ. ಐಗೋಡಿನ ಗುತ್ತಿಮನೆ ಕುಂಬಾರ ಕರಕುಶಲ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ತನ್ನ ನಾಲ್ಕು ದಶಕದ ಅವಧಿಯುದ್ದಕ್ಕೂ ಕುಂಟುತ್ತಾ ಸಾಗುತ್ತಿರುವುದು ಅದರ ಉದ್ಧೇಶಕ್ಕೆ ಅಪವಾದವಾದಂತಾಗಿದೆ.
ಕುಂಬಾರಿಕೆ ಕಸುಬುಮಾಡುವ 74 ಜನರ ಸಹಕಾರಿ ಸಂಘಕ್ಕೆ ಹಿರಿಯ ಸಮಾಜವಾದಿ ದಿ.ಗೋವಿಂದ ಶಾನಭಾಗ ಮೊದಲ ಅಧ್ಯಕ್ಷರು. ಅವರ ನಂತರ ಅನೇಕರು ಅಧ್ಯಕ್ಷರು,ಸದಸ್ಯರಾಗಿ ಕಾರ್ಯನಿರ್ವಹಿಸಿದರೂ ಅದರ ಪ್ರಗತಿ ವೇಗಪಡೆದುಕೊಳ್ಳಲೇ ಇಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವ ಜನರ ಅಭಿರುಚಿ, ಮಣ್ಣಿನ ಕುಂಬಾರಿಕೆ ಕೆಲಸಕ್ಕೆ ಬೇಕಾಗುವ ಸೂಕ್ತ ಮಣ್ಣಿನ ಅಲಭ್ಯತೆ ಸೇರಿದಂತೆ ಅನೇಕ ತೊಂದರೆಗಳ ನಡುವೆ 20 ಲಕ್ಷಕ್ಕೂ ಮಿಕ್ಕಿ ಸಂಘ ವ್ಯವಹಾರ ಮಾಡುತ್ತದೆಯಾದರೂ ಅದರ ಸಾಂಪ್ರದಾಯಿಕ ಸ್ವಭಾವದಿಂದಾಗಿ ಅಭಿವೃದ್ಧಿಯಾಗದೇ ಉಳಿದುಕೊಂಡಿದೆ.
ನಾಲ್ಕುದಶಕಗಳ ಹಿಂದೆ ಈ ಸಹಕಾರಿ ಸಂಘ ಪ್ರಾರಂಭವಾದಾಗ ಅಂದಿನ ಪ್ರಮುಖರು ಈ ಸಂಘದಿಂದ ಅಪರೂಪದ ಕುಂಬಾರಿಕೆ ಮಾಡುವ ತಾಲೂಕಿನ ಜನರಿಗೆ ಭವಿಷ್ಯ,ಭದ್ರತೆಯ ಮುಂದಾಲೋಚನೆಯಿಂದಲೇ ಈ ಸಂಘ ಪ್ರಾರಂಭವಾಯಿತಾದರೂ ಈ ಸಂಘಕ್ಕೆ ತುಸು ಚೇತರಿಕೆ ಸಿಕ್ಕಿದ್ದು 90 ರದಶಕದಲ್ಲಿ, ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಕುಂಬಾರಿಕೆ ಕೆಲಸಗಾರರು ಮತ್ತು ಈ ಸಹಕಾರಿ ಸಂಘಕ್ಕೆ ಸರ್ಕಾರದ ನೆರವು,ಉತ್ತೇಜನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದರು.
ಆದರೆ ಆ ಅವಧಿಯ ಹಿಂದೆ ಮತ್ತು 90 ರ ದಶಕದ ನಂತರ ಈ ಸಂಘ, ಇಲ್ಲಿಯ ಕಸುಬುದಾರರನ್ನು ಯಾರೂ ಕೇಳದಿದ್ದುದರಿಂದ ಸಂಘ ಅಭಿವೃದ್ಧಿಯತ್ತ ಚಲನೆ ಪ್ರಾರಂಭಿಸಲೇ ಇಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವ ಅವಶ್ಯಕತೆ,ಅನಿವಾರ್ಯತೆಗಳಿಗೆ ತಕ್ಕಂತೆ ನಾವು ಬದಲಾಗದಿರುವುದೇ ನಮ್ಮ ಹಿನ್ನಡೆಗೆ ಕಾರಣ ಎನ್ನುವ ಇದರ ವ್ಯವಸ್ಥಾಪಕ ಕೆ.ಎಂ. ನಾಯ್ಕ ಕುಂಬಾರಿಕೆಯೊಂದಿಗೆ ಇತರ ವ್ಯವಹಾರ ಪ್ರಾರಂಭಿಸಿದ್ದರೆ ಸಂಘದ ಕನಸು ನನಸಾಗುತಿತ್ತೇನೋ ಎನ್ನುವ ಅವರು ಆ ದಿಸೆಯಲ್ಲೂ ಯೋಚಿಸಿ ಕಾರ್ಯಪ್ರವೃತ್ತರಾಗದಿದ್ದುದೇ ನಮ್ಮ ಈ ಸ್ಥಿತಿಗೆ ಕಾರಣ ಎನ್ನುವ ಸತ್ಯ ಒಪ್ಪುತ್ತಾರೆ.
ಕೆಲವು ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿರುವ ನಾಗೇಂದ್ರಪ್ಪ ಚಕ್ರಸಾಲಿ ನಾವು ಹಳೆಯ ಜನ, ಹೊಸ ಜನಾಂಗ ಈ ಸಂಘದೊಂದಿಗೆ ಕೈ ಜೋಡಿಸಿ ಹೊಸ ಯೋಚನೆ,ಚಿಂತನೆಗಳ ಮೂಲಕ ಸಂಘವನ್ನು ಪುನಶ್ಚೇತನ ಮಾಡುವ ಹಿನ್ನೆಲೆಯಲ್ಲಿ ಸ್ಥಳಿಯರು ಸಹಕರಿಸಿದರೆ ಸಂಘದ ಪ್ರಗತಿಯ ದಾರಿ ತೆರೆದುಕೊಳ್ಳಲು ಸಹಾಯಕವಾಗಬಹುದು ಎನ್ನುವ ಅವರಿಗೆ ಆಸಕ್ತಿ ಇದ್ದರೂ ಆಸಕ್ತಿ,ಅನುಭವಕ್ಕೆ ತಕ್ಕಂತೆ ಇತರ ಅನುಕೂಲಗಳಿಲ್ಲ. ಎನ್ನುತ್ತಾರೆ.
ಹೀಗೆ ನಿರೀಕ್ಷಿತ ಪ್ರಗತಿ ಕಾಣದಿದ್ದರೂ ಇರುವ ಕೆಲವೇ ಸದಸ್ಯರ ಆಸಕ್ತಿ ಕುಂದಿಲ್ಲ. ಸಂಘದಿಂದ ಶ್ರಮದಾನ, ಸಾಮಾಜಿಕ ಕೆಲಸ, ಗ್ರಾಮೀಣಾಭಿವೃದ್ಧಿಯ ಕನಸಿಗೆ ಶಕ್ತಿ ತುಂಬುವ ಇಲ್ಲಿಯ ಸದಸ್ಯರಿಗೆ ಸಹಕಾರಿ ಕ್ಷೇತ್ರದ ಫಲ,ಅನುಕೂಲ,ಹೊಸ ಚಿಂತನೆಯ ಕೊರತೆ ಎದ್ದು ಕಾಣುತ್ತದೆ.
ತಾಲೂಕಿನ ಏಕೈಕ ಕರಕುಶಲ ಕೆಲಸಗಾರರ ಸಹಕಾರಿ ಸಂಘದ ದುಸ್ಥಿತಿ ಈ ಕುಶಲಕರ್ಮಿಗಳ ಭವಿಷ್ಯದ ಪ್ರತಿಬಿಂಬದಂತಿದೆ. ಸಹಕಾರಿ ಇಲಾಖೆ,ಸರ್ಕಾರ ಈ ಸಂಘದ ನೆರವಿಗೆ ಬಂದು ಪುನಶ್ಚೇತನಕ್ಕೆ ಸಹಕರಿಸಿದರೆ ಹಿರಿಯರ ಆಸೆಯ,ಕನಸಿನ ಸಹಕಾರಿ ಸಂಘ ಜನರ ಒಳಿಗಾಗಿ ಕೆಲಸಮಾಡಬಹುದು. ಆದರೆ ಸರ್ಕಾರಿ ವ್ಯವಸ್ಥೆಯ ಪ್ರಮುಖರಿಗೆ ಈ ಕಲ್ಫನೆ, ಯೋಚನೆಕಡಿಮೆ. ಆಸಕ್ತ,ಬದ್ಧತೆಯ ನಾಯಕರು ಈ ಸಂಘಕ್ಕೆ ಹೊಸ ದಾರಿ ತೋರಿ,ರೂಪ ನೀಡಿದರೆ ತಾಲೂಕಿನ ವಿಶಿಷ್ಟ,ಜನೋಪಯೋಗಿ ಸಹಕಾರಿ ಸಂಘ ಚೇತರಿಸಿಕೊಳ್ಳಬಹುದು.ಸ್ಥಳಿಯರು ಈ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ.
ಕರಕುಶಲ ಕೆಲಸಗಾರರ ವ್ಯಾಪ್ತಿ ಹಿಗ್ಗಿಸಿ ಇತರ ಕುಶಲಕರ್ಮಿಗಳೂ ಸದಸ್ಯರಾಗಿ ಸಂಘವನ್ನು ಅಭಿವೃದ್ಧಿ ಪಡಿಸುವುದು.
- ಸರ್ಕಾರ ವಿಶೇಶ ಪ್ಯಾಕೇಜ್ ನೀಡುವ ಮೂಲಕ ಈ ಸಂಘದ ಪುನಶ್ಚೇತನ ಮಾಡುವುದು.
- ಸರ್ಕಾರದ ಉದ್ಯೋಗಖಾತ್ರಿ ಯೋಜನೆಯಂಥ ಕಾರ್ಯಕ್ರಮಗಳಲ್ಲಿ ಕೂಲಿ ನೀಡಿ ಈ ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದು.
- ಆಸಕ್ತ ಯುವ ನಾಯಕತ್ವದಡಿ ಸಂಸ್ಥೆಯ ಉದ್ಧೇಶ,ವ್ಯಹಾರಗಳನ್ನು ವಿಸ್ತರಿಸಿ ಸಂಘಕ್ಕೆ ಹೊಸರೂಪ ನೀಡುವುದು.
- ಸರ್ಕಾರದ ನೆರವಿನಿಂದ ಸಂಘವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಸದಸ್ಯರು,ವ್ಯಹಾರಗಳ ಮೂಲಕ ಸಂಘವನ್ನು ವಿಸ್ತರಿಸುವುದು.




