

ಶನಿವಾರ ಬೆಳ್ಳಂಬೆಳಿಗ್ಗೆ ತಾಲೂಕಿನ ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾತಾವರಣದಲ್ಲಿ ಹಕ್ಕಿಗಳ ಕಲರವ!
ಶಾಲೆಯ ಏಳು, ಆರು, ಐದನೇ ತರಗತಿಯ ಮಕ್ಕಳು ಶಾಲೆಯನ್ನು ಸುತ್ತುವರೆದಿರುವ ಕಾಡಿನಲ್ಲಿ ತಮ್ಮ ಪುಟ್ಟ ಹೆಜ್ಜೆಗಳನ್ನಿರಿಸುತ್ತ ಮರಗಳತ್ತ ದೃಷ್ಟಿ ನೆಟ್ಟು ಸಾಗಿದ್ದರು. ಅಲ್ಲಿ ಹಕ್ಕಿಗಳನ್ನರಿಸಿ ಗುರುತಿಸಿ ಅರಿಯುವುದು ಆ ಮಕ್ಕಳ ಉದ್ದೇಶವಾಗಿತ್ತು. ಹಕ್ಕಿಗಳ ಇಂಪಾದ ಕೂಗಿಗೆ ಪುಳಕಿತರಾಗಿ ಅವುಗಳು ಯಾವ ಪಕ್ಷಿ ಎಂದು ಗುರುತಿಸಲು ಕುತೂಹಲದಿಂದ ಸಂಪನ್ಮೂಲ ವ್ಯಕ್ತಿಗಳ ಸಹಾಯ ಪಡೆಯುತ್ತಿದ್ದರು.
ಯಾಕೆಂದರೆ, ‘ಪಕ್ಷಿಗಳನ್ನು ನೋಡಿಯೇ ಗುರುತಿಸಬೇಕಾಗಿಲ್ಲ. ಅವುಗಳ ಧ್ವನಿ ಕೇಳುವ ಮೂಲಕವೂ ಅವುಗಳನ್ನು ಗುರುತಿಸಬಹುದು. ಕಣ್ಣಿಲ್ಲದ ವ್ಯಕ್ತಿಯೊಬ್ಬ ಅವುಗಳ ಧ್ವನಿ ಕೇಳುವ ಮೂಲಕ ಮೂರು ಸಾವಿರ ಪಕ್ಷಿಗಳನ್ನು ಗುರುತಿಸುವ ಜೀವಂತ ಉದಾಹರಣೆ ನಮ್ಮಲ್ಲಿದೆ ಎಂದು ದುರ್ಬೀನಿನ ಕಣ್ಣಿನಲ್ಲಿ ದೂರದ ಪಕ್ಷಿಗಳ ಅಂದ ಸವಿದು ನಲಿದರು. ಮರದ ಮೇಲಿನ ಹಕ್ಕಿಯನ್ನು ತಮ್ಮ ಕೈಯಲ್ಲಿರುವ ಬ್ರೋಷರಿನಲ್ಲಿ ನೋಡಿ ಗುರುತಿಸುವಲ್ಲಿಯೂ ಮಕ್ಕಳು ಯಶಸ್ವಿಯಾದರು. ಹಿಲ್ ಮೈನಾ, ಚುಕ್ಕಿ ಬೆಳವ, ಸೂರಕ್ಕಿ, ಬೂದು ಕಾಗೆ, ಕಾಮನ್ ಅಯೋರಾ, ಪ್ಲವರ್ ಪೆಕ್ಕರ್, ಕಾಜಾಣ ಮುಂತಾದ ಸುಮಾರು 25 ಬಗೆಯ ಹಕ್ಕಿಗಳನ್ನು ಗುರುತಿಸಿ ತಮ್ಮ ನೋಟಬುಕ್ಕಿನಲ್ಲಿ ಬರೆದುಕೊಳ್ಳಲು ಯಶಸ್ವಿಯಾದರು.
ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ್ ಬೆಂಗಳೂರು ಹಾಗೂ ಕೈಗಾ ಬರ್ಡರ್ಸ್ ಆಶ್ರಯದಲ್ಲಿ ‘ಮಕ್ಕಳಿಗಾಗಿ ಪಕ್ಷಿವೀಕ್ಷಣೆ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕೈಗಾ ಬರ್ಡರ್ಸ್‍ನ ಅಧ್ಯಕ್ಷ ಮೋಹನ್ ದಾಸ್ ಉದ್ಘಾಟಿಸಿದರು. ‘ಪರಿಸರದ ಜೊತೆ ಬೆಳೆಯುವ ಮಗು ತನ್ನ ಜೀವನದಲ್ಲಿ ಎಂದೆಂದಿಗೂ ಆನಂದವಾಗಿರುತ್ತದೆ. ಮಕ್ಕಳು ಹಕ್ಕಿಗಳನ್ನು ನೋಡಿ ಆನಂದಿಸುವ ಮೂಲಕ ಅವುಗಳನ್ನು ಉಳಿಸಿಕೊಳ್ಳಬೇಕು ಎಂಬ ಪ್ರಜ್ಞೆಯನ್ನೂ ಹೊಂದುತ್ತಾರೆ. ಆನಗೋಡ ಸುತ್ತಮುತ್ತಲೂ ಸುಮಾರು 280 ರಿಂದ 300 ಪಕ್ಷಿ ಪ್ರಭೇದಗಳಿವೆ. ಈ ಸಮೃದ್ಧ ಪಕ್ಷಿಸಂಕುಲದ ವೀಕ್ಷಣೆಯ ಮೂಲಕ ಜೀವನದ ಆನಂದವನ್ನು ಹೆಚ್ಚಿಸಿಕೊಳ್ಳಬಹುದು’ ಎಂದರು.
ಕೈಗಾ ಬರ್ಡರ್ಸ್‍ನ ಮಹಾಂತೇಶ ಓಶಿಮಠ ‘ಹಕ್ಕಿಗಳು ಪರಿಸರದಲ್ಲಿ ಆಗುವ ಬದಲಾವಣೆಯನ್ನು ನಮಗೆ ತಿಳಿಸುತ್ತವೆ. ನಮ್ಮ ಸುತ್ತಮುತ್ತಲು ಕಾಣುವ ಪಕ್ಷಿಗಳಲ್ಲಿ ವಲಸೆ ಪಕ್ಷಿಗಳೂ ಇರುತ್ತವೆ. ಇಲ್ಲಿ ಕಾಣಸಿಗುವ ಟೈಗಾ ಹಕ್ಕಿ ಸುಮಾರು 20 ಸಾವಿರ ಕಿಲೋಮೀಟರ್ ಮುಂಗೋಲಿಯಾದಿಂದ ಇಲ್ಲಿಗೆ ಬರುತ್ತದೆ ಎಂದರು. ‘ಬದಲಾದ ಮನುಷ್ಯನ ಜೀವನ ಪದ್ಧತಿ, ಹವ್ಯಾಸಗಳು, ಕ್ರಿಮಿನಾಶಕಗಳ ಬಳಕೆ ಮುಂತಾದ ಕಾರಣಗಳಿಂದ ಪಕ್ಷಿಗಳ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ’ ಎಂದು ದಿನೇಶ ಗಾಂವ್ಕರ್ ಅವರು ಹೇಳಿದರು.
ವಿದ್ಯಾರ್ಥಿನಿ ಅಶ್ವಿನಿ ಭಟ್ ಹಾಡಿದ ಸ್ವಾಗತ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಮುಖ್ಯೋಧ್ಯಾಪಕ ಸುಧಾಕರ ನಾಯಕ ಸ್ವಾಗತಿಸಿ, ವಂದಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್. ಎನ್. ಹೆಗಡೆ ನೆರ್ಲೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ನಾಗೇಂದ್ರ ಭಟ್ಟ, ನಾಗೇಶ ಹೆಗಡೆ, ಐಎಫ್‍ಎ ಗ್ರ್ಯಾಂಟಿ ಗಣೇಶ ಪಿ. ನಾಡೋರ, ಕೈಗಾ ಬರ್ಡರ್ಸ್‍ನ ಸೂರಜ್ ಪ್ರಕಾಶ, ಶಿಕ್ಷಕಿಯರಾದ ಕುಸುಮಾ ನಾಯಕ, ಸವಿತಾ ಹೆಗಡೆ, ಪ್ರತಿಭಾ ನಾಯ್ಕ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ಕ್ಷೇತ್ರ ಕಾರ್ಯ ನಡೆಸಲಾಯಿತು. ಕ್ಷೇತ್ರಕಾರ್ಯದಲ್ಲಿ 25 ಮಕ್ಕಳು ಭಾಗವಹಿಸಿದ್ದರು.
ರತ್ನಾಕರ & ತಮ್ಮಣ್ಣರಿಗೆ ಸನ್ಮಾನ
ಒಡನಾಡಿ ಬಿಡುಗಡೆ,ರಂಜಿಸಿದ ಯಕ್ಷಗೀತೆ
ಟಿ.ವಿ.,ಮೊಬೈಲ್ ಮಾದಕವಸ್ತುಗಳು ಈಗಿನ ನವ ಜನಾಂಗ ಮತ್ತು ಮಹಿಳೆಯರಿಗೆ ಮಾರಕವಾಗಿವೆ ಎಂದು ಅಭಿಪ್ರಾಯ ಪಟ್ಟಿರುವ ಸಾಹಿತಿ,ಜಿಲ್ಲಾ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ರೋಹಿದಾಸ ನಾಯ್ಕ ಸಾಹಿತ್ಯದ ಕೃಷಿ ಮತ್ತು ಓದಿನಿಂದ ಈ ಅಪಾಯವನ್ನು ತಪ್ಪಿಸಬಹುದು ಎಂದಿದ್ದಾರೆ.
ರತ್ನಾಕರ ನಾಯ್ಕ ಸಂಪಾದಿಸಿರುವ ಸಾಹಿತ್ಯ ಸಮ್ಮೇಳನಗಳ ಒಡನಾಡಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ದೂರದರ್ಶನಗಳ ಧಾರವಾಹಿಗಳು, ಮೊಬೈಲ್ ಅನುಕೂಲಗಳು, ಮಾದಕ ದೃವ್ಯಗಳು ನಮಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಈ ತೊಂದರೆಯಿಂದ ಪಾರಾಗಲು ಮನುಷ್ಯತ್ವ, ಮಾನವೀಯ ಅಂತ:ಕರಣದ ಸಾಹಿತ್ಯದ ಕೃಷಿ ಮತ್ತು ಓದೇ ಬಿಡುಗಡೆಯಾಗಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕøತಿಕ ಘಟಕದ ಜಿಲ್ಲಾಧ್ಯಕ್ಷ ಗೋಪಾಲನಾಯ್ಕ ಭಾಶಿ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದರು.
ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಒಡನಾಡಿ ಒಂದು ಆಕರ ಗೃಂಥದಂತಿದೆ. ಇಲ್ಲಿಯ ಮಾಹಿತಿ-ಆಶಯಗಳು ಸಮಾಜಮುಖಿಯಾಗಿವೆ ಎಂದರು.
ಹಿರಿಯ ಸಾಹಿತಿ ವಿಷ್ಣುನಾಯ್ಕ ಮಾತನಾಡಿ ಒಡನಾಡಿಯಲ್ಲಿ ಮಹತ್ವದ ಮಾಹಿತಿ-ವಿಶೇಶ ವಿಚಾರಗಳಿವೆ. ವ್ಯಕ್ತಿಯಾಗಿ ರತ್ನಾಕರ ಒಂದು ಸಂಸ್ಥೆಯ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರ್ ರನ್ನು ಸಂಘಟಕರು ಸನ್ಮಾನಿಸಿದರು.
ಪೌರ್ಣಿಮಾ ಸಾಹಿತ್ಯ ವೇದಿಕೆಯಿಂದ ಕೃತಿ ಸಂಗ್ರಹಿಸಿದ ರತ್ನಾಕರ ನಾಯ್ಕರನ್ನು ಸನ್ಮಾನಿಸಲಾಯಿತು. ರಾಮಚಂದ್ರ ಭಾಗವತರ ಸುಶ್ರಾವ್ಯ ಯಕ್ಷಗೀತೆಗಳಿಂದ ಪ್ರಾರಂಭವಾದ ಕಾರ್ಯಕ್ರಮ ಅವರ ಯಕ್ಷಗೀತೆಗಳೊಂದಿಗೆ ಮುಕ್ತಾಯವಾಯಿತು.
ಸಾಹಿತ್ಯ ಪರಿಷತ್‍ನ ಚಟುವಟಿಕೆ ಕ್ಷೀಣಿಸಿರುವ ಬಗ್ಗೆ ವಿಷಾದಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್ ಗೌಡರ್ ಉತ್ತಮ ಕಾರ್ಯಕ್ರಮಗಳಿಂದ ಸಾಹಿತ್ಯ ಪರಿಷತ್ ಕ್ರೀಯಾಶೀಲವಾಗಬೇಕೆಂದು ಆಶಿಸಿದರು. ಸಹಾಯಕ ಅಭಿಯೋಜಕ ಚಂದ್ರಶೇಖರ್ ಎಸ್.ಎಚ್., ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ, ಕೃತಿ ಸಂಪಾದಕ ರತ್ನಾಕರ ನಾಯ್ಕ ಮಾತನಾಡಿದರು.

