
ಗಣಪತಿ ಅವನನ್ನು ನೋಡಿ ಗಕ್ಕನೆ ನಿಂತುಬಿಟ್ಟ.
‘ಅಯ್ಯೋ! ಈ ಶನಿ ಈಗಲೇ ಒಕ್ಕರಿಸಬೇಕಿತ್ತೇ…’ ಎಂದು ಮನದಲ್ಲೇ ಗೊಣಗಿಕೊಂಡ. ತನ್ನ ಬಲಗೈಯ್ಯಲ್ಲಿ ಚೀಲವಿದ್ದುದರಿಂದ ಎಡಗೈಯ್ಯಿಂದ ತನ್ನ ಚೆಡ್ಡಿಯ ಬಲಬದಿಯ ಕಿಸೆಯನ್ನು ತಡವಿ ಒಂದೊಂದು ರೂಪಾಯಿಯ ನಾಲ್ಕು ನಾಣ್ಯಗಳಿರುವುದನ್ನು ಖಾತರಿಪಡಿಸಿಕೊಂಡ. ಅವನನ್ನು ನೋಡಿಯೂ ನೋಡದಂತೆ ಮುಂದೆ ನಡೆಯತೊಡಗಿದ. ಯಾಕೆಂದರೆ, ‘ಈ ನಾಣ್ಯಗಳನ್ನು ಅವನು ಕಸಿದುಕೊಂಡು ಬಿಟ್ಟರೆ…?’ ಎಂದು ದಿಗಿಲಾಗಿತ್ತು.
ಅವನು ಬೇರೆ ಯಾರೂ ಅಲ್ಲ, ಗಣಪತಿ ಸಬಗೇರಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ಸಹಪಾಠಿಯಾಗಿದ್ದ ನಾಗರಾಜ ಆಚಾರಿ. ಗಣಪತಿಯ ಕುಳ್ಳು ದೇಹದ ಮುಂದೆ ನಾಗರಾಜನ ಎತ್ತರ ನಿಲುವು, ಕೊಬ್ಬಿಲ್ಲದ ಬಲಿಷ್ಠ ದೇಹ, ಕ್ರೂರತೆಯನ್ನು ಸೂಸುವ ಮುಖ ನೋಡಿ ಗಣಪತಿ ಹೆದರಿದ್ದಲ್ಲ. ಆ ರೀತಿಯ ದೇಹಚರ್ಯೆಯ ಇನ್ನೂ ಕೆಲವು ಸಹಪಾಠಿಗಳು, ಗೆಳೆಯರು ಅವನಿಗಿದ್ದಾರೆ. ಆದರೆ ಅವರ್ಯಾರೂ ನಾಗರಾಜನ ಹಾಗೆ ತನ್ನಂಥ ದುರ್ಬಲರಲ್ಲಿದ್ದುದನ್ನು ಕಸಿದುಕೊಂಡು ಹೋಗುವ ಗುಣ ಹೊಂದಿರಲಿಲ್ಲ. ಈಗ ತನ್ನಲ್ಲಿರುವ ನಾಲ್ಕು ರೂಪಾಯಿ ಅವನು ಕಸಿದುಕೊಂಡು ಬಿಟ್ಟರೆ ಹತ್ತು ದಿನದ ಹೋರಾಟ ನಿರರ್ಥಕವಾಗಿಬಿಡುತ್ತದಲ್ಲ ಎಂದು ಗಣಪತಿಗೆ ಆತಂಕ ಕಾಡಿತು.
ಒಂಬತ್ತನೇ ತರಗತಿಯಲ್ಲಿರುವ ಗಣಪತಿಗೆ ಒಂದು ತಿಂಗಳ ಅಕ್ಟೋಬರ್ ರಜೆ ಬಿದ್ದು ಹತ್ತು ದಿನಗಳೇ ಕಳೆದು ಹೋಗಿದ್ದವು. ರಜೆ ಬಿದ್ದ ಮಾರನೇ ದಿನವೇ ಅವನು ತೊರೆಗಜನಿಯ ತನ್ನ ಅಜ್ಜಿಮನೆಗೆ ಹೋಗಬೇಕೆಂದಿದ್ದ. ಆದರೆ ಬೀಜಗಣಿತದ ಮಾಸ್ತರು ತಾವು ಅಕ್ಟೋಬರವರೆಗೆ ಕಲಿಸಿದ ಎಲ್ಲ ಅಧ್ಯಾಯಗಳ ಹೋಂವರ್ಕ ಬರೆದು ಮುಗಿಸಿ ತನ್ನ ಸಹಿ ಹಾಕಿಸಿಕೊಂಡಾದ ಮೇಲೆಯೇ ರಜೆಗೆ ಹೋಗಬೇಕೆಂದು ತಾಕೀತು ಮಾಡಿದ್ದರು.
ಅವರೂ ಕೂಡ ರಜೆಗೆ ಹೋಗದೆ ಶಾಲೆಗೆ ಬಂದು ಹೋಂವರ್ಕ್ ಚೆಕ್ ಮಾಡತೊಡಗಿದ್ದರು. ಖರೆ ಹೇಳಬೇಕೆಂದರೆ ಗಣಪತಿ ಈ ವರ್ಷದ ಶಾಲೆ ಪ್ರಾರಂಭವಾದಾಗಿನಿಂದ ಅಕ್ಟೋಬರ್ ಎರಡರವರೆಗೂ ಬೀಜಗಣಿತದ ಒಂದೇ ಒಂದು ಹೋಂವರ್ಕ ಮಾಡಿರಲಿಲ್ಲ. ಸರು ಹೋಂವರ್ಕ ಕೊಡುತ್ತಿದ್ದರೇ ಹೊರತು, ಮಕ್ಕಳು ಹೋಂವರ್ಕ ಮಾಡಿದ್ದಾರೆಯೇ ಇಲ್ಲವೇ ಎಂದು ಒಂದು ದಿನವೂ ಚೆಕ್ ಮಾಡಿದವರಲ್ಲ. ಹಾಗಾಗಿ ಗಣಪತಿಗೆ ಹೋಂವರ್ಕ ಮಾಡುವ ಅವಶ್ಯಕತೆಯೂ ಬಿದ್ದಿರಲಿಲ್ಲ. ಆದರೆ ಅಕ್ಟೋಬರ ಎರಡರಂದು ಗಾಂಧೀಜಿ ಜಯಂತಿ ಆಚರಣೆ ಮುಗಿಯುತ್ತಲೇ ನಾಳೆಯಿಂದ ಒಂದು ತಿಂಗಳು ದಸರಾ ರಜೆ ಎಂದು ಒಳಗೊಳಗೇ ನಲಿಯುತ್ತಿರುವಾಗಲೇ ಬೀಜಗಣಿತದ ಮಾಸ್ತರು ಬಾಂಬು ಸಿಡಿಸಿದ್ದರು!
ಹೋವರ್ಕ್ ಮುಗಿಸಿ ಸಹಿ ಹಾಕಿಸಿಕೊಳ್ಳದೆ ಹೋದರೆ, ರಜೆ ಮುಗಿಸಿ ಬಂದ ಮೇಲೆ ಚೆಕ್ ಮಾಡಿ ಚರ್ಮ ಸುಲಿಯುವುದಾಗಿ ಎಚ್ಚರಿಸಿದ್ದರು!
ಗಣಪತಿಗೆ ತುಂಬ ಬೇಸರವಾಯಿತು. ಹೀಗಾಗುತ್ತದೆಂದು ಅವನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಬೀಜಗಣಿತದ ಮಾಸ್ತರು ಹೇಳಿದ ಮೇಲೆ ಮುಗಿಯಿತು. ತಪ್ಪಿಸಿಕೊಳ್ಳುವ ಹಾಗೇ ಇಲ್ಲ. ಗಣಪತಿಯಂತೂ ಅವರನ್ನು ಕಂಡರೆ ಹೆದರಿ ನಡುಗುತ್ತಿದ್ದ. ಅವರ ಬೈಗುಳ, ಹೊಡೆತ ಕ್ರೂರವಾಗಿರುತ್ತಿತ್ತು. ಅದರಲ್ಲೂ ತನ್ನ ಕ್ಲಾಸಿನ ಹುಡುಗಿಯರ ಮುಂದೆ ಇದನ್ನೆಲ್ಲ ಅನುಭವಿಸುವುದು ಗಣಪತಿಗೆ ಸಾವಿಗೆ ಸಮನಾಗಿತ್ತು. ಹಾಗಾಗಿ ಅವನು ಹೋಂವರ್ಕಗೆ ಚಕ್ಕರ್ ಹೊಡೆಯದೇ ಅಂದೇ ಶುರು ಹಚ್ಚಿಕೊಂಡ. ಅಷ್ಟೂ ಹೋಂವರ್ಕ್ ಮುಗಿಸುವಷ್ಟರಲ್ಲಿ ಬರೋಬ್ಬರಿ ಐದು ದಿನಗಳೇ ಕಳೆದು ಹೋಗಿದ್ದವು. ಅದನ್ನು ಒಯ್ದು ಸರ್‍ಗೆ ತೋರಿಸಿದರೆ, ತಪ್ಪುಗಳ ಭೂತ ಎದ್ದು ನಿಂತಿತು. ಎಲ್ಲೆಲ್ಲಿ ತಪ್ಪುಗಳಾಗಿವೆಯೋ ಅಲ್ಲೆಲ್ಲ ಸರು ಕೆಂಪು ಶಾಯಿಯ ಅಡ್ಡಗೆರೆ ಎಳೆದು, ಹೊಸದಾಗಿ ಬರೆಯುವಂತೆ ಶರಾ ಬರೆದು ಮುಖದ ಮೇಲೆ ಎಸೆದರು. ಮತ್ತೆ ಹೊಸದಾಗಿ ಬರೆದು, ಮತ್ತಾದ ತಪ್ಪುಗಳಿಂದ ಬೈಸಿಕೊಂಡು ಎಲ್ಲಾ ಸರಿಯಾಗಿದೆ ಎಂದು ಸರು ಸಹಿ ಹಾಕುವ ಹೊತ್ತಿಗೆ ಹತ್ತು ದಿನಗಳ ರಜೆ ಮಣ್ಣುಪಾಲಾಗಿತ್ತು.
ಹತ್ತು ದಿನ ಹೋದರೆ ಹೋಗಲಿ, ಇನ್ನೂ ಇಪ್ಪತ್ತು ದಿನ ಬಾಕಿ ಇದೆಯಲ್ಲ ಎಂದು ಉತ್ಸಾಹದಿಂದಲೇ ಗಣಪತಿ ಅಜ್ಜಿಮನೆಗೆ ಹೊರಟಿದ್ದ. ಕಳೆದ ಸಲ ರಜೆಯಲ್ಲಿ ಎಂಟಾಣೆ ಕಡಿಮೆಯಿರುವ ಕಾರಣವಾಗಿ ಅವನ ಅಜ್ಜಿಮನೆ ಪ್ರವಾಸ ರದ್ದಾಗಿತ್ತು. ಈ ಸಲ ಹಾಗಾಗಬಾರದೆಂದು ಮೊದಲೇ ಮುತುವರ್ಜಿ ವಹಿಸಿದ್ದ. ಮೂರ್ನಾಲ್ಕು ತಿಂಗಳುಗಳಿಂದಲೇ ಮಿಠಾಯಿ ಖರ್ಚಿಗೆ ಸಿಗುತ್ತಿದ್ದ ಐದು ಪೈಸೆ, ಹತ್ತು ಪೈಸೆ ಒಟ್ಟು ಹಾಕುತ್ತ ನಾಲ್ಕು ರೂಪಾಯಿ ಕೂಡಿಹಾಕಿದ್ದ. ಗಾಡಿ ಕೆಲಸಕ್ಕೆ ಹೋಗಿರುವ ಅಪ್ಪ ಬರದೆ ಎರಡು ತಿಂಗಳುಗಳೇ ಕಳೆದು ಹೋಗಿದ್ದವು. ಅಪ್ಪ ಬಂದಿದ್ದರೆ, ‘ಊರಿಗೆ ಹೋಗಲು ದುಡ್ಡು ಕೊಡು’ ಎಂದು ಹೇಳಿ, ಅವನಿಂದಲೂ ಒಂದೆರಡು ರೂಪಾಯಿ ಪಡೆದುಕೊಂಡು ಜಾಲಿಯಾಗಿ ಊರಿಗೆ ಹೋಗಬಹುದಿತ್ತು. ಅಮ್ಮನ ಹತ್ತಿರ ಒಂದು ಪೈಸೆ ಹೊರಬೀಳಬೆಂಕೆಂದರೆ ಅದು ಪ್ರಸವ ವೇದನೆಯಷ್ಟೇ! ಅಮ್ಮನ ಕೇಳಿದ್ದಕ್ಕೆ,
‘ನೀನು ಬೇಕಾದ್ರೆ ಊರಿಗೆ ಹೋಗು, ಬಿಡು… ನನ್ನ ಹತ್ತಿರ ಒಂದು ನಯಾಪೈಸೆಯೂ ಇಲ್ಲ…’ ಎಂದುಬಿಟ್ಟಿದ್ದಳು. ಕೊನೆಗೆ ಅವನ ತಮ್ಮ ಷಣ್ಮುಖ, ‘ಅಣ್ಣಾ… ನೀನು ಹಿಲ್ಲೂರಿನಿಂದ ಗೋಕರ್ಣಕ್ಕೆ ಹೋಗುವ ಬಸ್ಸ್ ಹತ್ತಿದರೆ ನಾಲ್ಕು ರೂಪಾಯಿ ಆರಾಮ ಸಾಕಾಗುತ್ತದೆ.. ಅಂಕೋಲಾ ಮೇಲಿಂದ ಹೋಗುವ ಬಸ್ಸಿಗೆ ಹೋದರೆ ಏಳು ರೂಪಾಯಿಯಾದರೂ ಬೇಕು…
ನೀನು ಹಿಲ್ಲೂರು ಕಡೆಯಿಂದ ಹೋಗುವ ಬಸ್ಸಿಗೆ ಹೋಗಿಬಿಡು..’ ಎಂದು ಧೈರ್ಯ ತುಂಬಿದ.
ಆಗೆಲ್ಲಾ ಹಿಲ್ಲೂರಿನ ಮೇಲಿಂದ ಗೋಕರ್ಣಕ್ಕೆ ದಿನಕ್ಕೊಂದೇ ಬಸ್ಸು ಬಿಡಲಾಗುತ್ತಿತ್ತು. ಅದೂ ಬೆಳಗಿನ ಒಂಬತ್ತು ಗಂಟೆಗೆ. ಹಾಗಾಗಿ ಗಣಪತಿ ಬೇಗ ಎದ್ದು ಸ್ನಾನ ಮಾಡಿ, ಅಮ್ಮ ಮಾಡಿಕೊಟ್ಟ ಚಹಾ, ದೋಸೆ ತಿಂದು, ಬಣ್ಣದ ಬಟ್ಟೆ ಒಂದೂ ಇಲ್ಲದ ಕಾರಣ ಶಾಲಾ ಸಮವಸ್ತ್ರವಾದ ಬಿಳಿ ಅಂಗಿ, ಖಾಕಿ ಚಡ್ಡಿಯನ್ನು ಧರಿಸಿದ. ಊರಲ್ಲಿ ಧರಿಸಲು ಬೇಕಾಗುತ್ತದೆಂದು ಎರಡು ಜೊತೆ ಹರಕು ಬಟ್ಟೆಗಳನ್ನು ಅಮ್ಮ ಕೊಟ್ಟ ವಾಯರಿನಿಂದ ಹೆಣೆದ ಚೀಲದಲ್ಲಿ ತುರುಕಿಕೊಂಡು ಬಸ್ ನಿಲ್ದಾಣದ ಕಡೆ ಸಾಗಿದ. ಸುಮಾರು ಇಪ್ಪತ್ತೈದು ನಿಮಿಷದ ಹಾದಿ ತುಳಿದು ಮೀನು ಪೇಟೆಯ ಹತ್ತಿರ ಬಂದಿದ್ದ. ಇನ್ನೇನು ಹತ್ತು ಹೆಜ್ಜೆ ದಾಟಿದರೆ ಬಸ್ ನಿಲ್ದಾಣದಲ್ಲಿ ಕಾಲಿಡುತ್ತಿದ್ದ. ಆದರೆ ಅಷ್ಟರಲ್ಲಿ ನಾಗರಾಜ ಎಂಟ್ರಿ ಕೊಟ್ಟಿದ್ದ!
2
ಮೊದಲೊಂದು ಸಲ ಗಣಪತಿ ಇಲ್ಲಿಯೇ ನಾಗರಾಜನಿಂದ ಸುಲಿಗೆಗೆ ಒಳಗಾಗಿದ್ದ. ಆಗ ಅವನು ಐದನೇ ತರಗತಿಯಲ್ಲಿದ್ದ. ನಾಗರಾಜನೂ ಅವನ ಕ್ಲಾಸಿನಲ್ಲಿಯೇ ಕಲಿಯುತ್ತಿದ್ದ. ಅವತ್ತು ಸಂಜೆ ಅಮ್ಮ ಅವನ ಕೈಯ್ಯಲ್ಲಿ ಎಂಟಾಣೆ ಕೊಟ್ಟು, ‘ನಾಲ್ಕಾಣೆ ತಾರಲೆ ಮೀನು ತಗೊಂಡು ಬಾ’ ಎಂದು ಕಳಿಸಿದಳು. ‘ಹೆಂಗಸರ ಹತ್ತಿರವೇ ತಗೋ… ತಾಜಾ ಇರ್ತದೆ…’ ಎಂದೂ ಎಚ್ಚರಿಸಿದ್ದಳು. ‘ಹುಂ’ ಎಂದು ಚೀಲ ತೆಗೆದುಕೊಂಡು, ತನ್ನ ಅಪ್ಪನ ಶೈಲಿಯಲ್ಲಿಯೇ ಕೈಯ್ಯಲ್ಲಿ ಸ್ಟೇರಿಗ್ ಹಿಡಿದಂತೆ ಕಲ್ಪಿಸಿಕೊಂಡು, ಬಾಯಲ್ಲಿ, ‘ಬ್ರ…ಬ್ರ…ಬ್ರರ್‍ರ್‍ರ್‍ರ್…..’ ಎಂದು ಶಬ್ಧ ಮಾಡುತ್ತ ಗಾಡಿ ಹೊಡೆಯುವ ಶೈಲಿಯಲ್ಲಿ ಮೀನುಪೇಟೆಯ ಕಡೆ ಓಟ ಕಿತ್ತಿದ್ದ. ‘ಏಯ್… ಸಾವಕಾಶ ಹೋಗೋ’ ಎಂಬ ಅಮ್ಮನ ಎಚ್ಚರಿಕೆಯ ಮಾತು ಅವನ ಕಿವಿಯನ್ನು ತಲುಪುವಲ್ಲಿ ವಿಫಲವಾಗಿತ್ತು!
ಮೀನು ಪೇಟೆಗೆ ಬಂದು ನೋಡುತ್ತಾನೆ, ಬಹಳ ಮೀನು ಪೇಟೆಯಲ್ಲಿ ಬಂದಿತ್ತು. ಹತ್ತಾರು ಹೆಂಗಸರು ತಲಾ ಒಂದೊಂದು ಚೂಳಿ ಬುಟ್ಟಿಯ ಮುಂದೆ ಕುಳಿತು ಮೀನು ಮಾರುತ್ತಿದ್ದರು. ‘ತಾರಲೆ ಮೀನು ಸಸ್ತಾ ಆಗಿದ್ದರೆ ಹದಿನೈದು ಪೈಸೆಯ ಮೀನು ತೆಗೆದುಕೊಂಡು, ನಾಲ್ಕಾಣೆಯ ಮೀನು ತಂದಿದ್ದೇನೆಂದು ಅಮ್ಮನಿಗೆ ಸುಳ್ಳು ಹೇಳಬಹುದು, ಆ ಮೂಲಕ ಹತ್ತು ಪೈಸೆ ತನ್ನ ಜೇಬಿಗಿಳಿಸಬಹುದು… ಇಲ್ಲಾ, ಮಿಠಾಯಿ ತಿನ್ನಬಹುದು…’ ಎಂದು ಯೋಚಿಸುತ್ತ ಗಣಪತಿ ಹೆಂಗಸೊಬ್ಬಳ ಬುಟ್ಟಿಯತ್ತ ಸಾಗಿದ.
‘ಏಯ್.. ಎಲ್ಲೋಗ್ತಿಯೋ… ಇಲ್ಲಿ ಬಾ’ ಎಂದು ಪರಿಚಿತ ಧ್ವನಿ ಕೇಳಿ ಗಣಪತಿ ಬೆಚ್ಚಿದ.
ಧ್ವನಿ ಬಂದತ್ತ ನೋಡಿದರೆ ನಾಗರಾಜ ವಿಚಿತ್ರವಾಗಿ ನಗುತ್ತ ನಿಂತವ ಮತ್ತೊಮ್ಮೆ ಕೈಬೀಸಿ ಕರೆದ. ಅವನು ಕರೆದ ಮೇಲೆ ಹೋಗದೆ ಇರುವ ಹಾಗೇ ಇಲ್ಲ. ಇಲ್ಲಿಂದ ತಪ್ಪಿಸಿಕೊಂಡು ಹೋದರೂ ನಾಳೆ ಶಾಲೆಯಲ್ಲಿ ಏನಾದರೂ ನೆವ ತೆಗೆದು ಹೊಡೆಯುತ್ತಾನೆ. ಅವನಿದ್ದಲ್ಲಿ ಹೋದ ಗಣಪತಿಗೆ, “ಯಾವ ಮೀನು ಬೇಕಲೆ?” ಎಂದು ಕೇಳಿದ. ಗಣಪತಿ ಅಪ್ರಯತ್ನವಾಗಿ, ‘ತಾರಲೆ ಮೀನು ಬೇಕಾಗಿತ್ತು’ ಎಂದ. ತಕ್ಷಣ ಅವನ ಕೈಯ್ಯಲ್ಲಿದ್ದ ಚೀಲ ಕಸಿದ ನಾಗರಾಜ, ‘ಎಷ್ಟು ಬೇಕು?’ ಕೇಳಿದ. ಈ ಗಡಿಬಿಡಿಯಲ್ಲಿ ಗಣಪತಿಗೆ ತನ್ನ ಹತ್ತು ಪೈಸೆ ಉಳಿಸುವ ಲೆಕ್ಕಾಚಾರವೂ ಮರೆತು ಹೋಗಿ, ‘ನಾಲ್ಕಾಣೆದು’ ಎಂದ. ನಾಗರಾಜ ತಕ್ಷಣ ತನ್ನ ಎಡಕ್ಕೆ ಬಗ್ಗಿ, ಕೊಂಕಣಿ ಮಾತನಾಡುವ ಧಡಿಯನೊಬ್ಬ ಕುಳಿತಿದ್ದ ಮುಂದಿರುವ ಬುಟ್ಟಿಯಿಂದ ಮೀನು ಎಣಿಸುತ್ತ ಹಾಕತೊಡಗಿದ್ದ. ಆಗಲೇ ಗಣಪತಿಗೆ ಗೊತ್ತಾಗಿದ್ದು, ನಾಗರಾಜ ಆ ಧಡಿಯನ ಆಳಾಗಿ ಮೀನು ಮಾರಲು ನಿಂತಿದ್ದಾನೆಂದು. ಆ ಧಡಿಯ ಮತ್ತ್ಯಾರಿಗೋ ಅದೇ ಬುಟ್ಟಿಯಿಂದ ಮೀನು ಎಣಿಸಿ ಕೊಡುತ್ತಿದ್ದ. ನಾಗರಾಜ ಗಡಿಬಿಡಿಯಿಂದ ಚೀಲದಲ್ಲಿ ಮೀನು ಹಾಕಿ ಗಣಪತಿಯ ಕೈಗಿತ್ತು ಹೋಗೆಂದು ಕಣ್ಸನ್ನೆ ಮಾಡಿದ. ಗಣಪತಿ ದುಡ್ಡು ಮುಂದೆ ಮಾಡಿದ. ನಾಗರಾಜನ ಮುಖ ಕೋಪಕ್ಕೆ ತಿರುಗಿತು. ತನ್ನ ಯಜಮಾನ ಬೇರೆಯವರಿಗೆ ಮೀನು ಕೊಡುವುದರಲ್ಲಿ ಮಗ್ನನಾಗಿದ್ದು, ತನ್ನನ್ನು ಗಮನಿಸುತ್ತಿಲ್ಲ ಎಂಬುದನ್ನು ಖಾತರಿ ಮಾಡಿಕೊಂಡು, ‘ಹೋಗು’ ಎಂಬಂತೆ ಮುಖ ಅಲುಗಾಡಿಸಿ ಕಣ್ಣು ಕೆಂಪಾಗಿಸಿ ನೋಡಿದ. ಗಣಪತಿಗೆ ಅವನ ಸಂಜ್ಞೆ ಅರ್ಥವಾಗಿ ದುಡ್ಡನ್ನು ಕಿಸೆಯಲ್ಲಿ ಹಾಕಿಕೊಂಡು ಅಲ್ಲಿಂದ ನಡೆದ. ಅವನು ಎರಡು ಹೆಜ್ಜೆ ಹೋಗುತ್ತಲೇ ನಾಗರಾಜನ ಧಡಿಯ ಮಾಲೀಕ, ‘ಏಯ್… ತೆಗೆಲೆ ಪೈಸೆ ಗೆತ್ಲೆ?’ ಎಂದು ನಾಗರಾಜನಿಗೆ ಕೇಳಿದ. ‘ಹಾಂ… ಗೆತ್ಲೆ… ಗೆತ್ಲೆ…’ ಎಂದು ನಾಗರಾಜ ಸಗಣಿ ಸಾರಿಸಿದ!
ಗಣಪತಿ ಮುಗುಳು ನಗುತ್ತ, ‘ಏನೇ ಆಗಲಿ… ನಾಗರಾಜನಿಂದ ಪುಕ್ಕಟೆ ಮೀನು ಸಿಕ್ಕಿತು. ಪನ್ನಾನ ಅಂಗಡಿಯಲ್ಲಿ ಹತ್ತು ಪೈಸೆಯ ಮಿಠಾಯಿ ತೆಗೆದುಕೊಂಡು, ಮತ್ತೆ ಹದಿನೈದು ಪೈಸೆ ನಾಳೆಗಾಗಿ ಉಳಿಸಿಕೊಂಡು, ಅಮ್ಮನಿಗೆ ನಾಲ್ಕಾಣೆ ಕೊಟ್ಟು, ನಾಲ್ಕಾಣೆ ಮೀನು ತಂದಿದ್ದೇನೆಂದು ಹೇಳಬಹುದು..’ ಎಂದು ಯೋಚಿಸುತ್ತ, ಬಿರುಸು ಹೆಜ್ಜೆ ಹಾಕುತ್ತ ಬೀಡಿ ಆಫಿಸಿನವರೆಗೆ ಬಂದಿದ್ದ ಅಷ್ಟೇ. ‘ಏಯ್! ನಿಲ್ಲೋ…’ ನಾಗರಾಜನ ಧ್ವನಿ ಕೇಳಿ ಬೆಚ್ಚಿ ತಿರುಗಿದ.
ನೋಡಿದರೆ, ನಾಗರಾಜ ಏದುಸಿರು ಬಿಡುತ್ತ ಸೈಕಲ್ ಹೊಡೆದುಕೊಂಡು ಬರುತ್ತಿದ್ದ! ವೇಗವಾಗಿ ಬಂದು ಗಣಪತಿಯ ಮುಂದೆ ಸೈಕಲ್ ನಿಲ್ಲಿಸಿ, ‘ತೆಗಿ.. ತೆಗಿ… ದುಡ್ಡು ತೆಗಿ’ ಎಂದ. ಗಣಪತಿ ಕಿಸೆಯಿಂದ ದುಡ್ಡು ತೆಗೆದು ಕೊಡಲೂ ಕಾಯದೆ, ತಾನೇ ಅವನ ಕಿಸೆಗೆ ಕೈಹಾಕಿ ದುಡ್ಡು ಕಸಿದುಕೊಂಡು ಸೈಕಲ್ ಹತ್ತಿಯೇಬಿಟ್ಟ! ‘ಏಯ್… ಅದು ಎಂಟಾಣೆ… ನಾಲ್ಕಾಣೆ ವಾಪಸ್ ಕೊಡಲೇ…’ ಎಂದು ಗಣಪತಿ ಕೂಗಿದ. ಅದನ್ನು ಗಣನೆಗೇ ತೆಗೆದುಕೊಳ್ಳದ ನಾಗರಾಜನ ಸೈಕಲ್ಲು ಮೀನು ಪೇಟೆಯತ್ತ ಧಾವಿಸಿತ್ತು. ನಿರಾಶೆಯಿಂದ ಮನೆಗೆ ಬಂದ ಗಣಪತಿಗೆ ನಾಲ್ಕಾಣೆ ವಾಪಸ್ ತರದಿದ್ದುದಕ್ಕಾಗಿ ಅಮ್ಮನಿಂದ ಛಲೋ ‘ಮಂಗಳಾರತಿ’ ನಡೆಯಿತು!
3 ನಂತರ ಕೆಲವೇ ದಿನಗಳಲ್ಲಿ ಮತ್ತೊಂದು ಘಟನೆ ನಡೆಯಿತು. ಅವತ್ತು ಗಣಪತಿ ಒಳದಾರಿಯಿಂದ ಶಾಲೆಗೆ ಹೋಗುತ್ತಿರುವಾಗ ಮಾಸ್ತಿ ಮನೆಯ ಬೇಲಿಯಿಂದ ಹೊರಚಾಚಿದ್ದ ಪೇರಲ ಮರದಲ್ಲಿ ದೊಡ್ಡದಾದ ಒಂದೇ ಒಂದು ಹಣ್ಣು ಮಿನುಗುತ್ತಿರುವುದನ್ನು ನೋಡಿದ. ಅವನಿಗೆ ಮರ ಹತ್ತಲು ಬರುತ್ತಿರಲಿಲ್ಲವಾದರೂ ಹಣ್ಣಿನಾಸೆಗೆ ಹೇಗೇಗೋ ಪರದಾಡಿ ಹತ್ತಿದ. ಮಾಸ್ತಿ ಮನೆಯಲ್ಲಿ ಯಾರೂ ಇರಲಿಲ್ಲ. ಎಲ್ಲಿಗೋ ಹೋಗಿದ್ದರು. ಹಾಗಾಗಿ ಆ ಮನೆಯವರ ಭಯವೇನೂ ಇರಲಿಲ್ಲ. ಗಣಪತಿ ನಿಧಾನವಾಗಿ ಆ ಪೇರಲ ಹಣ್ಣನ್ನು ಕೊಯ್ದು ಕೆಳಗಿಳಿದು ಹಣ್ಣಿನ ಗಾತ್ರವನ್ನು ನೋಡಿ ಖುಷಿಪಡುತ್ತ ದಾರಿಯಲ್ಲಿ ಸಾಗಿದ್ದಾಗ ಮುಂದೆ ನಾಗರಾಜ ಬರುತ್ತಿರುವುದು ಕಾಣಿಸಿತು. ‘ಹಾಂ… ಇವನು ಹಣ್ಣು ಕಸಿದುಕೊಳ್ಳದೆ ಬಿಡುವುದಿಲ್ಲ’ ಅನ್ನಿಸಿತು ಗಣಪತಿಗೆ. ಹೇಗೆ ಹಣ್ಣನ್ನು ಉಳಿಸಿಕೊಳ್ಳುವುದು ಎಂದು ಯೋಚಿಸಿದಾಗ ಒಂದು ಉಪಾಯ ಹೊಳೆಯಿತು, ಎಂಜಲು ಮಾಡುವುದು! ತಕ್ಷಣ ಪೇರಲ ಹಣ್ಣನ್ನು ಲಗುಬಗೆಯಿಂದ ಮೂರ್ನಾಲ್ಕು ಕಡೆ ಕಚ್ಚಿ ಎಂಜಲುಗೊಳಿಸಿದ.
ಹತ್ತಿರ ಬಂದ ನಾಗರಾಜ ಗಣಪತಿಯ ಕೈಯ್ಯಲ್ಲಿದ್ದ ಪೇರಲ ಹಣ್ಣನ್ನು ಕಸಿದುಕೊಂಡು, ‘ಎಂಜಲು ಮಾಡಿದ್ರೆ ನಾನು ತಿನ್ನುವುದಿಲ್ಲ ಅಂದ್ಕೊಂಡಿದ್ದಿ? ನೋಡಿಲ್ಲಿ…’ ಎಂದು ಆ ಪೇರಲ ಹಣ್ಣನ್ನು ಸ್ವಲ್ಪವೂ ಹೇಸಿಗೆಯಿಲ್ಲದೆ ಗಣಪತಿ ಕಚ್ಚಿದ ಕಡೆಯಲ್ಲೇ ಕಚ್ಚಿ ಕಚ್ಚಿ ತಿನ್ನತೊಡಗಿದ. ಗಣಪತಿ ಒಂದೂ ಮಾತನಾಡದೆ ತನ್ನ ಉಪಾಯ ಫಲಿಸದಿದ್ದಕ್ಕೆ ನಿರಾಶೆಗೊಂಡು, ಮನದಲ್ಲೇ ನಾಗರಾಜನಿಗೆ ಬಯ್ಯುತ್ತ ಶಾಲೆಯ ಕಡೆಗೆ ಹೊರಟಿದ್ದ!
4 ಇಂಥ ನಾಗರಾಜ ಈಗ ದುಡ್ಡು ಕಂಡರೆ ಬಿಡುತ್ತಾನೆಯೇ? ಗಣಪತಿಯ ಹತ್ತಿರ ಬಂದು, ‘ಏನೋ ಅದು ಕಿಸೆಯಲ್ಲಿ?’ ಎಂದು ಕಿಸೆಗೆ ಕೈ ಹಾಕಿದ. ಮೀನುಪೇಟೆಯತ್ತ ಹೋಗಿಬರುತ್ತಿರುವ ಜನ ನೋಡುತ್ತಾರೆ, ತನ್ನ ಹರಾಮಕೋರತನಕ್ಕೆ ಬೈದರೂ ಬಯ್ಯಬಹುದೆಂಬ ಹೆದರಿಕೆಯೇ ಅವನಿಗಿರಲಿಲ್ಲ. ಇನ್ನು ತಡಮಾಡಿದರೆ ಈ ನಾಲ್ಕು ರೂಪಾಯಿ ಕೈಬಿಟ್ಟಂತೆಯೇ ಎಂದು ಯೋಚಿಸಿದ ಗಣಪತಿ,
ಚಡ್ಡಿ ಕಿಸೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ಏ… ನಾಗರಾಜ… ನಿನಗೆ ಕೈ ಮುಗಿತೇನೆ… ಊರಿಗೆ ಹೋಗಲಿಕ್ಕೆ ನಾಲ್ಕು ರೂಪಾಯಿ ಹಿಡಕೊಂಡು ಹೊಂಟಿದ್ದೇನೆ… ಬಸ್ ಚಾರ್ಜು ಅಷ್ಟೇಯಾ…’ ಎಂದು ಅತ್ತೇಬಿಟ್ಟ. ಗಣಪತಿಯ ಕಣ್ಣಲ್ಲಿ ನೀರು ನೋಡಿದ ನಾಗರಾಜ ಮೆತ್ತಗಾಗಿ, ‘ಹೂಂ… ಆಯ್ತು ಮಾರಾಯ… ಹೋಗು.. ಹೋಗು…’ ಎಂದು ಅವನ ದಾರಿಯಿಂದ ಹಿಂದೆ ಸರಿದ.
ಗಣಪತಿ ಕಣ್ಣೀರು ಒರೆಸಿಕೊಳ್ಳುತ್ತ ಬಸ್‍ನಿಲ್ದಾಣಕ್ಕೆ ಬಂದ. ಅಲ್ಲಿ ಆಗಲೇ ಬಸ್ಸು ಬಂದು ನಿಂತಿತ್ತು. ಬಸ್ಸಿನ ಮೆಟ್ಟಿಲು ಹತ್ತಿ ಏರುವಾಗ ಗಣಪತಿಗೆ ಅನುಮಾನ ಕಾಡಿತು. ಹಾಂಗಾಗಿ ಕಂಡಕ್ಟರನಲ್ಲಿ ಕೇಳಿಯೇ ಬಿಟ್ಟ: ‘ತೊರೆಗಜನಿಗೆ ಎಷ್ಟು ರೂಪಾಯಿ?’
‘ಐದು ರೂಪಾಯಿ’ ಎಂದ ಕಂಡಕ್ಟರ್.
‘ಮತ್ತೆ ನಮ್ಮ ತಮ್ಮ ಹೇಳ್ತಿದ್ದ ನಾಲ್ಕು ರೂಪಾಯಿ ಅಂತ’
‘ಹೂಂ… ಹೌದೋ ತಮ್ಮಾ… ಹಿಂದೆ ನಾಲ್ಕು ರೂಪಾಯಿಯಿತ್ತು. ಈಗ ರೇಟು ಹೆಚ್ಚು ಮಾಡಿದ್ದಾರೆ… ನಿನ್ನತ್ರ ಐದು ರೂಪಾಯಿ ಇದ್ರೆ ಹತ್ತು… ಇಲ್ಲದಿದ್ದರೆ ಇಳಿ…’ ಎಂದುಬಿಟ್ಟ ಕಂಡಕ್ಟರ್.
ಗಣಪತಿಗೆ ನಿಂತಲ್ಲೇ ಒಮ್ಮೆಲೇ ಭೂಮಿಯೇ ಕುಸಿದಂತಾಯಿತು. ನಿರಾಸೆಯಿಂದ ಬಸ್ಸಿನಿಂದಿಳಿದು ಮನೆಯತ್ತ ಹೆಜ್ಜೆ ಹಾಕತೊಡಗಿದ. ಮೀನುಪೇಟೆಯ ಹತ್ತಿರ ಬರುತ್ತಲೇ ಮತ್ತೆ ನಾಗರಾಜ ಎದುರಾದ. ಈ ಸಲ ಗಣಪತಿ ಅವನನ್ನು ನೋಡಿ ಭಯಪಡಲಿಲ್ಲ. ‘ಏನು… ದುಡ್ಡು ತಗೊಳ್ತನಾ? ತಗೊಂಡ್ರೆ ತಗೊಳ್ಲಿ ಬಿಡು… ನನಗೆ ಊರಿಗೆ ಹೋಗಲಿಕ್ಕೆ ಸಾಕಾಗದ ದುಡ್ಡು ಇದ್ದರೆಷ್ಟು ಬಿಟ್ಟರೆಷ್ಟು?’ ಎಂದು ಉದಾಸೀನತೆ ತೋರಿಸಿದ.
‘ಅರೆ! ಊರಿಗೆ ಹೋಗ್ತೇನೆಂದು ಹೋದವ ಮತ್ಯಾಕೆ ವಾಪಸ್ ಬಂದ್ಯೋ!’ ಎನ್ನುತ್ತ ನಾಗರಾಜ ಗಣಪತಿಯ ಬಳಿ ಬಂದ. ಗಣಪತಿ, ‘ಒಂದು ರೂಪಾಯಿ ಕಡಿಮೆಯಾಯ್ತು ಮಾರಾಯ… ಈಗ ತೊರೆಗಜನಿಗೆ ಐದು ರೂಪಾಯಿ ಆಗದಂತೆ… ಕಂಡಕ್ಟರ್ ಬಸ್ಸಿನಿಂದ್ ಇಳಿ ಅಂದ್ಬಿಟ್ಟ’ ಎಂದು ಬೇಸರದ ಮುಖ ಮಾಡಿದ.
ಅವನ ಮುಖ ನೋಡಿ ನಾಗರಾಜ ಒಂದು ಕ್ಷಣ ಯೋಚಿಸಿದ. ‘ಹೇ… ಅದಕ್ಯಾಕೆ ಚಿಂತೆ ಮಾಡ್ತಿ?’ ಎಂದು ತನ್ನ ಚಡ್ಡಿ ಕಿಸೆಯಲ್ಲಿ ಕೈಹಾಕಿ ಒಂದು ರೂಪಾಯಿ ತೆಗೆದು ಗಣಪತಿಯ ಕೈಗಿತ್ತು, ‘ಹೂಂ… ಈಗ ಐದು ರೂಪಾಯಿ ಆಯ್ತಲ್ಲ… ಹೋಗು ಊರಿಗೆ’ ಎಂದ. ಗಣಪತಿಗೆ ತನ್ನ ಕಣ್ಣನ್ನು ತನಗೇ ನಂಬಲಾಗಲಿಲ್ಲ. ನಾಗರಾಜನ ಮುಖ ಮುಖ ನೋಡಿದ.
‘ಏಯ್… ಹೋಗೋ ಬೇಗ… ತಡ ಮಾಡಿದ್ರೆ ಬಸ್ಸು ಹೋಗ್ತದೆ’ ಎಂದು ನಾಗರಾಜ ದೂಡುತ್ತಲೇ ಗಣಪತಿಯನ್ನು ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದ. ಆಗಲೇ ಬಸ್ ಹೊರಡಲು ತಯಾರಾಗಿತ್ತು. ಗಣಪತಿ ಹತ್ತುತ್ತಲೇ ಬಸ್ ಹೊರಟೇಬಿಟ್ಟಿತು. ಕೃತಜ್ಞತೆಯಿಂದ ನಾಗರಾಜನತ್ತ ಕೈ ಬೀಸಿದಾಗ ಅವನ ಗಂಟಲು ಉಬ್ಬಿ ಬಂದಿತ್ತು. ನಾಗರಾಜ ಮರುಟಾಟಾ ಮಾಡಿದ್ದೂ ಕಾಣದಷ್ಟು ಅವನ ಕಣ್ಣು ಮಂಜಾಗಿತ್ತು!
-ಗಣೇಶ ಪಿ. ನಾಡೋರ
