
ನೈಗಾಂವ್ ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ. ಶಿಕ್ಷಕಿಯೊಬ್ಬರು ಕೈಚೀಲವೊಂದನ್ನು ಹೆಗಲಿಗೇರಿಸಿ ಮುನ್ನಡೆಯುತ್ತಿದ್ದರು. ‘ಇವಳೊಬ್ಬಳು ಗುರುವಂತೆ ಗುರು! ರೊಟ್ಟಿ ತಟ್ಟಕೊಂಡು ಮನೇಲಿ ಬಿದ್ದಿರೋದು ಬಿಟ್ಟು ಊರವರಿಗೆಲ್ಲಾ ಶಾಲೆ ಕಲಿಸ್ತಾಳಂತೆ’ ಎಂದು ಚುಚ್ಚು ನುಡಿಯುತ್ತಿದ್ದರು.
ಯುವಕರಷ್ಟೇ ಅಲ್ಲ, ಕೆಲ ಮಹಿಳೆಯರು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು. ಕೆಲವರು ಕೆಸರು, ಸೆಗಣಿ ಎರಚುತ್ತಿದ್ದರು. ಇಷ್ಟಾದರೂ ಮರುಪ್ರತಿಕ್ರಿಯಿಸದೇ ಎರಚುವ ಸಗಣಿ, ತೂರುವ ಕಲ್ಲುಗಳನ್ನು ಹೂಗಳಂತೆ ಸ್ವೀಕರಿಸಿ ಮನೆಯಿಂದ ಬರುವಾಗ ಕೈ ಚೀಲದಲ್ಲಿ ಮತ್ತೊಂದು ಸೀರೆ ತಂದು ಮಕ್ಕಳು ಬರುವುದಕ್ಕಿಂತ ಮುಂಚಿತವಾಗಿ ಉಟ್ಟುಕೊಂಡು ಪಾಠ ಮಾಡುತ್ತಿದ್ದರಂತೆ. ಮರುಮಾತಿಲ್ಲದೆ ಮೌನವೇ ಉತ್ತರದಂತಿದ್ದ ಇವರ ನಡೆಯನ್ನು ಗುರುತಿಸಿ ಸಗಣಿ ಎರಚಿದವರೇ ಸರಿ ದಾರಿಗೆ ಬಂದರು. ದಿನಗಳೆದಂತೆ ಮರುಮಾತಿಲ್ಲದೇ ತಮ್ಮ ವಿರೋಧ ಬಿಟ್ಟು ಇವರ ಶಿಷ್ಯರಾದರು. ಹೀಗೆ 1848 ರಿಂದ 1852 ರವರೆಗೆ ಕೇವಲ 4 ವರ್ಷಗಳಲ್ಲಿ ಸತಾರ ಜಿಲ್ಲೆಯಾದ್ಯಂತ ಸುಮಾರು 18 ಶಾಲೆಗಳನ್ನು, ಒಂದು ಶಿಶುಪಾಲನಾ ಕೇಂದ್ರ, 2 ಅನಾಥಶ್ರಮ, ತೆರೆದು ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅಕ್ಷರ ಭಾಗ್ಯ ತಲುಪಿಸಿದ ಶಾರದೆಯಾಗಿ ಕಂಗೊಳಿಸಿದವರೇ ದೇಶದ ಪ್ರಥಮ ಮಹಿಳಾ ಶಿಕ್ಷಕಿ, ಶೈಕ್ಷಣಿಕ ಮನ್ವಂತರೆ ಸಾವಿತ್ರಿಬಾಯಿ ಫುಲೆ.
ಇವರು ಮಹಾರಾಷ್ಟ್ರದ ಸತ್ತಾರ ಜಿಲ್ಲೆಯ ನೈಗಾಂವ ಎಂಬ ಗ್ರಾಮದಲ್ಲಿ ಜನವರಿ 3, 1831 ರಂದು ಹುಟ್ಟಿದರು. ತಂದೆ ನೇವಸೆ ಪಾಟೀಲ. ತಮ್ಮ 8ನೇ ವಯಸ್ಸಿನಲ್ಲಿ ಜ್ಯೋತಿಬಾ ಅವರನ್ನು ಅಂದಿನ ಪದ್ಧತಿಯಂತೆ ಬಾಲ್ಯವಿವಾಹವನ್ನಾಗಿ ಅನೇಕ ವಯೋಸಹಜ ಸಾಮಾಜಿಕ ಸಂಕಷ್ಟವನ್ನೆದುರಿಸಿದ್ದರೂ, ಆದರ್ಶ ಪತಿ ಜ್ಯೋತಿಬಾ ಅವರಿಂದಲೇ ಶಿಕ್ಷಣ ಹಾಗೂ ಸಾಮಾಜಿಕ ಅರಿವನ್ನು ಪಡೆದರು. ಪತಿ ಜ್ಯೋತಿಬಾ ಅವರು ತುಂಬಾ ಜ್ಞಾನವಂತರಾಗಿದ್ದು, ಸಾಮಾಜಿಕ ಹರಿಕಾರರೂ ಆಗಿದ್ದರು.
ಸಾವಿತ್ರಿ ಬಾಯಿ ಶ್ರೀ ಭಿಡೆ ಎಂಬುವವರ ಮನೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದು ಪ್ರಧಾನಶಿಕ್ಷಕಿಯಾಗಿ ಹತ್ತಾರು ಹೆಣ್ಣುಮಕ್ಕಳಿಗೆ ಅರಿವಿನ ಮೂಲಕ ಭವಿಷ್ಯವನ್ನು ಕಲ್ಪಿಸಿದ್ದರು. 1860 ರ ದಶಕದಲ್ಲಿ ಸಾಮಾಜಿಕ ಅನಿಷ್ಟಗಳಾದ ಬಾಲ್ಯವಿವಾಹ, ಸತಿ ಸಹಗಮನ, ವಿಧವಾ ಕೇಶಮುಂಡನೆ ವಿರುದ್ಧ ಹೋರಾಡಿ ಸಾಮಾಜಿಕ ಬಹಿಷ್ಕಾರಕ್ಕೂ ಒಳಗಾಗುತ್ತಾರೆ. ಆದರೂ ಯಾವುದಕ್ಕೂ ಧೃತಿಗೆಡದೆ ಅನಾಥರಿಗಾಗಿ ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿವಾಹ ಬಾಹೀರವಾಗಿ ಹುಟ್ಟಿದ ಅನೇಕ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಮೂಲಕ ಮಹಿಳೆಯರ ಮತ್ತು ಮಕ್ಕಳ ನೂರಾರು ಪುನರ್ವಸತಿ ನೆಲೆ ಕಲ್ಪಿಸಿಕೊಟ್ಟಿದ್ದರು. ಸಾವಿತ್ರಿಬಾಯಿ ಅವರು ಅಂದಿನ ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾಗಿದ್ದರು.
19ನೇ ಶತಮಾನದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೇ ನೇರವೇರಿಸಿದ್ದುದು ಇವರ ಕ್ರಾಂತಿಕಾರಕ ನಡೆಯಾಗಿತ್ತು.
ಸ್ವತಃ ಸಾಹಿತಿಗಳಾಗಿದ್ದ ಜ್ಯೋತಿಬಾ ‘ಕಾವ್ಯ ಫುಲೆ’, ‘ಭುವನಕಾಶಿ ಸುಬೋಧ ರತ್ನಾಕರ’, ‘ಖರ್ಜೆ’ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಜ್ಯೋತಿಬಾ ಅವರಿಗೆ ಆದರ್ಶ ಪತ್ನಿಯಾಗಿ ಹಗಲಿರುಳು ಹೆಗಲಿಗೆ ಹೆಗಲು ಕೊಟ್ಟು ಸಾಮಾಜಿಕ ಶೈಕ್ಷಣಿಕ ಕ್ರಾಂತಿಯಲ್ಲಿ ಮುಂದುವರಿಯುತ್ತಾರೆ. ಪತ್ನಿಯ ಮೇಲೆ ಅಗಾಧ ಪ್ರೀತಿ ಹೊಂದಿದ ಜ್ಯೋತಿಬಾ ಫುಲೆ ಅವರು ಮಕ್ಕಳಾಗದಿದ್ದರೂ ಮರುಮದುವೆಯಾಗದೆ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು ಅನಾಥ ಮಕ್ಕಳಿಗಾಗಿ ಅವರ ಹೆಸರಿನಲ್ಲಿ ಶಿಶು ಕೇಂದ್ರವನ್ನು ತೆರೆದರು.
ಇವರ ಈ ಸಾಧನೆಗಳನ್ನು ಗುರುತಿಸಿ ಸರಕಾರವು ಈ ವರ್ಷದಿಂದ ಅವರ ಹುಟ್ಟಿದ ದಿನವಾದ ಜನವರಿ 3 ರಂದು ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಸ್ಮರಣೆಯ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಅವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಿರುವುದು ಸ್ವಾಗಾತಾರ್ಹ.
-ಗೋಪಾಲ ನಾಯ್ಕ ಭಾಶಿ
ಶಿಕ್ಷಕರು, ಸಿದ್ದಾಪುರ
