
– ಡಿ. ರಾಮಪ್ಪ ಸಿರಿವಂತೆ, ಅಂಕೋಲಾ
ನಮ್ಮ ಶಾಲೆಗಳ ಇಂದಿನ ಸ್ಥಿತಿಗತಿ, ಮಕ್ಕಳ ಇಂದಿನ ಶಿಕ್ಷಣ ಕ್ರಮ, ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಕರ ಧೋರಣೆಯ ಬಗ್ಗೆ, ನಮ್ಮ ಪೋಷಕರ ವಿಸ್ಮøತಿಯ ಬಗ್ಗೆ ಆತಂಕ ಮತ್ತು ಬೇಸರದಿಂದಿದ್ದಾಗ ತೆತ್ಸುಕೊ ಕುರೊಯನಾಗಿಯ ತೊತ್ತೋಚಾನ್”ಪುಸ್ತಕ ಸಿಕ್ಕಿತು.
ಈ ತೆತ್ಸುಕೊ ಕುರೊಯನಾಗಿ ಜಪಾನಿನವಳು ಮತ್ತು ಜಪಾನಿಯರು ಅಭಿಮಾನದಿಂದ ತುಂಬಾ ಮೆಚ್ಚಿದ ಪ್ರಖ್ಯಾತ ಹೆಸರು. ಜಪಾನಿ ಟೆಲಿವಿಷನ್‍ನ
ಅನಭಿಶಕ್ತ ರಾಣಿ -–14 ಬಾರಿ ಫೆವರಿಟ್ ಟೆಲಿವಿಷನ್ ಪರ್ಸನಾಲಿಟಿ ಪ್ರಶಸ್ತಿ ಪಡೆದವಳು!
ಒಪೇರಾ ಹಾಡುಗಾರ್ತಿ, ನಟಿ, ಯುನಿಸೆಫ್ ಸೌಹಾರ್ದ ರಾಯಭಾರಿ ಮತ್ತು ಲೇಖಕಿ! ಚಿಕ್ಕವಳಿದ್ದಾಗ ಕೊಂಚ ತುಂಟಿಯಾಗಿದ್ದ ಈಕೆಯನ್ನು ಎಲ್ಲಾ ಶಾಲೆಯವರೂ ಹೊರಗೆ ಹಾಕಿದ್ದರು. ಕೂಲಿಮಾಡಿ ಬದುಕು ಕಟ್ಟಿಕೊಳ್ಳಲು ಹಾಗು ಮಗಳ ಭವಿಷ್ಯ ರೂಪಿಸಲು ಪ್ರಯತ್ನಿಸುತ್ತಿದ್ದ ಅಮ್ಮ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಅಲೆದಲೆದು ದಣಿದು ಕೊನೆಗೆ ಒಂದು ತೊಮೋಯ್ ಗಾಕುನ್(ಪ್ರಾಥಮಿಕ ಶಾಲೆ)ಗೆ ಬರುತ್ತಾಳೆ.
ಅದು, ಪ್ರಖ್ಯಾತ ಶಿಕ್ಷಣತಜ್ಞ, ಸೆಸಾಕು ಕೊಬಾಯೆಷಿಯವರು ನಡೆಸುತ್ತಿದ್ದ ಶಾಲೆ ಎಂದು ಆಕೆಗೇನೂ ತಿಳಿದಿರಲಿಲ್ಲ; ತಿಳಿಯುವಷ್ಟು ವಿದ್ಯಾವಂತಳೂ ಆಕೆ ಆಗಿರಲಿಲ್ಲ. ಮಕ್ಕಳ ಪ್ರಕೃತಿಜನ್ಯ ಸಾಮಥ್ರ್ಯವನ್ನು ಅರಿತು ಅದನ್ನೇ ಉದ್ಧೀಪಿಸುವ ಪರಿಸರ ನಿರ್ಮಾಣ ಮಾಡುತ್ತಿದ್ದ ಸೆಸಾಕು ಕೊಬಾಯೆಷಿಯವರ ಪ್ರಯೋಗಗಳು ಇಂದಿಗೂ ನಮ್ಮ ಪೋಷಕರಿಗೆ ಮತ್ತು ಶಿಕ್ಷಕರಿಗೆ ಪ್ರಸ್ತುತ. ತನ್ನ ಬಾಲ್ಯಶಿಕ್ಷಣದ ಅನುಭವಗಳನ್ನು ನೆನಪುಮಾಡಿ ತೊತ್ತೋಚಾನ್‍ನಲ್ಲಿ (ಕಿಟಕಿಯಲ್ಲಿ ಪುಟ್ಟ ಬಾಲೆ) ತೆತ್ಸುಕೊ ಕುರೊಯನಾಗಿ ಬರೆದಿದ್ದಾಳೆ. ಅದನ್ನು ಆಕೆಯ ಮಾತಿನಲ್ಲೇ ಸಂಕ್ಷಿಪ್ತವಾಗಿ ಕೇಳಿ:
ಕಿಟಕಿಯಲ್ಲಿ ಪುಟ್ಟ ಬಾಲೆ –
ತೆತ್ಸುಕೊ ಕುರೊಯನಾಗಿ –
ನನ್ನ ಹೆಸರು ತೆತ್ಸುಕೊ ಕುರೋಯನಾಗಿ. ಮನೆಯಲ್ಲಿ ನನ್ನನ್ನು “ತೊತ್ತೋ ಚಾನ್” ಎಂದು ಕರೆಯುತ್ತಾರೆ. ನಾನು ಟೋಕಿಯೊ ನಗರದ ನೋಗಿಸಕದ ಒಂದು ಬಡ ಕುಟುಂಬದಲ್ಲಿ ಹುಟ್ಟಿದೆ. ಅಂದು ನಾನು ಕೂಡ ಎಲ್ಲಾ ಮಕ್ಕಳಂತೆ ಮತ್ತು ಎಲ್ಲಾ ಹಿರಿಯರು ಬೈದುಕೊಳ್ಳುವಂತೆ ತಲೆಹರಟೆಯ ತುಂಟಿ. ಈ ತುಂಟತನದ ತಲೆಹರಟೆ ಎಷ್ಟಿತ್ತೆಂದರೆ, ಒಂದನೆ ತರಗತಿಯಲ್ಲಿ ಅದಾಗಲೆ ನನ್ನನ್ನು ಕೆಲವು ಸಾರ್ವಜನಿಕ ಶಾಲೆಗಳಿಂದ ಹೊರಹಾಕಿದ್ದರು. ಇದಾವುದರ ಪರಿವೆ ಇಲ್ಲದ ನಾನು ಕಂಡದ್ದನ್ನೆಲ್ಲಾ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ; ಪ್ರಶ್ನಿಸುತ್ತಿದ್ದೆ. ಕೂಲಿ ಮಾಡಿ ಸಾಕುತ್ತಿದ್ದ ನನ್ನ ತಾಯಿ ಶಾಲೆಯಿಂದ ಶಾಲೆಗೆ ಅಲೆದಲೆದು ಸುಸ್ತಾಗಿದ್ದರು. ಅಸ್ಥಿರ ಬದುಕಿನ ಕಷ್ಟದಲ್ಲಿ, ನನ್ನನ್ನು ಶಾಲೆಗೆ ಸೇರಿಸುವ ಒತ್ತಡದಲ್ಲಿ ಮತ್ತು, ಶಾಲೆಯವರು ಕೇಳುವ ಪ್ರಶ್ನೆಗಳಿಗೆ, ಅವರಿಗೆ ಇಷ್ಟವಾಗುವಂತೆ ಉತ್ತರಿಸಬೇಕಾದ ಅನಿವಾರ್ಯ ಆತಂಕದಲ್ಲಿ ಆಕೆಗೆ ನನ್ನ ಪ್ರಶ್ನೆಗಳು ಬಾಲಿಶ ಎನ್ನಿಸುತ್ತಿದ್ದವೇನೋ, ಉತ್ತರಿಸುತ್ತಿರಲಿಲ್ಲ. ಆದರೆ, ಸಿಡುಕುತ್ತಲೂ ಇರಲಿಲ್ಲ; ಹಂಗಿಸುತ್ತಲೂ ಇರಲಿಲ್ಲ!
ಹೀಗೆ ನನ್ನ ತಾಯಿ ನನ್ನ ಕೈಹಿಡಿದು ಅಲೆಯುತ್ತ, “ತೊಮೋಯ್ ಗಾಕುನ್” ಎಂಬ ಒಂದು ಪ್ರಾಥಮಿಕ ಶಾಲೆಗೆ ನನ್ನನ್ನು ಕರೆತಂದರು. ವಿರಳ ವಸತಿಯ ವಿಶಾಲ ಜಾಗದಲ್ಲಿದ್ದ ಆ ಶಾಲೆಯ ಆವರಣದಲ್ಲಿ ಮಕ್ಕಳು ನಿರ್ಭೀಡೆಯಿಂದ ಕುಣಿದಾಡುತ್ತಿದ್ದರು. ದುಗುಡತುಂಬಿದ ಆತಂಕದಲ್ಲಿ ನನ್ನ ತಾಯಿ ಶಾಲಾಕಛೇರಿಯ ಒಳಗೆ ನನ್ನ ಕೈಹಿಡಿದು ನಡೆಯುತ್ತಿದ್ದಂತೆ, ಮುಖ್ಯೋಪಾಧ್ಯಾಯರು ನನ್ನನ್ನೇ ಗಮನಿಸುತ್ತಿದ್ದರು ಅನ್ನಿಸುತ್ತೆ; ಅವರೆದುರಿಗೆ ನಿಂತು ಅಮ್ಮ ಬಾಯ್ಬಿಡುವ ಮೊದಲೇ, ನಾನು ಮುಖ್ಯೋಪಾಧ್ಯಾಯರನ್ನು ಎದುರಿಸಿ, ನನ್ನ ಎಳಸು ಪ್ರಶ್ನೆಗಳನ್ನು ಇಡುತ್ತಾ ಹೋದೆ.
ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ನನ್ನ ತಾಯಿಗೆ ಕಣ್ಸನ್ನೆ ಮಾಡಿ, “ನೀವಿನ್ನು ಹೋಗಬಹುದು” ಎಂದಾಗ ಆಕೆ ಗಲಿಬಿಲಿಗೊಂಡು, ನನ್ನ ಶಾಲಾ ಸೇರ್ಪಡೆ ಏನಾಗುವುದೋ ಎಂಬ ಆತಂಕದಲ್ಲೇ ಕೆಲಸಕ್ಕೆ ಹೊರಟುಹೋದಳು. ನನ್ನ ಎದುರಿನ ಕುರ್ಚಿಯಲ್ಲಿ ಕುಳಿತು, ಮುಂದಿದ್ದ ಟೇಬಲ್ ಮೇಲೆ ಎರಡೂ ಮೊಣಕೈ ಊರಿ, ಹಸ್ತಗಳನ್ನು ಗಲ್ಲಗಳಿಗೆ ಆನಿಸಿ ನನ್ನನ್ನೇ ದೃಷ್ಟಿಸಿ ನೋಡುತ್ತ ನಾನು ಕೇಳುತ್ತಿದ್ದ ಪ್ರಶ್ನೆಗಳನ್ನು ಮುಖ್ಯೋಪಾಧ್ಯಾಯರು ಉತ್ತರಿಸಲು ಪ್ರಾರಂಭಿಸಿದರು.
ನಾನೂ ಉತ್ಸುಕಳಾಗಿ ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಈವರೆಗೆ ನನ್ನನ್ನು ಇಷ್ಟು ಆಸಕ್ತಿಯಿಂದ ಕೇಳಿಸಿಕೊಂಡವರಿರಲಿಲ್ಲ. ನನ್ನ ಬೆರಗಿಗೆ ಕಾರಣವಾಗಿದ್ದ ನೂರಾರು ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸುತ್ತ, ಮುಖ್ಯೋಪಾಧ್ಯಾಯರು ಉತ್ತರಿಸುತ್ತಿದ್ದರು. ಅವರ ಹತ್ತಿರ ಅಷ್ಟು ಸಮಯ ಇತ್ತೇ? ಮನೆಯ ಕಿಟಕಿಯ ಮುಂದೆ ನಿಂತ ಬಾಲಕಿಯೊಬ್ಬಳು ಹೊರಗಿನ ವಿಶಾಲ ಪ್ರಪಂಚವನ್ನು ಹೇಗೆ ನೋಡಬಹುದು? ಆ ಮುಗ್ಧ ಹುಡುಕಾಟಗಳನ್ನು ತಲೆಹರಟೆಯೆನ್ನದೆ, ತಾದಾತ್ಮ್ಯದಲ್ಲಿ ಆಲಿಸಿ ಉತ್ಸುಕತೆಯಿಂದ ಉತ್ತರಿಸುತ್ತಿದ್ದರು. ಕನಿಷ್ಟ ಮೂರು ಗಂಟೆಗಳ ಕಾಲ ನನ್ನನ್ನು ಅಲಿಸಿದ ಅವರೆದುರು ಕೊನೆಗೆ ನನ್ನೆಲ್ಲಾ ಪ್ರಶ್ನೆಗಳು ಖಾಲಿಯಾದಂತೆನಿಸಿ, ಜೀವನದಲ್ಲಿ ಮೊದಲಬಾರಿ ನನಗೆ ನಾಚಿಕೆಯೆನಿಸಿತು. ಪೆಚ್ಚಾಗಿ ನಕ್ಕೆ.
“ನೀನೀಗ ನನ್ನ ವಿದ್ಯಾರ್ಥಿ”ಎಂದು ಆತ್ಮೀಯವಾಗಿ ಅಪ್ಪಿಕೊಂಡರು. ನನ್ನನ್ನು ಆವರೆಗೂ ಹಿಡಿದಿಟ್ಟ ವ್ಯಕ್ತಿ, ಪ್ರಸಿದ್ಧ ಶಿಕ್ಷಣ ತಜ್ಞ ಸೊಸಾಕು ಕೊಬಾಯಷಿ ಎಂದು ನನಗೇನು ಗೊತ್ತು? ಆದರೆ, ಈ ಶಾಲೆಯ ವಾತಾವರಣ ಮತ್ತು ಕೊಬಾಯಷಿಯವರ ಸ್ನೇಹಪೂರ್ಣ ವ್ಯಕ್ತಿತ್ವ ನನ್ನನ್ನು ಸೆರೆಹಿಡಿಯಿತು; ಅಭಿವ್ಯಕ್ತಿಗಾಗಿ ನಾನು ಬಳಸುತ್ತಿದ್ದ ಹೆಚ್ಚಿನ ಸ್ವಾತಂತ್ರ್ಯವೇ, ಅನೇಕ ಸಾರ್ವಜನಿಕ ಶಾಲೆಗಳಿಂದ ನನ್ನ ಉಚ್ಛಾಟನೆಗೆ ಕಾರಣವಾಗಿತ್ತು ಎಂದು ನನಗೆಲ್ಲಿ ಗೊತ್ತಿತ್ತು? ಧೃತಿಗೆಡದೆ ತೊಮೋಯ್ ಗಾಕುನ್ ಎಂಬ ಈ ಶಾಲೆಗೆ ನನ್ನನ್ನು ಕರೆತಂದ ಅಮ್ಮನ ಬಗ್ಗೆ ನನಗೆ ತುಂಬಾ ಖುಷಿಯಾಯ್ತು.
ಈ ಶಾಲೆಯಲ್ಲಿ ನಾನು ಕಳೆದ ಸಮಯ, ಪಡೆದ ಸ್ನೇಹಿತರು, ಕಲಿತ ಪಾಠ, ಮತ್ತು ಕಲಿಕೆಯ ಶಕ್ತಿಶಾಲಿಯಾದ ವಾತಾವರಣ ಇವುಗಳನ್ನು ತೊತ್ತೋಚಾನ್‍ನಲ್ಲಿ ವರ್ಣಿಸಿದ್ದೇನೆ.
ಈ ಎಲ್ಲವನ್ನು ಮಗುವಾಗಿ ಅನುಭವಿಸಿ ಅದೇ ಮಗುವಿನ ಕಣ್ಣುಗಳ ಮೂಲಕ ನಿಮಗೆ ನೀಡಿದ್ದೇನೆ. ಬೆಲೆಬಾಳುವ ಯೂನಿಫಾರ್ಮ್, ಟೈ, ಶೂಗಳೆಂಬ ಆಡಂಬರಕ್ಕೆ ಜೋತುಬೀಳದ ಶಾಲೆಯ ಸಾಮಾನ್ಯ ವಾತಾವರಣವು, ಮುಗ್ಧ ಮಗುವಿಗೆ ಹೇಗೆ ಆನಂದ ಮತ್ತು ಉತ್ಸಾಹದ, ಸುಂದರವಾದ ಅತ್ಯಾಕರ್ಷಕ ವಿಶ್ವವಾಗಿ ರೂಪಾಂತರವಾಗುತ್ತದೆ! ಕೊಬಾಯಷಿಯವರು ವಿದ್ಯಾರ್ಥಿಗಳಿಗೆ ಆಸಕ್ತಿ ಕೆರಳಿಸುವ ಹೊಸ ಚಟುವಟಿಕೆಗಳನ್ನು ಹೇಗೆ ಪರಿಚಯಿಸುತಿದ್ದರು ಎಂಬುದನ್ನು ಪಾಲಕರಾಗಿ/ಶಿಕ್ಷಕರಾಗಿ ಎಲ್ಲರೂ ತಿಳಿಯಬಹುದಾಗಿದೆ. ಅವರು, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು, ದೇಹ ಮತ್ತು ಮನಸ್ಸಿನ ಸಾತ್ವಿಕ ಗುಣಗಳನ್ನು ವೃದ್ಧಿಸಲು ಪ್ರಯತ್ನಪಡುತ್ತಿದ್ದರು. ಪ್ರತಿಪಾಠಕ್ಕೆ ಸಂಭಂದಪಟ್ಟ ಸ್ಥಳ/ವಸ್ತುವೀಕ್ಷಣೆ ಮುಂತಾದುವುಗಳನ್ನು ಪಠ್ಯಕ್ರಮದ ಅವಿಭಾÁಜ್ಯ ಅಂಗವಾಗಿ ರೂಪಿಸುತ್ತಿದ್ದರು.
ಮಕ್ಕಳಲ್ಲಿ ಸಮಾನತೆ ತರಲು ಮಾಡುವ ಪ್ರಯತ್ನ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಬಗ್ಗೆ ಅವರ ಕಾಳಜಿ ಗಮನಾರ್ಹವಾದುದಾಗಿತ್ತು. ಸದೃಢ ದೇಹವನ್ನಷ್ಟೇ ಅಪೇಕ್ಷಿಸುವ ಇಂದಿನ ಆಟಗಳ ಬದಲಿಗೆ, ವಿವಿಧ ಚಟುವಟಿಗಳನ್ನು ಸಂಕೀರ್ಣಗೊಳಿಸಿ ಹೆಣೆದು, ನಮ್ಮ ದೈಹಿಕ ಸಾಮಥ್ರ್ಯಮಾತ್ರವಲ್ಲದೆ, ಬೌದ್ಧಿಕ ಕ್ಷಮತೆ ಮತ್ತು ಮಾನಸಿಕ ಸ್ವಸ್ಥತೆಗಳನ್ನು ಹೊಮ್ಮಿಸುವ ಆಟಗಳನ್ನು ಅವರು ರೂಪಿಸಿ ಆಡಿಸುತ್ತಿದ್ದರು. ಅಂದು ಜಪಾನ್ ರಾಜಾಡಳಿತದ ಅಡಿಯಲ್ಲಿತ್ತು. ಅಂಗವಿಕಲತೆಯನ್ನು, ಅನ್ಯ ಧರ್ಮಗಳನ್ನು ಮತ್ತು, ಇಂಗ್ಲಿಷ್ ಭಾಷೆಯನ್ನು ಸಹಿಸದ ಪರಿಸರ ಮತ್ತು ಪರಿಸ್ಥಿತಿ ಅಂದಿನ ರಾಜಾಡಳಿತದಲ್ಲಿತ್ತು. ಅಂತಹ ಪರಿಸ್ಥಿತಿಯಲ್ಲಿ ಇಂತಹ ಶಾಲೆಯೊಂದು ನಡೆಯುತ್ತಿದ್ದುದು ಗಮನಾರ್ಹ. ಅಂಗವಿಕಲತೆ, ಅನ್ಯ ಧರ್ಮ ಮತ್ತು ಇಂಗ್ಲಿಷ್ ಭಾಷೆಯನ್ನು ದ್ವೇಷಿಸುವ ರಾಜಾಡಳಿತದಲ್ಲಿ, ನಾನು, ಜಪಾನಿ ಭಾಷೆ ಮತ್ತು ಜಪಾನಿ ಶಿಷ್ಟಾಚಾರದ ಮೂಲಭೂತ ನಿಯಮಗಳನ್ನು ಅರಿಯದ, ಅಮೇರಿಕದಲ್ಲಿ ಹುಟ್ಟಿದ ಅದರಲ್ಲೂ, ಪೋಲಿಯೋ ಪೀಡಿತ ಕ್ರಿಶ್ಚಿಯನ್ ಹುಡುಗನನ್ನೂ ಸ್ನೇಹದಿಂದ ಮತ್ತು ಪ್ರೀತಿಯಿಂದ ಕಾಣುವ ವಾತಾವರಣದಲ್ಲಿ ಕಲಿತೆ. ರಾಜನ ಆಸ್ಥಾನದಲ್ಲಿ ಕವಿಯಾಗಿದ್ದವರೊಬ್ಬರ ಮಗು ಕೂಡ ಈ ಸಾಂಪ್ರದಾಯಿಕ ಶಾಲೆಯ ವಿದ್ಯಾರ್ಥಿಯಾಗಿದ್ದುದು ಇಂದಿನ ಶೈಕ್ಷಣಿಕ ಪರಿಸರದಲ್ಲಿ ಯೋಚನೆಗೆ ನಿಲುಕದ್ದು!
ನಾಗಸಾಕಿ-ಹಿರೋಷಿಮಾ ಮೇಲೆ ಅಮೇರಿಕನ್ನರು ಹಾಕಿದ ನ್ಯೂಕ್ಲಿಯರ್ ಬಾಂಬ್ ಈ ಶಾಲೆಯನ್ನು, ನನ್ನ ತಾಯಿಯಂತೆ ತಮ್ಮ ಮಕ್ಕಳ ವ್ಯಕ್ತಿತ್ವ ರೂಪಿಸಲು ಹೆಣಗುವ ತಾಯಂದಿರ ಕನಸುಗಳನ್ನು ಹೊಸಕಿ ಹಾಕಿತು. ಮತ್ತೊಮ್ಮೆ ಇಂತಹದೇ ಶಾಲೆಯನ್ನು ಕಟ್ಟುವೆ ಎಂದು ಭರವಸೆ ತೋರುತ್ತಿದ್ದ ಕೊಬಾಯಷಿಯವರ ಕನಸು ಏಕೋ ಈಡೇರಲಿಲ್ಲ.ನಾನು ಕಲಿತ ಶಾಲೆಯ, ಮೇಲೆ ತಿಳಿಸಿದ ನೆನಪುಗಳನ್ನು 1981ರಲ್ಲಿ ದಾಖಲಿಸಿ ತೊತ್ತೋಚಾನ್”ಬರೆದೆ. ಪ್ರಕಟಗೊಂಡ ತಕ್ಷಣವೇ ಅದು ಹೆಚ್ಚು ಮಾರಾಟವಾದ ಅತ್ಯುತ್ತಮ ಪುಸ್ತಕ ಎಂಬ ಹೆಗ್ಗಳಿಕೆ ಪಡೆಯಿತು.
ಇದನ್ನು ನೀವು ಕೂಡ ನಿಮ್ಮ ಮಕ್ಕಳಿಗಾಗಿ ಅಥವ ನೀವು ಕಲಿಸುತ್ತಿರುವ ಚಿಕ್ಕ ವಿದ್ಯಾರ್ಥಿಗಳಿಗಾಗಿ ಒಮ್ಮೆ ಓದುವಿರೆಂದು ಆಶಿಸುತ್ತೇನೆ.
- ತೆತ್ಸುಕೊ ಕುರೋಯನಾಗಿ(ತೊತ್ತೋಚಾನ್)



