ಆಧುನಿಕ ಅನುಕೂಲ, ತಂತ್ರಜ್ಞಾನಕ್ಕಾಗಿ ಮಹಾನಗರಕ್ಕೆ ಹೋಗಬೇಕು, ಕೃಷಿಗೆ ಗ್ರಾಮ ಸೇರಬೇಕು ಎನ್ನುವ ಸಾಮಾನ್ಯ ಗ್ರಹಿಕೆಯೊಂದಿದೆ. ಆದರೆ ಕಾಲ ಈ ಗೃಹಿಕೆ,ಗಾದೆ,ಪರಿಸ್ಥಿತಿಗಳನ್ನು ಬದಲಿಸುತ್ತಿದೆ. ನಗರದಲ್ಲಿ, ನಗರದ ಮನೆಯ ಟಾರಸಿಮೇಲೆ ಕೃಷಿ ಮಾಡಿ ಲಾಭ ಕಂಡವರಿದ್ದಾರೆ. ಗ್ರಾಮೀಣ ಪರಿಸರದಲ್ಲಿದ್ದೂ ಎಲ್ಲಾ ಆಧುನಿಕ ಅನುಕೂಲಗಳೊಂದಿಗೆ ಸುಖವಾಗಿದ್ದವರಿದ್ದಾರೆ. ಇಂಥ ಅಪವಾದಗಳಲ್ಲಿ ಸಂಪಕಂಡದ ಸುನಿಲ್ ನಾಯ್ಕ ಒಬ್ಬರು. ಆಟೋಮೊಬೈಲ್ ಡಿಪ್ಲೊಮಾ ಓದಿ ವಿಜ್ಞಾನ, ತಂತ್ರಜ್ಞಾನ ಎಂದು ನಗರ ಸೇರದೆ, ಹುಟ್ಟೂರಲ್ಲೇ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.
ಇವರ ತೋಟದಲ್ಲಿ ಬೊನ್ಸಾಯಿ ಕಾಳುಮೆಣಸಿನ ಬಳ್ಳಿಗಳಿವೆ. ಅಗರ್ವುಡ್ ಮರಗಳಿವೆ, ಯಾಲಕ್ಕಿ ಗಿಡಗಳಿವೆ ಹೀಗೆ ಮಿಶ್ರ ಕೃಷಿಯಲ್ಲಿ ಎಲ್ಲವನ್ನೂ ಬೆಳೆಯುತ್ತಾ ಪ್ರಯೋಗಶೀಲರಾಗಿ ಕೃಷಿಯಲ್ಲಿ ತೊಡಗಿಕೊಂಡ ಇವರಿಗೆ ಕಾಳುಮೆಣಸು, ಯಾಲಕ್ಕಿ, ಅಡಿಕೆಯಷ್ಟೇ ಆದಾಯ ಕೊಡುತ್ತಿವೆ. ಅಗರ್‍ವುಡ್ ಕೈ ಹಿಡಿಯಬಹುದೆಂದು ಕಾಯುತಿದ್ದಾರೆ. ಮಂಗನಕಾಟದಲ್ಲಿ ಏಲಕ್ಕಿ ಬೆಳೆದ್ದು ಹೇಗೆ ಎಂದರೆ ಬ್ಲೂಟೂತ್ ಮೂಲಕ ತೋಟದಲ್ಲಿ ಸೈರನ್ ಕೂಗಿಸಿ ಮಂಗ ಓಡಿಸುತ್ತೇವೆ ಎನ್ನುತ್ತಾರೆ.
ಅವರ ತೋಟಗಳಲ್ಲಿ ಸಾಂಪ್ರದಾಯಿಕ ಮಾದರಿಯೊಂದಿಗೆ ಆಧುನಿಕ ಅನುಕೂಲಗಳನ್ನೂ ಅಳವಡಿಸಿದ್ದಾರೆ. ಹನಿ ನೀರಾವರಿ ನೀರಿಗಿಂತ ಸ್ಪಿಂಕ್ಲರ್ ನೀರಿನಿಂದ ಭೂಮಿ ಹೆಚ್ಚು ಹಸಿಯಾಗುತ್ತದೆ ಎನ್ನುವ ಸುನಿಲ್ ಕುಮಾರ್ ಅಪ್ಪ-ಅಮ್ಮ ಶಿಕ್ಷಕ-ಶಿಕ್ಷಕಿಯರಾದರೂ ಸರ್ಕಾರಿ ನೌಕರಿ ದೂರದೂರಿನ ಕೆಲಸಕ್ಕೆ ಕೈ ಚಾಚದೆ ಕೃಷಿಗೆ ಒಗ್ಗಿಕೊಂಡು ಯುವಕೃಷಿಕನಾಗಿ ಹೆಸರುಮಾಡುತಿದ್ದಾರೆ.
ಈ ವರ್ಷದ ಬರ-ಮಳೆಗಳು ಎಲ್ಲರಂತೆ ಇವರನ್ನೂ ಬಾಧಿಸಿವೆ ಆದರೆ ಕೃಷಿಯಲ್ಲಿ ಏರು-ಪೇರು ಸಾಮಾನ್ಯ ಎನ್ನುವ ಸುನಿಲ್ ಒಂದುವರ್ಷ ಕಡಿಮೆಯಾದರೆ ಮತ್ತೊಂದು ವರ್ಷ ಹೆಚ್ಚಾಗುತ್ತದೆ ಎನ್ನುವ ಆತ್ಮವಿಶ್ವಾಸದ ಮಾತನ್ನಾಡುತ್ತಾರೆ.
ಕೃಷಿಯಲ್ಲಿ ನಗದಿತ-ನಿಯಮಿತ ಆದಾಯವಿಲ್ಲ ಆದರೆ ಕೃಷಿ ಕೊಡುವ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ ಎನ್ನುವ ಇವರು ಕೃಷಿ-ಆಧಾರಿತ ಮತ್ತು ಪೂರಕ ಚಿಕ್ಕ ಉದ್ಯಮಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಉಳಿಯುವಂತೆ ಮಾಡಬಹುದೆನ್ನುವ ಸುನಿಲ್‍ಕುಮಾರ ಮಲೆನಾಡಿನ ನೀರು, ವಾತಾವರಣ ಬಳಸಿಕೊಂಡು ಇಲ್ಲಿರದಿದ್ದರೆ ಈ ನೈಸರ್ಗಿಕ ಅನುಕೂಲಗಳಿಂದ ವಂಚಿತರಾಗಬೇಕಾಗುತ್ತದೆ ಎನ್ನುತ್ತಾ ಕೃಷಿಯ ಬಗ್ಗೆ ಆಸಕ್ತಿ ತುಂಬಿದ ತಂದೆ-ತಾಯಿಯರ ಸಹಕಾರ, ಆಶೀರ್ವಾದಗಳಿಂದ ಹೀಗಿರಲು ಸಾಧ್ಯವಾಗಿದೆ ಎನ್ನುವದನ್ನು ಮರೆಯದೇ ಹೇಳುತ್ತಾರೆ.