ನೋಡಿದ್ದೀರಾ.. ಜೋಗದ ಗುಂಡಿ

ಲಲಿತಪ್ರಬಂಧ-
ನೋಡಿದ್ದೀರಾ..
ಜೋಗದ ಗುಂಡಿ
-ತಮ್ಮಣ್ಣ ಬೀಗಾರ್
ದೊಡ್ಡ ಕಲ್ಲುಬಂಡೆ, ಅದರ ಆಚೆಗಿನ ನೀರಿನ ಗುಂಡಿ ಎಲ್ಲ ಸಮೀಪ ಇದ್ದಂತೆ ಕಾಣುತ್ತಿತ್ತು. ಹಾಗೆ ಕಾಣಲು ತೊಡಗಿ ಐದು ನಿಮಿಷವೇ ಆಗಿರಬೇಕು. ಹಿಂದೆ ನೋಡಿದರೆ ಅಪ್ಪ ನನಗಿಂತ ಮೆಟ್ಟಿಲು ಹಿಂದೆ ಇದ್ದ. ನಿಲ್ಲು ನಿಲ್ಲು ಎಂದು ಸನ್ನೆ ಮಾಡುತ್ತ ದೊಡ್ಡದಾಗಿ ಕೂಗಿ ಹೇಳಿದ. ನಾನು ನಿಧಾನವಾಗಿ ಕೆಳಗೆ ಇಳಿಯುತ್ತಲೇ ಇದ್ದೆ.
ನನ್ನದು ಜೋಗ ಜಲಪಾತದಿಂದ ಹದಿನೈದು ಇಪ್ಪತ್ತು ಕಿಲೋಮೀಟರಿನಷ್ಟು ಸಮೀಪವೇ ಇರುವ ಊರು. ಬಹಳ ದೂರದ ಊರುಗಳಿಂದ ಜೋಗದ ಜಲಪಾತ ನೋಡಲು ಜನ ಬರುತ್ತಾರೆ ಎಂದು ಕೇಳಿದ್ದೆ. ನಾನೀಗ ಆರನೇ ತರಗತಿ ಓದುತ್ತಿದ್ದರೂ ಜೋಗಕ್ಕೆ ಬಂದಿರಲಿಲ್ಲ. ನನ್ನ ಸ್ನೇಹಿತರೆಲ್ಲ ಜೋಗಕ್ಕೆ ಹೋಗಿ ಬಂದು ದೊಡ್ಡ ಕಲ್ಲುಬಂಡೆಯಂತಹ ಗುಡ್ಡವಿದೆ. ಆ ಗುಡ್ಡದ ತಲೆಯಿಂದ ನೀರು ಕೆಳಗೆ ಬೀಳುತ್ತದೆ. ನೀರು ನೀರಿನಂತೆ ಇರದೆ ಹಾಲಿನಂತೆ ಬಿಳಿ ಬಿಳಿಯಾಗಿ ಕಾಣುತ್ತದೆ. ಜಲಪಾತದ ನೀರು ಬೀಳುವಲ್ಲಿ ನಿಂತಿರುವ ಜನರನ್ನು ಮೇಲಿನಿಂದ ನೋಡಿದರೆ ಲಿಲ್ಲಿಪುಟ್ ಕಥೆಗಳಲ್ಲಿ ಬರುವ ಇಂಚು ಅಳತೆಯ ಮನುಷ್ಯರಂತೆ ಕಾಣುತ್ತಾರೆ ಎಂದೆಲ್ಲ ಹೇಳಿದ್ದರು. ಇದನ್ನೆಲ್ಲ ಕೇಳಿದ್ದ ನನಗೆ ಜೋಗ ಜಲಪಾತ ನೋಡಲೇಬೇಕು ಎಂದು ಆಸೆಯಾಗಿತ್ತು.
ಅಪ್ಪನ ಹತ್ತಿರ ಈಗ ಹೇಗೂ ಶಾಲೆಗೆ ರಜೆ ಇದೆ. ನನ್ನನ್ನು ಜೋಗ ಜಲಪಾತಕ್ಕೆ ಕರೆದುಕೊಂಡು ಹೋಗು ಎಂದು ಹೇಳಿದೆ. “ಏನು, ಈಗ ಜೋಗಕ್ಕೆ ಹೋದರೆ ಏನು ಪ್ರಯೋಜನ. ಅಲ್ಲಿ ನೀರೂ ಇಲ್ಲ, ಮಣ್ಣೂ ಇಲ್ಲ ಬರೇ ಕಲ್ಲು ನೋಡಿಕೊಂಡು ಬರೋದಷ್ಟೆ” ಎಂದ. “ಬೇಸಿಗೆಯಲ್ಲಾದರೆ ಕೆಳಗೆ ಇಳಿಯಬಹುದಂತೆ. ಮೆಟ್ಟಿಲು ಇದೆಯಂತೆ. ಕೆಳಗೆ ಇಳಿಯೋದು ಮಜಾ ಆಗಿರುತ್ತಂತೆ ಎಂದೆ.” “ಮಜಾ ಏನು ಬಂತು, ಕೈ ಕಾಲೆಲ್ಲ ತುಂಡಾಗಿ ಬಿದ್ದ ಹಾಗೆ ನೋವಾಗುತ್ತದೆ. ಅಷ್ಟೇ” ಎಂದ. ಅಪ್ಪ ಆದರೂ, ನಾನು ಹಟ ಬಿಡದೆ ಒತ್ತಾಯ ಮಾಡಿದಾಗ ಒಪ್ಪಿಕೊಂಡ.
“ನನಗಂತೂ ಕಾಲು ನೋಯುತ್ತದೆ. ನೀವಿಬ್ಬರೇ ಹೋಗಿಬನ್ನಿ” ಎಂದು ಅಮ್ಮ ಹೇಳಿದಾಗ ಅಮ್ಮ ಬರುತ್ತಿಲ್ಲವಲ್ಲ ಎಂದು ನನಗೆ ಸ್ವಲ್ಪ ನಿರಾಶೆ ಆಯಿತು. ಅಪ್ಪ ನನ್ನನ್ನು ಬೈಕಿನ ಮೇಲೆ ಕೂಡ್ರಿಸಿಕೊಂಡು ಜೋಗಕ್ಕೆ ಬಂದ. ಬರುವಾಗ ದಾರಿಯಲ್ಲಿ ಸಿಗುವ ದಟ್ಟ ಕಾಡು, ತಂಪುಗಾಳಿ, ಶುದ್ಧ ನೀರು ಯಾವುದು ಮಲೆನಾಡಿನವರೇ ಆದ ನಮಗೆ ವಿಶೇಷ ಎನಿಸಲಿಲ್ಲ. ಆದರೆ ಬಯಲುಸೀಮೆಯ ಕಡೆಯಿಂದ ಬಂದವರು ಹಳ್ಳದಲ್ಲಿ ಇರುವ ಸ್ವಲ್ಪ ನೀರಿನಲ್ಲೇ ಆಟ ಆಡುತ್ತ ರೊಟ್ಟಿ ತಿನ್ನುತ್ತ ಖುಷಿ ಪಡುತ್ತಿರುವುದನ್ನು ಕಂಡೆ.
ಜೋಗಕ್ಕೆ ಬಂದಾಗ ಎತ್ತರವಾದ ಕಲ್ಲಿನ ಗುಡ್ಡವೇ ಎದುರಾಯಿತು. ಒಂದು ಕಡೆ ಮಾತ್ರ ತೆಂಗಿನಮರದ ಗಾತ್ರದ ನೀರು ಬೀಳುತ್ತಿತ್ತು. ಆದರೆ ಆ ಎತ್ತರದ ಕಲ್ಲಿನಗುಡ್ಡ, ಕೆಳಗಿನ ಪ್ರಪಾತ, ತಗ್ಗಿನಲ್ಲಿ ಕಾಣುವ ನೀರಿನ ಗುಂಡಿ, ಹಸಿರು ಕಾಡು, ಇದನ್ನೆಲ್ಲ ನೋಡುತ್ತಿರುವ ದೂರದ ಊರಿನಿಂದ ಬಂದ ಜನ ಎಲ್ಲ ನೋಡಿ ಖುಷಿ ಆಯಿತು.
ಜಲಪಾತದ ಎದುರಿಗೆ ಇರುವ ಗುಡ್ಡದ ಕಡೆ ನಿಂತು ನಾವು ಜಲಪಾತ ನೋಡಬೇಕು. ಜಲಪಾತ ನೋಡುವಾಗ ಕಾಲುಜಾರಿ ಪ್ರಪಾತಕ್ಕೆ ಬೀಳದಿರಲಿ ಎಂದು ಸಿಮೆಂಟ್ ಕಬ್ಬಿಣ ಬಳಸಿ ತಡೆ ಬೇಲಿಯನ್ನು ನಿರ್ಮಿಸಿದ್ದಾರೆ. ನಾನು ಬೇಲಿಯ ಅಡ್ಡಪಟ್ಟಿಯನ್ನು ಹಿಡಿದುಕೊಂಡು ಜಲಪಾತ ನೋಡುತ್ತ ನಿಂತೆ. ಆಗಲೇ ಅಪ್ಪ ಕರೆದು ಮೆಟ್ಟಿಲಿಳಿದು ಕೆಳಗೆ ಹೋಗಿ ಬರೋಣ ಎಂದಿದ್ದು.
ಅಪ್ಪಾ ‘ನೀರು ಬೇಕೇನೋ’ ಎಂದು ದೊಡ್ಡದಾಗಿ ಕರೆದು ಕೇಳಿದ. ಹಿಂದಿರುಗಿ ನೋಡಿದೆ. ಅಪ್ಪ ಒಂದು ಲೀಟರಿನ ಒಂದು ನೀರಿನ ಬಾಟಲಿ ಖರೀದಿ ಮಾಡಿಕೊಂಡು ಬರುತ್ತಿದ್ದ. ನಾನು ಇಳಿಯುತ್ತಿದ್ದ ಮೆಟ್ಟಿಲುಗಳ ಕೆಳಗೆ ನೋಡಿದೆ. ಅಲ್ಲೆಲ್ಲ ಪ್ರವಾಸಿಗರು ಕುಡಿದು ಒಗೆದ ಖಾಲಿ ನೀರಿನ ಬಾಟಲಿಗಳು, ತಿಂಡಿ ಪೊಟ್ಟಣಗಳ ಖಾಲಿ ಕೊಟ್ಟೆಗಳು ತುಂಬಿ ಹೋಗಿದ್ದವು.
ಸರ್…. ಪ್ಲಾಸ್ಟಿಕ್‍ನಿಂದ ಆಗುವ ಪರಿಸರ ಮಾಲಿನ್ಯದ ಬಗ್ಗೆ ಹೇಳಿದ್ದು ನೆನಪಾಯಿತು. ಈ ರೀತಿ ಕಂಡಲ್ಲಿ ಒಗೆಯುವ ಬದಲು ಅಲ್ಲಲ್ಲಿ ಕಸದ ಬುಟ್ಟಿ ಇಟ್ಟು ಅದರಲ್ಲಿ ಸಂಗ್ರಹಿಸಬಹುದಿತ್ತು ಅಂದುಕೊಂಡೆ. ಕಲ್ಲು ಬಂಡೆ, ನೀರಿನ ಗುಂಡಿ ಸಮೀಪ ಇರುವಂತೆ ಕಾಣುತ್ತಿತ್ತಾದರೂ ಇನ್ನೂ ದೂರವೇ ಇತ್ತು. ನನ್ನ ಕಾಲೂ ಸ್ವಲ್ಪ ನೋಯಲುತೊಡಗಿತ್ತು. ಆದರೆ ಜಲಪಾತ ನೋಡುವ ಖುಶಿಯಲ್ಲಿ ನನಗೇನೂ ಅನ್ನಿಸಲೇ ಇಲ್ಲ.
ಅಪ್ಪ ಈಗ ಬಹಳ ಹಿಂದೆ ಉಳಿದಂತೆ ಕಂಡಿತು. ಕೆಳಗಿನಿಂದ ಬರುತ್ತಿರುವವರ ಹತ್ತಿರ “ಇನ್ನೂ ಎಷ್ಟು ಮೆಟ್ಟಿಲು ಇಳಿಯಬೇಕು?” ಎಂದು ಕೇಳಿದೆ. ಅವರು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕಾಣುತ್ತದೆ. ಮೈಯೆಲ್ಲ ಬೆವರಿತ್ತು, ದೊಡ್ಡದಾಗಿ ಉಸಿರು ಬಿಡುತ್ತ ಮೇಲೆ ಹತ್ತುತ್ತಿದ್ದರು. ಕೈಯಿಂದ ಏನೋ ಸನ್ನೆ ಮಾಡುತ್ತ ನಿಧಾನವಾಗಿ ನನ್ನನ್ನು ನೋಡದೆ ಹೋದರು.
ಅಷ್ಟರಲ್ಲಿ ಅಪ್ಪ ನನ್ನ ಸಮೀಪ ಬಂದಿದ್ದ. “ನೀರಂತೂ ಇಲ್ಲ. ಈ ಮೆಟ್ಟಿಲು ಇಳಿದು ಹತ್ತಿ ಮಾಡಿದರೆ ಅದೇ ಮಜ. ಕೆಳಗೆ ನೀರಿನ ದೊಡ್ಡ ಗುಂಡಿ ಇದೆ. ಅಲ್ಲಿ ಮುಖ ತೊಳೆದುಕೊಳ್ಳಬಹುದು” ಎಂದು ಹೇಳುತ್ತ ನೀರಿನ ಬಾಟಲಿ ಮುಂದೆ ಹಿಡಿದ. ನಾನು ಈಗ ಬೇಡ ಎಂದು ಹೇಳುತ್ತ ಅಪ್ಪನೊಂದಿಗೆ ಇಳಿಯತೊಡಗಿದೆ.
ಅಂತೂ ಕೆಳಗೆ ಬಂದಾಗಿತ್ತು. ದೊಡ್ಡ ಉರುಟಾದ ಕಲ್ಲು ಬಂಡೆ ಹಾಗೂ ಕಲ್ಲಿನ ಹಾಸಿಗೆಯಂತೆ ಇರುವ ವಿಸ್ತಾರವಾದ ಚಪ್ಪಟೆ ಬಂಡೆ ಕೆಳಗೆ ಇತ್ತು. ಅಲ್ಲಲ್ಲಿ ಬಂಡೆಗಳ ನಡುವೆ ಸ್ವಲ್ಪ ನೀರು ಹರಿಯುತ್ತಿತ್ತು. ಅಪ್ಪ ನನ್ನ ಕೈ ಹಿಡಿದು ದೊಡ್ಡ ಬಂಡೆ ಏರಿದ. ನಂತರ ಕೆಳಗೆ ಇಳಿದು ಜಲಪಾತದ ನೀರು ಬೀಳುವ ಸ್ಥಳಕ್ಕೆ ಬಂದ. ಬೇಸಿಗೆ ಆದದ್ದರಿಂದ ಆಗಲೇ ಹೇಳಿದಂತೆ ಸಣ್ಣ ನೀರು ಬೀಳುತ್ತಿತ್ತು. ನೀರು ಬೀಳುವ ಜಾಗದಲ್ಲಿ ಪುಟ್ಟ ಕೆರೆಯಂತಹ ಗುಂಡಿ ಇದೆ. ನೀರು ಮೇಲಿನಿಂದ ಬೀಳುವಾಗ ಕಲ್ಲುಗಳ ಮೇಲೆ ಬಿದ್ದು ಸಿಡಿದು ತುಂತುರು ಮಳೆ ಬಂದಂತೆ ಗಾಳಿಯಲ್ಲಿ ತೇಲಿ ಬಂದು ನಮ್ಮ ಮೇಲೆ ಬೀಳುತ್ತಿತ್ತು. ಬೇಸಿಗೆಯ ಬಿಸಿಲಿನಲ್ಲೂ ಅಲ್ಲಿ ತಂಪಾದ ವಾತಾವರಣ ಇತ್ತು. ನಾನು ನೀರಿಗಿಳಿದು ಆಟವಾಡಲು ಮುಂದಾದೆ. ಅಪ್ಪ ಅಂಗಿ ಹಿಡಿದು ಹಿಂದಕ್ಕೆ ಎಳೆದ.
“ಇಲ್ಲಿ ನೀರು ತುಂಬಾ ಆಳವಿದೆ. ಕಾಲು ಜಾರಿದ್ರೆ ನೀರಲ್ಲಿ ಮುಳುಗಿಯೇ ಹೋಗ್ತೀಯ. ಎಷ್ಟೋ ಜನ ಇಲ್ಲೇ ಜೀವ ಕಳೆದುಕೊಂಡಿದ್ದಾರಂತೆ” ಎಂದು ಹೇಳಿ ನನ್ನ ಉತ್ಸಾಹಕ್ಕೆ ತಡೆ ಹಾಕಿದ.
ನಾನು ಅಪ್ಪನ ಸಂಗಡ ಎತ್ತರದಿಂದ ಬೀಳುವ ನೀರು ಮತ್ತು ಆಕಾಶಕ್ಕೆ ತಾಗುವಂತೆ ಕಾಣುವ ಕಲ್ಲಿನ ಗುಡ್ಡ ನೋಡುತ್ತ ಕುಳಿತೆ. ಮೇಲಿನಿಂದ ಕಲ್ಲೇನಾದರೂ ಜಾರಿದರೆ…….
ಯಾರಾದರೂ ಕಲ್ಲು ಎಸೆದರೆ……. ಎಂಬ ಆಲೋಚನೆ ಬಂದು ಒಂದು ಸಾರಿ ಭಯವಾಯಿತು. ಹಾಗಾಗುವುದಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಅಪ್ಪ ತಂದ ತಿಂಡಿ ಪೊಟ್ಟಣ ಇನ್ನೂ ನಾನು ಬಿಚ್ಚಲೇ ಇಲ್ಲ. ಅದರ ನೆನಪು ನನಗೆ ಆಗಲೇ ಇಲ್ಲ. ಅಪ್ಪನೇ ನೆನಪಿಸಿ ತಿಂಡಿ ತಿಂದು ಹೊರಡೋಣ ಅಂದ. ‘ಅಪ್ಪ ಅಪ್ಪ ಮಳೆಗಾಲದಲ್ಲೂ ಒಮ್ಮೆ ಬರೋಣ’ ಅಂದೆ.
“ಮಳೆಗಾಲದಲ್ಲಿ ಇಲ್ಲೆಲ್ಲ ಬರಲಿಕ್ಕೆ ಆಗುವುದಿಲ್ಲ. ಮೇಲೆ ನಿಂತೇ ನೋಡಬೇಕು. ಈ ಸಾರಿ ಮಳೆ ಚೆನ್ನಾಗಿ ಆದರೆ ಲಿಂಗನಮಕ್ಕಿ ಆಣೆಕಟ್ಟೆ ತುಂಬಿದಾಗ ನೀರು ಬಿಡ್ತಾರೆ. ಆಗ ಬರೋಣ ಅಂದ. ನನಗೆ ಖುಷಿ ಆಯಿತು.
ಇಳಿಯುವಾಗ ಸುಲಭವಾಗಿತ್ತು. ಈಗ ಹತ್ತುವುದು ತುಂಬಾ ಕಷ್ಟ ಎಂದು ಅಪ್ಪ ಹೇಳಿದ. ನಾನು ತಿರುಗಿ ತಿರುಗಿ ಜಲಪಾತ ನೋಡುತ್ತ ಒಂದೊಂದೇ ಮೆಟ್ಟಿಲು ಏರತೊಡಗಿದೆ. ಅಪ್ಪ ಮಾತಾಡದೆ ಬರಲು ತೊಡಗಿದ್ದ. ನನಗೆ ಅಷ್ಟೇನೂ ಆಯಾಸ ಎನಿಸಲಿಲ್ಲ. ಆದರೆ ನನ್ನ ಅಪ್ಪನಿಗಿಂತಲೂ ವಯಸ್ಸಾದವರು, ದಪ್ಪನೆ ದೇಹದವರು ಮೆಟ್ಟಿಲು ಏರುವಾಗ ಅವರ ಮುಖ ನೋಡಿದರೆ ಸಾಕು. ಅವರು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ.
ಶಾಲೆ ಪ್ರಾರಂಭವಾದಾಗ ನಾನು ನನ್ನ ಗೆಳೆಯರಿಗೆಲ್ಲ ಜೋಗ ಜಲಪಾತದ ಸುದ್ದಿ ಹೇಳಿದ್ದೆ. ಅವರು ಮಳೆಗಾಲದಲ್ಲಿ ನೋಡಿದರೆ ಇನ್ನೂ ಮಜವಾಗಿರುತ್ತದೆ, ಅದು ನಿನಗೆ ಗೊತ್ತಿಲ್ಲ ಎಂದು ಹೇಳಿ ನನ್ನನ್ನೇ ಕುಗ್ಗಿಸಿದ್ದರು. ಆದರೆ ನಾನೂ ಸುಮ್ಮನಿರಲಿಲ್ಲ. ಮಳೆಗಾಲದಲ್ಲಿ ಮತ್ತೆ ಹೋಗ್ತೀನಿ ನೋಡಿ ಎಂದು ಹೇಳಿಕೊಂಡಿದ್ದೆ. ಈ ದಿನ ನಾನು ಅಪ್ಪ, ಅಮ್ಮ ಪುಟ್ಟ ತಂಗಿ ಎಲ್ಲ ಸೇರಿ ಜೋಗಕ್ಕೆ ಬಂದಾಗಿತ್ತು.
ಈಗಿನ ಚಿತ್ರವೇ ಬೇರೆ. ಎಲ್ಲಿ ನೋಡಿದರೂ ಜನ. ಜಲಪಾತ ನೋಡಲು ಇರುವ ಸ್ಥಳವಾದ ತಡೆ ಬೇಲಿಯ ಹತ್ತಿರ ಹೋಗುವುದೇ ಕಷ್ಟ ಎಂಬಂತಾಗಿತ್ತು. ನಾನು ಹೇಗೋ ನುಸುಳಿ ಮುಂದೆ ಬಂದು ಜಲಪಾತ ನೋಡತೊಡಗಿದೆ. ನೋಡಿದರೆ ಜಲಪಾತನೇ ಮಾಯವಾಗಿತ್ತು. ಜಲಪಾತವಿರುವ ಕಡೆ ಏನೂ ಕಾಣಿಸಲಿಲ್ಲ. ಚಳಿಗಾಲದ ಮುಂಜಾನೆ ನಮ್ಮ ಊರಿನಲ್ಲಿ ಮಂಜು ಮುಸುಕಿದಾಗ ಹತ್ತಿರ ಇದ್ದವರೂ ಕಾಣದಾಗುತ್ತಾರೆ. ಅದೇ ರೀತಿಯ ಮಂಜು ಕವಿದಿತ್ತು. ಜಲಪಾತ ಕಾಣುವುದೇ ಇಲ್ಲವೇನೋ ಅಂದುಕೊಂಡೆ. ಅಪ್ಪನ ಕಡೆ ತಿರುಗಿದೆ. ನಿಲ್ಲು ನಿಲ್ಲು……. ಈಗ ಕಾಣುತ್ತದೆ ಅಂದ. ಹೌದು…… ಮಂಜು ನಿಧಾನವಾಗಿ ಚಲಿಸತೊಡಗಿತು. ಯಾರೋ ಪರದೆ ಸರಿಸಿ ಚಿತ್ರ ತೋರಿಸಿದ ಹಾಗೆ ಅನಿಸಿತು. ತಂಪಾದ ಗಾಳಿ ಬೀಸಿ ಚಳಿ ಚಳಿ ಆಯಿತು. ಪರದೆ ಸರಿಸಿದ್ದು ಯಾರೂ ಅಲ್ಲ ನಾನೇ ಎಂದು ಗಾಳಿ ಹೇಳಿರಬೇಕು. ಎಷ್ಟು ಚೆನ್ನಾಗಿ ಕಾಣ್ತಾ ಇದೆ. ಹಾಲುಬಣ್ಣದ ನೀರು. ಆದರೆ ಕೆಳಗೆ ನದಿಯಲ್ಲಿ ಹರಿಯುತ್ತಿರುವ ನೀರು ತಿಳಿ ಕೆಂಪು ಬಣ್ಣದ್ದಾಗಿತ್ತು. ಕಲ್ಲ ಮೇಲಿಂದ ಸಿಡಿದು ಬೀಳುವಾಗ ಬಿಳಿಯದಾಗಿ ಕಾಣುತ್ತದೆ ಎಂದು ಅಮ್ಮ ಹೇಳಿದಳು. ರಾಜ, ರಾಣಿ, ಅಬ್ಬರ, ಬಾಣ ಎನ್ನೋ ಧಾರೆಗಳು ಎಂದೆಲ್ಲ ಅಪ್ಪ ಹೇಳುತ್ತಿದ್ದರು. ಅದೆಲ್ಲ ನನಗೆ ಬೇಕೆನಿಸಲಿಲ್ಲ. ನೀರು, ಹತ್ತಿಯನ್ನು ಬಿಡಿಸಿ ಬಿಡಿಸಿ ಚಲ್ಲಿದಂತೆ ಕಾಣುತ್ತಿರುವುದೇ ನನಗೆ ಬಹಳ ಸಂತಸ ತಂದಿತ್ತು.
ನಂತರ ನಾವು ಜಲಪಾತದ ನೆತ್ತಿಯ ಮೇಲೆ ಇರುವ ಕಟ್ಟಡದ ಹತ್ತಿರ ಹೋಗಿದ್ದೆವು. ಅಲ್ಲಿ ಮೇಲಿಂದ ಹರಿದು ಬಂದ ನದಿ ಒಮ್ಮೆಗೇ ಮಾಯವಾಗುತ್ತಿತ್ತು. ಕಲ್ಲಿಂದ ಜಾರಿ ಕೆಳಗೆ ಬೀಳುವುದು ಸ್ವಲ್ಪ ಕಾಣುತ್ತಿತ್ತು. ಕೆಲವು ಜನ ಕಲ್ಲಿನಿಂದ ಕೆಳಗೆ ನೀರು ಜಾರುವಲ್ಲಿಗೇ ಹೋಗಿ ನೋಡಲು ಹೊರಟಿದ್ದರು. ಪೊಲೀಸರು ತಡೆದು ಹಿಂದೆ ಕಳುಹಿಸಿದ್ದರು.
“ಆ ಕಲ್ಲಿಗೆ ಹೋಗಿ ಕೆಳಗೆ ಇಣುಕಿ ಜಲಪಾತ ನೋಡೋ ಸಾಹಸ ಮಾಡಿ ಬಹಳ ಜನ ಬಿದ್ದು ಸತ್ತು ಹೋಗಿದ್ದಾರೆ. ಮೊನ್ನೆ ಹುಬ್ಬಳ್ಳಿಯಿಂದ ಬಂದ ಮೂರು ಪ್ರವಾಸಿಗರು ಕೆಳಗೆ ಜಾರಿದರಂತೆ” ಎಂದು ಅಪ್ಪ ಹೇಳಿದ. ಅಪಾಯ ಎಂದು ಬರೆದಿದ್ದರೂ ಅನೇಕ ಜನ ಸತ್ತಿದ್ದರೂ ಅಂತಹ ಅಪಾಯದ ಸ್ಥಳಕ್ಕೆ ಜನ ಯಾಕೆ ಹೋಗುತ್ತಾರೆ ನನಗೆ ತಿಳಿಯಲಿಲ್ಲ. ನೀರನ್ನು ನೋಡುತ್ತ ಖುಶಿಯಲ್ಲಿದ್ದ ನಾನು ಆ ಯೋಚನೆ ಮರೆತು ನೀರಿನ ಆಟ ನೋಡುತ್ತ ಮೈಮರೆತೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *