ಒಂದು ಚಿಟಿಕೆಯಷ್ಟು ಚಳಿ ಇದ್ದ ಮಧ್ಯಾಹ್ನ, ಬಹುಶ: ಎಂದಿನಂತೆ ಅಂದೂ ಆಕಾಶಕ್ಕೆ ಏಣಿ ಹಾಕುವ ಬಗ್ಗೆ ಯೋಚಿಸುತಿದ್ದೆ.
ಫಳ್ ಎಂದು ಗ್ಲಾಸ್ ಒಡೆದಂತೆ ಒಂಥರಾ ಸೌಂಡುಮಾಡುತ್ತಾ ನನ್ನ ಆಕಾಲದ ಐದುಸಾವಿರ ರೂಪಾಯಿಯ ಸೋವಿ ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಬಂದ ಧ್ವನಿ ಕನ್ನೇಶ್ ಎಂದು ಗಡುಸಾಗಿಯೇ ಇತ್ತು ಎಂದಿನಂತೆ,
ಸಂಶಯವಿಲ್ಲ, ಜಿ.ಎನ್.ಮೋಹನ್ ಸರ್ ಧ್ವನಿಯದು,ಆಗ ಜಿ.ಎನ್.ಮೋ.ಈ ಟಿ.ವಿ.ಗೆ ಮುಖ್ಯಸ್ಥರಾಗಿ ಬಂದು ಕೆಲವು ತಿಂಗಳುಗಳೂ ಕಳೆದಿರಲಿಲ್ಲ. ಶಿರಸಿಯಲ್ಲಿ ಬಸ್ ನಿಲ್ಧಾಣದಲ್ಲಿ ಒಬ್ಬರು ಪುಸ್ತಕ ಮಾರುತ್ತಾರೆ ಗೊತ್ತಾ ಎಂದರು. ಇಲ್ಲ ಎಂದೆ, ಸರಿ ನೋಡಿ ಒಂದು ಒಳ್ಳೆಯ ಸುದ್ದಿಯಾಗುತ್ತೆ ಎಂದವರೆ, ಹೆಚ್ಚು ಮಾತನಾಡದೆ ಕಾಲ್ ಕಟ್ ಮಾಡಿದರು.
ಶಿರಸಿಯಲ್ಲಿ ಪುಸ್ತಕಮಾರುವ ವ್ಯಕ್ತಿಗಳನ್ನು ನೋಡಿದ ನೆನಪುಕೂಡಾ ಬರಲಿಲ್ಲ. ಮಾರನೆ ದಿನ ಬೆಳಿಗ್ಗೆ ಶಿರಸಿ ಬಸ್ ನಿಲ್ಧಾಣಕ್ಕೆ ಬಂದವನೇ ಶೋಧನಾ ಕಾರ್ಯ ಶುರುಹಚ್ಚಿಕೊಂಡೆ. ಆ ದಿನ ಬಸ್ ಸ್ಟ್ಯಾಂಡ್ ನಲ್ಲಿ ಯಾರೂ ಪುಸ್ತಕ ಮಾರುವವರು ಬರಲೇ ಇಲ್ಲ.
ಇಲ್ಲ, ಆಗಿಲ್ಲ, ಸಿಕ್ಕಿಲ್ಲ ಎನ್ನುವ ಉತ್ತರಗಳನ್ನು ಸಹಿಸದ ಮೋಹನ್ ಸರ್ ಗೆ ಈ ಬಗ್ಗೆ ಏನೂ ಹೇಳಲಿಲ್ಲ. ಅಂದಿನ ಪಂಡಿತ್ ಲೈಬ್ರರಿ, ಬಸ್ ನಿಲ್ಧಾಣ ಎಂದು ತಿರುಗಾಡುತಿದ್ದಾಗ ಒಂದು ದಿನ ತಣ್ಣನೆಯ ಬೆಳಿಗ್ಗೆ ಒಬ್ಬ ವ್ಯಕ್ತಿ ಪುಸ್ತಕ ಹಿಡಿದು ಬಸ್ ಹತ್ತಿ ಇಳಿಯುತ್ತಾ ಪುಸ್ತಕಗಳ ಬಗ್ಗೆ ತಿಳಿಸುತ್ತಾ ಪುಸ್ತಕ ಮಾರುತಿತ್ತು.
ಆಗಷ್ಟೆ ಕಲೆಹಾಕಿದ ಮಾಹಿತಿಗಳನುಸಾರ ಸಾರ್ ನೀವು ವಿಡಂಬಾರಿ ಎಂದೆ?
ಅದು ತಡೆದು ಅಲ್ಲ,ಎಂದು ತಿರಸ್ಕಾರ ಬೆರೆತ ನಿರ್ಲಿಪ್ತ ಧ್ವನಿಯಲ್ಲಿ ನಾನಲ್ಲ ವಿಡಂಬಾರಿ, ಅವರೂ ನನ್ನಂತೇ ಹೀಗೇ ಇಲ್ಲೇ ಪುಸ್ತಕ ಮಾರುತ್ತಾರೆ ಎಂದಿತು, (ವಾಸ್ತವವೆಂದರೆ….ಸಿ.ಆರ್.ಶಾನಭಾಗ ಮತ್ತು ವಿಡಂಬಾರಿ ಚಿಂತನ ಉತ್ತರಕನ್ನಡದಡಿ ಬದ್ಧತೆಯಿಂದ ಕೆಲಸಮಾಡುತಿದ್ದ ಮಹಾನುಭಾವರು)
ಆ ವ್ಯಕ್ತಿ ಮತ್ತದೇ ಮೋಹನ್ ಸರ್‍ರಂಥ ತುಸು ಗಡಸಾದ ಧ್ವನಿಯಲ್ಲಿ ಹೀಗೆ ಅಂದು ಉತ್ತರಿಸಿದ ವ್ಯಕ್ತಿ ಕಾರ್ಮಿಕ ಮುಖಂಡ ಸಿ.ಆರ್.ಶಾನಭಾಗ್,
ಅಲ್ಲಿಂದ ನನ್ನ ಕಣ್ಣು ಬಸ್‍ಗಳತ್ತ ಮತ್ತಷ್ಟು ಹೆಚ್ಚು ಕೇಂದ್ರೀಕರಿಸತೊಡಗಿತು.
ಅದರಿಂದ ಸಿ.ಆರ್.ಶಾ. ಮತ್ತು ವಿಡಂಬಾರಿಯವರ ಪರಿಚಯವೂ ದಕ್ಕಿತು. ಸಿ.ಆರ್. ಶಾನಭಾಗ ಮತ್ತು ವಿಡಂಬಾರಿ ಶಿರಸಿಯಲ್ಲಿ ಬಸ್ ನಿಲ್ಧಾಣದಲ್ಲಿ ಪುಸ್ತಕ ಮಾರುವುದು ಅಂದಿನ ನಿತ್ಯ ವಿದ್ಯಮಾನವಾಗಿತ್ತು. ಹೀಗೆ ಉದ್ದೇಶಪೂರ್ವಕವಾಗಿ ಹುಡುಕಾಟಕ್ಕೆ ಸಿಕ್ಕ ವಿಡಂಬಾರಿಯವರನ್ನು ಹುಡುಕಿಕೊಂಡು ಅವರ ಕೋಟೆಕೆರೆ ಮೇಲಿನ ಹಳೆಯ ಮನೆಗೂ ಹೋದೆ. ಅಲ್ಲಿನ ದೃಶ್ಯ ಇನ್ನಷ್ಟು ವಿಚಿತ್ರದ್ದು.
ಸುಮಾರು 17-18 ವರ್ಷಗಳ ಕೆಳಗೆ ವಿಡಂಬಾರಿಯವರನ್ನು ಹುಡುಕಿಕೊಂಡು ಹೋದಾಗ ಅವರ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಂಚೆಪೇದೆಯಾಗಿ ನಿವೃತ್ತರಾಗಿದ್ದ ವಿಡಂಬಾರಿಯವರಿಗೆ ಅವರ ಬದುಕು, ಹೆಂಡತಿ, ಪುಸ್ತಕ, ಸಿದ್ಧಾಂತ ಎಲ್ಲವೂ ಹೊರೆಯಾಗಿದ್ದವು. ಆದರೆ ಈ ಹೊರೆಹೊತ್ತ ಆಯಾಸದ ಬೆವರು ಅವರ ಕಣ್ಣು ಮುಖವನ್ನು ತೋಯಿಸುತಿದ್ದಾಗಲೂ ವಿ.ಗ.ಭಂಡಾರಿ ಮಿಡಿಯುತಿದ್ದರು, ಮಿನುಗುತಿದ್ದರು.
ಇವರ ಹಿನ್ನೆಲೆ, ಚುಟುಕು, ಕಠಿಣ ಬದುಕಿನ ಕಷ್ಟದ ಕತೆ ಕೇಳಿದ ಮೇಲೆ ಕೆಲವು ವರ್ಷಗಳ ನಂತರ ನಮ್ಮ ಸಮಾಜಮುಖಿ ಪಾಕ್ಷಿಕದಲ್ಲಿ ಅವರ ಅಂಚೆ ಪೇದೆಯ ಆತ್ಮ ಕಥನ ಪ್ರಕಟವಾಯಿತು.
ಹೀಗೆಲ್ಲಾ ಅವರ ಜೀವನ ಚರಿತ್ರೆ ನಮ್ಮ ಮೂಲಕ ಜನಮನ ಮುಟ್ಟುವ ಮೊದಲೇ ವಿಷ್ಣುನಾಯ್ಕ ಅವರ ಅಂಚೆಪೇದೆಯ ಆತ್ಮಕಥನವನ್ನು ಸಂಕ್ಷಿಪ್ತವಾಗಿ ಪುಸ್ತಕಮಾಡಿದ್ದರು.
ಇಂಥ ವಿಡಂಬಾರಿ ಲಕ್ಷಾಂತರ ಚುಟುಕು ಬರೆದರು. ಶೋಷಣೆ, ಅಸಮಾನತೆ ಬಗ್ಗೆ ವ್ಯಗ್ರವಾಗಿ ದಾಖಲಿಸಿದರು. ಆದರೆ ಅವರ ಮಾನವೀಯ ಅಂತ:ಕರಣ ಸದಾ ಮಿಡಿಯುತಿತ್ತು, ತುಡಿಯುತಿತ್ತು.
ಈ ಮಧ್ಯೆ ಹೊನ್ನಾವರದ ಗಣಪಿ ಬಂಡಾರಿಯ ಮಗ ವಿಡಂಬಾರಿ ಕನ್ನಡ ಪತ್ರಿಕೆ, ಸಾಹಿತ್ಯ,ಸಾಹಿತ್ಯ ಸಂಘಟನೆ ಸಮ್ಮೇಳನಗಳಲ್ಲಿ ಎಷ್ಟು ತುಂಬಿಹೋದರೆಂದರೆ…. ಇಂಥ ಕಾರ್ಯಕ್ರಮಗಳಲ್ಲಿ ವಿಡಂಬಾರಿ ಇಲ್ಲ ಎಂದರೆ ನಂಬುವುದು ಕಷ್ಟವಾಗಿತ್ತು. ಚುಟುಕು ಬರೆಯುತ್ತಾ ನಮ್ಮಂಥ ಎಳೆಯರಿಗೆ ಪತ್ರ ಬರೆಯುತ್ತಾ ಅವರು ಬದುಕಿದ್ದ ಬಗೆ ಹೇಗಿತ್ತೆಂದರೆ…. ಹಾಗಿತ್ತು ಅವರ ತೆರೆಮರೆಯ ಸಾಹಸ.
ಏಕೈಕ ಪುತ್ರನನ್ನು ಕಳೆದುಕೊಂಡರು, ಮಡದಿ ನಡುಬದುಕಲ್ಲಿ ಈ ಬಡ ಜೀವ ಬಿಟ್ಟು ಸತ್ತುಹೋದರು. ನಂತರ ಮಗಳ ಮನೆಯಲ್ಲಿ ಕೊನೆಗಾಲ ಕಳೆದ ವಿಡಂಬಾರಿ ಹೊನ್ನಾವರದಿಂದ ಪ್ರಾರಂಭವಾದ ಅವರ ಬದುಕು ಮತ್ತದೇ ಹೊನ್ನಾವರದ ಕಡತೋಕಕ್ಕೆ ಮರಳಿ ಬಂದು ಶಾಶ್ವತವಾಗಿ ನಿಲ್ಲುವವರೆಗೆಅವರು ಅಂಕೋಲಾ, ಕಾರವಾರ ಶಿರಸಿಗಳನ್ನು ಸುತ್ತುಹಾಕಿದ್ದರು.
ಅತಿಸಾಮಾನ್ಯನಾಗಿ ಬದುಕಿದ ವಿಡಂಬಾರಿ ಕವನ, ಚುಟುಕು, ಸಾಹಿತ್ಯದ ಮೂಲಕ ಅಸಾಮಾನ್ಯರಾಗಿದ್ದರು. ಅವರ ಗುರು ಆರ್.ವಿ.ಭಂಡಾರಿಯವರಿಂದ ಪ್ರಾರಂಭವಾಗಿ ನಿನ್ನೆ ಮೊನ್ನೆಯ ಎಳೆಮಕ್ಕಳ ನೆರವು-ಸಹಕಾರವನ್ನು ಸದಾ ಸ್ಮರಿಸುತಿದ್ದ ಅವರ ಕಲ್ಲಲ್ಲರಳಿದ ಬದುಕು ಫೆ,13ಕ್ಕೆ ಕೊನೆಗೊಂಡಿದೆ. ಸುದ್ದಿ, ಕತೆ, ಕಾವ್ಯ, ಕಾದಂಬರಿಗಳೆಲ್ಲಾ ಆಗಬಹುದಾದ ಅವರ ಬೆಂಕಿಯ ಬದುಕು ಮತ್ತಾರಿಗೂ ಅನಿವಾರ್ಯವಾಗದಿರಲಿ ಆದರೆ ಅವರ ಸಾಹಸ, ಜೀವನಪ್ರೀತಿ, ಸೈದ್ಧಾಂತಿಕ ಬದ್ಧತೆಗಳಿವೆಯಲ್ಲ ಅವು ಎಲ್ಲರದ್ದಾಗುವಂಥದ್ದು.
ಈ ಟಿವಿಯ ಸುದ್ದಿ ಸರಕಾಗಿ ನಮಗೆ ದೊರೆತಿದ್ದ ಅಸಾಮಾನ್ಯ ವಿಡಂಬಾರಿ ಸದಾ ನಮ್ಮೆದೆಯ ಹಸಿರ ನೆನಪು. ಸಾಮಾಜಿಕವ್ಯವಸ್ಥೆಯ ಬಲಿಪಶುವಾಗಿದ್ದರೂ ಸಮಾಜಮುಖಿಯಾಗಿ ಬದುಕಿದ ವಿಡಂಬಾರಿ ಬಿಟ್ಟುಹೋಗಿದ್ದು ಬರೀ ನೆನಪಲ್ಲ ಒಂದು ಕಠಿಣ ಬದುಕಿನ ಮಾನವೀಯ ಬೆಳಕು. ಅವರಿಗೆ ನೆರವಾದ ಅಸಂಖ್ಯ ಜನರಿಗೆ ನನ್ನ ಕೃತಜ್ಞತೆಗಳು ಸಲ್ಲಬೇಕು ಯಾಕೆಂದರೆ ತಂದೆಯಾರೆಂದು ಗೊತ್ತಿರದೇ ಹುಟ್ಟಿ ಜಗತ್ತಿಗೆ ಮಾನವೀಯತೆಯ ಅಮೃತ ಹಂಚಿದ ಈ ಅಂಚೆಪೇದೆ ಸಾಮಾಜಿಕ ಅಪಸವ್ಯದ ಕೆಸರಿನ ಕಮಲ, ಜೊತೆಗೆ ಬಹುವಿಶಿಷ್ಟವಾಗಿ ಬದುಕಿದ ಕೋಟಿಗೊಬ್ಬ ಅವರ ಚುಟುಕುಗಳು ಮಾನವೀಯತೆಯ ದೊಂದಿಯ ಅಮವಾಸೆಯ ಬೆಳಕಿನ ಬೀಜಗಳು. ಮಾನವೀಯತೆಯ ಬೆಳಕಿನ ಬೇಜಕ್ಕೆ ಸಾವೆಲ್ಲಿ,ಕೊನೆಎಲ್ಲಿ? -ಕನ್ನೇಶ್