
ಪುಸ್ತಕ ಪರಿಚಯ- ಡಾ.ವಿಠ್ಠಲ್ ಭಂಡಾರಿ
“ಹಳ್ಳಿಯ ಜನರು ಅಂದರೆ ಮಾರಲಿಕ್ಕೆ ಪೇಟೆಗೆ ತೆಗೆದುಕೊಂಡು ಹೋಗ್ತಾರಲ್ಲಾ, ಹಾಗೆ ಬುಟ್ಟಿಯಲ್ಲಿ ಮುಚ್ಚಿಹಾಕಿದ ಕೋಳಿಗಳಿದ್ದ ಹಾಗೆ. ರಾತ್ರಿಯಾಗುತ್ತಲೇ ಯಾರದೋ ಮಾಂಸಾಹಾರಿ ಹೊಟ್ಟೆಯಲ್ಲಿ ಜೀರ್ಣವಾಗುತ್ತವಲ್ಲ. ಹಾಗೇ ಈ ರೈತರ ಕತೆ” ಎನ್ನುವುದು ಕಾದಂಬರಿಯ ಕೇಂದ್ರ ಪಾತ್ರವಾದ ರೈತ ಫೈಲವಾನನ ಅನುಭವದ ಯೋಚನಾ ಲಹರಿ. ಮಾತ್ರವಲ್ಲ ಭಾರತದ ರೈತರನ್ನು ಕುರಿತ ಒಂದು ರೂಪಕವೂ ಹೌದು.
ಇದು ಉತ್ತರಪ್ರದೇಶದ ಕಾದಂಬರಿಕಾರ ಶಿವಮೂರ್ತಿಯವರ “ಆಖಿರಿ ಛಲಾಂಗ್” ಕಾದಂಬರಿಯಲ್ಲಿ ಬರುವ ಒಂದು ಮಾತು. ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಯ ದುರಂತದ ಎಳೆ ಹಿಡಿದು ಹೊರಟ ಶಿವಮೂರ್ತಿಯವರ ಈ ಕಾದಂಬರಿಯನ್ನು ಹಿರಿಯ ಲೇಖಕ ಡಾ. ಆರ್.ಪಿ. ಹೆಗಡೆಯವರು ಸುಂದರವಾಗಿ ಅನುವಾದಿಸಿದ್ದಾರೆ. ಕಾದಂಬರಿಯ ಹೆಸರು “ಕೊನೆಯ ಜಿಗಿತ”. ಅನುವಾದದಲ್ಲಿ ಪಳಗಿದ ಕೈ ಆರ್.ಪಿ. ಹೆಗಡೆಯವರದು. ಓದಿಗೆ ತೊಡಕಿಲ್ಲ. ಕನ್ನಡದ್ದೇ ಕೃತಿ ಎನ್ನುವಷ್ಟು ಆಪ್ತತೆ ಅವರ ಅನುವಾದದ ಕೃತಿಯಲ್ಲಿ.
ಭಾರತದ ರೈತರ ಸಮಕಾಲೀನ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿ ಚಿತ್ರಿಸುತ್ತದೆ. ಆತ್ಮಹತ್ಯೆಯ ಹಿಂದಿರುವ ಕಾರಣವನ್ನು ಅತ್ಯಂತ ಸೂಕ್ಷ್ಮವಾಗಿ, ನಿರುದ್ವಿಗ್ನವಾಗಿ ತೆರೆದಿಡುತ್ತದೆ. ವಿಶ್ಲೇಷಣೆಯ ಹಿಂದಿರುವ ಲೇಖಕರ ಸೈದ್ಧಾಂತಿಕ ಸ್ಪಷ್ಟತೆ ಕೂಡ ಇಲ್ಲಿ ಮಹತ್ವದ್ದೇ ಆಗಿದೆ. ಇಂತದ್ದೊಂದು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಆರ್.ಪಿ. ಹೆಗಡೆಯವರಿಗೆ ಅಭಿನಂದನೆಗಳು.
ಒಂದು ಕಾಲದಲ್ಲಿ ಸುತ್ತುಹಳ್ಳಿಯ ಎಲ್ಲಾ ಪೈಲ್ವಾನರನ್ನು ಕುಸ್ತಿಯಲ್ಲಿ ಬಗ್ಗುಬಡಿದ ಫೈಲ್ವಾನ ಕಟ್ಟುಮಸ್ತಾದ ಆಸಾಮಿ. ಹಲವು ಪದಕಗಳನ್ನು ಪಡೆದಾತ, ಖ್ಯಾತಿ ಗಳಿಸಿದಾತ; ಕುಸ್ತಿ ಆಖಾಡದಲ್ಲಿ ಎದುರಾದವರನ್ನು ಸೋಲಿಸುವ ಪಟ್ಟು ತಿಳಿದಿದ್ದ ಪೈಲ್ವಾನ, ಬದುಕಿನಲ್ಲಿ ಎದುರಾದ ಹಲವು ಸಮಸ್ಯೆಗಳನ್ನು ಎದುರಿಸುವ ಪಟ್ಟು ತಿಳಿಯಲಾರದೆ ಸೋತು ಸುಣ್ಣವಾದ ರೈತ ಕೂಡ.
3-4 ಎಕರೆ ಜಮೀನು ಹೊಂದಿದ ಪೈಲವಾನನ ಕುಟುಂಬದ ಸುತ್ತ ಬಿಚ್ಚಿಕೊಳ್ಳುವ ಈ ಕತೆ ಅಂತಿಮವಾಗಿ ಭಾರತದ ಲಕ್ಷಾಂತರ ರೈತರ ಬದುಕಿನ ಸಂಕಷ್ಟಗಳನ್ನು ಅವರ ಅಸಹಾಯಕತೆಯನ್ನು ಬೆರಳಿಟ್ಟು ತೋರಿಸುತ್ತದೆ.
“ನೀರಿನ ಕಾಲುವೆಯಲ್ಲಿ ಪ್ರತಿವರ್ಷ ಹೂಳು ತುಂಬಿದ ಹಾಗೆ ರೈತರ ಅದೃಷ್ಟದಲ್ಲಿಯೂ ಹೂಳು ತುಂಬುತ್ತ ಹೋಗುತ್ತದೆ” ಎನ್ನುವ ಮಾತು ಭಾರತದ ರೈತರ ಬದುಕಿನಲ್ಲಂತೂ ಸತ್ಯ.
ಈ ದೇಶದ ರೈತರು ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ರೀತಿಯಲ್ಲಿ ತೊಡಗಿಸಿಕೊಂಡವರು. ಸ್ವಾತಂತ್ರ್ಯ ಪೂರ್ವದಲ್ಲಿಯೇ 1936ರಲ್ಲಿ AIKS (ಅಖಿಲ ಭಾರತ ಕಿಸಾನ ಸಭಾವನ್ನು) ಕಟ್ಟಿಕೊಂಡು ಸ್ವಾತಂತ್ರ್ಯ ಚಳುವಳಿಯ ಜೊತೆ ರೈತರ ವಿಮೋಚನೆಗಾಗಿಯೂ ಹೋರಾಡಿದರು. ಪ್ರಾಣತ್ಯಾಗ ಮಾಡಿದರು; “ಇಂಗ್ಲೀಷ್‍ರಿದ್ದಾಗ, ನವಾಬರಿದ್ದಾಗ, ಜಮೀನ್ದಾರರಿದ್ದಾಗಲೂ ನಾವು ನಿಜವಾದ ಭಿಕಾರಿಗಳೇ ಆಗಿದ್ದೆವು. ಮತ್ತು ಇಂದೂ ನಾವು ಭಿಕಾರಿಗಳೇ ಆಗಿದ್ದೇವೆ. ಎಲ್ಲರೂ ಸ್ವರಾಜ್ಯ ಎಂದು ಕರೆಯುವ ಈ ಆಡಳಿತದಲ್ಲಿಯೂ” (ಪು 108) ಎನ್ನುವಲ್ಲಿಯ ಫೈಲ್ವಾನನ ನಿಟ್ಟುಸಿರು ಸಣ್ಣಗೆ ಪ್ರತಿಧ್ವನಿಸುತ್ತದೆ.
ಎಂಥ ವ್ಯಂಗ್ಯ ನೋಡಿ. ಇದೇ ರೈತರ ಪ್ರಾಣತ್ಯಾಗದ ಮೂಲಕ ಗಳಿಸಿದ ಸ್ವಾತಂತ್ರ್ಯ, ಸ್ವರಾಜ್ಯ ರೈತರಿಗೆ ಕೊಟ್ಟಿದ್ದೇನು? ಅದೇ ಭಿಕ್ಷಾಪಾತ್ರೆ. ಸ್ವಾತಂತ್ರ್ಯಾ ನಂತರ ಬಂದ ಎಲ್ಲಾ ಸರ್ಕಾರಗಳು ರೈತರ ಸರ್ಕಾರ ಎಂದು ಹೇಳಿದ್ದಷ್ಟೆ. ಬೆಳೆದದ್ದು ರೈತರ ಗೋರಿಯ ಮೇಲೆಯೇ, ಕೃಷಿ ಎಂದರೆ ರೈತ ಓಡಿ ಹೋಗುವ ಸ್ಥಿತಿ ತಲುಪಿದ್ದಾನೆ, ವಿದ್ಯುತ್, ಗೊಬ್ಬರ, ಬೀಜ, ಕೀಟನಾಶಕ ಇತ್ಯಾದಿಗಳ ಬೆಲೆ ಗಗನಕ್ಕೇರುತ್ತಿದೆ. ಆದರೆ ರೈತನ ಬೆಳೆಗಳಿಗೆ ಬೆಲೆ ಕಡಿಮೆ ಆಗಿದೆ. ಬೆಂಬಲ ಬೆಲೆ ನಿಗದಿ ಮಾಡಿ, ಸಬ್ಸಿಡಿ ನೀಡಿ ರೈತರನ್ನು ರಕ್ಷಿಸಬೇಕಾದ ಸರ್ಕಾರ IMF, world Bank ಗಳ ಮಾತು ಕೇಳಿ ಸಹಾಯಧನ ನಿಲ್ಲಿಸುತ್ತಿದೆ. ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ.
1980ರ ದಶಕದಲ್ಲಿ ಜಾರಿಗೊಂಡ ಹೊಸ ಆರ್ಥಿಕ ನೀತಿ ನೊಂದ ರೈತ ಕುಟುಂಬದವರನ್ನು ಹಸಿವೆಯ ಹಿಂಸೆಗೆ ದೂಡಿತು. ಆನಂತರ ಬಂದ ಮುಕ್ತ ಆರ್ಥಿಕ ನೀತಿ, ಜಾಗತೀಕರಣ ರೈತರ ಆತ್ಮಹತ್ಯೆಯ ಕೂಪಕ್ಕೆ ತಳ್ಳಿತು. ನರಸಿಂಹರಾವ್ ಸರ್ಕಾರದಲ್ಲಿ ಪ್ರಾರಂಭಗೊಂಡ ಬಿಕ್ಕಟ್ಟು ತೀವ್ರಗೊಂಡು nda ಸರ್ಕಾರದ ಸಮಯದಲ್ಲಿ ತಾರಕಕ್ಕೇರಿತು. ಲಕ್ಷಾಂತರ ರೈತರು ಆತ್ಮಹತ್ಯೆಗೆ ಮೊರೆಹೋದರು. ಸರ್ಕಾರ ಮೌನ ವಹಿಸಿತು. ನಂತರದ ಕಾಂಗೈ ಸರ್ಕಾರದಲ್ಲಿಯೂ ರೈತರ ಬದುಕೇನು ಸುಧಾರಿಸಲಿಲ್ಲ. ಆತ್ಮಹತ್ಯೆ ಮುಂದುವರಿಯಿತು. ಈ ಆತ್ಮಹತ್ಯೆಗೆ ನೈತಿಕ ಹೊಣೆ ಹೊರಬೇಕಾದ ಹಲವು ರಾಜಕಾರಣಿಗಳು “ರೈತ ದುಡ್ಡಿಗಾಗಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾನೆಯೇ ಹೊರತು ಕೃಷಿ ಬಿಕ್ಕಟ್ಟಿನಿಂದಲ್ಲ” ಎನ್ನುವ ನಾಚಿಕೆಗೇಡಿನ ಹೇಳಿಕೆ ಕೊಟ್ಟಿದ್ದು ಹಲವರಿಗೆ ನೆನಪಿರಬಹುದು.
ಹೀಗೆ ಅದೃಷ್ಟದ ಕಾಲುವೆಯಲ್ಲೂ ಹೂಳು ತುಂಬುವ ಪ್ರತಿ ಹಂತವನ್ನು ಲೇೀಖಕರು ಇಲ್ಲಿ ಹೇಳುತ್ತಾ ಹೋಗುತ್ತಾರೆ.
ಫೈಲ್ವಾನ ಒಂದು ಕಾಲದಲ್ಲಿ ಪ್ರತಿ ಹೆಕ್ಟೇರಿಗೆ 130 ಕ್ವಿಂಟಾಲ ಬೆಳೆದು ಕೃಷಿರತ್ನ ಪುರಸ್ಕಾರ ಪಡೆದವ. ಈಗ ಒಬ್ಬ ಮಗ ಇಂಜಿನಿಯರ್ ಕಲಿಯುತ್ತಿದ್ದಾನೆ. ಫೀಸು ವಿಪರೀತ ಏರಿದೆ. ಮಗಳು ಮದುವೆಗೆ ಬಂದಿದ್ದಾಳೆ. ಪಡೆದ ಸಾಲ ತೀರಿಸಲಾಗದೆ ಒಂದಿಷ್ಟು ಜಮೀನು ಮಾರಲಾಗಿದೆ. ಈಗ ಮತ್ತದೆ ಸಂಕಟ. ಮಗನಿಗೆ ಫೀಸು ಕೊಡಲು ಭೂಮಿ ಮಾರಬೇಕು. ಭೂಮಿಯನ್ನು ಈಗಲೇ ಮಾರಿದರೆ ಮಗಳ ಮದುವೆ ಮಾಡಬೇಕು. ವರದಕ್ಷಿಣೆಗಾಗಿ ಬಾಯಿಬಾಯಿ ಬಿಡುತ್ತಾರೆ. ಮಗನ ಶಿಕ್ಷಣ ಪೂರೈಸಬೇಕೇ? ಮಗಳ ಮದುವೆ ಮಾಡಬೇಕೇ? ಹಳೆಯ ಸಾಲ ತೀರಿಸಬೇಕೇ? ಧರ್ಮಸಂಕಟ ಫೈಲವಾನನದು. ಸಣ್ಣ ಪುಟ್ಟ ಸಾಲಕ್ಕಾಗಿ ಒಮ್ಮೆ ಫೈಲವಾನನನ್ನು ಬಂಧಿಸಲಾಗುತ್ತದೆ. ಆಗ “ದೊಡ್ಡ ದೊಡ್ಡ ಮಿಲ್ಲು ಪ್ಯಾಕ್ಟರಿಗಳವರು ಲಕ್ಷಾಂತರ ರೂಪಾಯಿ ಬರೇ ವಿದ್ಯುತ್ ಬಿಲ್ಲು ತುಂಬದೆ ಬಾಕಿ ಮಾಡಿಕೊಂಡಿದ್ದಿದೆ! ಅದನ್ನು ವಸೂಲಿ ಮಾಡುವ ಧೈರ್ಯ ನಿಮ್ಮ ಅಪ್ಪನಿಗೂ ಇಲ್ಲ. ಎಲ್ಲ ಕಾನೂನು ಕೇವಲ ರೈತರಿಗಾಗಿ, ಕೂಲಿಕಾರರಿಗಾಗಿ ಮಾತ್ರ!” ಎಂದು ಹಳ್ಳಿಯ ಮುದುಕ ಸಂಪಾಶ್ ಹೇಳುವ ಮಾತು ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.
ಸಾವಿರ ಐದುನೂರು ರೂಪಾಯಿಗೆ ರೈತರ ಮನೆ ಜಪ್ತಿ ಮಾಡುವ ಸರ್ಕಾರ ಸತ್ಯಂ ನಂತಹ ಕಂಪನಿಗೆ 50-60 ಸಾವಿರ ಕೋಟಿ ರೂ. ನೀಡುವುದು, ರಿಲಾಯನ್ಸ್‍ನಂತಹ ಕಂಪನಿಗೆ ಕೋಟ್ಯಾಂತರ ರೂ. ಸಬ್ಸೀಡಿ ಕೊಡುವುದು, ರೋಗಗ್ರಸ್ತ ಕಂಪನಿ ಹೆಸರಿನಲ್ಲಿ ತೆರಿಗೆ ವಿನಾಯತಿ, ಸಹಾಯಧನ, ಸಾಲ ಮನ್ನಾ ಮಾಡುವ ಮೂಲಕ ಸರ್ಕಾರ ರೈತರ ವಿರೋಧಿಯಾಗಿ ಬಂಡವಾಳಗಾರ, ಭೂಮಾಲಿಕರ ಪರವಾಗಿ ನಿಂತಿರುವುದನ್ನು ಕಾದಂಬರಿ ಎತ್ತಿ ತೋರಿಸುತ್ತದೆ.
ಪಾಂಡೇಬಾಬಾ ಕಷ್ಟ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ. ಫೈಲವಾನನಿಗೆ ಆತ ಮತ್ತೆ ಮತ್ತೆ ಕನಸ್ಸಿನಲ್ಲಿ ಕಾಣುತ್ತಾನೆ. ಈತನ ಪುಣ್ಯತಿಥಿಯನ್ನು ರೈತರ ಜಾಗೃತ ದಿನವನ್ನಾಗಿ ಆಚರಿಸುತ್ತಾನೆ. ಅಲ್ಲಿಗೆ ಬಂದ ರಾಜೇಶ್ವರ ರೈತರಿಗುಂಟಾದ ಅಪಾಯವನ್ನು ಹೀಗೆ ವಿವರಿಸುತ್ತಾನೆ. “ಬಹುರಾಷ್ಟ್ರೀಯ ಕಂಪನಿಗಳ ಮೂಲಕವಾಗಿ ಬೀಜಗಳ ಪೇಟೆಂಟ್ ಮಾಡಿಸುವುದರಿಂದ ಉಂಟಾದ ಅಪಾಯ! ಜನರ ಜಮೀನು ನುಂಗಿಹಾಕಿ ಉದ್ಯೋಗ ಪತಿಗಳಿಗೆ ನೀಡುವುದರ ಅಪಾಯ!! ರಸ್ತೆಗಳ ಜಾಲವನ್ನು ಹರಡಲು ರೈತನ ಜಮೀನನ್ನು ಮಣ್ಣಿನ ಬೆಲೆಗೆ ಖರೀದಿಸುವ ಅಪಾಯ!! ರೈತರಿಗೆ ಅವಶ್ಯಕವಾದ ವಸ್ತುಗಳ ಮೇಲೆ ಸಬ್ಸಿಡಿ ಹೆಚ್ಚಿಸುವುದರ ಬದಲು ಕಡಿಮೆ ಮಾಡುತ್ತ ಹೋಗುವದರಿಂದ ಉಂಟಾಗುವ ಅಪಾಯ” (ಪು 107) ಇಲ್ಲಿ ರೈತರ ಸಮಸ್ಯೆಯ ಮೂಲವನ್ನು ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ.
ಆದರೆ ಇದರಿಂದ ಮುಕ್ತಿ ಇಲ್ಲವೇ? ಇದೆ ಎನ್ನುವ ಕಾದಂಬರಿ ಆಶಾವಾದಿತ್ವದ ಕಡೆ ತಿರುಗುತ್ತದೆ. ಸರಕಾರದ ನೀತಿಯ ವಿರುದ್ಧ ಹೋರಾಡ ಬೇಕಾದ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ. “ರೈತರಿಗೆ ಅನ್ಯಾಯ ಮಾಡುವವರ ವಿರುದ್ಧ ಜನ ಸಂಘಟಿತರಾಗಲು ನಾನು ಕರೆ ಕೊಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಬಂದಿದ್ದೇನೆ” (ಪು 105) ಎನ್ನುತ್ತಾನೆ ರಾಜೇಶ್ವರ.
‘ಹೋರಾಡದಿದ್ದರೆ ಸಾಯ್ತಾರೆ, ಸಾಯ್ತಾನೇ ಇದಾರೆ, ಹೀಗೆ ಆದರೆ ಇನ್ನಷ್ಟು ಬೇಗ ಸಾಯ್ತಾರೆ” (ಪು 61) ಎನ್ನುವುದು ಲೇಖಕನ ಆತಂಕ. ಆದರೆ ರೈತರು ಸಂಘ ಕಟ್ಟಿ ಹೋರಾಡುವಷ್ಟು ಪ್ರಜ್ಞಾವಂತರೇ ಎಂದು ಕೇಳಿದರೆ ಅದೂ ಅಲ್ಲ. ರೈತರು ಎಷ್ಟು ಅವಿದ್ಯಾವಂತರು ಮುಗ್ಧರು ಆಗಿದ್ದಾರೆಂದರೆ “ಖೀಲಾವನ ಭಾಯಿ, ಬಜೆಟ್ ಅಂದರೆ ಯಾವ ಹಕ್ಕಿಯ ಹೆಸರು?” ಎಂದು ಕೇಳುವಷ್ಟು.
ಹಾಗಂತ ಹರಾಶರಾಗಬೇಕಾಗಿಲ್ಲ. “ಗುಡಿಸಲಿನಂತಹ ತಮ್ಮ ಮನೆಗಳಲ್ಲಿ ಐಶ್ವರ್ಯರೈ, ಮತ್ತು ಶಾರೂಖ ಖಾನ್‍ನ ಪೋಸ್ಟರ್ ಅಂಟಿಸಿಕೊಳ್ಳುವ ಕೆಲಸದಲ್ಲಿ ತೊಡಗಿರುವಾಗ ಅದೇ ಹಳ್ಳಿಯಲ್ಲಿ ರಾಜೇಶ್ವರ ನಂತಹ ಒಬ್ಬ ಹುಡುಗನೂ ಹುಟ್ಟುತ್ತಾನೆ.”(ಪು. 108) ಎನ್ನುವ ನಂಬಿಕೆ ಫೈಲ್ವಾನನದು ಕಾದಂಬರಿಯಲ್ಲಿ ರಾಜೇಶ್ವರ ಇಂತಹ ತಿಳವಳಿಕೆ ಇರುವ ಹೋರಾಟಗಾರನಾಗುವ ಎಲ್ಲಾ ಲಕ್ಷಣ ಇರುವ ವ್ಯಕ್ತಿ ಕೂಡ.
ಬದುಕಿನ ಜಂಜಾಟದೊಂದಿಗೆ ಹೋರಾಡುತ್ತಲೇ ಬದುಕಿನ ಎಲ್ಲಾ ನಗು ಉತ್ಸಾಹ ಕಳೆದುಕೊಂಡ ರೈತ ಫೈಲ್ವಾನ ಪಾಂಡೆಬಾಬನ ತಿಥಿಯಲ್ಲಿ ರಾಜೇಶ್ವರ ರೈತರ ಸ್ಥಿತಿಯ ಕುರಿತು ಮಾಡಿದ ವಿಶ್ಲೇಷಣೆಗೆ, ರೈತನ ವಿಮೋಚನೆಗೆ ಕೊಟ್ಟ ಕರೆಯಿಂದಾಗಿ ಮತ್ತೆ ಉತ್ಸಾಹ, ಪೈಲ್ವಾನ್‍ನಾಗಿದ್ದಾಗ ಜಿಗಿವಂತೆ ಮತ್ತೆ ಜಿಗಿಯುವಷ್ಟು ಉತ್ಸಾಹ ಪಡೆದುಕೊಳ್ಳುತ್ತಾನೆ. ರೈತರ ಕನಸುಗಳನ್ನು ಬಹುರಾಷ್ಟ್ರೀಯ ಕಂಪನಿಗೆ ಮಾರಾಟ ಮಾಡಿದ ಸರ್ಕಾರದ ನೀತಿಯ ವಿರುದ್ಧ ಸಂಘಟನೆ, ಹೋರಾಟ ಮಾತ್ರವೇ ರೈತರಿಗಿರುವ ಪರ್ಯಾಯ ಎಂದು ಕಲಾತ್ಮಕವಾಗಿಯೂ, ತಾರ್ಕಿಕವಾಗಿಯೂ ಕಾದಂಬರಿ ಮಂಡಿಸುತ್ತದೆ.
