ಓದುವ ಸಂಸ್ಕೃತಿ

ನಾಡಿನ ಹಲವು ಕಡೆ ನಡೆಯುವ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ, ಸಾಂಸ್ಕೃ ತಿಕ ಕಾರ್ಯಕ್ರಮಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ, ಅಷ್ಟೇ ಏಕೆ? 2-3 ಜನ ಲೇಖಕರು, ಚಿಂತಕರು ಸೇರಿ ಹರಟೆ ಹೊಡೆಯುವ ಹಲವು ಸಂದರ್ಭಗಳಲ್ಲಿ ಕೂಡ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಕುರಿತು ಗಂಭೀರವಾಗಿ ಚರ್ಚಿಸಲಾಗುತ್ತಿದೆ. ಈ ಚರ್ಚೆಯಲ್ಲಿ ಒಂದು ರೀತಿಯ ವಿಷಾದ, ಖೇದ, ತಲ್ಲಣಗಳು ಇಣುಕು ಹಾಕುತ್ತವೆ. ಹಿಂದೊಮ್ಮೆ ನಮ್ಮಲ್ಲಿ ‘ಓದುವ ಸಂಸ್ಕೃತಿ ಜಾಗೃತವಾಗಿತ್ತೆಂದೂ, ಈಗ ದಿನದಿಂದ ದಿನಕ್ಕೆ ಅವು ಕಡಿಮೆಯಾಗುತ್ತಿದೆ ಎನ್ನುವ ಭಾವ ಇವರ ಚರ್ಚೆಯ ಕೇಂದ್ರದಲ್ಲಿದೆ.
ಆಧುನಿಕ ಸಂದರ್ಭದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರುವ ಶೃವ್ಯ ದೃಶ್ಯ ಮಾಧ್ಯಮಗಳಿಂದ ‘ವಾಚನ’ದ ಕುರಿತ ಆಸಕ್ತಿ ಕಡಿಮೆಯಾಗಿದೆ. ಕೇಳುವ ರೇಡಿಯೋ, ಟೇಪರೆಕಾರ್ಡರ್, ನೋಡುವ ಸಿನೆಮಾ, ಟೆಲಿವಿಷನ್, ಇತ್ಯಾದಿ ಆಧುನಿಕ ಮಾಧ್ಯಮಗಳು ಮನೆ ಮನೆಯಲ್ಲಿ ‘ಓದುವ ಸಂಸ್ಕೃತಿ’ಯನ್ನೇ ನಾಶ ಮಾಡಿದೆ. ಸಮಾಜದಲ್ಲಿ ಇದೊಂದು ಸಾಂಸ್ಕೃತಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ ಎನ್ನುವ ಸರಳ ತರ್ಕವನ್ನು ಸಂಘಟಿಸಲಾಗುತ್ತಿದೆ. ಯಾಕೆ ಇದು ಸರಳ ತರ್ಕ ಎಂದರೆ ಸಾಂಸ್ಕೃತಿಕ ಬಿಕ್ಕಟ್ಟಿನ ಮೂಲಕ್ಕೆ ಇನ್ನೂ ಆಳಕ್ಕೆ ಈ ಚರ್ಚೆ ಇಳಿಯುವುದಿಲ್ಲ. ‘ಓದಿನ ಸಂಸ್ಕೃತಿ’ ಕಡಿಮೆ ಆಗಲು ದೃಶ್ಯ-ಶೃವ್ಯ ಮಾಧ್ಯಮಗಳೇ ಕಾರಣವೇ? ಅಥವಾ ಬೇರೆ ಕಾರಣಗಳಿವೆಯೆ? ಇದರ ಪರಿಹಾರಕ್ಕೆ ಇರುವ ಪರ್ಯಾಯಗಳೇನೆಂದು ಪುನರ್ ಪರಿಶೀಲಿಸಬೇಕಾಗಿದೆ.
ಇಲ್ಲಿ ಎರಡು ಪ್ರಶ್ನೆ ನಮಗೆ ಮುಖ್ಯವಾಗುತ್ತವೆ.
1) ವಾಚನಾಭಿರುಚಿ (ಓದುವ ಸಂಸ್ಕೃತಿ) ಎಂದರೇನು?
2) ನಿಜವಾಗಿಯೂ ವಾಚನಾಭಿರುಚಿ ಕಡಿಮೆ ಆಗಿದೆಯೆ?
‘ವಾಚನಾಭಿರುಚಿ’ ಅಥವಾ ‘ಓದುವ ಸಂಸ್ಕೃ ತಿ’ ಎನ್ನುವಲ್ಲಿ ‘ವಾಚನ’ ‘ಓದು’ ಎನ್ನುವುದನ್ನು ಸ್ವಲ್ಪ ಭಿನ್ನವಾಗಿಯೇ ನೋಡಬೇಕಾಗಿದೆ. ಯಾಕೆಂದರೆ ನಮ್ಮ ಈಗಿನ ಗ್ರಹೀತ ಅರ್ಥದಲ್ಲಿ ‘ಓದು’ ಎಂದರೆ ಅದು ಮುದ್ರಿತ ವಿಷಯದ ಓದಿಗೆ ಸೀಮಿತವಾಗಿದೆ. ಪುಸ್ತಕ ಓದುವುದು, ಪತ್ರಿಕೆ ಓದುವುದು ಸಂವಿಧಾನ ಓದುವುದು, ಕಾವ್ಯವಾಚನ….. ಹೀಗೆ ಬಳಸುತ್ತೇವೆ.

ಇಲ್ಲಿ ನಮಗೆ ಅಕ್ಷರ ಮುಖ್ಯವಾಗುತ್ತದೆ; ಹಾಗಾಗಿ ನಮಗೆಲ್ಲಾ ‘ಓದು’ ಎನ್ನುವುದು ಅಕ್ಷರ ಪದ್ಧತಿಯ ಅರಿವಿನ ಮೂಲಕ ನಡೆಯುವ ಒಂದು ಕ್ರಿಯೆ; ತೀರಾ ಕೃತ್ರಿಮ ಕ್ರಿಯೆ ಕೂಡಾ.
ಓದುವುದನ್ನು ಮುದ್ರಿತ ಜಗತ್ತಿಗಿಂತ ಆಚೆಗೆ, ಇನ್ನೂ ವಿಸ್ತಾರಕ್ಕೆ ಒಯ್ದಾಗ ‘ಓದು’ ಎನ್ನುವುದು ಒಂದು ಮಾನವೀಯ ಚಟುವಟಿಕೆಯ ಭಾಗವಾಗುತ್ತದೆ. ಈ ಓದು ಮೌಖಿಕ ಸ್ವರೂಪದ್ದು. ಉಳುಮೆ ಮಾಡುವ ರೈತ ಆಕಾಶವನ್ನು ಓದುತ್ತಾನೆ. ಮೋಡ, ನಕ್ಷತ್ರ, ತಾರೆಗಳನ್ನು ಆತ ಕರಾರುವಕ್ಕಾಗಿ ಓದುತ್ತಾನೆ. ಮೀನುಗಾರ ಸಮುದ್ರವನ್ನು, ಅಲ್ಲಿ ಆಗಾಗ ಬದಲಾಗುವ ಚಹರೆಯನ್ನು ಓದುತ್ತಾನೆ. ಗಣಿ ಕಾರ್ಮಿಕ ಭೂಮಿಯ ಒಳಗನ್ನು ಓದುತ್ತಾನೆ. ಬುಡಕಟ್ಟು ಸಮುದಾಯದ ವ್ಯಕ್ತಿ ಕಾಡನ್ನು ಓದುತ್ತಾನೆ……. ಹೀಗೆ ಓದು ವಿಸ್ತರಿಸುತ್ತಾ, ವಿಸ್ತರಿಸುತ್ತಾ ಮನುಷ್ಯನೊಬ್ಬ ಬದುಕನ್ನು ಓದುವ ಅರ್ಥಪೂರ್ಣ ಕ್ರಿಯೆಯಾಗಿ ಅಥವಾ ಬದುಕಿನ ಸಹಜ, ಅಗತ್ಯ ಕ್ರಿಯೆಯಾಗಿ ಬದಲಾಗುತ್ತದೆ.
ಆದರೆ ಓದಿನ ಮೌಖಿಕ ಸ್ವರೂಪ ‘ಬರವಣಿಗೆ ಸಂಸ್ಕೃ ತಿಗೆ’ ಬದಲಾದಾಗ ಒಂದು ದೊಡ್ಡ ಸ್ಥಿತ್ಯಂತರವೇ ಆಯ್ತು. ಬರವಣಿಗೆ ಶ್ರೇಷ್ಠವೆಂದೂ, ಹೆಚ್ಚು ಅಧಿಕೃತವೂ ಎನ್ನುವ ಮಾನ್ಯತೆ ಪಡೆದುಕೊಂಡಿತು. ಹಾಗೆಯೇ ಮಾತಿಗಿರುವ ಮೌಲ್ಯ, ಅರ್ಥವಂತಿಕೆ ಕಡಿಮೆಯಾಗುತ್ತಾ ಇಂದು ಮೌಖಿಕ ಪರಂಪರೆ ಒಂದು ಜ್ಞಾನವೇ ಅಲ್ಲವೆನ್ನುವ ಅಪಾಯದ, ಬದುಕಿನ ವಿರೋಧಿಯಾದ ನೆಲೆಗೆ ಬಂದು ತಲುಪಿತು. ಉದಾಹರಣೆಗೆ ನಮ್ಮ ನ್ಯಾಯಾಲಯದ ಚೌಕಟ್ಟನ್ನು ನೋಡಿ. ಅಲ್ಲಿ ಮುದ್ರಿತ ಪುಸ್ತಕವನ್ನೇ ಮುಟ್ಟಿಸಿ ಸತ್ಯಹೇಳುವ ಪ್ರಮಾಣ ಮಾಡಿಸುತ್ತಾರೆ. ನ್ಯಾಯದಾನದಲ್ಲಿ ಲಿಖಿತ ಪುರಾವೆಗಳನ್ನಷ್ಟೇ ನೋಡುತ್ತಾರೆ. ಕೇವಲ ಮಾತಿಗೆ ಅಂತಹ ಪ್ರಾಧಾನ್ಯತೆ ಇಲ್ಲ.
ಆದರೆ ಮಹಾಭಾರತ ಕಾವ್ಯದಲ್ಲಿ ಪಗಡೆಯಾಟದಲ್ಲಿ ಸೋತವರು ಅಡವಿಗೆ ಹೋಗಬೇಕೆಂದು, ಯುದ್ಧದಲ್ಲಿ ಗೆದ್ದವರು ಪಟ್ಟವನ್ನೇರಬೇಕೆಂಬ ನಿಯಮ ಲಿಖಿತದಲ್ಲಿರಲಿಲ್ಲ. ಎಲ್ಲವೂ ಮೌಖಿಕವಾಗಿಯೇ ಇತ್ತು. ಭೀಷ್ಮ ಮದುವೆಯಾಗುವುದಿಲ್ಲವೆಂದು ದಸ್ತಾವೇಜನ್ನು ಬರೆದಿಟ್ಟಿರಲಿಲ್ಲ. ನಮ್ಮ ಯಾವುದೇ ಜನಪದ ಕತೆಗಳಲ್ಲಿ, ಕಾವ್ಯಗಳಲ್ಲಿ ಕೂಡ ಇದು ಹೀಗೆಯೇ ಇತ್ತು. ಈಗಲೂ ಹಳ್ಳಿಯಲ್ಲಿ, ನಗರ ಸಂಸ್ಕೃ ತಿಯ ವ್ಯಸನಗಳಿಗೆ ಬಲಿಯಾಗದ ಬುಡಕಟ್ಟುಗಳಲ್ಲಿ ಅಲಿಖಿತ ಮಾತಿಗೆ ಮಹತ್ವ ಇದೆ. ಹಾಗಾಗಿ ಎಲ್ಲರೂ ಮಾತನಾಡ ಬಲ್ಲವರಾಗಿದ್ದರು. ಮಾತು ಬದುಕನ್ನು ಓದುವ, ಅರ್ಥೈಸುವ, ಅಭಿವ್ಯಕ್ತಿಸುವ ಕ್ರಿಯೆಯಾಗಿತ್ತು. ಇದು ಸಮೂಹದ ಸ್ವತ್ತಾಗಿತ್ತು.
ಆದರೆ ‘ಬರವಣಿಗೆ’ ಓದಿಗಿರುವ ಸಮೂಹ ನಿಷ್ಟತೆಯನ್ನು ನಾಶಮಾಡಿ ನಿರ್ದಿಷ್ಟ ಜಾತಿ, ಅನಂತರದ ದಿನಗಳಲ್ಲಿ ನಿರ್ದಿಷ್ಟ ವರ್ಗದ ಸ್ವತ್ತಾಯಿತು. ಇರುವ ಜ್ಞಾನವನ್ನು ಅಲ್ಲಗಳೆದು, ಅದನ್ನು ಒರಸಿಹಾಕಿ ಹೊಸದನ್ನು ಅದೇ ಸ್ಥಳದಲ್ಲಿ ಸ್ಥಾಪಿಸುವ ಕ್ರಿಯೆಯಾಯಿತು. ಪಂಪನ ಆದಿಪುರಾಣದಲ್ಲಿ ದಿಗ್ವಿಜಯ ಮಾಡಿ ಬಂದ ಭರತ ವೃಷಭಾಚಲ ಬೆಟ್ಟಕ್ಕೆ ಹೋಗುತ್ತಾನೆ. ಅಲ್ಲಿ ಇವನ ದಿಗ್ವಿಜಯದ ಸುದ್ದಿ ಕೆತ್ತಲು ಸ್ಥಳವಿರಲಿಲ್ಲ. ಆಗ ಆತ ಇರುವುದನ್ನು ಅಳಸಿಹಾಕಿ ತನ್ನದನ್ನು ಬರೆದು ಬರುತ್ತಾನೆ. ಬರವಣಿಗೆ ಹೀಗೆ ಹಳೆಯ ಸತ್ಯವನ್ನು ನಾಶಮಾಡುತ್ತಲೇ ಮುಂದುವರಿಯುತ್ತದೆ. ತನ್ನ ಅಧಿಕೃತತೆಯನ್ನು ಪ್ರತಿಷ್ಠಾಪಿಸಲು ಅನ್ಯಮಾರ್ಗವನ್ನು ಅನುಸರಿಸುತ್ತವೆ. ಹೀಗಾಗಿ ಬರವಣಿಗೆಯ ಜೊತೆ ಜೊತೆಗೆ ಭ್ರಷ್ಟತೆ ಕೂಡ ಪ್ರಾರಂಭವಾಯಿತು. ‘ಬರವಣಿಗೆ’ ಒಂದು ನಿರ್ಧಿಷ್ಟ ವರ್ಗದ ಸ್ವತ್ತಾಗಿರುವುದರಿಂದ ವರ್ಗ ಹಿತಾಸಕ್ತಿ ಕಾಯ್ದುಕೊಳ್ಳಲು ಮೋಸ-ವಂಚನೆ-ಹಿಂಸೆಯನ್ನು ತನ್ನೊಳಗೆ ವಿಸ್ತರಿಸಿಕೊಳ್ಳುತ್ತಾ ಹೋಯಿತು.
ಹೀಗೆ ವರ್ಗ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಲ್ಲಿ ಆಸಕ್ತವಾಗಿರುವ ‘ಬರವಣಿಗೆ’ಯಿಂದ ಮುದ್ರಣ ಸಂಸ್ಕೃ ತಿಗೆ ಬಂದಾಗ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿತು. ಒಂದು ರೀತಿಯಲ್ಲಿ ಸಮುದಾಯಕ್ಕೆ ಲಿಬರೇಶನ್, ಬಿಡುಗಡೆ ಸಿಕ್ಕಿತು.
ಯಾವುದೇ ದಸ್ತಾವೇಜು, ನಿಯಮ, ಕಾವ್ಯ, ಶಾಸ್ತ್ರಗಳೆಲ್ಲವೂ ಲಿಖಿತ ಅಂದರೆ ಕೈಬರಹ ರೂಪದಲ್ಲಿರುವಾಗ ಕೆಲವೇ ಕೆಲವರ ಆಸ್ತಿಯಾಗಿತ್ತು. ಅನಕ್ಷರಸ್ತ ಸಮುದಾಯದಲ್ಲಿಯೂ ಅಲ್ಪ ಸ್ವಲ್ಪ ಅಕ್ಷರ ಬಲ್ಲ ಕೆಲವರಿಗೂ ಇದು ಸಿಗುತ್ತಿರಲಿಲ್ಲ. ಬೈಬಲ್ ಪೋಪರ ಆಸ್ತಿಯಾಗಿತ್ತು; ಭಗವದ್ಗೀತೆ, ವೇದ ಪುರಾಣಗಳು ಜೋಯಿಸರ ಪುರೋಹಿತರ ಆಸ್ತಿಯಾಗಿತ್ತು. ಕುರಾನ್ ಮುಲ್ಲಾರ ಆಸ್ತಿಯಾಗಿತ್ತು. ಆದರೆ ಮುದ್ರಣ ಎನ್ನುವುದು ಒಂದು ಗ್ರಂಥದ ಸಾವಿರಾರು ಪ್ರತಿಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆಯಾಗಿರುವುದರಿಂದ ಏಕವ್ಯಕ್ತಿಯ ಆಸ್ತಿ ಸಮುದಾಯದ ಆಸ್ತಿಯಾಯಿತು. ಇದರಿಂದ ಮುಚ್ಚಿಡಲ್ಪಟ್ಟಿದ್ದ ಹಲವು ಸತ್ಯಗಳು ಹೊರಬಂದವು. ಹಲವರು ಪ್ರಶ್ನಿಸಲು ತೊಡಗಿದರು. ‘ಒಬ್ಬರ ಓದು’ ಎಲ್ಲರ ಓದಾಗುವ ಬದಲು ‘ಎಲ್ಲರ ಓದು’ ಸತ್ಯದ ಅನ್ವೇಷಣೆಗೆ, ಬದುಕಿನ ಅನ್ವೇಷಣೆಗೆ ನಾಂದಿ ಹಾಡಿತು.
ಆದರೆ ಸಮಸ್ಯೆ ಆದದ್ದು ಇಲ್ಲಿಂದ ಮುಂದೆ ‘ಓದು’ ‘ವಾಚನ’ ಎಂದರೆ ಮುದ್ರಿತ ಪುಸ್ತಕದ ಓದು-ವಾಚನ ಎನ್ನುವ ಅರ್ಥವನ್ನು ಪಡೆದುಕೊಂಡಿತು. ಹಾಗಾಗಿ ಈಗ ನಾನು ‘ಓದಿನ ಸಂಸ್ಕೃ ತಿ’ ಕಡಿಮೆ ಆಗುತ್ತಿದೆ ಎನ್ನುವಾಗ ‘ಮುದ್ರಿತ ಪುಸ್ತಕದ ಓದು’ ಕಡಿಮೆ ಆಗಿದೆ ಎನ್ನುವ ಅರ್ಥದಲ್ಲಿಯೇ ಮಾತನಾಡುತ್ತೇವೆ.
ಹಾಗೆ ನೋಡಿದರೆ ಸೀಮಿತವಾದ ಮುದ್ರಿತ ಓದು ಕೂಡಾ ಎಲ್ಲರ ಸ್ವತ್ತಾಗಲೇ ಇಲ್ಲ. ಇಂದೂ ಕೂಡಾ ಶೇಕಡಾ 50 ರಷ್ಟು ಜನ ಅನಕ್ಷರಸ್ಥರು ಇರುವಾಗ ಅದು ಎಲ್ಲರ ಓದಾಗಲು ಹೇಗೆ ಸಾಧ್ಯ? ‘ಓದುವ ಸಂಸ್ಕೃತಿ’ ಬೆಳೆಯಲಿಲ್ಲ ಎಂದು ಕೊರಗುವ ಬದಲು ಎಲ್ಲರನ್ನು ಅಕ್ಷರಸ್ಥರನ್ನಾಗಿಸುವ ಕೆಲಸವನ್ನು ಮಾಡುವುದು ಒಳ್ಳೆಯದು.
ಈ ಹಿಂದೆ ಹೇಳಿದಂತೆ ಓದು ಎಂದರೆ ಕೇವಲ ‘ಸಾಹಿತ್ಯದ ಓದು’ ಎಂದು ಮಾತ್ರ ಅರ್ಥೈಸುತ್ತಿರುವ ಸಂದರ್ಭದಲ್ಲಿ ಶ್ರವ್ಯ-ದೃಶ್ಯ ಮಾಧ್ಯಮಗಳು ಕ್ರಾಂತಿಕಾರಕವಾದ ಬದಲಾವಣೆಯನ್ನು ತಂದವು. ಇದು ಓದಿನ ವ್ಯಾಖ್ಯಾನವನ್ನು ವಿಸ್ತರಿಸಿತು. ಈಗಲೂ ಪುಸ್ತಕ ಸಂಸ್ಕೃತಿ ಕೆಲವರ ಸ್ಪತ್ತಾಗಿರುವ ಸಂದರ್ಭದಲ್ಲಿ ಇವೆರಡೂ ವಿಚಾರವನ್ನು, ಮಾಹಿತಿಯನ್ನು ಎಲ್ಲರ ಬಳಿಗೆ ಒಯ್ಯುವ ಕೆಲಸ ಮಾಡಿತು. ಒಂದು ಕಾದಂಬರಿ, ಕತೆ, ಭಾಷಣ, ಓದಲಾರದವರೂ ರೇಡಿಯೋದಲ್ಲಿ, ಟಿ.ವಿಯಲ್ಲಿ ನೋಡಿ ಅನುಭವಿಸಲು, ಅನುಭವವನ್ನು ವಿಸ್ತರಿಸಿಕೊಳ್ಳಲು ತೊಡಗಿದರು. ಒಂದು ರೀತಿಯಲ್ಲಿ ಮೌಖಿಕತೆಯ ಕಡೆಗೆ ಮತ್ತೆ ಸರಿಯಲು ಪ್ರಾರಂಭಿಸಿತು.

ನಿರ್ದಿಷ್ಟವಾದ ಅರ್ಥದಲ್ಲಿ ‘ಮುದ್ರಿತ ಸಾಮಗ್ರಿ’ಯನ್ನು ‘ಮಾಹಿತಿ’ ಎಂದು ನಾವು ಕರೆಯಬಹುದಾದರೆ ಮಾಹಿತಿಯನ್ನು ಉತ್ಪಾದಿಸುವ ಮತ್ತು ಬಳಸುವ ವಿಧಾನಗಳು ಬದಲಾಗಿವೆ. ಇದನ್ನು ಹಲವರು ಇಂದು ಗುರುತಿಸುತ್ತಿಲ್ಲ. ಅಂದರೆ ಕಾಲದಿಂದ ಕಾಲಕ್ಕೆ ಸಂದರ್ಭದಿಂದ ಸಂದರ್ಭಕ್ಕೆ ಬದಲಾಗುತ್ತಿರುವ ಉತ್ಪಾದನೆಯ ಸ್ವರೂಪವನ್ನು ಮತ್ತು ಬಳಕೆಯ ಅಗಾಧತೆಯನ್ನು ಸೂಕ್ಷ್ಮವಾಗಿ ನೋಡಿದರೆ ಓದು-ವಾಚನ ಹೆಚ್ಚಾಗಿವೆಯೆಂದೇ ಹೇಳಬೇಕು.
ಆದರೂ ಇಲ್ಲಿ ಸಮಸ್ಯೆ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಶ್ರವ್ಯ-ದೃಶ್ಯ ಮಾಧ್ಯಮದ ಸಾಧನಗಳು ಎಷ್ಟು ಜನರ ಹತ್ತಿರವಿದೆ ಎಂದು ನೋಡಿದಾಗ ಮತ್ತು ಅದು ಬಿತ್ತರಿಸುವ ಮಾಹಿತಿ ನಿಯಂತ್ರಿತ ಸ್ವರೂಪವನ್ನು ನೋಡಿದಾಗ ಮೌಖಿಕ ಪರಂಪರೆಯಲ್ಲಿ ಇರುವ ‘ಬದುಕಿನ ಓದು’ ಇಲ್ಲಿ ಅರ್ಥಪಡೆದು ಕೊಂಡಿಲ್ಲವೆಂದೇ ಹೇಳಬೇಕಾಗುತ್ತದೆ.
ಯಾಕೆ ಹೀಗೆ ಎಂದು ಗಂಭೀರವಾಗಿ ಯೋಚಿಸಿದಾಗ ಬಹುಶಃ ‘ಬದುಕಿನ ಅನುಭವ’ ಮತ್ತು ‘ಮುದ್ರಣ ಸಾಹಿತ್ಯ’ ಮುಂದೊಡ್ಡುವ ಅನುಭವಗಳ ನಡುವಿನ ಕಂದಕವೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಓದುವ ಅಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮೆದುರಿಗೆ ಇರುವ ಸವಾಲು ನಿಜವಾದ ಓದುವ ಅಭಿರುಚಿಯನ್ನು ಬೆಳೆಸುವುದು.
ಹೀಗೆ ನಾವು ಯೋಚಿಸುತ್ತಾ ಕಾರ್ಯಮಗ್ನರಾಗುವ ಸಂದರ್ಭದಲ್ಲಿಯೇ ವಾಚನಾಭಿರುಚಿಯನ್ನು ನಿಯಂತ್ರಿಸುವ ಕೆಲಸ ಉದ್ಯಮ ಸಂಸ್ಕೃತಿಯಿಂದ ನಡೆಯುತ್ತವೆ. ಒಂದು ಕಾಲದಲ್ಲಿ ಬರಹ, ಮುದ್ರಣಗಳ ಓದನ್ನು ಜಾತಿ ವ್ಯವಸ್ಥೆ ನಿಯಂತ್ರಿಸುತ್ತಿದ್ದರೆ ಇಂದು ಅದನ್ನು ನಿಯಂತ್ರಿಸುತ್ತಿರುವುದು ವರ್ಗಶಕ್ತಿ; ಬಂಡವಾಳ ವರ್ಗ ನಿಯಂತ್ರಿಸುತ್ತಿದೆ. ಅಂದರೆ ವಾಚನ ಸಂಸ್ಕೃತಿಯನ್ನು ‘ಕ್ಯಾಪಿಟಲ್’ ಕಂಟ್ರೋಲ್ ಮಾಡುತ್ತದೆ. ಯಾರು ಓದಬೇಕು? ಏನನ್ನು ಓದಬೇಕು? ಹೇಗೆ ಓದಬೇಕು? ಯಾವುದನ್ನು ಎಷ್ಟೆಷ್ಟು ಓದಬೇಕು? ಮತ್ತು ಓದಿನ ನಂತರ ನಿರ್ಮಾಣವಾಗುವ ಸಮುದಾಯ ಹೇಗಿರಬೇಕು ಎಂದು ಅದು ಆಲೋಚಿಸಿಯೇ ಓದಿಗೆ ಸಾಮಗ್ರಿಯನ್ನು ಒದಗಿಸುತ್ತದೆ. ಇಲ್ಲಿ ಓದು ಮುಖ್ಯವಲ್ಲ. ಓದಿನ ನಂತರದ ಫಲಿತ ಮುಖ್ಯವಾದದ್ದು. ಓದುಗನಿಗೆ ಅರಿವಿಲ್ಲದೆ ನಿರ್ದಿಷ್ಟ ಹಿತಾಸಕ್ತಿಗೆ ಬಂಧಿಯಾಗುವ ಸಾಧ್ಯತೆಯೇ ಹೆಚ್ಚು. ಹಿಂದೆಂದಿಗಿಂತ ಈಗ ಈ ಓದಿನ ನಿಯಂತ್ರಣ ಹೆಚ್ಚಾಗಿರುವುದನ್ನು ಗುರುತಿಸಬಹುದು.
ಹೀಗೆ ಕಲುಶಿತವಾಗುತ್ತಿರುವ ಅಭಿರುಚಿಯನ್ನು ಬದಲಿಸುವ ಅಗತ್ಯವಿದೆ. ಬದಲಿಸಬೇಕು ಅನ್ನುವಾಗ ಯಾವ ರೀತಿಯ ವಾಚಕರನ್ನು ಹೊಂದಬೇಕು? ಸಿದ್ಧಪಡಿಸಬೇಕು? ಅವರ ಓದಿಗೆ ಯಾವ ಅನುಭವ ಸಾರವನ್ನು ಪೂರೈಸಬೇಕು ಎನ್ನುವುದನ್ನು ಇಂದು ಆಲೋಚಿಸಬೇಕಾಗಿದೆ.
ಇಂತಹ ಪ್ರಯೋಗಗಳು ಇಂದು ನಾಡಿನಲ್ಲಿ ಕೆಲವು ಕಡೆ ಸಣ್ಣ ಪ್ರಮಾಣದಲ್ಲಾದರೂ ಪ್ರಾರಂಭ-ವಾಗಿರುವುದು ಆಶಾದಾಯಕ ಬೆಳವಣಿಗೆ.

ಉತ್ತರಕನ್ನಡದಲ್ಲಿ ಈ ನಿಟ್ಟಿನಲ್ಲಿ ನಡೆಯುತ್ತಿರುವ ಒಂದು ಪ್ರಯೋಗವನ್ನು ಉದಾಹರಿಸಿದರೆ ಈ ವರೆಗಿನ ನನ್ನ ಆಲೋಚನೆ ಹೆಚ್ಚು ಸ್ಪಷ್ಟವಾಗಬಹುದು ಎಂದು ಕೊಂಡಿದ್ದೇನೆ.
ಕಳೆದ ಹತ್ತು ವರ್ಷಗಳಿಂದ ಚಿಂತನ ಉತ್ತರಕನ್ನಡ ಲಕ್ಷಾಂತರ ಪುಸ್ತಕಗಳನ್ನು ಓದಿಗೆ ಹರಿಬಿಟ್ಟಿದೆ. ಓದುಗರನ್ನು ಸೃಷ್ಟಿಸುವುದಕ್ಕಿಂತ ಆರೋಗ್ಯಪೂರ್ಣ ಓದುಗರನ್ನು ಸೃಷ್ಟಿಸುವುದು ನಮ್ಮೆದುರಿನ ಪ್ರಶ್ನೆ ಎಂದು ನಂಬಿದ ಅದು ಜನರ ಬದುಕಿನ ವಾಸ್ತವದ ನೆಲೆಯಿಂದಲೇ ಪುಸ್ತಕಕ್ಕೆ ವಸ್ತುವನ್ನು ಎತ್ತಿಕೊಳ್ಳುತ್ತಿವೆ. ಸಮುದಾಯದ ಅನುಭವ ಮತ್ತು ಪುಸ್ತಕದ ಅನುಭವಗಳ ನಡುವಿನ ಕಂದಕವನ್ನು ತುಂಬುವ ಮೂಲಕ ಪುಸ್ತಕವು ಸಮುದಾಯದ ಅನುಭವವನ್ನು ಓದುವ ತನ್ಮೂಲಕ ಅನುಭವವನ್ನು ವಿಸ್ತರಿಸಲು ಅದು ಪ್ರಯತ್ನಿಸುತ್ತಿದೆ. ಅದು ಹೊರ ತಂದಿರುವ ಕಾಡಿನ ಕವಿ ಕುವೆಂಪು, ಗ್ಯಾಬ್ ಲೋಕದಲ್ಲಿ ರಾಮಣ್ಣ, ಸಾಕ್ಷರ ನಾಡಿಗೆ ಪಯಣ, ಉದ್ಯೋಗದ ಹಕ್ಕು, ಸ್ವಾತಂತ್ರ್ಯ ಹೋರಾಟದ ಚಿತ್ರಗಳು ಆಡುಬಾ…… ಹಾಡುಬಾ, ಪವಾಡ ಬಯಲು, ನೀನು ಹುಟ್ಟಿದ್ದು ಹೇಗೆ? ಹೆಣ್ಣುಮಗು, ಸೌಹಾರ್ದ ಕರ್ನಾಟಕ ಇತ್ಯಾದಿ ಹೊತ್ತಿಗೆಗಳು ಕೇವಲ 2 ರಿಂದ 5 ರೂಪಾಯಿ ಬೆಲೆಯ ಮತ್ತು 25 ರಿಂದ 50 ಪುಟಗಳ ಒಳಗಿನ ಪುಸ್ತಕಗಳು, ಇದರ ಬಿಡುಗಡೆ ಆಗಿದ್ದೆಲ್ಲಾ ಜಾತ್ರೆಯಲ್ಲಿ, ಸಂತೆಯಲ್ಲಿ, ಬಸ್‍ಸ್ಟ್ಯಾಪ್‍ನಲ್ಲಿ, ಯಾರದೋ ಮದುವೆಯಲ್ಲಿ. ಮಾರಾಟ ಮಾಡಿದ್ದು ಶಾಲೆಯಲ್ಲಿ, ಜನಸೇರುವ ಗಲ್ಲಿಗಳಲ್ಲಿ, ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ; ಬಸ್‍ಸ್ಟ್ಯಾಂಡಿನಲ್ಲಿ ಬಸ್ ಹತ್ತಿ ಭಾಷಣ ಮಾಡುವ ಮೂಲಕ. ಇದು ಎಂತಹ ಪರಿಣಾಮ ಬೀರಿತು ಎಂದರೆ ತಿಂಗಳಿಗೊಮ್ಮೆಯಾದರೂ ಹೊಸ ಪುಸ್ತಕ ಬರದಿದ್ದರೆ ಜನ ಕೇಳುತ್ತಿದ್ದರು. ಯಾಕೆ ಪುಸ್ತಕ ಬಂದಿಲ್ಲ ಎಂದು ಬಳೆ ಮಾರುವ ಹೆಣ್ಣುಮಗಳು ವಿಚಾರಿಸುತ್ತಿದ್ದಳು. ಪೇಟೆಗೆ ಬಂದ ಕೃಷಿಕೂಲಿಕಾರ ತನಗೊಂದು ಮತ್ತು ತಮ್ಮ ಪಕ್ಕದ ಮನೆಗೆಂದು ಎರಡು ಪುಸ್ತಕ ಒಯ್ಯುತ್ತಿದ್ದ. ಇದು ಯಾಕೆ ಸಾಧ್ಯವಾಯಿತೆಂದರೆ 1. ಕಡಿಮೆ ಬೆಲೆಯಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಓದಬಹುದಾದ ಸರಳ ಪುಸ್ತಕ. 2. ಜನರಿದ್ದಲ್ಲಿ ಪುಸ್ತಕ ಲಭ್ಯ. 3. ಜನರ ಬದುಕಿನ ವಾಸ್ತವಕ್ಕೆ ಹತ್ತಿರವಾದ ತನ್ನದೇ ಬದುಕನ್ನು ಅರ್ಥೈಸಲು ಸಾಧ್ಯವಾಗುವ ಪುಸ್ತಕ.
ಆದರೆ ನಮ್ಮಲ್ಲಿ ಪುಸ್ತಕ ಕೂಡ ಇಂದು ಉದ್ಯಮದ ಸ್ವರೂಪ ಪಡೆದುಕೊಂಡಿದೆ. 400-500 ಪುಟದ ಪುಸ್ತಕಗಳು,…… 100 ರಿಂದ 500 ರೂ. ಬೆಲೆಯ ಪುಸ್ತಕಗಳು ಹೆಚ್ಚೆಚ್ಚು ಪ್ರಕಟವಾಗುತ್ತಿದೆ. ಅದು ಜನರನ್ನು ತಲುಪಬೇಕು ಎನ್ನುವುದಕ್ಕಿಂತ ಈ ಪುಸ್ತಕದಿಂದ ಎಷ್ಟು ಲಾಭ ಬರುತ್ತದೆ ಎನ್ನುವ ಕಡೆಗೆ ಹೆಚ್ಚು ಗಮನ. ಆಕರ್ಷಕ ಮುದ್ರಣ, ಬಣ್ಣ ಬಣ್ಣದ ಮುಖಪುಟ ಬಿಟ್ಟರೆ ಹೂರಣದಲ್ಲಿ ಹೊಸತನವಿಲ್ಲ. ಓದುವ ಮನಸ್ಸಿದ್ದರೂ ಜನಸಾಮಾನ್ಯರಿಗೆ ಕೈಗೆಟುಕಲಾರದು. ಕೈಗೆಟಕುವವರು ಈಗಾಗಲೇ ಕೊಳ್ಳುಬಾಕ ಸಂಸ್ಕೃತಿಯ ಭಾಗವೇ ಆಗಿರುವುದೂ, ಅದರ ಸಮರ್ಥಕರೂ ಆಗಿರುವುದರಿಂದ ಈ ರೀತಿಯ ಓದನ್ನು ಅವರು ಮಾಡುವುದಿಲ್ಲ.
ಗ್ರಾಹಕ ಕೇಂದ್ರಿತ ಮನಸ್ಥಿತಿಯನ್ನು ನಿರ್ಮಿಸುವ ಓದು ತನ್ನ ಉತ್ಪಾದನೆಗಳಿಗೆ ಮಾರುಕಟ್ಟೆ ಸೃಷ್ಟಿಸುವ ಕಡೆ ಕಾರ್ಯಪ್ರವೃತ್ತವಾಗಿರುವುದರಿಂದ, ಅದು ಯಾವುದೇ ಪ್ರತಿರೋಧವಿಲ್ಲದೆ ತೀರಾ ಬೋಳೆಯಾದ ಓದುಗರನ್ನು ಸೃಷ್ಟಿಸುತ್ತದೆ. ಆದರೆ ನಮಗಿಂದು ಬೇಕಾಗಿರುವುದು ಪ್ರತಿರೋಧಿಸುವ ಗುಣವುಳ್ಳ ವಾಚಕರು. ಅರ್ಥಪೂರ್ಣ ಪ್ರತಿರೋಧ ಯಾವತ್ತೂ ಜೀವಂತಿಕೆಯ ಲಕ್ಷಣ; ಜೀವಂತಿಕೆ ದೇಶಕಟ್ಟುವ, ಬದುಕುಕಟ್ಟುವ ಕಡೆ ತುಡಿಯುತ್ತವೆ.
ಹಾಗಾಗಿ ಓದುವ ಸಂಸ್ಕೃತಿಯು ಎಲ್ಲವನ್ನೂ ಪ್ರಶ್ನಿಸುತ್ತಲೇ ಸ್ವೀಕರಿಸುವ, ರೈತನ ಓದು, ಕಾರ್ಮಿಕನ ಓದು, ಬುಡಕಟ್ಟು ಸಮುದಾಯದ ಓದು ಕೂಡ ಓದಿನ ಒಂದು ಮುಖ್ಯಭಾಗವೇ ಎಂದು. ಸ್ವೀಕರಿಸುವ, ಗೌರವಿಸುವ, ತನ್ಮೂಲಕ ಬದುಕನ್ನು ಓದಿ, ಕಟ್ಟುವ ಕಡೆ ತುಡಿಯುವ ಸಂವೇದನಾಶೀಲ ಅಭಿರುಚಿಯನ್ನು ಬೆಳೆಸುವ ಕಡೆ ನಾವು ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಿಸಬೇಕಾಗಿದೆ.

ಡಾ. ವಿಠ್ಠಲ ಭಂಡಾರಿ
ಉಪನ್ಯಾಸಕರು
ಎಂ.ಜಿ.ಸಿ. ಕಲಾ, ವಾಣಿಜ್ಯ
ಮಹಾವಿದ್ಯಾಲಯ, ಸಿದ್ದಾಪುರ
(ಉ.ಕ.) 581 355 (ಧಾರವಾಡ ಆಕಾಶವಾಣಿ ಕೃಪೆ)

ರೈತರ ಆತ್ಮಹತ್ಯೆಯ ಎಳೆಹಿಡಿದು ಹೊರಟ “ಕೊನೆಜಿಗಿತ”

“ಹಳ್ಳಿಯ ಜನರು ಅಂದರೆ ಮಾರಲಿಕ್ಕೆ ಪೇಟೆಗೆ ತೆಗೆದುಕೊಂಡು ಹೋಗ್ತಾರಲ್ಲಾ, ಹಾಗೆ ಬುಟ್ಟಿಯಲ್ಲಿ ಮುಚ್ಚಿಹಾಕಿದ ಕೋಳಿಗಳಿದ್ದ ಹಾಗೆ. ರಾತ್ರಿಯಾಗುತ್ತಲೇ ಯಾರದೋ ಮಾಂಸಾಹಾರಿ ಹೊಟ್ಟೆಯಲ್ಲಿ ಜೀರ್ಣವಾಗುತ್ತವಲ್ಲ. ಹಾಗೇ ಈ ರೈತರ ಕತೆ” ಎನ್ನುವುದು ಕಾದಂಬರಿಯ ಕೇಂದ್ರ ಪಾತ್ರವಾದ ರೈತ ಫೈಲವಾನನ ಅನುಭವದ ಯೋಚನಾ ಲಹರಿ. ಮಾತ್ರವಲ್ಲ ಭಾರತದ ರೈತರನ್ನು ಕುರಿತ ಒಂದು ರೂಪಕವೂ ಹೌದು.
ಇದು ಉತ್ತರಪ್ರದೇಶದ ಕಾದಂಬರಿಕಾರ ಶಿವಮೂರ್ತಿಯವರ “ಆಖಿರಿ ಛಲಾಂಗ್” ಕಾದಂಬರಿಯಲ್ಲಿ ಬರುವ ಒಂದು ಮಾತು. ಇತ್ತೀಚೆÀಗೆ ಭಾರತದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಯ ದುರಂತದ ಎಳೆ ಹಿಡಿದು ಹೊರಟ ಶಿವಮೂರ್ತಿಯವರ ಈ ಕಾದಂಬರಿಯನ್ನು ಹಿರಿಯ ಲೇಖಕ ಡಾ. ಆರ್.ಪಿ. ಹೆಗಡೆಯವರು ಸುಂದರವಾಗಿ ಅನುವಾದಿಸಿದ್ದಾರೆ. ಕಾದಂಬರಿಯ ಹೆಸರು “ಕೊನೆಯ ಜಿಗಿತ”. ಅನುವಾದದಲ್ಲಿ ಪಳಗಿದ ಕೈ ಆರ್.ಪಿ. ಹೆಗಡೆಯವರದು. ಓದಿಗೆ ತೊಡಕಿಲ್ಲ. ಕನ್ನಡದ್ದೇ ಕೃತಿ ಎನ್ನುವಷ್ಟು ಆಪ್ತತೆ ಅವರ ಅನುವಾದದ ಕೃತಿಯಲ್ಲಿ.
ಭಾರತದ ರೈತರ ಸಮಕಾಲೀನ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿ ಚಿತ್ರಿಸುತ್ತದೆ. ಆತ್ಮಹತ್ಯೆಯ ಹಿಂದಿರುವ ಕಾರಣವನ್ನು ಅತ್ಯಂತ ಸೂಕ್ಷ್ಮವಾಗಿ, ನಿರುದ್ವಿಗ್ನವಾಗಿ ತೆರೆದಿಡುತ್ತದೆ. ವಿಶ್ಲೇಷಣೆಯ ಹಿಂದಿರುವ ಲೇಖಕರ ಸೈದ್ಧಾಂತಿಕ ಸ್ಪಷ್ಟತೆ ಕೂಡ ಇಲ್ಲಿ ಮಹತ್ವದ್ದೇ ಆಗಿದೆ. ಇಂತದ್ದೊಂದು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಆರ್.ಪಿ. ಹೆಗಡೆಯವರಿಗೆ ಅಭಿನಂದನೆಗಳು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *