
ಕೊರೊನಾ ಅವಧಿ’ಯಲ್ಲಿ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾಡಿದ ಮೂರನೇ ಭಾಷಣದ ಕುರಿತು ನಾನುಗೌರಿ.ಕಾಂ ಕೆಲವು ವ್ಯಕ್ತಿಗಳನ್ನು ಮಾತಾಡಿಸಿದಾಗ ಬಂದ ಅಭಿಪ್ರಾಯಗಳನ್ನು ಆಧರಿಸಿ ಬರೆದ ವಿಶೇಷ ವರದಿ.By ನಾನುಗೌರಿ ಡೆಸ್ಕ್ | Date -April 3, 2020

ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಕರೆಯ ಕುರಿತು ಕೊರೊನಾ ಸೋಂಕು ತಡೆ ಮತ್ತು ಲಾಕ್‌ಡೌನ್ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ಕೊರೊನ ವೈರಸ್ ವಿರುದ್ದ ರಾಷ್ಟ್ರದ ಸಾಮೂಹಿಕ ಒಗ್ಗಟ್ಟಿನ ಮನೋಭಾವವನ್ನು ಪ್ರದರ್ಶಿಸಲು ಬಾಲ್ಕನಿಗಳಲ್ಲಿ ಆದಿತ್ಯವಾರ ರಾತ್ರಿ ದೀಪ ಹಚ್ಚುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೊನ ವೈರಸ್ ಸ್ಫೋಟದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತನ್ನ ಮೂರನೇ ಭಾಷಣದಲ್ಲಿ, ಏಪ್ರಿಲ್ 5 ರ ಆದಿತ್ಯವಾರದಂದು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಗಳ ದೀಪಗಳನ್ನು ಸ್ವಿಚ್ ಆಫ್ ಮಾಡಿ, ದೀಪಗಳು, ಮೇಣದ ಬತ್ತಿಗಳು, ಮೊಬೈಲ್ ಬ್ಯಾಟರಿ ದೀಪಗಳನ್ನು ಬೆಳಗಿಸಬೇಕೆಂದು ಮನವಿ ಮಾಡಿದರು.
ಹೆಸರು ಹೇಳಲಿಚ್ಛಿಸದ ತುಮಕೂರು ಜಿಲ್ಲೆಯ ವೈದ್ಯರೊಬ್ಬರು ’ಪ್ರಧಾನಿಯ ಮಾತು ಒಪ್ಪಿಕೊಳ್ಳುತ್ತೇನೆ, ಸಾಂಕ್ರಾಮಿಕ ರೋಗದ ವಿರುದ್ದ ರಾಷ್ಟ್ರದ ಜನತೆ ಒಗ್ಗಟ್ಟು ಪ್ರದರ್ಶಿಸಬೇಕು, ದೀಪವನ್ನೂ ಹಚ್ಚುತ್ತೇವೆ ಸಮಸ್ಯೆ ಇಲ್ಲ. ಆದರೆ ಪ್ರಸ್ತುತ ಸಮಯದಲ್ಲಿ ಜನತೆ ಪ್ರಧಾನಿಯಿಂದ ಇನ್ನೂ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದರು. ಕೊರೊನ ಲಾಕ್‌ಡೌನ್‌ನಿಂದಾಗಿ ದೇಶದ ಸಂಪತ್ತು ಉತ್ಪಾದಿಸುವ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಹಾಗೂ ಅವರ ಸಮಸ್ಯೆ ಪರಿಹಾರಮಾಡುವ ಬಗ್ಗೆ ದೇಶದ ಪ್ರಧಾನಿಯಗಿ ಮೋದಿ ಮಾತನಾಡುತ್ತಿರಬೇಕಿತ್ತು.
ವೈರಸನ್ನು ಹಿಡಿದು ಕೋಮುವಾದೀಕರಣ ಮಾಡುವವರ ಬಗಗೆ ಪ್ರಧಾನಿ ಮಾತನಾಡಬೇಕಿತ್ತು. ಆದರೆ ನಮ್ಮ ಪ್ರಧಾನಿ ಮಾಡಿದ್ದೇನು? ಅದೇ ಹಳೆಯ ಭಾಯಿಯೋಂ ಬೆಹನಿಂದ ಹಿಡಿದು ಕೊನೆಯವರೆಗೂ ಬರಿಯ ಸಪ್ಪೆ ಮಾತುಗಳನ್ನು. ಅವರ ಮಾತುಗಳು ಭಾರತದಂತಹ ಬೃಹತ್ ದೇಶವನ್ನು ಆಳುತ್ತಿರುವ ಒಬ್ಬ ಪ್ರಧಾನಿಯ ಮಾತಿನಂತೆ ಇರಲೇ ಇಲ್ಲ. ನನಗೆ ಕೇಳಿಸಿದ್ದು ಕೇವಲ ಹೊಸ ಸಿನೆಮಾ ಬಂದಾಗ ಚಿತ್ರ ನಟನೊಬ್ಬ ತನ್ನ ಅಭಿಮಾನಿಗಳೊಂದಿಗೆ ಮಾತನಾಡಿದಂತೆ ಅನಿಸುತ್ತಿತ್ತು” ಎಂದು ಹೇಳಿದ್ದಾರೆ.
’ಕೊರೊನ ರೋಗಕ್ಕೆ ಈಗಾಗಲೆ 70 ಕ್ಕಿಂತಲೂ ಹೆಚ್ಚು ಜನರು ಸತ್ತಿದ್ದರೂ ದೇಶದಲ್ಲಿ ಇನ್ನೂ ಆಸ್ಪತ್ರೆಗಳು ಸರಿಯಾಗಿ ಸಜ್ಜುಗೊಂಡಿಲ್ಲ. ಆರೋಗ್ಯ ಸಲಕರಣೆಗಳು ಇನ್ನು ಸಿಗುತ್ತಿಲ್ಲ ಎಂದು ಸುದ್ದಿಗಳು ಬರುತ್ತಿವೆ. ಈ ಬಗ್ಗೆ ತೆಗೆದುಕೊಂಡ ಕಾರ್ಯಗಳ ಬಗ್ಗೆ ಮಾತನಾಡಬಹುದಿತ್ತು. ಅದೂ ಇಲ್ಲವೆಂದರೆ ದೇಶದ ಜನರಿಗೆ ಕೊರೊನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಬಹುದಿತ್ತು. ಯಾಕೆಂದರೆ ಇಂತಹಾ ಸಮಯದಲ್ಲಿ ದೇಶದ ಪ್ರಧಾನಿಗಳ ಮಾತನ್ನು ದೇಶವೇ ಕೇಳಿಸಿಕೊಳ್ಳುತ್ತಿರುತ್ತವೆ, ಇದರಿಂದ ಜನರ ನೆಡುವೆ ಇದ್ದ ಭಯ ಹೋಗಿ ತುಸು ಧೈರ್ಯವಾದರೂ ಬರುತ್ತಿತ್ತು’ ಅವರು ಹೇಳಿದ್ದಾರೆ.


ಗಡಿ ಪ್ರದೇಶವಾದ ಮಧುಗಿರಿ ತಾಲೂಕಿನ ಅನಿಲ್ ಕುಮಾರ್ ಅವರನ್ನು ಮಾತಾಡಿಸಿದಾಗ ಅವರು ಆಂಧ್ರದ ಸ್ಥಿತಿಗೆ ಸಂಬಂಧಿಸಿದ ಫೋಟೋವೊಂದನ್ನು ಕಳಿಸಿ, ಈ ರೀತಿ ಹೇಳಿದರು. ’ದೇಶದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಈ ಚಿತ್ರದಲ್ಲೇ ನೋಡಿ ಆಂಧ್ರ ಪ್ರದೆಶದ ಎಮ್.ಎಲ್.ಎ ಒಬ್ಬರು, ಕುಂದುರ್ಪಿ ಎಂಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾವು ಮಾತ್ರ N95 ಮಾಸ್ಕನ್ನು ಹಾಕಿದ್ದಾರೆ, ಅವರ ಹಾಗೂ ಅವರ ಗನ್‌ಮ್ಯಾನ್‌ಗಳು ಕೈಗೆ ಗ್ಲೌಸ್ ಹಾಕಿ ಹಾಕಿದ್ದಾರೆ. ಆದರೆ ಸರಿಯಾಗಿ ಗಮನಿಸಿ ರೋಗಿಗಳನ್ನು ಶುಶ್ರೂಷೆ ಮಾಡುವ ಡಾಕ್ಟರುಗಳು ತನ್ನ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡಿದ್ದಾರೆ. ಇದು ನಮ್ಮ ದೇಶದ ಪರಿಸ್ಥಿತಿ. ಬೆಂಗಳೂರಿನ ಹಲವಾರು ಮೆಡಿಕಲ್ ಸ್ಟೋರುಗಳಲ್ಲಿ ಈಗಾಗಲೇ ಮಾಸ್ಕುಗಳು, ಸೋಪುಗಳು ಹಾಗೂ ಹ್ಯಾಂಡ್ ಸ್ಯಾನಿಟೈಝ್ ಇಲ್ಲ ಎಂದು ಬೋರ್ಡುಗಳನ್ನು ಹಾಕಿಕೊಂಡಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಇವುಗಳ ಬೇಡಿಕೆಗಳನ್ನು ಪೂರೈಸುವುದನ್ನು ಬಿಟ್ಟು ಚಪ್ಪಾಳೆ, ದೀಪ ಹಚ್ಚುವುದು, ಮೆರವಣಿಗೆ ಮಾಡುವ ಬಗ್ಗೆ ಮಾತನಾಡುತ್ತಾ ಕೂತಿದೆ. ಖಂಡಿತವಾಗಿಯೂ ಇದು ಜವಾಬ್ದಾರಿಯುತ ಸರ್ಕಾರ ಅಲ್ಲವೇ ಅಲ್ಲ.’ ಎಂದು ಅನಿಲ್ ಕುಮಾರ್ ತಿಳಿಸಿದರು.
ಈ ಬಗ್ಗೆ ಪಬ್ಲಿಕ್ ಹೆಲ್ತ್ ಎಕ್ಸ್‌ಪರ್ಟ್ ಡಾ. ಸಿಲ್ವಿಯ ಅವರು ಪ್ರತಿಕ್ರಿಯಿಸುತ್ತಾ “ದೇಶವನ್ನು ಲಾಕ್‌ಡೌನ್ ಮಾಡುವುದು ಒಂದು ದೊಡ್ಡ ಜವಾಬ್ದಾರಿ. ಲಾಕ್‌ಡೌನ್ ಮಾಡುವುದಕ್ಕಿಂತ ಮುಂಚೆ ಹಲವಾರು ತಯಾರಿಗಳು ಮಾಡಿಕೊಳ್ಳಬೇಕಾಗುತ್ತದೆ. ಜನರಿಗೆ ಯಾವುದೆ ತೊಂದರೆ ಆಗದೇ ಇರುವ ರೀತಿಯಲ್ಲಿ ಲಾಕ್‌ಡೌನ್ ಮಾಡುವ ತಯಾರಿ ಆಗಬೇಕಿತ್ತು. ಆದರೆ ಸರ್ಕಾರ ಈಗ ಮಾಡಿರುವುದೇನೆಂದರೆ ನಾವು ಲಾಕ್‌ಡೌನ್ ಮಾಡುತ್ತೇವೆ ನೀವು ಏನು ಬೇಕಾದರೂ ಮಾಡಿಕೊಳ್ಳಿ, ನೀವು ಲಾಕ್‌ಡೌನ್ ಮಾಡಿಲ್ಲವೆಂದರೆ ನಾವು ನಿಮ್ಮನ್ನು ಶಿಕ್ಷೆಗೊಳಪಡಿಸುತ್ತೇವೆ ಎಂದು ಹೇಳುತ್ತಿದೆ” ಎಂದರು.
“ಲಾಕ್‌ಡೌನ್ ಹೇಗೆ ಮಾಡಬೇಕೆಂದು ಬೀದಿಯ ಸಾಮನ್ಯ ಮನುಷ್ಯನ ಬಳಿ ಹೊಗಿ ಕೇಳಿದರೂ ಅವರೇ ಅದರ ಬಗ್ಗೆ ಸರಳವಾಗಿ ಹೇಳುತ್ತಾರೆ. ಇದಕ್ಕೆಲ್ಲ ದೊಡ್ಡ ಮಟ್ಟದ ಜ್ಞಾನ ಬೇಕಾಗಿಲ್ಲ, ಇಷ್ಟನ್ನೂ ನಮ್ಮ ಸರ್ಕಾರ ಮಾಡಿಲ್ಲ. ಲಾಕ್‌ಡೌನ್ ಸಮಯದಲ್ಲಿ ಏನು ತಿನ್ನುತ್ತಾರೆ, ತುರ್ತು ಪರಿಸ್ಥಿತಿಯ ಅಗತ್ಯ ಬಂದರೆ ಏನು ಮಾಡಬೇಕು, ಉದ್ಯೋಗ ಕಳೆದುಕೊಂಡರೆ ಏನು ಮಾಡಬೇಕು, ದಿನಗೂಲಿ ಕಾರ್ಮಿಕರು ಏನು ಮಾಡಬೇಕು ಹೀಗೆ ಯಾವುದೆ ರೀತಿಯಲ್ಲಿ ಚಿಂತಿಸದೆ ಏಕಾಏಕಿ ಲಾಕ್‌ಡೌನ್ ಘೋಷಿಸಿ ಕ್ಯಾಂಡಲ್ ಹಚ್ಚಿ, ಪ್ಲೇಟ್ ಹೊಡೆಯಿರಿ, ಚಪ್ಪಾಳೆ ತಟ್ಟಿ ಎಂದು ಹೇಳುತ್ತಾರೆಂದರೆ ನಮ್ಮ ದೇಶದಲ್ಲಿ ಇರುವ ಮೂಡನಂಬಿಕೆಯ ಬಗ್ಗೆ ಅರಿವಾಗುತ್ತದೆ” ಎಂದು ಡಾ. ಸಿಲ್ವಿಯ ಹೇಳಿದ್ದಾರೆ.
ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿದೆ. ಇತರ ದೇಶಗಳಲ್ಲಿ ಹೇಗೆ ನಿಭಾಯಿಸುತ್ತಿದ್ದಾರೆ, ಒಂದು ವಾರಕ್ಕೂ ಹೆಚ್ಚಿನ ಲಾಕ್‌ಡೌನ್‌ನಿಂದ ಕಲಿತ ಪಾಠಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸರ್ವಪಕ್ಷ ಸಮಾಲೋಚನೆ ನಡೆಸಿ ಪ್ರಧಾನಿ ಮೋದಿ ಅವರು ದೇಶದ ಜನರ ಆತಂಕವನ್ನು ಹೋಗಲಾಡಿಸುತ್ತಾರೆ ಎಂಬ ನಿರೀಕ್ಷೆ ಮತ್ತೊಮ್ಮೆ ಮನ್‌ಕಿ ಬಾತ್‌ನಲ್ಲಿ ಹುಸಿಯಾಗದಿರಲಿ.
