

ಕರೋನಾ ಭಯದಿಂದ ಜನ ಮನೆ ಸೇರಿದರು, ಮುಖ್ಯಸ್ಥ ಜಾಗಟೆ ಹೊಡೆಯಲು ಅವರನ್ನು ರಸ್ತೆಗೆ ಕರೆದ.
ಜನ ಭಯ, ಆತಂಕ, ಹಸಿವೆ, ರಗಳೆಗಳಿಂದ ಮನೆಯಲ್ಲಿ ನೋಯುತಿದ್ದಾರೆ ಮುಖ್ಯಸ್ಥ ಲೈಟ್‍ಬಂದ್ ಮಾಡಿ ಅಂಧಕಾರ ತೊಲಗಿಸಿ ಎಂದ.
ಇಂಥ ವರ್ತನೆ, ನಡವಳಿಕೆ, ನಾಟಕ ಸಹಜಮನುಷ್ಯರನ್ನು ಕೆರಳಿಸದೆ ಇರಲಾರದು.
ದೇಶದ ಅನುಕೂಲ, ಸಂಪತ್ತು, ಜನರ ತೆರಿಗೆ ಹಣದಲ್ಲಿ ಕಲಿತು, ಬೆಳೆದು ವಿದೇಶಕ್ಕೆ ಹಾರಿದವರು ಕರೋನಾಕ್ಕೆ ಹೆದರಿ ಸ್ವದೇಶಕ್ಕೆ ಮರಳತೊಡಗಿದರು ಆ ಸಮಯದಲ್ಲಿ ಮಧ್ಯಪ್ರದೇಶದ ಶಾಸಕರ ಖರೀದಿಯಲ್ಲಿ ತೊಡಗಿದ್ದ ಸಂಬಂಧಿಸಿದ ವ್ಯಕ್ತಿಗಳು ಸ್ವಾರ್ಥ, ಲಾಭಕ್ಕಾಗಿ ವಿಮಾನಗಳನ್ನು ನಿಲ್ಲಿಸದೆ ಕರೋನಾ ಪಸರಿಸಲು ಕಾರಣರಾದರು.
ಸಕಾಲದಲ್ಲಿ ಎಚ್ಚರಿಸದ ಆಡಳಿತಗಾರರ ನಿರ್ಲಕ್ಷದಿಂದಾಗಿ ಜನ ಮಂದಿರ, ಮಸೀದಿ, ಚರ್ಚ್,ಗುರುದ್ವಾರ ಎಲ್ಲೆಡೆ ಸೇರಿದರು. ಸಮಾವೇಶಗಳು ನಡೆದವು. ಈ ಬಗ್ಗೆ ವಿರೋಧಪಕ್ಷದ ಪ್ರಮುಖರು ಎಚ್ಚರಿಸಿದ್ದಾಗ್ಯೂ ಆಡಳಿತಗಾರರಿಗೆ ಶಾಸಕರ ಖರೀದಿ ತಮ್ಮ ಸ್ವಾರ್ಥ ರಾಜಕಾರಣ ಮುಖ್ಯವಾಯಿತು.

ಈಗ ಮತ್ತದೇ ಲಾಗಾಯ್ತಿನ ಸೋಗಿನಿಂದ ಜನರನ್ನು ಮರಳುಮಾಡಬಹುದೆಂದು ಬಲವಾಗಿ ನಂಬಿರುವ ನಾಯಕತ್ವ ಅಗತ್ಯ ಕೆಲಸ, ಜವಾಬ್ಧಾರಿ ನಿರ್ವಹಿಸದೆ ಲೋಪ ಎಸಗುತ್ತಾ ದೇಶದ ಜನರನ್ನು ಕೋಡಂಗಿಗಳನ್ನಾಗಿಸುತಿದ್ದಾರೆ. ಈ ಪ್ರತಿಕ್ರೀಯೆಗಳು ಇಂದು ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರತಿಕ್ರೀಯೆಯಾಗಿ ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ. ಕರೋನಾ ನಿರ್ವಹಣೆ ರೀತಿಗೆ ಕೂಡಾ ಜನರು ಇಂಥದ್ದೇ ಪ್ರತಿಕ್ರೀಯೆ ನೀಡುತ್ತಿರುವುದು ವ್ಯಾಪಕವಾಗಿದೆ. ಒಟ್ಟಾರೆ ರಸ್ತೆ, ಆಣೆಕಟ್ಟುಗಳು, ಕೃಷಿಕರ ಹೊಲಗಳೇ ದೇವಾಲಯ ಎಂದು ನಂಬಿ ಪ್ರಗತಿಯೆಡೆಗೆ ಹೆಜ್ಜೆ ಇಟ್ಟಿದ್ದ ಭಾರತಕ್ಕೆ ಈ ಕಿಂದರಜೋಗಿ ವ್ಯಕ್ತಿತ್ವದ ಜೋಕರ್ ನಾಯಕತ್ವ ಈ ಕಾಲದ ಹೊರೆ ಎಂದೇ ಭಾವಿಸಬೇಕಾಗಿದೆ.
ಹೊಂದಾಣಿಕೆ ಇಲ್ಲದ ರಾಜ್ಯದ ಆಡಳಿತ-
ಕರೋನಾ ವಿಚಾರವಾಗಿ ಜವಾಬ್ಧಾರಿಯಿಂದ ವರ್ತಿಸದ ರಾಜ್ಯದ ಆರೋಗ್ಯ ಸಚಿವರ ಕರೋನಾ ನಿರ್ವಹಣೆ, ಪ್ರಚಾರದ ಹೊಣೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಿಗೆ ನೀಡಿದ್ದು ಎಲ್ಲರಿಗೂ ತಿಳಿದಿರುವ ಬಹಿರಂಗ ಗುಟ್ಟು. ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ಥ ನಾರಾಯಣ ರಾಜ್ಯದ ಪೊಲೀಸ್ ಮುಖ್ಯಸ್ಥರು ಲಂಚ ಪಡೆದು ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದರು ಎಂದು ಬಹಿರಂಗವಾಗಿ ಆರೋಪಿಸಿದರು.
ಇದರ ನಡುವೆ ಆಡಳಿತಕ್ಕೂ, ಮುಖ್ಯಮಂತ್ರಿಗಳು, ಕೆಲವು ಜಿಲ್ಲಾಧಿಕಾರಿಗಳಿಗೆ ಉಂಟಾದ ಸಮನ್ವಯದ ಕೊರತೆಯಿಂದ ಏನೆಲ್ಲಾ ತೊಂದರೆ, ತಲ್ಲಣಗಳಾದವು. ಇದರ ಮುಂದುವರಿದ ಭಾಗವಾಗಿ ಆಡಳಿತ ಪಕ್ಷ ತಮ್ಮದೇ ಸರ್ಕಾರವಿದ್ದರೂ ಪ್ರತ್ಯೇಕವಾಗಿ ಕರೋನಾ ನಿರ್ವಹಣೆ,ಪರಿಹಾರ ಕಾರ್ಯ ಮಾಡಬೇಕೆಂದು ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಆದೇಶ ಮಾಡಿದ್ದಾರೆ. ಇವೆಲ್ಲಾ ತುಘಲಕ್ ಆಡಳಿತ ನೆನಪಿಸುತ್ತದೆ ಎಂದರೆ ಪರಿವಾರ ರುದ್ರನರ್ತನಕ್ಕಿಳಿಯುತ್ತದೆ. ಇವೆಲ್ಲಾ ದುರ್ಬಲ ನಾಯಕತ್ವದ ಅವಿವೇಕದ ಪ್ರತಿಬಿಂಬ ಎನಿಸುತ್ತಿಲ್ಲವೆ?
