ಹಿಂದೊಮ್ಮೆ ಇದೇ ದಿನ ಇಂಥದ್ದೇ ಪ್ರಳಯಾಂತಕ ಪ್ರಸಂಗ- ನಾಗೇಶ್ ಹೆಗಡೆ
ಇಂದಿಗೆ 205 ವರ್ಷಗಳ ಹಿಂದೆ ಸಿಡಿದ ಭಾರೀ ಜ್ವಾಲಾಮುಖಿಯ ಕತೆ ಇದು. ಮನುಷ್ಯನ 10 ಸಾವಿರ ವರ್ಷಗಳ ಇತಿಹಾಸದ ಅತಿ ದೊಡ್ಡ ಜ್ವಾಲಾಮುಖಿ. ಅದರಿಂದಾಗಿ 12 ಸಾವಿರ ಕಿಲೊಮೀಟರ್ ಆಚಿನ ಜನರೂ ಲಾಕ್‌ಡೌನ್ ಆಗಿದ್ದಾಗ ಏನು ಮಾಡಿದರು? ರೈತರೆಲ್ಲ ಕಂಗೆಟ್ಟು, ಕುದುರೆಗಳಿಗೂ ಮೇವು ಸಿಗದಂತಾಗಿ ಸಂಚಾರ ವ್ಯವಸ್ಥೆ ಠಪ್ ಆಗಿದ್ದಾಗ ಯಾವ ಹೊಸ ವಾಹನ ಸೃಷ್ಟಿಯಾಯಿತು? ಅದಕ್ಕೆ ಉತ್ತರ ಇಲ್ಲಿದೆ:
1815ರ ಏಪ್ರಿಲ್ 5ರಂದು ಇಂಡೊನೇಶ್ಯಾದ ಸಂಬವಾ ದ್ವೀಪದ “ತಂಬೋರಾ ” ಹೆಸರಿನ ನಿದ್ರಿತ ಜ್ವಾಲಾಮುಖಿ ಮುಲುಗಿತು. ಮೊದಲೆರಡು ದಿನ ಗುಡುಗಿ ನಂತರ ಸಿಡಿದೆದ್ದು ಬೆಂಕಿಯನ್ನು ಫೂತ್ಕರಿಸತೊಡಗಿತು. ಏಪ್ರಿಲ್ 10-11ರಂದು ಅದರ ಗರ್ಜನೆ 2600 ಕಿ.ಮೀ. ದೂರದವರೆಗೂ ಕೇಳಿಸಿತು. ಅದು ಯುದ್ಧದ ತುಪಾಕಿಗಳ ಸದ್ದೆಂದು ತಿಳಿದು ಆ ಕಡೆ ಇದ್ದ ಪೋರ್ಚುಗೀಜ್ ಸೈನ್ಯ ಸೆಟೆದೆದ್ದು ಮರುದಾಳಿಗೆ ಹೊರಟಿತು. ಆದರೆ ಸುತ್ತೆಲ್ಲ ಬೆಂಕಿಯುಂಡೆಗಳ ಜಡಿಮಳೆ, ಭೂಕಂಪನ, ಸುನಾಮಿ ಎಲ್ಲ ಒಟ್ಟೊಟ್ಟಿಗೇ ಬಂದವು. ಮುಂದಿನ ಕೆಲದಿನಗಳವರೆಗೆ ನಿರಂತರ ಸಿಡಿತ. ಸಮುದ್ರವೆಂದರೆ ಬೂದಿಮುಚ್ಚಿದ ಹೊಂಡ.
ಆಗ ಹೊಮ್ಮಿದ ಹೊಗೆ-ಮಸಿ ವಾಯುಮಂಡಲಕ್ಕಿಂತ ಮೇಲಕ್ಕೆ 46 ಕಿಲೊಮೀಟರ್ ಎತ್ತರಕ್ಕೆ ಚಿಮ್ಮಿತು. ಒಟ್ಟು ಸುಮಾರು 100 ಘನ ಕಿಲೊಮೀಟರಿನಷ್ಟು ಶಿಲಾದ್ರವ್ಯಗಳು ಆಕಾಶಕ್ಕೆ ಸೇರಿದವು. ಮೂಲತಃ ನಾಲ್ಕೂವರೆ ಕಿ.ಮೀ. ಎತ್ತರಕ್ಕಿದ್ದ ತಂಬೋರಾ ಪರ್ವತ ಎರಡು ಕಿಲೊಮೀಟರಿನಷ್ಟು ಕುಗ್ಗಿತು.
ಅಂದಾಜು 170 ಲಕ್ಷ ಟನ್ ಕೆಂಡ, ಭಸ್ಮ, ಹೊಗೆ ಮತ್ತು ಮಸಿ ಆಕಾಶಕ್ಕೆ ಸೇರಿ ನಿಧಾನಕ್ಕೆ ಇಡೀ ಪೃಥ್ವಿಯನ್ನು ಆವರಿಸಿತು.
ಮಾರನೆಯ ವರ್ಷ ಯುರೋಪ್, ಅಮೆರಿಕಗಳಲ್ಲಿ ಬೇಸಿಗೆಯೇ ಇರಲಿಲ್ಲ. ಇಡೀ ಪೃಥ್ವಿಯ ವಾಯುಮಂಡಲವೇ ತಂಪಾಗಿ, ಎಲ್ಲಿ ನೋಡಿದಲ್ಲಿ ಮಳೆ, ಹಿಮಪಾತ, ಮಂಜು. ಎಷ್ಟೇ ಮಳೆಸುರಿದರೂ ಆಕಾಶ ಮಾತ್ರ ಸದಾ ಕಂದು. ಏಕೆಂದರೆ ಮೋಡಕ್ಕಿಂತ ಹತ್ತಾರು ಕಿಲೊಮೀಟರ್ ಎತ್ತರದಲ್ಲಿ ಮಸಿಯ ಹಾಸು ಇತ್ತು. ಬ್ರಿಟನ್ನಿನಲ್ಲಿ ಸಂಜೆ-ಮುಂಜಾನೆ ಎಂದರೆ ಕೆಂಪು, ಕೇಸರಿ, ಗುಲಾಬಿ, ಜಾಂಬಳೆ.
ಋತುಮಾನಗಳೇ ಅಪರಾತಪರಾ ಆಗಿದ್ದರಿಂದ 1816ಲ್ಲಿ ಎಲ್ಲೂ ಯಾವ ಬೆಳೆಯನ್ನೂ ಬೆಳೆಸಲಾಗದೆ , ಅಮೆರಿಕದಲ್ಲೂ ಹಸಿದ ಹಳ್ಳಿಯ ಜನ ಯಾವ ಕಡೆ ಗುಳೆ ಹೋಗುವುದು ಎಂದು ತಿಳಿಯದೆ ದಿಕ್ಕೆಟ್ಟು ಭಿಕ್ಷೆಗೆ ಹೊರಟರು. ಆಗ ಎಲ್ಲ ಕಡೆ ಬರೀ ಹಳ್ಳಿಗಳೇ ತಾನೆ? ಕೆಲವರು ದಂಗೆ-ದಾಳಿಗೂ ಇಳಿದರು. ಸತ್ತವರ ನಿಖರ ಸಂಖ್ಯೆಯ ಅಂದಾಜೂ ಸಿಕ್ಕಿಲ್ಲ. ಇಂಡೊನೇಶ್ಯದ ಸಂಬವಾ ಮತ್ತು ಇತರ ಸಮೀಪದ ದ್ವೀಪಗಳಲ್ಲಿ ಸುಮಾರು 15 ಸಾವಿರ ಜನ ನೇರ ದಫನವಾದರು. ಆಗ ಎದ್ದ ಸುನಾಮಿಯಿಂದ ಇನ್ನಷ್ಟು ಸಾವಿರ ಜನರು ಕಣ್ಮರೆಯಾದರು. 2004ರಲ್ಲಿ ಬೂದಿಗುಡ್ಡಗಳ ಉತ್ಖನನ ನಡೆಸಿ ಇಡಿಇಡೀ ಮನೆಯನ್ನು ಪತ್ತೆ ಮಾಡಲಾಯಿತು. ಚೀನಾ ಮತ್ತು ಅಮೆರಿಕ ಸೇರಿದಂತೆ ಎಲ್ಲೆಡೆ ಕ್ಷಾಮ ಬಂದಿದ್ದರಿಂದ ಹಸಿವೆಯಿಂದ ಸತ್ತವರ ಸಂಖ್ಯೆ ಲಕ್ಷ ದಾಟಿರಬೇಕೆಂದು ಅಂದಾಜು ಮಾಡಲಾಗಿದೆ. ಬಂಗಾಳದಲ್ಲಿ ಕ್ಷಾಮದ ಜೊತೆಗೆ ಹೊಸಬಗೆಯ ಕಾಲರಾ ಕೂಡಾ ಸಾವಿರಾರು ಜನರ ಬಲಿ ತೆಗೆದುಕೊಂಡಿತು.
ಇಂಗ್ಲಂಡ್‌ನ ಖ್ಯಾತ ಕವಿ ಬೈರನ್ ತನ್ನ ದೇಶದ ಬದುಕು ಸಾಕೆನಿಸಿ, ವೈದ್ಯಗೆಳೆಯ ಪೊಲಿಡೊರಿ ಎಂಬಾತನ ಜೊತೆಗೆ ಜಿನಿವಾಕ್ಕೆ ಹೋದ. ಅದೇ ವೇಳೆಗೆ ಇನ್ನೊಬ್ಬ ಕವಿ ಪಿ.ಬಿ. ಶೆಲ್ಲಿ ಕೂಡ ಮೇರಿ ಎಂಬ ಹುಡುಗಿಯನ್ನು ಹಾರಿಸಿಕೊಂಡು ಅಲ್ಲಿಗೇ ಬಂದು ಅದೇ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದ. ಘೋರ ಚಳಿ, ನಿರಂತರ ಮಳೆಯಿಂದಾಗಿ ಎಲ್ಲರೂ ಅಲ್ಲಲ್ಲೇ ಲಾಕ್‌ಡೌನ್ ಆಗಿದ್ದರು. ಮಾಡಲು ಬೇರೆ ಕೆಲಸ ಇಲ್ಲದೆ, ‘ನಾವೆಲ್ಲ ಸೇರಿ ಒಂದೊಂದು ದೆವ್ವದ ಕತೆ ಬರೆಯೋಣ’ ಎಂದು ಬೈರನ್ ಸೂಚಿಸಿದ. ಎಲ್ಲರೂ ಕತೆ ಆರಂಭಿಸಿದರು. ಮೇರಿ ‘ಫ್ರಾಂಕೆನ್‌ಸ್ಟೈನ್’ ಹೆಸರಿನ (ಕೆಳಗಿನ ‘ಮುಖ’ಚಿತ್ರದಲ್ಲಿದ್ದಂತೆ) ಮಾನವರೂಪಿ ಬ್ರಹ್ಮರಾಕ್ಷಸನ ಕತೆ ಬರೆದಳು. ಅದು ಮುಂದೆ ಭಾರೀ ಖ್ಯಾತಿ ಪಡೆದು ಸಿನೆಮಾಗಿನೆಮಾ ಎಲ್ಲ ಆಗಿ, ‘ಸೈನ್ಸ್ ಫಿಕ್ಷನ್’ ಎಂಬ ಹೊಸ ಸಾಹಿತ್ಯ ಪ್ರಕಾರಕ್ಕೆ ಜನ್ಮಕೊಟ್ಟಿತು.
ಬೈರನ್ ಏಳೆಂಟು ಪುಟ ಬರೆದು ಕೈಬಿಟ್ಟಿದ್ದನ್ನು ಆತನ ಗೆಳೆಯ ಪೂರ್ತಿಗೊಳಿಸಿ ಅದಕ್ಕೆ ‘ದಿ ವ್ಯಾಂಪಾರಯರ್’ ಎಂದು ಹೆಸರಿಟ್ಟ. ಅದೂ ಮೊದಲ ಫ್ಯಾಂಟಸಿ ಸಾಹಿತ್ಯವೆಂದು ಪ್ರಸಿದ್ಧಿ ಪಡೆಯಿತು.
ಲಾರ್ಡ್ ಬೈರನ್ ಬರೆದ ‘ಡಾರ್ಕ್‌ನೆಸ್’ ಹೆಸರಿನ ಕವನ ‘ನಾನೊಂದು ಕನಸಲ್ಲದ ಕನಸ ಕಂಡೆ. ಪ್ರಖರ ಸೂರ್ಯ ಅಂದು ಆರಿಹೋಗಿದ್ದ…” ಎಂಬ ಸಾಲುಗಳಿಂದ ಆರಂಭವಾಗುತ್ತದೆ.
ಕೇವಲ ಮೂರು ವಾರಗಳ ಲಾಕ್ ಡೌನ್ ಮೂರು ಮಹತ್ವದ ಸಾಹಿತ್ಯಕೃತಿಗಳಿಗೆ ಜನ್ಮಕೊಟ್ಟಿತು.
ರೈತ ಸಮುದಾಯ ತತ್ತರಿಸಿತ್ತು. ವರ್ಷವಿಡೀ ಮಳೆ, ಹಿಮಪಾತದಿಂದಾಗಿ ಏನನ್ನೂ ಬೆಳೆಯುವಂತಿಲ್ಲ. ಬೆಳೆದರೂ ಯಾರಾದರೂ ಢಕಾಯಿತಿಗೆ ಬರುತ್ತಾರೆಂಬ ಭಯ. ಕುದುರೆಗಳಿಗೆ ತಿನ್ನಿಸುವ ಓಟ್ಸ್ ತೀರಾ ದುಬಾರಿಯಾಗಿ ಕುದುರೆ ಸಾಕುವುದೂ ಅಸಾಧ್ಯವಾಯಿತು. ಓಡಾಟಕ್ಕೆ ಬದಲೀ ಏನನ್ನಾದರೂ ಹುಡುಕಬೇಕೆಂಬ ಛಲ ಹೊತ್ತ ಅರಣ್ಯತಜ್ಞ ಕಾರ್ಲ್ ಡ್ರೈಯಿಸ್ ಎಂಬಾತ ಡ್ಯಾಂಡಿಹಾರ್ಸ್ ಎಂಬ ಓಡುವ ಯಂತ್ರವನ್ನು ರೂಪಿಸಿದ. ಅದು ಮತ್ತೇನಲ್ಲ, ಕಾಲಿನಿಂದ ತಳ್ಳಿಕೊಂಡು ಹೋಗಬಹುದಾದ ಬೈಸಿಕಲ್.
ಇಂದು ಪ್ರಳಯಾಂತಕ ತುಮುಲವನ್ನು ಸೃಷ್ಟಿಸಿದ ಸೂಕ್ಷ್ಮಶಕ್ತಿಯೊಂದು ಇನ್ನೇನೇನು ಹೊಸದನ್ನು ಸೃಷ್ಟಿಸುತ್ತದೊ? ಅದನ್ನು ನೋಡಲೆಂದಾದರೂ ಇದನ್ನು ಜೈಸಿ ಬದುಕಬೇಕು.