
ಆಂಡ್ರೊಮಿಡಾ ವೈರಸ್: ಇದೀಗ ಹೊಸ ರೂಪದಲ್ಲಿ..-ನಾಗೇಶ್ ಹೆಗಡೆ
ಸರಿಯಾಗಿ 50 ವರ್ಷಗಳ ಹಿಂದೆ ಅಗದೀ ಭಯಾನಕ ‘ಆಂಡ್ರೊಮೀಡಾ ಸ್ಟ್ರೇನ್’ ಪುಸ್ತಕ ಬಿಡುಗಡೆಯಾಯಿತು. ಸ್ಟ್ರೇನ್ ಅಂದರೆ (ವೈರಸ್ಸಿನ) ಒಂದು ಉಪಜಾತಿ. ಅದೊಂದು ಕಾಲ್ಪನಿಕ ವಿಜ್ಞಾನ ಕಥನ. 1969ರಲ್ಲಿ ಪುಸ್ತಕ ರೂಪದಲ್ಲಿ ಬಂದ ಒಂದು ವರ್ಷದ ನಂತರ ಅದು ಸಿನೆಮಾ ಆಗಿ ಮಾರನೇ ವರ್ಷ ಬಿಡುಗಡೆ ಕಂಡಿತು. ರಕ್ತ ಹೆಪ್ಪುಗಟ್ಟಿಸುವ ವೈರಸ್ ಕಥೆಯುಳ್ಳ ಆ ಪುಸ್ತಕ ಮತ್ತು ಸಿನೆಮಾ ಎರಡೂ ಅಪಾರ ಜನಪ್ರಿಯತೆ ಪಡೆದವು. ನಂಬಿದರೆ ನಂಬಿ, ಆ ಪುಸ್ತಕದ ಮುಂದುವರಿದ ಕಥನ (ಸೀಕ್ವೆಲ್) 50 ವರ್ಷಗಳ ನಂತರ ಅತ್ತ ಬಿಡುಗಡೆಯಾಗುತ್ತಲೇ ಇತ್ತ ವುಹಾನ್‌ನಲ್ಲಿ ಕೊರೊನಾ ವೈರಸ್ ಕೂಡ ಹೊಸ ರೂಪದಲ್ಲಿ ಗೋಚರಿಸಿತು.
ಚಿತ್ರಕಥೆ ಹೀಗಿದೆ: ಅಮೆರಿಕದ ಮಿಲಿಟರಿ ಉಪಗ್ರಹವೊಂದು ಬಾಹ್ಯಾಕಾಶದಲ್ಲಿ ಸುತ್ತುತ್ತಿದೆ. ಅದರ ಉದ್ದೇಶ ಏನೆಂದರೆ, ಅಲ್ಲಿ ತೇಲುತ್ತಿರುವ ಸೂಕ್ಷ್ಮ ಜೀವಿಗಳನ್ನು ಸೆರೆಹಿಡಿದು ತಂದು ಅದರಲ್ಲಿ ಉತ್ತಮವಾದುದನ್ನು ಜೀವಾಣು ಬಾಂಬ್ ಸೃಷ್ಟಿ ಮಾಡುವುದು. ಆದರೆ ಆ ಉಪಗ್ರಹಕ್ಕೆ ಉಲ್ಕೆಯೊಂದು ಬಡಿಯುತ್ತದೆ. ಉಲ್ಕಾಶಿಲೆಯಲ್ಲಿದ್ದ ಉಗ್ರ ವೈರಸ್ ಜೊತೆ ಇಡೀ ಉಪಗ್ರಹವೇ ಉರಿದು ಅಮೆರಿಕದ ಅರಿಝೋನಾದ ಪೀಡ್ಮಾಂಟ್ ಎಂಬ ಊರಿನ ಬಳಿ ಬೀಳುತ್ತದೆ. ವೈರಸ್ ಆಚೀಚೆ ಹರಡಿ ವೈರಲ್ ಆಗುತ್ತದೆ.
ಈ ವೈರಸ್ಸಿನ ಗುಣ ಏನೆಂದರೆ ಮನುಷ್ಯನ ರಕ್ತಕಣಗಳನ್ನು ಗರಣೆಗಟ್ಟಿಸಿ (ನಾಗರ ಹಾವು ಕಚ್ಚಿದಾಗ ಆಗುವ ಹಾಗೆ) ಸಾಯಿಸಿ ಬೇರೊಬ್ಬನ ಶರೀರಕ್ಕೆ ತ್ವರಿತವಾಗಿ ದಾಟುತ್ತ, ತನ್ನ ಗುಣಧರ್ಮವನ್ನು ಬದಲಿಸಿಕೊಳ್ಳುತ್ತದೆ. ಪೀಡ್ಮಾಂಟ್ ಊರಿನ ಎಲ್ಲರೂ ಚಿತ್ರವಿಚಿತ್ರ ಭಂಗಿಯಲ್ಲಿ ಸಾಯುತ್ತಾರೆ. ಉಪಗ್ರಹದ ತುಣುಕನ್ನು ಹೆಕ್ಕಲು ಹೋದ ವಿಜ್ಞಾನಿಗಳು ಕೇಂದ್ರ ಕಚೇರಿಗೆ ಅರೆಬರೆ ವರದಿ ಮಾಡುತ್ತಲೇ ಸಾಯುತ್ತಾರೆ. ಎಲ್ಲೆಲ್ಲೂ ಹಾಹಾಕಾರ.
ಭಾರೀ ರಕ್ಷಣಾ ಕವಚ ಧರಿಸಿ ಆ ಪಟ್ಟಣದ ದುರಂತದ ಸಮೀಕ್ಷೆಗೆ ಬಂದವರಿಗೆ ಒಬ್ಬ ಅಜ್ಜ ಮತ್ತು ಒಂದು ಪುಟ್ಟ ಮಗು ಮಾತ್ರ ಬದುಕಿರುವುದು ಗೊತ್ತಾಗುತ್ತದೆ. ಇವರಿಬ್ಬರಿಗೂ ರಕ್ತದ ಕಾಯಿಲೆ ಇದೆ. ಅಜ್ಜನ ರಕ್ತದಲ್ಲಿ ಕ್ಷಾರಗುಣ ಜಾಸ್ತಿ ಮತ್ತು ಮಗುವಿನ ರಕ್ತದಲ್ಲಿ ಆಮ್ಲೀಯತೆ ಜಾಸ್ತಿ ಇದೆ [ಆಮ್ಲ ಮತ್ತು ಕ್ಷಾರವನ್ನು ಪಿಎಚ್ ಎಂಬ ಮಾಪನದಲ್ಲಿ ಅಳೆಯುತ್ತಾರೆ. 7 ರಿಂದ ಕೆಳಕ್ಕೆ ಶೂನ್ಯದ ಕಡೆ ಹೋದಂತೆ ಆಸಿಡ್ (ಆಮ್ಲ ಅಥವಾ ಹುಳಿಯ) ಉಗ್ರತೆ ಹೆಚ್ಚುತ್ತದೆ. 7ರಿಂದ ಮೇಲಕ್ಕೆ ಹೋದಂತೆ ಕ್ಷಾರದ ಉಗ್ರತೆ ಹೆಚ್ಚುತ್ತ 14ರವರೆಗೆ ಹೋಗುತ್ತದೆ. ನೀರಿನ ಪಿಎಚ್ 7. ಅಂದರೆ ಅದು ನಿರ್ಗುಣ. ಇನ್ನು ಲಿಂಬೂ ಶರ್ಬತ್ತಿನ ಪಿಎಚ್ 4 ಇದ್ದೀತು. ಸಾಬೂನಿನದ್ದು 9-10 ಇರುತ್ತದೆ. ರಕ್ತದ್ದು 7.3, ಹೆಚ್ಚೆಂದರೆ 7.5 ಇರುತ್ತದೆ. ಇಂಥವರ ಮೇಲೆ ಮಾತ್ರ ಈ ವೈರಸ್ ದಾಳಿ ಮಾಡುತ್ತದೆ. ]. ಶಾರೀರಿಕ ಕಾರಣಗಳಿಂದ ರಕ್ತದ ಪಿಎಚ್ ತುಸು ಏರುಪೇರಾಗಿದ್ದರೂ ವೈರಸ್ ಅತ್ತ ಸುಳಿಯುವುದಿಲ್ಲ.
ಸುತ್ತಲಿನ ಊರುಗಳಲ್ಲೆಲ್ಲ ಲಾಕ್‌ಡೌನ್ ಘೋಷಿಸಿ, ತಜ್ಞರು ಬದುಕುಳಿದ ಆ ಇಬ್ಬರನ್ನು ಮತ್ತು ಉಪಗ್ರಹದ ತುಣುಕನ್ನು ಭೂಗತ ಭದ್ರತಾ ಲ್ಯಾಬಿಗೆ ಸಾಗಿಸುತ್ತಾರೆ. ನೆಲದೊಳಗಿನ ಏಳು ಅಂತಸ್ತುಗಳ ಅತಿಶಿಸ್ತಿನ ಭದ್ರಕೋಟೆ ಅದು. ಕೆಳಕೆಳಗಿನ ಅಂತಸ್ತುಗಳಿಗೆ ಹೋದಂತೆ ಭದ್ರತೆ ಹೆಚ್ಚುತ್ತ ಹೋಗುತ್ತದೆ. ಇವರು ಎಲ್ಲಕ್ಕಿಂತ ಕೆಳಗಿನ ಸೂಪರ್ ಸ್ಪೆಶಲ್ ಕೊಠಡಿಗೆ ಹೋಗಿ ಉಲ್ಕೆಯ ತುಣುಕಿನ ಪರೀಕ್ಷೆ ಮಾಡುವಷ್ಟರಲ್ಲಿ ತನ್ನ ಗುಣವನ್ನು ಬದಲಿಸಿಕೊಂಡ ವೈರಸ್, ಈಗ ಪ್ಲಾಸ್ಟಿಕ್ ವಸ್ತುಗಳ ಮೇಲೆ ದಾಳಿಗೆ ತೊಡಗುತ್ತದೆ.
ವಿಜ್ಞಾನಿಯ ಮೈಗವಚವನ್ನೂ ಭದ್ರತಾ ಬಾಗಿಲಿನ ಸೀಲನ್ನೂ ತಿನ್ನುತ್ತ ಅದು ಮೇಲಿನ ಅಂತಸ್ತುಗಳತ್ತ ಸಾಗುತ್ತದೆ.
ಭೂಗತ ಲ್ಯಾಬಿನಿಂದ ಅದು ಹೊರ ಬಿದ್ದರೆ ಭೂಮಿಯ ಮೇಲಿನ ಎಲ್ಲ ಪ್ಲಾಸ್ಟಿಕ್ಕನ್ನೂ ನಿರ್ನಾಮ ಮಾಡಬಹುದು.
ಇಂಥ ದುರ್ದಮ ಸನ್ನಿವೇಶ ಬಂದಾಗ ನೆಲ ಮಾಳಿಗೆಯ ಎಲ್ಲ ಅಂತಸ್ತುಗಳನ್ನೂ ಸ್ಫೋಟಿಸಿ ವೈರಿಯನ್ನು ಅಲ್ಲೇ ಹೂತು ಹಾಕಿ, ಜಗತ್ತಿಗೆ ಬರಬಹುದಾದ ದೊಡ್ಡ ಸಂಕಟವನ್ನು ತಡೆಗಟ್ಟಬಲ್ಲ ಆಟೊಮಾಟಿಕ್ ಬಾಂಬಿಂಗ್ ವ್ಯವಸ್ಥೆ ಅಲ್ಲಿದೆ. ಅದರ ಟಿಕ್ಕಿಂಗ್ ಈಗ ಆರಂಭವಾಗುತ್ತದೆ. 10-9-8-7-6….
ಪುಟ್ಟ ಮಗುವನ್ನು, ಹಿರಿಯಜ್ಜನನ್ನು ಅಲ್ಲಿರುವ ವಿಜ್ಞಾನಿ (ಹೀರೋ) ಬದುಕಿಸುವುದು ಹೇಗೆ? ಇದು ನಾವೆಲ್ಲ ಕುರ್ಚಿಯ ಅಂಚಲ್ಲಿ ಕೂತು ನೋಡಬೇಕಾದ ದೃಶ್ಯ.
ಕೊನೆಗೂ ಅವರೆಲ್ಲ ಹೊರಬರುತ್ತಾರೆ. ಪ್ಲಾಸ್ಟಿಕ್ ತಿನ್ನುವ ಸೂಕ್ಷ್ಮಾಣುವನ್ನು ವಾಯುಮಂಡಲದ ಆಚೆಗೆ ರವಾನಿಸಲಾಗುತ್ತದೆ. ಅಲ್ಲಿ ಅದು ಯಾರಿಗೂ ತೊಂದರೆ ಮಾಡಲಾರದೆಂದು ಭಾವಿಸಲಾಗುತ್ತದೆ.
ಕೊನೆಯ ಸುದ್ದಿ ಏನೆಂದರೆ ಬಾಹ್ಯಾಕಾಶ ನೌಕೆಯೊಂದು ಮರಳಿ ಭೂಮಿಗೆ ಬರುತ್ತಿರುವ ಸಂದರ್ಭದಲ್ಲಿ ಪೂರ್ತಿ ಸುಟ್ಟು ಹೋಗುತ್ತದೆ. ಏಕೆಂದರೆ ನೌಕೆಗೆ ಹೊದೆಸಿದ್ದ ಶಾಖರೋಧಕ ಟಂಗ್ಸ್‌ಟನ್ ಪ್ಲಾಸ್ಟಿಕ್ ಹೊರಗವಚವನ್ನು ಈ ವೈರಾಣು ತಿಂದು ಹಾಕಿರುತ್ತದೆ.
ಈ ಕಾದಂಬರಿಯನ್ನು ಮೈಕೆಲ್ ಕ್ರಿಕ್ಟನ್ ಬರೆದಿದ್ದು, ಸಿನೆಮಾ ಮತ್ತು ಕಾದಂಬರಿ ಎರಡೂ ಆಗ ಅಪಾರ ಜನಪ್ರಿಯತೆ ಗಳಿಸಿತ್ತು. ಅದೇ ತಾನೆ ಅಮೆರಿಕ ಚಂದ್ರನ ಮೇಲೆ ಮನುಷ್ಯನನ್ನು ಇಳಿಸಿತ್ತು. ಬಾಹ್ಯಾಕಾಶ ಸಾಹಸ ಎಲ್ಲರನ್ನೂ ಸೆಳೆಯುತ್ತಿತ್ತು.
*
ಇದಾಗಿ 50 ವರ್ಷಗಳ ನಂತರ ಇದೀಗ ಈ ಕಥೆಯನ್ನು ಮುಂದುವರೆಸಿ ‘ಅಂಡ್ರೊಮಿಡಾ ಇವೊಲ್ಯೂಶನ್’ ಹೆಸರಿನಲ್ಲಿ ಡೇನಿಯಲ್ ವಿಲ್ಸನ್ ಎಂಬಾತ ಕಾದಂಬರಿ ಬರೆದಿದ್ದು ಕಳೆದ ನವಂಬರ್ 12ರಂದು ಅದು ಬಿಡುಗಡೆ ಕಂಡಿದೆ. ಆಂಡ್ರೊಮಿಡಾ ವೈರಾಣು ಬೇರೆ ರೂಪದಲ್ಲಿ ಮತ್ತೆ ಭೂಮಿಗೆ ಇಳಿದು ಬಂತೆ? ಹೊಸ ಏನೇನು ಭಾನಗಡಿ ಮಾಡಲು ಬಂತು? ಈ ಕೌತುಕಗಳು ಕಾದಂಬರಿಯಲ್ಲಿವೆ.
ಈ ಕೃತಿ ಬಿಡುಗಡೆಯಾದ ಮೂರನೆಯ ವಾರದಲ್ಲಿ ಕೊರೊನಾ ವೈರಸ್ನ ಹೊಸ ರೂಪವೊಂದು ವುಹಾನ್ನಲ್ಲಿ ಬಿಡುಗಡೆ ಪಡೆದಿದೆ.
