

ಇಂದು, ಏಪ್ರಿಲ್ 22ರಂದು ‘ಭೂದಿನ’ವನ್ನು ವಿಶೇಷ ಸಂಭ್ರಮದಿಂದ ಆಚರಿಸಬೇಕಿತ್ತು. ಏಕೆಂದರೆ ಇದು 50ನೇ ವರ್ಷಾಚರಣೆ. ಆದರೆ ಕೊರೊನಾ ಅಂಥ ಸಂಭ್ರಮಗಳನ್ನೆಲ್ಲ ಮೂಲೆಗೊತ್ತಿದೆ. ಭೂಮಿಯೇ ಬದಲಾದಂತಿದೆ. “ನನ್ನನ್ನು ಗೋಳಿಕ್ಕಿಕೊಳ್ಳುವುದೂ ಸಾಕು; ನನ್ನ ಹೆಸರಿನ ದಿನಾಚರಣೆಯೂ ಸಾಕು, ಸುಮ್ಮನೆ ಕೂತಿರಿ’’ ಎಂದು ಭೂಮಿ ತನಗಾದ ಗಾಯಗಳನ್ನು ತಾನೇ ಸರಿಪಡಿಸಲು ಹೊರಟಿದೆಯೊ ಏನೊ.

ಹಾಗಿದ್ದರೆ ಭೂಮಿಗೆ ಪ್ರಜ್ಞೆ ಅನ್ನೋದು ಇದೆಯೆ? ಇಂದಿಗೆ 50 ವರ್ಷಗಳ ಹಿಂದೆ ವಿಜ್ಞಾನಿಯೊಬ್ಬನಿಗೆ ಈ ಪ್ರಶ್ನೆ ಎದುರಾಯಿತು. ಭೂಮಿಯ ಕುರಿತು ಹೊಸ ಚಿಂತನ ಕ್ರಮ ಆರಂಭವಾಯಿತು. ಅದರ ಹಿನ್ನೆಲೆ ಮತ್ತು ಸ್ವರೂಪ ಚಿತ್ರಣ ಇಲ್ಲಿದೆ:
ಜೇನು ಹುಟ್ಟು ಎಂದರೆ ಅದರಲ್ಲಿ ಕಾರ್ಮಿಕ ಜೇನ್ನೊಣ, ರಾಣಿ, ಗಂಡುನೊಣ ಹೀಗೆಲ್ಲ ಇರುತ್ತವೆ ಎಂದು ನಾವು ತಿಳಿದಿದ್ದೇವೆ . ”ಅದು ಹಾಗಲ್ಲ, ಇಡೀ ಜೇನುಹುಟ್ಟು ಒಂದು ಜೀವಿ. ಅದರ ಕೆಲವು ಅಂಗಾಂಗಗಳು ಹಾರಿ ಹೋಗಿ ಮತ್ತೆ ಗೂಡಿಗೆ (ದೇಹಕ್ಕೆ) ಬರುತ್ತವೆ”. ಹೀಗೆಂದು ಖ್ಯಾತ ದಾರ್ಶನಿಕ ಲೀವಿಸ್ ಥಾಮಸ್ ವಾದಿಸಿದ್ದ. ಅವನದೇ ವಾದದ ಬೆನ್ನುಹತ್ತಿ ನಾವು ಗೆದ್ದಲು ಹುತ್ತವನ್ನೂ ಒಂದೇ ಜೀವಿಯೆಂದು ಪರಿಗಣಿಸಲು ಸಾಧ್ಯವಿದೆ. ಅದರಲ್ಲಿ ಕೆಲಸಗಾರರು, ಯೋಧರು, ದಾದಿಯರು, ರಾಣಿ, ಸೇವಕ ಎಲ್ಲರೂ ಒಂದೇ ಜೀವಿಯ ಅಂಗಾಂಗಗಳು ಎನ್ನಬಹುದು.
ಅದೇ ಕಲ್ಪನೆಯನ್ನು ಇಡೀ ಭೂಮಿಗೆ ವಿಸ್ತರಿಸಿ ಇದೂ ಒಂದೇ ಜೀವಿ ಎಂತಲೂ ವಾದಿಸಬಹುದು.
ಈ ಪರಿಕಲ್ಪನೆಯನ್ನು ವೈಜ್ಞಾನಿಕವಾಗಿ ಮುಂದಿಟ್ಟವನು ಜೇಮ್ಸ್ ಲವ್‌ಲಾಕ್. ಭೂಮಿಯ ಮೇಲಿನ ಇಡೀ ಜೀವಲೋಕವೇ ಒಂದು ಮಹಾಜೀವಿಯಂತೆ ವರ್ತಿಸುತ್ತದೆ; ಅದು ತನಗೆ ಬೇಕಾದಂತೆ ಕಲ್ಲು, ನೀರು, ಗಾಳಿಯನ್ನೂ ಬದಲಿಸಿಕೊಳ್ಳುತ್ತದೆ ಎಂಬುದಕ್ಕೆ ಆತ ನೂರಾರು ಉದಾಹರಣೆಗಳನ್ನು ಕೊಟ್ಟು ವಿಜ್ಞಾನಲೋಕದಲ್ಲಿ ಹೊಸ ಸಂಚಲನವನ್ನೇ ತಂದಿಟ್ಟ (ಈಗ ಆತನಿಗೆ 100 ವರ್ಷ). ಇಂದಿಗೆ 50 ವರ್ಷಗಳ ಹಿಂದೆ, 1970ರಲ್ಲಿ ಆತ ತನ್ನ ಕಲ್ಪನೆಯ ಭೂಮಿಗೆ ‘ಗೇಯಾ’ ಎಂದು ಹೆಸರಿಟ್ಟ. ಗ್ರೀಕ್ ಭಾಷೆಯಲ್ಲಿ ಭೂಮಾತೆಗೆ ‘ಗೇಯಾ’ ಎನ್ನುತ್ತಾರೆ. ಗ್ರೀಕ್ ಪುರಾಣಗಲ್ಲಿ ಅತ್ಯಂತ ಪುರಾತನ ದೇವತೆ ಎಂದರೆ ಭೂದೇವಿ. ಲವ್‌ಲಾಕ್‌ನ ಪ್ರಸ್ತಾವನೆಗೆ ‘ಗೇಯಾ ಸಿದ್ಧಾಂತ’ ಎಂತಲೇ ಹೆಸರು ಬಂತು.
ಒಂದು ಸರಳ ರೂಪಕದ ಮೂಲಕ ಈ ಗೇಯಾ ಜೀವಿಯ ತಾಕತ್ತನ್ನು ಅಳೆಯಬಹುದು. ಭೂಮಿಯ ಮೇಲೆ ಸೆಕೆ ತೀರಾ ಹೆಚ್ಚಾಯಿತು ಎಂದುಕೊಳ್ಳಿ. ಸತತ ಅನೇಕ ವರ್ಷಗಳವರೆಗೆ ಸೆಕೆ ಹೆಚ್ಚುತ್ತಲೇ ಹೋಗುತ್ತಿದ್ದರೆ ಕ್ರಮೇಣ ಈ ನೆಲದಲ್ಲಿ ಬಿಳಿ ಹೂಗಳನ್ನೇ ಅರಳಿಸುವ ಸಸ್ಯಗಳು ಎಲ್ಲೆಲ್ಲೂ ಹೆಚ್ಚುತ್ತವೆ. ಸೂರ್ಯನ ಬೆಳಕನ್ನು ಅವು ಆಕಾಶಕ್ಕೇ ಹಿಂದಿರುಗಿಸುತ್ತವೆ. ಮೆಲ್ಲಗೆ ಭೂಮಿ ತಂಪಾಗಿ ತನ್ನ ಸರಾಸರಿ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ. ಒಂದುವೇಳೆ ಸೂರ್ಯನ ಪ್ರಖರತೆ ಕಡಿಮೆ ಆಗುತ್ತ ಕ್ರಮೇಣ ಚಳಿ ಹೆಚ್ಚುತ್ತ ಹೋದರೆ ದಟ್ಟವರ್ಣದ ಹೂಗಳು ಹೆಚ್ಚುತ್ತವೆ. ಸಮುದ್ರದಲ್ಲಿ ಚಾಪೆಯಂತೆ ಬೆಳೆಯಬಲ್ಲ ಸೂಕ್ಷ್ಮ ಪಾಚಿ ಕಣಗಳೂ ದಟ್ಟ ಬಣ್ಣ ತಳೆಯುತ್ತವೆ. ಅವು ಸೂರ್ಯನ ಜಾಸ್ತಿ ಶಾಖವನ್ನು ಹೀರಿಕೊಳ್ಳುತ್ತ ಭೂಮಿಯನ್ನು ಸುಸ್ಥಿತಿಗೆ ತರುತ್ತವೆ.
ತನ್ನ ಅಸಮತೋಲವನ್ನು ತಾನೇ ಸರಿತೂಗಿಸಿಕೊಳ್ಳಬಲ್ಲ ಇಂಥ ವ್ಯವಸ್ಥೆಗಳಿಗೆ ‘ಹೋಮಿಯೊಸ್ಟಾಸಿಸ್’ ಎನ್ನುತ್ತಾರೆ.
ನಮ್ಮ ಶರೀರದಲ್ಲೂ ಇಂಥ ಅನೇಕ ಸ್ವಯಂ-ಸಮತೋಲಕ ವ್ಯವಸ್ಥೆ ಇವೆ. ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇನ್ಸೂಲಿನ್ ನಿಯಂತ್ರಿಸುತ್ತದೆ; ದೇಹದ ಉಷ್ಣಾಂಶವನ್ನು ಹೈಪೊಥಾಲಮಸ್ ನಿಯಂತ್ರಿಸುತ್ತದೆ. ಚಳಿ ತೀರಾ ಜಾಸ್ತಿಯಾದಾಗ ನಡುಕ ಬರುವುದೂ ಸ್ವಯಂರಿಪೇರಿ ವ್ಯವಸ್ಥೆಯೇ ಹೌದು. (ಆದರೆ ಕಂಬಳಿ ಹೊದೆಯುವುದು ಹೋಮಿಯೊಸ್ಟಾಸಿಸ್ ಅಲ್ಲ- ಏಕೆ ಹೇಳಿ? ಕಂಬಳಿ ನಮ್ಮ ಶರೀರದ ಒಂದು ಭಾಗವಲ್ಲ.)
ನಮ್ಮ ಶರೀರದಾಚೆಗಿನ ನಿಸರ್ಗದಲ್ಲೂ ಇಂಥ ಸ್ವಯಂನಿಯಂತ್ರಣ ವ್ಯವಸ್ಥೆಗಳು ಎಲ್ಲೆಲ್ಲೂ ಕಾಣುತ್ತವೆ. ಮನೆಯಲ್ಲಿನ ಪುಟ್ಟ ದೇವರ ಗುಡಿಗೆ ಕೂರಿಸಿದ ಅಮೃತಶಿಲೆಯ ಪೀಠವನ್ನೇ ನೋಡಿ. ಆ ಶಿಲೆಯ ಸೃಷ್ಟಿಯಲ್ಲಿ ಜೀವಿಗಳ ಕೈವಾಡ ಇತ್ತು ಗೊತ್ತೆ?
ಜ್ವಾಲಾಮುಖಿ ಸಿಡಿದಾಗ ತುಂಬಾ ಸಿಓಟು (ಕಾರ್ಬನ್) ಚಿಮ್ಮುತ್ತದೆ. ವಾಯುಮಂಡಲಕ್ಕೆ ಕಾರ್ಬನ್ ಜಾಸ್ತಿ ಸೇರಿ ಸೆಕೆ ಹೆಚ್ಚಾಗುತ್ತದೆ. ಸಸ್ಯಗಳು ಆ ಸಿಓಟುವನ್ನು ಹೀರಿ ತೆಗೆಯುತ್ತವೆ. ಸಮುದ್ರದ ಜೀವಿಗಳು ಕೂಡ ನೀರಲ್ಲಿ ಕರಗಿದ ಸಿಓಟುವನ್ನು ಹೀರಿ ತೆಗೆದು ತಮ್ಮ ಸುತ್ತ ಕಾರ್ಬೊನೇಟ್ ಕವಚವನ್ನು ನಿರ್ಮಿಸಿಕೊಳ್ಳುತ್ತವೆ (ಸಾಲಿಗ್ರಾಮಗಳು ಹಾಗೆಯೇ ರೂಪುಗೊಳ್ಳುತ್ತವೆ). ಅವೆಲ್ಲವೂ ಸಮುದ್ರತಳದಲ್ಲಿ ಸಂಚಯಗೊಂಡು ಸುಣ್ಣದ ಸ್ತರಗಳಾಗಿ, ಕ್ರಮೇಣ ಒತ್ತಡಕ್ಕೆ ಸಿಕ್ಕು ಅಮೃತ ಶಿಲೆಯಾಗುತ್ತದೆ. ಸಸ್ಯಗಳ ಇಂಗಾಲವೆಲ್ಲ ಕಲ್ಲಿದ್ದಲಾಗಿ, ತೈಲವಾಗಿ, ಅನಿಲವಾಗಿ ಭೂಗರ್ಭ ಸೇರುತ್ತವೆ. ಭೂಜೀವಿಗಳು ಹೀಗೆ ಕಾರ್ಬನ್ ಚಕ್ರವನ್ನೂ, ಸಾರಜನಕ-ಆಮ್ಲಜನಕ-ಗಂಧಕದ ಚಕ್ರಗಳನ್ನೂ ಸದಾ ಚಲನೆಯಲ್ಲಿಟ್ಟಿರುತ್ತವೆ. ಇದಕ್ಕೆ ಕೋಟಿಗಟ್ಟಲೆ ವರ್ಷ ತಗಲುತ್ತದೆ.
ಜೀವಿಗಳೇ ಇಲ್ಲದಿದ್ದ ಪಕ್ಷದಲ್ಲಿ ಏನೇನಾಗುತ್ತಿತ್ತು?
ಭೂಮಿ ಸೃಷ್ಟಿಯಾದ 450 ಕೋಟಿ ವರ್ಷಗಳಿಂದ ಸೂರ್ಯನ ಪ್ರಭೆ ನಿರಂತರವಾಗಿ ಉಗ್ರವಾಗುತ್ತಲೇ ಹೋಗುತ್ತಿದೆ. ಭೂಮಿಯ ತಾಪಮಾನ ಈಗಿನ 14 ಡಿಗ್ರಿ ಸೆ. ಬದಲಿಗೆ 40 ಡಿಗ್ರಿಯ ಕೆಂಡವಾಗಬಹುದಿತ್ತು. ವಾಯುಮಂಡಲದಲ್ಲಿ ಬರೀ ಕಾರ್ಬನ್ ತುಂಬಿರುತ್ತಿತ್ತು. ಸಮುದ್ರದಲ್ಲಿ ಉಪ್ಪಿನಂಶ ಸತತವಾಗಿ ಹೆಚ್ಚುತ್ತ ಹೋಗಿ ಅದು ನಿರ್ಜೀವ ಕಡಲಾಗುತ್ತಿತ್ತು. ಇಡೀ ಭೂಮಿಯೇ ಬುಧ ಅಥವಾ ಮಂಗಳದ ಹಾಗೆ ಮೃತಗೋಲವಾಗಿರುತ್ತಿತ್ತು. ಹಾಗಾಗದಂತೆ ಭೂಮಿಯನ್ನು ಜೀವಂತ ಇಟ್ಟಿದ್ದೇ ಜೀವಿಗಳು. ಅವು ವಾಯುಮಂಡಲದ ಕಾರ್ಬನ್ನನ್ನು ಅತ್ಯಲ್ಪ ಪ್ರಮಾಣದಲ್ಲಿ ಇಟ್ಟಿವೆ. ಅಷ್ಟೇ ಮಾಡಿದ್ದಿದ್ದರೆ ಗಾಳಿಯಲ್ಲಿ ಬರೀ ಆಕ್ಸಿಜನ್ ತುಂಬಿಕೊಂಡು, ಕಾಡೆಲ್ಲ ಭುಗ್ಗೆಂದು ಉರಿದು ಬೂದಿಯಾಗುತ್ತಿತ್ತು. ಹಾಗಾಗದಂತೆ ಸಾರಜನಕವನ್ನು ದೊಡ್ಡ ಪ್ರಮಾಣದಲ್ಲಿ ವಾಯುಮಂಡಲಕ್ಕೆ ಸೇರಿಸಿದ್ದೇ ಜೀವಿಗಳು.
ಅವು ಆಮ್ಲಜನಕವನ್ನು 21% ಮೀರದಂತೆ ನೋಡಿಕೊಂಡಿವೆ. ಸಮುದ್ರದಲ್ಲಿ ಉಪ್ಪಿನಂಶ 3%ಗಿಂತ ಹೆಚ್ಚದಂತೆ ನೋಡಿಕೊಂಡಿವೆ. ಭೂಮಂಡಲದ ತಾಪಮಾನ 14 ಡಿಗ್ರಿ ಸೆ.ಗಿಂತ ಹೆಚ್ಚದಂತೆ ಹತೋಟಿಯಲ್ಲಿಟ್ಟಿವೆ. ಸಮುದ್ರದ ತಳದಲ್ಲೇ ಉಳಿದಿರಬೇಕಿದ್ದ ಗಂಧಕದ ತುಸು ಭಾಗ ಮಣ್ಣಿನಲ್ಲೂ ಸೇರ್ಪಡೆ ಆಗಿರುವಂತೆ ನಿಗಾ ವಹಿಸಿವೆ.
‘ಸುತ್ತಲಿನ ಪರಿಸರಕ್ಕೆ ತಕ್ಕಂತೆ ಜೀವಿಗಳು ರೂಪುಗೊಳ್ಳುತ್ತವೆ’ ಎಂಬ ಮಾಮೂಲು ಪರಿಕಲ್ಪನೆಯನ್ನು ಗೇಯಾ ತತ್ವವು ತಲೆಕೆಳಗು ಮಾಡುತ್ತದೆ. ‘ಜೀವಿಗಳೇ ತಮ್ಮ ಸುತ್ತಲಿನ ಪರಿಸರವನ್ನು ತಮಗೆ ಬೇಕೆಂದಂತೆ ರೂಪಿಸಿಕೊಳ್ಳುತ್ತವೆ’ ಎಂಬುದು ಈ ಸಿದ್ಧಾಂತದ ತಿರುಳು.
ಎಲ್ಲ ಜೀವಿಗಳೂ ಒಟ್ಟಾರೆಯಾಗಿ ಭೂಮಂಡಲವನ್ನು ಜೀವಂತವಾಗಿ ಇಟ್ಟಿವೆ. ಕೆಲವೊಮ್ಮೆ ಭೂಮಿಯ ಲೆಕ್ಕಾಚಾರ ಹೆಚ್ಚುಕಮ್ಮಿ ಆಗಿ ಇಡೀ ಭೂಮಿಯ ತಾಪಮಾನ ಹೆಚ್ಚುತ್ತ ಹೋಗಿದ್ದು ಹೌದು; ಅಥವಾ ಅತಿ ಚಳಿಯಿಂದ ಹೆಪ್ಪುಗಟ್ಟಿ ಹಿಮದ ಉಂಡೆಯಾಗಿದ್ದೂ ಹೌದು (ಶ್ರೀಲಂಕಾಕ್ಕೆ ಆಗ ನಡೆದೇ ಹೋಗಬಹುದಿತ್ತು). ಉಲ್ಕೆಗಳು ಬಡಿದು ಇಡೀ ಜೀವಲೋಕ ತತ್ತರಿಸಿ ಬಹುಭಾಗ ಹೊಸಕಿ ಹೋಗಿದ್ದೂ ಇದೆ. ಆಗೆಲ್ಲ ಜೀವಿಗಳು ಹೊಸ ರೂಪ ಧರಿಸಿ, ಹೊಸ ಪಾತ್ರ ವಹಿಸಿ ಭೂಮಿಯ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿವೆ. ಒಂದೆರಡು ಕೋಟಿ ಅಲ್ಲ, 350 ಕೋಟಿ ವರ್ಷಗಳಿಂದ ಕಾಪಾಡಿಕೊಂಡು ಬಂದಿವೆ.
ಹಾಗಿದ್ದರೆ ಮನುಷ್ಯ ಬಂದು ಇದೇನೇನು ಭಾನಗಡಿ ಮಾಡುತ್ತಿದ್ದಾನೆ? ಭೂಮಾತೆ ಹುಷಾರಾಗಿ ಅವಿತಿಟ್ಟಿದ್ದ ತೈಲವನ್ನೂ ಕಲ್ಲಿದ್ದಲನ್ನೂ ಅನಿಲವನ್ನೂ ವಿಷಕಾರಿ ಲೋಹಗಳನ್ನೂ ಹೊರಕ್ಕೆ ತೆಗೆದು ವಾಯುಮಂಡಲಕ್ಕೆ ಅತಿಯಾದ ಸಿಓಟು ತುಂಬುತ್ತ, ಸಾವಿರಾರು ಜ್ವಾಲಾಮುಖಿಗಳಿಗಿಂತ ಭೀಕರವಾದ ಅಣುಬಾಂಬ್‌ಗಳನ್ನು ತಯಾರಿಸುತ್ತ ಇದೇನು ಮಾಡುತ್ತಿದ್ದಾನೆ? ಇವನಿಗೆ ಬುದ್ಧಿ, ವಿವೇಕ ಬಂದೀತೆ?
ಇಲ್ಲೊಂದು ಸ್ವಾರಸ್ಯವಿದೆ: 1970ರಲ್ಲಿ ಇಂಗ್ಲಂಡಿನ ವಿಜ್ಞಾನಿ ಭೂಮಿಗೆ ‘ಗೇಯಾ’ ಎಂದು ಹೆಸರಿಟ್ಟಿದ್ದು, ಅದಕ್ಕೊಂದು ವೈಜ್ಞಾನಿಕ, ತಾತ್ವಿಕ ನೆಲೆಗಟ್ಟೊಂದು ರೂಪಿಸುತ್ತಿದ್ದುದು ಆಚಿನ ಅಮೆರಿಕಕ್ಕೆ ಗೊತ್ತಿರಲಿಲ್ಲ! ಅಲ್ಲಿ ತಂತಾನೇ ಪರಿಸರ ಜಾಗೃತಿ ಮೂಡುತ್ತಿತ್ತು. ಗೇಲಾರ್ಡ್ ನೆಲ್ಸನ್ ಎಂಬಾತ ಈ ಜಾಗೃತಿಯನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ‘ಭೂ ದಿನ’ವನ್ನು (‘ಅರ್ಥ್ ಡೇ) ಆಚರಿಸೋಣ ಎಂದು ಕರೆಕೊಟ್ಟಿದ್ದು ಇಂಗ್ಲಂಡಿನ ಜೇಮ್ಸ್ ಲವ್‌ಲಾಕ್‌ಗೆ ಅಂದು ಗೊತ್ತಿರಲಿಲ್ಲ. ಇದೇನೂ ದೈವಪ್ರೇರಣೆ ಎನ್ನಬೇಡಿ! ಚರಿತ್ರೆಯ ಅನೇಕ ಕಾಕತಾಳೀಯಗಳಲ್ಲಿ ಇದೂ ಒಂದು. ಆದರೆ ಮಹತ್ವದ್ದು. ಇಲ್ಲಿ ದೈವಕ್ಕೆ ಜಗನ್ನಿಯಾಮಕನಿಗೆ ಸ್ಥಾನವಿಲ್ಲ. ಹಾಗೆ ನೋಡಿದರೆ, ಅಪ್ಪಟ ವೈಜ್ಞಾನಿಕ ಪ್ರತಿಪಾದನೆಗೆ ‘ಗೇಯಾ’ ಎಂದು ನಾಮಕರಣ ಮಾಡಿದ್ದಕ್ಕೆ ಲವ್‌ಲಾಕ್‌ಗೆ ವಿಜ್ಞಾನಿಗಳಿಂದ ಸಾಕಷ್ಟು ಪ್ರತಿರೋಧ ಬಂತು. ಅದು ಬೇರೆ ವಿಷಯ.
ಅಟ್ಲಾಂಟಿಕ್ ಸಾಗರದ ಈ ಭಾಗದಲ್ಲಿ ಗೇಯಾ ಭೂಮಾತೆಯ ಅನಾವರಣ ಆಗುತ್ತಿದ್ದಂತೆ ಅದೇ ಸಾಗರದ ಇನ್ನೊಂದು ಮಗ್ಗುಲಲ್ಲಿ ‘ಭೂ ದಿನ’ದ ಸಂಭ್ರಮಾಚರಣೆ ಆರಂಭವಾಯಿತು. ಚಂದ್ರಲೋಕದಲ್ಲಿ ಆಗತಾನೆ ಕಾಲಿಟ್ಟ ಮನುಷ್ಯನಿಗೆ ‘ಅಬ್ಬಾ’ ಎನ್ನಿಸುವಂತೆ ಭೂಮಿಯ ಸಮಗ್ರ ಚಿತ್ರಣ ಲಭಿಸಿತು. ಇಂಥ ಸುಂದರ ನೀಲಗೋಲಿಯನ್ನು ಧ್ವಂಸ ಮಾಡಲು ಹೊರಟಿದ್ದೇವೆಂಬ ಅರಿವು ವಿಶ್ವನಾಯಕರಿಗೆ ಮೂಡತೊಡಗಿತು. ಕ್ರಮೇಣ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ಸಿಗತೊಡಗಿತು. ಛಿದ್ರವಾಗುತ್ತಿದ್ದ ಓಝೋನ್ ಕವಚವನ್ನು ಎಲ್ಲ ದೇಶಗಳೂ ಒಟ್ಟಾಗಿ ಸರಿಪಡಿಸೋಣವೆಂಬ ಹಂಬಲ ಮೂಡಿತು.
ಈ ಸುಂದರ ತಿಳಿನೀಲ ಭೂಮಾತೆಯ ಚಿತ್ರದ ವಿಶೇಷವೇನು ಗೊತ್ತೆ? ನೀವೆಷ್ಟೇ ಕಷ್ಟಪಟ್ಟು ಚಿತ್ರವನ್ನು ಹಿಗ್ಗಿಸಿ ಹುಡುಕಿದರೂ ಗಡಿರೇಖೆಗಳು ಕಾಣುವುದೇ ಇಲ್ಲ!
