ಜನರ ನಂಬಿಕೆ ಮತ್ತು ಕೊರೋನಾ ವೈರಾಣು

-ಮೇಟಿ ಮಲ್ಲಿಕಾರ್ಜುನ

ಇಡೀ ಜಗತ್ತು ಇವತ್ತು ಆತಂಕದಲ್ಲಿದೆ. ಇದೊಂದು ಭಯಾನಕವಾದ ಆತಂಕ. ಇದನ್ನು ಎದುರಿಸುವ ಬಗೆಗಳನ್ನು ಹಲವು ರೀತಿಯಲ್ಲಿ ಪ್ರಯೋಗಿಸಲಾಗುತ್ತಿದೆ. ಯಾವುದೇ ಪ್ರಯೋಗಕ್ಕೆ ಖಚಿತವಾದ ಗ್ರಹಿಕೆಯಿಲ್ಲ. ಇದನ್ನು ಒಂದು ಬಗೆಯಲ್ಲಿ ಟ್ರೈಯಲ್ ಮತ್ತು ಎರರ್ ಎಂದು ಹೇಳಬಹುದು. ಈ ವಿಧಾನ ಅತ್ಯಂತ ಹಳೆಯದು. ವೈಜ್ಞಾನಿಕ ಆವಿಷ್ಕಾರಗಳು ತಲೆಯೆತ್ತುವ ಸನ್ನಿವೇಶದಲ್ಲಿ ಈ ವಿಧಾನವನ್ನು ಬಹುವಾಗಿ ನೆಚ್ಚಿಕೊಳ್ಳಲಾಗಿತ್ತು. ಇವತ್ತು ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಯೋಗ ಮತ್ತು ಬಳಕೆಯ ಭರಾಟೆಯಲ್ಲಿರುವ ಹೊತ್ತಿನಲ್ಲಿಯೂ ಈ ಟ್ರೈಯಲ್ ಮತ್ತು ಎರರ್ ವಿಧಾನವನ್ನೇ ಅನುಸರಿಸಲಾಗುತ್ತಿದೆ.

ಅಂದರೇನಾಯ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಸರಿಸಾಟಿಯಾಗಿ ನಮ್ಮ ಸಮೂಹಗಳ ಯೋಚನಾ ಕ್ರಮಗಳಲ್ಲಿ ಬೆಳವಣಿಗೆ ಆಗಿಲ್ಲವೆಂದಾಯ್ತು. ನಮ್ಮನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಿಯಂತ್ರಿಸುವ, ನಡೆಸುವ ಹಾಗೂ ನಿರ್ವಹಿಸುವ ಅಸ್ತ್ರಗಳನ್ನಾಗಿ ಮಾತ್ರ ಈ ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಬದುಕಿನ ಸಾರ್ಥಕತೆಯನ್ನು ಪಡೆಯುವಲ್ಲಿ ಇವುಗಳ ಹೆಚ್ಚುಗಾರಿಕೆಯನ್ನು ನೋಡಲು ಸಾಧ್ಯವಿಲ್ಲ ಎಂದಾದರೆ ಇವುಗಳನ್ನು ನಂಬುವುದಾದರೂ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ನಮಗಿಲ್ಲಿ ಎದುರಾಗುತ್ತದೆ. ಮೌಢ್ಯದ ಹಾವಳಿ ಹೆಚ್ಚಾಗುತ್ತಲೇ ಇದೆ ಹೊರತು ವೈಚಾರಿಕತೆ ಬೆಳೆಯುತ್ತಿಲ್ಲ ಎಂಬ ಸಂದೇಹವನ್ನು ಇಲ್ಲಿ ನಿರಾಕರಿಸುವಂತಿಲ್ಲ. ಇಂತಹದೇ ಕಂದಕವನ್ನು ಸಂವಿಧಾನದ ಆಶಯ ಮತ್ತು ಬದುಕಿನ ಸನ್ನಿವೇಶಗಳ ನಡುವೆ ಏರ್ಪಟ್ಟಿರುವುದನ್ನು ನೋಡಬಹುದು.
ಈ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವೇನೆಂದರೆ, ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದರೆ ಜನರು ಈ ಪರಿಸ್ಥಿತಿಯನ್ನು ಅನುಸರಿಸುವಂತೆ ಅವರ ಮನವೋಲಿಸುವಲ್ಲಿ ಸಾಕಷ್ಟು ಏರುಪೇರುಗಳು ಆಗುತ್ತಿವೆ. ಪರಿಣಾಮವಾಗಿ ಜನರಿಗೆ ಪೊಲೀಸರ ಮೇಲೆ ನಂಬಿಕೆ ಕಡಿಮೆಯಂತಲೋ ಇಲ್ಲವೇ ಪೊಲೀಸರಿಗೆ ಜನರ ಮೇಲೆ ನಂಬಿಕೆ ಕಡಿಮೆಯೆಂದೋ ವಾದಿಸಲಾಗುತ್ತಿದೆ. ಈ ನಂಬಿಕೆಯ ಪ್ರಶ್ನೆಯನ್ನು ಅಡ್ರೆಸ್ ಮಾಡುವುದಾದರೂ ಹೇಗೆ? ಜನರ ನಂಬಿಕೆಯನ್ನು ಗಳಿಸುವ ವಿಧಾನಗಳು ಕಾಲ-ದೇಶಕ್ಕೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ರೂಪುಗೊಂಡಿವೆ. ರಾಜಪ್ರಭುತ್ವದ ಇಲ್ಲವೇ ವಸಾಹತುಶಾಹಿ ಸಂದರ್ಭದಲ್ಲಿದ್ದ ನಂಬಿಕೆಯ ಸ್ವರೂಪ ಸ್ವಾತಂತ್ರ್ಯ ಹೋರಾಟದಲ್ಲಿ ಬೇರೆ ಸ್ವರೂಪದಲ್ಲಿದ್ದವು. ಈಗ ಸಂವಿಧಾನ ಅಸ್ತಿತ್ವಕ್ಕೆ ಬಂದು ಏಳು ದಶಕಗಳಾಗಿವೆ. ನಮ್ಮೀ ಸಂವಿಧಾನಕ್ಕೆ ಒಂದು ಸ್ಪಷ್ಟವಾದ ವೈಚಾರಿಕತೆಯಿದೆ. ಈ ವೈಚಾರಿಕ ಚೌಕಟ್ಟಿಗೆ ಪೂರಕವಾಗಿ ನಮ್ಮ ದೇಶದ ಜನರ ನಂಬಿಕೆಯನ್ನು ರೂಪಿಸುವುದು ತಾತ್ವಿಕವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ಸರಿಯಾದ ನಿಲುವು. ಅಂದರೆ ‘ನಾವು ಭಾರತೀಯರು’ ಎನ್ನುವ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಈ ದೇಶದ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸುವುದಾಗಿದೆ. ಆದರೆ ಜಾತಿ, ಧರ್ಮ, ಪ್ರದೇಶ ಮತ್ತು ಭಾಷೆಗಳನ್ನು ನೆಲೆಯಾಗಿಸಿಕೊಂಡು ಜನರ ನಂಬಿಕೆಯನ್ನು ಪಡೆಯುವಂತಾದರೆ, ನಾವು ಭಾರತೀಯರು ಎನ್ನುವ ಸಂವಿಧಾನದ ಮಂತ್ರಕ್ಕೆ ಕುತ್ತು ಬರುತ್ತದೆ. ಐಕ್ಯತೆ ಏರ್ಪಡುವ ಜಾಗದಲ್ಲಿ ಪ್ರತ್ಯೇಕತೆ ಏರ್ಪಡುತ್ತದೆ. ಜಾತಿ ಮತಗಳ ಮೂಲಕ ಭಾರತೀಯರು ಎನ್ನುವ ಐಕ್ಯಭಾವವನ್ನು ಸಾಧಿಸಲು ಸಾಧ್ಯವಿಲ್ಲ. ಹೌದು ನಾವು ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ಮುಖ್ಯಮಂತ್ರಿಯಾಗಿ ಇಲ್ಲವೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸುವಾಗ, ಬಹುತೇಕವಾಗಿ ನಮ್ಮನಮ್ಮ ನಂಬಿಕೆಯ ದೇವರ ಮೇಲೆ ಪ್ರಮಾಣ ಮಾಡಿ, ಪ್ರಮಾಣವಚನ ಸ್ವೀಕರಿಸುತ್ತೇವೆ. ಆದರೆ ಸಮುದಾಯಗಳ ಏಳ್ಗೆಯ ಪ್ರಶ್ನೆ ಇಲ್ಲವೇ ದೇಶದ ಐಕ್ಯತೆಯ ಪ್ರಶ್ನೆ ಬಂದಾಗ ಜಾತಿ, ಮತ, ಸ್ವಜನಪಕ್ಷಪಾತ ಎಲ್ಲವನ್ನೂ ಮೀರಿ ಈ ದೇಶದ ಐಕ್ಯತೆಯನ್ನು ಕಾಪಾಡುತ್ತೇವೆ ಮತ್ತು ಜನರ ಕಲ್ಯಾಣಕ್ಕಾಗಿ ಬದ್ಧರಾಗಿರುತ್ತೇವೆ ಎಂದು ಇದೇ ಪ್ರಮಾಣ ವಚನದಲ್ಲಿ ಪ್ರಮಾಣ ಮಾಡಲಾಗುತ್ತದೆ.
ನಮ್ಮ ದೇಶದ ಸಾಮಾಜಿಕ ರಚನೆಯನ್ನು ಯಥಾವತ್ತಾಗಿ ಸಂವಿಧಾನದ ಪ್ರಕಾರ ಒಪ್ಪಲು ಸಾಧ್ಯವಿಲ್ಲ. ಸಮಾಜದ ಎಷ್ಟೋ ಈ ನಿಲುವುಗಳು ಪೂರ್ವಾಗ್ರಹದಿಂದ ಕೂಡಿರುತ್ತವೆ. ಮುಖ್ಯವಾಗಿ ಜಾತಿ, ಧರ್ಮ, ಲಿಂಗ, ಪ್ರದೇಶ, ವರ್ಗ ಮತ್ತು ಭಾಷೆಗಳನ್ನು ಆಧರಿಸಿಕೊಂಡಿರುತ್ತವೆ. ಜನರನ್ನು ಪ್ರಜಾಸತ್ತಾತ್ಮಕ ನೆಲೆಗಳಲ್ಲಿ ಗುರುತಿಸದೇ ಹೋದರೆ, ಜನರ ನಂಬಿಕೆಯನ್ನು ಪಡೆಯುವುದು ದುಸ್ತರವೇ ಸರಿ. ಈ ಲಾಕ್ಡೌನ್ ಸನ್ನಿವೇಶದಲ್ಲಿ ನಾವು ಕೆಲವರನ್ನು ಗುರುತಿಸುವ ರೀತಿ ಹಾಗೂ ಕೂಲಿಕಾರ್ಮಿಕ ವಲಸಿಗರನ್ನು ನಡೆಸಿಕೊಳ್ಳುವ ವಿಧಾನಗಳನ್ನು ನೋಡಿದರೆ, ಪ್ರಜಾಸತ್ತಾತ್ಮಕ ಎಂದು ಹೇಳುವ ಈ ಸಮಾಜಗಳಲ್ಲಿ ನೆಲೆಗೊಂಡಿರುವ ಕ್ರೌರ್ಯ ಅರ್ಥವಾಗುತ್ತದೆ. ಇಂತಹ ಹಲವಾರು ನಿಲುವುಗಳು ಈ ಲಾಕ್ಡೌನ್ ಸನ್ನಿವೇಶದ ಮೇಲೆ ಪ್ರಭಾವವನ್ನು ಬೀರಿರುತ್ತಿವೆ. ಕೇವಲ ನಿರ್ಬಂಧನೆಗಳ ಮೂಲಕ ಇಲ್ಲವೇ ಪೊಲೀಸರ ಕಟ್ಟಪ್ಪಣೆಗಳ ಮುಖಾಂತರ ಎಲ್ಲವನ್ನೂ ನಿರ್ವಹಿಸಲು ಸಾಧ್ಯವಿಲ್ಲ. ಅಂತಿಮವಾಗಿ ಜನರು ಮನಸ್ಸು ಮಾಡಬೇಕಾದ ಅಗತ್ಯವಿದೆ.
ಇವತ್ತು ಎಷ್ಟೊಂದು ಜನರು ತೋಡಿಕೊಳ್ಳುತ್ತಿರುವ ತಮ್ಮೀ ಸಮಸ್ಯೆಗಳು ಕೇವಲ ಕೊರೋನಾ ವೈರಾಣುವಿನ ಹಾವಳಿಯಿಂದ ತಲೆಯೆತ್ತಿದವುಗಳಲ್ಲ. ಈ ಎಲ್ಲ ಸಮಸ್ಯೆಗಳು 1947ರ ಮೊದಲು ಇದ್ದವು ಮತ್ತು ನಂತರವೂ ಮುಂದುವರೆದಿವೆ.

ಆದರೆ ಕೆಲವು ಜಾತಿ, ಧರ್ಮ, ವರ್ಗ, ಪ್ರದೇಶ ಮತ್ತು ಭಾಷೆಗಳ ಜನರ ಬದುಕಿನ ದಾರಿಗಳು ಸುಗಮವಾಗಿವೆ. ಮತ್ತೆ ಇನ್ನೂ ಕೆಲವು ಜಾತಿ, ಧರ್ಮಗಳ ಬದುಕಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇವೆ. ಪರಿಣಾಮವಾಗಿ ನಾವು ಎಲ್ಲರೂ ಭಾರತೀಯರು ಎನ್ನುವ ವಿಶ್ವಾಸವನ್ನು ಗಳಿಸುವಲ್ಲಿ ಸೋತಿದ್ದೇವೆ. ಈ ದೇಶದ ಎಲ್ಲ ಜನರ ನಂಬಿಕೆಯನ್ನು ಗಳಿಸಲು ನಮಗಿರುವ ಏಕೈಕ ಮಾರ್ಗ ನಮ್ಮ ಸಂವಿಧಾನದ ‘ನಾವು ಭಾರತೀಯರು’ ಎನ್ನುವ ಧ್ಯೇಯವಾಕ್ಯ ಮಾತ್ರ. ಇದಕ್ಕೆ ಸೀಮಿತರಾಗಿ ನಮ್ಮ ನಡೆ ನುಡಿಗಳನ್ನು ಮರುರೂಪಿಸಿಕೊಳ್ಳಬೇಕು. ಅನಾದಿಕಾಲದಿಂದಲೂ ನಮ್ಮ ಸಮೂಹಗಳನ್ನು ಕಾಡುತ್ತಿರುವ ಅದೇ ಸಾಮಾಜಿಕ ಪೀಡುಗುಗಳನ್ನು ಮುಂದಿಟ್ಟುಕೊಂಡು ನಮ್ಮ ಸದ್ಯದ ಬಿಕ್ಕಟ್ಟುಗಳನ್ನು ನಿಭಾಯಿಸುವುದು ದುಸ್ತರವೇ ಸರಿ. ಹಾಗಾಗಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಶಿಖ್ಖರು ಎಂಬ ಯಾವ ಭೇದಭಾವವನ್ನು ನಮ್ಮ ಸಮೂಹಗಳಲ್ಲಿ ಹರಡದಂತೆ, ಈ ಕೊರೋನಾ ಮಹಾಮಾರಿ ವೈರಾಣುವನ್ನು ಎದುರಿಸುವ ಆತ್ಮಬಲವನ್ನು ನಮ್ಮ ಭಾರತೀಯರೆಲ್ಲರಲ್ಲೂ ಬೆಳೆಸುವ ಅಗತ್ಯವಿದೆ. ಈ ವೈರಾಣು ದೇಶದುದ್ದಕ್ಕೂ ಹರಡಲು ಇಂತಹದೇ ಜಾತಿ, ಧರ್ಮದವರು ಕಾರಣವೆಂದು ಆರೋಪ ಮಾಡಿದರೆ, ಈ ವೈರಾಣು ಜೊತೆಗೆ ಸೆಣಸಾಡುವುದಕ್ಕಿಂತ ಮಿಗಿಲಾಗಿ ಕೇವಲ ಧರ್ಮ, ಜಾತಿಗಳ ಹೆಸರಿನಲ್ಲಿ ಪರಸ್ಪರ ಸಂಘರ್ಷಕ್ಕೆ ಅಣಿಯಾಗುತ್ತೇವೆ. ಈ ದುರಿತ ಕಾಲದಲ್ಲಿ ಹೀಗೆ ದೋಷಾರೋಪವನ್ನು ಮಾಡುವುದು ಎಷ್ಟು ಸೂಕ್ತ? ನಮ್ಮ ಸಮೂಹಗಳ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಈ ನಿಲುವುಗಳು ನಮಗೆ ಹೇಗೆ ನೆರವಿಗೆ ಬರಬಲ್ಲವು? ನಮ್ಮ ದೇಶದ ಐಕ್ಯತೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮದು ಎನ್ನುವ ವಿವೇಕ ಮತ್ತು ಎಚ್ಚರ ಜಾಗ್ರತವಾಗದೆ ನಮ್ಮ ನಡೆ ನುಡಿಗಳು ಬದಲಾಗುವುದಿಲ್ಲ. ಸಹಬಾಳ್ವೆಯ ಪರಿಸರವನ್ನು ರೂಪಿಸಿಕೊಳ್ಳುವುದು ಕೂಡ ಅಸಾಧ್ಯ.

ಆದ್ದರಿಂದ ಭಾರತೀಯರು ಎನ್ನುವ ಪರಿಭಾಷೆಯ ಮೂಲಕವೇ ನಮ್ಮ ದೇಶ, ಜನತೆ, ಅಭಿವೃದ್ಧಿ ಮತ್ತು ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಜರೂರಿದೆ. ಉದಾ.ಗೆ ಭಾರತೀಯರನ್ನು ಜಾತಿ, ಧರ್ಮಗಳ ಆಧಾರದ ಮೇಲೆ ಗುರುತಿಸದೇ ನಾಗರಿಕರೆಂದು, ನಮ್ಮ ನೆರೆಹೊರೆ ದೇಶಗಳನ್ನು ಅಂತರ್ರಾಷ್ಟ್ರೀಯ ಸಂಬಂಧದಲ್ಲಿ ಗುರುತಿಸುವುದು, ಈ ದೇಶದ ಎಲ್ಲ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕಗೊಳಿಸುವುದು, ಅಭಿವೃದ್ಧಿ ಪರಿಕಲ್ಪನೆ ಮತ್ತು ಯೋಜನೆಗಳನ್ನು ಭಾರತೀಯ ನಾಗರಿಕರ ಹೆಸರಲ್ಲಿ ಮಾತ್ರ ಚಾಲ್ತಿಗೆ ತರಬೇಕು ಹಾಗೂ ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ ಪರಿಭಾಷೆಯೂ ನಾಗರಿಕ ಪರಿಕಲ್ಪನೆಯಲ್ಲಿಯೇ ನೆಲೆಗೊಳ್ಳಬೇಕು. ಇಲ್ಲಿ ಮತ್ತೇ ಜಾತಿ, ಧರ್ಮ, ಪ್ರದೇಶಗಳ ಪ್ರಶ್ನೆಗಳು ಮುಖ್ಯವಾದರೆ, ಇದಕ್ಕೆ ಬಲಿಪಶು ಆಗುವವರು ಸಾಮಾನ್ಯ ಜನರು ಮಾತ್ರ. ಈ ದೇಶದ ಶ್ರಿಸಾಮಾನ್ಯ ಜನರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮತ್ತು ಅದುವೇ ನಮ್ಮ ನೈತಿಕತೆಯೂ ಆಗಬೇಕು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *