ಕುಗ್ವೆ ಅನುಭವದಲ್ಲಿ ಮಹೇಂದ್ರರ ಸ್ಮರಣೆ

ಬೆಳಿಗ್ಗೆ ಫೇಸ್ಬುಕ್ ತೆರೆಯುತ್ತದಂತೆ ಮೊದಲು ಕಾಣಿಸಿದ್ದೇ ಗೆಳೆಯರಾದ ಮಹೇಂದ್ರ ಕುಮಾರ್ ಸಾವಿನ ಕುರಿತು ದಿನೂ ಅವರು ಹಾಕಿದ್ದ ಸಣ್ಣ ಸುದ್ದಿ. ಅದನ್ನು ನೋಡಿದ ಆ ಕ್ಷಣಕ್ಕೆ ಯೋಚನೆಯೇ ನಿಂತು ಹೋದಂತೆನಿಸಿತು. ಸುದ್ದಿಯನ್ನು ಅರಗಿಸಿಕೊಳ್ಳಲು ಸುಮಾರು ಹೊತ್ತು ಹಿಡಿಯಿತು. ನಾನೂ ಒಂದೆರಡು ಸಾಲುಗಳನ್ನು ಫೇಸ್ಬುಕ್ಕಿನಲ್ಲೆ ಬರೆಯುತ್ತಿದ್ದಂತೆ ಕಣ್ಣಿನಿಂದ ಹನಿಗಳು ಸುರಿಯುತ್ತಲೇ ಇದ್ದವು… ಇದೊಂದು ಸುದ್ದಿ ಸುಳ್ಳಾಗಬಾರದೇ ಎಂದು ಮನಸ್ಸು ಬಯಸುತ್ತಲೇ ಇದೆ….ಈ ಮಹೇಂದ್ರಕುಮಾರ್ ಎಂಬ ವ್ಯಕ್ತಿಯೊಂದಿಗಿನ ಒಡನಾಟದ ಕುರಿತು ಮತ್ತೆ ಮತ್ತೆ ಯೋಚಿಸುತ್ತಿರುತ್ತೇನೆ…

ಅದು 2001ನೇ ಇಸವಿ. ಬಹುಶಃ ಮೇ ತಿಂಗಳೆನಿಸುತ್ತದೆ. ಶೃಂಗೇರಿಗೆ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬಂದಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದಿಂದ ಆದಿವಾಸಿಗಳನ್ನು ಎತ್ತಂಗಡಿ ಮಾಡಕೂಡದು ಎಂದು ಆಗ್ರಹಿಸಿ ಎರಡು ದಿನಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಕಲ್ಕುಳಿ ವಿಠಲಹೆಗಡೆಯವರ ಅಧ್ಯಕ್ಷರಾಗಿದ್ದ ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟ ಒಕ್ಕೂಟ’ ಈ ಸಮಾವೇಶವನ್ನು ಆಯೋಜಿಸಿತ್ತು. ಇದಕ್ಕೂ ಒಂದು ವಾರದ ಮೊದಲಿಂದಲೂ ನಾವು ಇಡೀ ಉದ್ಯಾನವನ ವ್ಯಾಪ್ತಿಯಲ್ಲಿ ಪ್ರಚಾರಾಂದೋಲನ ಹಮ್ಮಿಕೊಂಡಿದ್ದೆವು. ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಸುಮಾರು 100-150 ಹುಡುಗ ಹುಡುಗಿಯರು ಏಳೆಂಟು ತಂಡಗಳನ್ನು ಮಾಡಿಕೊಂಡು ಪ್ರಚಾರ ನಡೆಸಿದ್ದೆವು. ಆದರೆ ಈ ಹೊತ್ತಿಗೆ ಶೃಂಗೇರಿ, ಕೊಪ್ಪಗಳಲ್ಲಿ ಸಾಕಷ್ಟು ಶೂದ್ರ ಹುಡುಗರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಭಜರಂಗದಳ ನಮ್ಮ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಸಮಾವೇಶವನ್ನು ವಿಫಲಗೊಳಿಸುವ ಉದ್ದೇಶದಿಂದ ಅಪಪ್ರಚಾರವನ್ನೂ ನಡೆಸಿತ್ತು. ಅಂದು ಭಜರಂಗದಳದ ನೇತೃತ್ವ ವಹಿಸಿಕೊಂಡಿದ್ದು ಅದರ ತಾಲ್ಲೂಕು ಸಂಚಾಲಕರಾಗಿದ್ದ ಮಹೇಂದ್ರಕುಮಾರ್. ಸಮಾವೇಶದ ದಿನ ಸುಮಾರು 3,000 ಜನ ಆದಿವಾಸಿಗಳು, ನೂರಾರು ಪ್ರಗತಿಪರರು ನೆರೆದಿದ್ದರು. ಇನ್ನೇನು ಮೇಧಾ ಪಾಟ್ಕರ್ ತಮ್ಮ ಭಾಷಣ ಶುರು ಮಾಡಬೇಕು ಅನ್ನುವಷ್ಟರಲ್ಲಿ ಏಳೆಂದು ಜನರ ಗುಂಪೊಂದು ಮೇಧಾ ಪಾಟ್ಕರ್ ವಿರುದ್ಧ ಘೋಷಣೆ ಕೂಗುತ್ತಾ ಗಲಾಟೆ ಎಬ್ಬಿಸಲು ಪ್ರಯತ್ನಿಸಿತು. ಆ ಗುಂಪಿನ ನಾಯಕ ಸಹ ಮಹೇಂದ್ರಕುಮಾರ್ ಆಗಿದ್ದರು. ಇಂತಹದು ಏನಾದರೂ ಆಗಬಹುದು ಎಂದು ಮೊದಲೇ ನಿರೀಕ್ಷಿಸಿದ್ದ ನಾವು ಸಹ ತಯಾರಾಗೇ ಇದ್ದೆವು. ಇವರು ಕೂಗುತ್ತಿದ್ದಂತೆ ಮೂರು ಸಾವಿರ ಆದಿವಾಸಿಗಳು ಕೈಯಲ್ಲಿ ಕೋಲು ಹಿಡಿದು ಹೋ… ಎದ್ದುನಿಂತು ಬಿಟ್ಟರು. ಕಾರ್ಯಕ್ರಮದಲ್ಲಿ ವಾಲಂಟಿಯರುಗಳಾಗಿದ್ದ ನಾವೊಂದಿಷ್ಟು ಜನ ಭಜರಂಗದಳದ ಹುಡುಗರ ಕಡೆಗೆ ಓಡುತ್ತಿದ್ದಂತೆ ಅವರು ಪರಿಸ್ಥಿತಿ ನೋಡಿ ಓಟ ಕಿತ್ತರು. ಆ ಹೊತ್ತಿಗೆ ಜಾರಿ ಬಿದ್ದ ಮಹೇಂದ್ರ ಕುಮಾರ್ ಗೆ ಒಂದೆರಡು ಏಟುಗಳೂ ಬಿದ್ದವು. ಮತ್ತೆ ಎದ್ದುಕೊಂಡು ಓಡಿದರು. ಅಕಸ್ಮಾತ್ ಅವರೇನಾದರೂ ಅಲ್ಲೇ ನಿಂತಿದ್ದರೆ ಅಂದು ಏನಾಗುತ್ತಿತ್ತೋ ಏನೋ.. ನಂತರ ಸಮಾವೇಶ ಯಶಸ್ವಿಯಾಗಿ ನಡೆಯಿತು. ಮಹೇಂದ್ರಕುಮಾರ್ ಬಂಧನವಾಯಿತು. ಆದರೆ ಅಂದು ಸಂಜೆಯಾಗುತ್ತಿದ್ದಂತೆ ನೂರಾರು ಮಂದಿ ಭಜರಂಗದಳದ ಹುಡುಗರು ಇಡೀ ಶೃಂಗೇರಿಯನ್ನು ಸ್ಥಬ್ದಗೊಳಿಸಿದರು. ಬಿಜೆಪಿಯ ಒತ್ತಡದಿಂದ ಮರುದಿನವೇ ಕಲ್ಕುಳಿಯವರನ್ನು ಬಂಧಿಸಲಾಯಿತು. ಎರಡನೆಯ ದಿನದ ಬಹಿರಂಗ ಸಮಾವೇಶ ನಡೆಸಲು ಆದಿವಾಸಿ ಒಕ್ಕೂಟಕ್ಕೆ ಅವಕಾಶ ನಿರಾಕರಿಸಲಾಯಿತು…ಹೀಗೆ 20 ವರ್ಷಗಳ ಕೆಳಗೆ ಮಹೇಂದ್ರಕುಮಾರ್ ಮತ್ತು ನನ್ನ ಮುಖಾಮುಖಿಯಾಗಿದ್ದು ಒಂದು ಸಂಘರ್ಷದ ವಾತಾವರಣದಲ್ಲಿ. ಮೊನ್ನೆ ಶೃಂಗೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವಿವಾದದ ಸಂದರ್ಭದಲ್ಲಿ ಮಹೇಂದ್ರಕುಮಾರ್ ನನಗೆ ಫೋನ್ ಮಾಡಿದ್ದಾಗ ಈ ಘಟನೆಯನ್ನು ಅವರಿಗೆ ನೆನಪಿಸಿದೆ. ‘ಸಾರ್, ಆ ದಿನ ನಿಮಗೆ ಬಿದ್ದ ಮೊದಲ ಪೆಟ್ಟು ಹೊಡೆದಿದ್ದು ಸಹ ನಾನೇ ನೆನಪಿದೆಯಾ’ ಅಂದಾಗ ಓ ಎಂದು ನಕ್ಕರು. ಕೆಲವು ವರ್ಷಗಳ ನಂತರ ಮಹೇಂದ್ರಕುಮಾರ್ ಭಜರಂಗದಳ ಬಿಟ್ಟರು, ಜೆ ಡಿ ಎಸ್ ಸೇರಿದರು ಎಂಬ ಸುದ್ದಿ ಕೇಳಿ ಸಂತೋಷಪಟ್ಟವರಲ್ಲಿ ನಾನೂ ಒಬ್ಬ. ಅವರು ತೀರಾ ಇತ್ತೀಚೆಗೆ ಈ ಬಗ್ಗೆ ಬಹಿರಂಗವಾಗಿ ಮಾತಾಡುವವರೆಗೂ ಕಾರಣಗಳು ಸ್ಪಷ್ಟವಿರಲಿಲ್ಲವಾದರೂ ವೈದಿಕಶಾಹಿ ಸಂಘಪರಿವಾರದ ಮುಖ್ಯ ಹುದ್ದೆಯಲ್ಲಿರುವ ಶೂದ್ರನೊಬ್ಬ ಯಾವುದೇ ಕಾರಣದಿಂದ ಹೊರಕ್ಕೆ ಬಂದರೂ ಅದು ಶುಭಸಂಗತಿಯೇ. ನಾಲ್ಕು ವರ್ಷಗಳ ಹಿಂದೆ “ಚಲೋ ಉಡುಪಿ” ನಡೆಯುತ್ತಿದ್ದ ಸಂದರ್ಭದಲ್ಲಿ ರಾಜ್ ಟೀವಿ ಕಚೇರಿಯಲ್ಲಿ ಮಾತಿಗೆ ಸಿಕ್ಕಿದ್ದ ಮಹೇಂದ್ರಕುಮಾರ್ ನನ್ನನ್ನು ಪರಿಚಯ ಮಾಡಿಕೊಂಡವರೇ, “ಹರ್ಷಕುಮಾರ್ ಫೇಸ್ಬುಕ್ ನಲ್ಲಿ ನಿಮ್ಮ ಬರೆಹಗಳನ್ನು ನೋಡ್ತಾ ಇರ್ತೀನಿ. ತುಂಬಾ ಚೆನ್ನಾಗಿ ಬರೆಯುತ್ತಾ ಇರ್ತೀರ. ಎಲ್ಲಾರೂ ಸೇರಿ ಏನಾದರೂ ಮಾಡೋಣ, ಒಮ್ಮೆ ಬನ್ನಿ, ಭೇಟಿಯಾಗಿ, ಮಾತಾಡೋಣ” ಎಂದಾಗ ಆಯ್ತು ಸರ್ ಎಂದಿದ್ದೆ. ಆದರೆ ಅವರು “ಏನಾದರೂ ಮಾಡೋಣ” ಎಂಬ ವಿಷಯದಲ್ಲಿ ಎಷ್ಟು ಗಂಭೀರವಾಗಿದ್ದರು ಎನ್ನುವುದು ನನಗೆ ಪ್ರಶ್ನೆಯಾಗಿತ್ತು. ಅದು ಮನವರಿಕೆಯಾದದ್ದು ಮಾತ್ರ ವರ್ಷದ ಹಿಂದೆ ಅವರು ಒಂದಷ್ಟು ಯುವಕರ ಬಳಗ ಕಟ್ಟಿಕೊಂಡು “ನಮ್ಮ ಧ್ವನಿ” ಸಂಘಟನೆಯನ್ನು ಆರಂಭಿಸಿದಾಗ. ಗಾಂಧಿ ಭವನದಲ್ಲಿ ಅದರ ಮೊದಲ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ. ಅವರ ಪ್ರಯತ್ನಕ್ಕೆ ಹೃದಯಪೂರ್ವಕ ಬೆಂಬಲ ಸೂಚಿಸಿ ಬಂದಿದ್ದೆ. ಬ್ರಾಹ್ಮಣಶಾಹಿ ಸಂಘಪರಿವಾರದ ಅಂಗ ಸಂಘಟನೆಯಾದ ಭಜರಂಗದಳದ ವ್ಯಕ್ತಿಯಾಗಿದ್ದ ಮಹೇಂದ್ರಕುಮಾರ್ ಜಾತ್ಯತೀತ ಮನಸ್ಸಿನ ವ್ಯಕ್ತಿಯಾಗಿ, ತಮ್ಮ ಬುದ್ಧಿ ಭಾವಕ್ಕೆ, ಸ್ವತಂತ್ರವಾಗಿ ತೋಚಿದ ರೀತಿಯಲ್ಲಿ ಸಮಾಜವನ್ನು, ದೇಶವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದು ನಿಜಕ್ಕೂ ಆಶಾಭಾವನೆ ಮೂಡಿಸಿತ್ತು. ಅವರ ಮಾತು ನಡವಳಿಕೆಯಲ್ಲಿ ನನಗೆ ಅವರ ಪ್ರಾಮಾಣಿಕತೆ ಎದ್ದು ಕಾಣಿಸುತ್ತಿತ್ತು. ಹೋಗುವ ದಾರಿ ಸ್ಪಷ್ಟವಿದೆ, ಆದರೆ ದೊಡ್ಡ ರೀತಿಯಲ್ಲಿ ಹೋಗಲು ಸಾಕಷ್ಟು ಹಣಕಾಸಿನ ಮೂಲಗಳು ಬೇಕಾಗುತ್ತದೆ. ಭ್ರಷ್ಟ ಮಾರ್ಗದಲ್ಲಿ ಸಂಘಟನೆ ಕಟ್ಟುವುದು ತಪ್ಪು. ಹೀಗಾಗಿ ಸಧ್ಯ ಯಾರಿಗೂ ಕೈಚಾಚದೇ ನಾವೇ ಸ್ವಲ್ಪ ಹಣ ಹಾಕಿಕೊಂಡು ಸಂಘಟನೆ ಮಾಡ್ತಾ ಇದ್ದೇವೆ’ ಎಂದಿದ್ದರು. ಮಹೇಂದ್ರಕುಮಾರ್ ಕಟ್ಟುತ್ತಿದ್ದಂತಹ ವ್ಯಕ್ತಿ ಕೇಂದ್ರಿತ ಸಂಘಟನೆ ಕೆಲವೇ ವರ್ಷಗಳಲ್ಲಿ ಬಿರುಸಾಗಿ, ವೇಗವಾಗಿ ಬೆಳೆಯಲು ಸಾಧ್ಯ. ಈ ದೃಷ್ಟಿಯಿಂದ ನನಗೆ ಮಹೇಂದ್ರ ಕುಮಾರ್ ಕಟ್ಟುತ್ತಿದ್ದ ಸಂಘಟನೆ ಕುರಿತು ಕುತೂಹಲವಿತ್ತು. ಕಳೆದ ಒಂದು ವರ್ಷದಲ್ಲಿ ಅವರು ಏಳೆಂಟು ಸಲ ನನಗೆ ಕರೆ ಮಾಡಿ ಪ್ರತಿ ಸಲ ಕನಿಷ್ಟ ಅರ್ಧ ಗಂಟೆ ಚರ್ಚಿಸುತ್ತಿದ್ದರು. ಈ ರೀತಿನ ನಾಡಿನ ಅನೇಕರ ಬಳಿ ವೈಯಕ್ತಿಕವಾಗಿ ಚರ್ಚಿಸಿ ಮುನ್ನಡೆಯುತ್ತಿದ್ದ ಅವರ ರೀತಿ ನನಗೆ ಬಹಳ ಮೆಚ್ಚುಗೆಯಾಗಿತ್ತು. ಆದರೆ ಒಂದು ಸಂಘಟನೆಯನ್ನು ಸಂಪೂರ್ಣ ವ್ಯಕ್ತಿಕೇಂದ್ರಿತಗೊಳಿಸಿ ಪರ್ಯಾಯ ನಾಯಕತ್ವ ಬೆಳೆಸದೇ ಹೋದರೆ ದೀರ್ಘಕಾಲದಲ್ಲಿ ಸಮಸ್ಯೆಗಳಾಗುತ್ತವೆ. ಆ ವ್ಯಕ್ತಿ ಭ್ರಷ್ಟಗೊಂಡರೆ ಆ ಸಂಘಟನೆಯೂ ಭ್ರಷ್ಟಗೊಳ್ಳುತ್ತದೆ, ಆ ವ್ಯಕ್ತಿ ಕೊನೆಯಾದರೆ ಆ ಸಂಘಟನೆಯೂ ಕೊನೆಯಾಗುತ್ತದೆ ಎಂಬಂತ ಅನುಮಾನ ನನ್ನಲ್ಲಿದ್ದರೂ ಇಂದಿನ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಮಹೇಂದ್ರಕುಮಾರ್ ಆರಂಭಿಸಿದ್ದ “ನಮ್ಮ ಧ್ವನಿ” ದೊಡ್ಡ ಶಕ್ತಿಯೇ ಆಗಿತ್ತು. ಸ್ವತಃ ಮಹೇಂದ್ರ ಕುಮಾರ್ ಸಹ ವ್ಯಕ್ತಿ ಮಾತ್ರವಾಗದೇ ಒಂದು ಶಕ್ತಿಯಾಗಿ ಬೆಳೆಯುವ ಪ್ರಕ್ರಿಯೆಯಲ್ಲಿದ್ದರು… ಅನೇಕ ಸಂದರ್ಭಗಳಲ್ಲಿ ಅವರು ತಮಗನಿಸುತ್ತಿದ್ದುದನ್ನು ಚರ್ಚಿಸುತ್ತಿದ್ದರು. ಫೇಸ್ಬುಕ್ಕಿನಲ್ಲಿ ನಾನು ಶೇರ್ ಮಾಡಿದ್ದ ಯಾವುದೋ ಒಂದು ವಿಡಿಯೋ ನೋಡಿ ಕೂಡಲೇ ಕಾಲ್ ಮಾಡಿ ಬಹಳ ಭಾವುಕರಾಗಿ “ಏನ್ರೀ ಹರ್ಷಾ ನನ್ನ ಅಳಿಸಿಬಿಟ್ರಲ್ಲರೀ” ಎಂದಿದ್ದರು. ನನಗೂ ಯಾವುದಾದರೂ ವಿಷಯವನ್ನು ಅವರ ಗಮನಕ್ಕೆ ತರಬೇಕು ಅನಿಸಿದಾಗ ಕರೆ ಮಾಡುತ್ತಿದ್ದೆ. ಶೃಂಗೇರಿ ಸಾಹಿತ್ಯ ಸಮ್ಮೇಳನ ಕುರಿತು ಕರೆ ಮಾಡಿ ಈ ಬಗ್ಗೆ ನೀವು ಮಾತಾಡಬೇಕು ಎಂದಿದ್ದೇ ಕೂಡಲೇ ತಮ್ಮ ಹುಡುಗರಿಗೆ ಹೇಳಿ ಒಂದಿಷ್ಟು ಪೋಸ್ಟರುಗಳನ್ನು ಮಾಡಿಸಿ ಕಳಿಸಿದ್ದರು. ಮೊನ್ನೆ ಪಾದರಾಯನಪುರ ಘಟನೆ ಕುರಿತು ಅವರು ಹಾಕಿದ್ದ ಸ್ಟೇಟಸ್ ನನಗೆ ಸರಿ ಎನಿಸದೇ ನಾನು ಅಸಮಾಧಾನದಿಂದ ಒಂದು ಸ್ಟೇಟಸ್ ಹಾಕಿ ಹೀಗೆ ತಿರುಗುವಷ್ಟರಲ್ಲಿ ಅವರದೇ ಕಾಲ್. ‘ಅರೆ ಇಷ್ಟು ಬೇಗ ಓದಿಬಿಟ್ರ’ ಎಂದುಕೊಂಡು ರಿಸೀವ್ ಮಾಡಿದೆ. ನಿಜ ಎಂದರೆ ಅವರು ನನ್ನ ಸ್ಟೇಟಸ್ ಓದಿಯೇ ಇರಲಿಲ್ಲ. ಕೊನೆಗೆ ಅವರು ‘ನೋಡ್ರಿ, ಇಂತಹ ಸಂದರ್ಭದಲ್ಲಿ ನಾವು ಮುಸ್ಲಿಮರು ಮಾಡುವ ತಪ್ಪನ್ನು ಹೇಳದೇ ಇದ್ದರೆ ಅವರ ಪರವಾಗಿ ನಾವು ಮಾತನಾಡಿದಾಗ ಅದಕ್ಕೆ ಬೆಲೆ ಇರುವುದಿಲ್ಲ’ ಎಂದರು. ಆದರೆ ನಾನು ‘ಸರ್ ಅದು ಹಾಗಲ್ಲ, ಹೀಗೆ. ನಾವು ಅಲ್ಲಿನ ಪರಿಸ್ಥಿತಿಯನ್ನು ಗಮನಿಸದೇ ಕೇವಲ ಮೀಡಿಯಾಗಳಲ್ಲಿ ಬಂದದ್ದನ್ನೇ ನಂಬಿಕೊಂಡು ರಿಯಾಕ್ಟ್ ಮಾಡುವುದು ಸರಿಯಲ್ಲ. ಅಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆಡಳಿತಾಂಗದ ತಪ್ಪು ಮುಖ್ಯವಾಗಿದೆ, ಅದನ್ನೂ ಹೇಳುತ್ತಲೇ ಅಲ್ಲಿ ನಡೆದ ಪುಂಡಾಟಿಕೆಯನ್ನು ಖಂಡಿಸಬೇಕು” ಎಂದೆ. ಎಲ್ಲೋ ಸ್ವಲ್ಪ ಕನ್ವಿನ್ಸ್ ಆದಂತೆ ಕಾಣಿಸಿತು. ಮಹೇಂದ್ರಕುಮಾರ್ ಉತ್ತಮ ವಾಗ್ಮಿಯಾಗಿದ್ದದ್ದು ಮಾತ್ರವಲ್ಲದೇ. ಪೂರ್ವಗ್ರಹವಿಲ್ಲದೇ ಕೇಳಿಸಿಕೊಳ್ಳುತ್ತಿದ್ದರು. ಇದು ಅವರು ಮುಂದೆ ನಾಡಿನ ಒಳ್ಳೆಯ ನಾಯಕರಾಗುವ ಲಕ್ಷಣವಾಗಿತ್ತು. ಸಂಘಪರಿವಾರದ ಪಾಳೆಯದಲ್ಲಿ ಹತ್ತಾರು ವರ್ಷಗಳ ಕಾಲ ಪಳಗಿದ್ದ ಮಹೇಂದ್ರಕುಮಾರ್ ವೈಯಕ್ತಿಕ ಅಸಮಧಾನದಿಂದಲೋ, ತಮಗೆ ಬಿಜೆಪಿಯಲ್ಲಿ ಸ್ಥಾನ ಸಿಗದ ಕಾರಣದಿಂದ ಬಿಟ್ಟು ಬಂದರೋ ಎಂದೋ ನನಗೆ ಅನ್ನಿಸಲಿಲ್ಲ. ಇಂದಿಗೂ ಬಹಳಷ್ಟು ಜನ ಹಾಗೇ ತಿಳಿದುಕೊಂಡಿರಬಹುದು. ಅವರ ಸಂಘದ ಒಡನಾಟದಲ್ಲಿಯೇ ಅವರಿಗೆ ಸೈದ್ಧಾಂತಿಕ ಸಮಸ್ಯೆಗಳು ಗಂಭೀರವಾಗಿ ಕಾಡಿ, RSS ಒಂದು ಬ್ರಾಹ್ಮಣಶಾಹಿ ಸಂಘಟನೆ ಎಂದು ಮನವರಿಕೆಯಾಗಿದ್ದೇ ಅವರು ಅಲ್ಲಿಂದ ಕಳಚಿಕೊಂಡು ಬರಲು ಮುಖ್ಯ ಕಾರಣ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಹೀಗಾಗಿಯೇ ಐಡಿಯಾಲಜಿ ಮತ್ತು ಸಂಘಟನೆ ಎರಡರಲ್ಲೂ ಸರಿಯಾದ ಪರ್ಯಾಯಕ್ಕಾಗಿ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಜೆಡಿಎಸ್, ಕಾಂಗ್ರೆಸ್, ಮತ್ತು ಯಾವುದೇ ಸಂಘಟನೆಗಳೂ ಅವರಿಗೆ ಸಮಾಧಾನ ತಂದಿರದ ಕಾರಣದಿಂದಲೆ ತಮ್ಮದೇ ಆಲೋಚನೆಗಳಲ್ಲಿ ‘ನಮ್ಮ ಧ್ವನಿ’ ಕಟ್ಟಲು ಹೊರಟಿದ್ದರು. ದೊಡ್ಡ ಕನಸೊಂದನ್ನು ಕಂಡಿದ್ದರು. ನೂರಾರು ಜನರಿಗೆ ಆ ಕನಸ್ಸನ್ನು ಹಂಚಿದ್ದರು ಕೂಡಾ.ಇತ್ತೀಚೆಗೆ ಶುರುವಾದ CAA-NRC ವಿರೋಧಿ ಚಳವಳಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದುದ್ದಕ್ಕೂ ಸಂಚರಿಸಿದವರಲ್ಲಿ ಮಹೇಂದ್ರಕುಮಾರ್ ಸಹ ಒಬ್ಬರು. ನಾನು ಗಮನಿಸಿದಂತೆ ಅವರು ಹೋದ ಕಡೆಯಲ್ಲೆಲ್ಲಾ ಅತ್ಯಂತ ಒತ್ತು ನೀಡಿ ಮಾತನಾಡುತ್ತಿದ್ದರು RSS ಮತ್ತು ಸಂಘಪರಿವಾರ ಹೇಗೆ ಹಿಂದುಗಳ, ಹಿಂದುಳಿದವರ ಮತ್ತು ದಲಿತರ ವಿರೋಧಿ ಅನ್ನುವುದನ್ನೇ ಆಗಿತ್ತು. RSS ಮೇಲ್ಜಾತಿ ಪರವಾದ ಸಂಘಟನೆ ಎಂಬುದನ್ನೇ ತಮ್ಮ ಅನುಭವದ ಮೂಲಕ ಬಿಡಿಸಿ ಬಿಡಿಸಿ ಅವರು ಹೇಳುತ್ತಿದ್ದುದು ಎಲ್ಲಾ ಕಡೆಗಳಲ್ಲಿ ಅತ್ಯಂತ ಆಕರ್ಷಕವಾಗಿತ್ತು. ಹೀಗಾಗಿಯೇ ಅವರು ಅತಿಹೆಚ್ಚು ಬೇಡಿಕೆಯ ಭಾಷಣಕಾರರೂ ಆಗಿದ್ದರು. ಸಧ್ಯದಲ್ಲೇ ಭೇಟಿಯಾದಾಗ ಮಹೇಂದ್ರ ಕುಮಾರ್ ಅವರೊಂದಿಗೆ ಚರ್ಚಿಸಬೇಕು ಎಂದುಕೊಂಡಿದ್ದ ಹಲವಾರು ವಿಷಯಗಳಿದ್ದವು. ಕೆಲವು ಅಸಮಧಾನಗಳಿದ್ದವು, ತಕರಾರುಗಳಿದ್ದವು, ಸಲಹೆಗಳಿದ್ದವು. ಕನ್ನಡ ನಾಡನ್ನು ಒಂದು ಆರೋಗ್ಯಕರ ಸಮಾಜವಾಗಿ, ಸಹಬಾಳ್ವೆ ಸೌಹಾರ್ದತೆಯ ನೆಲೆವೀಡಾಗಿ, ಸರ್ವರ ಅಭ್ಯುದಯದ ನಾಡಾಗಿ ಕಟ್ಟುವ ನಿಟ್ಟಿನಲ್ಲಿ ಇನ್ನೂ ಸುದೀರ್ಘಕಾಲ ಜೊತೆಜೊತೆಯಾಗಿ ಹೆಜ್ಜೆಹಾಕುತ್ತೇವೆ ಎಂಬ ಭರವಸೆ ಮೂಡಿತ್ತು.. ಆಡಬೇಕಾದ ಮಾತುಗಳು ಬಹಳಷ್ಟಿದ್ದಾಗ… ಹೀಗೆ ಧಡಕ್ ಎಂದು ಎದ್ದು ಹೋಗಿಬಿಟ್ಟರಲ್ಲಾ?!ಇತ್ತೀಚೆಗೆ ಸಂಘಪರಿವಾರದ ಭಕ್ತರು ನಳೀನ್ ಕುಮಾರ್ ಮತ್ತು ಮಹೇಂದ್ರಕುಮಾರ್ ಜೊತೆಗಿದ್ದ ಹಳೆಯ ಫೋಟೋ ಒಂದನ್ನು ಹಾಕಿ ಟ್ರೋಲ್ ಮಾಡುತ್ತಾ ಇದ್ದರು. ಆ ಫೋಟೋದಲ್ಲಿ ಮಹೇಂದ್ರಕುಮಾರ್ ಗೆ ಹೂವಿನ ಮಾಲೆಗಳನ್ನು ಹಾಕಿ ಮೆರೆಸುತ್ತಿದ್ದರೆ ನಳಿನ್ ಕುಮಾರ್ ಕಟೀಲ್ ಪಕ್ಕದಲ್ಲಿ ಪ್ಯಾದೆಯಂತೆ ನಿಂತಿದ್ದ. ಆದರೆ ಇಂದು ಮಹೇಂದ್ರಕುಮಾರ್ ಒಬ್ಬ ಬೀದಿ ಮೇಲಿನ ಹೋರಾಟಗಾರ, ಅದೇ ನಳೀನ್ ಕುಮಾರ್ ಒಬ್ಬ ಸಂಸದ. ಇದನ್ನು ತೋರಿಸಿ, ಇವತ್ತು ಸಂಘದಲ್ಲಿ ಇದ್ದಿದ್ರೆ ಮಹೇಂದ್ರ ಕುಮಾರ್ ಸಹ ಸಂಸದರಾಗುತ್ತಾ ಇದ್ರು ಎಂಬರ್ಥದಲ್ಲಿ ಟ್ರೋಲ್ ನಡೆಯುತ್ತಿತ್ತು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮಹೇಂದ್ರಕುಮಾರ್, “ಇರಬಹುದು ನಳೀನನೇ ಇವತ್ತು ಎಂಪಿಯಾಗಿರಬಹುದು. ನಾನು ಒಬ್ಬ ಸಾಮಾನ್ಯ ಮನುಷ್ಯನೇ ಆಗಿರಬಹುದು. ನನಗೆ ಈ ಹುದ್ದೆ, ರಾಜಕೀಯ ಸ್ಥಾನಮಾನಕ್ಕೆ ಎಂದೂ ಆಸೆಪಟ್ಟೆವನೇ ಅಲ್ಲ. ಆದರೆ ನನ್ನ ಆಸೆ ಅದಲ್ಲ. ಮುಂದೆ ನಾನು ಸತ್ತಾಗ ನನ್ನನ್ನು ನೆನೆಸಿಕೊಂಡು ಅಳುವ ಜನರಿರಬೇಕು, ಜನರ ಪ್ರೀತಿಯನ್ನು ಗಳಿಸಿಕೊಳ್ಳುವುದು ಮುಖ್ಯ. ನಾವು ಈ ಸಮಾಜದ ಒಳಿತಿಗಾಗಿ ಬದುಕಿ ಸಾಯುವುದು ಮುಖ್ಯ. ಇಂದು ನಾಡಿನೆಲ್ಲಡೆ ಜನರು ನನ್ನ ಮೇಲೆ ತೋರುತ್ತಿರುವ ಪ್ರೀತಿಯನ್ನು ನೋಡಿದಾಗ ನನಗೆ ಆ ಒಂದು ಸಮಾಧಾನವಿದೆ. ನಳೀನ್ ಸತ್ತಾಗ ಯಾರೂ ದುಃಖಿಸದೇ ಇರಬಹುದು. ನಾನು ಸತ್ತಾಗ ಒಳ್ಳೆಯ ಉದ್ದೇಶಕ್ಕಾಗಿ ಬದುಕಿ ಹೋರಾಡಿದ್ದ ಎಂದು ಸ್ಮರಿಸಿಕೊಂಡು ದುಃಖಿಸುತ್ತಾರೆ. ಈ ಸಂತೃಪ್ತಿಯ ಮುಂದೆ ಯಾವು ಹುದ್ದೆಗಳೂ ಮುಖ್ಯವಲ್ಲ’ ಎಂದಿದ್ದರು. ಅಕ್ಷರಶಃ ಮಹೆಂದ್ರಕುಮಾರ್ ಈ ಮಾತನ್ನು ನಿಜಗೊಳಿಸಿದ್ದಾರೆ. ಇನ್ನೊಂದು ಇಪ್ಪತ್ತು ವರ್ಷ ಬದುಕಿದ್ದರೆ ಅಕ್ಷರಶಃ ಇಡೀ ನಾಡಿನ ಪ್ರತಿಯೊಬ್ಬರ ಕಣ್ಮಣಿ ಮಹೇಂದ್ರ ಕುಮಾರ್ ಆಗುತ್ತಿದ್ದರು ಅನ್ನುವುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಏಕೆಂದರೆ ಅವರ ನಡೆಯಲ್ಲಿ ಅಷ್ಟು ಖಚಿತತೆಯಿತ್ತು. ಅವರ ಕೆಲವು ನಿಲುವುಗಳು ನಮಗೆ ಸಮಸ್ಯೆ ಅನಿಸುತ್ತಿದ್ದರೂ ಅವರು ಮುಂದೆ ಬದಲಾಗಲು ಅವಕಾಶವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಉದ್ದೇಶದಲ್ಲಿ ಕಪಟತೆ, ಒಳಗೊಂದು ಹೊರಗೊಂದು ಇರಲಿಲ್ಲ.ಗೆಳೆಯ ಮಹೇಂದ್ರಕುಮಾರ್ ಬಹುಶಃ ಬುದ್ಧಿಗಿಂತಲೂ ಹೆಚ್ಚಾಗಿ ಹೃದಯದಿಂದ ಯೋಚಿಸಲು ಶುರು ಮಾಡಿದ ಕಾರಣಕ್ಕೇ ಇರಬೇಕು, ಆ ಹೃದಯ ಭಾರ ತಾಳಲಾಗದೇ ಕೆಲಸವನ್ನೇ ನಿಲ್ಲಿಸಿದ್ದು…! ಹೀಗೆ ನಮ್ಮ ಹೃದಯಗಳಲ್ಲಿ ಹಠಾತ್ ಶೂನ್ಯಭಾವನೆ ಸೃಷ್ಟಿಸಿದ್ದು…‘ವ್ಯಕ್ತಿಯ ದೇಹಕ್ಕೆ ಸಾವಿದೆ ಆದರೆ ವ್ಯಕ್ತಿಯ ವಿಚಾರಗಳಿಗಲ್ಲ’ ಎಂಬ ಮಾತನ್ನು ಯಾರಾದರೂ ಮಹಾತ್ಮರು ಸತ್ತಾಗ ನಮ್ಮನ್ನೇ ನಾವು ಸಮಾಧಾನಪಡಿಸಿಕೊಳ್ಳಲು ಹೇಳುತ್ತಿರುತ್ತೇವೆ. ಆದರೆ ಇದು ವಾಸ್ತವವೂ ಹೌದು. ನಾವು ದ್ವೇಷಿಸುವ ಮನುಷ್ಯ ವಿರೋಧಿ ಸಿದ್ದಾಂತವನ್ನು ಪಾಲಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ವಿಚಾರಗಳಲ್ಲಿ ಅಮೂಲಾಗ್ರ ಬದಲಾವಣೆ ತಂದುಕೊಂಡು, ನಮ್ಮೆಲ್ಲರ ದಾರಿಯಲ್ಲಿ ತಾನೇ ಮುಂದೆ ಮುಂದೆ ಹೆಜ್ಜೆ ಹಾಕತೊಡಗಿದಾಗ ನಮಗೆ ಅಸೂಯೆ ಎನಿಸಿದರೂ ನಮಗೆ ತಲುಪಬೇಕಾದ ಗುರಿ ಮುಖ್ಯವಾಗಿದ್ದರೆ, ಪ್ರಾಮಾಣಿಕತೆ ಇದ್ದರೆ ಅದಕ್ಕಿಂತ ಹೆಚ್ಚು ಖುಷಿಯಾಗುತ್ತದೆ. ಬಹಳಷ್ಟು ಜನರಲ್ಲಿ ಅಂತಹ ಖುಷಿಯ ಭಾವನೆಯನ್ನು ಮೂಡಿಸಿದ್ದ ಈ ಗೆಳೆಯ ಅತ್ಯಲ್ಪ ಕಾಲದಲ್ಲಿ ಎಲ್ಲರ ಹೃದಯ ಗೆದ್ದಿದ್ದಾರೆ; ನಿಜವಾದ ಭಾರತೀಯತೆಯನ್ನು ಎತ್ತಿ ಹಿಡಿದಿದ್ದಾರೆ; ನಿಜವಾದ ದೇಶಭಕ್ತಿ ಅಂದರೆ ಏನು ಎಂಬುದನ್ನು ಸಾವಿರ ಸಲ ಕೂಗಿ ಹೇಳಿದ್ದಾರೆ. ದಾರ್ಮಿಕ ಸಾಮರಸ್ಯ, ಸಹಬಾಳ್ಬೆಯೇ ಈ ದೇಶದ ಜೀವಾಳ ಎಂಬುದನ್ನು ಸಾರಿದ್ದಾರೆ. ಮನುಷ್ಯಪ್ರೀತಿಯನ್ನು ಮನಸೆಲ್ಲಾ ತುಂಬಿಕೊಂಡು ಎದೆಯ ದನಿಗೂ ಮಿಗಿಲಾದ ಶಾಸ್ತ್ರ ಸಿದ್ದಾಂತವಿಲ್ಲ ಎಂಬ ‘ವಿಶ್ವ ಮಾನವ’ ತತ್ವವನ್ನು, ಸೆಕ್ಯುಲರ್ ತತ್ವವನ್ನು ಉಸಿರಾಗಿಸಿಕೊಂಡು ತಾವೂ ಬದಲಾಗಿ ಸಮಾಜ ಬದಲಾವಣೆಯಲ್ಲಿ ತೊಡಗಿಕೊಂಡಿದ್ದ ಮಹೇಂದ್ರ ಕುಮಾರ್ ಗೆ ಅಂತಿಮ ನಮನಗಳು. ಗೆಳೆಯ ಮಹೇಂದ್ರಕುಮಾರ್ ಪ್ರತಿಪಾದಿಸುತ್ತಿದ್ದ, ಬದುಕುತ್ತಿದ್ದ ಮನುಷ್ಯತ್ವದ ವಿಚಾರಧಾರೆ ಚಿರಾಯುವಾಗಲಿ. ಅವರ ಕುಟುಂಬದವರಿಗೆ, ಬಂಧುಗಳಿಗೆ, ಹತ್ತಿರದ ಒಡನಾಡಿಗಳಿಗೆ ಹೆಚ್ಚಿನ ಶಕ್ತಿ ದೊರೆಯಲಿ.

-ಹರ್ಷಕುಮಾರ್ ಕುಗ್ವೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *