*ಕಥೆ *-* ಬಂಡಿಯಾದ ಬುದ್ಧ*

ವರ್ತಮಾನ ತೀವ್ರ ತಳಮಳ ಉಂಟು ಮಾಡುತ್ತಿದೆ. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸುವಾಗ ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ಬರೆದ ಕಥೆ ‘ಬಂಡಿಯಾದ ಬುದ್ದ’ ನೆನಪಾಯಿತು.

ಈ ಕಥೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಹೊತ್ತಿನಲ್ಲಿ ಬರೆದದ್ದು. ಪ್ರಜಾವಾಣಿಗೆ ಕಳಿಸುವ ಮುನ್ನ ಆಗ ಶಿವಮೊಗ್ಗದಲ್ಲಿಯೇ ಇದ್ದ ವಿಮರ್ಶಕರಾದ ಡಾ.ಎಂ,ಎಸ್ ಆಶಾದೇವಿ ಅವರಿಗೆ ಒಮ್ಮೆ ನೋಡಿ ಎಂದು ಕೊಟ್ಟಿದ್ದೆ. ‘ಖಂಡಿತ ಇದಕ್ಕೆ ಬಹುಮಾನ ಬರುತ್ತದೆ’ ಎಂದು ಆಸೆ ಹುಟ್ಟಿಸಿದ್ದರು. ಆದರೆ ಬಹುಮಾನ ಬರಲಿಲ್ಲ! ನಂತರ ಇದು ‘ವಿಕ್ರಾಂತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಯಿತು. (ಅದರ ಮುಂದಿನ ವರ್ಷ ನನ್ನ ‘ಬಾರಯ್ಯ ಬೆಳದಿಂಗಳೇ’ ಕಥೆಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ ಬಂದಿತು)ಈಗ ನೀವು ‘ಬಂಡಿಯಾದ ಬುದ್ದ’ ಕಥೆ ಓದಿರಿ, ಇಷ್ಟವಾದರೆ ತಿಳಿಸಿ, ಆಗದಿದ್ದರೂ ಮರೆಯದೆ ತಿಳಿಸಿ!!

*ಕಥೆ **ಬಂಡಿಯಾದ ಬುದ್ಧ**ಡಾ.ಸರ್ಜಾಶಂಕರ ಹರಳಿಮಠ*

ಅಲ್ಲಾ, ಈ ಕೃಷ್ಣನಿಗೆ ಅಷ್ಟೂನೂ ಗೊತ್ತಾಗಲ್ವಾ?ಅವನಿಗೆ ಗೊತ್ತಿದೆ, ನಾನೂ, ಬುದ್ದೂ ಒಂದೇ ರೂಮಿನಲ್ಲಿದೀವಿ ಅಂತ. ನನಗೆ ಬರೋ ಕಾಗದನೆಲ್ಲಾ ಅವನೂ ಓದುತ್ತಾನೆ, ಅವನಿಗೆ ಬರೋ ಕಾಗದನೆಲ್ಲಾ ಮೊದಲು ನಾನೇ ಓದೋದು. ಎಳ್ಳಮಾಸ್ಯೆಗೆ ಊರಿಗೆ ಹೋದಾಗ ಅಷ್ಟಲ್ದೆ ಕೃಷ್ಣನಿಗೆ ಕೇಳಿದ್ದೆ, ‘ಕಾಗ್ದ ಬರೀತಾ ಜಾಗ್ರತೆ ಮಾರಾಯಾ, ಬುದ್ದೂ ರೂಮಿಗೆ ಬರೋದೇ ರಾತ್ರೆ ಹನ್ನೆರಡು ಗಂಟೆ ಮೇಲೆ, ಆ ಹೊತ್ತಲ್ಲಿ ನನ್ಗೂ ಎಚ್ಚರಾ ಇರಲ್ಲ, ನೀ ಬರಿಯೋ ಕಾಗ್ದ ಓದಿ ಅವ ರಾತ್ರಿಯೆಲ್ಲಾ ಯೊಚ್ನೆ ಮಾಡ್ತಾ ನಿದ್ರೆ ಮಾಡ್ತಾನೋ ಇಲ್ಲೋ…’ ಕೃಷ್ಣನಿಗೆ ಎಷ್ಟು ಮಂಡೆಗೋಯ್ತೊ ಏನೋ…. … ಬೇಜಾರಾದ್ರೆ ಈ ಮನುಷ್ಯ ಬಾಯಿಬಿಟ್ಟಾದ್ರೂ ಹೇಳ್ತಾನಾ, ಯಾವಾಗ ನೋಡಿದ್ರೂ ಹೆಸರಿಗೆ ತಕ್ಕಹಾಗೆ ಬುದ್ದೂ ತರಾ ನಗಾಡ್ತಾನೆ ಇರ್ತಾನೆ. ಈ ಕಾಗದ ಓದಿ ಅಂತೂ ಬಿದ್ದೂ ಬಿದ್ದೂ ನಗಾಡ್ತಾನೆ.. ಕೃಷ್ಣ ಬರೆದಿದ್ರಲ್ಲಿ ನಿಜಾ ಎಷ್ಟೋ ಸೇರಿಸಿದ್ದೆಷ್ಟೊ, ಹೀಗೆ ಪೇಪರ್ರಿಗೆ ಬರೀತಿದ್ರೆ ಬಡ್ಡೀಮಗ ಒಳ್ಳೇ ರೈಟರ್ರೇ ಆಗಿರೋನು…. …. ಸತೀಶನ ಮಟನ್ ಅಂಗಡಿ ಭಾಳಾ ಫೇಮಸ್ ಆಗ್ತಿದೆಯಂತೆ, ಫೇಮಸ್ ಅನ್ನೋ ಪದಕ್ಕೆ ಅಂಡರ್ಲೈನ್ ಬೇರೆ ಹಾಕಿದಾನೆ! ಮಾಂಸ ಮಾತ್ರ ಕುರೀದು ಅಲ್ವೇ ಅಲ್ವಂತೆ…. ಚಿಕ್ಕಳ್ಳಿ ನಾಗರಾಜ ‘ಇದು ನಾಯಿದೋ, ಎಮ್ಮೆದೋ ಮಾಂಸ ಇರ್ಬೇಕು, ಜಗ್ದು ಜಗ್ದು ಸಾಕಾತು, ರಾತ್ರಿ ಎಲ್ಲಾ ವಾಂತಿ ಆತು’, ಅಂತ ಊರೆಲ್ಲಾ ಹೇಳ್ಕೊಂಡು ಸತೀಶನಿಗೆ ಶಾಪಾ ಹಾಕ್ತಿದಾನಂತೆ, ‘ತಿಂದಿರೋ ಮಾಂಸದ ಸಾಲಾ ಕೊಡಕಾಗ್ದೆ ಇರೋರು ಹಿಂಗೇ ಹೇಳೋದು’ ಅಂತ ಸತೀಶ ನಾಗರಾಜನ ಮೇಲೆ ಜಗಳ ಕಾಯ್ದನಂತೆ.

‘ಹಳೇ ಮಾಂಸದ ಬಾಕಿ ಹದಿನೈದು ರುಪಾಯಿ ತಂದ್ಕೊಡು’ ಅಂತಾ ಸತೀಶ ಓಪನ್ ಕಾರ್ಡಲ್ಲಿ ಕಾಗದ ಬರೆದಿದ್ದನಂತೆ. ಅಂಗಡಿಯಲ್ಲಿ ಇದ್ದೋರೆಲ್ಲಾ ಆ ಕಾಗದ ಓದಿ ಓದಿ ಕೊನೆಗೆ ನಾಗರಾಜನಿಗೆ ಕೊಟ್ಟರಂತೆ. ‘ಆ ಅವ್ಮಾನ ಹಿಂಗ್ ತೀರ್ಸಕಳ್ತಿದಾನೆ’ ಅಂತಾ ಸಾಲದ ಮೇಲೆ ಮಾಂಸ ಕೇಳಕ್ಕೇ ಬಂದ ಸತ್ತಿ ಸತೀಶಂಗೆ ಹೇಳಿದನಂತೆ. ಕೃಷ್ಣ ಕಾಗದ ಬರೆದರೇನೇ ಹಾಗೇ. ಒಂದು ಕತೆ ಓದಿದ ಹಾಗೆ ಆಗುತ್ತದೆ… ಊರಲ್ಲಿ ಯಾರ್ಯಾರಿಗೆ ಮದ್ವೆ ಫಿಕ್ಸ್ ಆಗಿದೆ, ವರದಕ್ಷಿಣೆ ಎಷ್ಟು… ಯಾರ್ಯಾರು ಬಸ್ರಿಯಾಗಿದಾರೆ, ಮದ್ವೆಯಾಗ್ದೆ ಯಾರ್ ಯಾರಿಗೆ ಹೊಟ್ಟೆ ಕಾಣ್ತೆದೆ, ಗೌಡ್ರ ದೆಸೆಯಿಂದ ಯಾರ್ಯಾರು ಚಿನ್ನದ ಸರ ಮಾಡಿಸ್ಕಂಡಿದಾರೆ, ಈ ವಿಷ್ಯದಲ್ಲಿ ಯಾರ್ ಯಾರಿಗೆ ನೆಟ್ಟಿ ಮಾಡ್ತಾ ಜಗಳ ಆಗಿದೆ… ಕೃಷ್ಣನ ಕಾಗದದಲ್ಲಿ ಬರೀ ನಗಾಡೋ ಸುದ್ದಿ ಮಾತ್ರ ಇರಲ್ಲ, ಮದುವೆಗೆ ದಿನ ಇಟ್ಟ ಮೇಲೆ ಜಲಜ ನೇಣಾಕ್ಕಂಡಿದ್ದು, ಗದ್ದೆಗೆ ವಾಸು ನೀರ್ ಬಿಡ್ಲಿಲ್ಲಾ ಅಂತ ರಾಜು ದೊಣ್ಣೇಲಿ ಹೊಡೆಯಲಿಕ್ಕೋಗಿ ಇಬ್ಬರೂ ಹೊಡೆದಾಡಿಕೊಂಡು ಪೋಲಿಸರು ಬಂದು ಕೊನೆಗವರು ಕೋರ್ಟಿಗೆ ಹೋಗಿದ್ದು… ಬೇಜಾರಾಗೋ ಸುದ್ದಿಗಳೂ ಇರ್ತವೆ… …ಈ ಕಾಗದದ ಕೊನೇ ಪ್ಯಾರಾ ನೋಡಿ ಬುದ್ದು ಬೇಜಾರಾಗ್ತಾನ? ಸತೀಶನ ಮಟನ್ ಅಂಗಡಿ ಲಾಸ್ ಆಯ್ತು, ಆ ಜಾಗ ಸರೀ ಇಲ್ಲಾ ಅಂತಾ ಈಗ ಬುದ್ದು ಮನೆ ಮುಂದೇನೇ ಅಂಗಡಿ ಹಾಕಿದಾನಂತೆ. ಕುರಿ ಮಾಂಸದ ಜತೆ ಹಂದಿ ಮಟನ್ನನ್ನೂ ಮಾರ್ತಿದಾನಂತೆ… ಈ ಕಾಗದ ಟೇಬಲ್ ಮೇಲಿಡದೋ ಬೇಡ್ವೋ… ಬುದ್ದು ನಗೋ ವಿಚಾರಕ್ಕಿಂತ ಬೇಜಾರಾಗೋದೆ ಜಾಸ್ತಿಯಿದೆ… ಬುದ್ದು ಬೇಜಾರಾಗಂತದು ಕೃಷ್ಣ ಈ ಹಿಂದೆ ಎಷ್ಟು ವಿಷಯ ಬರೆಯಲಿಲ್ಲ. ಕೃಷ್ಣನಿಗೇನು ಬುದ್ದೂನ ಬೇಜಾರು ಮಾಡಬೇಕು ಅಂತೇನು ಇಲ್ಲಾ, ತಿಳಿದ ವಿಚಾರ ನಮಗೆ ಕಾಗದ ಬರೆದು ತಿಳಿಸದೇ ಇದ್ರೆ ಅವನಿಗೆ ಸಮಾಧಾನ ಇಲ್ಲ. ಒಂದು ಸಾರಿ ಬುದ್ದು ಅಪ್ಪ ಕುಡಿದು ಗದ್ದೆ ಬದಿ ಹಳ್ಳಕ್ಕೆ ಬಿದ್ದಿದ್ರು ಅಂತಾ ಬರೆದಿದ್ದ. ಇನ್ನೊಂದ್ಸಾರಿ ಅವನಣ್ಣ ಮನೇ ಬಿಟ್ಟೋದೋನು ಆರು ತಿಂಗಳಿಂದ ಬಂದಿಲ್ಲ ಅಂತಾ, ಮತ್ತೊಂದ್ಸಾರಿ ಅಪ್ಪನ ಹೊಡೆತ ತಾಳಲಿಕ್ಕಾಗದೆ ಅವರಮ್ಮಾ ಗುಡ್ಡದಲ್ಲಿ ಅಡಗಿಕೊಂಡೋರು ಮೂರು ದಿನ ಆದ ಮೇಲೆ ಬಂದ್ರು ಅಂತಾ. ಆಗೆಲ್ಲಾ ಬುದ್ದು ಬೇಜಾರಾಗಿದ್ದ. ಕಾಗದ ಬಂದ ಮೇಲೆ ಊರಿಗೆ ಹೋಗಿದ್ದ. ‘ಅಪ್ಪನಿಗೆ ಸರಿಯಾಗಿ ಬೈಯ್ದು ಬರ್ತೀನಿ’ ಅಂತಾ ಹೇಳಿ ಹೋದೋನು ಅವರಿಗೆ ಐನೂರು ರೂಪಾಯಿ ಕೊಟ್ಟು ಬಂದಿದ್ದ. ಅದು ಗೊತ್ತಾಗಿ ಕೃಷ್ಣ ಮತ್ತೆ ಕಾಗದ ಬರೆದಿದ್ದ… ‘ಬುದ್ದುಗೆ ಬುದ್ದಿ – ಗಿದ್ದಿ ನೆಟ್ಟಗಿದ್ಯ? ಕುಡ್ಯೊ ಅಪ್ಪನಿಗೆ ಮತ್ ದುಡ್ ಕೊಟ್ಟೋಗಿದಾನೆ… ಆದ್ರೂ ಆ ದುಡ್ಡು ಖರ್ಚಾಗೋ ತನ್ಕ ಅವ್ರಮ್ಮಂಗೆ ಏಟು ಬೀಳ್ಳಿಲ್ಲಾ’. ಆ ಮೇಲಿಂದ ಬುದ್ದು ಪ್ರತಿ ತಿಂಗಳು ಅಪ್ಪನಿಗೆ ಐನೂರು ರೂಪಾಯಿ ಕಳುಹಿಸಲು ಶುರು ಮಾಡಿದ …. ಆದ್ರೆ ಆ ವಿಷಯನೂ ಈ ವಿಷಯನೂ ಒಂದೇ ತರ ನೋಡಲಿಕ್ಕಾಗುತ್ತದಾ… ಏನೇನೋ ಯೋಚನೆಯಲ್ಲಿ ರಾತ್ರಿ ಬೇಗ ನಿದ್ರೇನೆ ಬರಲಿಲ್ಲ. ಸತೀಶ ಯಾಕೆ ಬುದ್ದು ಮನೇ ಮುಂದೇನೇ ಆ ಹಂದಿ ಮಾಂಸದ ಅಂಗಡಿ ಇಟ್ಟ? ಇದರ ಹಿಂದೆ ಯಾರದ್ದಾದ್ರೂ ಚಿತಾವಣೆ ಏನಾದ್ರೂ ಇದೆಯಾ? ಯಾವುದೋ ಊರಲ್ಲಿ ಮಸೀದಿ ಎದುರು ಮಾಂಸ ಎಸೆದು ಗಲಾಟೆ ಆಯ್ತು, ಹನುಮಂತನ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಹೊಡೆದಾಟಾನೇ ಆಗಿ ಕೊಲೆಗಳಾಗಿ ಹೋದವು ಅಂತಾ ಪೇಪರಲ್ಲಿ ಓದಿ ಓದಿ ನನಗೆ ಹೀಗನ್ನಿಸುತ್ತಿದೆಯಾ? ಮೊನ್ನೆ ತಾನೇ ಗುಜರಾತಲ್ಲಿ ರೈಲಿಗೆ ಬೆಂಕಿ ಇಟ್ಟು ನೂರಾರು ಜನ ಸತ್ತಿದ್ದನ್ನು, ಆ ನಂತರ ಮತ್ತೆ ಗಲಾಟೆ ಶುರುವಾಗಿ ಜನರನ್ನು, ಮಕ್ಕಳನ್ನು ಕೊಚ್ಚಿ ಕೊಚ್ಚಿ ಸಾಯಿಸಿದ್ದನ್ನು, ಬಸುರಿ ತಾಯಿಯೊಬ್ಬಳ ಹೊಟ್ಟೆ ಬಗೆದು ಭ್ರೂಣ ಸಿಗಿದು ಸಾಯಿಸಿದ್ದನ್ನು ಟೀವಿಯಲ್ಲಿ ಭಯದಿಂದ ನೋಡಿದ್ದೆ. ಬುದ್ದೂನು ಜೊತೆಗಿದ್ದ. ಅದೇ ಹೊತ್ತಲ್ಲಿ ನಾಗಮಂಗಲದ ಹತ್ತಿರ ದರ್ಗಾವೊಂದಕ್ಕೆ ಬಾಂಬ್ ಇಟ್ಟಿದ್ದು ಪೇಪರಿನಲ್ಲಿ ಓದಿದ್ದೆ. ಶೃಂಗೇರಿಯಿಂದ ಬಂದ ಬಾಬು ಅಲ್ಲಿ ಈ ಬಾರಿ ನವರಾತ್ರಿಯಲ್ಲಿ ವ್ಯಾಪಾರಕ್ಕೆ ಬಂದ ಸಾಬ್ರುನ್ನೆಲ್ಲ ಓಡ್ಸಿದ್ದಾರೆ ಅಂತ ಯಾರೋ ಹೇಳಿದ್ರು ಅಂದಿದ್ದ. ಶೃಂಗೇರೀಲಿ ಗಲಾಟೆ ಆದ್ರೆ ಅದು ನಮ್ಮೂರಿನ ತನಕ ಬರದೆ ಇರುತ್ತದಾ ಅಂತ ಭಯ ಆಯ್ತು. ಇದನ್ನೇ ಯೋಚನೆ ಮಾಡಿ ಮಾಡಿ ನನಗೆ ಹೀಗನ್ನಿಸುತ್ತಿದೆಯಾ?

… ಮತ್ತೆ ಮತ್ತೆ ಬಾಯಾರಿಕೆ ಆದಂಗಾಗಿ ಆಗಾಗ ಎದ್ದು ನೀರು ಕುಡಿದೆ. ಯಾವಾಗ ನಿದ್ರೆ ಬಂತೋ ಏನೋ… ಯಾವುದೋ ಹೊತ್ತಿನಲ್ಲಿ ಎಚ್ಚರಾದಾಗ ಉಚ್ಚೆ ಹೊಯ್ದು ಬರಾಂಗಾಗಿತ್ತು. ಬಾಗಿಲ ಹತ್ತಿರ ಎದ್ದು ಬಂದೆ. ಬಾಗಿಲನ್ನು ಎಳಯಲಿಕ್ಕೆ ನೋಡಿದರೆ ಬರಲೇ ಇಲ್ಲಾ. ಆರೇ ಚಿಲ್ಕ ಹಾಕ್ಬಿಟ್ಟಿದೀನಿ. ದಿನಾ ತೆಗಿದಿಡೋನು ಇವತ್ತು ಯಾಕೆ ಹಾಕ್ಬಿಟ್ಟೆ… ಇವತ್ತು ಬುದ್ದು ಬರಲೇ ಇಲ್ವಾ, ಆಗಲೇ ಒಂದು ಗಂಟೆ ಆಗಿದೆ, ಅವನು ರಾತ್ರಿ ಹನ್ನೆರಡಕ್ಕೆ ಬಂದು ಮಲಗಿರಬೇಕಿತ್ತು… ಬಾಗಿಲು ತೆಗೆದು ಹೊರಗೆ ಬಂದರೆ ಬುದ್ದು ಗೋಡೆಗೊರಗಿ ಕುಳಿತಲ್ಲೇ ತೂಕಡಿಸುತ್ತಿದ್ದ. ಅವನ ಹೆಗಲು ಅಲುಗಾಡಿಸಿ ಎಚ್ಚರಿಸಿದೆ. ‘ಮರ್ತ್ ಚಿಲ್ಕ ಹಾಕ್ಕಂಡ್ಬಿಟ್ಟಿದ್ದೆ, ನೀ ಬಂದೋನು ಯಾಕೆ ಬೆಲ್ ಮಾಡಿ ಎಬ್ಸ್ಲಿಲ್ಲಾ’ ಕೇಳ್ದೆ. ‘ಕರೆಂಟಿರ್ಲಿಲ್ಲಾ, ನೀ ಬೇರೆ ಗೊರ್ಕೆ ಹೊಡೀತಿದ್ದೆ’ ಅಂತ ನಕ್ಕ. ಬುದ್ದು ನಕ್ಕರೂ ಅವನಿಗೆ ನಿದ್ರೆ ಎಳೀತಿತ್ತು ‘ಆಯ್ತು, ಈಗ ಮಲಕ್ಕೊ ಬೆಳ್ಗೆ ಮಾತಾಡಾನಾ’ ಅಂದು ನಾನೂ ಹೋಗಿ ಮಲಗಿಕೊಂಡೆ. ಬೆಳಿಗ್ಗೆ ಮಾತನಾಡಲಿಕ್ಕಾಗೋದಿಲ್ಲ ಅಂತ ಅವನಿಗೂ ಗೊತ್ತು. ಬುದ್ದುಗೆ ಯಾವತ್ತೂ ಫಸ್ಟ್ ಶಿಫ್ಟಲ್ಲೊ, ಸೆಕೆಂಡ್ ಶಿಫ್ಟಲ್ಲೊ ಕೆಲಸ. ನನ್ನ ಹಾಗೆ ಗುಮಾಸ್ತ ಆಗಿದ್ರೆ ನಾವಿಬ್ಬರೂ ಒಟ್ಟಿಗೆ ಫ್ಯಾಕ್ಟರೀಗೆ ಹೋಗಿಬರಬಹುದಿತ್ತು. ನಾನು ಬೆಳಿಗ್ಗೆ ಕೆಲಸಕ್ಕೆ ಹೊರಟರೆ ಒಂದೇ ಬುದ್ದು ಆಗಲೇ ಪ್ಯಾಕ್ಟರೀಗೆ ಹೋಗಿರುತ್ತಾನೆ ಅಥವಾ ಗೊರ್ಕೆ ಹೊಡೀತಿರ್ತಾನೆ. ಆ… ಆಗ್ಲೇ ಗೊರ್ಕೆ ಹೊಡಿಯಕ್ಕೆ ಶುರುಮಾಡ್ಬಿಟ್ಟ…. ನಂಗೂ ಯಾವಾಗ ನಿದ್ರೆ ಬಂತೋ ಏನೋ…. ಬೆಳಿಗ್ಗೆ ಏಳ್ತಾನೇ ಲೇಟಾಗಿ ಬಿಟ್ಟಿತ್ತು. ಬಾಯಲ್ಲಿ ಬ್ರಶ್ ಇಟ್ಟುಕೊಂಡೇ ಬಂದ ಬಾಬು ನಿಂಗೊಂದೊಳ್ಳೆ ಜೋಕ್ ಹೇಳ್ತಿನಿ ಅಂತಾ ಜೋಕ್ ಹೇಳದೇ ತಾನೇ ನಗಾಡಲು ಶುರು ಮಾಡಿದ. ಬಚ್ಚಲಿಗೆ ಹೋಗಿ ಬಾಯಿ ತೊಳೆದುಕೊಂಡು ಬಂದು ಮಡಚಿಟ್ಟಿದ್ದ ಜಾಪೆ ಮೇಲೆ ಆರಾಮಾಗಿ ಕುಳಿತ. ರಾತ್ರಿ ಬುದ್ದು ಬಂದಾಗ ಅವನು ರೂಮಿಂದ ಹೊರ್ಗೆ ಉಚ್ಚೆ ಹೊಯ್ಯಲಿಕ್ಕೆ ಬಂದಿದ್ದನಂತೆ. ಶಂಕೂನ ಎಬ್ಬಿಸಬೇಕಲ್ಲಾ ಅಂತಾ ಬುದ್ದು ಬಾಬು ಕಡೆ ನೋಡಿದನಂತೆ. ‘ಅದ್ಕೇನಂತೆ ಬೆಲ್ ಮಾಡು’ ಅಂತ ಬಾಬು ಹೇಳಿದ್ದಕ್ಕೆ ‘ಬೆಲ್ ಮಾಡಿದ್ರೆ ಶಂಕೂಗೆ ಎಚ್ಚರಾಗ್ತದಲ್ಲಾ’ ಎಂದು ಲೊಚಗುಟ್ಟಿದನಂತೆ.

ಒಳ್ಳೇ ಬುದ್ದು ಅಂದ್ರೆ ಬುದ್ದು ಎಂದು ಮತ್ತೆ ನಗುತ್ತಾ ಬಾಬು ಒಳಗೆ ಹೋದ. ಬಾಬು ಜೋಕ್ ಕೇಳಿ ನನಗೆ ನಗು ಬದಲು ಅಳು ಬಂದ್ಬಿಡ್ತು. ಬುದ್ದು ಎಷ್ಟು ಸೂಕ್ಷ್ಮ ಇದಾನೆ, ಇವ್ರೆಲ್ಲಾ ಯಾಕೆ ಇವನಿಗೆ ಬುದ್ದು ಬುದ್ದು ಅಂತಾರೆ? ಸ್ನೇಹಿತರೆಲ್ಲಾ ಬುದ್ದೂಗೆ ಬುದ್ದು ಬುದ್ದು ಅಂದಾಗ ನಂಗ್ಯಾಕೆ ಸಿಟ್ಟು ಬರ್ತದೆ, ಇನ್ ಮೇಲೆ ಇವನಿಗೆ ಬುದ್ದ ಅಂತಾ ಕರೆದ್ರೆ ಹೆಂಗಿರ್ತದೆ? ಹೊಸಬರ ಹತ್ತಿರ ಬುದ್ದು ಪರಿಚಯ ಮಾಡಿಕೊಡುತ್ತಾ ಮಾತ್ರಾ ಅವನನು ಬದ್ರುದ್ದೀನ್ ಅಂತನೇ ಕರಿಯೋದು. ನಾನು ಕರಿಯೋದು ನೋಡಿ ಅವರು ಆಮೇಲೆ ಬುದ್ದು ಅಂತಾನೇ ಕರೀತಾರೆ, ಬಡ್ಡಿಮಕ್ಕಳು, ಮರ್ಯಾದೆ ಬಿಟ್ಟೋರು… ಆದರೆ ನಮ್ಮೂರಿನ ಹುಡುಗರು ಮಾತ್ರಾ ಬುದ್ದುಗೆ ಬುದ್ದಣ್ಣ ಅಂತಾನೇ ಕರೆಯೋದು. ಬೀಬಮ್ಮ ಬುದ್ದೂನಾ ಕರೆಯೋದು ಆ ಮಕ್ಕಳು ಕೇಳಿಸಿಕೊಂಡಿರಬೇಕು. … ಗಂಟೆ ಎಂಟಾದ್ರಾ ಬುದ್ದು ಇನ್ನೂ ಗೊರಕೆ ಹೊಡಿತಾನೇ ಇದಾನೆ. ಆತನ ಬೋಳು ತಲೆ, ಮೀಸೆಯಿಲ್ಲದ ಮುಖ ಮತ್ತೆ ನಗೆ ತರಿಸುತ್ತಿದೆ. ಈ ಬುದ್ದುನ ನಡವಳಿಕೆಯೇ ವಿಚಿತ್ರ. ಅವನಿಗೆ ಯಾವಾಗ ಯಾವುದಕ್ಕೆ ಸ್ಫೂರ್ತಿ ಬರುತ್ತದೆ ಹೇಳಲು ಬರುವುದಿಲ್ಲ. ಹೀಗೆ ಸ್ಫೂರ್ತಿ ಬಂದರೆ ಬುದ್ದು ಎಲ್ಲಿಗೆ ಹೋಗುತ್ತಾನೆಂದು ಆ ಅಲ್ಲಾನಿಗೂ ಗೊತ್ತಿರುವುದಿಲ್ಲ. ಸ್ವತಃ ಬುದ್ದುಗೆ ಗೊತ್ತಿದ್ದರೆ ತಾನೇ ಅಲ್ಲಾನಿಗೆ ಗೊತ್ತಿರೋದು. ಮೊನ್ನೆ ಹೀಗೆ ದಿಢೀರನೆ ಬಸ್ಸು ಹತ್ತಿ ಧರ್ಮಸ್ಥಳಕ್ಕೆ ಹೋಗಿ ತಲೆ ಬೋಳಿಸಿಕೊಂಡು ಬಂದಿದಾನೆ. ನನ್ನ ವೈಚಾರಿಕತೆಯ ದೊಡ್ಡ ಸವಾಲು ಅಂದರೆ ಈ ಬುದ್ದುನೇ. ಅಲ್ಲಾ ಇವನಿಗೆಷ್ಟು ಹೇಳುವುದು. ‘ದೇವರು ದಿಂಡ್ರು ಎಲ್ಲಾ ಇಲ್ಲಾ ಮಾರಾಯಾ, ನೀನು ಯೋಚ್ನೇನೇ ಮಾಡಲ್ಲ’ ಅಂತ ಹೇಳಿ ಹೇಳಿ ಮಸೀದಿಗೆ ಹೋಗುವುದನ್ನು ಬಿಟ್ಟಿದ್ದ. ಈಗ ನೋಡಿದರೆ ಧರ್ಮಸ್ಥಳಕ್ಕೇ ಹೋಗಿ ಬಂದಿದಾನೆ. ಯಾಕ್ ಹಿಂಗ್ಮಾಡ್ತಿದಾನೆ?, ನಾನು ಅವನ ಬಗ್ಗೆ ನಿಗಾ ಕೊಡ್ತಿಲ್ವಾ? ಬುದ್ದುಗೆ ತಾನು ಅನಾಥ ಅನ್ನಿಸ್ತಿದೆಯಾ? ಸುಮ್ನೆ ಬುದ್ದು ಪಕ್ಕ ಹೋಗಿ ಮಲಕ್ಕೊಬೇಕೆ ಅನ್ನಿಸ್ತು. ಸದ್ದಾಗದಂತೆ ಹೋಗಿ ಮಲಗ್ದೆ. ದೊಡ್ಡಕ್ಕನ ಪಕ್ಕ ಮಲಗಿದ ಹಾಗಾಗಿ ಹಾಗೇ ತೂಕಡಿಕೆ ಬಂದು ನಿದ್ರೆ ಬರೋ ಹಾಗಾಯ್ತು. ಬುದ್ದು ಗೊರಕೆ ನಿದ್ರೆ ಮಾಡಲೆಲ್ಲಿ ಬಿಡುತ್ತದೆ. ಬುದ್ದುನೇ ನೋಡ್ತಾ ಬುದ್ದು ಈಗ ಏನು ಕನಸು ಕಾಣುತ್ತಿರಬಹುದು ಅಂತ ಯೋಚನೆ ಮಾಡಿದೆ. … ಸಣ್ಣಪ್ಪಗೌಡರ ಮಾವಿನ ಮರದ ತುಂಬಾ ಸಿಹಿ ಮಾವಿನಹಣ್ಣು. ಅದರ ಕಂಟ್ರಾಕ್ಟು ಹಿಡಿದ ತನಗೆ ಗೋಣಿಚೀಲದ ತುಂಬಾ ನೋಟಿನ ಕಂತೆಗಳು… ಬುದ್ದು ನಿದ್ರೆ ಮಾಡುತ್ತಿದ್ದಾನೆ ಅಂತಾನೂ ಮರೆತು ಜೋರಾಗಿ ನಗತೊಡಗಿದೆ. ನನ್ನ ನಗೆಯ ಜೋರಿಗೆ ಬುದ್ದು ಎಚ್ಚರಗೊಂಡು ಕಕ್ಕಾಬಿಕ್ಕಿಯಾಗಿ ‘ಯಾಕೆ ಶಂಕು’ ಅಂತಾ ನಕ್ಕ. ‘ಏನಿಲ್ಲಾ, ಸಣ್ಣಪ್ಪಗೌಡರ ಮನೆಯ ಸಿಹಿ ಸಿಹಿ ಮಾವಿನ ಹಣ್ಣು ನೆನೆಪಾಯ್ತು’ ಎಂದೆ. ‘ಒಳ್ಳೆ ಸಣ್ಣಪ್ಪಗೌಡರು’ ಅಂತಾ ಬುದ್ದುನೂ ನಗತೊಡಗಿದ. …

ಈ ಮಾವಿನಹಣ್ಣಿನ ಕತೆ ನಡೆದಿದ್ದು ನಾವಿಬ್ಬರೂ ಸೆಕೆಂಡ್ ಪಿಯುಸಿಯಲ್ಲಿದ್ದಾಗ ಅನ್ನಿಸುತ್ತದೆ. ಒಂದಿನಾ ಬುದ್ದುಗೆ ಹೇಗಾದರೂ ಮಾಡಿ ದುಡ್ಡು ಮಾಡಬೇಕು ಅಂತ ಅನ್ನಿಸಲಿಕ್ಕೆ ಶುರುವಾಯ್ತು. ‘ಅಪ್ಪ ಅಣ್ಣನಂಗೆ ಸೈಕಲ್ ರೀಪೆರಿ ಮಾಡ್ತಿದ್ರೆ ದೇವ್ರಾಣೆ ಉದ್ದಾರ ಆಗಲ್ಲ’ ಎಂದೊಮ್ಮೆ ನನ್ನ ಹತ್ತಿರ ಹೇಳಿದ್ದ. ಅದಕ್ಕೆ ನಾನು ‘ನಿಮ್ಮಂಗೆ ಇದ್ದ ಸಾಬರೆಲ್ಲಾ ಅಡಿಕೆ, ಗೇರುಬೀಜ, ಶುಂಠಿ ಅಂತಾ ಏನೇನೋ ವ್ಯಾಪಾರ ಮಾಡಿ ಎಂತೆಂತಾ ಮನೆ ಕಟ್ಸೆದಾರೆ. ನೀನ್ಯಾಕೆ ವ್ಯಾಪಾರ ಮಾಡಬಾರ್ದು’ ಅಂದಿದ್ದೆ. ಬುದ್ದುಗೆ ಹೌದಲ್ಲಾ ಅನ್ನಿಸಿತು. ಈ ಊರಲ್ಲಿ ಯಾರೂ ಮಾಡದ ವ್ಯಾಪಾರ ಮಾಡಿ ದುಡ್ಡು ಗಳಿಸಬೇಕು ಅಂದುಕೊಂಡ. ನನ್ನ ಹತ್ತಿರವಲ್ಲದೆ ಗೂಡಂಗಡಿ ಕೃಷ್ಣನ ಹತ್ತಿರವೂ ವ್ಯಾಪಾರಕ್ಕೊಂದು ಐಡಿಯಾ ಕೇಳಿದ. ಬುದ್ದು ಕೃಷ್ಣನ ಹತ್ತಿರ ಐಡಿಯಾ ಕೇಳಿದ ಹೊತ್ತಲ್ಲೆ ಸಣ್ಣಪ್ಪಗೌಡರು ಅಲ್ಲಿದ್ದರು. ‘ಲೋ ಬುದ್ದು, ಇಲ್ ಕೇಳು. ನಮ್ ಮನೆ ಕಾಂಪೌಂಡಲಿ ಐದಾರು ದೊಡ್ಡ ಮಾವಿನ ಮರ ಇದಾವೆ. ಫಸಲು ಬಂದಾಗ ಎಲೇನೇ ಕಾಣಲ್ಲ. ಅಷ್ಟ್ ಹಣ್ ಬಿಡ್ತದೆ. ಏನಿಲ್ಲಾ ಅಂದ್ರೂ ಒಂದು ಮರ್ದಲ್ಲಿ ಸಾವಿರ ಹಣ್ಣಿಗೆ ಮೋಸಾ ಇಲ್ಲ. ಮನೆ ಮಕ್ಕಳಿದಾವೆ ಅಂತ ಇಸ್ಟ್ ವರ್ಸ ಅದನ್ ಯಾರ್ಗೂ ಮಾರ್ತಿರಲಿಲ್ಲ. ನೀ ಒಂದ್ ಕೆಲ್ಸ ಮಾಡು. ಐನೂರ್ರುಪಾಯಿ ಅಡ್ವಾನ್ಸ್ ಕೊಟ್ಟು ಎಲ್ಲಾ ವಹಿಸ್ಕಂಬಿಡು. ಆಮೇಲೆ ಕಾಯಿಗೆ ಐವತ್ ಪೈಸೆ ಕೊಡು, ಸಾಕು’ ಅಂದ್ರು. ಬುದ್ದೂನ ತಲೆ ಐದು ಸಾವಿರ ಹಣ್ಣಿಗೆ ಬರುವ ದುಡ್ಡಿನ ಲೆಕ್ಕಾಚಾರದಲ್ಲಿ ತೊಡಗಿತ್ತು. ಅವನೂ ಸಣ್ಣಪ್ಪಗೌಡರ ಮನೆ ಬಳಿ ಹಾದು ಹೋಗುವಾಗ ಅಲ್ಲಿದ್ದ ಮಾವಿನ ಮರಗಳನ್ನೂ ಅದರಲ್ಲಿರುತ್ತಿದ್ದ ಗೊಂಚಲು ಗೊಂಚಲು ದೊಡ್ಡ ದೊಡ್ಡ ಮಾವಿನ ಹಣ್ಣುಗಳನ್ನೂ ನೋಡಿದ್ದ. ಆದರೆ ತಿಂದಿರಲಿಲ್ಲ. ‘ಏನಿಲ್ಲಾ ಅಂದ್ರು ಕಾಯಿಗೆ ಒಂದ್ರೂಪಾಯಿ ಸಿಕ್ಕಿದ್ರು ಐದ್ಸಾವ್ರ ಆಗ್ತದೆ. ಸಣ್ಣಪ್ಪಗೌಡ್ರಿಗೆ ಎರಡೂವರೆ ಸಾವಿರ ಕೊಟ್ಟು ಅದಿದು ಖರ್ಚು ಅಂತ ಐನೂರೂಪಾಯಿ ಕಳೆದ್ರೂ ಎರಡ್ಸಾವಿರ ಸಿಕ್ತದೆ.’ ಬುದ್ದುನಲ್ಲಿ ವ್ಯಾಪಾರಿ ಬುದ್ದಿ ಜಾಗೃತಿಯಾಗಿ ಸಣ್ಣಪ್ಪಗೌಡರ ಹತ್ತಿರ ಚೌಕಾಸಿ ಮಾಡಿ ಅವರಿಗೆ ಕಾಯಿಯೊಂದಕ್ಕೆ ನಲ್ವತ್ತು ಪೈಸೆ ಕೊಡುವುದಾಗಿ ಒಪ್ಪಿಸಿದ. ಅಣ್ಣನ ಹತ್ತಿರ ಕಾಡೀ ಬೇಡಿ ಐನೂರು ರೂಪಾಯಿ ತಂದು ಅಡ್ವಾನ್ಸ್ ಕೊಟ್ಟ. … ಆಮೇಲೆ ಬುದ್ದೂನ ಚಹರೆಯೇ ಬದಲಾಯಿತು. ಒಂದು ಬಾರಿ ಸಣ್ಣಪ್ಪಗೌಡರ ಮನೆಗೂ ಹೋಗಿ ಬಂದ. ಸಣ್ಣಪ್ಪಗೌಡರು ಹೇಳಿದಂತೆ ಮಾವಿನ ಮರದ ತುಂಬಾ ಮಾವಿಕಾಯಿ ಮರವೇ ಕುಸಿದು ಬೀಳುವಷ್ಟು ಬಿಟ್ಟಿತ್ತು. ಬುದ್ದೂನ ಖುಷಿಗೆ ಎಣೆಯೇ ಇಲ್ಲ. ಮಾವು ಬಲಿಯತೊಡಗಿತು. ಬುದ್ದು ಎಂಟತ್ತು ಗೋಣಿಚೀಲಗಳನ್ನು ಪಿಂಡಿಕಟ್ಟಿ ಸೈಕಲ್ ಕ್ಯಾರಿಯರ್ನಲ್ಲಿ ಸಿಕ್ಕಿಕೊಂಡು ಸಣ್ಣಪ್ಪಗೌಡರ ಮನೆಗೆ ಬಂದ. ಈ ಕಾಯಿಗಳೆಲ್ಲವನ್ನೂ ತುಂಬಲು ತಂದ ಚೀಲಗಳೆಲ್ಲವೂ ಸಾಕಾಗದೆಂದು ಬೇಜಾರುಪಟ್ಟರೂ ಖುಷಿಗೊಂಡು. ಕೈಗೆಟಕುವಷ್ಟು ಎತ್ತರದಲ್ಲಿ ಬಾಗಿದ್ದ ಕೊಂಬೆಗಳಿಂದ ಎಲ್ಲಾ ಮರಗಳಿಂದಲೂ ಕಾಯಿ ಕಿತ್ತು ಚೀಲಕ್ಕೆ ಹಾಕಿದ. ಇದು ಬುದ್ದುಗೆ ಜಾಸ್ತಿ ಹೊತ್ತೇನು ಹಿಡಿಸಲಿಲ್ಲ. ಆ ಮೇಲೆ ಎಲ್ಲಾ ಮರಗಳಿಂದ ಹುಡುಕಿ ಹುಡುಕಿ ಒಂದೊಂದು ಹಣ್ಣು ಕಿತ್ತು ರುಚಿ ನೋಡೋಣವೆಂದು ಆರಾಮಾಗಿ ಕುಳಿತ. ಮಾವಿನಹಣ್ಣು ಕಚ್ಚುತ್ತಾನೆ. ಮೊದಲ ಹಣ್ಣೇ ಹುಳಿ. ಬುದ್ದುಗೆ ಕೊಂಚ ಬೇಜಾರಾಯಿತು. ಇನ್ನೊಂದು ಮರದ ಹಣ್ಣು ಕಚ್ಚಿದ, ಅದೂ ಹುಳಿ. ಮೂರನೇ ಮರದ್ದು, ನಾಲ್ಕನೇ ಮರದ್ದು, ಐದನೆಯದ್ದು… ಉಹುಂ ಎಲ್ಲಾವೂ ಹುಳಿ ಅಂದರೆ ಹಪ್ಪಟೆ ಹುಳಿ! ಮನೆಯಲ್ಲಿ ಗೊಜ್ಜು ಬಿಟ್ಟರೆ ಈ ಹಣ್ಣಲಿ ಮತ್ತೇನೂ ಮಾಡಲಾಗದು. ಅಂದಿನಿಂದ ಬುದ್ದು ವ್ಯಾಪಾರದ ಆಸೆ ಬಿಟ್ಟ. ಸೆಕೆಂಡ್ ಪಿಯುಸಿ ಮುಗಿಯುತ್ತಲೇ ಡಿಗ್ರಿಗೆ ಹೋಗಲು ಹಣವಿಲ್ಲದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ. ಆಮೇಲೆ ಡಿಗ್ರಿ ಮುಗಿಸಿ ನಾನೂ ಇಲ್ಲಿಗೆ ಬಂದೆ. ಬುದ್ದು ಕೆಲಸ ಮಾಡೋ ಪ್ಯಾಕ್ಟರೀಲೆ ಅವನ ಮ್ಯಾನೇಜರ್ರಿಗೆ ಹೇಳಿ ನನಗೆ ಗುಮಾಸ್ತನ ಕೆಲಸ ಕೊಡಿಸಿದ. ಇಬ್ಬರೂ ಸೇರಿ ಈ ರೂಮ್ ಮಾಡಿದೆವು. ಅದರೂ ಬುದ್ದೂನ ಮಾವಿನ ಹಣ್ಣಿನ ವ್ಯಾಪಾರನ ಬೇರೆಯವರ ಹತ್ತಿರ ಹೇಳಲಿಕ್ಕೆ ನನಗೆ ಭಯ. ನಾನು ನಗುತ್ತೇನೆಂದೂ ಅವರೂ ಬುದ್ದೂನ ಜೋಕ್ ಮಾಡುತ್ತಾರೆ. ಯಾಕೋ ನನಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಹಾಗಾಗಿ ಬುದ್ದು ಇರಬೇಕಾದರೆ ಬೇರೆಯವರ ಹತ್ತಿರ ಗಂಭೀರವಾಗಿರುತ್ತೀನಿ. ಯಾರು ಏನು ಹೇಳಿದರೂ ಆತ ಬೇಜಾರೆ ಮಾಡಿಕೊಳ್ಳುವುದಿಲ್ಲ. ಬುದ್ದು ತರಾ ನಗ್ತಾನೆ ಇರ್ತಾನೆ. ಆದರೂ ಮೊನ್ನೆ ಒಂದು ಸಾರಿ ತುಂಬಾ ಅತ್ತು ಬಿಟ್ಟ. ಅದೂ ಫೋನಿನಲ್ಲಿ. ಮಧ್ಯರಾತ್ರಿಯಲ್ಲಿ ನಮ್ಮ ಮನೆ ಓನರ್ ಬಂದು ದಬ ದಬ ಬಾಗಿಲು ತಟ್ಟಿ ‘ನಿಮಗೆ ಬುದ್ದು ಫೋನ್ ಮಾಡೀದಾರೆ’ ಅಂದಾಗಲೇ ನನಗೆ ಗಾಬರಿಯಾಗಿತ್ತು. ಹೋಗಿ ಪೋನ್ ತಗೊಂಡರೆ ಬುದ್ದು ಅಳುತ್ತಿದ್ದಾನೆ. ‘ಏನ್ ಬುದ್ದು ಏನಾಯ್ತು’ ಅಂದ್ರೆ ಅಳ್ತಾ ಅಳ್ತಾನೆ ಅಮ್ಮಂಗೆ ಸೀರಿಯಸ್ ಅಂತೆ, ಊರಿಂದ ಕೃಷ್ಣ ಪ್ಯಾಕ್ಟರಿಗೆ ಫೋನ್ ಮಾಡಿದ್ದ’ ಅಂದ. ಏನೇನೋ ಸಮಾಧಾನ ಹೇಳಿ, ‘ನೀನು ಅಲ್ಲಿಂದಲೇ ಮೆಜೆಸ್ಟಿಕ್ ಬಸ್ಟ್ಯಾಂಡಿಗೆ ಬಾ ನಾನೂ ಬರ್ತೀನಿ, ಇಬ್ರೂ ಊರಿಗೆ ಹೋಗ್ಬರೋಣ’ ಅಂತೇಳಿ ದಾರೀಲಿ ಸಿಕ್ಕ ಹಾಲಿನ ಟಿಂಪೋ ಹತ್ತಿ ಬಸ್ ಸ್ಟ್ಯಾಂಡಿಗೆ ಹೋದೆ. ಬಸ್ಸ್ಟ್ಯಾಂಡ್ ಬೆಂಚಲಿ ಕುಳಿತು ತಲೆಬಗ್ಗಿಸಿ ಬುದ್ದು ಒಂದೇ ಸಮನೆ ಅಳುತ್ತಿದ್ದ. ತೀರ್ಥಹಳ್ಳಿ ಬರೋವರೆಗೂ ಅವನನ್ನು ಸಮಾಧಾನ ಮಾಡಲಿಕ್ಕೆ ಸಾಕುಬೇಕಾಯ್ತು. ಆದರೆ ಒಳಗೊಳಗೆ ನನಗೆ ಕಸಿವಿಸಿ ಇತ್ತು. ಬಾಳಾ ಕೆಟ್ಟ ಸುದ್ದಿ ಹೇಳಲಿಕ್ಕಾಗದೆ ಸೀರಿಯಸ್ ಅಂತಾ ಹೇಳೋದು ನಮ್ಮೂರಲ್ಲಿ ಜಾಸ್ತಿ, ಹಾಗೇನಾದರೂ ಆಯ್ತಾ? ಬೀಬಮ್ಮ ನನ್ನನ್ನು ತಮ್ಮ ಮಗ ಅಂತಾನೇ ಕರೆಯೋದು. ಊರಲ್ಲೆಲ್ಲ ತನ್ಗೆ ಎರಡು ಮಕ್ಳು ಅನ್ನೊದು. ನನ್ಗೂ ಅಮ್ಮ ಇಲ್ಲ, ಬೀಬಮ್ಮನ ನೋಡಿದ್ರೆ ಅಮ್ಮನ್ನೆ ನೋಡ್ದಂಗಾಗದು. ಎಲ್ಲಾ ನೆನಸ್ಕೊಂಡು ನಂಗೂ ಅಳು ಬಂತು, ಪುಣ್ಯಕ್ಕೆ ಬುದ್ದು ಅದನ್ನು ನೋಡಲಿಲ್ಲ. ಅತ್ತು ಅತ್ತು ಅವನಾಗಲೇ ನಿದ್ರೆ ಮಂಪರಿನಲ್ಲಿದ್ದ.

ಗೌರ್ಮೆಟಾ ಸ್ಪತ್ರೆ ಒಳಗೆ ಕಾಲಿಡುತ್ತಿದ್ದಂತೆ ಎದೆ ಜೋರಾಗಿ ಢವ ಢವ ಅನ್ನಲಿಕ್ಕೆ ಶುರುಮಾಡಿತು. ಬಾಗಿಲಲ್ಲೆ ಸಾಬ್ರು ಸಿಕ್ಕಿ ‘ರಾತ್ರಿ ಹೋಗಿದ್ ಪ್ರಜ್ಞೆ ಈಗ ಬಂದಿದೆ’ ಅಂದ್ರು. ಬುದ್ದು ಅದನ್ನು ಕೇಳುತ್ತಿದ್ದಂಗೆ ಲವಲವಿಕೆಯಿಂದ ಮಾತಾಡಲಿಕ್ಕೆ ಶುರುಮಾಡಿದ. ನಮ್ಮಿಬ್ಬರನ್ನು ಮಲಗಿದಲ್ಲೇ ನೋಡಿದ ಬೀಬಮ್ಮ ನಗಲು ಪ್ರಯತ್ನಿಸಿದರು. ನಾವಿಬ್ಬರೂ ಹೋಗಿ ಡಾಕ್ಟರ ಹತ್ತಿರ ಮಾತಾಡಿದೆವು. ಡಾಕ್ಟರು ಸರಿಯಾಗಿ ಉತ್ತರಾನೇ ಕೊಡಲಿಲ್ಲ. ‘ಖಾಯಿಲೆ ಏನೂ ಅಂತಲೇ ಗೊತ್ತಿಲ್ಲ, ಇಲ್ಲಿ ಕಷ್ಟ ಆಗ್ಬಹುದು, ಮಣಿಪಾಲಿಗೆ ಕರ್ಕೊಂಡೋಗಿ, ಚೀಟಿ ಬರ್ಕೋಡ್ತೀನಿ’ ಅಂದರು. ಗಣಪತಿ ಕಾರಲ್ಲಿ ಕೂಡಲೇ ಮಣಿಪಾಲಿಗೆ ಕರೆದುಕೊಂಡು ಹೋದೆವು. ಅಲ್ಲಿ ದಿನದಿನಕ್ಕೆ ಬೀಬಮ್ಮ ಸುಧಾರಿಸುತ್ತಾ ಬಂದರು. ಅಕ್ಕಪಕ್ಕದ ಬೆಡ್ಡಲ್ಲಿ ಇರುವವರ ಹತ್ತಿರ ಅವರ ಮಾತು ಜಾಸ್ತಿಯಾಯಿತು. ಒಂದು ದಿನ ಬುದ್ದು ಉಡುಪೀಲಿದ್ದ ಅವನ ಮಾವನಿಗೆ ವಿಷಯ ತಿಳಿಸಿ ಬರುತ್ತೇನೆಂದು ಹೋಗಿದ್ದ. ಬೀಬಮ್ಮನ ಜೊತೆ ನಾನೇ ಇದ್ದೆ. ಸಾಬ್ರು ‘ಮನೇಲಿ ದನ-ಕರ ಇದಾವೆ’ ಅಂತ ಮಣಿಪಾಲಕ್ಕೆ ಬಂದಿರ್ಲಿಲ್ಲ. ಬೀಬಮ್ಮ ‘ಇವರೂ ಬುದ್ದೂ ಇಬ್ರೂ ಭೂಮಿ ಹುಣ್ಣಿಮೆ ದಿನ ಹುಟ್ಟಿದ್ದೂ, ಈಗ್ಲೂ ಒಟ್ಟಿಗೆ ಬೆಂಗ್ಳೂರಲ್ಲಿದಾರೆ’ ಅಂತಾ ನನ್ನ ತೋರಿಸಿ ಪಕ್ಕದ ಬೆಡ್ಡಿನ ಹೆಂಗಸಿಗೆ ಹೇಳಿದರು. …

ಬುದ್ದು ಜೊತೆಗೆ ಮೋಟು ಲುಂಗಿ ಉಟ್ಟುಕೊಂಡು ತೂತುಗಳಿರುವ ಚಿಕ್ಕ ಬಿಳಿಯ ಟೊಪ್ಪಿ ಹಾಕಿಕೊಂಡು ಬಿಳೀ ಗಡ್ಡದ ಮಾವ ಒಂದು ಎಳನೀರು ಹಿಡಿದುಕೊಂಡು ಬಂದರು. ಬಂದವರೇ ನನ್ನನ್ನು ನೋಡಿ ‘ಓ ಶಂಕೂ.. ಇಲ್ಲಿ’ ಎಂದು ಅಚ್ಚರಿಯ ಕಣ್ಣು ಬಿಟ್ಟರು. ನಾನು ಮುಗುಳ್ನಕ್ಕು ‘ನೀವಿಲ್ಬಂದ್ರೆ ಮಸೀದೀಲಿ ಇವತ್ ಯಾರ್ ಬಾಂಗ್ ಕೂಗ್ತಾರೆ’ ಅಂದೆ. ‘ಬೇರೆ ಯವಸ್ಥೆ ಮಾಡ್ಬಂದಿದೀನಿ’ ಅಂದ್ರು. ತಂಗಿನ ‘ ಏನ್ಮಾಡ್ಕುಂಡಿದಿಯ’ ಅಂತಾ ಗದರಿಸುವಂತೆ ಕೇಳಿ ಬೀಬಮ್ಮನಿಗಷ್ಟು ಬುದ್ದುವಿಗಷ್ಟು ಬುದ್ದಿವಾದ ಹೇಳಿದರು. ‘ದರ್ಮ ಏನಾದ್ರೂ ಗೊತ್ತಾ ನಿನಗೆ, ಕುರಾನಿಗೆ ನೀವೆಲ್ಲಿ ಬೆಲೆ ಕೋಡ್ತಿರಿ, ಅದ್ಕೆ ಹಿಂಗೆಲ್ಲಾ ಆಗದು, ಸಗಣೀ ಬಳಿಯಾದು, ಕುಂಕುಮ ಹಚ್ಕೋಳ್ಳಾದು ಥೂ… ಥೂ…, ಬುದ್ದು ನೀನೂ ಮಸೀದಿಗೆ ಹೋಗದ್ ಕೈ ಬಿಟ್ಟಿದಿಯಂತೆ’ ಅವರು ಹೀಗೆ ಹೇಳುವಾಗ ನನ್ನನ್ನೇ ನೋಡುತ್ತಿದ್ದರು.

ಇದು ನನ್ನದೇ ಚಿತಾವಣೆ ಅಂತ ಬುದ್ದು ಅಪ್ಪ ಅವರಿಗೆ ಹೇಳಿರಬೇಕು. ಬುದ್ದು ನನ್ನ ನೋಡಿ ನಕ್ಕ. ಆಮೇಲೆ ಹೆಚ್ಚು ಕಡಿಮೆ ತಿಂಗಳೇ ಆಸ್ಪತ್ರೇಲಿ ಇರಬೇಕಾಯ್ತು. ನಾನು ಒಂದೆರಡು ದಿನ ಇದ್ದೆ. ಬೆಂಗಳೂರಿಗೆ ಹೋಗಿ ರಜಾ ಹಾಕಿ ಬಂದು ಬುದ್ದು ಉಳಿದ ದಿನ ಇದ್ದ. ನಾನಿದ್ದಾಗ ಅವರ ಮಾವ ಮತ್ತೆ ಆಸ್ಪತ್ರೆಗೆ ಬರಲಿಲ್ಲ. ಬುದ್ದು ಇರುವಾಗಲೂ ಬರಲಿಲ್ಲವಂತೆ.*** ಸಹವಾಸ ದೋಷಾನೋ ಏನೋ ನಾನೂ ಒಂದೊಂದು ಬಾರಿ ಹುಚ್ಚು ನಿರ್ಧಾರಕ್ಕೆ ಬಂದುಬಿಡ್ತೀನಿ. ಬುದ್ದು ತರಾ ! ಇಲ್ಲದೇ ಇದ್ದರೆ ಬೆಂಗಳೂರಿನಿಂದ ಬೆಳಬೆಳಿಗ್ಗೆ ಎದ್ದವನೆ ಊರಿಗೆ ಹೊರಡುತ್ತೀನಾ ? ಅದೂ ಬುದ್ದುನೂ ಇರಲಿಲ್ಲ. ಫಸ್ಟ್ ಶಿಪ್ಟ್ ಕೆಲಸಕ್ಕೆ ಹೋಗಿದ್ದ. ಫೋನಿನಲ್ಲೂ ಸಿಗಲಿಲ್ಲ. ಕೊನೆಗೆ ಬುದ್ದುಗೆ ತಿಳಿಸಿ ಅಂತಾ ಸೂಪರ್ವೈಸರ್ಗೆ ಹೇಳಿದ. ಹಿಂದೆ ಒಂದು ಸಾರಿನೂ ಹೀಗೆ ದಿಢೀರಂತ ಬಂದಿದ್ದೆ. ಆದರೆ ಆಗ ಜೊತೆಯಲ್ಲಿ ಬುದ್ದೂನು ಇದ್ದ. ಆಗಲೂ ಕೃಷ್ಣನ ಕಾಗದ ನೋಡಿಯೇ ಬಂದಿದ್ದು. ಊರಲ್ಲಿ ಭಾರೀ ನೆರೆ ಬಂದಿದೆ ಅಂತ ಅವನು ಬರೆದಿದ್ದ. ‘ಇಂತಾ ನೆರೆಗೆಲ್ಲಾ ನಮ್ಮೂರು ಹೆದರ್ತದಾ’ ಅಂದುಕೊಂಡರೂ ಸಮಾಧಾನವಾಗದೆ ನಾವಿಬ್ಬರೂ ಊರಿಗೆ ಬಂದಿದ್ದೆವು. ನಮ್ಮೂರು ಹೊಳೆ ಪಕ್ಕದಲ್ಲೆ ಇದ್ದರೂ ಹೊಳೆಯಿಂದ ತುಂಬಾ ಎತ್ತರದಲ್ಲೇ ಇದೆ. ನದೀ ದಂಡೇಲಿ ಭಾರೀ ಬಂಡೆಗಳು ನೂರಾರು ವರ್ಷಗಳಿಂದ ಹಾಗೆ ಇವೆ. ಹಾಗೆ ನೋಡಿದರೆ ನಮ್ಮೂರು ಇರುವುದೇ ಬಂಡೆ ಹಾಸಿನ ಮೇಲೆ. ಒಳ್ಳೆಯ ಅಮೃತ ಶಿಲೆಯ ಥರಾ ಫಳಫಳ ಹೊಳೆಯುವ ಬಂಡೆಗಳು. ಕೆಳಗಡೆ ಬಂಡೆಯಿದ್ರೂ ಅದರ ಮೇಲಿನ ವಿಶಾಲ ಬಯಲಿನಲ್ಲಿ ಒಳ್ಳೆಯ ಮಣ್ಣೇ ಇದೆ. ನಮ್ಮೂರಿನ ಗದ್ದೆಗಳಲ್ಲಿ ಬರೋ ಇಳುವರಿ ಹತ್ತಿರದ ಯಾವ ಊರಿನಲ್ಲೂ ಬರುವುದಿಲ್ಲವಂತೆ. ತುಂಗಾ ನದಿ ನಮ್ಮೂರನ್ನು ಬಳಸಿ ಮುನ್ನಡೆದರೂ ಪೂರ್ತಿ ಸುತ್ತಿರಲಿಲ್ಲವಾದ್ದರಿಂದ ನಮ್ಮೂರು ದ್ವೀಪವೂ ಅಲ್ಲಾ. ಪಕ್ಕದ ಜೋಗಿ ಗುಡ್ಡಕ್ಕೆ ನಮ್ಮ ಸ್ಕೂಲಿನ ಮಕ್ಕಳೆಲ್ಲಾ ಪ್ರವಾಸ ಹೋದಾಗ ನಮ್ಮೂರನ್ನು ಹೊಳೆ ಕಡೆಯಿಂದ ನೋಡಿದಾಗ ಇಂಡಿಯಾ ಭೂಪಟ ನೋಡಿದ ಹಾಗೆ ಕಾಣಿಸಿತಂತೆ. ‘ನಮ್ಮೂರು ಬಂಡೆ ಮೇಲೆ ಇರೋದ್ರಿಂದ ಇದಕ್ಕೆ ಬಂಡಿಯಾ ಅಂತಾ ಕರೀತಾರೆ’ ಅಂತಾ ಮಕ್ಕಳಿಗೆ ಹೇಳ್ತಿದ್ದ ಮಾಸ್ಟರು ಆ ನಂತರ ‘ನಮ್ಮಳ್ಳಿ ಇಂಡಿಯಾ ಭೂಪಟ ತರಾ ಕಾಣ್ತೆರೋದ್ರಿಂದನೂ ಈ ಹೆಸ್ರು ಬಂದಿದೆ’ ಅಂತಾನೂ ಹೇಳಕ್ಕೆ ಶುರು ಮಾಡಿದರು. …

ನೆರೆ ಬಂದಾಗ ಹೊರಗಡೆ ಜನರಿಗೆ ನಮ್ಮೂರನ್ನು ನದಿ ನೀರು ಕೊರೆದುಕೊಂಡು ಹೋಗುತ್ತೆ ಅಂತಾ ಅನ್ನಿಸಿದ್ರೂ ಚೂರು ಪಾರು ಮಣ್ಣು ಹೋಗುವುದು ಬಿಟ್ಟರೆ ನಮ್ಮೂರಿಗೆ ಏನೂ ಆಗುವುದಿಲ್ಲ. ಊರಿನಲ್ಲಿ ಇರುವಾಗ ನನಗೂ ಏನೂ ಅನ್ನಿಸುತ್ತಿರಲಿಲ್ಲ. ಊರುಬಿಟ್ಟು ದೂರದ ಬೆಂಗಳೂರು ಸೇರಿದ ಮೇಲೆ ‘ನೆರೆ ಬಂದು ಗುಜರಾತಲಿ ಅಷ್ಟ್ ಹಳ್ಳಿ ಮುಳಗೋಯ್ತು, ಅಸ್ಸಾಮಲಿ ಇಷ್ಟ್ ಹಳ್ಳಿ ಜನಾ ಸತ್ರು’ ಅಂತ ಪೇಪರಿನಲ್ಲಿ ಓದಿದಾಗಲೆಲ್ಲಾ ಊರಿನ ಬಗ್ಗೇನೂ ಭಯ ಅನ್ನಿಸಲು ಶುರುವಾಯಿತು. ಅದಕ್ಕೆ ನೆರೆ ಬಂದ ತಕ್ಷಣ ಊರಿಗೆ ಹೋಗಬೇಕು ಅನ್ನಿಸುತ್ತದೆ. ಕೆಲವೊಂದು ಸಾರಿ ನಮ್ಮೂರಲ್ಲಿ ನೆರೆ ಬಂದಿರುತ್ತದೆ. ಅದೂ ಬುದ್ದು ಮನೆ ಇರುವುದು ಹೊಳೆಗೆ ಹತ್ತಿರದಲ್ಲೆ. ಇಳಿಜಾರಲ್ಲಿ. ಅವರದು ಒಂದೇ ಮನೆ ಅಲ್ಲಾ, ಅಡಿಕೆ ವ್ಯಾಪಾರ ಮಾಡೋ ಐದಾರು ಸಾಬರ ಮನೆಗಳೂ ಅಲ್ಲಿವೆ. ಏನಾದರೂ ಆದರೆ ಅವರಿಗೆ ಮೊದಲು ತೊಂದೆರೆಯಾಗುವುದು. ‘ಏನನು ಚಿಂತೆ ಮಾಡ್ಬೇಡಿ, ನೂರಾರು ವರ್ಷದಿಂದ ನಾವಿಲ್ಲಿದ್ದೀವಿ, ಎಂತೆಂತಾ ನೆರೆ ನೋಡಿದೀವಿ. ಏನೂ ಆಗಲ್ಲ’ ಅಂತಾ ಬಂದಾಗಲೆಲ್ಲಾ ನನ್ಗೂ. ಬುದ್ದೂಗು ಕರೀಂ ಸಾಬರು ಹೇಳ್ತಾರೆ. ಕರೀಂ ಸಾಬರು ಹೀಗೆ ಹೇಳಿದರೂ ಈಗ ಊರಿಗೆ ವಕ್ಕರಿಸಿರೋ ಐತಾಳನ್ನ ನೋಡಿದ್ರೆ ನೂರಾರು ವರ್ಷ ಏನೂ ಆಗದೆ ಇರೋ ಬಂಡೇನ ಇವನೊಬ್ಬನೆ ಒಂದೇ ದಿನ ಒಡೆದು ಊರು ನಾಶ ಮಾಡುತ್ತಾನೆ ಅಂತಾ ಗಾಬರಿಯಾಗುತ್ತದೆ. ಹೊಟೆಲ್ಲಲ್ಲಿ ಲಾಸ್ ಆಗಿ ಈಗ ಇವನೂ ಸಾಹೇಬರ ಹಾಗೆ ಅಡಿಕೆ ವ್ಯಾಪಾರ ಶುರು ಮಾಡಿದ್ದಾನೆ. ಇದ್ದಕ್ಕಿದ್ದ ಹಾಗೆ ಇವನಿಗೊಂದು ಐಡಿಯಾ ಬಂದಿದೆ. ‘ಹೊಳೆ ದಡದಲ್ಲಿರೋ ಬಿಳೀ ಬಂಡೆಗಳನ್ನು ಒಡೆದು ಒಂದೊಳ್ಳೆ ಗಣಪತಿ ದೇವಸ್ಥಾನ ಕಟ್ಟಿಸ್ಬೇಕು’ ಅಂತ. ‘ಸಾಬ್ರಿಗೆಲ್ಲಾ ಹೇಳ್ಕೊಂಡು ತಿರುಗಿದನೆಂದು ಹಿಂದೆ ಕೃಷ್ಣನೆ ಪತ್ರ ಬರೆದಿದ್ದ. ಕಳೆದ ಬಾರಿ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಸೋತ ನಾರಾಯಣ ‘ಐತಾಳನ್ ಐಡಿಯಾ ಸರೀ’ ಅಂತಾ ಅವರಿವರಿಗೆ ಹೇಳಿದನಂತೆ. ಆದರೆ ಸಣ್ಣಪ್ಪಗೌಡರು. ಅಪ್ಪಯ್ಯ, ಕರೀಂಸಾಬರು ಎಲ್ಲಾ ಐತಾಳನ್ನ, ನಾರಾಯಣನನ್ನು ಕರೆಸಿ ‘ಬಂಡೆಗೆ ಡೈನಮೆಂಟ್ ಇಟ್ ಒಡೆದ್ರೆ ಸಾಬ್ರಿಗೇ ಮಾತ್ರ ತೊಂದ್ರೆ ಅಲ್ಲಾ’ ನಮ್ಮೂರು ನಿಂತಿರಾದೆ ಆ ಗಟ್ಟಿ ಬಂಡೆ ಮೇಲೆ, ಅದು ಒಡೆದರೆ ಇಡೀ ಊರೇ ನೆರೆ ಬಂದಾಗ ಕೊಚ್ಕೊಂಡು ಹೋಗತ್ತೆ. ನಮ್ಗೆಲ್ಲಾ ಈಗ ಇರೋ ಗ್ರಾಮ ದೇವಸ್ಥಾನ ಸಾಕು’ ಅಂತ ಬೈಯ್ದು ಕಳಿಸಿದರಂತೆ. ಆದರೂ ಇನ್ನು ಯಾವ್ಯಾವ ಐಡಿಯಾ ತಂದು ಊರು ನಾಶ ಮಾಡುತ್ತಾನೋ ಅಂತ ನನಗೆ ಭಯವಾಗುತ್ತದೆ. ಕೃಷ್ಣನ ಕಾಗದ ಬಂದ ಮೇಲೆ ನನಗೆ ಈ ಕನಸಾದರೂ ಯಾಕೆ ಬಿತ್ತು. ನಾ ಊರಿಗೆ ಓಡೋಡಿ ಬಂದಿದ್ದು ಕೃಷ್ಣನ ಕಾಗದ ನೋಡಿ ಹೆದರಿನೋ ಅಥವಾ ಕನಸಿಗೆ ಹೆದರಿನೋ… …

ನೆರೆ ಬಂದಿದೆ ಅಂತಾ ಕೃಷ್ಣ ಕಾಗದ ಬರೆದಾಗ ಊರಿಗೆ ಬಂದು ನೋಡುತ್ತೀನಿ… ಪ್ರವಾಹದ ನೀರಿನ ಬದಲಿಗೆ ರಕ್ತದ ಹೊಳೇನೇ ಹರಿದು ನಮ್ಮೂರಿಗೆ ಬರ್ತಾ ಇದೆ… ಆ ರಕ್ತದ ಕೋಡಿ ರಸ್ತೆ ಮೇಲೂ ಬಂದಿದೆ. ಆದನ್ನು ತಳ್ಳುತ್ತಾ ಬುದ್ದು ಮನೇ ಹತ್ತಿರ ಬರುತ್ತೀನಿ… ಅವರ ಮನೆ ಕೆಳಗಿನ ಬಂಡೆಯವರೆಗೂ ರಕ್ತ ಹರಿದುಕೊಂಡು ಬರುತ್ತಿದೆ. ದಡದಲ್ಲಿ ದೊಡ್ಡ ದೊಡ್ಡ ಮೀನುಗಳು ರಕ್ತದ ಮಡುವಿನಲ್ಲಿ ಬಿದ್ದಿದಾವೆ. ಆ ಮೀನುಗಳು ಶೃಂಗೇರಿಯು ದೇವರ ಮೀನುಗಳೋ, ಅಲ್ಲಿಂದಲೇ ಅವು ಬಂದಿರಬೇಕು. ಯಾರು ವಿಷ ಹಾಕಿದ್ದು? ಆ ಮೀನುಗಳನ್ನು ನೋಡ್ತಾ ಇದ್ರೆ ಶಾಲೆಗೆ ಹೋಗೋ ಮಕ್ಕಳು ಸತ್ತುಬಿದ್ದ ಹಾಗೆ ಅನ್ನಿಸ್ತಿದೆ. ನಾನು ನೋಡ್ತಾ ಇದ್ದ ಹಾಗೆ ಬುದ್ದು ಮನೆಯಿಂದ, ಅಕ್ಕಪಕ್ಕದ ಸಾಬ್ರು ಮನೆಗಳಿಂದೆಲ್ಲಾ ಜನಾ ಬಂದು ಮೀನು ನೋಡಿ ಅಳಲಿಕ್ಕೆ ಶುರು ಮಾಡಿದರು. ನನಗೆ ಕಣ್ ಕತ್ಲೆ ಬಂದ ಹಾಗಾಯ್ತು … … ದಡಬಡಿಸಿ ಮೈಕೊಡವಿದರೆ ಎಚ್ಚರವಾಗಿ ಕನಸು ಅಂತಾ ಗೊತ್ತಾಯಿತು. ಕನಸು ಅಂತಾ ಗೊತ್ತಾದರೂ ಮೈ ಬೆವರಿತು. ಈಗಲೇ ಊರಿಗೆ ಹೋಗಬೇಕು ಅನಿಸಿತು. … ಊರಿಗೆ ಬಂದಾಗ ರಾತ್ರಿಯಾಗಿತ್ತು. ಪುಣ್ಯಕ್ಕೆ ಕೊನೆ ಬಸ್ಸು ಗುರುರಾಜ ಸಿಕ್ತು. ನನ್ನ ನೋಡ್ತಿದ್ದ ಹಾಗೆ ಅಪ್ಪಯ್ಯನ ಮುಖ ಅರಳಿತು. ಅವರು ಆಗಷ್ಟೇ ಸಂಧ್ಯಾವಂದನೆ ಮುಗಿಸಿದ್ರು. ಅಮ್ಮ ಸತ್ತು ಹೋದ ಮೇಲೆ ಅಪ್ಪಯ್ಯ ತುಂಬಾ ವೀಕ್ ಆಗ್ಬಿಟ್ಟಿದ್ದಾರೆ. ಊರಲ್ಲಿ ನಾನಿರೋಣ ಅಂದರೆ ಆ ದರಿದ್ರ ದೇವರಿಗೂ ನನಗೂ ಆಗೋದಿಲ್ಲ. ಪೂಜೆ ಬಿಟ್ಟರೆ ಊರಲ್ಲಿ ಬದುಕಲಿಕ್ಕೆ ಬೇರೆ ದಾರಿಯಿಲ್ಲ. ಅಪ್ಪಯ್ಯ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರಲ್ಲ ಅಂತಿದಾರೆ. ‘ಬುದ್ದು ಹೆಂಗಿದಾನೆ’ ಅಪ್ಪಯ್ಯ ಕೇಳಿದರು. ‘ತಲೆ ಬೋಳಿಸ್ಕಂಡಿದಾನೆ’ ಅಂದ್ರೆ ಅಪ್ಪಯ್ಯ ಅಪಾರ್ಥ ಮಾಡಿಕೊಳ್ಳಬಹುದು ಅಂತಾ ಬಾಯಿಬಿಟ್ಟು ಹೇಳಲಿಲ್ಲ. ಹೀಗನ್ನಿಸಿದ್ದೇ ನಗು ತಡೀಲಾಗಿಲ್ಲ. ‘ಯಾಕ್ ನಗಾಡ್ತಿ’ ಅಂತಾ ಅಪ್ಪಯ್ಯ ಕೇಳಿದರು. ‘ನಿಮ್ ಅವಸ್ಥೆ ನೋಡಿ ನಗು ಬಂತು. ಇನ್ನೊಂದು ಮದ್ವೆಯಾದ್ರೂ ಆಗ್ಬೋದಿತ್ತು’ ಅಂದೆ. ‘ಯಾರಿಗಾರಿಗ್ ಆಗ್ಬೆಕೋ ಅವ್ರಿಗಾದ್ರೆ ಸಾಕು’ ಅಂತ ಅಪ್ಪಯ್ಯ ಹೇಳುತ್ತಾ ಬಚ್ಚಲ ಒಲೆಗೆ ಬೆಂಕಿ ಹಾಕಿ ಹಂಡೆ ಪೂರ್ತಿ ನೀರು ಕಾಯ್ಸಿದ್ರು. ಬಿಸಿನೀರು ಸ್ನಾನ ಮಾಡಿ ಅಪ್ಪಯ್ಯ ಮಾಡಿದ ಚೌಳಿಕಾಯಿ ಹುಳಿ ಊಟ ಮಾಡಿದಾಗ ಗಡದ್ದಾಗಿ ನಿದ್ದೆ ಬಂತು. ಬೆಳಿಗ್ಗೆ ಎದ್ದಾಗ ಸಹಕಾರ ಸಾರಿಗೆ ಬಸ್ ಹಾರ್ನ್ ಕೇಳಿತು. ಬೆಂಗಳೂರಲ್ಲಿ ರಾತ್ರಿ ಗೌರ್ಮೆಂಟ್ ಬಸ್ಸಿನಲ್ಲಿ ಕುಳಿತರೆ ತೀರ್ಥಹಳ್ಳಿ ಬಸ್ಸ್ಸ್ಟಾಂಡಲಿ ಊರಿಗೆ ಬರಲಿಕ್ಕೆ ಈ ಬಸ್ಸು ರೆಡಿಯಾಗಿ ನಿಂತಿರುತ್ತದೆ. ‘ಬೆಂಗ್ಳೂರಿಂದ ಯಾರೋ ಬಂದಿರ್ಬೇಕು ಅದ್ಕೆ ಬಸ್ ನಿಂತಿದೆ’ ಅಂದುಕೊಂಡೆ. ಆದರೂ ನಮ್ಮನೆಯಿಂದ ಫರ್ಲಾಂಗ್ ದೂರದಲ್ಲಿರೋ ಬಸ್ಸ್ಟಾಂಡು, ಮಧ್ಯದಲ್ಲಿ ಹಡ್ಡೆ ಮರಗಳು ಅಡ್ಡ ಆಗೋದರಿಂದ ಕಾಣುವುದಿಲ್ಲ. …. ಏಳುತ್ತಿದ್ದ ಹಾಗೆ ಬುದ್ದು ಮನೆಗೆ ಹೋಗಬೇಕು ಅಂದುಕೊಂಡಿದ್ದೆ. ನಾನು ಬಂದಿರುವ ವಿಷಯ ಆಗಲೇ ಬೀಬಮ್ಮಂಗೆ ತಿಳಿದಿರುತ್ತದೆ. ‘ಈಗ ಬರ್ಬೋದು’ ಅಂತಾ ನನ್ನ ಕಾಯುತ್ತಲೇ ಇರುತ್ತಾರೆ. ಆದರೆ ಬಂದ ಕೆಲಸ ಬೇಗ ಮುಗಿಸಬೇಕು. ಸತೀಶನಿಗೆ ಬೈಯ್ಯಬೇಕು… ‘ಅಲ್ಲಾ ಅವನಿಗೆ ಬುದ್ದಿ ಏನಾದರೂ ಇದ್ಯಾ ಹೋಗಿ ಹೋಗಿ ಸಾಬರ ಮನೆ ಮುಂದೆ ‘ಹಂದಿ ಮಾಂಸದ’ ಅಂಗಡಿ ಇಟ್ಟಿದ್ದಾನೆ. ಆ ಮಾಂಸ ಅವರಿಗಾಗಲ್ಲ ಅಂತ ಅವನ್ಗೆ ಗೊತ್ತಿಲ್ವಾ, ಬುದ್ದು ಏನಂದ್ಕಳ್ಳಬಹುದು…’ ‘ಏನಾದ್ರೂ ಆಗ್ಲಿ ಸತೀಶನ ಅಂಗ್ಡೀನ ತೆಗಿಸ್ಲೇಬೇಕು’. ಗದ್ದೆ ಅಂಚಲಿ ನಾನು ಬಿರಬಿರನೆ ಹೆಜ್ಜೆ ಹಾಕುತ್ತಾ ಬುದ್ದು ಮನೆ ಕಡೆ ಹೋಗುತ್ತಾ ಇದ್ದರೆ ದಾರಿಯಲ್ಲಿ ಸಿಕ್ಕ ಕಿಟ್ಟ, ಸತ್ಯ ಎಲ್ಲರೂ ಆರಾಮಾಗಿ ‘ಈಗ ಬಂದ್ರ್ಯಾ, ಆರಾಮ’ ಅಂತ ಯೋಗಕ್ಷೇಮ ವಿಚಾರಿಸುವುದನ್ನು ಕೇಳಿ ಸಿಟ್ಟು ಬಂತು. ಅಲ್ಲಾ ಇವರಾದ್ರೂ ಸತೀಶಂಗೆ ಸ್ವಲ್ಪ ಹೇಳಕ್ಕಾಗಲ್ವಾ? ಗದ್ದೆ ದಾಟಿ ಮೊಳಕಾಲಷ್ಟಿದ್ದ ಹೊಳೆ ನೀರಿನಲ್ಲಿ ಲುಂಗಿ ಒದ್ದೆಯಾಗದಂತೆ ಮೇಲೆತ್ತಿಕೊಂಡು ಬಂಡೆಯನ್ನೇರುತ್ತಾ ಬುದ್ದು ಮನೆ ಕಡೆ ಹೊರಟೆ. ಅಲ್ಲಿ ಬುದ್ದು ಮನೆ ಮೊದಲು ಕಾಣುವ ಬದಲು ದೆವ್ವದಂತೆ ಕುಳಿತಿದ್ದ ಗುಡಿಸಲೊಂದು ಕಂಡಿತು. ಅದೇ ಸತೀಶನ ಮಾಂಸದಂಗಡಿಯಿರಬೇಕು. ಕಾಲಲ್ಲಿ ಏನೋ ಆವೇಶ ಬಂದಂತಾಗಿ ಜೋರು ನಡೆಯಲು ಹೋಗಿ ಮುಂದೆ ನಡೆಯಲಾಗದೇ ಕ್ಷಣ ಹೊತ್ತು ಹಾಗೇ ನಿಂತೆ. ಆಗಲೇ ಆ ಗುಡಿಸಲಿಂದ ಬೋಳುಮಂಡೆ ಆಕೃತಿಯೊಂದು ಹೊರಬಂದು …. ‘ಓ ಶಂಕು, ನೀನಿಲ್ಲಿ’ ಅಂದಿತು. ಬುದ್ದುನನ್ನು ನೋಡಿ ಅವಕ್ಕಾದೆ. ‘ಸೂಪರ್ವೈಸರ್ ನೀನು ಊರಿಗೆ ಹೋಗಿದ್ ಸಮಾಚಾರ ಹೇಳಿದ್ಮೇಲೆ ನನಗೂ ಊರಿಗೋಗಣ ಅನ್ನಿಸಿ ನಾನೂ ಹೊರಟ್ಟಂದೆ’ ಅಂದ ಬುದ್ದು. ನಮ್ಮ ಮಾತು ಕೇಳಿ ಸತೀಶನೂ ಹೊರಬಂದ. ‘ಶಂಕು ಯಾವಾಗ್ಬಂದ್ರಿ’ ಅಂದ ಸತೀಶನನ್ನು ನೋಡಲೂ ಮನಸಾಗಲಿಲ್ಲ. ಸತೀಶ ಮಾಂಸದಂಗಡೀಲಿ ಒಬ್ಬ ಹುಡುಗ ಮರದ ಕುಂಟೆಯ ಮೇಲೆ ಮಾಂಸವನ್ನು ಹಿಡಿದುಕೊಂಡು ಕತ್ತಿಯಿಂದ ತುಂಡರಿಸುತ್ತಿದ್ದ. ನಾನು ಅವನನ್ನು ಗಮನಿಸಿದ್ದು ನೋಡಿ ಸತೀಶ, ‘ಇವನ್ ನಮ್ ಅಬಕರ್ ಸಾಬ್ರು ಕೊನೇಮಗ. ಸ್ಕೂಲ್ ಬಿಟ್ಟಿದ್ದಾನೆ, ನೂರು ರೂಪಾಯಿ ಸಂಬಳಕ್ಕೆ ಇಟ್ಕಂಡಿದೀನಿ’ ಅಂದ. ನನಗೆಲ್ಲಾ ಗಲಿಬಿಲಿಯಾಗಿ ನಾನೊಬ್ಬ ಜಗತ್ತಿನ ಮಹಾನ್ ಮೂರ್ಖ ನೆನ್ನಸಿ ಇಲ್ಲಿಂದ ತಪ್ಪಿಸಿಕೊಂಡರೆ ಸಾಕೆನಿಸುವ ಹೊತ್ತಿನಲ್ಲಿ ಬುದ್ದು ‘ಶುಂಕು, ನಾನು ಸತೀಶನ ಜತೆ ಮಾತಾಡ್ತಿರ್ತಿನಿ, ನಿನ್ಗೆ ಅಮ್ಮ ಕಾಯ್ತಿದಾರೆ ಹೋಗ್ಬಾ’ ಎಂದು ಸಹಕರಿಸಿದ. ನಾನು ‘ಓ ಬೀಬಮ್ಮ….’ ಅಂತಾ ಕೂಗುತ್ತಾ ಹಿಂದಿದ್ದ ಮನೆಯ ಕಡೆ ಹೋದೆ. ಬೀಬಮ್ಮ ಚಂದ್ರಬಕ್ಕೆ ಹಲಸಿನಹಣ್ಣು ಹೆಚ್ಚುತ್ತಿದ್ದರು. ‘ಏನೇ ಆಗ್ಲಿ ಇಬ್ರೂ ಒಟ್ಟಿಗೇ ಹಲಸಿನಹಣ್ಣು ತಿನ್ನಕ್ಕೆ ಬಂದಗಾಯ್ತು’ ಎನ್ನುತ್ತಾ ‘ಬುದ್ದಣ್ಣಾ…, ಬುದ್ದಣ್ಣಾ…’ ಅಂತ ಕೂಗಿದರು. ಬುದ್ದೂಗೆ ಅದು ಕೇಳಲಿಲ್ಲ ಅನ್ನಿಸುತ್ತದೆ. ಆತ ಬರಲಿಲ್ಲ. ಅಲ್ಲಾ ಇದೇನ್ ಬೀಬಮ್ಮ… ಮಾಂಸದ ಅಂಗಡಿ ನಾನು ಏನೂ ಹೇಳಲಾಗದೆ ತಡವರಿಸಿದೆ. ಬೀಬಮ್ಮ ತಡವರಿಸಲಿಲ್ಲ ಆ ನಮ್ಮ ಸತೀಶಣ್ಣ ತುಂಬಾ ಇಚಿತ್ರ ಮನ್ಸ. ಮಾಂಸ ಯಾವ್ದಾದ್ರೇನು, ಕುರಿದಾಗ್ಲಿ, ಹಂದಿದಾಗ್ಲಿ ಮಾಂಸವೆಲ್ಲಾ ವಂದೇ ಅಂತಾನೆ. ಸತೀಶಣ್ಣಂಗೆ ಯಾರ್ ಬುದ್ದಿ ಹೇಳಾದೋ? ಹೇಳಿದ್ರೆ ಕೇಳ್ಬೆಕಲ್ಲಾ… ಬೀಬಮ್ಮ ಸತೀಶನನ್ನು ಬೈಯ್ತಿದಾರೋ ಹೊಗಳ್ತಿದಾರೋ ಗೊತ್ತಾಗ್ಲಿಲ್ಲ. ಬುದ್ದು ಸತೀಶನ ಹತ್ತಿರ ಮಾತನಾಡುತ್ತಾ ಜೋರಾಗಿ ನಗುತ್ತಾ ಇದ್ದುದು ನನಗೂ ಬೀಬಮ್ಮನಿಗೂ ಕೇಳಿಸುತ್ತಿತ್ತು. ಬೀಬಮ್ಮ ಮಗನ ದನಿ ಕೇಳುತ್ತಾ ನನ್ನ ನೋಡುತ್ತಾ ಸುಖದಿಂದ ಲಗುಬಗನೆ ಹಲಸಿನ ಹಣ್ಣು ಹೆಚ್ಚುತ್ತಾ ಬುದ್ದಣ್ಣಾ…, ಬುದ್ದಣ್ಣಾ…’ ಎಂದು ಕರೆಯ ಹತ್ತಿದರು…. ನಾಳೆ ಬೆಳಿಗ್ಗೆ ಗುರುರಾಜ ಬಸ್ಸಿಗೆ ಬೆಂಗಳೂರಿಗೆ ಹೊರಡಬೇಕು. ಬುದ್ದೂನೂ ಬರುತ್ತೀನಿ ಆಂತ ಹೇಳಿದ್ದಾನೆ. ಕೃಷ್ಣ ಕಾಗದ ಬರೆದನೆಂದು ಇನ್ಯಾವತ್ತೂ ಎಂತಹ ನೆರೆ ಬಂದರೂ, ಎಂತಹದ್ದೆ ಆದರೂ ಗಾಬರಿಪಟ್ಟು ಊರಿಗೆ ಬರಬಾರದೆಂದು ನಿರ್ಧರಿಸಿದ್ದೇನೆ. ಆದರೆ ಈ ರೀತಿ ಈ ಹಿಂದೆ ಎಷ್ಟು ಬಾರಿ ಯೋಚಿಸಿಲ್ಲಾ….? ಹೀಗೆ, ನೆಮ್ಮದಿಯಿಂದ ನಮ್ಮೂರು ಇನ್ನೆಷ್ಟು ಕಾಲವಿರುತ್ತದೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *