ಸುಧೀರ್ಘ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಕೊರೋನಾ ವೈರಸ್ ಗಿಂತ ಹಸಿವಿಗೇ ಹೆಚ್ಚಿನ ಜನ ಸಾಯುತ್ತಾರೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
Source : UNI
ಬೆಂಗಳೂರು: ಸುಧೀರ್ಘ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಕೊರೋನಾ ವೈರಸ್ ಗಿಂತ ಹಸಿವಿಗೇ ಹೆಚ್ಚಿನ ಜನ ಸಾಯುತ್ತಾರೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ನಾರಾಯಣ ಮೂರ್ತಿ ಅವರು, ದೇಶದಲ್ಲಿ ಲಾಕ್ ಡೌನ್ ವಿಸ್ತರಣೆಯಾಗುತ್ತಾ ಮುಂದೆ, ಮುಂದೆ ಹೋದರೆ ಕೊರೋನಕ್ಕಿಂತಲೂ ಹೆಚ್ಚು ಜನರು ಹಸಿವಿನಿಂದಲೇ ಸಾಯಬಹುದು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ತುಂಬಾ ದಿನ ಮುಂದವರಿಯಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ನಾವು ಮೊದಲು ಅರಿತುಕೊಳ್ಳಬೇಕು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಶೇ.0.25ರಿಂದ 0.5 ರಷ್ಟು ಮತ್ತು ಪಾಸಿಟೀವ್ ಪ್ರಕರಣಗಳು ಬಹಳ, ತೀರಾ ಕಡಿಮೆ ಇದೆ. ಪ್ರಮುಖವಾಗಿ ಮಾಲಿನ್ಯದ ಕಾರಣದಿಂದ ಹಾಗೂ ಇತರೆ ಕಾರಣದಿಂದ ದೇಶದಲ್ಲಿ ಸರಾಸರಿ ಒಂಬತ್ತು ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇದು ದೊಡ್ಡ ಅಪತ್ತು. ಆದರೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೊರೊನಾ ಸೋಂಕಿನ ಹಾವಳಿಯಯಿಂದ ದೇಶದಲ್ಲಿ ಸುಮಾರು ಒಂದು ಸಾವಿರ ಜನ ಸಾವನ್ನಪ್ಪಿದ್ದರೂ, ದೇಶದ ಒಟ್ಟಾರೆ ಕೊರೋನ, ಮತ್ತು ಸಾವಿನ ಪ್ರಮಾಣ ಬಹಳ ಕಳವಳ, ಮತ್ತು ಆತಂಕಾರಿಯಾಗಿಲ್ಲ ಎಂದೂ ನಾರಾಯಣ ಮೂರ್ತಿ ಹೇಳಿದ್ದಾರೆ.
ದೇಶದಲ್ಲಿ 1.9 ಕೋಟಿಯಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಇಷ್ಟು ಬೃಹತ್ ಸಂಖ್ಯೆಯ ಉದ್ಯೋಗಿಗಳು ಲಾಕ್‌ಡೌನ್ ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ. ಲಾಕ್‌ಡೌನ್ ದೀರ್ಘಕಾಲದವರೆಗೆ ಮುಂದುವರಿದರೆ” ಒಂದು ಹೊತ್ತಿನ ಊಟಕ್ಕೂ ನೆಲೆ ಇಲ್ಲದಂತಾಗಿ ಕೂರುವಂತಾಗುತ್ತದೆ. ದೇಶದಲ್ಲಿ ಪ್ರತಿವರ್ಷ ಸರಾಸರಿ 90 ಲಕ್ಷ ಜನ ಸಾಯುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಕೊರೊನಾ ವೈರಸ್‌ನಿಂದಾಗಿ 1,000 ಜನ ಬಲಿಯಾಗಿದ್ದಾರೆ. ಸಹಜ ಸಾವುಗಳಿಗೂ, ಕೊರೊನಾ ಸಾವುಗಳಿಗೂ ತಾಳೆ ಹಾಕಿದರೆ ಕೊರೊನಾ ಸಾವುಗಳು ಅತಿ ಕಡಿಮೆ ಎಂದೇ ಹೇಳಬಹುದು. ಹೀಗಾಗಿ ಕೊರೊನಾ ಸೋಂಕು ನಾವು ಅಂದುಕೊಂಡಿರುವಷ್ಟು ಭೀಕರವಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಯುವಕರಲ್ಲಿ ಈ ಸೋಂಕು ಇದ್ದರೂ ಕೂಡ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಭಾರತೀಯರ ಆನುವಂಶೀಯತೆ, ಇಲ್ಲಿನ ಬೆಚ್ಚನೆಯ ಹವಾಮಾನ ಅಥವಾ ವ್ಯಾಪಕವಾದ ಬಿಸಿಜಿ ವ್ಯಾಕ್ಸಿನೇಷನ್ ಕಾರಣದಿಂದಾಗಿ ಭಾರತದಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ನಾರಾಯಣ ಮೂರ್ತಿ ಅವರು ಹಲವು ಅಂಶಗಳತ್ತ ಗಮನಸೆಳೆದಿದ್ದಾರೆ. ಈ ಕುರಿತು ಸಂಶೋಧನೆಗೂ ಕರೆ ನೀಡಿದ್ದಾರೆ. ಹಿರಿಯರು ಮತ್ತು ಆರೋಗ್ಯ ಸಮಸ್ಯೆಗಳಿರುವವರು ಸಾಮಾಜಿಕ ಅಂತರ ಅನುಸರಿಸಲು ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಲು ಸಹಾಯ ಮಾಡಬೇಕು. ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸ ನಿರ್ವಹಿಸುವಂತೆ ಹೇಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತೂ ಗಮನಸೆಳೆದಿದ್ದಾರೆ. “ಒಂದು ಶಿಫ್ಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನೇ ಮೂರು ಶಿಫ್ಟ್‌ಗಳಾಗಿ ವಿಂಗಡಿಸಬಹುದು. ಇದರಿಂದ ಸಾಮಾಜಿಕ ಅಂತರ ಅನುಸರಿಸಬಹುದು ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.