ಮಾಗುವ ಬಗ್ಗೆ ಹೆದರಿಕೆಯಿಂದ ಬರೆದ ಅಮ್ಮಿನಮಟ್ಟು!

ವಯಸ್ಸಾಗುವುದು ಮನಸ್ಸಿಗೆ,ದೇಹಕ್ಕಲ್ಲ ಎನ್ನುತ್ತಾರೆ. ನಿಜ ಇರಬಹುದೇನೋ? ಮನಸ್ಸಿಗೆ ವಯಸ್ಸಾಗುವುದು ಹೇಗೆ ಎನ್ನುವುದು ಈ ಒಂದು ವರ್ಷದಲ್ಲಿ ನನಗೆ ಅನುಭವವಾಗುತ್ತಿದೆ. ಮುಕ್ಕಾಲು ಪಾಲು ಆಯುಷ್ಯವನ್ನು ಓದುವುದು ಮತ್ತು ಬರೆಯುವುದರಲ್ಲಿಯೇ ಕಳೆದಿರುವ ಮತ್ತು ಅವೆರಡನ್ನೂ ಬಿಟ್ಟು ಬೇರೇನೂ ಗೊತ್ತಿರದ ನನಗೆ ಈಗ ಹೊಸದೇನನ್ನೂ ಓದುವುದು ಬೇಡ, ಬರೆಯುವುದು ಬೇಡ ಎಂದು ಅನಿಸತೊಡಗುವುದೆಂದರೆ ಮನಸ್ಸಿಗೆ ವಯಸ್ಸಾಗುತ್ತಿದೆ ಎಂದು ಅರ್ಥವಲ್ಲವೇ?

ಲಾಕ್ ಡೌನ್ ಶುರುವಾದಾಗ ಬಹಳ ಮಂದಿ ಓದಲು-ಬರೆಯಲು ಸಮಯ ಸಿಕ್ಕಿತಲ್ಲಾ ಎಂದು ಸಂಭ್ರಮಿಸಿದ್ದನ್ನು ಕಂಡಿದ್ದೇನೆ. ಬಹಳ ಮಂದಿ ಓದಿದ್ದನ್ನು ಹೇಳುತ್ತಿರುತ್ತಾರೆ, ಬರೆಯುತ್ತಿದ್ದಾರೆ. ಇನ್ನು ಕೆಲವರು ಆತ್ಮಚರಿತ್ರೆಯ ಬರವಣಿಗೆ ಪ್ರಾರಂಭಿಸಿದ್ದಾರೆ. ನಿಜ ಹೇಳಬೇಕೆಂದರೆ ನನಗೆ ಇಂತಹದ್ಯಾವುದನ್ನೂ ಮಾಡಬೇಕೆಂದು ಅನಿಸುತ್ತಿಲ್ಲ. ಫೇಸ್ ಬುಕ್ ನಲ್ಲಿ ಇತ್ತೀಚೆಗೆ ಏನನ್ನಾದರೂ ಬರೆಯುವುದು ಕೂಡಾ ಹೊರಮೈಯ ತುರಿಕೆಗಾಗಿ, ಅದು ಒಳಗಿನ ಆಳದಿಂದ ಹುಟ್ಟಿದ್ದು ಕಡಿಮೆ.

ಪ್ರಾರಂಭದಲ್ಲಿ ನಾನು ತುಳುವಿನಲ್ಲಿ ಕತೆ-ಕವನಗಳನ್ನು ಬರೆಯುತ್ತಿದ್ದೆ. ಕಾಲೇಜು ದಿನಗಳ ಗೋಡೆ ಪತ್ರಿಕೆಗಳಲ್ಲಿ ನುಡಿಚಿತ್ರ, ಹರಟೆ,ಹಾಸ್ಯಲೇಖನಗಳನ್ನು ಬರೆಯುತ್ತಿದ್ದೆ. ಆದರೆ ಯಾರೋ ಬಡವರ ಗುಡಿಸಲುಗಳನ್ನು ಕೆಡವುತ್ತಿರುವುದನ್ನು ಕಂಡು ಪತ್ರಿಕೆಯ ಓದುಗರ ಓಲೆಗೆ ಪತ್ರ ಬರೆದೆ, ಕೆಡವಿಹಾಕುವ ಕಾರ್ಯಾಚರಣೆ ನಿಂತು ಹೋಯಿತು. ನಮ್ಮೂರಿಗೆ ರಸ್ತೆ-ಸೇತುವೆಗಳು ಬಿಡಿ, ಸರಿಯಾಗಿ ದೋಣಿಗಳೂ ಇಲ್ಲ ಎಂದು ಬರೆದೆ, ಜಿಲ್ಲಾಡಳಿತದಿಂದ ಪತ್ರ ಬಂತು.

ಪತ್ರಿಕೆಯ ಓದುಗರ ಓಲೆಗೆ ಬರೆದ ಒಂದು ಪತ್ರಕ್ಕೆ ಇಷ್ಟೊಂದು ಶಕ್ತಿ ಇದೆ ಎಂದಾದರೆ ಈ ಈ ಕತೆ-ಕವನಗಳನ್ನು ಕಟ್ಟಿಕೊಂಡು ಯಾಕೆ ಸಾಯಲಿ ಎಂದು ಅಂದುಕೊಂಡೆ. ಬ್ಯಾಂಕ್ ಸೇರಬೇಕೆಂದು ಬಿ.ಕಾಮ್ ಓದಿರುವ ನಾನು ಪತ್ರಕರ್ತನಾಗಬೇಕೆಂದು ನಿರ್ಧರಿಸಿದ್ದು ಆ ಕ್ಷಣದಲ್ಲಿ. ಕವಿ-ಕತೆಗಾರನಾಗುವುದು ತಪ್ಪಿದರೆ ಒಂದಷ್ಟು ಹುಡುಗಿಯರ ಅಭಿಮಾನದ ಕುಡಿನೋಟ, ಗೆಳೆಯರ ಅಸೂಯೆಯ ಕಿಡಿನೋಟವಲ್ಲದೆ ಕಳೆದುಕೊಳ್ಳುವುದಾದರೂ ಏನಿತ್ತು?

ಪತ್ರಕರ್ತನಾಗಿ ಓದು-ಬರಹ ಎರಡನ್ನೂ ನಾನು ನನ್ನ ಆತ್ಮಸಂತೋಷಕ್ಕಾಗಿ ಮಾಡಿದವನಲ್ಲ. ಈ ಕಾರಣಕ್ಕಾಗಿಯೇ ಸಾಹಿತಿಗಳು ಮತ್ತು ಪತ್ರಕರ್ತರು ಭಿನ್ನ. ಆತ್ಮಸಂತೋಷಕ್ಕಾಗಿ ಬರೆಯುತ್ತೇವೆ ಎಂದು ಸಾಹಿತಿಗಳು ಹೇಳಿಕೊಳ್ಳುವುದುಂಟು. ಪತ್ರಕರ್ತರು ಹಾಗಲ್ಲ ನಮ್ಮ ಬರವಣಿಗೆ ಒಂದು ನಿರ್ದಿಷ್ಠ ಉದ್ದೇಶದಿಂದ ಕೂಡಿರುತ್ತದೆ, ಫಲಿತಾಂಶ ಪರೀಕ್ಷೆ ಬರೆದ 24 ಗಂಟೆಗಳಲ್ಲಿ ನಮಗೆ ಗೊತ್ತಾಗಿ ಬಿಡುತ್ತದೆ, ಫೇಲ್ ಆಗಿ ಬಿಟ್ಟರೆ ಖಿನ್ನರಾಗಿಬಿಡುತ್ತೇವೆ. ಅಷ್ಟರಲ್ಲಿ ಮತ್ತೊಂದು ಪರೀಕ್ಷೆ. ತಿದ್ದಿ-ತೀಡಿ ಹೆಣೆದು-ಪೋಣಿಸಿ ಬರೆಯಲು ಪುರುಸೊತ್ತಿರುವುದಿಲ್ಲ. ನಮ್ಮದು ಅವಸರದ ಸಾಹಿತ್ಯ. ಇದೇ ಅವಸರದಲ್ಲಿ ನಾವು ಒಮ್ಮೊಮ್ಮೆ ವ್ಯಾಕರಣವನ್ನು ಕೊಲೆ ಮಾಡಿಬಿಡುತ್ತೇವೆ.

ನಾನು ಪತ್ರಕರ್ತನಾಗಿ ದೇಶಾದ್ಯಂತ ಸುತ್ತಿದ್ದೇನೆ ವರದಿಮಾಡಿದ್ದೇನೆ, ರಾಜಕೀಯ ಅಂಕಣ-ವಿಶ್ಲೇಷಣೆ ಬರೆದಿದ್ದೇನೆ, ಆದರೆ ಈಗಲೂ ಸುಮ್ಮನೆ ಕೂತು ಕಣ್ಣುಮುಚ್ಚಿ ಹಳೆಯದನ್ನು ನೆನೆಸಿಕೊಂಡರೆ ಮುದನೀಡುವುದು ಧಾರವಾಡ-ತುಮಕೂರುಗಳಲ್ಲಿ ಮಾಡಿರುವ ವರದಿಗಳ ಸುತ್ತಲಿನ ನೆನಪುಗಳು. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಾಹಿತ್ಯ ಕಾರ್ಯಕ್ರಮದ ವರದಿ ಮಾಡಿ ಬೆಳಿಗ್ಗೆ ಏಳುವಷ್ಟರಲ್ಲಿ ಸಿದ್ದಲಿಂಗ ಪಟ್ಟಣ ಶೆಟ್ಟರೋ, ಚೆನ್ನವೀರ ಕಣವಿಯವರೋ ಪೋನ್ ಮಾಡಿ ನಿಮ್ಮ ವರದಿ ಚೆನ್ನಾಗಿತ್ತು ಎಂದರೆ ಅಲ್ಲಿಗೆ ನನ್ನ ಪುಲಿಟ್ಜರ್ ಸಿಕ್ಕಿ ಬಿಡುತ್ತಿತ್ತು. ತುಮಕೂರು ನಗರದ ಸೊಳ್ಳೆಗಳ ಕಾಟದ ಬಗ್ಗೆ ಬರೆದಾಗ ಮರುದಿನ ಪೌರಕಾರ್ಮಿಕ ಬಂದು ಔಷಧಿ ಸಿಂಪಡಿಸಿದ್ದನ್ನು ಕಂಡ ಆ ಬೀದಿಯ ಮನೆಯವರೆಲ್ಲ ಕೊಂಡಾಡುವಾಗ ಆ ಕ್ಷಣದಲ್ಲಿ ನಾನು ಅರುಣ್ ಶೌರಿಯೇ ಆಗಿಬಿಡುತ್ತಿದ್ದೆ.

ಓದುಗರ ಪ್ರೀತಿ ಪತ್ರಕರ್ತರ ಪಾಲಿನ ಸಂಜೀವಿನಿ. ಅನಾರೋಗ್ಯದಿಂದ ನಡೆದಾಡಲಿಕ್ಕಾಗದಷ್ಟು ಅಶಕ್ತನಾಗಿದ್ದಾಗಲೂ ನಾನು ನನ್ನ ಅಂಕಣಗಳನ್ನು ನಿಲ್ಲಿಸಲಿಲ್ಲ. ಯಾರದೋ ಆಸರೆಯಿಂದ ಎದ್ದುಬಂದು ಕುರ್ಚಿಯಲ್ಲಿ ಕೂತು ಕೀಬೋರ್ಡ್ ಗೆ ಬೆರಳು ಸೋಕಿದ ಕೂಡಲೇ ನಾನು ಓದುಗರ ಜೊತೆ ಲೀನವಾಗಿಬಿಡುತ್ತಿದ್ದೆ. ಓದುಗ ಎಂದೂ ನಿರಾಶೆಗೊಳಿಸಿರಲಿಲ್ಲ, ಮರುದಿನ ಬೆಳಿಗ್ಗೆ ಎಸ್ ಎಂಎಸ್,ಕಾಲ್ ಗಳ ಸಂಜೀವಿನಿ ಹರಿದುಬಂದಾಗ ಎದ್ದು ಕುಣಿದಾಡುವ ಎಂದು ಅನಿಸುತ್ತಿತ್ತು.

ಆದರೆ ಒಂದು ದಿನ ನಮ್ಮೆಲ್ಲರ (ನನ್ನೊಬ್ಬನದ್ದಲ್ಲ) ಬರವಣಿಗೆ, ಮಾತು ಯಾವುದೂ ಯಾರಮೇಲೆಯೂ ಪರಿಣಾಮ ಬೀರುವುದಿಲ್ಲ ಎಂದು ಗೊತ್ತಾದಾಗ ಸುತ್ತಲೂ ಕತ್ತಲು ಆವರಿಸಿಬಿಡುತ್ತದೆ. ಇಂತಹದ್ದೊಂದು ಸ್ಥಿತಿಯನ್ನು ಹತಾಶೆಯೋ,ನಿರಾಶೆಯೋ ವೈರಾಗ್ಯವೋ,ಜಡತನವೋ,ಸ್ಥಿತಪ್ರಜ್ಞೆಯೋ ಏನಾದರೂ ಅನ್ನಿ. ಕಳೆದೆರಡು ವರ್ಷಗಳ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳು ಇಂತಹದ್ದೊಂದು ಮನಸ್ಥಿತಿಗೆ ನನ್ನನ್ನು ತಳ್ಳಿದ ಹಾಗಿದೆ.

ಸಾಮಾನ್ಯವಾಗಿ ನನ್ನ ಓದು ಕೂಡಾ ಬರವಣಿಗೆಯ ಕಾರಣಕ್ಕಾಗಿಯೇ ನಡೆದದ್ದು ಹೆಚ್ಚು. 900 ಶಬ್ದಗಳ ಅಂಕಣ ಬರೆಯಲು 9000 ಶಬ್ದಗಳನ್ನು ಓದುತ್ತಿದ್ದೆ. ಬರವಣಿಗೆ ಕಡಿಮೆಯಾಗುತ್ತಿದ್ದಂತೆ ಓದು ಕೂಡಾ ಆಸಕ್ತಿ ಕಳೆದುಕೊಳ್ಳತೊಡಗಿತು.

ಓದು-ಬರಹದಲ್ಲಿಯೂ ಆಸಕ್ತಿ ಯಾಕೆ ಉಡುಗುತ್ತಿದೆ ಎನ್ನುವುದು ಯಕ್ಷ ಪ್ರಶ್ನೆಯೇನಲ್ಲ. ಯಾಕೆಂದರೆ ಈ ಓದು-ಬರಹಗಳೆಲ್ಲವೂ ನಮ್ಮ ಕಣ್ಣೆದುರಿನ ಯಾವ ಸಮಸ್ಯೆಯನ್ನೂ ಬಗೆಹರಿಸಲಾರವು? ನೀವು ಬಯಸುವ ಯಾವ ಸುಧಾರಣೆ ಯಾವ ಬದಲಾವಣೆಗೂ ಪ್ರೇರಣೆ,ಚಾಲನೆ ನೀಡಲಾರವು ಎಂದು ಇತ್ತೀಚೆಗೆ ತೀವ್ರವಾಗಿ ಅನಿಸತೊಡಗಿದೆ.

‘’ಹೌದು ಸ್ವಾಮಿ ಪೆಟ್ರೋಲ್ ರೇಟ್ ಹೆಚ್ಚಿಸಿದರೇನಂತೆ, ಯಾಕೆ ಪ್ರತಿಭಟಿಸಬೇಕು? ದೇಶಕ್ಕೆ ಒಳ್ಳೆಯದಾಗಲಿ ಎಂದೇ ಹಾಗೆ ಮಾಡಿರಬೇಕು. ಅದನ್ನು ಬೆಂಬಲಿಸುವುದು ನಮ್ಮ ಕರ್ತವ್ಯ , ಕಾರು ಮನೆಯಲ್ಲಿಟ್ಟು ಬಸ್ ನಲ್ಲಿ ಹೋಗುತ್ತೇನೆ’’ ಎನ್ನುವವರ ಮುಂದೆ ಓದು-ಬರಹ-ಮಾತು ಎಲ್ಲವೂ ಹಾಸ್ಯಾಸ್ಪದವಾಗುತ್ತಿದೆ. ನಿರುದ್ಯೋಗಕ್ಕೆ ಬಲಿಯಾಗುತ್ತಿರುವ ಯುವಜನರು, ನಿವೃತ್ತಿಯ ಕಾಲದ್ಲಲಿ ಬದುಕಿನ ಭದ್ರತೆಗಾಗಿ ಇಟ್ಟ ಠೇವಣಿಯನ್ನು ಬ್ಯಾಂಕುಗಳೇ ಮುಳುಗಿಸಿದಾಗಲೂ ಬಾಲ್ಕನಿ ಮುಂದೆ ತಟ್ಟೆ ಬಡಿಯುವ ಹಿರಿಯರು..ಇವರನ್ನು ಯಾವ ಓದು-ಬರವಣಿಗೆ ಬದಲಾಯಿಸಲು ಸಾಧ್ಯ?

ಕೊರೊನಾ ವೈರಸ್ ಸೋಂಕು ತಗಲಿದವರಂತಿದೆ ದೇಶದ ಈಗಿನ ಸಾಮಾಜಿಕ-ರಾಜಕೀಯ ಸ್ಥಿತಿ. ಔಷಧಿ ಇಲ್ಲದ ರೋಗದ ಸ್ಥಿತಿ. ನಮ್ಮಂತಹ ಹುಲುಮಾನವರನ್ನು ಬಿಟ್ಟುಬಿಡಿ, ಬುದ್ದ,ಬಸವ,ಗಾಂಧೀಜಿ,ಅಂಬೇಡ್ಕರ್,ಲೋಹಿಯಾ ಭೌತಿಕವಾಗಿ ನಮ್ಮ ನಡುವೆ ಇಲ್ಲದೆ ಇದ್ದರೂ ಅವರ ಚಿಂತನೆಗಳೇ ಸಮಾಜಕ್ಕೆ ಅಂಟುವ ರೋಗಕ್ಕೆ ಔಷಧಿ ಎಂದು ನಾವು ತಿಳಿದುಕೊಂಡಿದ್ದೆವು. ಅದು ನಿಜಕೂಡಾ ಆಗಿತ್ತು ಈ ಸಮಾಜಕ್ಕೆ ಅಂಟಿರುವ ಬಹಳಷ್ಟು ರೋಗಗಳನ್ನು ಇವರ ಚಿಂತನೆಗಳ ಚಿಕಿತ್ಸೆಯಿಂದ ವಾಸಿಯಾಗಿವೆ. ಈ ಮಹಾಪುರುಷರ ಚಿಂತನೆಗಳು ಕೂಡಾ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಇನ್ನು ನಮ್ಮಂತಹ ಬರಹಗಾರರ ಸ್ಥಿತಿ ಏನು? ಓದಿರುವಷ್ಟಾದರನ್ನೂ ಜನರಿಗೆ ಅರ್ಥಮಾಡಿಕೊಡಲು ಸಾಧ್ಯವಾಗದೆ ಇದ್ದಾಗ ಹೊಸದಾಗಿ ಓದಿ ಸಾಧಿಸುವುದೇನಿದೆ? ಬರವಣಿಗೆ ಮಾಡಿ ಯಾವ ಉದ್ಯೋಗಕ್ಕೆ ಅರ್ಜಿ ಹಾಕಲಿಕ್ಕಿದೆ? ಯಾವ ಬಡ್ತಿಗೆ ಅರ್ಹತೆ ಪಡೆಯಲಿದೆ?

ನೋಮ್ ಚೋಮಸ್ಕಿಯಿಮದ ಯೂವಲ್ ಹರಾರಿ ವರೆಗೆ, ಅಮಾರ್ತ್ಯ ಸೇನ್ ನಿಂದ ಆರುಂಧತಿ ರಾಯ್ ವರೆಗೆ ಎಲ್ಲರ ಬರವಣಿಗೆಗಳು ಕಣ್ಣೆದುರಿನ ವಾಸ್ತವದ ಬಗ್ಗೆ ನಮ್ಮಲ್ಲಿ ಇನ್ನಷ್ಟು ಭೀತಿ ಹುಟ್ಟಿಸುತ್ತಿದೆಯೇ ಹೊರತು, ಈ ದುರಿತದಿಂದ ಪಾರಾಗುವ ದಾರಿಯನ್ನು ತೋರಿಸುತ್ತಿಲ್ಲ, ತೋರಿದರೂ ಆ ದಾರಿಯಲ್ಲಿ ಹೆಜ್ಜೆ ಇಡುವ ಧೈರ್ಯವನ್ನು ಹುಟ್ಟಿಸುತ್ತಿಲ್ಲ. ಒಂದು ಕಾಲದಲ್ಲಿ ನಮಗೆಲ್ಲ ದಾರಿ ತೋರುತ್ತಿದ್ದ ಕೈಮರಗಳು ಕೂಡಾ ಈಗ ಕಾಣುತ್ತಿಲ್ಲ. ಕಳೆದ ಮೂರು ದಶಕಗಳಲ್ಲಿ ನಮ್ಮ ನಡುವೆ ಬುದ್ದ,ಬಸವ,ಅಂಬೇಡ್ಕರ್, ನಾರಾಯಣ ಗುರು ಬಿಟ್ಟುಬಿಡಿ, ಕುವೆಂಪು, ಕಾರಂತ,ಲಂಕೇಶ್,ಎಂ.ಡಿ.ನಂಜುಂಡಸ್ವಾಮಿ,ರಾಜ್ ಕುಮಾರ್, ಗೋಪಾಲಗೌಡ, ನಿಜಲಿಂಗಪ್ಪ, ದೇವರಾಜ ಅರಸು,ಬಿ.ಬಸವಲಿಂಗಪ್ಪನಂತಹವರೂ ಹುಟ್ಟಲಿಲ್ಲ.

ಈಗಾಗಲೇ ಬರೆದುದರಿಂದ ಸಮಾಜಕ್ಕೆ ಏನು ಲಾಭವಾಗಿದೆ ಎಂದೇ ಗೊತ್ತಿಲ್ಲದೆ ಇರುವಾಗ ಬರೆಯಲಿಕ್ಕಾಗದೆ ಇರುವ ಬಗ್ಗೆ ಗೋಳಾಡುವುದು ಕೂಡಾ ಆತ್ಮರತಿ ಎಂದು ಅನಿಸುವ ಅಪಾಯವೂ ಇದೆ ಎಂದು ನನಗೆ ಗೊತ್ತು. ಹೀಗಿದ್ದರೂ ಈ ಬಾರಿ ಆತ್ಮಸಂತೋಷಕ್ಕಾಗಿ ಬರೆದುಬಿಡುವ ಎಂದು ಇದನ್ನು ಬರೆದುಬಿಟ್ಟೆ.

ಇಷ್ಟು ಟಿಪ್ಪಣಿಯನ್ನು ರಾತ್ರಿ ಬರೆದುಮುಗಿಸಿದಾಗ ಯಾಕೋ ಈ ಆತ್ಮನಿವೇದನೆ ತಪ್ಪು ಸಂದೇಶ ನೀಡುತ್ತಿದೆಯಲ್ಲ ಎಂದು ಅನಿಸಿ ಪೋಸ್ಟ್ ಮಾಡಲು ಹಿಂಜರಿದು ಮಲಗಿದ್ದೆ. ಬೆಳಿಗ್ಗೆ ಎದ್ದಾಗ ಬೇರೆಲ್ಲಿಂದಲೋ ಬೆಳಕು ಕಾಣಿಸತೊಡಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *