
ಕನ್ನಡ ಸುದ್ದಿ ಚಾನೆಲ್ ಗಳ ಎಲ್ಲ ಮುಖ್ಯಸ್ಥರಿಗೆ ನನ್ನ ನಮಸ್ಕಾರಗಳು. ಇದು ನಾನು ನಿಮಗೆಲ್ಲ ಬರೆಯುತ್ತಿರುವ ಬಹಿರಂಗ ಪತ್ರ. ಈ ವಿಷಯದ ಕುರಿತು ನಿಮ್ಮಲ್ಲಿ ಯಾರೇ ಯಾವ ವೇದಿಕೆಯಲ್ಲಿ ಬಹಿರಂಗ ಚರ್ಚೆ ಮಾಡಲು ಕರೆದರೂ ನಾನು ಬರಲು ಸಿದ್ಧ.
ಈವತ್ತು ಒಮ್ಮೆ ನಿಮ್ಮ ಮನೆ ಅಥವಾ ಕಚೇರಿಯಲ್ಲಿನ ಕನ್ನಡಿಯ ಮುಂದೆ ಹೋಗಿ ನಿಲ್ಲಿ. ಒಂದೈದು ನಿಮಿಷ ಕನ್ನಡಿಯ ಮುಂದೆ ನಿಂತು ’ಪತ್ರಕರ್ತ’ ಎಂದು ಕರೆಸಿಕೊಳ್ಳುವ ಯೋಗ್ಯತೆ ನಿಮಗಿದೆಯೇ ಎನ್ನುವುದನ್ನು ಯೋಚಿಸಿ. ಅದೇ ರೀತಿ ನಿಮ್ಮ ಮನೆಯಲ್ಲಿರುವ ಪತ್ನಿ, ಮಕ್ಕಳು, ತಂದೆ-ತಾಯಿಯ ಎದುರು ನಿಂತು ಅದೇ ಪ್ರಶ್ನೆಯನ್ನು ಕೇಳಿ. ಕನಿಷ್ಠ ಅವರು ನಿಮ್ಮ ನಿಲುವನ್ನು ಸಮರ್ಥಿಸುತ್ತಾರಾ ಎಂದು ಅರಿತುಕೊಳ್ಳಿ.
ಇದುವರೆಗೆ ನಿಮ್ಮಗಳ ಕುರಿತು ಒಬ್ಬ ಪತ್ರಕರ್ತನಾಗಿ ನಾನು ಈ ರೀತಿಯ ಬಹಿರಂಗ ಹೇಳಿಕೆ ನೀಡಿಲ್ಲ. ಈವತ್ತು ನೀಡುತ್ತಿದ್ದೇನೆ ಏಕೆಂದರೆ, ನೀವೆಲ್ಲ ನಿಮ್ಮ ನಿಮ್ಮ ಸುದ್ದಿ ವಾಹಿನಿಗಳಲ್ಲಿ ಮದ್ಯದಂಗಡಿಗಳ ತೆರೆಯುವಿಕೆಯ ಕುರಿತು ಸಂಭ್ರಮಿಸುತ್ತಿರುವ ರೀತಿ. ಇದ್ಯಾವ ಪತ್ರಿಕಾ ವ್ಯವಸಾಯ? ಯಾವ ರೀತಿಯ ವರದಿಗಾರಿಕೆ?
ನಿಮಗೆಲ್ಲ ಒಂದಿಷ್ಟು ಅಂತಃಸಾಕ್ಷಿಯಿದ್ದಿದ್ದರೆ, ಈ ಸಮಾಜದ ಬಗ್ಗೆ ಕಳಕಳಿ ಇದ್ದಿದ್ದರೆ ಈ ಅವಕಾಶವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧದ ಬಗ್ಗೆ ಲಾಬಿ ಮಾಡಬೇಕಿತ್ತು. ಸದಾ ಮದ್ಯ ನಿಷೇಧದ ಬಗ್ಗೆ ಕನಸು ಕಾಣುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ, ಹೆಗ್ಗೋಡಿನ ರಂಗಕರ್ಮಿ ಪ್ರಸನ್ನ… ಮುಂತಾದ ಗಣ್ಯರನ್ನು ನೀವು ಉಪಯೋಗಿಸಿಕೊಂಡು ಸರ್ಕಾರವನ್ನು ಮತ್ತು ಮದ್ಯದ ಲಾಬಿಯನ್ನು ಮಣಿಸಬೇಕಿತ್ತು.
ಅಬಕಾರಿ ಆದಾಯವೇ ಬಹಳ ದೊಡ್ಡದು ಎಂಬ ಸರ್ಕಾರದ ಮಾತನ್ನು ನೀವು ನಂಬಿದರೆ ನಿಮಗಿಂತ ದೊಡ್ಡ ಮೂರ್ಖರಿಲ್ಲ. ಮೇಲ್ನೋಟಕ್ಕೆ ಅಬಕಾರಿ ಆದಾಯ ಸರ್ಕಾರದ ಒಂದಿಷ್ಟು ಬೊಕ್ಕಸ ತುಂಬಿಸುತ್ತಿರಬಹುದು. ಆದರೆ, ಪರೋಕ್ಷವಾಗಿ ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮ ಮತ್ತು ಅದರ ನಿರ್ವಹಣೆಗೆ ಸರ್ಕಾರ ಖರ್ಚು ಮಾಡುತ್ತಿರುವ ಹಣದ ಪ್ರಮಾಣ ಬರುತ್ತಿರುವ ಆದಾಯಕ್ಕಿಂತ ನಾಲ್ಕು ಪಟ್ಟು.
ಈ ವಿಷಯವನ್ನು ರಾಜಕಾರಣಿಗಳಿಗೆ, ನಮ್ಮನ್ನು ಆಳುತ್ತಿರುವವರಿಗೆ ಮನನ ಮಾಡಿಕೊಡಲು ಸಿಕ್ಕಿದ್ದ ಬಹಳ ದೊಡ್ಡ ಅವಕಾಶವನ್ನು ನೀವೆಲ್ಲ ಕಳೆದುಕೊಂಡಿರಿ. ಹಾಗೆ ಮಾಡುವುದನ್ನು ಬಿಟ್ಟು ನೀವಿಂದು ಸಂಭ್ರಮಿಸುತ್ತಿರುವ ರೀತಿಯನ್ನು ಕಂಡರೆ ನೀವು ಮದ್ಯದ ಲಾಬಿಯ ಪರವಾಗಿ ಲಾಬಿ ಮಾಡುತ್ತಿದ್ದೀರಿ ಎನ್ನುವುದು ಸ್ಪಷ್ಟವಾಗುತ್ತದೆ.
ನೀವು ನೈತಿಕವಾಗಿ ಎಷ್ಟು ಅಧಃಪತನಕ್ಕೆ ಇಳಿದಿದ್ದೀರಿ ಎನ್ನುವುದಕ್ಕೆ ಈವತ್ತು ಬೆಳಿಗ್ಗೆಯಿಂದ ನಿಮ್ಮ-ನಿಮ್ಮ ಸುದ್ದಿ ವಾಹಿನಿಗಳಲ್ಲಿ ಕ್ಯಾಮರಾ ಮುಂದೆ ಕೂತಿರುವ ಆಂಕರ್ ಗಳು ಮತ್ತು ನಿಮ್ಮ ವರದಿಗಾರರು ಮದ್ಯದಂಗಡಿಗಳ ತೆರವಿನ ಬಗ್ಗೆ ಸಂಭ್ರಮಿಸುತ್ತಿರುವ ರೀತಿಯೇ ಸಾಕ್ಷಿ. ಇನ್ನು ಇಂತಹ ಒಂದು ಸುದ್ದಿಯನ್ನು ವೈಭವೀಕರಿಸುತ್ತಿರುವ ರೀತಿ.
ಕೇವಲ ಒಂದೇ ಒಂದು ಸುದ್ದಿಯ ತುಣುಕಾಗಿ ಸರಿದು ಹೋಗಬೇಕಾಗಿದ್ದ ಮದ್ಯದಂಗಡಿ ತೆರವು ಎಂಬ ಸುದ್ದಿ ಇಂದು ರಾರಾಜಿಸುತ್ತಿದ್ದರೆ, ಅದಕ್ಕೆ ಕಾರಣ ನೈತಿಕವಾಗಿ ನೀವೆಷ್ಟು ಅಧಃಪತನಗೊಂಡಿರುವುದು. ಟಿ ಆರ್ ಪಿ ಮತ್ತು ರೆವಿನ್ಯೂ ಅಗತ್ಯ ಎಷ್ಟು ಎನ್ನುವುದು ನನಗೆ ಸರಿಯಾಗಿ ಗೊತ್ತು. ಆದರೆ, ಅದಕ್ಕಾಗಿ ಅಂತಃಸಾಕ್ಷಿಯನ್ನು ಮಾರುವ ಅಗತ್ಯವಿಲ್ಲ.
ನಿಮಗೆಲ್ಲ ಸಮಾಜದ ಪರ, ಸಮಾಜದ ಸ್ವಾಸ್ಥ್ಯದ ಪರ ನಿಲ್ಲುವ ಒಂದು ಅಮೋಘ ಅವಕಾಶ ಇತ್ತು. ಕಳೆದ ನಲವತ್ತು ದಿನಗಳಿಂದ ಈ ರಾಜ್ಯ (ದೇಶ)ದ ಜನರು ಮದ್ಯವಿಲ್ಲದೇ ಬದುಕಿ ಉಳಿದಿದ್ದರು. ಇನ್ನು ಮುಂದೆ ಕೂಡ ಬದುಕಲಿದ್ದರು.
ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಸುದ್ದಿ ಚಾನೆಲ್ ಗಳೆಲ್ಲವೂ ಒಂದಾಗಿ ಮದ್ಯ ನಿಷೇಧದ ಒಂದು ಚಳವಳಿ ಆರಂಭಿಸಬಹುದಿತ್ತು. ಆ ಚಳವಳಿಯ ಮೂಲಕ ಜನಾಭಿಪ್ರಾಯ ಮೂಡಿಸಿ, ಮದ್ಯ ನಿಷೇಧ ಜಾರಿಗೆ ತರುವಂತೆ ಮಾಡಬಹುದಿತ್ತು. ಅದನ್ನು ಬಿಟ್ಟು… ನೀವಿಂದು ಮೂರೂ ಬಿಟ್ಟು ರಾಜ್ಯದ ಜನರೆದುರು ಬೆತ್ತಲಾಗಿ ನಿಂತಿದ್ದೀರಿ. ಪತ್ರಕರ್ತರಾಗಿ ಸತ್ತು ಹೋಗಿದ್ದೀರಿ. ನಿಮ್ಮನ್ನು ಕಂಡರೆ ಅಯ್ಯೋ ಎನಿಸುತ್ತಿದೆ. ಅಷ್ಟೆ. -ಸತೀಶ್ ಚಪ್ಪರಿಕೆ
