ಕಾಂಗ್ರೆಸ್ ಕಳೆಗೂ ಕೊರೊನಾಕ್ಕೂ ತಾಳಮೇಳ

[40 ವರ್ಷಗಳ ನಂತರ ಯಾರಾದರೂ ಇಂದಿನ ಕೊರೊನಾ ಕಥನವನ್ನು ಬರೆದರೆ ಅದು 40 ವರ್ಷಗಳ ಹಿಂದಿನ ಪಾರ್ಥೇನಿಯಂ ಪ್ರಹಸನದಂತೆ ಕಂಡೀತು. ಇವೆರಡರ ನಡುವಣ ಹೋಲಿಕೆಗಳು ಒಂದೆ, ಎರಡೆ? ಇಂದಿನ ‘ಪ್ರಜಾವಾಣಿ’ಯಲ್ಲಿ ನನ್ನ ಅಂಕಣ ಇಲ್ಲಿದೆ.

ನಾವು ‘ಕೊರೊನಾ ಜೊತೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್‌ ಮೊನ್ನೆ ಹೇಳಿದರು. ಹೊಂದಿಕೊಂಡು ಬಾಳುವುದು ಹೇಗೆ ಎಂಬುದಕ್ಕೆ ಉದಾಹರಣೆ ಬೆಂಗಳೂರಿನಲ್ಲೇ ಇದೆ. ಇಲ್ಲಿ ಪಾರ್ಥೇನಿಯಂ ಕಳೆಸಸ್ಯದ ವಿರುದ್ಧ 1981-82ರಲ್ಲಿ ನಾವು ಮಹಾಸಮರ ಸಾರಿದ್ದೆವು. ಅದರ ನೆನಪುಗಳನ್ನು ತುಸು ಕೆದಕೋಣ.

1980ರಲ್ಲಿ ಯಾರೂ ಈ ಸಸ್ಯವನ್ನು ಗಮನಿಸಿರಲಿಲ್ಲ. ಮಾರನೇ ವರ್ಷ ಇದೇ ಮೇ ತಿಂಗಳಲ್ಲಿ ಕೃಷಿ ವಿಜ್ಞಾನಿಗಳು ಅದರ ದುರ್ಗುಣಗಳ ಬಗ್ಗೆ ಎಚ್ಚರಿಸಿದರು. “ಒಂದು ಗಿಡದ ಬೀಜಗಳಿಂದ 25 ಸಾವಿರ ಗಿಡಗಳು ಹುಟ್ಟುತ್ತವೆ- ಈಗಲೇ ಮಟ್ಟ ಹಾಕಬೇಕು” ಎಂದರು.
ಈ ಪಾರ್ಥೇನಿಯಂ ಗಿಡದ ತುಂಬ ಬಿಳಿಬಿಳಿ ಟೋಪಿ ಥರಾ ಹೂವುಗಳಿದ್ದುದರಿಂದ ಯಾರೋ ಅದಕ್ಕೆ “ಕಾಂಗ್ರೆಸ್ ಕಳೆ” ಎಂದು ಕರೆದರು. ಇದು ದಕ್ಷಿಣ ಅಮೆರಿಕದಿಂದ ಬಂದ ಕಳೆಗಿಡವೆಂದು ಟಾಕ್ಸಾನಮಿ ತಜ್ಞರು ಸಾರಿದರು. 1950ರ ದಶಕದಲ್ಲಿ ಅಮೆರಿಕ ನಮಗೆ ಪಿಎಲ್-480 ಯೋಜನೆಯ ಅಡಿ ಉದಾರವಾಗಿ ಹಡಗುಭರ್ತಿ ಆಹಾರ ಧಾನ್ಯಗಳನ್ನು ಕಳಿಸಿದಾಗ ಅದರೊಂದಿಗೆ ಬಂದಿದ್ದ ಬೀಜ ‘ಈಗ ವಿರಾಟ್ ರೂಪದಲ್ಲಿ ವಿಕಾಸವಾಗಿದೆ, “ತೀರ ಆಕ್ರಮಣಕಾರಿ ಗುಣವಿರುವ ಇದನ್ನು ಶೀಘ್ರ ಸದೆ ಬಡಿಯಬೇಕು’ ಎಂದು ಎಚ್ಚರಿಸಿದರು.
ಅದೇ ವರ್ಷ ನಾಲ್ಕಾರು ಮಳೆ ಬಿದ್ದ ನಂತರ ಅಲ್ಲಿ ಇಲ್ಲಿ, ಖಾಲಿ ಸೈಟುಗಳಲ್ಲಿ ಎಲ್ಲೆಲ್ಲೂ ಅದು ಆಕ್ರಮಿಸಿತ್ತು. ಈ ಬಾರಿ ಅಲರ್ಜಿ ಡಾಕ್ಟರ್ಗಳು ಇದರ ಭಾರೀ ಅಪಾಯದ ಬಗ್ಗೆ ಸಮಾಜವನ್ನು ಎಚ್ಚರಿಸಿದರು. ಪಾರ್ಥೇನಿಯಂ ಹೂವಿನ ಸೂಕ್ಷ್ಮ ಪರಾಗ ಕಣಗಳು ಶ್ವಾಸಕೋಶಕ್ಕೆ ನುಗ್ಗಿ ಅಲ್ಲೇ ಅಂಟಿಕೊಂಡು ದಮ್ಮು, ಅಸ್ತಮಾ ಮತ್ತಿತರ ಶ್ವಾಸಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತವೆ ಎಂದರು. ಈ ಸಸ್ಯವನ್ನು ಮುಟ್ಟಿದರೆ ಅಲರ್ಜಿ ಉಂಟಾಗುತ್ತದೆ; ಚರ್ಮದ ಮೇಲೆ ದದ್ದು ಏಳುತ್ತವೆ ಎಂದರು.
ಪಶುವೈದ್ಯರೂ ಲೇಖನ ಬರೆದರು. ಈ ಸಸ್ಯಕ್ಕೆ ಬಾಯಿ ಹಾಕಿದರೆ ದನಕುರಿಗಳ ಕಿವಿ-ಮೂತಿ ಹಾಗೂ ಅನ್ನನಾಳದಲ್ಲಿ ಗಂಟುಗಳಾಗುತ್ತವೆ ಎಂದೆಲ್ಲ ವಿವರಿಸಿದರು.
ತಜ್ಞರೆಲ್ಲರ ಇಂಥ ಹೇಳಿಕೆಗಳೂ ಲೇಖನಗಳೂ ವರದಿಗಳೂ ಪತ್ರಿಕೆ, ರೇಡಿಯೊಗಳಲ್ಲಿ ಬರತೊಡಗಿದ ಹಾಗೆ ವಿವಿಧ ಜನಪರ ಸಂಘಟನೆಗಳು ಕಣಕ್ಕಿಳಿದವು. “ಮುಖವಾಡ ಹಾಕಿಕೊಳ್ಳಿ, ಕೈಗವಸಿಲ್ಲದೆ ಕೀಳಬೇಡಿ” ಎಂದು ತಜ್ಞರು ಎಚ್ಚರಿಸಿದರು. ವಾರಾಂತ್ಯದ ದಿನಗಳೆಂದರೆ ಎಲ್ಲೆಲ್ಲೂ ಮುಖವಾಡಗಳೇ ಕಾಣತೊಡಗಿದವು. ಸರಕಾರ ಮಾತ್ರ ಸ್ಪಂದಿಸುತ್ತಿಲ್ಲವೆಂಬ ಟೀಕೆಗಳಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಧಿಗ್ಗನೆದ್ದರು. ನಾಟಕೀಯ ಸಾಹಸಗಳಿಗೆ ಹೆಸರಾದ ರಾಯರು ಸ್ವತಃ ವಿಲ್ಸನ್ ಗಾರ್ಡನ್ನಿನ ರುದ್ರಭೂಮಿಗೆ ಬಂದು ಮುಷ್ಟಿ ಕಳೆಯನ್ನು ಕಿತ್ತು ಸಮರ ದುಂಧುಭಿ ಮೊಳಗಿಸಿದರು.
ಅವರ ಬೆನ್ನಿಗೆ ಬಿಡಿಎ ಅಧಿಕಾರಿಗಳ ಹಾಗೂ ಶಾಸಕರ ಪಡೆಯೇ ಇತ್ತು. ಛಾಯಾಗ್ರಾಹಕರು ಸಮಾಧಿಶಿಲೆಗಳ ಮೇಲೂ ಹತ್ತಿನಿಂತು ಈ ಘಟನೆಯ ಫೋಟೊ ತೆಗೆದರು. ಮಸಣದ ಹೂವು ಮುಖಪುಟಕ್ಕೆ ಬಂತು. ಪಾರ್ಥೇನಿಯಂ ವಿರುದ್ಧದ ಸಮರಕ್ಕೆ ಭೀಮಬಲ ಬಂತು. ರಕ್ಷಣಾ ಪಡೆಯ ಯೋಧರು, ಪೊಲೀಸರು, ಅಗ್ನಿಶಾಮಕ ದಳದವರು, ಕಾಂಗ್ರೆಸ್ ಕಾಲಾಳುಗಳು ಮೈದಾನಕ್ಕೆ ಇಳಿದರು. ಖಾಲಿ ಸೈಟುಗಳಲ್ಲಿ ಶೆಡ್ ಹಾಕಿಕೊಂಡಿದ್ದ ಶ್ರಮಿಕರು ಎತ್ತಂಗಡಿಯಾದರು.
ಆಗ ‘ಪ್ರಜಾವಾಣಿ’ಯಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಬಿ.ವಿ.ರಾಮಮೂರ್ತಿ ಬರೆದ ದೊಡ್ಡ ಕಾರ್ಟೂನ್ ಪ್ರಕಟವಾಯಿತು. ತನ್ನ ಕಾಲಿಗೆ ತೊಡರಿಕೊಂಡ ಹುಲ್ಲುಗರಿಕೆಯ ಮೇಲೆ ಕೋಪಗೊಂಡ ಚಾಣಕ್ಯ ಅದನ್ನು ಕಿತ್ತು, ಮತ್ತೆಂದೂ ಮೊಳೆಯದ ಹಾಗೆ ಹುಳಿಮಜ್ಜಿಗೆ (ಆಸಿಡ್) ಸುರಿದಿದ್ದ ತಾನೆ? ಅದನ್ನು ನೆನಪಿಸುವಂತೆ ಜುಟ್ಟುಧಾರಿ ಬ್ರಾಹ್ಮಣ ಮುಖ್ಯಮಂತ್ರಿ ಛಲದಿಂದ ಕಾಂಗ್ರೆಸ್ ಕಳೆಯನ್ನು ಜಗ್ಗಿ ಕೀಳುವುದನ್ನು ಕೆಲವೇ ರೇಖೆಗಳಲ್ಲಿ ಮೂರ್ತಿ ಚಿತ್ರಿಸಿದ್ದರು.
ವಿಜ್ಞಾನಿಗಳು ಮತ್ತಷ್ಟು ಚುರುಕಾದರು. ಈ ಕಳೆಸಸ್ಯ ತನ್ನ ತಾಯ್ನಾಡಿನಲ್ಲಿ ಹೇಗಿದೆಯೆಂಬ ವರದಿಯನ್ನು ಮೆಕ್ಸಿಕೊದಿಂದ ತರಿಸಿಕೊಂಡರು. ದಕ್ಷಿಣ ಅಮೆರಿಕದಲ್ಲಿ ಕಡಲೆಕಾಳಿನ ಗಾತ್ರದ ‘ಝೈಗೊಗ್ರಾಮಾ ಬೈಕಲರೇಟಾ’ ಹೆಸರಿನ ದುಂಬಿಯೊಂದು ಪಾರ್ಥೇನಿಯಂ ಎಲೆಗಳನ್ನು ತಿನ್ನುವುದರಿಂದ ಕಳೆ ಅಲ್ಲಿ ನಿಯಂತ್ರಣದಲ್ಲಿದೆ ಎಂದರು. ತುರ್ತಾಗಿ ಅಲ್ಲಿಂದ ಈ ದುಂಬಿಗಳನ್ನು ತರಿಸಿ ಬೆಂಗಳೂರಿನ ಅಲ್ಲಲ್ಲಿ ಅದ್ದೂರಿ ಬಿಡುಗಡೆ ಮಾಡಲಾಯಿತು. ಅದೇ ವೇಳೆಗೆ, ಪಾರ್ಥೇನಿಯಂ ಸಸ್ಯವನ್ನು ಬದಿಗೊತ್ತಿ ಬೆಳೆಯಬಲ್ಲ ಪ್ರತಿಸಸ್ಯಗಳಿಗೆ ಶೋಧ ನಡೆಯಿತು. ತಗಸೆ ಬೀಜಗಳನ್ನು ಖಾಲಿ ಸೈಟುಗಳಲ್ಲಿ ಬಿತ್ತನೆ ಮಾಡಬೇಕೆಂದು ಸಸ್ಯವಿಜ್ಞಾನಿಗಳು ಹೇಳಿದರು. ಅದಕ್ಕೆ ಬೇಕಾದ ಟನ್ಗಟ್ಟಲೆ ತಗಸೆ ಬೀಜಕ್ಕಾಗಿ ಎಲ್ಲೆಲ್ಲೂ ಹುಡುಕಾಟ ನಡೆಯಿತು.

ಈ ಮಧ್ಯೆ ಇನ್ನೊಂದು ವಿವಾದ ಹುಟ್ಟಿಕೊಂಡಿತು. ಪಾರ್ಥೇನಿಯಂ ಮೂಲತಃ ಸೂರ್ಯಕಾಂತಿ ಕುಟುಂಬಕ್ಕೆ ಸೇರಿದ ಪ್ರಭೇದವಾಗಿದ್ದರಿಂದ, ಈ ಮೆಕ್ಸಿಕನ್ ದುಂಬಿಗಳು ನಾಳೆ ಸೂರ್ಯಕಾಂತಿಯ ಹೊಲಗಳನ್ನೂ ಧ್ವಂಸ ಮಾಡಬಹುದೆಂದು ಕೆಲವು ಕೃಷಿವಿಜ್ಞಾನಿಗಳು ಎಚ್ಚರಿಕೆ ನೀಡಿದರು. ರೈತರು ಗಾಬರಿಬಿದ್ದು, ಝೈಗೊಗ್ರಾಮಾ ವಿರುದ್ಧ ಹೋರಾಡಲು ನಿರ್ಧರಿಸಿದರು. ಆ ಬಡಪಾಯಿ ಕೀಟ ಅಷ್ಟೇನೂ ವೇಗವಾಗಿ ಕಾಂಗ್ರೆಸ್ ಕಳೆಯನ್ನು ತಿನ್ನುತ್ತಿಲ್ಲ ಎಂದು ಮತ್ತೆ ಜಿಕೆವಿಕೆಯ ತಜ್ಞರು ಸಂಶೋಧನ ಪ್ರಬಂಧ ಬರೆದರು. ರೈತರು ಸಂಭ್ರಮಿಸಿದರ

ಅತ್ತ ವಿಜ್ಞಾನಿಗಳೂ ಸಂಭ್ರಮಿಸಿದರು. ಎರಡೇ ವರ್ಷಗಳಲ್ಲಿ ದೇಶದ ಮಹಾನಗರಗಳಿಗೆಲ್ಲ ಈ ಕಳೆಸಸ್ಯ ಹಬ್ಬಿತ್ತು. ಬೆಂಗಳೂರಿನ ವಿಜ್ಞಾನಿಗಳ ಮೌಲ್ಯ ರಾಷ್ಟ್ರಮಟ್ಟದಲ್ಲಿ ಹೆಚ್ಚಿತು. ಇನ್ನೂ ಹೆಚ್ಚಿನ ಸಂಶೋಧನೆಗೆ, ಸಲಕರಣೆಗಳಿಗೆ, ಸಂಚಾರಕ್ಕೆ ಧನಸಹಾಯ ಸಿಕ್ಕಿತು. ಪಾರ್ಥೇನಿಯಂ ಸಸ್ಯಗಳ ಮೇಲೆ ಗ್ಲೈಫೊಸೇಟ್ ಎಂಬ ಕಳೆನಾಶಕವನ್ನು ಸಿಂಪಡಿಸಬೇಕು ಎಂದು ವಿದೇಶದಲ್ಲಿ ತರಬೇತಿ ಪಡೆದ ವಿಜ್ಞಾನಿಗಳು ಹೇಳಿದರು. ಆದರೆ ಅಂತಹ ಉಗ್ರ ಕಳೆನಾಶಕವನ್ನು ಬಳಸಿದರೆ ಅಮೂಲ್ಯ ಔಷಧಸಸ್ಯಗಳೂ ನಾಶವಾಗುತ್ತವೆ; ಮನುಷ್ಯರಿಗೂ ದುಷ್ಪರಿಣಾಮ ಉಗ್ರವಾಗಿಯೇ ತಟ್ಟುತ್ತದೆ ಎಂದು ಇನ್ನೊಂದು ಬಣದ ವಿಜ್ಞಾನಿಗಳು ಹೇಳಿದರು.

ಅಂತಿಮವಾಗಿ ಆ ಸಂಗ್ರಾಮದ ಫಲಶ್ರುತಿ ಏನು? ಏನೂ ಇಲ್ಲ. ಕಾಂಗ್ರೆಸ್‌ ಕಳೆ ಇತರ ಸಸ್ಯಗಳ ಜೊತೆಗೆ ಬದುಕಲು ಕಲಿಯಿತು. ಪಾರ್ಥೇನಿಯಂ ಹಾವಳಿಗೆ ನಾವೂ ಹೊಂದಿಕೊಂಡೆವು; ಮೈತುರಿಕೆ, ಅಲರ್ಜಿಗಳಿಗೆ ಹೊಸ ಔಷಧಗಳು, ಅಸ್ತಮಾ ಪೀಡಿತರಿಗೆ ಹೊಸ ಇನ್ಹೇಲರ್‌ಗಳು, ನೆಬ್ಯೂಲೈಸರ್‌ಗಳು ಬಂದವು. ಔಷಧರಂಗ ಗೆದ್ದಿತು. ವಿಜ್ಞಾನಿಗಳು ಪದೋನ್ನತಿ ಪಡೆದರು. ಅಲರ್ಜಿ ಕ್ಲಿನಿಕ್‌ಗಳ ಸಂಖ್ಯೆ ಹೆಚ್ಚಾಯಿತು.
ಹೆಚ್ಚೇನು, ಮೂಲಿಕೆ ವೈದ್ಯರು ಈ ಕಳೆಸಸ್ಯಕ್ಕೂ ಔಷಧೀಯ ಗುಣಗಳನ್ನು ಅಂಟಿಸಿದರು. ಚರ್ಮದ ಉರಿಯೂತಕ್ಕೆ, ಉರಿಮೂತ್ರಕ್ಕೆ, ಸಂಧಿವಾತಕ್ಕೆ, ಅತಿಸಾರಕ್ಕೆ, ಮಲೇರಿಯಾಕ್ಕೆ ಅಷ್ಟೇ ಅಲ್ಲ ಸುಗಮ ಋತುಸ್ರಾವಕ್ಕೆ ಇದರ ಲೇಹ್ಯ, ಕಷಾಯಗಳನ್ನು ಶಿಫಾರಸು ಮಾಡುವ ಲೇಖನಗಳು ಬಂದವು.

ಈ ಅಸಂಗತ ನಾಟಕದ ಅಂಕದ ಪರದೆ ಇಳಿಯುವುದು ಹೇಗೆ ಗೊತ್ತೆ? ಪಾರ್ಥೇನಿಯಂ ಸಸ್ಯ ಅಮೆರಿಕದಿಂದ ಬಂದಿದ್ದು ಎಂಬ ವಾದವೇ ಈಗ ತಲೆಕೆಳಗಾಗುತ್ತದೆ. ಸ್ಕಾಟ್ಲೆಂಡಿನಿಂದ ನಮ್ಮ ದೇಶಕ್ಕೆ ಬಂದು, ಇಲ್ಲಿನ ಸಸ್ಯಜಗತ್ತನ್ನು ವಿಸ್ತ್ರತವಾಗಿ ಅಧ್ಯಯನ ಮಾಡಿದ್ದ ವೈದ್ಯ ವಿಲಿಯಂ ರಾಕ್ಸ್ಬರೊ ಎಂಬಾತ ‘ಇದು ಭಾರತದ್ದೇ ಸಸ್ಯ’ ಎಂದು 1814ರಲ್ಲಿ ಬರೆದ ಗ್ರಂಥದಲ್ಲಿ ಹೇಳಿದ್ದಾನೆ. ನಿಸರ್ಗವನ್ನು ಹಾಳುಗೆಡವಿದ ತಾಣಗಳಲ್ಲಿ ತಾನಾಗಿ ಹುಟ್ಟಿಕೊಳ್ಳುವ ಮೊದಲ (ರುಡೆರಲ್) ಸಸ್ಯಗಳಲ್ಲಿ ಇದೂ ಒಂದು ಎಂದು ಈ ಕಳೆಯನ್ನು ವರ್ಣಿಸಲಾಗಿದೆ.
ನಿಸರ್ಗವನ್ನು ಹಾಳುಗೆಡವಿದ್ದಕ್ಕೇ ಕೊರೊನಾ ವೈರಸ್ ಸಿಡಿದೆದ್ದಿತೆಂದೂ ಭಾರತದ ಬಾವಲಿಗಳಲ್ಲಿ ಅದು ಮೊದಲಿಂದಲೂ ಇತ್ತೆಂದೂ ಈಗ ಹೇಳಲಾಗುತ್ತಿದೆ. ಈ ಅಂಶಗಳನ್ನು ಬದಿಗಿಟ್ಟು ನೋಡಿದರೂ 40 ವರ್ಷಗಳ ನಂತರ ಯಾರಾದರೂ ಇಂದಿನ ಕೊರೊನಾ ಕಥನವನ್ನು ಬರೆದರೆ ಅದು 40 ವರ್ಷಗಳ ಹಿಂದಿನ ಪಾರ್ಥೇನಿಯಂ ಪ್ರಹಸನದಂತೆ ಕಂಡೀತಲ್ಲವೆ?
[ಇಲ್ಲಿಗೆ ಅಂಕಣ ಪರದೆ ಇಳಿಯಿತು. ಅತ್ತ ವಿಶಾಖಾ ಪಟ್ಟಣದ ವಿಷಾನಿಲ ದುರಂತಕ್ಕೂ 1984ರ ಭೋಪಾಲ ವಿಷಾನಿಲ ದುರಂತಕ್ಕೂ ಇಂಥದ್ದೇ ಹೋಲಿಕೆ ಕೊಟ್ಟು ನಾನು ಬರೆದ ಲೇಖನವೊಂದು ಈ ವಾರ ‘ಸುಧಾ’ದಲ್ಲಿ ಪ್ರಕಟವಾಗಿದೆ. ಭವಿಷ್ಯದ ಯಾವ ಪುಟವನ್ನು ತೆರೆದರೂ ಅದು ಹಿಂದಿನ ಕಾಲದ ಯಾವುದೋ ಪುಟವನ್ನು ತೆರೆದಂತೆ ಭಾಸವಾಗುತ್ತದೆ]

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *