

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಬೇಕೇ, ಬೇಡವೇ ಎಂಬ ವಿಷಯ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ಪಾಲಿಗೆ ಜೀವನ್ಮರಣದ ಪ್ರಶ್ನೆಯಾದರೆ, ರಾಜ್ಯದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆ.

ದನದ ಕೊಟ್ಟಿಗೆಯಲ್ಲಿ ಮಲಗುವ, ರಸ್ತೆ ಗುಡಿಸುವ ಮೂಲಕ ತಾನೊಬ್ಬ ನೆಲದ ದನಿಗೆ ಕಿವಿಯೊಡ್ಡುವವ ಎಂಬ ಸಂದೇಶವನ್ನು ಸದಾ ರವಾನಿಸುತ್ತಿರುವ ಸಚಿವರು ಎಸ್ ಎಸ್ ಎಲ್ ಸಿ ಪರೀಕ್ಷೆಯ ವಿಚಾರದಲ್ಲಿ ಮಾತ್ರ ಸಂಪೂರ್ಣವಾಗಿ ಜನರ ದನಿಗೆ ಕುರುಡ-ಕಿವುಡರಾಗಿದ್ದಾರೆ.
ಇವರ ಪ್ರತಿಷ್ಠೆಗೆ ರಾಜ್ಯದ ಎಂಟುವರೆ ಲಕ್ಷ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಕುಟುಂಬದ ಸದಸ್ಯರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ (ಒಂದು ಅಂದಾಜಿನ ಪ್ರಕಾರ ಸುಮಾರು 25 ಲಕ್ಷ ಮಂದಿ) ಅಪಾಯಕ್ಕೆ ಸಿಲುಕುವ ಹೊಸ್ತಿಲಲ್ಲಿದ್ದಾರೆ.ಲಾಕ್ ಡೌನ್ ಹಿಂತೆಗೆದ ನಂತರ ಕೊರೊನಾ ಮಾರಿ ಲಂಗುಲಗಾಮಿಲ್ಲದೆ ದಾಳಿ ಇಡತೊಡಗಿದೆ, ಕ್ಯಾಂಡಲ್ ಹಚ್ಚುವ, ಜಾಗಟೆ ಬಾರಿಸುವ ಬಾಲಲೀಲೆಯ ನಂತರ ಸರ್ಕಾರ ಕೈಚೆಲ್ಲಿ ಕೊರೊನಾ ಜೊತೆ ಬದುಕುವ ಅಲ್ಲ, ಸಾಯುವ ನಿರ್ಧಾರಕ್ಕೆ ಬಂದಂತಿದೆ.
ಖಾಸಗಿ ಶಾಲೆಗಳ ಶ್ರೀಮಂತರ ಮಕ್ಕಳ ಪಾಲಕರು ಎಲ್ಲ ಸುರಕ್ಷಿತಾ ಕ್ರಮಗಳನ್ನು ಕೈಗೊಂಡು ಮಕ್ಕಳನ್ನು ಸುರಕ್ಷಿತವಾಗಿ ಪರೀಕ್ಷೆ ಬರೆಯುವಂತೆ ಮಾಡಬಹುದು. ಆದರೆ ಬಹುಸಂಖ್ಯಾತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಡ ಕುಟುಂಬ ಮತ್ತು ಗ್ರಾಮೀಣ ಪ್ರದೇಶದಿಂದ ಬಂದವರು. ಲಾಕ್ ಡೌನ್ ಹಿಂದೆಗೆದ ನಂತರ ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗಿ ಹಳ್ಳಿಗಳು ಮುಚ್ಚಿಕೊಂಡ ಜ್ವಾಲಾಮುಖಿ ಮೇಲೆ ನಿಂತಂತಿವೆ. ಈ ಹಳ್ಳಿ ವಿದ್ಯಾರ್ಥಿಗಳ ಗತಿ ಏನು?
ಇದೊಂದು ಸರಳ ವಿಷಯ: ಶಿಕ್ಷಣ ಪಡೆಯುವುದು ಪರೀಕ್ಷೆ ಪಾಸು ಮಾಡಲಿಕ್ಕಾಗಿಯೇ ಇಲ್ಲವೇ ಜ್ಞಾನ ಸಂಪಾದನೆಗಾಗಿಯೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳು ಅನಿವಾರ್ಯ ನಿಜ, ಆದರೆ ಯಾವ ಬೆಲೆತೆತ್ತು? ಜೀವದ ಬೆಲೆ ತೆತ್ತೇ? ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದಿದ್ದಾರೆ, ಪರೀಕ್ಷೆ ಬರೆಯದೆ ಇದ್ದರೆ ಅವರು ಓದಿದ್ದೆಲ್ಲ ಮೆದುಳಿನಿಂದ ಡಿಲೀಟ್ ಆಗುತ್ತದೆಯೇ? ಆದ್ದರಿಂದ ಪರೀಕ್ಷೆ ರದ್ದತಿಯಿಂದ ಬೌದ್ದಿಕವಾಗಿ ಮಕ್ಕಳಿಗೆ ದೊಡ್ಡ ನಷ್ಟ ಇಲ್ಲ.ನಷ್ಟ ಆಗಲಿರುವುದು ಎರಡು ವರ್ಗಕ್ಕೆ.
ಮೊದಲನೆಯ ವರ್ಗದಲ್ಲಿ ಕೆಲವು ವಿದ್ಯಾರ್ಥಿಗಳ ಪಾಲಕರಿದ್ದಾರೆ. ಪರೀಕ್ಷೆ ರದ್ದು ಮಾಡಿದರೆ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ನಷ್ಟ ಇಲ್ಲ. ಪರೀಕ್ಷೆ ನಡೆಸದೆ ಎಲ್ಲರನ್ನು ಉತ್ತೀರ್ಣಗೊಳಿಸಿ ಎನ್ನುತ್ತಾರೆ ಪರೀಕ್ಷೆಯನ್ನು ವಿರೋಧಿಸುತ್ತಿರುವ ಶಿಕ್ಷಣ ತಜ್ಞರು ಮತ್ತು ಪಾಲಕರು. ಆದರೆ Rankಗಾಗಿ, ಪ್ರಥಮದರ್ಜೆಗಾಗಿ, ಶಾಲೆಯಲ್ಲಿ ಮೊದಲ ಸ್ಥಾನ ಬರಲಿಕ್ಕಾಗಿ ಓದಿದವರಿಗೆ ನಷ್ಟ.
ಇಲ್ಲಿಯೂ ವಿದ್ಯಾರ್ಥಿಗಳಿಗಿಂತ ಮಕ್ಕಳ Rank, ಕ್ಲಾಸ್ ಗಳನ್ನು ಕಿರೀಟ ಮಾಡಲು ಹೊರಟ ಪಾಲಕರಿಗೆ ಹೆಚ್ಚಿನ ನಷ್ಟ.ಎರಡನೇ ವರ್ಗದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸಬಹುದೆಂಬ ಭೀತಿಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಅಂಕಗಳ ಆಧಾರದಲ್ಲಿ ಡೊನೇಷನ್, ಶಾಲಾ ಶುಲ್ಕ ನಿರ್ಧರಿಸುವ ಈ ಪ್ರತಿಷ್ಠಿತ, ಪ್ರಖ್ಯಾತ ಖಾಸಗಿ ಶಿಕ್ಷಣ ಸಂಸ್ಥೆಗಳು ಚೌಕಾಶಿ ಮಾಡುವ ಅವಕಾಶವೇ ಇಲ್ಲದಂತಾಗಿ ಆದಾಯ ಖೋತಾ ಆಗಬಹುದು ಎಂಬ ಭಯ ಅವರಿಗೆ.
ಈ ಕಾರಣಗಳಿಂದಾಗಿ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲರನ್ನೂ ಉತ್ತೀರ್ಣಗೊಳಿಸಿ ಎಂಬ ಪ್ರಾಯೋಗಿಕ ಸಲಹೆಯನ್ನು ತಿರಸ್ಕರಿಸಿ ತಾನು ಹೋದದ್ದೇ ದಾರಿ ಎನ್ನುವಂತೆ ಮುನ್ನುಗ್ಗುತಿದ್ದಾರೆ. ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ರಾಜಕಾರಣಿಗಳ ನಂಟು ಇರುವುದರಿಂದ ಸುರೇಶ್ ಕುಮಾರ್ ಹಾದಿ ಸುಲಭವಾಗಬಹುದು. ಆದರೆ ನಂತರ ಕಾದಿದೆ ಗಂಡಾಂತರ! -ದಿನೇಶ್ ಅಮ್ಮಿನಮಟ್ಟು
